-ಡಾ|| ಸಿ. ಅನ್ನಪೂರ್ಣಮ್ಮ
ವಿಜ್ಞಾನ ಮತ್ತು ವೇದಾಂತ- ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನಿಯು ಬ್ರಹ್ಮಾಂಡದ, ಚರಾಚರ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳನ್ನು ಕುರಿತು ಆಳವಾದ ಸಂಶೋಧನೆ ಮಾಡಿ ಒಂದು ನಿರ್ಧಾರಿತ ಸತ್ಯದ ಅರಿವನ್ನು ಪಡೆಯುತ್ತಾನೆ, ನಿಜ. ಆದರೆ ಬ್ರಹ್ಮಾಂಡದ ಆಚೆಗಿರುವ ಮುಂದಿನ ವ್ಯೋಮವನ್ನು ಕುರಿತು ಆತ ಏನನ್ನೂ ಹೇಳಲಾರ.

ವಾಸ್ತವದಲ್ಲಿ ವೇದಾಂತದ ಆರಂಭ ಇಲ್ಲಿಂದಲೇ ಆಗುತ್ತದೆ. ಅಂದರೆ, ವಿಜ್ಞಾನದ ಎಲ್ಲೆಯಲ್ಲಿ ಆರಂಭಗೊಂಡು, ಮುಂದಿನ ಸ್ಥೂಲ-ಸೂಕ್ಷ್ಮಗಳ ಎಳೆ ಎಳೆಗಳನ್ನು ಬಿಡಿಸಿ ಮತ್ತೊಂದು ವಿಶಾಲ ಬ್ರಹ್ಮಾಂಡಕ್ಕೆ ವೇದಾಂತ ಆಹಾರ ಒದಗಿಸುತ್ತದೆ. ಅಂದರೆ, ವಿಜ್ಞಾನದ ಆಚೆಗೆ, ನಮ್ಮ ಬುದ್ಧಿಗೆ ನಿಲುಕದ ಮತ್ತೊಂದು ಆಗೋಚರ ಪರಧಿಗೆ ವೇದಾಂತದ ವ್ಯಾಪ್ತಿ ಇದೆ ಎಂದಾಯಿತು.
ಸಾಮಾನ್ಯವಾಗಿ ಈ ವಿಶ್ವದಲ್ಲಿ ವಾಸಿಸುವ ಮಾನವ ತನ್ನ ಪಾಂಡಿತ್ಯ ಹಾಗೂ ಜ್ಞಾನದ ಮೂಲಕ, ಭೂಮಿಯ ಮತ್ತು ಇತರ ಗ್ರಹಗಳ ಕುರಿತ ವಿವರಗಳನ್ನು ತಿಳಿಯಲು ಮಾತ್ರ ಸಮರ್ಥನಿರುತ್ತಾನೆ. ಅಂದರೆ ಒಂದು ನಾಣ್ಯದ ಒಂದು ಮುಖದ ಸ್ವಲ್ಪ ಅರಿವು ಮಾತ್ರ ಆತನಿಗಿರುತ್ತದೆ. ಅದೇ ನಾಣ್ಯದ ಮತ್ತೊಂದು ಬದಿಯನ್ನು ಕುರಿತು ಆತ ಸಂಪೂರ್ಣವಾಗಿ ಆಜ್ಞ.
ಈ ಮತ್ತೊಂದು ಬದಿಯನ್ನು ಕುರಿತಾದ ಅರಿವು ಆಧ್ಯಾತ್ಮಿಕತತ್ತ್ವದ ನೆರವಿನಿಂದ ಮಾತ್ರ ಲಭ್ಯವಾಗುತ್ತದೆ. “ಆಧ್ಯಾತ್ಮ” ಎಂದೊಡನೆ ಇದು ಮುದುಕರಿಗೆ ಮಾತ್ರ ಮೀಸಲೆಂದು ಮೂಗು ಮುರಿಯುವುದು ಬೇಡ. ವಿಜ್ಞಾನದ ಮುಂದೆ ತೆರೆದಿರುವ ಮಹಾವಿಜ್ಞಾನವೇ ಇದಾಗಿದೆ! ಇದೊಂದು ಆಗೋಚರ ಸತ್ಯ! ಇದನ್ನು ಎಲ್ಲ ಯುವಕರೂ ತಿಳಿಯಬೇಕು. ಸ್ವಯಂ ವೇದ್ಯವಾಗಬಲ್ಲ ಆಧ್ಯಾತ್ಮಿಕ ಆನಂದದ ಪ್ರತೀಕವೇ ಇದಾಗಿದೆ.
ಹಾಗಾದರೆ ಇದನ್ನು ಪಡೆಯುವುದೆಂತು? ಎಂಬ ಪ್ರಶ್ನೆ ನಮ್ಮ ಮುಂದೆ ಬೃಹದಾಕಾರವಾಗಿ ಸುಳಿಯುತ್ತದೆಯಲ್ಲವೆ? ಇದಕ್ಕೆ ಪೂಜ್ಯ ಶ್ರೀಲ ಪ್ರಭುಪಾದರು ಭಗವದ್ಗೀತೆಯ ಅನೇಕ ಶ್ಲೋಕಗಳನ್ನು ಉದಾಹರಿಸುತ್ತ ಅತ್ಯಂತ ಸುಲಭೋಪಾಯವಾದ “ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ” ಎಂಬ ಮಹಾಮಂತ್ರ ಹೇಗೆ ಮನುಷ್ಯನಲ್ಲಿ ಅಜ್ಞಾನದ ಅಂಧಕಾರವನ್ನು ಓಡಿಸಿ ಆತನಲ್ಲಿ ದಿವ್ಯ ತೇಜಸ್ಸನ್ನು ತುಂಬುತ್ತದೆ ಎಂಬುದನ್ನು ಹಲವು ಸರಳ ಉದಾಹರಣೆಗಳ ಮೂಲಕ “ಜನನ ಮರಣಗಳಾಚೆ” ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ.

ಐಹಿಕ ಜೀವನದಲ್ಲಿ ಹುಟ್ಟು ಸಾವುಗಳು ಅನಿರ್ವಾಯಗಳಾದರೂ ಸಾವಿನ ಆಚೆ ಮೋಕ್ಷದ ಮೆಟ್ಟಿಲೇರಲು, ಪರಮಾತ್ಮನ ದಿವ್ಯ ಸನ್ನಿಧಾನದಲ್ಲಿ ಆನಂತತೆಯನ್ನು ಪಡೆಯಲು ನಿತ್ಯ ಈ ಮಹಾಮಂತ್ರದ ಜಪ ಹಾಗೂ ಧ್ಯಾನ ಅತ್ಯಂತ ಸರಳವಾದ ಹಾದಿ ಎಂಬುದು ಪುಸ್ತಕದ ಫಲಶ್ರುತಿ.
ಭಗವದ್ಗೀತೆ ನಮ್ಮ ಸನಾತನ ಪರಂಪರೆಯ ಕೈಗನ್ನಡಿ. ಹಾಗೂ ಸಕಲ ವೇದದ ಸಾರ.
ವಿಶ್ವ ಮಾನ್ಯತೆಯಿದೆ ಈ ಗ್ರಂಥಕ್ಕೆ. ನಮ್ಮ ಸಂಸ್ಕೃತಿಯ ಅಭಿರುಚಿಯೇ ಇಲ್ಲದ ವಿದೇಶೀಯರು ಕೂಡ ಭಗವದ್ಗೀತೆಯನ್ನು ಕುರಿತು ಅಪಾರ ಗೌರವ ಹೊಂದಿದ್ದಾರೆ. ಗೀತೆಯ ಮಹಿಮೆ ಎಂಥದ್ದೆಂದರೆ ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೆ ಗಿರಿಂ| ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ||
ಮೂಕನನ್ನು ವಾಗ್ಮಿಯಾಗಿಸಬಲ್ಲ, ಹೆಳವನನ್ನು ಬೆಟ್ಟದ ಮೇಲಕ್ಕೆ ಜಿಗಿಯುವಂತೆ ಮಾಡಬಲ್ಲ, ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲ, ಪರಮ ಶಕ್ತಿಯೆಂದರೆ “ಕೃಷ್ಣ ಶಕ್ತಿ”.
“ಕೃಷ್ಣ ಪ್ರಜ್ಞೆ” ಬೆಳೆಸಲು “ಇಸ್ಕಾನ್” ಹಮ್ಮಿಕೊಂಡಿರುವ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು- ಭಾಗವಹಿಸುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತುರುವುದಲ್ಲದೆ, ಅವರ ಭವಿಷ್ಯದ ಬದುಕಿಗೆ ಒಂದು ಆಧ್ಯಾತ್ಮಿಕ ಅಡಿಪಾಯ ನಿರ್ಮಿಸುವಂತಹವು! ಇವು ನಿಜಕ್ಕೂ ಶ್ಲಾಘನೀಯ!

ಇಂದಿನ ಕಲುಷಿತ ವಾತಾವರಣದಲ್ಲಿ ಅನೇಕ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿರುವ ಇಂದಿನ ಯುವಶಕ್ತಿ ಸ್ವಂತ ನಿರ್ಧಾರವನ್ನು ಕೈಗೊಳ್ಳಲಾಗದೆ ಕವಲುದಾರಿಯಲ್ಲಿ ಚಡಪಡಿಸುತ್ತಿರುವಾಗ ಈ “ಹರೇ ಕೃಷ್ಣ” ದಿವ್ಯಮಂತ್ರ ಇವರಿಗೆ ಮಾನಸಿಕ ಶಾಂತಿ, ನೆಮ್ಮದಿ ಹಾಗೂ ಯೋಗ್ಯ ಮಾರ್ಗವನ್ನು ಆರಿಸುವ ಬುದ್ಧಿಶಕ್ತಿಯನ್ನು ನೀಡುವ ಸಂಜೀವಿನಿಯಾಗಿದೆ!
ಪೂಜ್ಯ ಶ್ರೀಲ ಪ್ರಭುಪಾದರ “ಜನನ ಮರಣಗಳಾಚೆ” ಹುಟ್ಟಿನ ಮುಂಚೆ ಹಾಗೂ ಮರಣದಾಚೆಗಿನ ಒಗಟನ್ನು ಬಿಚ್ಚಿಡುವ ಒಂದು ಪುಟ್ಟ ಕೃತಿ. ಹುಟ್ಟು ಸಾವು, ಆತ್ಮ-ದೇಹ ಇವುಗಳನ್ನು ಕುರಿತ ಸರಳ ವಿವರಣೆಯನ್ನೊಳಗೊಂಡಿದೆ. ಎಲ್ಲ ತಾರ್ಕಿಕರೂ, ಬುದ್ಧಿಜೀವಿಗಳು ಓದಿ ಆತ್ಮ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಬಹುದು.
“ಮೃತ್ಯೋರ್ಮಾಂ ಅಮೃತಂಗಮಯ”
ಶ್ರೀಲ ಪ್ರಭುಪಾದರು ನಮಗೆ ಬಿಟ್ಟುಕೊಟ್ಟ ಅನರ್ಘ್ಯ ರತ್ನಗಳೆಂದರೆ ಅವರ ಪುಸ್ತಕಗಳು. ತಮ್ಮ ಪುಸ್ತಕಗಳನ್ನು ರೆಕಾರ್ಡೆಡ್ ಚಾಂಟಿಂಗ್ ಅಂದರೆ ಭಗವದ್ ಕೀರ್ತನೆ ಎಂದೇ ವರ್ಣಿಸಿದ್ದರು. ತಮ್ಮ ಪುಸ್ತಕಗಳನ್ನು ಅನುವಾದ ಮಾಡಲು ಅಹರ್ನಿಶಿ ಕಾರ್ಯೋನ್ಮುಖರಾಗಿದ್ದರು.
ಇಸ್ಕಾನ್ನಂಥ ದೊಡ್ಡ ಸಂಸ್ಥೆಯನ್ನು ನಡೆಸುವ ಸುದೀರ್ಘ ಜವಾಬ್ದಾರಿಯೊಡನೆ ಪುಸ್ತಕ ಪ್ರಕಾಶನಕ್ಕೆ ಎಂದೂ ಮಲತಾಯಿ ಧೋರಣೆಯನ್ನು ನೀಡಲಿಲ್ಲ. ಪ್ರತಿ ರಾತ್ರಿ ಸುಮಾರು ಒಂದು ಗಂಟೆಗೆ ಎದ್ದು ನಾಲ್ಕು ಗಂಟೆಯಗಳ ಕಾಲ ಅನುವಾದದಲ್ಲಿ ತೊಡಗುತ್ತಿದ್ದರು. ಹೀಗೆ ಅವರ ಲೇಖನಿಯಿಂದ ಸುಮಾರು 90 ಪುಸ್ತಕಗಳು ಹೊರಬಂದವು.






Leave a Reply