– ಪತಿತಪಾವನ ದಾಸ
ಡಿಸೆಂಬರ್ 11, 2025
ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ. ಸೋಷಿಯಲ್ ಮೀಡಿಯಾ ಕಂಪನಿಗಳು ಹೆಚ್ಚಿನ ಜಾಗರೂಕತೆ ವಹಿಸಿ ಮಕ್ಕಳ ಅಕೌಂಟ್ ಗಳನ್ನು ನಿಷ್ಕ್ರಿಯಗೊಳಿಸಲು ಸರ್ಕಾರ ಸೂಚಿಸಿದೆ. ತಪ್ಪಿದಲ್ಲಿ ಆ ಕಂಪನಿಗಳು ಭಾರಿ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ.

ಈ ತರಹದ ಕ್ರಮ ಜರುಗಿಸುವುದರಲ್ಲಿ ವಿಶ್ವದಲ್ಲಿಯೇ ಮೊದಲನೆಯ ದೇಶ ತಾನು ಎಂಬುವುದು ಹೆಮ್ಮೆಯ ವಿಷಯ ಎಂದು ಆಸ್ಟ್ರೇಲಿಯಾ ಹೇಳಿದೆ.
ಯುಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ಸ್ನಾಪ್ ಚಾಟ್ – ಇವುಗಳೇ ನಿಷಿದ್ಧವಾದ ಪ್ರಮುಖ ಸಾಮಾಜಿಕ ಜಾಲತಾಣಗಳು. ಯಾಕೆ ಆ ದೇಶದಲ್ಲಿ ಇದು ನಿಷೇಧ ಮಾಡಲಾಗಿದೆ ಎಂಬುದು ಭಾರತ ಕೂಡ ಯೋಚಿಸಬೇಕಾದ ಸಂಗತಿ. ಇಲ್ಲಿ ಕೂಡ ಬ್ಯಾನ್ ಮಾಡಬೇಕೆ? ಮಾಡದಿದ್ದರೆ ಏನಾಗುತ್ತದೆ? ಈಗಾಗಲೇ ಏನೆಲ್ಲಾ ಜರಗುತ್ತಿದೆ? ಯೋಚಿಸಿ ನೋಡಿ.
ಸೋಷಿಯಲ್ ಮೀಡಿಯಾದಿಂದ ಆಗುವ ಅಪಾಯವೇನು? :
ಕಿರಿಯರ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಅಧ್ಯಯನಗಳನ್ನು ಮಾಡಲಾಗಿದೆ. ಅದರ ಪ್ರಮುಖ ಅಂಶಗಳೆಂದರೆ,
1. ಆತಂಕ ಮತ್ತು ಖಿನ್ನತೆ : ಇತರರು ಪೋಸ್ಟ್ ಮಾಡಿದ ವಿಷಯವನ್ನು ಸುಮ್ಮನೆ ನೋಡಿ ನೋಡಿಯೇ ಜೀವನದಲ್ಲಿ ಅತೃಪ್ತಿ, ಒಂಟಿತನದ ಭಾವನೆಗಳ ಪ್ರವೇಶ.
2. ಕಡಮೆ ಸ್ವಾಭಿಮಾನ : ಇತರರು ಹಾಕಿದ “ಪರ್ಫೆಕ್ಟ್” ಚಿತ್ರಗಳನ್ನು ನೋಡಿ ನೋಡಿ “ನನ್ನ ದೇಹ ಇಷ್ಟು ಸುಂದರ ಇಲ್ಲವಲ್ಲ” ಎಂಬ ಹತಾಶೆ, ಅವರಂತೆಯೇ ಆಗಲು ಪ್ರಯತ್ನಿಸುತ್ತ ಅಸ್ತವ್ಯಸ್ತ ಆಹಾರ ಪದ್ಧತಿಯ, ಜೀವನಕ್ರಮದ ಸೃಷ್ಟಿ.
3. ಫೋಮೋ : ಫಿಯರ್ ಆಫ್ ಮಿಸ್ಸಿಂಗ್ ಔಟ್, ಬೇರೆಯವರು ಮಾಡುತ್ತಿರುವ ಮಜಾದಲ್ಲಿ ನಾನೂ ಭಾಗಿಯಾಗಬೇಕು, ಇಲ್ಲದಿದ್ದರೆ ಜೀವನದಲ್ಲಿ ಏನೋ ಕಳೆದುಕೊಳ್ಳುವೆ ಎಂಬ ಭಾವನೆ. ಅವರ ಹಾಗೆ ನಾನೂ ರಮಿಸಬೇಕು ಎಂಬ ಒತ್ತಡ.
4. ವ್ಯಸನಕಾರಿ, ಅನಾರೋಗ್ಯ : ಮೊಬೈಲ್ ಹಿಡಿದುಕೊಂಡಿರುವುದೇ ಒಂದು ತರಹದ ವ್ಯಸನ. ಇನ್ನು ಅದರಲ್ಲಿ ಏನೇನೋ ಕೆಟ್ಟ ಲೈಂಗಿಕ ಚಿತ್ರಗಳನ್ನು ನೋಡಿಕೊಂಡು ಏನೇನೋ ಅನಾಹುತ ಮಾಡಿಕೊಂಡು, ಜೀವನ ಹಾಳುಮಾಡಿಕೊಂಡಿರುವ, ಆರೋಗ್ಯ ಕೆಡಿಸಿಕೊಂಡಿರುವ
ಹುಡುಗ-ಹುಡುಗಿಯರ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ.
5. ಸೈಬರ್ ಕಿರುಕುಳದಿಂದ ಆತ್ಮಹತ್ಯೆಯ ಯೋಚನೆ : ಅನಾಮಿಕ ವ್ಯಕ್ತಿಗಳಿಂದ ಪೀಡೆ, ಹಿಂಸೆ ಅನುಭವಿಸುವುದಕ್ಕೆ ಸೋಷಿಯಲ್ ಮೀಡಿಯಾ ಹೇಳಿ ಮಾಡಿಸಿದಂತಹ ಸ್ಥಳ. ಇದರಿಂದ ಶೋಷಿತರಿಗೆ ತೀವ್ರ ಮಾನಸಿಕ, ಭಾವನಾತ್ಮಕ ಧಕ್ಕೆ ಉಂಟಾಗುತ್ತದೆ. ತಮ್ಮ ಜೀವಕ್ಕೆ ಹಾನಿ
ಉಂಟು ಮಾಡಿಕೊಳ್ಳುವ ಅಪಾಯ ಕೂಡ ಬರುತ್ತದೆ.
6. ನಿದ್ದೆಗೆಡುವುದು : ರಾತ್ರಿ ಮೊಬೈಲ್, ಲ್ಯಾಪ್ಟಾಪ್ ಬಳಕೆಯಿಂದ ಆ ಉಪಕರಣಗಳಿಂದ ಹೊಮ್ಮುವ ಕಿರಣಗಳಿಂದ, ಬೆಳಕಿನಿಂದ, ಮಾನಸಿಕ ಪ್ರಚೋದನೆಯಿಂದ ನಿದ್ರೆ ಹಾಳಾಗುತ್ತದೆ, ಸರಿಯಾದ ಸಮಯಕ್ಕೆ ನಿದ್ದೆ ಬರುವುದಿಲ್ಲ. ಇದರಿಂದ ಮಾರನೆಯ ದಿನದ ಕೆಲಸದಲ್ಲಿ
ಏರುಪೇರು, ಅನಾರೋಗ್ಯ.
7. ಏಕಾಗ್ರತೆಗೆ ಮತ್ತು ಗಮನಕ್ಕೆ ಭಂಗ : ಸತತ ʼನೋಟಿಫಿಕೇಶನ್ʼ ಸಂದೇಶಗಳಿಂದ ಗಮನದ ವಿಭಜನೆಯಾಗುತ್ತದೆ. ಎರಡು ಮೂರು ಕೆಲಸಗಳನ್ನು ಒಟ್ಟಿಗೆ ಮಾಡಲು ಹೋಗಿ ಯಾವುದೇ ಕೆಲಸ, ಅಧ್ಯಯನದಲ್ಲಿ ಮನಸ್ಸು ನಿಲ್ಲುವುದಿಲ್ಲ.
8. ನೆನಪಿನ ಶಕ್ತಿಯ ಹಾನಿ : ಯಾವುದೇ ಕಡೆ ಹೋದರೂ, ಅಲ್ಲಿನ ಪರಿಸರವನ್ನು, ಅನುಭವವನ್ನು ಆನಂದಿಸುವ ಬದಲು, ಫೋಟೋ ತೆಗೆಯುವ, “ ರೀಲ್ಸ್” ಮಾಡುವ ಹುಚ್ಚು. ಇದರಿಂದ ಆ ಸ್ಥಳದ ನಿಜವಾದ ನೆನಪುಗಳೇ ಇಲ್ಲದಂತಾಗುವುದು.
9. ತಪ್ಪುಮಾಹಿತಿ ಗ್ರಹಿಕೆ ಮತ್ತು ವಂಚನೆ : ಶ್ರಮವಿಲ್ಲದೆ ವೇಗವಾಗಿ ಎಲ್ಲೆಡೆ ಮಾಹಿತಿ ಹಂಚುವ ಸೌಲಭ್ಯದಿಂದ ನಕಲಿ ಸಮಾಚಾರ, ಪಿತೂರಿ ಸಿದ್ಧಾಂತಗಳು ಕೂಡ ವ್ಯಾಪಕವಾಗಿ ಹರಡುವ ಭಯ ಇದೆ. ಹಣಕಾಸಿನ ವಂಚನೆ ಆಗುವ ಸಂಭವವೂ ಇದೆ.
ದಿಟವಾಗಿ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳನ್ನು “ಇಬ್ಬಾಯಿ ಖಡ್ಗ” ಎಂದು ಕರೆಯಬಹುದು. ಆದರೂ ಇದರ ಸಕಾರಾತ್ಮಕ ಉಪಯೋಗಗಳ ಪ್ರತಿಪಾದಕರು ಎಷ್ಟೇ ಪ್ರಯೋಜನ ಎಣಿಸಿದರೂ, ನಕಾರಾತ್ಮಕ ಅಪಾಯಗಳೇ ಹೆಚ್ಚು ಎನ್ನಬಹುದು. ಉಪಯೋಗಕ್ಕಿಂತ ಹಾನಿಯೇ ಜಾಸ್ತಿ. ಆದ್ದರಿಂದ ಆಸ್ಟ್ರೇಲಿಯಾ ಮಕ್ಕಳಿಗಾಗಿ ಇದನ್ನು ನಿಷೇಧಿಸಿರುವುದು ಸರಿಯಾದುದೇ. ಭಾರತ ಮತ್ತು ಇತರ ದೇಶಗಳು ಕೂಡ ಹೀಗೆ ಮಾಡಿದಲ್ಲಿ ಸಮಾಜಕ್ಕೆ ಒಳಿತಾಗಬೇಕು.
ಆದರೆ ನಿಷೇಧದ ಜೊತೆಗೆ ವಿಧಿ ಕೂಡ ಅಗತ್ಯವಾಗುತ್ತದೆ. ಒಂದು ಮಗುವಿಗೆ “ಹಾಗೆ ಮಾಡಬೇಡ” ಎಂದು ಗದರಿಸಿದರೆ ಸಾಲದು. “ಹೀಗೆ ಮಾಡು” ಎಂದೂ ಹೇಳಬೇಕಾಗುತ್ತದೆ. ಚೇತನಾತ್ಮಕ್ಕೆ ಚಟುವಟಿಕೆ ಅಗತ್ಯ. ಏಕೆಂದರೆ ಅದು ಕಲ್ಲಿನ ಹಾಗೆ ಅಚೇತನ ಅಲ್ಲ.
ಆತ್ಮಕ್ಕೆ ನಿಜವಾಗಿಯೂ ಬೇಕಾಗಿರುವುದು ಆಧ್ಯಾತ್ಮಿಕ ಚಟುವಟಿಕೆಯಿಂದ ಸಿಗುವ ಆನಂದ. ಆದ್ದರಿಂದ ಮಕ್ಕಳನ್ನು ಸಾಂಪ್ರದಾಯಿಕ, ಧಾರ್ಮಿಕ, ಆಧ್ಯಾತ್ಮಿಕ ವಲಯಗಳ ಪರಿಚಯ ಮಾಡಿಸಬೇಕು. ಮೊಬೈಲ್ ಮಹಿಮೆಯಿಂದ ಧಾರ್ಮಿಕದ ಮಾತಿರಲಿ, ಸಾಂಸ್ಕೃತಿಕ ಚಟುವಟಿಕೆಗಳೂ ಈಗ ಪ್ರಾಯಶಃ ಮಾಯವಾಗಿಬಿಟ್ಟಿವೆ. ಕಡೆಗೆ ಹೊರಗಡೆ ಹೋಗಿ ಮಕ್ಕಳು ಆಡಿಕೊಳ್ಳುವುದೂ ಕಮ್ಮಿಯಾಗಿಬಿಟ್ಟಿದೆ.
ಈ ನಿಟ್ಟಿನಲ್ಲಿ ಅಗತ್ಯ ಧಾರ್ಮಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಸಲು ಪೋಷಕರು ಮತ್ತು ಸಮುದಾಯ ನೇತಾರರು ಗಮನ ಹರಿಸಬೇಕಾದ ಕೆಲ ಅಂಶಗಳು ಇಂತಿವೆ :
1. ಮನೆಯಲ್ಲಿ ದೈನಂದಿನದ ಅಭ್ಯಾಸ : ಬೆಳಗ್ಗೆ ಸಂಜೆ ಸಣ್ಣ ಪ್ರಾರ್ಥನೆ ಹೇಳುವುದು. ಸರಳ ಕೀರ್ತನೆ, ಭಜನೆ ಹಾಡುವುದು. ಎಲ್ಲರೂ ಜೊತೆ ಸೇರಿ ಭಗವದ್ಗೀತೆಯ ಒಂದು ಶ್ಲೋಕ ಹೇಳುವುದು. ಮನೆಯಲ್ಲಿ ಚಿಕ್ಕ ದೇವರ ಮಂಟಪ ಇಡುವುದು.
2. ದೇವಸ್ಥಾನದ ನಂಟು : ವಾರಕ್ಕೆ ಒಮ್ಮೆಯಾದರೂ ದೇವಸ್ಥಾನಕ್ಕೆ ಹೋಗುವುದು. ಮಕ್ಕಳನ್ನು ಅವರ ವಯಸ್ಸಿಗೆ ಅನುಗುಣವಾಗಿ ಸೇವೆಗಳಲ್ಲಿ ತೊಡಗಿಸುವುದು – ಹೂ ಕಟ್ಟುವುದು, ಪಾದರಕ್ಷೆ ಜೊಡಿಸುವುದು, ಪ್ರಸಾದ ವಿತರಣೆ, ಸ್ವಚ್ಛತಾ ಕಾರ್ಯ ಇತ್ಯಾದಿ.
3. ಸಾಂಸ್ಕೃತಿಕ ಚಟುವಟಿಕೆ : ಹಬ್ಬಗಳ ಅರ್ಥ ತಿಳಿದು ಅವುಗಳನ್ನು ಆಚರಿಸುವುದು – ರಾಮ ನವಮಿ, ಜನ್ಮಾಷ್ಟಮಿ, ಗೋವರ್ಧನ ಪೂಜೆ ಇತ್ಯಾದಿ. ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕ ಕಲಿತು ಪೌರಾಣಿಕ ಕಥೆಗಳನ್ನು ಪ್ರದರ್ಶಿಸುವುದು.
4. ಶಾಸ್ತ್ರ ಪಾರಾಯಣ : ಶ್ಲೋಕಗಳನ್ನು ಅರ್ಥಸಹಿತ ಬಾಯಿಪಾಠ ಮಾಡುವುದು. ಮನೆ, ಶಾಲೆ ಅಥವಾ ಸಮುದಾಯದಲ್ಲಿ ಕಥಾವಾಚನ ಗುಂಪುಗಳು. ಸಚಿತ್ರ ರಾಮಾಯಣ, ಭಾಗವತ ಇತ್ಯಾದಿ ಓದುವುದು.
5. ಮೌಲ್ಯಾಧಾರಿತ ಶಿಕ್ಷಣ : ಭಕ್ತಿಪ್ರಧಾನ ಕಥಾನಕಗಳ ಮೂಲಕ ಸತ್ಯ, ದಯೆ, ಶೌಚ, ಶಿಸ್ತು, ದಾನ, ಇತ್ಯಾದಿಗಳ ಮಹತ್ತ್ವ ಹೇಳಿ ಕೊಡುವುದು.
6. ಸಂಸ್ಕೃತ – ಸಂಸ್ಕೃತಿ ಕಲಿಕೆ : ಸಂಸ್ಕೃತ ವ್ಯಾಕರಣ, ಸಾಹಿತ್ಯ ಕಲಿಯುವುದು. ಪವಿತ್ರ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುವುದು. ಸಾಂಪ್ರದಾಯಿಕ ಅಡುಗೆ, ರಂಗೋಲಿ, ಹೊಲಿಗೆ, ಸರಳ ಪೂಜೆ, ಇತ್ಯಾದಿಗಳನ್ನು ಕಲಿಯುವುದು.
ಇಸ್ಕಾನ್ ಬೆಂಗಳೂರು ದೇವಸ್ಥಾನದಂತಹ ಸಂಸ್ಥೆಗಳು ಮಕ್ಕಳ ಶಿಕ್ಷಣಕ್ಕಾಗಿ ನಿಯಮಿತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಬೇಸಿಗೆ ಶಿಬಿರ, ಚಳಿಗಾಲದ ಬಿಡುವಿನ ಶಿಬಿರ, ಗೀತಾ ಪರೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಇಸ್ಕಾನ್ ಹೊಂದಿದೆ.

ಆದರೆ ದೇವಸ್ಥಾನಗಳೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಮಾಜವನ್ನು ಸುಧಾರಿಸಬೇಕು ಎಂಬುದು ಸಾಧ್ಯವಾಗದ ಮಾತು. ಏಕೆಂದರೆ ತಾಯಿಯೇ ಮೊದಲ ಗುರು. ಮನೆಯೇ ಮೊದಲ ಶಾಲೆ.
ಈಗ ಕೆಲ ಗಣ್ಯರಿಂದ ಶಾಲೆಗಳಲ್ಲಿ ಭಗವದ್ಗೀತೆಯ ಆಯ್ದ ಭಾಗಗಳನ್ನು ಪಾಠ ಮಾಡಬೇಕೆಂದು ಬಂದ ಕರೆ ಕೂಡ ಒಳ್ಳೆಯದೇ. “ದೇರ್ ಆಯೆ, ದುರುಸ್ತ ಆಯೆ” ಎಂಬ ಹಿಂದಿ ಭಾಷೆಯ ಗಾದೆ ಹೇಳುವ ಹಾಗೆ, ತಡವಾದರೂ ಪರವಾಗಿಲ್ಲ, ಈಗಲಾದರೂ ಸರಿ ದಾರಿ ಹಿಡಿಯೋಣ. ಹರೇ ಕೃಷ್ಣ !






Leave a Reply