ಕೃಷ್ಣ ಪಾಕಶಾಲೆ

ಅವರೆಕಾಳು ಪಲಾವ್‌

ಬೇಕಾಗುವ ಸಾಮಗ್ರಿಗಳು:

ಹಿದುಕಿದ ಅವರೆಕಾಳು – 250 ಗ್ರಾಂ

ಬಾಸುಮತಿ ಅಕ್ಕಿ – 500 ಗ್ರಾಂ

ತುಪ್ಪ – 5-6 ದೊಡ್ಡ ಚಮಚ

ಮೊಸರು – 8-10 ದೊಡ್ಡ ಚಮಚ

ಒಣದ್ರಾಕ್ಷಿ – 25 ಗ್ರಾಂ

ಗೋಡಂಬಿ – 25 ಗ್ರಾಂ

ನೆನೆಸಿ ಸಿಪ್ಪೆ ತೆಗೆದ ಬಾದಾಮಿ – 25 ಗ್ರಾಂ

ಹಾಲು – 100 ಮಿಲಿ ಲೀಟರ್‌

ಕೇಸರಿ ಎಸಳು – ¼ ಚಮಚ

ಮಸಾಲೆಗೆ ಬೇಕಾಗುವ ಸಾಮಗ್ರಿಗಳು:

ಲವಂಗ – 5

ಚಿಕ್ಕ ತುಂಡು ಚಕ್ಕೆ – 1

ಚಿಕ್ಕ ತುಂಡು ಶುಂಠಿ – 1

ಹಸಿಮೆಣಸಿನಕಾಯಿ – 4

ಒಣ ಮೆಣಸಿನಕಾಯಿ – 6

ಗಸಗಸೆ – 3 ಚಮಚ

ಏಲಕ್ಕಿ – 1-2

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಅವರೆಕಾಳನ್ನು ಹಿಂದಿನ ರಾತ್ರಿಯೇ ಬಿಡಿಸಿ, ಆರಿಸಿ ನೀರಿನಲ್ಲಿ ನೆನೆಯಲು ಹಾಕಿ. ಚೆನ್ನಾಗಿ ನೆಂದ ಬಳಿಕ ಹಿದುಕಿಡಿ. ಒಂದು ಬಟ್ಟಲಿನಲ್ಲಿ ಕಾದು ಆರಿದ ಹಾಲಿಗೆ ಕೇಸರಿಯನ್ನು ಹಾಕಿಡಿ. ಮತ್ತೊಂದು ಬಟ್ಟಲಿನಲ್ಲಿ ಗೋಡಂಬಿ, ಬಾದಾಮಿಗಳನ್ನು ನೀರಿನಿಲ್ಲಿ ಹಾಕಿಡಿ. ಗೋಡಂಬಿ ಮತ್ತು ಬಾದಾಮಿ ನೆನೆಯುವ ವೇಳೆಗೆ ಅಕ್ಕಿಯನ್ನು ತೊಳೆದು (ಅದರಲ್ಲಿರುವ ನೀರನ್ನು ಶೋಧಿಸಲು) ಬಸಿಯಿರಿ.

ಈಗ ಮಸಾಲೆಗೆ ಹಸಿ ಮೆಣಸಿಕಾಯಿ, ಒಣ ಮೆಣಸಿನಕಾಯಿ, ಹಸಿ ಶುಂಠಿ, ಗಸಗಸೆ, ನೆನೆದ ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಹಾಕಿ ನೀರು ಬೆರಸದೇ ರುಬ್ಬಿಟ್ಟುಕೊಳ್ಳಿ. ನಂತರ ಕುಕ್ಕರ್‌ನಲ್ಲಿ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಕಾದ ತಪ್ಪಕ್ಕೆ ಏಲಕ್ಕಿ, ಚಕ್ಕೆ, ಲವಂಗ, ದ್ರಾಕ್ಷಿ ಒಂದರ ನಂತರ ಒಂದು ಹಾಕಿ 3-4 ನಿಮಿಷ ಹುರಿಯಿರಿ. ಪರಿಮಳ ಬಂದ ಕೂಡಲೇ ಬಸಿದ ಅಕ್ಕಿಯನ್ನು ಮತ್ತು ಹಿದುಕಿದ ಅವರೆಕಾಳನ್ನು ಹಾಕಿ 4-5 ನಿಮಿಷ ಮತ್ತೆ ಹುರಿಯಿರಿ.

ಆನಂತರ ಅದಕ್ಕೆ ರುಬ್ಬಿಟ್ಟ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 3 ನಿಮಿಷ ಹುರಿಯಿರಿ. ನೆನೆಸಿದ ಕೇಸರಿಯನ್ನು ಹಾಲು ಸಮೇತ ಇದಕ್ಕೆ ಸುರಿಯಿರಿ. ನಂತರ ಅಕ್ಕಿಯ ಎರಡು ಪಟ್ಟು ನೀರು ಹಾಕಿ ಜೊತೆಗೆ ಮೊಸರು ಬೆರೆಸಿ ಚೆನ್ನಾಗಿ ಪದಾರ್ಥಗಳು ಬೆರೆಯುವಂತೆ ನೋಡಿಕೊಳ್ಳಿ. ಕುಕ್ಕರ್‌ಗೆ 2-3 ವಿಸಲ್‌ ಬರುತ್ತಿದ್ದಹಾಗೇ ಉರಿಯನ್ನು ಆರಿಸಿ. ಇದನ್ನು ಮೊಸರಿನ ಪಚಡಿಯೊಂದಿಗೆ ಸ್ವೀಕರಿಸುವುದು ಪದ್ಧತಿ.

ಸೌತೆಕಾಯಿ ಮೊಸರು ಪಚಡಿ

ಬೇಕಾಗುವ ಸಾಮಗ್ರಿಗಳು:

ಗಟ್ಟಿ ಮೊಸರು – ¼ ಲೀಟರ್‌

ಟೊಮೊಟೊ – 1-2

ಹಸಿಮೆಣಸಿನಕಾಯಿ – 1-2

ಚಿಕ್ಕ ಸೌತೆಕಾಯಿ – 1

ರುಚಿಗೆ ತಕ್ಕಷ್ಟು ಉಪ್ಪು

ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಟೊಮೊಟೊ, ಸೌತೆಕಾಯಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇದನ್ನು ಮೊಸರಿನೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೆರೆಸಿ. ಮೊಸರು ಪಚಡಿಯೊಂದಿಗೆ ಅವರೆಕಾಳು ಪಲಾವ್‌ ಸೇವಿಸಿ.

ಅವರೆಕಾಳು ಉಸಲಿ

ಬೇಕಾಗುವ ಸಾಮಗ್ರಿಗಳು:

ಹಿದುಕಿದ ಅವರೆಕಾಳು – 2 ಪಾವಿನಷ್ಟು

ತುರಿದ ತೆಂಗಿನ ಕಾಯಿ – 1 ಬಟ್ಟಲು

ಜೀರಿಗೆ – 1 ಚಮಚ

ಕೊತ್ತಂಬರಿ ಬೀಜ – 1 ಚಮಚ

ಗಸಗಸೆ – 1 ಚಮಚ

ನೆನೆಸಿದ ಅಕ್ಕಿ – 1 ಚಮಚ

ಇಂಗು – 1 ಚಿಟಿಕೆ

ಹಸಿಮೆಣಸಿನ ಕಾಯಿ – 4-5

ಖಾದ್ಯ ತೈಲ – 3-4 ಚಮಚ

ಸಾಸಿವೆ – ¼ ಚಮಚ

ಅರಿಶಿನ ಪುಡಿ –  1 ಚಿಟಿಕೆ

ಒಣ ಮೆಣಸಿನ ಕಾಯಿ – 2-3

ಮಾಡುವ ವಿಧಾನ:

ಚೆನ್ನಾಗಿ ಆರಿಸಿ ಸುಲಿದ ಅವರೆಕಾಳನ್ನು ಮೊದಲ ದಿನ ಬೆಳಗ್ಗೆ ನೆನೆಸಿ ರಾತ್ರಿಯೇ ಹಿದುಕಿಟ್ಟುಕೊಳ್ಳಿ. ಹಿದುಕಿದ ಅವರೆ ಕಾಳಿಗೆ ಹದವಾಗಿ ನೀರು ಬೆರೆಸಿ ತುಂಬಾ ಮೆತ್ತಗಾಗದಂತೆ ಉಪ್ಪು ಹಾಕಿ ಬೇಯಿಸಿಟ್ಟುಕೊಳ್ಳಿ. ನಂತರ ಕೊತ್ತಂಬರಿ ಬೀಜ, ಹಸಿ ಮೆಣಸಿನಕಾಯಿ, ಗಸಗಸೆ, ನೆನೆಸಿದ ಅಕ್ಕಿ, ತೆಂಗಿನ ತುರಿ, ಹೆಚ್ಚು ನೀರು ಬೆರಸದೇ ರುಬ್ಬಿಟ್ಟುಕೊಳ್ಳಿ.

ಆನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಒಣ ಮೆಣಸಿನಕಾಯಿ, ಇಂಗು ಹಾಕಿ ಒಗ್ಗರಣೆ ಮಾಡಿ ರುಬ್ಬಿಟ್ಟ ಮಸಾಲೆಯನ್ನು ಇದಕ್ಕೆ ಹಾಕಿ ಎರಡು ನಿಮಿಷ ಹುರಿಯಿರಿ.

ಬೇಕಾದರೆ ಇದಕ್ಕೆ ½ ಹೋಳು ನಿಂಬೆ ರಸವನ್ನು ಹಾಕಬಹುದು. ಈಗ ಅವರೆಕಾಳಿಗೆ ಬೇಕಾಗುವಷ್ಟು ಉಪ್ಪನ್ನು ಬೇಯುವಾಗಲೇ ಹಾಕಿರುವುದರಿಂದ, ಮಸಾಲೆಗೆ ಬೇಕಾಗುವಷ್ಟು ಉಪ್ಪನ್ನು ಬೆರೆಸಿ, ಜೊತೆಗೆ ಅರಿಶಿನಪುಡಿಯನ್ನು ಬೆರೆಸಿ, ಮಸಾಲೆಯೆಲ್ಲಾ ಹುರಿದು ಪರಿಮಳ ಬರುವಾಗ ಬೇಯಿಸಿಟ್ಟ ಹಿದುಕಿದ ಅವರೆಕಾಳನ್ನು ಮಸಾಲೆಯೊಂದಿಗೆ ಬೆರೆಯುವಾಗ ಅದು ಹಿಟ್ಟಾಗದಂತೆ ಎಚ್ಚರವಹಿಸಿ. ಉಸಲಿ ಉದುರು ಉದುರಾಗಿದ್ದರೆ ಒಳ್ಳೆಯದು. ನಂತರ ತಿನ್ನಿ.

ಅವರೆಕಾಳು ಹುಳಿ

ಬೇಕಾಗುವ ಸಾಮಗ್ರಿಗಳು:

ಸುಲಿದು ಆರಿಸಿದ ಅವರೆಕಾಳು – 2 ಪಾವು

ಆಲೂಗಡ್ಡೆ – ¼ ಕೆ.ಜಿ

ತೆಂಗಿನಕಾಯಿ ಹೋಳು – 1

ಜೀರಿಗೆ – 1 ಚಮಚ

ಕೊತ್ತಂಬರಿ ಬೀಜ – 1 ಚಮಚ

ಗಸಗಸೆ – 1 ಚಮಚ

ಅಕ್ಕಿ – 1 ಚಮಚ

ಸಾಂಬಾರು ಪುಡಿ – 1

ಚಿಕ್ಕ ತುಂಡು ಹುಣಸೆ ಹಣ್ಣು

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಆರಿಸಿದ ಹಸಿ ಅವರೆಕಾಳಿಗೆ ಸುಮಾರು ಅದು ಮುಳುಗುವಷ್ಟು ನೀರಿಟ್ಟು ಸಿಪ್ಪೆ ತೆಗೆದ ಆಲೂಗಡ್ಡೆಯೊಂದಿಗೆ ಬೇಯಿಸಿ. ಆನಂತರ ತೆಂಗಿನಕಾಯಿ ತುರಿ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ಅಕ್ಕಿ, ಸಾಂಬಾರು ಪುಡಿ, ಹುಣಸೆ ಹಣ್ಣು ಎಲ್ಲ ಸೇರಿಸಿ ರುಬ್ಬಿ ಆನಂತರ ಮಸಾಲೆಯನ್ನು ಬೇಯಿಸಿಟ್ಟ ಅವರೆಕಾಳು ಹಾಗೂ ಆಲೂಗಡ್ಡೆಗೆ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನೀರು ಬೆರೆಸಿ ಕುದಿಸಿ. ಇದನ್ನು ಅನ್ನದೊಂದಿಗೆ ಸ್ವೀಕರಿಬಹುದು. ಇಲ್ಲದಿದ್ದಲ್ಲಿ ಕಡಿಮೆ ನೀರು ಬೆರೆಸಿ, ಕುದಿಸಿ ಚಪಾತಿ, ಪೂರಿಯೊಂದಿಗೆ ಸಾಗುವಿನಂತೆ ಸ್ವೀಕರಿಸಬಹುದು.

ಅವರೆಕಾಳು ನಿಪ್ಪಟ್ಟು

ಬೇಕಾಗುವ ಸಾಮಗ್ರಿಗಳು:

ಒಂದು ದೊಡ್ಡ ಲೋಟದಷ್ಟು ಬೇಯಿಸಿದ ಎಳೆ ಅವರೆಕಾಳು

ಒಂದು ಪಾವಿನಷ್ಟು ಅಕ್ಕಿಹಿಟ್ಟು

ಒಂದು ದೊಡ್ಡ ಚಮಚದಷ್ಟು ಚಿರೋಟಿ ರವೆ

ಒಂದು ದೊಡ್ಡ ಚಮಚದಷ್ಟು ಮೈದಾ ಹಿಟ್ಟು

ಒಂದು ಚಮಚ ಹುರಿದ ಬಿಳಿ ಎಳ್ಳು

ಅರ್ಧ ಲೋಟದಷ್ಟು ತುರಿದ ಒಣ ಕೊಬ್ಬರಿ ಜೊತೆಗೆ ಅರ್ಧ ಲೋಟದಷ್ಟು ನೆಲಗಡಲೆ

ಉಪ್ಪು

ಒಣಮೆಣಸಿನಕಾಯಿ

2 ಚಮಚ ಎಣ್ಣೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಚಿರೋಟಿ ರವೆಯನ್ನು ಹಾಕಿ. ಇದಕ್ಕೆ ಎಣ್ಣೆಯನ್ನು ಕಾಯಿಸಿ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅವರೆಕಾಳು, ಮೈದಾ ಹಿಟ್ಟು ಹುರಿದ ಎಳ್ಳು, ತುರಿದ ಕೊಬ್ಬರಿ, ಚಿಕ್ಕ ಚಿಕ್ಕ ತುಂಡು ಮಾಡಿದ ನಿಮ್ಮ ರುಚಿಗೆ ಅನುಗುಣವಾಗಿ ಬೇಕಾದಷ್ಟು ಒಣ ಮೆಣಸಿನಕಾಯಿ ಹಾಗೂ ಉಪ್ಪನ್ನು ಬೆರೆಸಿ.

ಹಿಟ್ಟು ಹೆಚ್ಚು ಅಂಟದಂತೆ ಮತ್ತು ಗಟ್ಟಿಯಾಗಿರದಂತೆ ಹದವಾಗಿ ನೀರು ಬೆರೆಸಿ ಕಲೆಸಿ. ಹಿಟ್ಟನ್ನು ಚಿಕ್ಕ ಚಿಕ್ಕ ಬಿಡಿ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ. ಪ್ಲಾಸ್ಟಿಕ್‌ ಹಾಳೆ ಅಥವಾ ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟಿನ ಉಂಡೆಗಳನ್ನು ಅದರ ಮೇಲಿಟ್ಟು ಅಂಗೈ ಅಗಲದ ನಿಪ್ಪಟ್ಟನ್ನು ತಟ್ಟಿ. ಕಾದ ಎಣ್ಣೆಗೆ ಒಂದೊಂದಾಗೆ ನಿಪ್ಪಟ್ಟು ಹಾಕಿ ಅದು ನಸುಗೆಂಪು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.

ಬಿಸಿ ಬಿಸಿ ನಿಪ್ಪಟ್ಟನ್ನು ಹಾಗೇ ಕರಂಡಿಕೆಯಲ್ಲಿ ಶೇಖರಿಸಿಡದೆ ಒಂದು ಪೇಪರ್‌ ಅಥವಾ ಎಣ್ಣೆ ಶೋಧಿಸುವ ದೊಡ್ಡ ಜರಡಿಯಲ್ಲಿ ಹಾಕಿ. ಎಣ್ಣೆಯೆಲ್ಲಾ ಇಳಿದ ನಂತರ ಶೇಖರಿಸಿಡಿ. ಇದರಿಂದ 10-12 ದಿನಗಳ ಕಾಲ ನಿಪ್ಪಟ್ಟು ಕೆಡದೆ ಇರುತ್ತದೆ. ಆಗ ಯಾವಾಗ ಬೇಕಾದರೂ ಸ್ವೀಕರಿಸಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi