ಜ್ಞಾತೋಽಹಂ ಭವತಾ ತ್ವದ್ಯ ದುರ್ವಿಜ್ಞೇಯೋಽಪಿ ದೇಹಿನಾಮ್ ।
ಯನ್ಮಾಂ ತ್ವಂ ಮನ್ಯಸೇಽಯುಕ್ತಂ ಭೂತೇಂದ್ರಿಯಗುಣಾತ್ಮಭಿಃ ।।
ಬದ್ಧಾತ್ಮರಿಗೆ ನಾನು ಸುಲಭವಾಗಿ ವೇದ್ಯನಲ್ಲದಿದ್ದರೂ ನೀನು ಈ ದಿನ ನನ್ನನ್ನು ತಿಳಿದಿರುತ್ತೀಯೆ. ಏಕೆಂದರೆ ನನ್ನ ವ್ಯಕ್ತಿತ್ವವು ಯಾವುದೇ ಭೌತಿಕ ವಸ್ತುಗಳ ಸೇರಿಕೆಯಿಂದ ಆದುದಲ್ಲ ಮತ್ತು ಮುಖ್ಯವಾಗಿ ಸ್ಥೂಲ ಪಂಚ ಭೂತಗಳಿಂದ ಮತ್ತು ಸೂಕ್ಷ್ಮ ವಿಷಯ ತ್ರಯದಿಂದ ಆಗಿಲ್ಲ.
– ಭಾಗವತ, 3.9.36
ದೇವೋತ್ತಮನನ್ನು ಅರಿಯುವ ಒಂದು ರಹಸ್ಯವನ್ನು ಈ ಶ್ಲೋಕದಲ್ಲಿ ಕೊಡಲಾಗಿದೆ. ಭಗವಂತ ಹೇಳುತ್ತಿದ್ದಾನೆ – ಮಾಯಾ ಶಕ್ತಿಯ ಪ್ರಭಾವದಿಂದಾಗಿ ಬದ್ಧಾತ್ಮರಿಗೆ ನಾನು ಸುಲಭವಾಗಿ ವೇದ್ಯನಲ್ಲ. ಭಕ್ತಿಸೇವೆಯನ್ನು ಯಾರಾದರೂ ಅನುಸರಿಸಿದರೆ, ಆಗ ಭಗವಂತನು ಕ್ರಮೇಣ ತನ್ನನ್ನು ತಾನು ಪ್ರಕಾಶಪಡಿಸುತ್ತಾನೆ. ಪಂಚಭೂತಗಳು ಮತ್ತು ಮನಸ್ಸು, ಬುದ್ಧಿ ಮತ್ತು ಅಹಂ ಎಂಬ ಮೂರು ಸೂಕ್ಷ್ಮ ವಿಷಯಗಳಿಂದ ಮಾಡಿದ ಲೌಕಿಕ ದೇಹ ನಮಗಿದೆ.

ಕೃಷ್ಣನ ಬಹಿರಂಗ ಶಕ್ತಿಯಲ್ಲಿ ಈ ಎಂಟು ಅಂಶಗಳಿವೆ. ಆದರೆ ಈ ಯಾವುದೇ ಅಂಶಗಳಿಂದ ಕೃಷ್ಣ ಸ್ವರೂಪ ರೂಪುಗೊಂಡಿಲ್ಲ. ಕೃಷ್ಣನು ರಾಮ, ನರಸಿಂಹ ಮುಂತಾದ ರೂಪದಲ್ಲಿ ಆವಿರ್ಭವಿಸಿದಾಗ ಅವನು ತನ್ನ ವ್ಯಕ್ತಿತ್ವವನ್ನು ಪ್ರಕಟಿಸುತ್ತಾನೆ. ಎಲ್ಲ ರೂಪಗಳು ಲೌಕಿಕವಾಗಿ ಕಂಡರೂ ಅವು ಅಲೌಕಿಕ. 5000 ವರ್ಷಗಳ ಹಿಂದೆ ಕೃಷ್ಣನು ತನ್ನ ಮೂಲ ರೂಪದಲ್ಲಿ ಆವಿರ್ಭವಿಸಿದಾಗ ಅವನ ರೂಪವು ಐಹಿಕ ಎಂದು ಅನೇಕ ಜನರು ಭಾವಿಸಿದ್ದರು. ಕೃಷ್ಣನ ರೂಪವು ಸಂಪೂರ್ಣವಾಗಿ ಅಲೌಕಿಕ ಎನ್ನುವುದು ಕೆಲವೇ ಜನರಿಗೆ ತಿಳಿದಿತ್ತು. ಕೃಷ್ಣನು ಇದನ್ನು ಭಗವದ್ಗೀತೆಯಲ್ಲಿ ಹೇಳಿದ್ದಾನೆ – ಅವಜಾನಂತಿ ಮಾಂ ಮೂಢಾ – “ಕೆಲವು ಮೂರ್ಖರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನಾನು ಇಳಿದು ಬಂದಾಗ – ಮಾನುಷೀಂ ತನುಂ ಆಶ್ರಿತಂ – ನನ್ನ ರೂಪವು ಮಾನವ ರೂಪದಂತೆ ಕಾಣುತ್ತದೆ, ಆದರೆ ಅದು ಮನುಷ್ಯ ರೂಪವಲ್ಲ.” ಅಂತಹ ರೂಪದಲ್ಲಿ ಕೃಷ್ಣನು ಮಾಡಿದ ಕಾರ್ಯಗಳನ್ನು ಯಾವ ಮನುಷ್ಯನಿಗೂ ಮಾಡುವುದು ಸಾಧ್ಯವಿಲ್ಲ.
ಭಗವದ್ಗೀತೆಯಲ್ಲಿ ಕೃಷ್ಣನು ಅನೇಕ ನಕಾರಾತ್ಮಕ ವಿಧದಲ್ಲಿ ಆತ್ಮವನ್ನು ವಿವರಿಸುತ್ತಾನೆ, ಆತ್ಮವು ಸಂಪೂರ್ಣವಾಗಿ ಲೌಕಿಕ ರಹಿತವಾದುದು ಎಂದು ಹೇಳುವುದೇ ಇಂತಹ ನಕಾರಾತ್ಮಕ ವಿವರಣೆಯ ಉದ್ದೇಶವಾಗಿದೆ. ನೀವು ಹರೇ ಕೃಷ್ಣ ಎಂದು ಜಪಿಸಿದಾಗ, ನೀವು ನೇರವಾಗಿ ಕೃಷ್ಣನನ್ನು ಸ್ಪರ್ಶಿಸುತ್ತೀರಿ. ಅಸ್ತಿತ್ವದಲ್ಲಿರುವ ಎಲ್ಲದರ ಮೂಲವಾದ ಕೃಷ್ಣನನ್ನು ನಾವು ಸಂಪರ್ಕಿಸಿದಾಗ ಅರಿವು ಅಥವಾ ಜ್ಞಾನ ಮೂಡುತ್ತದೆ.
ಕೃಷ್ಣನ ರೂಪ, ಹೆಸರು ಅಥವಾ ವ್ಯಕ್ತಿತ್ವದ ಬಗೆಗೆ ಸಕಾರಾತ್ಮಕ ವಿವರಣೆಯನ್ನು ಕೇಳಿದಾಗ, ಸತ್ಯದ ತುಲನಾತ್ಮಕ ಗುಣಾವಗುಣಗಳ ಕಲ್ಪನೆಯಿಂದ ನಾವು ಮುಕ್ತವಾಗಿಲ್ಲದಿದ್ದರೆ, ಅದೂ ಕೂಡ ಅದೇ ಕಲ್ಪನೆಯ ಅರ್ಥವಾಗಿಬಿಡುತ್ತದೆ. ಹೇಗೆಂದರೆ, ನಿರಾಕಾರವಾದಿಗಳು ಎಲ್ಲ ರೂಪವನ್ನೂ ತಿರಸ್ಕರಿಸಿದಂತೆ, ಶೂನ್ಯವಾದಿಗಳು ಎಲ್ಲ ರೂಪವನ್ನೂ ಶೂನ್ಯಮಾಡಿದಂತೆ ಮತ್ತು ಸಹಜೀಯರು ಕೃಷ್ಣ ರೂಪವು ನಮ್ಮ ರೂಪದಂತೆಯೇ ಇದೆ ಎನ್ನುತ್ತಾರೆ. ಕೃಷ್ಣನ ರೂಪವು ಸದಾ ಅಸ್ತಿತ್ವದಲ್ಲಿರುತ್ತದೆ, ಮತ್ತು ಮೀನು ಅಥವಾ ಮಾನವ ಅಥವಾ ಸಿಂಹದ ಐಹಿಕ ರೂಪವನ್ನೆಲ್ಲಾ ಆಧ್ಯಾತ್ಮಿಕ ಲೋಕದ ಆಧ್ಯಾತ್ಮಿಕ ರೂಪದಂತೆ ಕಾಣುವಂತೆ ರೂಪಿಸಲಾಗಿದೆ.
ಮಾಯೆಯ ನಾಶ
ಭಕ್ತಿಯ ಪ್ರಕ್ರಿಯೆಯಲ್ಲಿ ನಾವು ಮೂಲ ದೇವೋತ್ತಮ ಪರಮ ಪುರುಷನನ್ನು ನೇರವಾಗಿ ಸಂಪರ್ಕಿಸುತ್ತೇವೆ. ಮತ್ತು ಎಲ್ಲ ಮಾಯೆಗಳೂ ನಾಶವಾದಾಗ ಕೃಷ್ಣನನ್ನು ಕುರಿತ ಅಂತಹ ಗ್ರಹಿಕೆ ಸಾಧ್ಯವಾಗುತ್ತದೆ. ಪವಿತ್ರ ನಾಮದ ಜಪದ ಪ್ರಭಾವದಿಂದ, ಭಕ್ತಿ ಸೇವೆಯ ಶಕ್ತಿಯಿಂದ ಮಾಯೆಯು ನಾಶವಾಗುತ್ತದೆ. ಅದು ಹೇಗೆಂದರೆ, ದೀಪ ಹಚ್ಚಿದ ಕೂಡಲೇ ಕತ್ತಲೆ ಮಾಯವಾಗುವಂತೆ. ಬೆಳಕು ಕತ್ತಲೆಯನ್ನು ತೆಗೆದು ಹಾಕುವುದಲ್ಲದೆ ವಾಸ್ತವತೆಯ ಜ್ಞಾನೋದಯವನ್ನೂ ಉಂಟುಮಾಡುತ್ತದೆ. ಅದೇ ರೀತಿ, ನಾವು ಕೃಷ್ಣನ ರೂಪ, ಪವಿತ್ರ ನಾಮ ಅಥವಾ ವ್ಯಕ್ತಿತ್ವದೊಂದಿಗೆ ಸಂಪರ್ಕಕ್ಕೆ ಬಂದಾಗ, ತತ್‌ಕ್ಷಣ ಮಾಯೆಯು ದೂರವಾಗುತ್ತದೆ. ಮಾಯೆಯನ್ನು ಬಿಟ್ಟುಕೊಡದೆ ನಾವು ಮಾಯೆಗೆ ಅಂಟಿಕೊಂಡಿರುವುದೇ ನಮಗಿರುವ ಕಷ್ಟ.

ದೇವರ ವಿಗ್ರಹಗಳನ್ನು ನೋಡಿದಾಗ ನಿಮಗೆ ಅವು ಐಹಿಕ ರೂಪದಂತೆ ಕಾಣುತ್ತವೆ. ವಿಗ್ರಹ ರೂಪವು ಆಧ್ಯಾತ್ಮಿಕ ಎಂದು ಧರ್ಮ ಗ್ರಂಥಗಳು ಹೇಳುತ್ತವೆ. ಆದರೆ ಅದು ಲೋಹ ಅಥವಾ ಶಿಲೆ ಅಥವಾ ಮರದಿಂದ ಮಾಡಲ್ಪಟ್ಟಿರುತ್ತದೆ. ನೀವು ಸರಿಯಾಗಿ ಆಧ್ಯಾತ್ಮಿಕ ದೃಷ್ಟಿಯನ್ನು ಬೆಳೆಸಿಕೊಂಡರೆ ನೀವು ವಿಗ್ರಹವನ್ನು ಆಧ್ಯಾತ್ಮಿಕವಾಗಿ ನೋಡಬಹುದು. ನೀವು ಮಾಯೆಯನ್ನು ಹೊರದೂಡುವ ಪ್ರಕ್ರಿಯೆಯಲ್ಲಿ ಮೊದಲು ತೊಡಗಬೇಕು. ದೇಹ, ಮನಸ್ಸು, ಬುದ್ಧಿ ಮುಂತಾದವುಗಳ ಲೌಕಿಕ ಭಾವನೆಗಳನ್ನು ಬಿಟ್ಟುಕೊಟ್ಟರೂ ಸ್ವಯಂ ಕುರಿತ ಒಣ ಪ್ರತಿಷ್ಠೆಯನ್ನು ಬಿಡುವುದು ತುಂಬ ಕಷ್ಟ. ಇಡೀ ಐಹಿಕ ಅಸ್ತಿತ್ವವು ಈ ಒಣ ಪ್ರತಿಷ್ಠೆ, ಅಹಂಕಾರದ ಮೇಲೆಯೇ ನಿಂತಿದೆ. ಮತ್ತು ನಾವು ಅದನ್ನು ಬಿಟ್ಟುಬಿಡಬೇಕು.
ಸಾಕ್ಷಾತ್ಕಾರದ ವೇದಿಕೆ
ಆಧ್ಯಾತ್ಮಿಕ ಗುರು, ಕೃಷ್ಣನಿಗೆ ಶರಣಾದಾಗ ಈ ಒಣ ಪ್ರತಿಷ್ಠೆಯು ಮಾಯವಾಗುತ್ತದೆ. ಹೀಗೆ ಮಿಥ್ಯಾ ಅಹಂಕಾರವು ಹೊರಟುಹೋದಾಗ, ಸ್ವಯಂನ ನಿಜವಾದ ವೇದಿಕೆ, ಆಧ್ಯಾತ್ಮಿಕ ವೇದಿಕೆಗೆ ನೀವು ಬರುವಿರಿ. ಆಗ ಎಲ್ಲವೂ ಬೆಳಗುತ್ತದೆ. ಅದು ತುಂಬ ಕಷ್ಟಕರವಾದುದು. ಏಕೆಂದರೆ ಈ ಲೌಕಿಕ ಅಸ್ತಿತ್ವಕ್ಕಿಂತ ಬೇರೆಯೊಂದು ಅಸ್ತಿತ್ವವನ್ನು ನಾವು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ನಾವು ಲೌಕಿಕ ಅಸ್ತಿತ್ವದಲ್ಲಿಯೇ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೃಷ್ಣನು ಅಲೌಕಿಕ.
ಆದುದರಿಂದ ನಾವು ಒಣ ಪ್ರತಿಷ್ಠೆಯನ್ನು ಬಿಡಬೇಕು. ಈ ಸವಾಲು ನಮ್ಮ ಮುಂದಿದೆ ಮತ್ತು ಭಕ್ತಿಯೊಂದೇ ಅದಕ್ಕೆ ಮಾರ್ಗ. ಸೂತ ಗೋಸ್ವಾಮಿಯವರು ಪ್ರಥಮ ಸ್ಕಂಧ, ಎರಡನೆಯ ಅಧ್ಯಾಯದಲ್ಲಿ ಇದನ್ನು ವಿವರಿಸಿದ್ದಾರೆ. ಕೃಷ್ಣ ಕಥೆಯನ್ನು ಸರಿಯಾಗಿ ಕೇಳಿದರೆ ಈ ಎಲ್ಲ ತಪ್ಪು ಗ್ರಹಿಕೆಗಳು ಶುದ್ಧವಾಗುತ್ತವೆ. ಆದುದರಿಂದ ಭಿದ್ಯತೇ ಹೃದಯ ಗ್ರಂಥಿಸ್‌ನಿಂದ ಕೊನೆಗೊಳ್ಳುವ ಶ್ಲೋಕಗಳಲ್ಲಿ, ಹೃದಯದಲ್ಲಿನ ಗಂಟು ಅಹಂಕಾರವಲ್ಲದೆ ಬೇರೇನೂ ಅಲ್ಲ. ಕತ್ತಲಿನಲ್ಲಿ ಸಂಶಯಗಳಿರಬಹುದು, ಆದರೆ ಬೆಳಕು ಇದ್ದಾಗ ಅಲ್ಲಿ ಅನುಮಾನಗಳಿಲ್ಲ. ಕತ್ತಲಿನಲ್ಲಿ ಹಗ್ಗವೂ ಕೂಡ ಹಾವಿನಂತೆ ಮತ್ತು ಹಾವು ಹಗ್ಗದಂತೆ ಕಾಣಬಹುದು. ಬೆಳಕಿದ್ದಾಗ, ಹಗ್ಗವು ಹಗ್ಗ ಮತ್ತು ಹಾವು ಹಾವಾಗಿರುತ್ತದೆ. ಕತ್ತಲಿನಲ್ಲಿ ನಿಮಗೆ ನಿಜ ಏನೆಂದು ಗೊತ್ತಾಗುವುದಿಲ್ಲ. ನಿಮಗೆ ಆಧ್ಯಾತ್ಮಿಕ ಬೆಳಕು ಅಗತ್ಯ, ಛಿದ್ಯಂತೇ ಸರ್ವ ಸಂಶಯಾಃ, ಕ್ಷೀಯಂತೇ ಚಾಸ್ಯ ಕರ್ಮಾಣಿ – ಈ ಬಂಧನದ ಸಂಕೋಲೆ ಕಳಚಿ ಬೀಳುತ್ತದೆ. ನಮ್ಮಲ್ಲಿ ಎಷ್ಟೊಂದು ಕರ್ಮ ತುಂಬಿದೆ ಎಂದರೆ, ನಮ್ಮ ಹಿಂದಿನ ಚಟುವಟಿಕೆಗಳು ನಮ್ಮನ್ನು ಪ್ರತಿಕ್ರಿಯೆಗಳಿಗೆ ಒಯ್ಯುತ್ತವೆ ಮತ್ತು ಆ ಪ್ರತಿಕ್ರಿಯೆಗಳು ಒಂದು ನಿರ್ದಿಷ್ಟ ಪರಿಸ್ಥಿತಿಗೆ ನಮ್ಮನ್ನು ಒಳಪಡಿಸುತ್ತವೆ. ಅದರಿಂದ ನಾವು ಇನ್ನಷ್ಟು ಚಟುವಟಿಕೆಗಳನ್ನು ಕೈಗೊಂಡು ಇನ್ನಷ್ಟು ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತೇವೆ. ಈ ಲೌಕಿಕ ಅಸ್ತಿತ್ವವು ಬಂಧನದ ಸಂಕೋಲೆ.
ಆದುದರಿಂದ ನಾವು ಅದರಿಂದ ಬಿಡಿಸಿಕೊಂಡು ಬರಬೇಕು. ನಾವು ಭಕ್ತಿ ಸೇವೆಯಲ್ಲಿ ತೊಡಗಿದಾಗ ಅದು ಸಾಧ್ಯವಾಗುತ್ತದೆ. ಇದು ಕರ್ಮದ ಬೇಡಿಯನ್ನು ಕಳಚುತ್ತದೆ – ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ – ಆಗ ನಾವು ದೇವೋತ್ತಮನನ್ನು ಮಾಲೀಕನಾಗಿ ನೋಡಬಹುದು, ನಾನೇ ಮಾಲೀಕನಲ್ಲ. ಅದೇ ಸಾಕ್ಷಾತ್ಕಾರದ ಸೂಕ್ತ ವೇದಿಕೆ. ಆ ವೇದಿಕೆಯಲ್ಲಿ ಮಾತ್ರ ನಾವು ಕೃಷ್ಣನನ್ನು ಅರಿತುಕೊಳ್ಳಬಹುದು.






Leave a Reply