“ಶ್ರೀಕೃಷ್ಣ- ಉದ್ಧವರ ಬ್ರಹ್ಮವಿದ್ಯಾ ಸಂವಾದ”
– ಶ್ರೀಮತಿ ಶಶಿಕಲಾ ಶ್ರೀಧರ
ಭಾರತದ ಮಹಾಗ್ರಂಥ ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮನು ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಮಿತ್ರಶ್ರೇಷ್ಠನೂ ಭಕ್ತ ಶ್ರೇಷ್ಠನೂ ಆದ ಅರ್ಜುನನ್ನು ನೆಪವಾಗಿಟ್ಟುಕೊಂಡು

ಸಾರಥ್ಯಮರ್ಜುನ ಸ್ಯಾಜೌ ಕುರ್ವನ್ ಗೀತಾಮೃತಂ ದದೌ |
ಲೋಕತ್ರಯೋಪಕಾರಾಯ ತಸ್ಮೈ ಕೃಷ್ಣಾತ್ಮನೇ ನಮಃ ||
ಎಂಬಂತೆ ಶ್ರೀಗೀತಾಮೃತಸುಧೆಯನ್ನು ಲೋಕಕ್ಕೆ ಅನುಗ್ರಹಿಸಿದಂತೆಯೇ ಶ್ರೀಮದ್ಭಾಗವತ ಮಹಾಗ್ರಂಥದಲ್ಲೂ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಭೃತ್ಯ ಶ್ರೇಷ್ಠನೂ ಮಿತ್ರಶ್ರೇಷ್ಠನೂ ಆದ ಉದ್ಧವನನ್ನು ವ್ಯಾಜವನ್ನಾಗಿಟ್ಟುಕೊಂಡು ಸರ್ವಲೋಕಗಳ ಕ್ಷೇಮಕ್ಕಾಗಿ ಆಧ್ಯಾತ್ಮಶಾಸ್ತ್ರವನ್ನು ಧರ್ಮವನ್ನು ಮನೋಜ್ಞವಾಗಿ ಉಪದೇಶಿಸಿದ್ದಾನೆ. ಆತ್ಮಜ್ಞಾನದಿಂದ ಕೂಡಿದ ಸಂನ್ಯಾಸಾಶ್ರಮದ ಉತ್ಕರ್ಷವನ್ನು ಉದ್ಧವನಿಗೆ ಸಾರಿ ಹೇಳುತ್ತಾನೆ. ಇದೇ ‘ ಉದ್ಧವಗೀತೆ.’ ಈ ಉದ್ಧವಗೀತೆಯ ಕಿರುಗೀತೆಯೇ ”ಅವಧೂತ ಗೀತೆ.”
ಶ್ರೀಮದ್ಭಗವದ್ಗೀತೆಯಲ್ಲಿ ಬಂಧು ಪ್ರೇಮದ ಕಾರಣದಿಂದ ಶೋಕ ಮೋಹಗಳಲ್ಲಿ ಮುಳುಗಿದ್ದ ಮಿತ್ರನಾದ ಅರ್ಜುನನನ್ನು ಸಂಬೋಧಿಸಿದರೆ, ಶ್ರೀಮದ್ಭಾಗವತದಲ್ಲಿ ಭಗವಂತನು ಪರಂಧಾಮಕ್ಕೆ ತೆರಳುವ ಸಂಕಲ್ಪ ಮಾಡಿದಾಗ, ಆತನ ಅಗಲಿಕೆಯ ವಿರಹವನ್ನು ತಾಳಲಾರದೆ, ತನ್ನ ಮುಂದಿನ ಕರ್ತವ್ಯವನ್ನು ತಿಳಿಯದೆ ತತ್ತರಿಸುತ್ತಾ ಚಿಂತಾಶೋಕಗಳಲ್ಲಿ ಮಗ್ನನಾಗಿರುವ ಮಿತ್ರ ಉದ್ಧವನನ್ನು ಸಂಬೋಧಿಸಿ ಆಧ್ಯಾತ್ಮಶಾಸ್ತ್ರವನ್ನು ಉಪದೇಶಿಸುತ್ತಾನೆ. ಹೀಗೆ ಭಗವದ್ಗೀತೆಯ ಪುನರಾವರ್ತನೆಯ ಈ ಉದ್ಧವಗೀತೆ ಹಾಗೂ ಅದರಂಗವಾದ ಅವಧೂತಗೀತೆ.
ಶ್ರೀಕೃಷ್ಣಾವಾತಾರದ ಅಂತ್ಯದಲ್ಲಿ ಬ್ರಹ್ಮಾದಿ ದೇವತೆಗಳು ಬಂದು, ಪರಮಾತ್ಮನ ಅವತಾರೋದ್ದೇಶವು ಪೂರ್ಣವಾದುದರಿಂದ ಶ್ರೀಕೃಷ್ಣನಲ್ಲಿ ತನ್ನ ದಿವ್ಯಧಾಮಕ್ಕೆ ಹಿಂದಿರುಗಿ ದೇವಲೋಕಗಳನ್ನು ಪಾಲಿಸಿ ಪೋಷಿಸಲು ಪ್ರಾರ್ಥಿಸಿಕೊಂಡಾಗ, ಶ್ರೀಕೃಷ್ಣನು ಬ್ರಹ್ಮದೇವರನ್ನು ಕುರಿತು ‘ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಈ ಭೂಮಿಯಲ್ಲಿ ಅವತರಿಸಿ ನಿಮ್ಮ ಕಾರ್ಯಗಳೆಲ್ಲವನ್ನು ಮಾಡಿಕೊಟ್ಟು ಭೂಭಾರವನ್ನು ಇಳುಹಿಸಿದ್ದಾಯಿತು.
ಆದರೆ ವೀರ್ಯ, ಶೌರ್ಯ, ಧನ, ಸಂಪತ್ತಿನಿಂದ ಉನ್ಮತ್ತರಾಗಿ ಮೆರೆಯುತ್ತಿರುವ, ಈಗಾಗಲೇ ಬ್ರಾಹ್ಮಣರಿಂದ ಶಾಪಗ್ರಸ್ತರಾಗಿರುವ ನನ್ನ ಯದುವಂಶೀಯರನ್ನು ಸಂಪೂರ್ಣವಾಗಿ ನಾಶಗೊಳಿಸಿ ನಾನು ಸ್ವಧಾಮಕ್ಕೆ ಹಿಂದಿರುಗುತ್ತೇನೆ” ಎಂದು ತಿಳಿಸುತ್ತಾನೆ.
ತಪ್ಪಿಸಿಕೊಳ್ಳಲು ಅಸಾಧ್ಯವಾದ ಶಾಪವನ್ನು ಬ್ರಾಹ್ಮಣಶ್ರೇಷ್ಠರು ಕೊಟ್ಟಿದುದರ ಪರಿಣಾಮವಾಗಿ ಇಡೀ ದ್ವಾರಕಾ ಪಟ್ಟಣದಲ್ಲಿ ಭಯಂಕರ ಉತ್ಪಾತಗಳೂ, ಅಪಶಕುನಗಳೂ ಕಾಣಿಸಿಕೊಂಡಾಗ, ದ್ವಾರಕೆಯಲ್ಲಿದ್ದ ಗುರುಹಿರಿಯರು ಕೃಷ್ಣನ ಬಳಿ ಬಂದು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದಾಗ ಶ್ರೀಕೃಷ್ಣ ಪರಮಾತ್ಮನು ಅವರನ್ನು ಸಮಾಧಾನಪಡಿಸುತ್ತಾ
” ದ್ವಾರಕೆಗೆ ತಟ್ಟಿರುವ ಈ ಬ್ರಾಹ್ಮಣ ಶಾಪದಿಂದ ಮುಕ್ತರಾಗಲು ನಾವೆಲ್ಲರೂ ಪರಮಪವಿತ್ರವಾದ ಪ್ರಭಾಸ ಕ್ಷೇತ್ರಕ್ಕೆ ಹೋಗಿ, ಅಲ್ಲಿನ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿ, ಶ್ರೇಷ್ಠರಾದ ಬ್ರಾಹ್ಮಣರಿಗೆ ಭೋಜನ ದಕ್ಷಿಣಾದಿಗಳಿಂದ ತೃಪ್ತಿಪಡಿಸಿ ನಮಗೆ ಒದಗಿರುವ ಮಹಾ ಸಂಕಟದಿಂದ ಪಾರಾಗೋಣ’ ಎಂದು ಹೇಳಿದಾಗ ಯದು ವೃದ್ಧರೆಲ್ಲರೂ ಕೃಷ್ಣನ ಆಜ್ಞೆಯನ್ನು ಶಿರಸಾವಹಿಸಿ ಪ್ರಯಾಣಕ್ಕೆ ಸನ್ನದ್ಧರಾದರು.
ಶ್ರೀಕೃಷ್ಣನನ್ನೇ ಸದಾ ಆಶ್ರಯಿಸಿಕೊಂಡಿರುತ್ತಿದ್ದ ಭಕ್ತಶ್ರೇಷ್ಠ ಉದ್ಧವನು ಇವೆಲ್ಲವನ್ನೂ ಗಮನಿಸಿ, ಕೃಷ್ಣನನ್ನು ಏಕಾಂತದಲ್ಲಿ ಸಂಧಿಸಿ, ಅವನ ಪಾದಗಳಿಗೆರಗಿ,
ನಾಹಂ ತವಾಂಘ್ರಿಕಮಲಂ ಕ್ಷಣಾರ್ಧಮಸಿ ಕೇಶವ |
ತಕ್ತುಂ ಸಮುತ್ಸಹೇ ನಾಥ ಸ್ವಧಾಮ ನಯಮಾಮಪಿ ||
(ಭಾಗವತ11.9.43)
‘ಕೇಶವ, ಪ್ರಾಣನಾಥನೇ, ನಿನ್ನ ದಿವ್ಯವಾದ ಚರಣಕಮಲಗಳನ್ನು ನಾನು ಕ್ಷಣಮಾತ್ರವಾದರೂ ಬಿಟ್ಟಿರಲಾರೆನು. ಪ್ರಭುವೇ, ನನ್ನನ್ನು ನಿನ್ನ ಧಾಮಕ್ಕೆ ಕರೆದುಕೊಂಡುಹೋಗಿ ಬಿಡು.”

‘ಪ್ರಭುವೇ, ಕರ್ಮಮಾರ್ಗದಲ್ಲಿ ತತ್ಪರರಾಗಿರುವ ನಾವಾದರೋ, ಮಾನವಲೋಕದ ನಿನ್ನ ಲೀಲಾ ಪ್ರಸಂಗಗಳನ್ನು ಉಪದೇಶಗಳನ್ನು ಅಡಿಗಡಿಗೆ ಸ್ಮರಿಸುತ್ತಾ, ಮನಸ್ಸನ್ನು ಅದರಲ್ಲಿಯೇ ಲೀನಗೊಳಿಸಿ ಮಾಯಾಮಯವಾದ ಈ ಸಂಸಾರವನ್ನು ಸುಲಭವಾಗಿ ದಾಟಿಬಿಡುತ್ತೇವೆ. ಆದ್ದರಿಂದ ನಾನು ನಿನ್ನ ಮಾಯೆಗೆ ಭಯಪಡುವುದಿಲ್ಲ. ನಿನ್ನ ಅಗಲಿಕೆಗೆ ಭಯಪಡುತ್ತಿದ್ದೇನೆ.”
ಹೀಗೆ ಭಕ್ತಶಿರೋಮಣಿಯೂ, ಪರಮಾಪ್ತಮಿತ್ರನೂ ಆದ ಉದ್ಧವನ ಹೃದಯ ತುಂಬಿ ಬಂದ ಪ್ರಾರ್ಥನೆಯನ್ನು ಕೇಳಿದ ಶ್ರೀಕೃಷ್ಣನು ಅವನನ್ನು ಕುರಿತು, “ಮಂಗಳಸ್ವರೂಪನೆ, ನಾನು ಈ ಜಗತನ್ನು ಪರಿತ್ಯಜಿಸಿ ಹೊರಟು ಹೋದ ಅನಂತರ ನೀನೂ ಇಲ್ಲಿರಬಾರದು. ಮುಂದೆ ಬರುವ ಕಲಿಯುಗದಲ್ಲಿ ಜನರು ಅಧರ್ಮದಲ್ಲಿಯೇ ಅಭಿರುಚಿಯುಳ್ಳವರಾಗಿರುತ್ತಾರೆ.
ಅವರ ನಡುವೆ ಇರದೆ, ಎಲ್ಲರನ್ನೂ ಎಲ್ಲವನ್ನೂ ಪರಿತ್ಯಜಿಸಿ, ನನ್ನಲ್ಲಿಯೇ ಸಂಪೂರ್ಣವಾದ ಮನಸ್ಸುಳ್ಳವನಾಗಿ, ಮಾಯೆಯಿಂದ ಪಾರಾಗಿ ಆತ್ಮಜ್ಞಾನವುಳ್ಳವನಾಗು” ಎಂದು ಆದೇಶವೀಯುತ್ತಾನೆ. ಮಹಾಭಾಗವತ ಶಿರೋಮಣಿಯಾದ ಉದ್ಧವನು ಆತ್ಮ ತತ್ತ್ವವನ್ನು ನೇರವಾಗಿ ಶ್ರೀಕೃಷ್ಣನಿಂದಲೇ ತಿಳಿಯಲು ನಿಶ್ಚಯಿಸಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದಾಗ ಶ್ರೀಕೃಷ್ಣ ಪರಮಾತ್ಮನು ‘ಉದ್ಧವ, ಈ ಪ್ರಪಂಚದಲ್ಲಿ ವಿದ್ವಾಂಸರಾದವರು ತಮ್ಮ ಆತ್ಮವನ್ನು ತಾವೇ ಸಂಸಾರ ಸಾಗರದಿಂದ ಉದ್ಧರಿಸಿಕೊಳ್ಳುತ್ತಾರೆ.
ಮನುಷ್ಯನಾದವನಿಗೆ ಅವನ ಆತ್ಮನೇ ಅವನಿಗೆ ಹಿತೋಪದೇಶಕ ಗುರುವಾಗಿರುತ್ತಾನೆ. ಈ ವಿಷಯದಲ್ಲಿ ಹಿಂದೆ ನನ್ನ ಪೂರ್ವಜನಾದ ಯದುರಾಜನ ಕಾಲದಲ್ಲಿ ನಡೆದ ಸಂಗತಿಯೊಂದನ್ನು ನಿನಗೆ ಹೇಳುತ್ತೇನೆ, ಶ್ರದ್ಧೆಯಿಂದ ಕೇಳುವವನಾಗು” ಎಂದು ವಿವರಿಸುತ್ತಾನೆ.
“ಯದು ಮಹಾರಾಜನು ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಮಹಾ ಪ್ರಾಜ್ಞನಾದ ಬ್ರಾಹ್ಮಣನೊಬ್ಬ ಕೇವಲ ಅಜ್ಞನಂತೆ ವ್ಯವಹರಿಸುತ್ತಾ ಮನಬಂದಂತೆ ಅಲೆಯುತ್ತಿದ್ದ. ಸ್ವಯಂ ಆಧ್ಯಾತ್ಮ ಜ್ಞಾನದಲ್ಲಿ ಮಹಾ ವಿದ್ವಾಂಸನಾದ ಯದು ಮಹಾರಾಜನಿಗೆ ಹುಚ್ಚನಂತೆ ಅಲೆಯುತ್ತಿದ್ದ ಈ ಬ್ರಾಹ್ಮಣನಲ್ಲಿನ ಅಂತಃಸತ್ತ್ವ ಅರಿವಿಗೆ ಬಂತು. ತೇಜಃಪುಂಜನಾಗಿದ್ದ ಆ ಅವಧೂತನಿಗೂ ಯದು ಮಹಾರಾಜನಿಗೂ ನಡೆದ ಅದ್ಭುತ ಸಂವಾದವೇ ಅವಧೂತಗೀತೆ.” ಅದು ಹೀಗಿದೆ:
ಯದುಮಹಾರಾಜ: ಅಯ್ಯಾ ಬ್ರಾಹ್ಮಣ, ನೀನು ಒಳ್ಳೆಯ ಯುವಕ, ಬಲಶಾಲಿ, ಚೆಲುವ. ಆದರೆ ನಿನಗೆ ಭೋಗಭಾಗ್ಯಗಳ ಕಡೆ ಗಮನವೇ ಇಲ್ಲ. ನೀನು ಮಹಾಪ್ರಾಜ್ಞನಾಗಿದ್ದರೂ ಹುಚ್ಚನಂತೆ, ಜಡನಂತೆ ಸುಮ್ಮನೆ ತಿರುಗುತ್ತಿರುವೆ. ಲೋಕದ ಜನರೆಲ್ಲಾ ಕಾಮಲೋಭಗಳ ಕಾಡುಗಿಚ್ಚಿನಲ್ಲಿ ಬೆಂದು ಹೋಗುತ್ತಿರುವಾಗ ನೀನು ಗಂಗಾನದಿಯಲ್ಲಿ ನೀರಾಟವಾಡುವ ಮದ್ದಾನೆಯಂತೆ ಆನಂದವಾಗಿರುವೆ. ಹೀಗೆ ಸದಾ ಆನಂದವಾಗಿರುವ ಶಕ್ತಿಯನ್ನು ನೀನು ಯಾರಿಂದ ಪಡೆದೆ? ನಿನ್ನ ಗುರುವಾರು?
(ಯದುಮಹಾರಾಜನು ದೊಡ್ಡ ದೈವ ಭಕ್ತ, ಬುದ್ಧಿಶಾಲಿ ಹಾಗೂ ಗುರುಹಿರಿಯರಲ್ಲಿ ಅಪಾರ ಭಕ್ತಿಯುಳ್ಳವನಾಗಿದ್ದುದರಿಂದ, ಅವಧೂತ ಪ್ರಸನ್ನನಾಗುತ್ತಾನೆ. ತಾನು ವಿವರಿಸುವ ಆತ್ಮಜ್ಞಾನಕ್ಕೆ ಅವನು ಯೋಗ್ಯನೆಂದು ತೀರ್ಮಾನಿಸುತ್ತಾನೆ)
ಅವಧೂತು: ಮಹಾರಾಜ, ನಾನು ನನ್ನ ಬುದ್ಧಿಯ ಮೂಲಕವಾಗಿ ಹಲವಾರು ಗುರುಜನರನ್ನು ಆಶ್ರಯಿಸಿದ್ದೇನೆ. ಅವರಿಂದ ಶಿಕ್ಷಣವನ್ನು ಪಡೆದು ಮುಕ್ತನಾಗಿ ಸ್ಟೇಚ್ಛೆಯಿಂದ ಈ ಜಗತ್ತಿನಲ್ಲಿ ಸಂಚರಿಸುತ್ತಿದ್ದೇನೆ. ಆ ಗುರುಗಳ ಶುಭ ನಾಮವನ್ನು ಅವರಿಂದ ನಾನು ಪಡೆದ ಶಿಕ್ಷಣವನ್ನು ಹೇಳುವನು ಕೇಳು:
ಪೃಥಿವೀವಾಯುರಾಕಾಶಮಾಪ್ಯೋಗ್ನಿಶ್ಚಂದ್ರಮಾ ರವಿಃ |
ಕಪೋತ್ಯೋಜಗರಃ ಸಿಂಧುಃ ಪತಂಗೋ ಮಧುಕೃಷ್ಣಜಃ ||
ಮಧುಹಾ ಹರಿಣೋ ಮೀನ ಪಿಂಗಲಾ ಕುರರ್ಯೋರ್ಭಕಃ |
ಕೃಮಾರೀ ಶರಕೃತರ್ಪ ಊರ್ಣನಾಭಿಃ ಸುಪೇಶಕೃತ್ ||
ಏತೇ ಮೇ ಗುರವೋ ರಾಜಂಶ್ಚತುರ್ವಿಂಶತಿ ರಾತ್ರಿತಾಃ|
ಶಿಕ್ಷಾ ವೃತ್ತಿಭಿರೇತೇಷಾಮನ್ವ ಶಿಕ್ಷ ಮಿಹಾತ್ಮನಃ ||
(ಭಾಗವತ: 11.7.33 ರಿಂದ 35)
1. ಭೂಮಿ
2. ವಾಯು
3. ಆಕಾಶ
4. ನೀರು
5. ಅಗ್ನಿ,
6. ಚಂದ್ರ
7. ಸೂರ್ಯ
8. ಪಾರಿವಾಳ
9. ಹೆಬ್ಬಾವು
10. ಸಮುದ್ರ
11. ಪತಂಗ
12. ದುಂಬಿ
13. ಆನೆ
14. ಜೇನು ಬಿಡಿಸುವವನು
15. ಜಿಂಕೆ
16. ಮೀನು
17. ಪೇಶ್ವಪಿಂಗಳಾ
18. ಕುರರಪಕ್ಷಿ
19. ಮಗು
20. ಕುಮಾರಿ
21. ವ್ಯಾಧನ ಲಕ್ಷ್ಯ
22. ಸರ್ಪ
23. ಜೇಡರಹುಳು
24. ಕಣಜದ ಹುಳು
ಇವರೇ ನನ್ನ 24 ಮಂದಿ ಗುರುಗಳು ಇವರೆಲ್ಲರ ಆಚರಣೆಯಿಂದ ನನ್ನ ಬುದ್ಧಿಗೆ ಶಿಕ್ಷಣವನ್ನು ಕೊಟ್ಟಿರುತ್ತೇನೆ.
(ಮುಂದೆ ಶ್ರೀ ದತ್ತಾತ್ರೇಯ ಅವಧೂತನು ಈ 24 ಮಂದಿ ಗುರುಗಳಲ್ಲಿ ಯಾರಿಂದ ಯಾವ ಶಿಕ್ಷಣವನ್ನು ಯಾವ ರೀತಿ ಪಡೆದನೆಂಬುದನ್ನು ಒಂದೊಂದಾಗಿ ವಿವರಿಸುತ್ತಾನೆ.
1. ಪೃಥಿವೀ- (ಭೂಮಿ)

ಕ್ಷಮೆ ಹಾಗೂ ಸಹನೆ ಭೂಮಿಯಿಂದ ಕಲಿಯಬೇಕಾದ ಪ್ರಮುಖಗುಣ, ಭೂಮಿ ತಾಯಿ ತನ್ನನ್ನು ಕೋಟಿ ಕೋಟಿ ಸಾಧುಪ್ರಾಣಿಗಳೂ ದುಷ್ಟ ಪ್ರಾಣಿಗಳೂ ಸತತ ತುಳಿದಾಡುತ್ತಿದ್ದರೂ ‘ಅದು ದೈವದ ನಿಯಮ’ ಎಂದು ಅವುಗಳನ್ನು ಕ್ಷಮಿಸುತ್ತಾ ಅತ್ಯಂತ ಸಹನೆಯಿಂದ ಸ್ವಲ್ಪವೂ ಕಂಪಿಸದೆ ದೃಢವಾಗಿರುತ್ತಾಳೆ.
ಹಾಗೆಯೇ ಮುಮುಕ್ಷುವಾದವನು ‘ಸರ್ವವೂ ದೈವವಶವು’ ಎಂಬುದನ್ನರಿತು ಪರರಿಂದ ಪೀಡಿತನಾದರೂ, ಸತ್ಯ ನಿಯಮದಿಂದ ವಿಚಲಿತನಾಗದೆ ಕ್ರೋಧವನ್ನು ನಿಗ್ರಹಿಸಿ ಕ್ಷಮಾವಂತನಾಗಿರಬೇಕು ಎಂಬ ಪಾಠವನ್ನು ನಾವು ಭೂಮಿಯಿಂದ ಕಲಿಯಬಹುದಾಗಿದೆ.
ಭೂಮಿಯ ಇತರ ಪ್ರಮುಖ ರೂಪಗಳು:
ಪರ್ವತಗಳು: ಪರರಿಗೆ ಉಪಕಾರ ಮಾಡುವುದೇ ಜೀವನದ ಪ್ರಮುಖ ಪ್ರಯೋಜನವೆಂಬುದನ್ನು ನಾವು ಪರ್ವತಗಳಿಂದ ಕಲಿಯಬೇಕು. ಪರ್ವತಗಳು ಮಳೆ ಗಾಳಿ ಬಿಸಿಲುಗಳನ್ನು ಲೆಕ್ಕಿಸದೆ ಭೂಮಿಯನ್ನು ಧರಿಸುತ್ತವೆ. ಜೀವಿಗಳಿಗೆ ಅತಿ ಅವಶ್ಯಕವಾದ ನೀರು ಪರ್ವತಗಳಿಂದಲೇ ಹುಟ್ಟಿ ಬರುತ್ತದೆ. ಪರ್ವತಗಳು ಗಿಡ ಮರಗಳಿಗೂ ಪಶುಪಕ್ಷಿ ಪ್ರಾಣಿಗಳಿಗೂ ಆಶ್ರಯಸ್ಥಾನವಾಗಿವೆ. ಪರ್ವತಗಳಿಗೆ ಅವುಗಳ ಸ್ವಂತಕ್ಕೆಂದು ಇದಾವುದೂ ಬೇಡ, ಅವುಗಳು ಕೇವಲ ಪರರ ಪ್ರಯೋಜನಕ್ಕಾಗಿಯೇ ಇರುತ್ತವೆ.
ವೃಕ್ಷಗಳು: ವೃಕ್ಷಗಳ ಜೀವನವು ಕೇವಲ ಇತರರ ಸೇವೆಗಾಗಿಯೇ ಮೀಸಲಾಗಿದೆ. ಅವು ತಮ್ಮ ಮೇಲೆ ಬೀಳುವ ಬಿಸಿಲನ್ನು, ಮಳೆಯನ್ನು ಹಿಮವನ್ನು ಗಾಳಿಯನ್ನು ಸಹಿಸಿಕೊಂಡು ನಮ್ಮನ್ನು ರಕ್ಷಿಸುತ್ತವೆ. ಸತ್ಪುರುಷರ ಮನೆಗೆ ಬಂದ ಯಾಚಕನು ಎಂದಿಗೂ ಬರಿಗೈಯಲ್ಲಿ ಹಿಂದಿರುಗದಂತೆ ಈ ವೃಕ್ಷಗಳನ್ನು ಆಶ್ರಯಿಸಿ ಬಂದವನು ಯಾವುದಾದರೂ ಪ್ರಯೋಜನವನ್ನು ಪಡೆದೇ ಪಡೆಯುತ್ತಾನೆ.
ಈ ವೃಕ್ಷಗಳು ತಮ್ಮಲ್ಲಿರುವ ಎಲೆ, ಹೂವು, ಹಣ್ಣು, ನೆರಳು, ಬೇರು, ನಾರು, ಮೇಣ, ಹಾಲು, ಸೌದೆ, ಮೊಳಕೆ, ಚಿಗುರುಗಳಿಂದ ಜನರ ಇಷ್ಟಾರ್ಥವನ್ನು ನೆರವೇರಿಸುತ್ತವೆ. ಮರಗಳನ್ನು ಒಮ್ಮೆಗೆ ಕಡಿದುರುಳಿಸಿ ಎಳೆದುಕೊಂಡು ಹೋದಾಗಲೂ ಅವು ಪ್ರತಿಭಟಿಸದೆ ಸೌದೆಯ ರೂಪದಲ್ಲಿ ಪರರ ಸೇವೆಯನ್ನು ಮುಂದುವರಿಸುತ್ತವೆ.
ಶ್ರೀ ಚೈತನ್ಯ ಮಹಾಪ್ರಭುಗಳು ”ತರೋರಿವ ಸಹಿಷ್ಣುನಾ, ಕೀರ್ತನೀಯಃ ಸದಾಹರಿಃ” – ಮರಗಳಂತೆ ಸಹನಾಶೀಲನಾದವನು ಹೊಚ್ಚ ಹೊಸ ತೃಪ್ತಿಯನ್ನು ಕಾಣುತ್ತಾ ನಿರಂತರವಾಗಿ ಕೃಷ್ಣನ ಪವಿತ್ರ ನಾಮ ಸಂಕೀರ್ತನೆಯನ್ನು ಮಾಡಬಲ್ಲ ಎನ್ನುತ್ತಾರೆ.
ಹೀಗೆ ಭೂಮಿಯಿಂದ ಕ್ಷಮಾಗುಣವನ್ನು ಪರ್ವತ ವೃಕ್ಷಗಳಿಂದ ಪರೋಪಕಾರ ಬುದ್ಧಿಯನ್ನು ಕಲಿಯಬೇಕು.
2. ವಾಯು – (ಗಾಳಿ)

ವಾಯುವು ಸರ್ವತ್ರ ಸಂಚರಿಸುತ್ತದೆ. ಮಸಣಭೂಮಿಯಲ್ಲಿ ಬೀಸಿದರೂ ಪುಷ್ಪವನದಲ್ಲಿ ಬೀಸಿದರೂ ಅವುಗಳ ಮಾಲಿನ್ಯವಾಗಲೀ ಸುಗಂಧವಾಗಲೀ ವಾಯುವಿಗೆ ಶಾಶ್ವತವಾಗಿ ಅಂಟುವುದಿಲ್ಲ. ವಾಯುವಿಗೆ ಗುಣವಾಗಲೀ ದೋಷವಾಗಲೀ ಅಂಟುವುದಿಲ್ಲ. ಇದರಂತೆಯೇ ಯೋಗಿಯಾದವನು ಶೀತೋಷ್ಣ, ಸುಖದುಃಖ, ಮಾನಾಪಮಾನ ಜಯಾಪಜಯ ಇತ್ಯಾದಿ ನಾನಾ ವಿಷಯಗಳನ್ನು ಅನುಭವಿಸಬೇಕಾಗಿ ಬಂದರೂ, ಗುಣದೋಷ ರಹಿತ ಮನಸ್ಸಿನಿಂದ ಸಮದರ್ಶಿಯಾಗಿ ಯಾವುದನ್ನು ಅಂಟಿಸಿಕೊಳ್ಳದೆ ವಾಯುವಿನಂತೆ ಇದ್ದು ಬಿಡಬೇಕು.
ಗಂಧವು ವಾಯುವಿನ ಗುಣವಲ್ಲ, ಅದು ಪೃಥ್ವಿಯ ಗುಣ. ಹೇಗೆ ವಾಯುವು ಆ ಗಂಧವನ್ನು ಹೊತ್ತು ತಂದು ಗಂಧಯುಕ್ತವಾಗಿದ್ದರೂ ಅದು ಅದರೊಡನೆ ಬೆರೆಯದೆ ಗಂಧ ರಹಿತವಾಯುವನಿಸುವುದೋ ಅದರಂತೆಯೇ ಯೋಗಿಯಾದವನು ಪಾರ್ಥಿವ ಶರೀರದ ನಾನಾ ಪ್ರಕಾರದ ಗುಣಗಳಿಂದ ಕೂಡಿದ್ದರೂ ಶರೀರ ಸಂಬಂಧವಾದ ಕಾಮೋಪಭೋಗಗಳಿಂದ ನಿರ್ಲಿಪ್ತನಾಗಿರಬೇಕು.
3. ಆಕಾಶಂ – (ಆಕಾಶ)

ಆಕಾಶವು ಅತಿ ವಿಸ್ತಾರವಾಗಿದ್ದು ಎಲ್ಲೆಡೆಯೂ ವ್ಯಾಪಿಸಿದ್ದರೂ ಅದು ಅಖಂಡವಾಗಿರುತ್ತದೆ. ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇದೇ ರೀತಿ ಮನನಶೀಲನಾದ ಮುನಿಯು ಪರಬ್ರಹ್ಮ ಭಾವದಿಂದ ಸ್ಥಾವರ ಜಂಗಮ ಪ್ರಾಣಿಗಳೆಲ್ಲದರ ಒಳಗೂ ಇದ್ದು ವ್ಯಾಪಕನಾಗಿದ್ದರೂ ತಾನು ಅಖಂಡನು ಮತ್ತು ಸಂಗ ರಹಿತನು ಎಂದು ಭಾವಿಸಿಕೊಂಡು ಸಾಧನೆ ಮುಂದುವರಿಸಬೇಕು. ಹೀಗೆ ಆಕಾಶದಿಂದ ಅಖಂಡತೆಯ ಮತ್ತು ನಿಸ್ಸಂಗತ್ಯದ ಪಾಠವನ್ನು ಕಲಿಯಬೇಕು.
ಆಕಾಶದಲ್ಲಿ ವಾಯುವಿನಿಂದ ಪ್ರೇರಿತವಾದ ಮೇಘಗಳಿಂದ ಮಿಂಚು ಕಾಣಿಸಿಕೊಳ್ಳುತ್ತವೆ. ಮೇಘಗಳಿಂದ ಮಳೆ ಸುರಿಯುತ್ತದೆ. ಈ ಎಲ್ಲ ಕಾರಣಗಳಿಗೂ ಆಕಾಶಕ್ಕೂ ಯಾವುದೇ ಸಂಬಂಧವಿಲ್ಲ. ಆಕಾಶದಿಂದಲೇ ಮಳೆ ಬೀಳುವುದೆಂದು ಭ್ರಮಿಸುತ್ತೇವೆ. ಹೀಗೆ ಇವುಗಳಿಂದಾಗಿ ಆಕಾಶದಲ್ಲಿ ಯಾವುದೇ ಪರಿಣಾಮವುಂಟಾಗುವುದಿಲ್ಲವೋ ಹಾಗೆಯೇ ತ್ರಿಕಾಲಗಳ ಚಕ್ರದಲ್ಲಿ ಸಿಲುಕಿ, ತ್ರಿಗುಣಗಳಿಂದ ಆವರಿಸಲ್ಪಟ್ಟ, ಹಲವಾರು ನಾಮರೂಪಗಳಿಂದ ಕೂಡಿರುವ ದೇಹಗಳಲ್ಲಿದ್ದರೂ ಆತ್ಮನಿಗೆ ವಾಸ್ತವದಲ್ಲಿ ದೇಹದೊಡನೆ ಯಾವ ಸಂಬಂಧವೂ ಇಲ್ಲ.
ಆದ್ದರಿಂದ ಆಕಾಶವೆಂಬ ಗುರುವಿನಿಂದ ದೇಹಕ್ಕೂ ಆತ್ಮನಿಗೂ ಸಂಬಂಧವಿಲ್ಲವೆಂಬುದನ್ನು ಅರಿತೆನು.
4. ಆಪ – (ನೀರು)

ಹೇಗೆ ನೀರು ಸ್ವಭಾವದಿಂದಲೇ ಶುದ್ಧವೂ, ಮಧುರವೂ ಸ್ನೇಹಪರವೂ ಆಗಿ ಸೃಷ್ಟಿಯ ಸಕಲ ಜೀವಕೋಟಿಗಳನ್ನು ಪವಿತ್ರಗೊಳಿಸುವುದೋ ಹಾಗೆಯೇ ಸತ್ಪುರುಷರು ಸ್ವಭಾವದಿಂದಲೇ ಶುದ್ಧರೂ ಸ್ನೇಹಪರರೂ ಆಗಿ ಸಕಲ ಜೀವಕೋಟಿಗಳನ್ನು ಪಾವನಗೊಳಿಸುವ ಲೋಕಪಾವನರಾಗಿರುತ್ತಾರೆ. ತಮ್ಮ ಸುಮಧುರ ಮಾತುಗಳಿಂದ ಹರಿಯುವ ನೀರಿನ ಮಂಜುಳ ನಿನಾದವನ್ನು ಸೃಷ್ಟಿಸುತ್ತಾರೆ.
ಪುಣ್ಯ ತೀರ್ಥಗಳು ಅವುಗಳ ದರ್ಶನ ಸ್ಪರ್ಶಮಾತ್ರದಿಂದಲೇ ಮಾನವ ಕೋಟಿಯನ್ನು ಪವಿತ್ರಗೊಳಿಸುವಂತೆ ಸತ್ಪುರುಷರು ತಮ್ಮ ನೋಟ ಸ್ಪರ್ಶದಿ೦ದಲೂ ನಾಮ ಸಂಕೀರ್ತನೆಯಿ೦ದಲೂ ಜೀವಿಗಳನ್ನು ಅನುಗ್ರಹಿಸುತ್ತಾ ಪಾವನಗೊಳಿಸಬಲ್ಲರು.
ಹೀಗೆ ತೀರ್ಥದ ಗುಣಲಕ್ಷಣವನ್ನು ಅಧ್ಯಯನ ಮಾಡುವುದರಿಂದ ಶುದ್ಧನಾದ ಭಗವದ್ಭಕ್ತನ ಗುಣ ಲಕ್ಷಣಗಳನ್ನು ಅರಿಯಬಹುದಾಗಿದೆ.
5. ಅಗ್ನಿ: (ಅಗ್ನಿ)

ಅಗ್ನಿಯು ತೇಜಸ್ವಿಯೂ, ಜ್ಯೋತಿರ್ಮಯನೂ ಆಗಿದ್ದಾನೆ. ಅವನಲ್ಲಿ ಸಂಗ್ರಹಕ್ಕಾಗಲೀ ಪರಿಗ್ರಹಕ್ಕಾಗಲೀ ಯಾವ ಪಾತ್ರೆಯೂ ಇಲ್ಲ. ಅವನು ಸರ್ವಭಕ್ಷಕನಾದರೂ ಅಭಕ್ಷ್ಯ ಭೋಜನದ ದೋಷ ಅವನಿಗಿಲ್ಲ. ಬ್ರಹ್ಮವೀರನಾದ ಜ್ಞಾನಿಯೂ ಅಗ್ನಿಯಂತೆಯೇ ತೇಜಸ್ವಿಯಾಗಿರುತ್ತಾನೆ. ತಪಸ್ಸಿನ ಪ್ರಭಾವದಿಂದ ಬೆಳಗುತ್ತಿರುತ್ತಾನೆ. ಅಪರಿಗ್ರಹ ಅವನ ವ್ರತ. ತಾನಾಗಿ ದೊರಕಿದ ಅನ್ನವನ್ನು ಶರೀರ ಧಾರಣೆಗಾಗಿ ಸ್ವೀಕರಿಸುತ್ತಾನೆ.
ಅಗ್ನಿ ಕೆಲವು ವೇಳೆ ಬೂದಿ ಮುಚ್ಚಿದ ಕೆಂಡವಾಗಿರುತ್ತಾನೆ. ಕೆಲವು ವೇಳೆ ಪ್ರಕಟವಾಗಿರುತ್ತಾನೆ. ಆಗ ಶ್ರೇಯಸ್ಸನ್ನು ಬಯಸುವವರು ಅವನ ಉಪಾಸನೆ ಮಾಡುತ್ತಾರೆ. ಉಪಾಸಕನ ಹೋಮವನ್ನು ಸ್ವೀಕರಿಸುವ ಅಗ್ನಿದೇವನು ಅವನ ಹಿಂದಿನ ಮತ್ತು ಮುಂದಿನ ಅಶುಭಗಳನ್ನು ಸುಟ್ಟು ಹಾಕಿ ಅನುಗ್ರಹಿಸುತ್ತಾನೆ.
ಸಿದ್ಧಿ ಪಡೆದವರು ಈ ಅಗ್ನಿಯಂತೆಯೇ ತನ್ನ ಮಹಾತ್ಮ್ಯವನ್ನು ಪ್ರಕಟಪಡಿಸದೆ ಮರೆಸಿಕೊಂಡು ನಿಗೂಢನಾಗಿರಬೇಕು. ಕೆಲವು ವೇಳೆ ಶ್ರೇಯೋಭಿಲಾಷಿಗಳಾದ ಭಕ್ತರ ಮಂಗಳಕ್ಕಾಗಿ ತನ್ನನ್ನು ತಾನು ಬಹಿರಂಗಪಡಿಸಿಕೊಂಡು ಅವರನ್ನು ಎಲ್ಲ ಪಾಪಗಳಿಂದ ಮುಕ್ತರನ್ನಾಗಿಸಿ ಉದ್ಧರಿಸಬೇಕು.
6. ಚಂದ್ರಮಾ : (ಚಂದ್ರ)

ಶುಕ್ಲಪಕ್ಷದಲ್ಲಿ ಚಂದ್ರನು ಹಿಗ್ಗುತ್ತ ಹೋಗುತ್ತಾನೆ. ಹಾಗೆಯೇ ಕೃಷ್ಣಪಕ್ಷದಲ್ಲಿ ಕುಗ್ಗುತ್ತಾ ಸಾಗುತ್ತಾನೆ. ಇದು ಕಾಲನ ಪ್ರಭಾವದಿಂದಲೇ ಹೊರತು ಚಂದ್ರನಿಗೆ ವಾಸ್ತವವಾಗಿ ವೃದ್ಧಿನಾಶವೆಂಬುದಿಲ್ಲ. ಈ ಚಂದ್ರ ಮಂಡಲವನ್ನು ಪರೀಕ್ಷಿಸುವ ವಿಜ್ಞಾನಿಗಳಿಗೆ ಇದು ಸ್ಪಷ್ಟವಾಗಿ ತಿಳಿದಿರುವ ವಿಷಯವೇ ಆಗಿದೆ.
ಇದೇ ರೀತಿ ಜನನದಿಂದ ಮರಣದವರೆಗೆ ಸಂಭವಿಸುವ ಅಸ್ತಿ (ಇರುವಿಕೆ), ಜಾಯತೇ (ಹುಟ್ಟುವಿಕೆ), ವರ್ಧತೇ (ಬೆಳೆಯುವಿಕೆ), ಪರಿಣಮತೇ (ಪರಿಣಾಮಹೊಂದುವಿಕೆ), ಕ್ಷೀಯತೇ (ಕ್ಷೀಣಿಸುವಿಕೆ), ನಶ್ಯತಿ (ನಾಶಹೊಂದುವಿಕೆ) ಎಂಬ ಆರು ವಿಕಾರಗಳು ಮಾನವನ ದೇಹಕ್ಕೇ ಹೊರತು ಒಳಗಿನ ಆತ್ಮನಿಗಲ್ಲ.
ಮರಣ ಸಂಭವಿಸಿದಾಗ ದೇಹದೊಡನೆ ಆತ್ಮವೂ ನಾಶಹೊಂದಿತೆಂದು ಪಾಮರರಿಗೆ ತೋರುವುದು. ಆದರೆ ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳುವಂತೆ “ನಜಾಯತೇ ಮ್ರಿಯತೇ ವಾ ಕದಾಚಿತ” ಆತ್ಮನು ಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ. ಜ್ಞಾನಿಗಳಾದವರು ಚಂದ್ರನಿಂದ ಈ ತತ್ತ್ವವನ್ನು ತಿಳಿಯುತ್ತಾರೆ.
7. ರವಿ : (ಸೂರ್ಯ)

ಸೂರ್ಯ ತನ್ನ ಕಿರಣಗಳಿಂದ ನೀರನ್ನು ಸಂಗ್ರಹಿಸುತ್ತಾನೆ. ಪುನಃ ತಾನು ಸಂಗ್ರಹಿಸಿದ ನೀರನ್ನು ಪ್ರಜೆಗಳಿಗೆ ಪ್ರಯೋಜನವಾಗುವಂತೆ ಕಾಲಕಾಲಕ್ಕೆ ಮಳೆಯ ರೂಪದಲ್ಲಿ ಹೊರಹಾಕುತ್ತಾನೆ. ಸೂರ್ಯ ನೀರನ್ನು ಸಂಗ್ರಹಿಸುವಾಗ ತನಗೆ ಬೇಕೆಂಬ ಆಸಕ್ತಿಯಿಂದ ಸಂಗ್ರಹಿಸುವುದಿಲ್ಲ. ಪುನಃ, ಸಂಗ್ರಹಿಸಿದುದನ್ನು ವಿಸರ್ಜಿಸುವಾಗ ದುಃಖಿಸುವುದೂ ಇಲ್ಲ. ನಿರಾಸಕ್ತಿಯಿಂದ ಈ ಲೋಕೋಪಕಾರಕವಾದ ಕಾರ್ಯವನ್ನು ಮಾಡುತ್ತಿರುತ್ತಾನೆ.
ಈ ಸೂರ್ಯನಂತೆಯೇ ಯೋಗಿಯಾದವನೂ ಕೂಡ ಇಂದ್ರಿಯಗಳ ಮೂಲಕವಾಗಿ ಐಶ್ವರ್ಯವನ್ನು ಸಂಗ್ರಹಿಸಬಹುದು. ಸಂಗ್ರಹಿಸಿದುದನ್ನು ಅಷ್ಟೇ ನಿರಾಸಕ್ತಿಯಿಂದ ಸತ್ಪಾತ್ರರಿಗೆ ದಾನ ಮಾಡಬೇಕು, ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು.
8. ಕಪೋತ : ( ಪಾರಿವಾಳ)

ಒಂದು ಕಾಡಿನಲ್ಲಿ ಒಂದು ದೊಡ್ಡ ಆಲದ ಮರದಲ್ಲಿ ಕಪೋತ ಪಕ್ಷಿಯೊಂದು ಗೂಡು ಕಟ್ಟಿಕೊಂಡು ತನ್ನ ಪತ್ನಿಯೊಂದಿಗೆ ಹಲವಾರು ವರ್ಷಗಳಿ೦ದ ಅತ್ಯಂತ ಗಾಢವಾದ ಪ್ರೀತಿಯಿಂದ ದಾಂಪತ್ಯ ಜೀವನ ನಡೆಸುತ್ತಿತ್ತು. ಸಂತೋಷದಿಂದ ಪತಿಯ ಸೇವೆ ಮಾಡುತ್ತಿದ್ದ ಹೆಣ್ಣು ಪಾರಿವಾಳವು ತನ್ನ ಪತಿಯನ್ನು ಒಂದು ಕ್ಷಣವೂ ಬಿಟ್ಟಿರದೆ ಅವನ ಪರಮಪ್ರೀತಿಗೆ ಪಾತ್ರವಾಗಿತ್ತು.
ಕೆಲವು ದಿನಗಳ ಅನಂತರ ಆ ಪಕ್ಷಿ ದಂಪತಿಗೆ ಸಂತಾನ ಭಾಗ್ಯವಾಯಿತು. ಆ ಮರಿಗಳ ಚಿಲಿಪಿಲಿ ನಾದ, ಅವುಗಳ ಸುಕೋಮಲ ಶರೀರ, ಅವುಗಳು ಮಾಡುತ್ತಿದ್ದ ಚೇಷ್ಟೆ ಎಲ್ಲವೂ ತಂದೆ ತಾಯಿಯರಿಗೆ ಅತ್ಯಂತ ಆನಂದವನ್ನುಂಟು ಮಾಡುತ್ತಿದ್ದವು. ಕಪೋತ, ಕಪೋತಿಗಳು ತಮ್ಮ ಸುಖ ಸಂಸಾರವೇ ಜೀವನದ ಸರ್ವಸ್ವ ಎಂದು ಭ್ರಮಿಸಿ, ತಮ್ಮ ಮರಿಗಳಿಗಾಗಿ ಆಹಾರವನ್ನು ಹುಡುಕಿ ತರಲು ಅರಣ್ಯಕ್ಕೆ ಅನೇಕ ಬಾರಿ ಹೋಗಿ ಬರುತ್ತಿದ್ದವು.
ಒಂದು ದಿನ ಹೀಗೆಯೇ ತಮ್ಮ ಮಕ್ಕಳಿಗೆ ಆಹಾರ ಸಂಗ್ರಹಿಸಲು ಕಪೋತ ದಂಪತಿ ಕಾಡಿಗೆ ಹೋದವು. ಇತ್ತ ಮರಿಗಳು ಸ್ಟೇಚ್ಛೆಯಿಂದ, ಇನ್ನೂ ಬಲಿಯದ ರೆಕ್ಕೆಗಳನ್ನು ಬಡಿಯುತ್ತಾ ಪುಟ್ಟ ಪುಟ್ಟ ಕಾಲ್ಗಳಿಂದ ನಡೆಯುತ್ತಾ ಗೂಡನ್ನು ಬಿಟ್ಟು ಸಮೀಪದಲ್ಲಿದ್ದ ಬೇಡನೊಬ್ಬನ ಗುಡಿಸಲ ಬಳಿಗೆ ಬಂದವು. ಮರಿಗಳನ್ನು ಕಂಡ ಬೇಡ ಅತ್ಯಂತ ಸಂತೋಷದಿಂದ ಬಲೆ ಬೀಸಿದಾಗ ಎಲ್ಲ ಮರಿಗಳೂ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡವು.
ಇತ್ತ ಮರಿಗಳಿಗೆ ಸಾಕಷ್ಟು ಆಹಾರ ಸಂಗ್ರಹ ಮಾಡಿದ ಕಪೋತ ದಂಪತಿ ಗೂಡಿಗೆ ಹಿಂದಿರುಗಿದಾಗ ಮರಿಗಳು ಕಾಣಿಸಲಿಲ್ಲ. ಅವುಗಳಿಗೆ ಅತ್ಯಂತ ಭಯ ಚಿಂತೆ ಉಂಟಾಗಿ ಎಲ್ಲೆಡೆಯೂ ಮಕ್ಕಳನ್ನು ಅರಸತೊಡಗಿದವು. ತಾಯಿ ಪಾರಿವಾಳ ಬೇಡನ ಮನೆಯ ಸಮೀಪ ಬಂದು ತನ್ನ ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ಕಂಡು ಅತ್ಯಂತ ಸಂಕಟದಿಂದ ಗೋಳಾಡಿತು.
ತಾಯಿಯನ್ನು ಕಾಣುತ್ತಲೇ ಮರಿಗಳು ಕೂಗಿಕೊಳ್ಳಲಾರಂಭಿಸಿದವು. ಮಕ್ಕಳ ಮೇಲಿನ ಅತ್ಯಂತ ಮಮತೆಯಿಂದ ತಾಯಿ ಪಾರಿವಾಳ ತಾನೂ ಹೋಗಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿತು. ಬಹಳ ಹೊತ್ತು ಕಪೋತಿಯು ಹಿಂದಿರುಗಿ ಬಾರದಿದ್ದುದನ್ನು ಕ೦ಡ ಗಂಡು ಪಾರಿವಾಳ ತನ್ನ ಪ್ರಾಣ ಸಮಾನಳಾದ ಪತ್ನಿಯನ್ನು ಮಮತೆಯ ಕಂದಮ್ಮಗಳನ್ನು ಅರಸುತ್ತಾ ಬಂದು ಅವರೆಲ್ಲರೂ ಬೇಡನ ಬಲೆಯಲ್ಲಿ ಸಿಕ್ಕಿ ಬಿದ್ದಿರುವುದನ್ನು ಕಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು.
ಮಾಯೆಯ ಬಂಧನದಿಂದ ಪಾರಾಗಲಾರದ ಈ ಕಪೋತ ಸಾವಿನ ದವಡೆಯಲ್ಲಿದ್ದ ಪತ್ನಿ ಪುತ್ರರನ್ನು ಕಂಡು ಮೋಹಕ್ಕೆ ವಶನಾಗಿ ತಾನೂ ಹೋಗಿ ಆ ಬೇಡನ ಬಲೆಯಲ್ಲಿ ಬಿದ್ದಿತು. ನಿರಾಯಾಸವಾಗಿ ತನಗೆ ಸಿಕ್ಕಿದ ಈ ಬೇಟೆಯನ್ನು ಕಂಡು ಆನಂದಗೊಂಡ ಆ ಬೇಡ ಅವುಗಳನ್ನೆತ್ತಿಕೊಂಡು ತೆರಳಿದನು.
ಹೀಗೆ ಈ ಪಾರಿವಾಳಗಳ ಕಥೆಯಿಂದ ತಿಳಿಯುವ ಅಂಶವೇನೆಂದರೆ, ಯಾರೊಡನೆಯೇ ಆಗಲಿ ಎಲ್ಲಿಯೇ ಆಗಲಿ ಅಧಿಕವಾದ ಸ್ನೇಹವನ್ನು ಮಾಡಬಾರದು. ಹೆಚ್ಚಿನ ಆಸಕ್ತಿಯನ್ನಿಟ್ಟುಕೊಳ್ಳಬಾರದು. ಅತಿಯಾದ ಸ್ನೇಹ ಅತಿಯಾದ ಕ್ಲೇಶವನ್ನುಂಟುಮಾಡುವುದು. ಸಂಸಾರವನ್ನೇ ಪರಮಾಶ್ರಯವನ್ನಾಗಿ ಭಾವಿಸಿ, ಕುಟುಂಬ ರಕ್ಷಣೆಯಲ್ಲೇ ಸದಾಕಾಲ ಆಸಕ್ತರಾಗಿರುವ ಗೃಹಸ್ಥರು ಮಾಯಾಪಾಶದಿಂದ ಕಟ್ಟು ಬಿದ್ದು ಮುಕ್ತಿಯ ಮಾರ್ಗವನ್ನು ಕಾಣದೆ ಪಾರಿವಾಳಗಳಂತೆಯೇ ಮಹಾ ಯಾತನೆಯನ್ನು ಅನುಭವಿಸಿ ಪರಿವಾರ ಸಮೇತರಾಗಿ ನಾಶಹೊಂದುತ್ತಾರೆ.
ಮನುಷ್ಯ ಜನ್ಮ ಮೋಕ್ಷಕ್ಕೆ ತೆರೆದಿಟ್ಟ ಬಾಗಿಲಿನಂತಿರುವಾಗ ಮುಕ್ತಿಯನ್ನು ಸಾಧಿಸದೆ ಕೇವಲ ಸಂಸಾರದಲ್ಲಿಯೇ ಆಸಕ್ತರಾಗಿದ್ದರೆ ಅಂತಹವರನ್ನು ವಿದ್ವಾಂಸರು ‘ಆರೂಢಚ್ಯುತ’ ( ಮೇಲೇರಿ ಕೆಳಕ್ಕೆ ಬಿದ್ದವನು) ಎಂದು ಕರೆಯುತ್ತಾರೆ. ಈ ರೀತಿಯ ಆರೂಢಚ್ಯುತರಾಗದೆ ಊರ್ಧ್ವ ದೃಷ್ಟಿ ಹೊಂದಿದವರಾಗಿ ಸಂಸಾರದ ಬಲೆಯಿಂದ ಪಾರಾಗಿ ಮೋಕ್ಷವನ್ನು ಪಡೆಯುವವರಾಗಬೇಕು ಎಂಬ ಪರಮೋಚ್ಛ ತತ್ತ್ವವನ್ನು ಈ ಪಾರಿವಾಳಗಳ ಕಥೆ ಸಾರಿ ಹೇಳುತ್ತಿದೆ.
9. ಅಜಗರ: (ಹೆಬ್ಬಾವು)

ಹೆಬ್ಬಾವು ಕಾಡಿನ ಒಂದೆಡೆಯಲ್ಲಿ ಮಲಗಿರುತ್ತದೆ. ಅದು ಆಹಾರಕ್ಕಾಗಿ ಎಲ್ಲಿಯೂ ಅಲೆದಾಡಲು ಹೋಗುವುದಿಲ್ಲ. ಕಾಲಕಾಲಕ್ಕೆ ಸರಿಯಾಗಿ ಆಹಾರ ಬೇಕೆಂಬ ಬಯಕೆಯೂ ಅದಕ್ಕಿಲ್ಲ. ಅದಕ್ಕೆ ಆಹಾರವಾಗಲು ದೈವೇಚ್ಛೆಯಿಂದ ಪ್ರಾಣಿಗಳು ತಾವಾಗಿಯೇ ಇದರ ಬಳಿಗೆ ಬಂದಾಗ ಮಾತ್ರ ಅದನ್ನು ತಿಂದು ಜೀವನ ನಿರ್ವಹಿಸುತ್ತದೆ.
ಆಹಾರ ಸಿಗದೇ ಹೋದಾಗಲೂ ಪ್ರಾರಬ್ಧಕರ್ಮವೆಂದು ಭಾವಿಸಿ ಹಲವಾರು ದಿನಗಳವರೆಗೆ ನಿರಾಹಾರಿಯಾಗಿಯೇ ಮಲಗಿರುತ್ತದೆ. ಇದನ್ನೇ ಅನುಸರಿಸಿ ವ್ರತವನ್ನು ಕೈಗೊಳ್ಳುವುದಕ್ಕೆ ‘ಅಜಗರವ್ರತ’ ಎಂದು ಹೆಸರು. ಈ ವ್ರತವನ್ನು ಆಚರಿಸಲು ದೃಢವಾದ ಆತ್ಮವಿಶ್ವಾಸ ಬೇಕು.
ಸುಖದುಃಖಗಳು ಅನಪೇಕ್ಷಿತವಾಗಿ ಬರುತ್ತವೆ. ಅವು ಕರ್ಮಾಧೀನ. ಆದುದರಿಂದ ಬಂದುದನ್ನು ಗೊಣಗದೆ ಸ್ವೀಕರಿಸಬೇಕು.
ಅಜಗರವ್ರತಿಯು ದೇಹಬಲ, ಮನೋಬಲ, ಇಂದ್ರಿಯ ಬಲಗಳಿಂದ ಸಂಪನ್ನನಾಗಿದ್ದರೂ ನಿಶ್ವೇಷ್ಟನಾಗಿರಬೇಕು. ನಿದ್ರೆಯು ಬಾರದಿದ್ದರೂ ಮಲಗಿರಬೇಕು. ದೃಢವಾದ ಕರ್ಮೇಂದ್ರಿಯಗಳನ್ನು ಹೊಂದಿದ್ದರೂ ಯಾವ ಕರ್ಮವನ್ನೂ ಮಾಡಬಾರದು. ಶಾಂತನೂ, ಸಹನಶೀಲನೂ ಆಗಿರಬೇಕು. ಹೆಬ್ಬಾವಿನ ವರ್ತನೆಯಿಂದ ಈ ವ್ರತದ ತತ್ತ್ವವನ್ನು ತಿಳಿದು ಆಚರಿಸಬೇಕು.
10. ಸಿಂಧು: (ಸಮುದ್ರ)

ಸಮುದ್ರದಿಂದ ಸಾಧಕನು ಕಲಿಯಬೇಕಾದ ಪಾಠ ಅನೇಕ ಹಾಗೂ ಅತ್ಯಮೂಲ್ಯ ನಿಶ್ಚಲವಾದ ಜಲರಾಶಿಯುಳ್ಳ ಸಮುದ್ರದಂತೆಯೇ ಮುನಿಯಾದವನು ನಿಶ್ಚಲ ಬುದ್ಧಿ ಮನಸ್ಸುಗಳಿಂದಲೂ, ಗಾಂಭೀರ್ಯದಿಂದಲೂ ಇರಬೇಕು. ಯಾರಿಗೂ ಅವನ ಅಂತರಂಗದ ಭಾವವು ತಿಳಿಯಬಾರದು. ಅವನನ್ನು ಅತಿಕ್ರಮಿಸಿ ಹೋಗಲು ಅಥವಾ ಅನಾದರ ಮಾಡಲು ಯಾರಿಗೂ ಸಾಧ್ಯವಾಗಬಾರದು.
ವರ್ಷಾಕಾಲದಲ್ಲಿ ನದಿಗಳು ತುಂಬಿ ಹರಿದು ಸತತವಾಗಿ ಸಮುದ್ರವನ್ನು ಸೇರುತ್ತಿದ್ದರೂ ಸಮುದ್ರವು ಎಂದಿಗೂ ತನ್ನ ಎಲ್ಲೆ ಮೀರಿ ಮೇಲಕ್ಕೆ ಬರುವುದಿಲ್ಲ. ಅಂತೆಯೇ ಮಳೆ ಇರದ ಕಾಲದಲ್ಲಿ ನದಿಗಳು ಬತ್ತಿ ಹೋಗಿ ತನ್ನನ್ನು ತುಂಬಿಸಲಾರದಿದ್ದರೂ ಸಮುದ್ರವು ಬತ್ತಿ ಹೋಗುವುದಿಲ್ಲ.
ಇದರಂತೆಯೇ ನಾರಾಯಣನನ್ನೇ ಪರಮಾಶ್ರಯವನ್ನಾಗಿ ಪಡೆದುಕೊಂಡಿರುವ ಸಾಧಕನು ವಿಫುಲೈಶ್ವರ್ಯ ತುಂಬಿ ತುಳುಕಾಡುತ್ತಿದ್ದಾಗ ಹಿಗ್ಗಲೂ ಬಾರದು; ಬಡತನ ಪ್ರಾಪ್ತವಾಗಿ ನಿರ್ಗತಿಕನಾದಾಗ ಕುಗ್ಗಲೂ ಬಾರದು. ಸಮುದ್ರದಂತೆ ಸಮಚಿತ್ತನಾಗಿರಬೇಕು, ಶಾಂತನೂ ಗಂಭೀರನೂ, ಪ್ರಸನ್ನನೂ, ಅಪರಿಮಿತನೂ ನಿಶ್ಚಲನೂ ಆಗಿರಬೇಕು.
11. ಪತಂಗ – (ದೀಪದ ಹುಳು)

ಬೆಂಕಿಯಿಂದ ಆಕರ್ಷಿಸಲ್ಪಡುವ ಪತಂಗ, ತನ್ನ ಶರೀರ ದಹಿಸಿಹೋಗುವುದೆ೦ಬುದನ್ನೂ ವಿವೇಚಿಸದೆ, ತಾನಾಗಿಯೇ ಬೆಂಕಿಗೆ ಮುತ್ತಿಡಲು ಹೋಗಿ ಅವಸಾನ ಹೊಂದುತ್ತದೆ. ಇದರಂತೆಯೇ ಮಾನವನು ತನ್ನನ್ನು ಮೋಹಗೊಳಿಸಲೆಂದೇ ವಿಷ್ಣು ಮಾಯೆಯಿಂದ ರಚಿಸಲ್ಪಟ್ಟಿರುವ ಹೆಣ್ಣು, ಹೊನ್ನು, ಒಡವೆ, ವಸ್ತ್ರ ಇವುಗಳಿಂದ ಸೆಳೆಯಲ್ಪಟ್ಟವನಾಗಿ ವಿವೇಕವೆಂಬ ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ.
ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳದೆ, ಹೆಣ್ಣು ಹೊನ್ನುಗಳ ದಾಸನಾಗಿ, ಅವುಗಳ ವಿಶೇಷ ಆಕರ್ಷಣೆಯಿಂದ ಪ್ರಭಾವಿತನಾಗಿ ಅವುಗಳಲ್ಲೇ ಅನುರಕ್ತನಾಗಿ, ಮುಕ್ತಿದಾಯಕವಾದ ಯಾವ ಕಾರ್ಯವನ್ನೂ ಮಾಡದೆ ಬೆಂಕಿಯಿಂದ ಆಕರ್ಷಿತವಾಗುವ ದೀಪದ ಹುಳುವಿನಂತೆ ದಹಿಸಿಹೋಗುತ್ತಾನೆ.
ಇದು ಪತಂಗವೆಂಬ ಗುರು ತಿಳಿಸಿಕೊಡುವ ಪಾಠ. ವಿವೇಕಿಯಾದ ಸಾಧಕ ಇದನ್ನರಿತು ಮುಂಚಿತವಾಗಿಯೇ ಬಹಳ ಎಚ್ಚರಿಕೆ ವಹಿಸಿ ಬೆಂಕಿಯ ಬಳಿಗೆ ಹೋಗಕೂಡದು.
12. ಮಧುಕರ – (ಜೇನುಹುಳು)

ಮಧುಕರ (ಜೇನುಹುಳು) ಪುಷ್ಪದಿಂದ ಪುಷ್ಪಕ್ಕೆ ಹಾರುತ್ತಾ ನಾನಾ ಪ್ರಕಾರವಾದ ಚಿಕ್ಕ ಮತ್ತು ದೊಡ್ಡ ಪುಷ್ಪಗಳಿಂದ ಅವುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಒಂದೊಂದೇ ತೊಟ್ಟು ಹೂವಿನ ರಸವನ್ನು ಸಂಗ್ರಹಿಸಿ, ಗೂಡನ್ನು ಕಟ್ಟಿ ಜೇನನ್ನು ತಯಾರು ಮಾಡುತ್ತದೆ.
ಸಾಧುವಾದವನು ಈ ಮಧುಕರದಂತೆಯೇ ಯಾವ ಗೃಹಸ್ಥನಿಗೂ ತೊಂದರೆಯಾಗದಂತೆ ಶರೀರಧಾರಣೆಗೆ ಅನಿವಾರ್ಯವಾಗುವಷ್ಟು ಆಹಾರವನ್ನು ಮಾತ್ರ, ಒಂದೊಂದು ಮನೆಯಿಂದ ಒಂದೊಂದೇ ತುತ್ತನ್ನು ಬೇಡಿ ಭುಂಜಿಸಬೇಕು.
ಜೇನುಹುಳುವು ಹೇಗೆ ಎಲ್ಲ ಆಕಾರ ಬಣ್ಣಗಳಿಂದ ಕೂಡಿದ ಪುಷ್ಪಗಳಿಂದ ಸಾರವಾದ ಮಧುವನ್ನು ಮಾತ್ರ ಸಂಗ್ರಹಿಸುವುದೋ ಹಾಗೆಯೇ ಸಾಧಕನಾದವನು ಸಣ್ಣದಾದ ಅಥವಾ ಮಹತ್ತಾದ ಶಾಸ್ತ್ರಗಳಿಂದ ಕೇವಲ ಸಾರಭಾಗಗಳನ್ನು ಮಾತ್ರ ಸಂಗ್ರಹಿಸಿಕೊಳ್ಳಬೇಕು.
ದುಂಬಿಯಲ್ಲಿ ಎರಡು ವಿಧ:
1. ಕಮಲದಲ್ಲಿರುವ ಮಧುವನ್ನು ಹೀರುತ್ತಾ ಹೀರುತ್ತಾ ಅಲ್ಲೇ ಮೈಮರೆಯುತ್ತದೆ. ಸಂಜೆ ಸೂರ್ಯಾಸ್ತವಾಗುತ್ತಲೇ ಕಮಲ ಪುಷ್ಪ ಮುದುಡಿಕೊ೦ಡಾಗ ದುಂಬಿಯು ಹೂವಿನೊಳಗೇ ವಿನಾಸಹೊಂದುತ್ತದೆ.
2. ಎರಡನೆಯ ಜಾತಿಯ ಜೇನುಹುಳುಗಳು ಹಲವಾರು ಹೂಗಳಿಂದ ಮಧುವನ್ನು ಸಂಗ್ರಹಿಸಿ ಗೂಡನ್ನು ಕಟ್ಟಿ ಅದರಲ್ಲಿ ಶೇಖರಿಸುತ್ತಾ ಹೋಗುತ್ತವೆ. ಕಡೆಗೊಂದು ದಿನ ಜೇನು ಬಿಡಿಸುವವನು ಬಂದು ಜೇನುಹುಳುಗಳನ್ನು ನಾಶಗೊಳಿಸಿ ಜೇನು ತುಪ್ಪವನ್ನು ಸಂಗ್ರಹಿಸಿಕೊಂಡು ಹೋಗುತ್ತಾನೆ.
ಇದರಿಂದ ನಾವು ಕಲಿಯಬೇಕಾದ ಪಾಠ:-
1. ಸಾಧಕನಾದವನು ಆಹಾರ ಸಂಗ್ರಹಣೆಯಲ್ಲಿಯೇ ಪೂರ್ಣವಾಗಿ ಮಗ್ನನಾಗಿ ಬಿಟ್ಟರೆ ಆಮೋದಕ್ಕಾಗಿ ಹೊರಟ ಮೊದಲನೆಯ ಜಾತಿಯ ದುಂಬಿಯಂತೆ ಪ್ರಾಪಂಚಿಕತೆಯಲ್ಲೇ ಮೈಮರೆತು ಆದರಿಂದಲೇ ವಿನಾಶ ಹೊಂದುತ್ತಾನೆ.
2. ಇನ್ನು ಎರಡನೆಯ ಜಾತಿಯ ಜೇನು ಹುಳುಗಳಂತೆ ಆಹಾರವನ್ನು ಕೂಡಿಡಲು ಪ್ರಾರಂಭಿಸಿದರೆ, ಅವನೂ ಆಹಾರ ಸಮೇತನಾಗಿಯೇ ವಿನಾಶ ಹೊಂದುತ್ತಾನೆ. ಆದ್ದರಿಂದ ಸಾಧಕನು ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸಲೂಬಾರದು.
(ಮುಂದುವರಿಯುವುದು)






Leave a Reply