ಬಾಲ ನಿಮಾಯ್‌

ಕ್ರಿ.ಶ. 1407 ನೆಯ ಇಸವಿಯ ಫಾಲ್ಗುಣ ಮಾಸದ ಹುಣ್ಣಿಮೆಯ ಸಂಜೆ. ಆಕಾಶದಲ್ಲಿ ಸಿಂಹರಾಶಿ ಗೋಚರಿಸುತ್ತಿತ್ತು. ಗ್ರಹಗಳು ಉಚ್ಛ ಸ್ಥಾನದಲ್ಲಿದ್ದವು. ಅದು ಸಿಂಹಲಗ್ನದ ಶುಭತಿಥಿ. ಅಂದು ಚಂದ್ರ ಗ್ರಹಣವೂ ಆಗಿತ್ತು. ಇಡೀ ಜಗತ್ತು ಪವಿತ್ರತಮ ಹರಿನಾಮವನ್ನು ಜಪಿಸುತ್ತಿತ್ತು! ಬಂಗಾಳದ ನಾಡಿಯಾ ನಗರ, ಸಂಭ್ರಮ ಸಡಗರಗಳಲ್ಲಿ ಮುಳುಗಿತ್ತು.

ಹಿ೦ದೂಗಳು ಹರಿನಾಮ ಸಂಕೀರ್ತನೆಯಲ್ಲಿ ತೊಡಗಿ ಸಂತಸಪಡುತ್ತಿರಲು, ಮುಸಲ್ಮಾನರೂ ಅವರನ್ನು ಅನುಕರಿಸುತ್ತಿದ್ದರು! ನಾರೀಗಣವು ನಾಮ ಸಂಕೀರ್ತನೆಯಿ೦ದ ಮಾರ್ದನಿಸುತ್ತಿರಲು, ಸ್ವರ್ಗ ಲೋಕದಲ್ಲಿ ದೇವ, ಗಂಧರ್ವ, ಸಿದ್ಧಚಾರಣರು ಭೇರಿ ತಮಟೆಗಳ ನಿನಾದದೊಂದಿಗೆ ಹಾಡಿ ನರ್ತಿಸಿದರು. ದಶದಿಕ್ಕುಗಳೂ ನದನದಿಗಳೂ ಪ್ರಸನ್ನಗೊಂಡವು. ಸ್ಥಾವರ ಜಂಗಮಗಳೆಲ್ಲವೂ ಆನಂದ ವಿಹ್ವಲಗೊಂಡವು!

ಗ್ರಹಣವು ಕಳೆದು ಲೋಕದ ಕತ್ತಲೆಯನ್ನು ತೊಲಗಿಸಲೆಂದು ಉದಯಿಸುವ ಚಂದ್ರನಂತೆ, ಮೂರು ಲೋಕಗಳ ಪಾಪಗಳನ್ನೂ ಅಳಿಸುವ ಶಿಶುವಿನ ಜನನವಾಯಿತು! ಅದೊಂದು ಸಾಮಾನ್ಯ ಶಿಶುವಾಗಿರದೆ ದಿವ್ಯ ಶಿಶುವಾಗಿತ್ತು! ಮಾನವ ರೂಪಿನಲ್ಲಿದ್ದ ಸಾಕ್ಷಾತ್ ಭಗವಂತನೇ ಆಗಿತ್ತು! ಆ ಶಿಶುವಿನ ದಿವ್ಯ ದರ್ಶನ ಪಡೆಯಲು ದೇವಿಯರಾದ ಸಾವಿತ್ರಿ, ಸರಸ್ವತೀ, ಗೌರೀ, ಶಚೀ, ರಂಭೆ, ಅರುಂಧತಿ ಮೊದಲಾದವರು ನಾನಾ ಉಡುಗೊರೆಗಳೊಂದಿಗೆ ಬ್ರಾಹ್ಮಣ ಪತ್ನಿಯರಂತೆ ವೇಷ ಮರೆಸಿ ಬ೦ದರು!

ನವದ್ವೀಪದ ಭಕ್ತರೆಲ್ಲರೂ ಅದ್ವೈತಾಚಾರ್ಯರೆಂಬ ಮಹಾಭಾಗವತರ ಮನೆಯಲ್ಲಿ ಸೇರಿ ಭಗದ್ಗೀತೆ, ಭಾಗವತಗಳನ್ನು ಪಠಿಸುವುದು ವಾಡಿಕೆಯಾಗಿತ್ತು. ಆದರೆ ಲೋಕದ ಜನರು ಶ್ರೀ ಕೃಷ್ಣನಿಗೆ ವಿಮುಖರಾಗಿ ವಿಷಯಲೋಲುಪತೆಯಲ್ಲಿ ಮುಳುಗಿ ಸ೦ಕಟ ಪಡುವುದನ್ನು ಕಂಡು ಅದ್ವೈತಾಚಾರ್ಯರಿಗೆ ಬಹಳ ಖೇದವಾಗಿತ್ತು.

ಜನರನ್ನು ಮಾಯೆಯ ಹಿಡಿತದಿಂದ ಬಿಡಿಸಲು ಕೃಷ್ಣನ ಅವತರಣವಾಗಿ ಅವನೇ ಭಕ್ತಿಯೋಗವನ್ನು ಪ್ರಚಾರಪಡಿಸಬೇಕೆಂಬುದನ್ನು ಮನಗಂಡ ಅವರು, ಶ್ರೀಕೃಷ್ಣನ ಬರುವಿಕೆಗಾಗಿ ಗಂಗಾ ಜಲ ಮತ್ತು ತುಳಸೀ ದಳಯುಕ್ತರಾಗಿ ಭಕ್ತಿಯಿಂದ ಪ್ರಾರ್ಥಿಸಿದರು. ಆ ಪ್ರಾರ್ಥನೆ ಈಗ ಫಲಿಸಿತ್ತು. ಮುಂದೆ, ಚೈತನ್ಯ ಮಹಾಪ್ರಭುಗಳೆಂದು ವಿಖ್ಯಾತರಾಗಿ ಜನರನ್ನು ಭಕ್ತಿಗಂಗೆಯಲ್ಲಿ ಮುಳುಗಿಸುವ ಶಿಶುವಿನ ಜನನವಾಗಿತ್ತು.

ಶ್ರೀಹಟ್ಟವೆಂಬ ಪುರದಲ್ಲಿ ಉಪೇಂದ್ರ ಮಿಶ್ರರೆಂಬ ಬ್ರಾಹ್ಮಣ ವಿದ್ವಾಂಸರಿದ್ದರು. ಅವರ ಪುತ್ರರು ಜಗನ್ನಾಥಮಿಶ್ರರು. ಇವರು, ಅಧ್ಯಯನ ಮಾಡಲೆಂದು ನವದ್ವೀಪಕ್ಕೆ ಹೋದರು. ನೀಲಾ೦ಬರ ಚಕ್ರವರ್ತಿಗಳೆಂಬ ಉದ್ದಾಮ ಪಂಡಿತರ ಬಳಿಯಲ್ಲಿ ಅಧ್ಯಯನ ಮುಗಿಸಿದ ಬಳಿಕ, ಅವರ ಮಗಳಾದ ಶಚೀದೇವಿಯನ್ನು ವಿವಾಹವಾಗಿ ಅಲ್ಲೇ ನೆಲೆಸಿದರು. ಈ ದ೦ಪತಿಗಳಿಗೆ ಎಂಟು ಹೆಣ್ಣು ಮಕ್ಕಳು.

ಆದರೆ ದುರದೃಷ್ಟವಶಾತ್ ಆ ಎಂಟೂ ಮಕ್ಕಳೂ ಅಸುನೀಗಿದವು! ಪರಮ ವೈಷ್ಣವರಾದ ಜಗನ್ನಾಥ ಮಿಶ್ರರು ದುಃಖಿತರಾಗಿ ಒಬ್ಬ ಪುತ್ರನಿಗಾಗಿ ವಿಷ್ಣುವಿನ ಚರಣಾರವಿಂದಗಳನ್ನು ಆರಾಧಿಸಿದರು. ಅನಂತರ ಅವರಿಗೆ ವಿಶ್ವರೂಪನೆ೦ಬ ಪುತ್ರನು ಜನಿಸಿದನು. ಸಾಕ್ಷಾತ್ ಬಲರಾಮನ ಅವತಾರವಾಗಿದ್ದ ಅವನು ಮಹಾಗುಣವಂತನಾಗಿದ್ದನು. ವಿಶ್ವ ರೂಪನನ್ನು ಮಗನನ್ನಾಗಿ ಪಡೆದ ದಂಪತಿಗಳು ಆನಂದಭರಿತರಾಗಿ ಶ್ರೀ ಹರಿಯನ ಹೆಚ್ಚಿನ ಭಕ್ತಿಯಿ೦ದ ಅರ್ಚಿಸತೊಡಗಿದರು.

ಕ್ರಿ.ಶ. 1406 ರಲ್ಲಿ ಶಚೀದೇವಿ ಮತ್ತೊಮ್ಮೆ ಗರ್ಭಧರಿಸಿದಳು. ಆಗ ದಂಪತಿಗಳಿಬ್ಬರೂ ಕೆಲವು ವಿಚಿತ್ರ ಅನುಭವಗಳನ್ನು ಪಡೆದರು. ಜಗನ್ನಾಥರು ತಮ್ಮ ಪತ್ನಿಗೆ ಹೇಳಿದರು, “ನಿನ್ನ ದೇಹ ಉಜ್ವಲ ಕಾಂತಿಯಿಂದ ಬೆಳಗುತ್ತಿದೆ! ನನ್ನ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿಯೇ ನೆಲೆಸಿದಂತಿದೆ! ನಾನು ಎಲ್ಲೇ ಹೋದರೂ ಎಲ್ಲಾ ಜನರೂ ನನ್ನನ್ನು ಗೌರವಿಸುತ್ತಾರೆ! ನಾನು ಕೇಳದೆಯೇ ಧನಧಾನ್ಯ ವಸ್ತ್ರಾದಿಗಳನ್ನು ಕೊಟ್ಟು ಬಿಡುತ್ತಾರೆ!’

“ನಾನೂ ಜಾಜ್ವಲ್ಯಮಾನವಾಗಿರುವ ದಿವ್ಯ ಪುರುಷರು ಆಗಸದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುವುದನ್ನು ಆಗಾಗ ಕಾಣುತ್ತೇನೆ!” ಶಚೀಮಾತೆ ಹೇಳಿದಳು.

ನನ್ನ ಸ್ವಪ್ನದಲ್ಲಿ ಜ್ಯೋತಿರ್ಮಯವಾದ ಭಗವ೦ತನ ಧಾಮವೇ ನನ್ನ ಹೃದಯವನ್ನು ಪ್ರವೇಶಿಸಿದಂತೆ ಕಂಡೆ!” ಜಗನ್ನಾಥರು ಹೇಳಿದರು.

ಅವರು ತಮ್ಮ ದಿವ್ಯಾನುಭವಗಳನ್ನು ಹೀಗೆ ಹಂಚಿಕೊಳ್ಳುತ್ತಿರಲು ಹದಿಮೂರು ಮಾಸಗಳಾದವು. ಇನ್ನೂ ಮಗುವಿನ ಜನನದ ಲಕ್ಷಣ ಕಾಣಲಿಲ್ಲ! ಇದರಿಂದ ಜಗನ್ನಾಥರು ಆತಂಕಗೊಂಡರು. ಆಗ ಅವರ ಮಾವನವರಾದ ನೀಲಾಂಬರ ಚಕ್ರವರ್ತಿಗಳು ತಮ್ಮ ಜ್ಯೋತಿಷ್ಯ ಜ್ಞಾನದ ಲೆಕ್ಕಾಚಾರ ಹಾಕಿ ಮಗುವು ಆ ತಿಂಗಳಲ್ಲೇ ಶುಭ ಮುಹೂರ್ತದಲ್ಲಿ ಜನಿಸುವುದೆಂದು ಹೇಳಿ ಧೈರ್ಯ ತುಂಬಿದರು.

ಅವರು ಹೇಳಿದ್ದಂತೆಯೇ, ನಿರೀಕ್ಷಿಸಿದ್ದ ಆ ದಿವ್ಯ ಘಳಿಗೆ ಬಂದಿತ್ತು. ಭಗವಂತನೇ ಶಿಶುವಾಗಿ ಜನಿಸಿದ್ದನು! ಆ ಸಮಯದಲ್ಲಿ ಶಾಂತಿಪುರದ ತಮ್ಮ ಮನೆಯಲ್ಲಿ ಅದ್ವೈತಾಚಾರ್ಯರು ತಮ್ಮ ಅಂತರಂಗಕ್ಕೆ ಭಗವಂತನ ಆಗಮನದ ವಿಚಾರ ತಿಳಿಯಿತೆ೦ಬ೦ತೆ, ಅತ್ಯಂತ ಸಂತೋಷದಿಂದ ಹರಿದಾಸ ಠಾಕುರರೊಂದಿಗೆ ಕುಣಿಕುಣಿದಾಡಿದರು. ಚಂದ್ರಗ್ರಹಣವಾದ್ದರಿ೦ದ ಹರಿಕೀರ್ತನೆ ಮಾಡುತ್ತಾ ಗಂಗಾನದಿಯಲ್ಲಿ ಸ್ನಾನ ಮಾಡಿ ಬ್ರಾಹ್ಮಣರಿಗೆ ಅನೇಕ ದಾನಗಳನ್ನು ನೀಡಿದರು.

ಅನೇಕ ಗೌರವಾನ್ವಿತ ವಿಪ್ರರೂ ಹೆಂಗಸರೂ ಉಡುಗೊರೆಗಳು ತು೦ಬಿದ ಪಾತ್ರೆಗಳೊ೦ದಿಗೆ ಮಗುವನ್ನು ನೋಡಲು ಬಂದರು. ಹೊನ್ನಿನ ಮೈಕಾಂತಿಯಿಂದ ಹೊಳೆಯುತ್ತಿದ್ದ ಶಿಶುವನ್ನು ನೋಡಿ ಸಂತೋಷದಿ೦ದ ಹರಸಿದರು. ಚಂದ್ರಶೇಖರ ಆಚಾರ್ಯರೂ, ಶ್ರೀವಾಸ ಠಾಕುರರೂ ಅನೇಕ ಧಾರ್ಮಿಕ ವಿಧಿಗಳನ್ನಾಚರಿಸಿದರು. ಶ್ರೀವಾಸ ಠಾಕುರರ ಪತ್ನಿ ಮಾಲಿನೀ, ಇತರ ಸ್ತ್ರೀಯರೊಂದಿಗೆ ಶಿಶುವನ್ನು ಅರ್ಚಿಸಲು ಕುಂಕುಮ, ಚ೦ದನ, ಅರಿಶಿನ, ಹಣ್ಣುಕಾಯಿಗಳೊಂದಿಗೆ ಬಂದಳು.

ವಿಷಯ ತಿಳಿದು ಒಂದು ದಿನದ ಬಳಿಕ, ಅದ್ವೈತಾಚಾರ್ಯರ ಪತ್ನಿ ಸೀತಾದೇವಿ ಮಗುವನ್ನು ನೋಡಲು ಬಳೆ, ಕಡಗ, ಕಾಲಂದುಗೆ, ಹುಲಿಯುಗುರುಗಳ ಆಭರಣಗಳು, ಸೊಗಸಾದ ಸೀರೆಗಳು, ಮಕ್ಕಳ ವಸ್ತ್ರಗಳು ಮತ್ತು ಇತರ ಅನೇಕ ರತ್ನಾಭರಣಗಳೊಂದಿಗೆ ಬ೦ದಳು. ಮೈಬಣ್ಣವೊ೦ದನ್ನು ಹೊರತುಪಡಿಸಿ ಇನ್ನೆಲ್ಲಾ ರೀತಿಗಳಲ್ಲೂ ಶ್ರೀಕೃಷ್ಣನನ್ನೇ ಹೋಲುತ್ತಿದ್ದ ಆ ಮುದ್ದು ಮಗುವನ್ನು ನೋಡಿ ಅವಳು ಆಶ್ಚರ್ಯ ಚಕಿತಳಾದಳು. ಮಗುವಿನ ಶಿರಸ್ಸಿನ ಮೇಲೆ ಗರಿಕೆಯನ್ನೂ ಭತ್ತವನ್ನೂ ಇಟ್ಟು ದೀಘಾ೯ಯುಷಿಯಾಗುವಂತೆ ಹರಸಿದಳು. ಮಗು ನೀಮ ವೃಕ್ಷದ (ಬೇವಿನ ಮರದ) ಕೆಳಗೆ ಜನಿಸಿತ್ತು. ಮಗುವಿಗೆ ನಿಮಾ ಎ೦ದು ಹೆಸರನ್ನಿಟ್ಟರು.

ಮಗುವು ಹುಟ್ಟಿದ ಸಮಯವನ್ನು ಗಣನೆಗೆ ತೆಗೆದುಕೊಂಡು ಲೆಕ್ಕಾಚಾರ ಮಾಡಿದ ನೀಲಾಂಬರ ಚಕ್ರವರ್ತಿಗಳು ಮಗುವಿನ ಜಾತಕ ಬರೆದರು. ಮುಂದೆ, ಆ ಮಗು ಜನರನ್ನು ಸ೦ಸಾರ ಕಲ್ಮಶದಿಂದ ಪಾರು ಮಾಡುವ ಒಬ್ಬ ಮಹಾನ್ ವ್ಯಕ್ತಿಯಾಗುವನೆ೦ದು ಜಗನ್ನಾಥ ಮಿಶ್ರರಿಗೆ ಗುಟ್ಟಾಗಿ ಹೇಳಿದರು.

ಶ್ರೀಚೈತನ್ಯರ ಬಾಲ ಲೀಲೆಗಳು ಶ್ರೀ ಕೃಷ್ಣನ ಬಾಲಲೀಲೆಗಳ೦ತೆಯೇ ಅದ್ಭುತವೂ, ಮನೋಹರವೂ ಆಗಿದ್ದವು. ಪ್ರಭುವು ಮೊದಲ ಬಾರಿ ಮಗುಚಿಕೊಳ್ಳಲಾರಂಭಿಸಿದಾಗ ದಿವ್ಯ ಚಿಹ್ನೆಗಳಿದ್ದ ತನ್ನ ಚರಣಾರವಿಂದಗಳನ್ನು ತಾಯ್ತಂದೆಯರಿಗೆ ತೋರಿದನು. ಅವನು ನಡೆಯಲು ಯತ್ನಿಸಿದಾಗ, ಮೂಡುತ್ತಿದ್ದ ಹೆಜ್ಜೆಗುರುತುಗಳಲ್ಲಿ ಧ್ವಜ, ವಜ್ರ, ಶಂಖ, ಚಕ್ರ, ಮತ್ಸ್ಯ ಮೊದಲಾದ ವಿಷ್ಣುವಿನ ಚಿಹ್ನೆಗಳು ಕಾಣುತ್ತಿದ್ದವು! ಜಗನ್ನಾಥಮಿಶ್ರರಿಗೂ ಶಚೀಮಾತೆಗೂ ಇವನ್ನು ನೋಡಿ ಪರಮಾಶ್ಚರ್ಯವಾಯಿತು.

ಇಂಥ ಹೆಜ್ಜೆಗುರುತುಗಳು ಎಲ್ಲಿಂದ ಬರುತ್ತಿದ್ದವೆಂದು ಅವರಿಗೆ ಅರ್ಥವಾಗಲಿಲ್ಲ. ಒಮ್ಮೆ ಮಗುವು ಅಳಲಾರಂಭಿಸಲು ತಾಯಿಯು ಅವನನ್ನೆತ್ತಿಕೊಂಡು ಮೊಲೆಯೂಡಿಸಲು ಮೊದಲು ಮಾಡಿದಳು. ಆಗ ಅವನ ಪಾದಗಳಲ್ಲೂ ಆ ದಿವ್ಯ ಚಿಹ್ನೆಗಳಿದ್ದುದನ್ನು ನೋಡಿ ತನ್ನ ಪತಿಗೂ ತೋರಿಸಿದಳು. ಆನ೦ದಾಶ್ಚರ್ಯಗಳಿಗೊಳಗಾದ ಜಗನ್ನಾಥರು ನೀಲಾಂಬರರನ್ನು ರಹಸ್ಯವಾಗಿ ಇದರ ಬಗ್ಗೆ ವಿಚಾರಿಸಿದರು. ಅದಕ್ಕವರು, ಇದರ ಬಗ್ಗೆ ನಾನು ಮೊದಲೇ ಲೆಕ್ಕಾಚಾರ ಮಾಡಿ ಅವನ ಜಾತಕವನ್ನು ಬರೆದಿದ್ದೇನೆ.

ಒಬ್ಬ ಮಹಾಪುರುಷನನ್ನು ಸೂಚಿಸುವ ಮೂವತ್ತೆರಡು ಲಕ್ಷಣಗಳು ಈ ಮಗುವಿನ ದೇಹದಲ್ಲಿವೆ! ಶ್ರೀಮನ್ನಾರಾಯಣನ ಎಲ್ಲಾ ಚಿಹ್ನೆಗಳೂ ಇವನ ಹಸ್ತ ಪಾದಗಳಲ್ಲಿವೆ. ಖಂಡಿತವಾಗಿಯೂ ಇವನು ಮೂರು ಲೋಕಗಳನ್ನೂ ಉದ್ಧರಿಸುವನು. ವೈಷ್ಣವ ಧರ್ಮವನ್ನು ಪ್ರಚಾರ ಮಾಡಿ ತಾಯ್ತಂದೆಯರಿಬ್ಬರ ಕುಲಗಳನ್ನೂ ಉದ್ಧರಿಸುವನು. ಇಡೀ ವಿಶ್ವದ ಧಾರಣೆ, ಪೋಷಣೆಗಳನ್ನು ಇವನು ಮು೦ದೆ ಮಾಡುವವನಾದ್ದರಿ೦ದ ಇವನನ್ನು ವಿಶ್ವಂಭರನೆಂದು ಕರೆಯಬೇಕು.

ಇಂದು ಶುಭದಿನವಾದ್ದರಿಂದ ಮಗುವಿನ ನಾಮಕರಣವನ್ನು ಏರ್ಪಡಿಸೋಣ. ಬ್ರಾಹ್ಮಣರನ್ನು ಕರೆಸಿ ಭೋಜನ ಮಾಡಿಸೋಣ”, ಎಂದು ನಗುತ್ತಾ ಹೇಳಿದರು. ಅಂತೆಯೇ ಜಗನ್ನಾಥರು ಮಗುವಿನ ನಾಮಕರಣ ಸಮಾರ೦ಭವನ್ನೇರ್ಪಡಿಸಿ ವಿಶ್ವಂಭರನೆಂದು ಹೆಸರಿಟ್ಟರು.

ಒಂದು ದಿನ, ಮಗುವು ಅಂಬೆಗಾಲಿಟ್ಟು ಬರುತ್ತಿದ್ದಾಗ, ಒಂದು ಹಾವು ಎದುರಾಯಿತು! ಕುತೂಹಲಗೊಂಡ ಮಗು ಹಾವನ್ನು ಕೈಯಲ್ಲಿ ಹಿಡಿದುಕೊಂಡಿತು! ಆ ಹಾವಾದರೋ ಮಗುವಿನ ಸುತ್ತಲೂ ಸುತ್ತಿಕೊಂಡಿತು! ಮಗು ಆ ಹಾವಿನ ಮೇಲೆಯೇ ಮಲಗಿಕೊ೦ಡಿತು! ಸ್ವಲ್ಪ ಹೊತ್ತಿನ ಬಳಿಕ ಹಾವು ಹೊರಟು ಹೋಯಿತು. ಅನಂತ ಶೇಷನೇ, ಪ್ರಭುವಿನ ಸೇವೆಗಾಗಿ ಹಾವಿನ ರೂಪದಲ್ಲಿ ಬಂದಿದ್ದ!

ಮಗುವಿನಲ್ಲಿ ಒಂದು ವಿಚಿತ್ರ ವರ್ತನೆ ಕಂಡುಬರುತ್ತಿತ್ತು. ಅದು ಅಳುತ್ತಿದ್ದಾಗ ಹೆಂಗಸರು “ಹರೇ ಕೃಷ್ಣ ಹರೇ ಕೃಷ್ಣ’ ಎ೦ದು ಹಾಡಿದರೆ ಅಳುವುದನ್ನು ನಿಲ್ಲಿಸಿಬಿಡುತ್ತಿತ್ತು. ಅವರು ಹಾಗೆ ಹಾಡುವುದನ್ನು ನಿಲ್ಲಿಸಿದೊಡನೆಯೇ ಪುನಃ ಅಳಲು ಮೊದಲು ಮಾಡುತ್ತಿತ್ತು! ಹೆ೦ಗಸರಿಗೆ ಇದೊಂದು ತಮಾಷೆಯಾಗಿ “ಹರೇಕೃಷ್ಣ’ ಎಂದು ಹಾಡುವುದು, ನಿಲ್ಲಿಸುವುದು ಮಾಡಿ ಮಗುವನ್ನು ಅಳಿಸಿ ನಗಿಸುತ್ತಿದ್ದರು.

ಒಂದು ದಿನ ಪ್ರಭುವು ಇತರ ಪುಟ್ಟ ಮಕ್ಕಳೊಂದಿಗೆ ಆಡುತ್ತಿದ್ದಾಗ, ತಾಯಿ ಶಚಿಯು ಒಂದು ತಟ್ಟೆಯ ತು೦ಬಾ ಅನ್ನವನ್ನೂ ಸಿಹಿ ತಿಂಡಿಗಳನ್ನೂ ತಂದಿಟ್ಟು ತಿನ್ನಲು ಹೇಳಿದಳು. ಅವಳು ಮನೆಗೆಲಸದಲ್ಲಿ ನಿರತಳಾಗಲು ಮಗುವು ಮಣ್ಣನ್ನು ತಿನ್ನತೊಡಗಿತು! ಅದನ್ನು ನೋಡಿದ ಶಚಿ ಓಡಿಬಂದು ಮಣ್ಣನ್ನು ಬಿಸಾಡುವಂತೆ ಮಾಡಿ ಕೋಪದಿ೦ದ ಗದರಿದಳು.

”ಏಕೆ ಕೋಪಗೊಳ್ಳುವೆ? ನೀನಾಗಲೇ ನನಗೆ ತಿನ್ನಲು ಮಣ್ಣನ್ನು ಕೊಟ್ಟಿರುವೆ. ನನ್ನದೇನು ತಪ್ಪು?” ” ಅನ್ನವಾಗಲಿ ತಿ೦ಡಿಗಳಾಗಲೀ ಮಣ್ಣಿನ ರೂಪಾಂತರವಲ್ಲವೆ? ಇವಕ್ಕೂ ಮಣ್ಣಿಗೂ ಏನು ವ್ಯತ್ಯಾಸ?” ಎ೦ದು ಮಗು ಕೇಳಿತು.

ಮಗು ಹೀಗೆ ಮಾತನಾಡುವುದನ್ನು ಕೇಳಿ ಶುಚಿ ಆಶ್ಚರ್ಯಗೊಂಡಳು. “ಯಾರು ನಿನಗೆ ಮಣ್ಣು ತಿನ್ನುವುದು ಸರಿ ಎ೦ದು ಹೇಳಿಕೊಟ್ಟಿದ್ದು?” ಅವಳು ಹೇಳಿದಳು, “ಮಗು, ಮಣ್ಣಿನಿಂದ ರೂಪಾಂತರವಾದ ಅನ್ನವನ್ನು ತಿಂದರೆ ದೇಹಕ್ಕೆ ಪುಷ್ಟಿಯಾಗುತ್ತದೆ. ಅದೇ ಬರಿಯ ಮಣ್ಣನ್ನು ತಿಂದರೆ ದೇಹಕ್ಕೆ ರೋಗ ಬರುತ್ತದೆ ಹಾಗೂ ಅದು ಕ್ಷಯಿಸುತ್ತದೆ. ಮಣ್ಣಿನ ರೂಪಾಂತರವಾದ ಮಡಕೆಯಲ್ಲಿ ನೀರನ್ನು ತರಬಹುದು. ಅದೇ ನೀರನ್ನು ಮಣ್ಣಿನ ಮೇಲೆಯೇ ಸುರಿದರೆ ಅದು ಬತ್ತಿ ಹೋಗುತ್ತದೆ.”

”ಈ ಜ್ಞಾನವನ್ನೇಕೆ ಇಷ್ಟು ದಿನ ಮುಚ್ಚಿಟ್ಟಿದ್ದೆ? ಈಗ ನನಗೆಲ್ಲವೂ ತಿಳಿಯಿತು. ಇನ್ನು ಮುಂದೆ ಮಣ್ಣು ತಿನ್ನುವುದಿಲ್ಲ. ಹಸಿವಾದಾಗ ನಿನ್ನ ಎದೆ ಹಾಲನ್ನೇ ಕುಡಿಯುವೆ’ ಎನ್ನುತ್ತಾ ಮಗುವು ತಾಯಿಯ ತೊಡೆಯನ್ನೇರಿ ಅವಳ ಎದೆ ಹಾಲನ್ನು ಕುಡಿಯಲಾರಂಭಿಸಿತು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi