ಆಧ್ಯಾತ್ಮಿಕ ದೇಹವನ್ನು ಪಡೆಯುವುದು

ನೀವು ಆನಂದ ಮತ್ತು ಜ್ಞಾನದಿಂದ ತುಂಬಿಕೊಂಡಿರುವ ಆಧ್ಯಾತ್ಮಿಕವಾದ, ಶಾಶ್ವತವಾದ ದೇಹವನ್ನು ಪಡೆಯಬಹುದು. ಅದು ಹೇಗೆಂಬುದು ಇಲ್ಲಿದೆ.

ಪ್ರಭುಪಾದರ ಉಪನ್ಯಾಸ ಸ್ಥಳ ಮೆಕ್ಸಿಕೊ ನಗರ, ಫೆಬ್ರವರಿ 14, 1975

ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾ: |

ಆಗಮಾಪಾಯಿನೋಽನಿತ್ಯಾಸ್ತಾಂಸ್ತಿ ತೀಕ್ಷಸ್ವಭಾರತ ||

ಹೇ ಕೌಂತೇಯ, ಸುಖ-ದುಃಖಗಳು ಸ್ವಲ್ಪ ಕಾಲ ಕಾಣಿಸಿಕೊಳ್ಳುವುವು, ಕ್ರಮೇಣ ಅವು ಮಾಯವಾಗುವುವು, ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ, ಭರತವಂಶಜನೆ, ಅವು ಇಂದ್ರಿಯಗಳ ಗ್ರಹಣಶಕ್ತಿಯಿಂದ ಉದ್ಭವವಾಗುತ್ತವೆ. ಅವುಗಳಿಂದ ಕ್ಷೋಭೆಗೊಳಗಾಗದೆ ಸಹಿಸುವುದನ್ನು ಕಲಿಯಬೇಕು. (ಭಗವದ್ಗೀತೆ, 2.14)

ನಿನ್ನೆಯ ರಾತ್ರಿಯ ಚರ್ಚೆಯಲ್ಲಿ ನಮ್ಮ ತೀರ್ಮಾನದ ಪ್ರಕಾರ ನಾವು ಸಾಯುವುದಿಲ್ಲ. ಕೃಷ್ಣನು ಹೇಳುತ್ತಾನೆ. ನಾನೊಬ್ಬ ನೀನೋಬ್ಬನೇ ಅಲ್ಲ. ಈ ರಣರಂಗದಲ್ಲಿ ನೆರೆದಿರುವ ಪ್ರತಿಯೊಬ್ಬರೂ ಕೂಡ ಅಸ್ತಿತ್ವವನ್ನು ಪಡೆದುಕೊಂಡು ಮುಂದುವರಿಯುತ್ತಾರೆ. ಹಾಗಾದರೆ ನಾವು ಹೇಗೆ ಅಸ್ತಿತ್ವದಲ್ಲಿರುತ್ತೇವೆ? ಹೇಗೆ ಈ ಭೌತಿಕ ದೇಹವನ್ನು ಪಡೆದುಕೊಂಡು ಅಸ್ತಿತ್ವದಲ್ಲಿದ್ದೇವೆಯೋ ಹಾಗೆಯೇ ಈ ದೇಹ ನಾಶವಾದನಂತರವೂ ನಾವು ಇನ್ನೊಂದು ದೇಹಧಾರಣೆ ಮಾಡಿ ಅಸ್ತಿತ್ವದಲ್ಲಿರುತ್ತೇವೆ.

ಈಗಿನ ಪ್ರಶ್ನೆಯೆಂದರೆ ”ಈ ದೇಹ ನಾಶವಾದ ಅನಂತರ ನಾವು ಯಾವ ತರಹದ ದೇಹವನ್ನು ಪಡೆಯುತ್ತೇವೆ? ಎಂಬುದು. ಅದನ್ನು ಕೂಡ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ನಾವು ಇಷ್ಟಪಟ್ಟರೆ ಈ ಲೋಕಕ್ಕಿಂತಲೂ ಉನ್ನತವಾದ ಲೋಕಗಳಿಗೆ ಹೋಗಬಹುದು. ಅಲ್ಲಿನ ಜೀವಿತಾವಧಿಯು ಮತ್ತು ಇಂದ್ರಿಯತೃಪ್ತಿಯು ಇದಕ್ಕಿಂತಲೂ ಇನ್ನೂ ಹೆಚ್ಚಿನದಾಗಿರುತ್ತದೆ.

ಅಂತಹ ಅಸ್ತಿತ್ವವನ್ನು ನಾವು ಪಡೆಯಬಹುದು. ಅದೇ ರೀತಿಯಾಗಿ ನಾವು ನಾಯಿ, ಬೆಕ್ಕುಗಳಂತಹ ಪ್ರಾಣಿಗಳು, ಕೀಟಗಳು, ಗಿಡಗಳು, ಜಲಚರಗಳಾಗಿ ಅತ್ಯಂತ ಕೆಳಮಟ್ಟದ ಜೀವನವನ್ನು ಪಡೆಯಬಹುದು. ನಾವು ಈಗ ಯಾವ ರೀತಿಯಲ್ಲಿ ಇದ್ದೇವೆಯೋ ಅದೇ ರೀತಿಯ ಆಸ್ತಿತ್ವವನ್ನು ಕೂಡ ಪಡೆಯಬಹುದು. ಹೇಗೆ ಭಗವಂತ ತನ್ನ ನಿತ್ಯವಾದ ಆನಂದ ಮತ್ತು ಜ್ಞಾನದಲ್ಲಿರುವನೋ ಅದೇ ರೀತಿಯಾದ ಜೀವನವನ್ನು ಕೂಡ ನಾವು ಪಡೆಯಬಹುದು.

ನಾವು ಆಧ್ಯಾತ್ಮಿಕ ದೇಹವನ್ನು ಪಡೆಯುವುದು ಎಂದರೆ, ನಿತ್ಯವಾದ ಆನಂದ ಮತ್ತು ಜ್ಞಾನದ ಶಾಶ್ವತವಾದ ದೇಹವನ್ನು ಪಡೆಯುವುದು ಎಂದರ್ಥ. ನಾವು ಈಗ ಪಡೆದುಕೊಂಡಿರುವ ಈ ಐಹಿಕ ದೇಹ ನಿತ್ಯವಾದುದಲ್ಲ. ಆನಂದವಾದುದಲ್ಲ ಮತ್ತು ಪೂರ್ಣ ಜ್ಞಾನವನ್ನು ಪಡೆದಿಲ್ಲ. ನಮಗೆಲ್ಲ ತಿಳಿದಿರುವಂತೆ ಅಜ್ಞಾನವನ್ನು ತುಂಬಿಕೊಂಡಿರುವ ಈ ಐಹಿಕ ದೇಹವು ನಾಶಹೊಂದುತ್ತದೆ. ಉದಾಹರಣೆಗೆ ಆ ಗೋಡೆಯ ಆಚೆ ಏನಿದೆ? ಎಂಬುದೇ ನಮಗೆ ತಿಳಿದಿಲ್ಲ.

ನಮಗಿರುವ ಇಂದ್ರಿಯಗಳು ಅಪೂರ್ಣ ಮತ್ತು ಸಂಕುಚಿತವಾದುವು. ನಮ್ಮಲ್ಲಿರುವ ಈ ಸಂಕುಚಿತ ಇಂದ್ರಿಯ ಜ್ಞಾನದ ಅಹಂಕಾರದಿಂದ “ಏನು ನೀನು ದೇವರನ್ನು ತೋರಿಸಬಲ್ಲೆಯಾ?” ಎಂದು ಸವಾಲು ಮಾಡುತ್ತೇವೆ. ಆದರೆ ನಾವು ಇದನ್ನು ಮರೆತಿರುತ್ತೇವೆ, ಬೆಳಕು ಹೊರಟುಹೋದ ಕೂಡಲೇ ನೋಡುವ ಶಕ್ತಿಯನ್ನು ಕೂಡ ಕಳೆದುಕೊಳ್ಳುತ್ತೇವೆ ಎಂದು.

ಈ ಐಹಿಕ ದೇಹವು ಕೇವಲ ಸಂಕುಚಿತ ಮತ್ತು ಅಜ್ಞಾನದಿಂದ ತುಂಬಿಕೊಂಡಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಆಧ್ಯಾತ್ಮಿಕ ದೇಹವು ಪೂರ್ಣ ಆನಂದ ಮತ್ತು ಜ್ಞಾನದಿಂದ ತುಂಬಿಕೊಂಡಿದೆ. ನಾವು ಈ ತರಹದ ದೇಹವನ್ನು ಇಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಪಡೆಯಬಹುದು. ಆದರೆ ಅದಕ್ಕೆ ತಕ್ಕಂತಹ ಕೆಲಸ ಸಾಧನೆಯನ್ನು ನಾವು ಮಾಡಬೇಕಾಗುತ್ತದೆ.

ನಾವು ಒಂದು ಉನ್ನತ ಲೋಕವನ್ನು ಪಡೆಯಬೇಕೆಂದರೂ ಅದಕ್ಕೆ ತಕ್ಕಂತಹ ಕೆಲಸ, ಅಭ್ಯಾಸಗಳು ಮಾಡಬೇಕಾಗುತ್ತದೆ. ನಾಯಿ, ಬೆಕ್ಕುಗಳಂತಹ ಪ್ರಾಣಿಜೀವನವನ್ನು ಪಡೆದರೂ ಅದಕ್ಕೆ ತಕ್ಕಂತಹ ಕೆಲಸ ನಮ್ಮಿಂದ ನಡೆದಿರುತ್ತದೆ. ಹಾಗೆಯೇ ಉನ್ನತವಾದ, ಶಾಶ್ವತವಾದ ಆನಂದ ಮತ್ತು ಜ್ಞಾನವನ್ನು ಪಡೆಯಬೇಕಾದರೂ ಅದಕ್ಕೆ ತಕ್ಕಂತಹ ಕೆಲಸ, ಸಾಧನೆ ಮಾಡಬೇಕಾಗುತ್ತದೆ.

ಆದ್ದರಿಂದ ವಿವೇಕವುಳ್ಳ ಜನರು ತಮ್ಮ ಮುಂದಿನ ಜನ್ಮದಲ್ಲಿ ಶಾಶ್ವತವಾದ ಆನಂದ, ಜ್ಞಾನವನ್ನು ಪಡೆದಿರುವ ದೇಹವನ್ನು ಬಯಸುತ್ತಾರೆ. ಅದನ್ನು ಭಗವದ್ಗೀತೆಯಲ್ಲಿ ಈ ರೀತಿ ವಿವರಿಸಲಾಗಿದೆ – “ಯದ್ ಗತ್ವಾನ ನಿವರ್ತಂತೆ ತದ್ ಧಾಮ ಪರಮಾ ಮಮ.” ಈ ಐಹಿಕ ಜಗತ್ತಿನಲ್ಲಿ ನೀವು ಏನೇ ಕೆಲಸ, ಸಾಧನೆ ಮಾಡಿ ಬ್ರಹ್ಮಲೋಕವನ್ನು ಪಡೆದರೂ ಪುನಃ ಈ ಐಹಿಕ ಜಗತ್ತಿಗೆ ವಾಪಸಾಗಲೇಬೇಕು.

ಆದರೆ ನೀವು ಪ್ರಯತ್ನಶೀಲತೆಯಿಂದ ಆಧ್ಯಾತ್ಮಿಕ ಜಗತ್ತಾಗಿರುವ ಆ ಭಗವದ್ಧಾಮಕ್ಕೆ ಹೋದರೆ ಐಹಿಕವಾದ ದೇಹವನ್ನು ಪಡೆಯಲು ಈ ಜಗತ್ತಿಗೆ ಹಿಂತಿರುಗುವುದಿಲ್ಲ.

ಇನ್ನೊಂದು ಪ್ರಶ್ನೆ ಏನೆಂದರೆ ”ನಾವು ನಿತ್ಯರಾದರೆ ನಮ್ಮ ಜೀವನದಲ್ಲಿ ಏತಕ್ಕಾಗಿ ಇಷ್ಟೊಂದು ದುಃಖ, ಸಂಕಟಕರ ಪರಿಸ್ಥಿತಿಗಳಿವೆ? ನಾವೇಕೆ ಸಾವನ್ನು ಅಪ್ಪಿಕೊಳ್ಳಲು ತಳ್ಳಲ್ಪಡುತ್ತಿದ್ದೇವೆ’? ನಿಜವಾಗಿಯೂ ಇವೆಲ್ಲವೂ ವಿವೇಕಯುತವಾದ ಬುದ್ಧವಂತಿಕೆಯ ಪ್ರಶ್ನೆಗಳು. “ನಾನು ನಿತ್ಯನಾಗಿದ್ದರೆ ಏಕೆ ಈ ಜನನ, ಮರಣ, ವೃದ್ಧಾಪ್ಯ, ರೋಗರುಜಿನಗಳಿಗೆ ಒಳಗಾಗುವ ಈ ಐಹಿಕ ದೇಹದಲ್ಲಿ ಇದ್ದೇನೆ?”

ಕೃಷ್ಣನ ಬೋಧನೆ ಏನೆಂದರೆ ಈ ಕಷ್ಟ ದುಃಖಕರವಾದ ಪರಿಸ್ಥಿತಿಗಳು ನಮ್ಮ ಈ ಐಹಿಕ ದೇಹದಿಂದಲೇ ಉಂಟಾಗಿರುವಂಥದ್ದು. ಆದುದರಿಂದ ಯಾರು ಇಂದ್ರಿಯಭೋಗದಲ್ಲಿ ಸದಾ ತೊಡಗಿದ್ದಾರೆಯೋ ಅವರನ್ನು ಕರ್ಮಿಗಳು ಎಂದು ಹೇಳಲಾಗುತ್ತದೆ. ಕರ್ಮಿಗಳು ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ಅವರಿಗೆ ತತ್‌ಕ್ಷಣದ ಸುಖಸಾಧನಗಳು ಬೇಕು.

ಒಂದು ಪುಟ್ಟ ಮಗುವಿಗೆ ತಂದೆ ತಾಯಿಯರ ಬಗ್ಗೆ ಯೋಚನೆ ಇರುವುದಿಲ್ಲ. ಅದು ದಿನವಿಡಿ ಆಟವಾಡಿಕೊಂಡಿರುತ್ತದೆ. ಅದಕ್ಕೆ ಭವಿಷ್ಯದ ಚಿಂತೆಯಿರುವುದಿಲ್ಲ. ಹಾಗೇಯೇ ಈ ಕರ್ಮಿಗಳಿಗೂ ತತ್‌ಕ್ಷಣವೇ ಸುಖ-ಸಾಧನೆಗಳು ಬೇಕು. ಕರ್ಮಿಗಳು ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ಅವರಿಗೆ ಮಗುವಿಗೆ ತಂದೆ ತಾಯಿಯರ ಬಗ್ಗೆ ಯೋಚನೆ ಇರುವುದಿಲ್ಲ.

ಅವರಿಗೂ ಭವಿಷ್ಯದ ಚಿಂತೆಯಿರುವುದಿಲ್ಲ. ಯಾವುದಕ್ಕೆ ಜನನವಿಲ್ಲ, ಮರಣವಿಲ್ಲ, ವೃದ್ಧಾಪ್ಯ, ರೋಗರುಜಿನಗಳಿಲ್ಲವೋ ಅಂತಹ ಒಂದು ಉತ್ತಮವಾದ ಜೀವನವನ್ನು ಪಡೆಯಲು ನಾವು ಪ್ರಯತ್ನಿಸಬೇಕು. ಕೃಷ್ಣ ಪ್ರಜ್ಞೆ ಆಂದೋಲನವು ಮಾನವನ ಈ ಉದಾತ್ತ ಉದ್ದೇಶವನ್ನು ಪೂರ್ಣಮಾಡುವುದಕ್ಕಾಗಿಯೇ ಇದೆ.

ಕೃಷ್ಣನೇ ಎಲ್ಲವನ್ನೂ ಪೂರೈಸುವವನು

ಸಾಮಾನ್ಯವಾದ ಪ್ರಶ್ನೆಯೆಂದರೆ – “ನಾನು ಈ ಕೃಷ್ಣ ಪ್ರಜೆಗಾಗಿ ತನ್ನ ಜೀವನವನ್ನು ಸಮರ್ಪಿಸಿಕೊಂಡರೆ ನಮ್ಮ ಐಹಿಕ ಆವಶ್ಯಕತೆಗಳು ಹೇಗೆ ಪೂರೈಕೆಯಾಗುತ್ತವೆ?” ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ – ಯಾರು ಕೃಷ್ಣಪ್ರಜ್ಞೆಯಲ್ಲಿ ತೊಡಗಿದ್ದಾರೆಯೋ ಅವರ ಜೀವನದ ಅವಶ್ಯಕತೆಗಳನ್ನು ಕೃಷ್ಣನೇ ಪೂರೈಸುತ್ತಾನೆ.

ಈಗ ಎಲ್ಲರ ಪೂರೈಕೆಗಳನ್ನು ಕೃಷ್ಣನೇ ಮಾಡುತ್ತಿದ್ದಾನೆ. ಏಕೋ ಬಹೂನಾಂ ಯೋ ವಿದಧಾತಿ ಕಾಮನ್ – “ಪರಮ ಪುರುಷ ದೇವೋತ್ತಮ‌ ಎಲ್ಲ ಜೀವಿಗಳ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾನೆ.” ನಿಜವಾದ ಮನೆಯಾದ ಭಗವದ್ಧಾಮಕ್ಕೆ ಹೋಗಲು ಬಯಸುವ ಭಕ್ತಿನಿಗೆ ಯಾವುದೇ ಅಭಾವವಿಲ್ಲ. ಇದರಲ್ಲಿ ಯಾವ ಸಂದೇಹವಿಲ್ಲ.

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ -ತೇಷಾಂ ನಿತ್ಯಾಭಿಯುಕ್ತಾನಾಂ… ಯೋಗಕ್ಷೇಮಂ ವಹಾಮ್ಯಹಂ – ”ಯಾವ ಭಕ್ತ ನನ್ನ ಸೇವೆಯಲ್ಲಿ ಸದಾ ತೊಡಗಿರುತ್ತಾನೋ ಅವನ ಜೀವನದ ಎಲ್ಲ ರೀತಿಯ ಅವಶ್ಯಕತೆಗಳನ್ನು ಮತ್ತು ಅವನ ಯೋಗಕ್ಷೇಮವನ್ನು ನಾನೇ ನೋಡಿಕೊಳ್ಳುತ್ತೇನೆ.”

ಇದಕ್ಕೊಂದು ವ್ಯಾವಹಾರಿಕ ಉದಾಹರಣೆಯನ್ನು ಕೊಡಬಹುದಾದರೆ ನಮ್ಮಲ್ಲಿ ಕೃಷ್ಣ ಪ್ರಜ್ಞಾ ಚಳವಳಿ ಕೇಂದ್ರಗಳು ನೂರು ಇವೆ. ಪ್ರತಿಯೊಂದು ಕೇಂದ್ರದಲ್ಲಿ 25 ರಿಂದ ಸುಮಾರು 250 ಭಕ್ತರಿದ್ದಾರೆ. ಅವರಿಗೆ ನಿರ್ದಿಷ್ಟವಾದ ಆದಾಯವೇನೂ ಇಲ್ಲ. ಆದರೆ ಕೃಷ್ಣನ ದಯೆಯಿಂದ ನಮ್ಮಲ್ಲಿ ಯಾವುದೇ ಕೊರತೆಯಿಲ್ಲ.

ಪ್ರತಿಯೊಂದೂ ಇಲ್ಲಿ ಪೂರೈಸಲ್ಪಡುತ್ತಿದೆ. ಜನರು ಆಶ್ಚರ್ಯಗೊಳ್ಳುತ್ತಾರೆ. “ಈ ಜನರು ಯಾವ ಕೆಲಸವನ್ನೂ ಮಾಡುವುದಿಲ್ಲ. ಯಾವುದೇ ವೃತಿಯನ್ನು ಅವಲಂಬಿಸಿಲ್ಲ. ಕೇವಲ ‘ಹರೇ ಕೃಷ್ಣ’ ಎಂದು ಜಪಿಸುತ್ತಾ ಹೇಗೆ ಜೀವಿಸುತ್ತಾರೆ?”

ಈ ನಾಯಿ, ಬೆಕ್ಕುಗಳೂ ಕೂಡ ಭಗವಂತನ ಅನುಗ್ರಹದಿಂದ ಇಷ್ಟೊಂದು ಚೆನ್ನಾಗಿ ಜೀವಿಸುತ್ತಿರುವಾಗ ಭಗವಂತನ ಭಕ್ತರಾದ ನಾವು ಅವನ ದಯೆಯಿಂದ ಇನ್ನೂ ಚೆನ್ನಾಗಿ ಜೀವಸಬಹುದಲ್ಲ. ಇಲ್ಲಿ ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಆದರೂ ಜನರು ಇಲ್ಲಿ ಈ ರೀತಿ ಯೋಚನೆ ಮಾಡುತ್ತಾರೆ – “ನಾನು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿದರೂ ಇನ್ನೂ ಏನೇನೋ ಕಷ್ಟಗಳು ಇವೆ.”

ಇಂತಹ ಜನರಿಗೆ ಈ ಬೋಧನೆ, ಏನೆ೦ದರೆ ಮಾತ್ರ-ಸ್ಪರ್ಶಾಸ್ತು ಕೌಂತೇಯ ಶೀತೋಷ್ಣ-ಸುಖ- ದುಃಖ-ದಃ. ”ಈ ಸುಖ-ದುಃಖಗಳು ಚಳಿಗಾಲ, ಬೇಸಿಗೆಕಾಲ ಇದ್ದಂತೆ, ಚಳಿಗಾಲದಲ್ಲಿ ನೀರು ನೋವು ಕೊಡುವಂತದ್ದು. ಬೇಸಿಗೆಯಲ್ಲಿ ಅದೇ ನೀರು ಸುಖ ಕೊಡುವಂತದ್ದು. ಅಂದ ಮೇಲೆ ನೀರಿನ ಸ್ಥಾನ ಏನು? ಇದು ದುಃಖ ಕೊಡುವಂಥದ್ದೋ ಅಥವಾ ಸುಖಕೊಡುವಂಥದ್ದೋ? ನೀರು ದುಃಖವನ್ನೂ ಕೊಡುವುದಿಲ್ಲ. ಸುಖವನ್ನೂ ಕೊಡುವುದಿಲ್ಲ.

ಕಾಲಮಾನದ ಬದಲಾವಣೆಗೆ ತಕ್ಕಂತೆ ಇದು ನಮ್ಮ ಚರ್ಮಕ್ಕೆ ಸುಖವನ್ನು ಕೊಡುತ್ತವೆ ಮತ್ತು ದುಃಖವನ್ನು ಕೂಡ ಕೊಡುತ್ತದೆ. ಅಂತಹ ಸುಖ-ದುಃಖಗಳನ್ನು ಇಲ್ಲಿ ವಿವರಿಸಲಾಗಿದೆ. “ಅವು ಬರುತ್ತವೆ ಮತ್ತು ಹೋಗುತ್ತವೆ. ಅವು ಶಾಶ್ವತವಾದುದ್ದಲ್ಲ.”

ಸಹನೆಯಿಂದ ಇರಿ

ಆಗಮ ಅಪಾಯಿನಃ ಅನಿತ್ಯಃ ಅಂದರೆ “ಅವು ಬರುತ್ತವೆ ಹೋಗುತ್ತವೆ ಅವು ಶಾಶ್ವತವಲ್ಲ.” ಆದುದರಿಂದ ಶ್ರೀಕೃಷ್ಣನು ಈ ರೀತಿ ಬೋಧಿಸಿದ್ದಾನೆ. ತಾಮ್ಸ್ ತಿತೀಕ್ಷಸ್ವ ಭಾರತಃ. “ಆದ್ದರಿಂದ ತಾಳ್ಮೆಯಿಂದಿರಿ.” ಆದರೆ ನಿಮ್ಮ ನಿಜವಾದ ಕಾರ್ಯವಾದ ಕೃಷ್ಣ ಪ್ರಜ್ಞೆಯನ್ನು ಮರೆಯಬೇಡಿ. ಈ ಐಹಿಕ ಸುಖ-ದುಃಖಗಳಿಗೆ ನೀವು ಚಿಂತಿಸಬೇಡಿ. ಈ ನೋವುಗಳಿಂದ ನಿಜವಾಗಿಯೂ ನಿವಾರಣೆ ಹೊಂದಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ಭಕ್ತಿಯ ಒಂದು ಗುಣವೆಂದರೆ – ‘ತಿತೀಕ್ಷಾ’ ಅಂದರೆ ಸಹನೆ. ನಮ್ಮ ಜೀವನದ ಪ್ರತಿಯೊಂದು ಪರಿಸ್ಥಿತಿಯಲ್ಲೂ ನಾವು ಈ ಸಹನ (ತಾಳ್ಮೆ) ಯನ್ನು ಕಲಿಯಬೇಕು. ಉದಾಹರಣೆಗೆ – ಯಾರು ನಿಜವಾದ ಬ್ರಾಹ್ಮಣರೋ ಅವರು ಎಂತಹ ಕೊರೆಯುವ ಚಳಿಯಿದ್ದರೂ ಅದಕ್ಕೆ ಹೆದರದೆ ನದಿಯಲ್ಲಿ ಸ್ನಾನ ಮಾಡುತ್ತಾರೆ.

ಅದಕ್ಕೆ ಸರಳವಾದ ಅಭ್ಯಾಸವಿದ್ದರೆ ಸಾಕು. ಅಂತಹ ಕೊರೆಯುವ ಚಳಿಯಲ್ಲಿಯೂ ಸ್ನಾನ ಮಾಡುವುದು ಪ್ರಾರಂಭದಲ್ಲಿ ಹಿಂಸೆಯೆನಿಸಿದರೂ ಅದು ಅಭ್ಯಾಸವಾದಾಗ ಅಷ್ಟೊಂದು ಹಿಂಸೆಯೆನಿಸದೇ ಸಹಜವೇ ಆಗುತ್ತದೆ. ಆದ್ದರಿಂದ ಬೆಳಗಿನ ಜಾವ ತುಂಬಾ ಚಳಿಯಿದೆಯೆಂದುಕೊಂಡು ಸ್ನಾನ ಮಾಡುವುದನ್ನೇ ನಾವು ಬಿಡಬಾರದು.

ಅದೇ ರೀತಿಯಾಗಿ ಬೇಸಿಗೆ ಬಂದಾಗ ಅಡಿಗೆ ಮನೆಯಲ್ಲಿ ಬಹಳ ಸೆಕೆಯಾಗುತ್ತದೆ ನಾನು ಅಡಿಗೆ ಮಾಡುವುದಿಲ್ಲ ಎಂದು ನಿರ್ಧಾರ ಮಾಡಬಾರದು. ಮನೆಯಲ್ಲಿ ಎಷ್ಟೇ ಸೆಕೆಯಿದ್ದರೂ ಅಡಿಗೆ ಮಾಡುವುದನ್ನು ನಾವು ಬಿಡುವುದಿಲ್ಲ.

ಹಾಗೇಯೇ ಆಧ್ಯಾತ್ಮಕ ಪ್ರಗತಿಯನ್ನು ಸಾಧಿಸಬೇಕಾದರೆ ಅದಕ್ಕಾಗಿಯೇ ಕೆಲವು ನೀತಿ ನಿಯಮಗಳಿರುತ್ತವೆ. ಅವು ನಮಗೆ ಕಷ್ಟಕರವಾಗುತ್ತವೆ ಎಂದುಕೊಂಡು ಅದರ ಆಚರಣೆಯನ್ನು ನಾವು ಬಿಡಬಾರದು. ನಾವು ಸಹನೆಯಿಂದಿರಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಆದ್ದರಿಂದ ಶ್ರೀಕೃಷ್ಣ ಬೋಧಿಸುತ್ತಾನೆ.

ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ ಅಚ್ಯುತನೆ ಕಾಯೋ, ಆನಂತನೆ ತೆಗೆಯೊ ಗೋವಿಂದ ಹರಿ ಪೊರೆಯೊ ಪುರಂದರವಿಠಲ ನೀ ಕರುಣವುಳ್ಳವನು ಕಾಣೋ ತಾಮ್ಸ್ ತಿತೀಕ್ಷಸ್ವ ಭಾರತಃ – “ಭರತವಂಶಜನಾದ ನನ್ನ ಆತ್ಮೀಯ ಅರ್ಜುನನೇ, ನೀನು ಸಹನೆಯಿಂದ ಇರುವುದನ್ನು ಕಲಿತುಕೋ.”

ನಾವು ಕೃಷ್ಣಪ್ರಜ್ಞೆಯಲ್ಲಿ ಹೇಗೆ ಸಹನೆಯಿಂದಿರಬೇಕು ಎಂಬುದನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಇಲ್ಲಿ ಹೇಳಿದ್ದಾರೆ. ತೃಣಾದ್ ಅಪಿ ಸುನೀಚೇನ. “ನಾವು ಹುಲ್ಲಿಗಿಂತಲೂ ವಿನೀತರಾಗಬೇಕು.” ಎಷ್ಟೋ ಜನರು ಹುಲ್ಲನ್ನು ತುಳಿದುಕೊಂಡು ಹೋದರೂ ಆ ಹುಲ್ಲು ಅವರನ್ನು ಪ್ರತಿಭಟಿಸುವುದಿಲ್ಲ.

ತರೋರ್‌‌ ಅಪಿ ಸಹಿಷ್ಣುನಾ. “ವೃಕ್ಷಕ್ಕಿಂತಲೂ ನಾವು ಹೆಚ್ಚಿನ ಸಹನಾಶೀಲರಾಗಬೇಕು. ಕೆಲವರು ಮರದ ರೆಂಬೆಕೊಂಬೆಗಳನ್ನು ಕತ್ತರಿಸಿಕೊಳ್ಳುತ್ತಾರೆ. ಕೆಲವರು ಹಣ್ಣುಗಳನ್ನು ಕೀಳುತ್ತಾರೆ, ಕೆಲವರು ಮರವನ್ನೇ ಕಡಿಯುತ್ತಾರೆ. ಆದರೂ ಆ ಮರ ಎಲ್ಲರಿಗೂ ನೆರಳು, ಆಶ್ರಯ, ಹೂವು ಹಣ್ಣುಗಳನ್ನು ಕೊಡುತ್ತದೆ. ಸಹನೆಯ ಒಂದು ಒಳ್ಳೆಯ ಉದಾಹರಣೆಯೆಂದರೆ ವೃಕ್ಷ ಅಥವಾ ಮರವಾಗಿದೆ.

ಯಾರು ತಮ್ಮ ಮನೆಯಾದ ಭಗವದ್ಧಾಮಕ್ಕೆ ಹಿಂತಿರುಗಲು ಬಯಸುತ್ತಾರೆಯೋ ಅಂತಹವರು ಈ ತರಹದ ಸಹನೆಯನ್ನು (ತಾಳ್ಮೆ) ಪಡೆದುಕೊಂಡಿರಬೇಕು. ಇದು ಚೈತನ್ಯ ಮಹಾಪ್ರಭುಗಳ ಬೋಧನೆಯಾಗಿದೆ. ಅವರು ಇದನ್ನೂ ಹೇಳುತ್ತಾರೆ. ಅಮಾನಿನ ಮಾನದೇನಃ. “ಯಾರೇ ಆಗಲಿ ಬೇರೆಯವರು ನನಗೆ ಗೌರವವನ್ನು ಕೊಡಬೇಕೆಂದು ಬಯಸಬಾರದು.

ತಾವೇ ಅಂತಹವರಿಗೆ ಗೌರವವನ್ನು ಕೊಡಬೇಕು.” ಈ ರೀತಿಯಾಗಿ ನಾವು ಸಾಧನೆಯ ಅಭ್ಯಾಸಗಳನ್ನು ಮಾಡಿದರೆ ಭಗವದ್ಧಾಮಕ್ಕೆ ಹೋಗಲು ಅರ್ಹರಾಗುತ್ತೇವೆ.” ಇದನ್ನು ಮುಂದಿನ ಈ ಶ್ಲೋಕದಲ್ಲಿ ವಿವರಿಸಲಾಗುತ್ತದೆ. ಯಂ ಹಿ ನ ವ್ಯಥಯಂತೇ ಏತೇ ಪುರುಷಂ ಪುರುರ್ಷಭ, ಸಮ-ದುಃಖಂ-ಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ.

“ಒಬ್ಬನು ಸಾಧನೆಯನ್ನು ಮಾಡಿದರೆ ಅವನು ಭಗವದ್ಧಾಮಕ್ಕೆ ಹೋಗುತ್ತಾನೆ.” ಆದುದರಿ೦ದ ಅಭ್ಯಾಸವನ್ನು ಮಾಡಿ. ಆಗ ಎಲ್ಲವೂ ಸಹನೆಯ ರೂಪವಾಗುತ್ತದೆ. ಬೆಳಗಿನ ಹೊತ್ತು ಕೆಲವರು ನಡೆದುಕೊಂಡು ಹೋಗುತ್ತಾರೆ. ಮತ್ತೆ ಕೆಲವರು ಓಡುತ್ತಿರುತ್ತಾರೆ. ಆದರೆ ನನಗೆ ಓಡಲು ಸಾಧ್ಯವಿಲ್ಲ. ಆದರೂ ನಾನು ಪ್ರಯತ್ನಿಸಿ ಅಭ್ಯಾಸ ಮಾಡಿದರೆ ಅವರಂತೆ ನಾನು ಕೂಡ ಓಡಬಹುದು.

ಯಾವುದನ್ನೇ ಅಭ್ಯಾಸ ಮಾಡಿದರೂ ಅದರಲ್ಲಿ ನೀವು ಯಶಸ್ವಿಯಾಗುತ್ತೀರಿ. ಆದರೆ ಆ ಅಭ್ಯಾಸದ ಬಗ್ಗೆ ನೀವೇಕೆ ಉದಾಸೀನ ಮಾಡುತ್ತೀರಿ? ಅದು ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತದೆ. ನಿಜವಾದ ಸಮಸ್ಯೆಗಳಾದ ಜನನ, ಮರಣ, ವೃದ್ಧಾಪ್ಯ, ರೋಗಗಳು ಈ ಎಲ್ಲವನ್ನು ನಿಯಂತ್ರಿತ ತತ್ತ್ವಗಳನ್ನು ಅಭ್ಯಾಸ ಮಾಡುವುದರಿಂದ ಅದು ಪರಿಹರಿಸುತ್ತದೆ. ಆದರೆ ನೀವು ಇದನ್ನು ಏಕೆ ಮಾಡುತ್ತಿಲ್ಲ?

ಇದು ನಮ್ಮ ವಿನಂತಿ, ನಾವು ಕೃಷ್ಣಪಜ್ಞೆಯ ನೂರಾರು ಕೇಂದ್ರಗಳನ್ನು ತೆರೆದಿದ್ದೇವೆ. ನಾವು ಕೃಷ್ಣನ ಭಗವಾದ್ಧಾಮಕ್ಕೆ ಮರಳಲು ತರಬೇತಿಯನ್ನು ಕೊಡುತ್ತಿದ್ದೇವೆ. ಸುಲಭವಾಗಿ ಭಗವದ್ಧಾಮಕ್ಕೆ ನೀವು ಹೋಗಲು ಸಾಧ್ಯವಿಲ್ಲ. ನೀವು ಕೆಲವೊಂದು ನಿಯಂತ್ರಿತ ತತ್ತ್ವಗಳನ್ನು ಅಭ್ಯಾಸ ಮಾಡಿದಾಗ ಮಾತ್ರ ಭಗವದ್ಧಾಮಕ್ಕೆ ಹಿಂತಿರುಗಲು ಅರ್ಹರಾಗುತ್ತೀರಿ.

ಅದು ನಿಮಗೆ ಅಷ್ಟೊಂದು ಕಷ್ಟಕರವಲ್ಲ. ನೀವು ಅಭ್ಯಾಸಿಸಿದರೆ ಅದು ನಿಮಗೆ ಸುಲಭವಾಗುತ್ತದೆ. ಅಭ್ಯಾಸ “ಹರೇ ಕೃಷ್ಣ” ಮಹಾಮಂತ್ರ ಜಪದಿಂದ ಪ್ರಾರಂಭವಾಗಬೇಕು. ಆಗ ಮಾತ್ರ ನೀವು ಈ ಅಭ್ಯಾಸ ಪಡೆಯಲು ಅರ್ಹರಾಗುತ್ತೀರಿ.

ಆದುದರಿಂದ ಕೃಷ್ಣ ಪ್ರಜ್ಞೆ ಚಳವಳಿಯ ಪೂರ್ಣ ಉಪಯೋಗ ಪಡೆದು ನೀವು ಯಶಸ್ವಿಯಾಗಿರಿ. ದಾರಿ ತಪ್ಪಬೇಡಿ. ಈ ದೇಹ ಅವಸಾನವಾದ ಮೇಲೆ ನಾವು ಇನ್ನೊಂದು ದೇಹವನ್ನು ಪಡೆಯುತ್ತೇವೆ. ನೀವು ಈ ನಿಯಂತ್ರಿತ ತತ್ತ್ವಗಳನ್ನು ಉದಾಸೀನ ಮಾಡಿದರೆ ನಾಯಿ, ಬೆಕ್ಕುಗಳ ದೇಹವನ್ನು ಪಡೆಯುತ್ತೀರಿ.

ಊಹಿಸಿಕೊಳ್ಳಿ, ಇದು ಎಷ್ಟು ಕೆಟ್ಟದ್ದಾಗಿದೆ. ಕೃಷ್ಣನು ಹೇಳುತ್ತಾನೆ – ಮಧ್ಯಜಿನೋಽಪಿ ಯಂತೀ ಮಾಮ್. “ಯಾರು ಕೃಷ್ಣಪ್ರಜ್ಞೆಯಲ್ಲಿ ತೊಡಗಿರುತ್ತಾರೋ ಅವರು ನನ್ನ ಬಳಿ ಬರುತ್ತಾರೆ.” ಆದ್ದರಿಂದ ಕೃಷ್ಣಪ್ರಜ್ಞೆಯನ್ನು ಅಭ್ಯಾಸ ಮಾಡಿ ನೀವು ಭಗವದ್ಧಾಮಕ್ಕೆ ಹಿಂತಿರುಗಿ.

ಅತ್ಯಂತ ಧನ್ಯವಾದಗಳು…

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi