ಅವಲಕ್ಕಿ ಎಂದ ಕೂಡಲೇ ನಮಗೆ ನೆನಪಾಗುವುದು ಕೃಷ್ಣ-ಸುದಾಮರ ಹೃದಯಸ್ಪರ್ಶಿ ಕಥೆ. ಬಾಲ್ಯ ಮಿತ್ರನಾದ ರಾಜಾರಾಜ ಶ್ರೀ ಕೃಷ್ಣನಿಗೆ ತಾನು ತಂದಿದ್ದ ಅವಲಕ್ಕಿಯನ್ನು ನಾಚಿಕೆಯಿಂದ ಸಮರ್ಪಿಸುತ್ತಾನೆ ಬಡಪಾಯಿಯಾದ ಸುದಾಮ. ಸಂಸಾರದ ಜಂಜಡದಲ್ಲಿ ಬೆಂದು, ಕುಟ್ಟಲ್ಪಟ್ಟು ಕುಗ್ಗಿಹೋಗಿರುವ ತನ್ನ ಬಡ ಸ್ನೇಹಿತನ ಪರಿಸ್ಥಿತಿಯನ್ನು ಬೇಯಿಸಲ್ಪಟ್ಟು, ಹುರಿಯಲ್ಪಟ್ಟು ಕುಟ್ಟಲ್ಪಟ್ಟ ಅವಲಕ್ಕಿಯಿಂದ ಸೂಚಕವಾಗಿ ಅರಿತುಕೊಳ್ಳುತ್ತಾನೆ ಪರಮಾತ್ಮ. ಬಡ ಮಿತ್ರನ ನಿಷ್ಕಾಮ ಭಕ್ತಿಗೆ ಮನಕರಗಿ ಆತನು ಬೇಡದಿದ್ದರೂ ಸಕಲ ಐಶ್ವರ್ಯಗಳನ್ನೂ ಸಹ ಆತನ ಮೇಲೆ ವರ್ಷಿಸುತ್ತಾನೆ ಭಗವಂತ. ಕರುಣಾಮಯಿಯಾದ ಆ ಭಗವಂತನಿಗೆ ಬಲು ಪ್ರಿಯವಾದ ಅವಲಕ್ಕಿಯಿಂದ ತಯಾರಿಸಿದ ತಿನಿಸುಗಳನ್ನ ನಾವೂ ಸಹ ಆತನಿಗೆ ಸಮರ್ಪಿಸೋಣವೇ?
ಹುಳಿ ಅವಲಕ್ಕಿ
ತಯಾರಿಸಲು ಬೇಕಾದ ಪದಾರ್ಥಗಳು
ಗಟ್ಟಿ ಅವಲಕ್ಕಿ – 1 ಪಾವು
ಹುಣಸೆ ಹಣ್ಣು – 1 ಸಣ್ಣ ನಿಂಬೆ ಗಾತ್ರ
ಉಪ್ಪು – ರುಚಿಗೆ ತಕ್ಕಷ್ಟು
ಪುಡಿ ಮಾಡಿದ ಬೆಲ್ಲ – 1 ಟೇಬಲ್ ಚಮಚ
ಅರಿಶಿನದ ಪುಡಿ – 1 1/4 ಟೀ ಚಮಚ
ಸಾಂಬಾರ್ ಪುಡಿ – 1 ಟೀ ಚಮಚ
ಎಳ್ಳೆಣ್ಣೆ – 2 ಟೇಬಲ್ ಚಮಚ
ಸಾಸಿವೆ – 1/4 ಟೀ ಚಮಚ
ಉದ್ದಿನ ಬೇಳೆ – 1 ಟೀ ಚಮಚ
ಕಡಲೆ ಬೇಳೆ – 1 ಟೀ ಚಮಚ
ಕಡಲೆ ಬೀಜ – 2 ಟೇಬಲ್ ಚಮಚ
ಒಣ ಮೆಣಸಿನ ಕಾಯಿ – 2
ಕರಿಬೇವಿನ ಸೊಪ್ಪು – ಸ್ವಲ್ಪ
ಹುರಿದು ಪುಡಿ ಮಾಡಿಕೊಳ್ಳಬೇಕಾದ ಪದಾರ್ಥಗಳು
ಮೆಂತ್ಯ – 1/4 ಟೀ ಚಮಚ
ಕರಿ ಮೆಣಸು – 1/2 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಬಿಳಿ ಎಳ್ಳು – 1 ಟೇಬಲ್ ಚಮಚ
ತುರಿದ ಕೊಬ್ರಿ – 1 ಟೇಬಲ್ ಚಮಚ
ಮೆಂತ್ಯ, ಮೆಣಸು, ಜೀರಿಗೆ, ಎಳ್ಳು ಎಲ್ಲ ಪದಾರ್ಥಗಳನ್ನೂ ಬರಿ ಬಾಣಲೆಯಲ್ಲಿ ಒಂದೊಂದಾಗಿ ಹುರಿದುಕೊಳ್ಳಬೇಕು. `ಘಮ್’ ಎಂದು ಹುರಿದುಕೊಂಡ ಪದಾರ್ಥಗಳೊಂದಿಗೆ ಒಣ ಕೊಬ್ರಿ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಬೇಕು.
ತಯಾರು ಮಾಡುವ ವಿಧಾನ
1. ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿ, 1 1/2 ಕಪ್ ಗಟ್ಟಿ ರಸವನ್ನು ತೆಗೆದಿಟ್ಟುಕೊಳ್ಳಬೇಕು.
2. ಹುಣಸೆ ರಸಕ್ಕೆ ಉಪ್ಪು, ಸಾಂಬಾರ್ ಪುಡಿ, ಅರಿಶಿನದ ಪುಡಿ ಮತ್ತು ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.
3. ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಹಿಂಡಿ, ತಯಾರಾಗಿರುವ ಹುಣಸೆ ರಸಕ್ಕೆ ಹಾಕಿ ಅರ್ಧ ಗಂಟೆ ಕಾಲ ನೆನೆಸಿಡಬೇಕು.
4. ಅವಲಕ್ಕಿ ಹೂವಿನಂತೆ ಮೃದುವಾದಮೇಲೆ, ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಸಾಸಿವೆಯನ್ನು ಸಿಡಿಸಿಕೊಳ್ಳಬೇಕು.
5. ಉದ್ದಿನ ಬೇಳೆ ಕಡಲೆ ಬೇಳೆ ಸೇರಿಸಿ ಚಿನ್ನದ ಬಣ್ಣಕ್ಕೆ ಹುರಿದುಕೊಳ್ಳಬೇಕು.
6. ಕಡಲೆ ಬೀಜ ಹಾಕಿ ಅದು ಸಿಡಿಯುವವರೆಗೆ ಹುರಿದು, ಒಣ ಮೆಣಸಿನಕಾಯಿ ಚೂರು ಮತ್ತು ಕರಿಬೇವು ಸೇರಿಸಿ ಕೆದಕಬೇಕು.
7. ನೆನೆಸಿಟ್ಟ ಅವಲಕ್ಕಿಯನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಕೈಯಾಡಿಸಬೇಕು.
8. ಅವಲಕ್ಕಿ ಬೆಂದು ಉದುರುದುರಾದಮೇಲೆ ಮಾಡಿಟ್ಟಿರುವ ಪುಡಿ ಸೇರಿಸಿ ಚೆನ್ನಾಗಿ ಕಲಸಿ, ಸಣ್ಣ ಉರಿಯಲ್ಲಿ ಮುಚ್ಚಿಡಬೇಕು.
ಒಲೆ ಆರಿಸಿ ಪರಿಮಳ ಸೂಸುವ ಹುಳಿ ಅವಲಕ್ಕಿಯನ್ನು ಮತ್ತೊಮ್ಮೆ ಕೆದಕಿ ಶ್ರೀ ಕೃಷ್ಣನಿಗೆ ಅರ್ಪಿಸಿದ ಅನಂತರ ಸವಿಯಬೇಕು.
ಅವಲಕ್ಕಿ ದೋಸೆ
ತಯಾರಿಸಲು ಬೇಕಾದ ಪದಾರ್ಥಗಳು
ಅಕ್ಕಿ – 1 1/2 ಪಾವು
ಅವಲಕ್ಕಿ – 1/2 ಪಾವು
ಹುಳಿ ಮೊಸರು – 1/2 ಪಾವು
ಉಪ್ಪು – ರುಚಿಗೆ ತಕ್ಕಷ್ಟು
ತಯಾರು ಮಾಡುವ ವಿಧಾನ
1. ಅಕ್ಕಿ ಮತ್ತು ಅವಲಕ್ಕಿಯನ್ನ ಒಟ್ಟಿಗೆ ಸೇರಿಸಿ ತೊಳೆದು ಒಂದು ಗಂಟೆ ಕಾಲ ನೆನೆಸಿಡಬೇಕು.
2. ಅನಂತರ ಮಾಮೂಲಿ ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.
3. ಕೊನೆಯದಾಗಿ ಹುಳಿ ಮೊಸರು ಮತ್ತು ಉಪ್ಪು ಸೇರಿಸಿ ಮಾಮೂಲಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ಹಿಟ್ಟನ್ನು ಮುಚ್ಚಿಟ್ಟು ಹನ್ನೆರಡು ಗಂಟೆ ಕಾಲ ಹುದುಗಲು ಬಿಡಬೇಕು.
4. ಹಿಟ್ಟು ಸಿದ್ಧವಾದಮೇಲೆ ಎಣ್ಣೆ ಸವರಿದ ಕಾವಲಿಯ ಮೇಲೆ ಒಂದು ಸೌಟು ಹಿಟ್ಟನ್ನು ಹಾಕಿ ಸ್ವಲ್ಪ ದಪ್ಪ ದೋಸೆಯಾಗಿ ಹರಡಬೇಕು.
5. ಒಲೆ ಉರಿ ಕಡಮೆ ಮಾಡಿ ದೋಸೆಯ ಸುತ್ತ ಎಳ್ಳೆಣ್ಣೆ ತೊಟ್ಟಿಕ್ಕಿಸಿ ಒಂದು ತಟ್ಟೆಯಿಂದ ಕೆಲವು ನಿಮಿಷಗಳು ಮುಚ್ಚಿಡಬೇಕು.
6. ಬೆಂದ ದೋಸೆಯಲ್ಲಿ ಜೇನು ಗೂಡಿನಂತೆ ಸಣ್ಣ ಸಣ್ಣ ತೂತುಗಳು ಕಾಣಿಸಿಕೊಳ್ಳುತ್ತವೆ. ಮೊಗುಚಿ ಬೇಯಿಸುವ ಅಗತ್ಯವಿಲ್ಲ.
ಮೃದುವಾದ ಅವಲಕ್ಕಿ ದೋಸೆಯನ್ನು ಚಟ್ನಿ ಪುಡಿ, ತುಪ್ಪ / ಬೆಣ್ಣೆ ಸಹಿತ ಶ್ರೀ ಕೃಷ್ಣನಿಗೆ ಅರ್ಪಿಸಿದ ಅನಂತರ ಸವಿಯಬೇಕು.
ಅವಲಕ್ಕಿ ಪಾಯಸ
ತಯಾರಿಸಲು ಬೇಕಾದ ಪದಾರ್ಥಗಳು
ಅವಲಕ್ಕಿ – 1/4 ಪಾವು
ಹಾಲು – 2 ಲೋಟ
ಸಕ್ಕರೆ – 1/4 ಪಾವು
ತುಪ್ಪ – ಗಟ್ಟಿ 1 ಟೇಬಲ್ ಚಮಚ
ಗೋಡಂಬಿ – 1 ಟೇಬಲ್ ಚಮಚ
ದ್ರಾಕ್ಷಿ – 1 ಟೇಬಲ್ ಚಮಚ
ಏಲಕ್ಕಿ ಪಚ್ಚಕರ್ಪೂರದ ಪುಡಿ – 1 ಚಿಟಿಗೆ
ತಯಾರು ಮಾಡುವ ವಿಧಾನ
1. ಒಂದು ಟೀ ಚಮಚ ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿಯನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು.
2. ಉಳಿದ ತುಪ್ಪದಲ್ಲಿ ಅವಲಕ್ಕಿಯನ್ನು ಹಾಕಿ ಅದು ಕೆಂಪಾಗಿ ಅರಳುವವರೆಗೂ ಹುರಿದುಕೊಳ್ಳಬೇಕು.
3. ದಪ್ಪ ತಳವಿರುವ ಪಾತ್ರೆಯಲ್ಲಿ ಹಾಲನ್ನು ಹಾಕಿ ಐದು ನಿಮಿಷಗಳವರೆಗೆ, ಘಮ ಬರುವವರೆಗೆ ಕುದಿಸಬೇಕು.
4. ಹುರಿದ ಅವಲಕ್ಕಿಯನ್ನು ಹಾಲಿಗೆ ಸೇರಿಸಿ ಅದು ಬಹಳ ಮೃದುವಾಗುವವರೆಗೆ ಬೇಯಿಸಬೇಕು.
5. ಅನಂತರ ಸಕ್ಕರೆ ಸೇರಿಸಿ ಇನ್ನೂ ಐದು ನಿಮಿಷಗಳು ಕುದಿಸಬೇಕು.
ಏಲಕ್ಕಿ ಪಚ್ಚಕರ್ಪೂರದ ಪುಡಿ ಸೇರಿಸಿ, ಹುರಿದಿಟ್ಟ ದ್ರಾಕ್ಷಿ ಗೋಡಂಬಿಯಿಂದ ಅಲಂಕರಿಸಿ ಶ್ರೀ ಕೃಷ್ಣನಿಗೆ ಅರ್ಪಿಸಿ ಅನಂತರ ಆಸ್ವಾದಿಸಬೇಕು.
ಅವಲಕ್ಕಿ ಪುಟ್ಟು
ತಯಾರಿಸಲು ಬೇಕಾದ ಪದಾರ್ಥಗಳು
ಗಟ್ಟಿ ಅವಲಕ್ಕಿ – 1 ಪಾವು
ಪುಡಿ ಮಾಡಿದ ಬೆಲ್ಲ – 3 ಟೇಬಲ್ ಚಮಚ
ಕಾಯಿ ತುರಿ – 3 ಟೇಬಲ್ ಚಮಚ
ಏಲಕ್ಕಿ ಪುಡಿ – 1 ಚಿಟಿಗೆ
ಉಪ್ಪು – ರುಚಿಗೆ ತಕ್ಕಷ್ಟು
ತಯಾರು ಮಾಡುವ ವಿಧಾನ
1. ಅವಲಕ್ಕಿಯನ್ನು ಬರಿ ಬಾಣಲೆಯಲ್ಲಿ ಕೆಂಪಾಗುವವರೆಗೆ ಹುರಿದುಕೊಳ್ಳಬೇಕು.
2. ಹುರಿದ ಅವಲಕ್ಕಿ ಚೆನ್ನಾಗಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ (ದಪ್ಪ ರವೆಯ ಗಾತ್ರ) ಪುಡಿ ಮಾಡಿಕೊಳ್ಳಬೇಕು.
3. 1/4 ಬಟ್ಟಲು ಬಿಸಿ ನೀರಲ್ಲಿ ಉಪ್ಪನ್ನು ಕರಗಿಸಿಕೊಂಡು ಅವಲಕ್ಕಿ ತರಿಗೆ ಸ್ವಲ್ಪ ಸ್ವಲ್ಪವಾಗಿ ಚಿಮುಕಿಸಿ ಕಲಸಬೇಕು.
4. ಅವಲಕ್ಕಿ ಪುಡಿಯನ್ನು ತೇವಗೊಳಿಸಿಕೊಂಡ ಮೇಲೆ ಬೆಲ್ಲದ ಪುಡಿ ಏಲಕ್ಕಿ ಪುಡಿ ಬೆರಸಿಕೊಳ್ಳಬೇಕು.
5. ಪುಟ್ಟು ತಯಾರಿಸಲು ಉಪಯೋಗಿಸುವ ಪುಟ್ಟು ಚಟ್ಟಿಯ ಕೊಳಬೆಯಲ್ಲಿ ಮೊದಲು ಒಂದು ಪದರ ಕಾಯಿ ತುರಿ ಹಾಕಬೇಕು. ಅನಂತರ ಕೊಳಬೆಯ ಅರ್ಧ ಭಾಗದವರೆಗೂ ಅವಲಕ್ಕಿ ಬೆಲ್ಲ ಮಿಶ್ರವನ್ನು ತುಂಬಬೇಕು.
6. ಮತ್ತೆ ಒಂದು ಪದರ ಕಾಯಿ ತುರಿ ಹಾಕಿ, ಉಳಿದ ಅವಲಕ್ಕಿ ಬೆಲ್ಲ ಮಿಶ್ರವನ್ನು ತುಂಬಬೇಕು.
7. ಕೊನೆಯದಾಗಿ ಸ್ವಲ್ಪ ಕಾಯಿ ತುರಿ ಹಾಕಿ, ಅವಲಕ್ಕಿ ತುಂಬಿದ ಕೊಳಬೆಯನ್ನು ಮುಚ್ಚಿ ಪುಟ್ಟು ಚಟ್ಟಿಯ ಮೇಲಿಟ್ಟು 8 – 10 ನಿಮಿಷಗಳು ಹಬೆಯಲ್ಲಿ ಬೇಯಿಸಬೇಕು. ಪುಟ್ಟು ಚಟ್ಟಿ ಇಲ್ಲದಿದ್ದರೆ ಅವಲಕ್ಕಿ ಪುಟ್ಟು ಮಿಶ್ರಣವನ್ನು ಇಡ್ಲಿ ತಟ್ಟೆಗೆ ಹಾಕಿ ಕುಕ್ಕರಲ್ಲಿಟ್ಟು ಹಬೆಯಲ್ಲಿ ಬೇಯಿಸಬಹುದು. ಅನಂತರ ಉಪ್ಪಿಟ್ಟಿನಂತೆ ಉದುರಿಸಿಕೊಳ್ಳಬಹುದು.
8. ಬೆಂದ ಪುಟ್ಟನ್ನು ಮೆಲ್ಲನೆ ಕೊಳಬೆಯಿಂದ ಹೊರ ತೆಗೆದು ಬಾಳೆ ಹಣ್ಣು ಅಥವಾ ಮಾವಿನ ಹಣ್ಣಿನ ರಸಾಯನದೊಂದಿಗೆ ಸೇವಿಸಿ.