ಆಸ್ಟ್ರೇಲಿಯಾದ ಮೇಲ್ಬರ್ನ್‌ಲ್ಲಿ 29ನೇ ಜೂನ್, 1974 ರಂದು, ಶ್ರೀಲ ಪ್ರಭುಪಾದರು ಮತ್ತು ವರದಿಗಾರರೊಂದಿಗೆ ನಡೆದ ಸಂವಾದ ಅನುವಾದ :
– ಡಾ|| ಕೆ. ವೈ. ಬಾಲರಾಜ್
ಶ್ರೀಲ ಪ್ರಭುಪಾದ : ಧರ್ಮವೆಂದರೆ ಭಗವಂತನ ನಿಯಮಗಳನ್ನು ಅನುಸರಿಸುವುದು ಅಷ್ಟೇ, ಅದು “ಹಿಂದೂ”, “ಮುಸ್ಲಿಂ’, ”ಕ್ರಿಶ್ಚಿಯನ್’ ಆಗಿರುವುದಿಲ್ಲ. ದೇಶದ ಕಾನೂನನ್ನೇ ತೆಗೆದುಕೊಳ್ಳಿ.

ದೇಶದಲ್ಲಿ ಅನೇಕ ಜನರು, ಅನೇಕ ನಾಗರಿಕರು ಇದ್ದಾರೆ. ಆದರೆ ಕಾನೂನು ”ಇದು ಕ್ರಿಶ್ಚಿಯನ್‌ರಿಗಾಗಿ”, “ಇದು ಯಹೂದಿಗಳಿಗಾಗಿ’, “ಇದು ಕಪ್ಪು ಜನಾಂಗದವರಿಗಾಗಿ”, “ಇದು ಬಿಳಿಯಜನಾಂಗದವರಿಗಾಗಿ’, ಎಂದು ಯಾರನ್ನೂ ನಿರ್ಬಂಧಿಸುವುದಿಲ್ಲ. ಕಾನೂನು ಆ ರೀತಿ ಇಲ್ಲ.
ಎಲ್ಲರಿಗೂ ಕಾನೂನು ಒಂದೇ ಆಗಿದೆ. ನೀವು “ಇದು ಕಪ್ಪು ಜನಾಂಗದ ಕಾನೂನು”, “ಇದು ಬಿಳಿಯ ಜನಾಂಗದ ಕಾನೂನು’ ಎಂದು ಹೇಳಲಾಗುವುದಿಲ್ಲ. ಅದು ವೈಜ್ಞಾನಿಕವಾದುದಲ್ಲ. ವೈಜ್ಞಾನಿಕವಾಗಿ ಹೇಳುವುದಾದರೆ ಭಗವಂತನಿದ್ದಾನೆ. ನಾವು ಅವನ ನಿಯಮಕ್ಕೆ ಬದ್ಧರಾಗಿದ್ದೇವೆ.
ಭಗವಂತನು ದೊಡ್ಡವನು. ನಾವು ಅವನ ಅಧೀನದಲ್ಲಿದ್ದೇವೆ. ನಾವು ಅವನ ಆಜ್ಞೆಯನ್ನು ಪಾಲಿಸಬೇಕು. ಅದು ನಿಜವಾದ ಆಧ್ಯಾತ್ಮಿಕ ವೇದಿಕೆ. ಅದುವೇ ನಿಜವಾದ ಧರ್ಮ. ನಾನು ಹೇಳಿದ್ದು ಸರಿಯೋ ತಪ್ಪೋ?
ವರದಿಗಾರ : ನೀವು ಹೇಳಿದ್ದು ಸರಿ.
ಶ್ರೀಲ ಪ್ರಭುಪಾದ : ಆದ್ದರಿಂದ ನೀವು ‘ಕ್ರೈಸ್ತಧರ್ಮ’, ‘ಹಿಂದೂಧರ್ಮ’, ‘ಮುಸ್ಲಿಂಧರ್ಮ’ ಎಂದು ಹೇಳಲಿಕ್ಕೆ ಆಗುವುದಿಲ್ಲ. ಧರ್ಮ ಧರ್ಮವೇ, ಭಗವಂತ ಕ್ರೈಸ್ತ, ಹಿಂದೂ ಅಥವಾ ಮುಸಲ್ಮಾನನಲ್ಲ. ಭಗವಂತ ಭಗವಂತನೇ. ಭಗವಂತ ಒಬ್ಬನೇ.
ಆದರೆ ನಾವು ಅವನನ್ನು ವಿವಿಧ ದೃಷ್ಟಿಕೋನಗಳಿಂದ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಆ ವಿವಿಧ ದೃಷ್ಟಿಕೋನಗಳು “ಕ್ರೈಸ್ತರ ದೃಷಿಲೋಕ” “ಯಹೂದಿಗಳ ದೃಷ್ಟಿಕೋನ”, “ಹಿಂದೂಗಳ ದೃಷ್ಟಿಕೋನ, ಮುಸ್ಲಿಮರ ದೃಷ್ಟಿಕೋನ’ ಎಂದು ಕರೆಯಲ್ಪಡಬಹುದು. ಆದರೆ ಅದು ಕೇವಲ ದೃಷ್ಟಿಕೋನ ಅಷ್ಟೇ.
ಈಗ ಸೂರ್ಯನ ಉದಾಹರಣೆಯನ್ನು ತೆಗೆದುಕೊಳ್ಳೋಣ ಇಲ್ಲಿ ಆಸ್ಟ್ರೇಲಿಯಾದಲ್ಲಿ ಜೂನ್ ತಂಪಾದ ಮಾಸ. ಸೂರ್ಯನು ಅಷ್ಟೊಂದು ಬೆಚ್ಚಗಿರುವುದಿಲ್ಲ. ಆದರೆ ಅದೇ ನೀವು ಆಫ್ರಿಕನ್ ಗೆಳೆಯನನ್ನು ಸೂರ್ಯನು ಬೆಚ್ಚಗಿದ್ದಾನೆಯೇ? ಎಂದು ಕೇಳಿದರೆ ಅವನು “ಓ, ಇಲ್ಲಿ ತುಂಬಾ ಬಿಸಿಲಿದೆ” ಎಂದು ಹೇಳುತ್ತಾನೆ.
ಸೂರ್ಯನನ್ನು ಮೆಚ್ಚುವ ಅವನ ದೃಷ್ಟಿಕೋನಕ್ಕಿಂತಲೂ ನಿಮ್ಮದು ಬೇರೆಯದೇ ಇದೆ.
ವಾಸ್ತವಿಕವಾಗಿ ಸೂರ್ಯನು ಒಬ್ಬನೇ ಮತ್ತು ಸಮ. ಅಲ್ಲಿ “ಆಫ್ರಿಕಾದ ಸೂರ್ಯ”, ಆಸ್ಟ್ರೇಲಿಯಾದ ಸೂರ್ಯ” ಎಂದೇನೂ ಇಲ್ಲ. ವಾಸ್ತವಿಕವಾಗಿ “ಹಿಂದೂ ಧರ್ಮ”, ಮುಸ್ಲಿಂಧರ್ಮ”, “ಕ್ರಿಶ್ಚಿಯನ್ ಧರ್ಮ”, ಎಂಬುದಾಗಿ ಇಲ್ಲ. ನೋಡಿದಿರಾ? ಇವೆಲ್ಲ ಕಲ್ಪನೆಗೆ ಕಾರಣ ಆಭಾಸತರ್ಕದ ನಮ್ಮ ಮನಸ್ಸು.
ದೇವರು ಒಬ್ಬನೇ, ಧರ್ಮ ಒಂದೇ ಎಂಬುದು ನಿಮಗೆ ತಿಳಿದಿದೆ. ನೀವು ಭಗವಂತ ಎಂದರೇನು ಮತ್ತು ಅವನ ಆಜ್ಞೆ ಏನೆಂಬುದನ್ನು ಗೊತ್ತು ಮಾಡಿಕೊಂಡು ಅದನ್ನು ಅನುಸರಿಸಬೇಕು. ಆಗ ಧಾರ್ಮಿಕವಂತರಾಗುತ್ತೀರಿ ಅಷ್ಟೇ. ನಾವು ಇದೇ ರೀತಿಯಲ್ಲಿ ಬೋಧಿಸುತ್ತಿದ್ದೇವೆ.

ವರದಿಗಾರ: ನೀವು ಹೇಳುವ ಪ್ರಕಾರ ಜನರು “ಮುಸ್ಲಿಂ ಅಥವಾ ಯಹೂದಿ” ಅಥವಾ “ಹಿಂದೂ” ಅಥವಾ “ಕ್ರೈಸ್ತ” ಭಗವಂತ ಎಂದು ತಮ್ಮ ಕಲ್ಪನೆಗೆ ಅಂಟಿಕೊಂಡು ಅವರು ನಿಜವಾಗಿಯೂ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಿಲ್ಲ. ಆದರೂ ಮಾನವ ಜೀವನದ ಅತ್ಯಂತ ಪ್ರಮುಖ ಉದ್ದೇಶ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದಾಗಿದೆ ಸರಿಯೇ?
ಶ್ರೀಲ ಪ್ರಭುಪಾದ : ಹೌದು, ಅದೊಂದೇ ಉದ್ದೇಶ. ಈ ಉದ್ದೇಶವನ್ನು ಪೂರೈಸಿಕೊಳ್ಳದೇ ನಾವು ಏನು ಮಾಡಿದರೂ ಅದು ಪ್ರಾಣಿಧರ್ಮವಾಗುತ್ತದೆ. ನಾವು ನಾಯಿ ಹೇಗೆ ಜಿಗಿಯುತ್ತದೆಯೋ ಹಾಗೆ ಜಿಗಿಯುತ್ತಿದ್ದೇನೆ ಅಷ್ಟೇ.
ನಾವು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳದಿದ್ದರೆ ನಮ್ಮ ಮತ್ತು ಒಂದು ನಾಯಿಯ ಮಧ್ಯ ಏನು ವ್ಯತ್ಯಾಸವಿದೆ. ನಾಯಿ ಯೋಚಿಸುತ್ತದೆ “ನಾನು ಬಲಿಷ್ಠ ಬುಲ್ ಡಾಗ್” (ಅದೊಂದು ಜಾತಿ ನಾಯಿ). ಅದೇ ರೀತಿ ಒಬ್ಬ ಮನುಷ್ಯ ”ನಾನೊಬ್ಬ ಒಳ್ಳೆಯ ಡಚ್ ಮನುಷ್ಯ ಎಂದು ಯೋಚಿಸುತ್ತಾನೆ,” ಆದ್ದರಿಂದ ನಾಯಿ ಮತ್ತು ಮನುಷ್ಯನಲ್ಲಿ ಏನು ವ್ಯತ್ಯಾಸವಿದೆ.
ಅವರ ಮನೋಭಾವ ಒಂದೇ ಆಗಿದೆ. ನಾಯಿ “ನಾನು ಈ ದೇಹ” ಎಂದು ಯೋಚಿಸುತ್ತದೆ. ಅದೇ ರೀತಿಯಲ್ಲಿ ಮನುಷ್ಯನು “ನಾನು ಈ ದೇಹ” ಎಂದು ಯೋಚಿಸುತ್ತಾನೆ. ಆದರೆ ಯಾವಾಗ ಒಬ್ಬನು ನಾನು ಈ ದೇಹವಲ್ಲ. “ನಾನು ಚೇತನ ಮತ್ತು ನಾನು ಪರಮಚೇತನದಿಂದ ಬಂದಿದ್ದೇನೆ.” ಎಂದು ಯೋಚಿಸುತ್ತಾನೋ ಅದೇ ಮಾನವೀಯತೆ.
ವರದಿಗಾರ : ಆದ್ದರಿಂದ ಪರಮಪೂಜ್ಯರಾದ ನೀವು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದೀರಾ?
ಶ್ರೀಲ ಪ್ರಭುಪಾದ : ನೀವೇನು ಯೋಚಿಸುತ್ತೀರಿ? ನಿಮ್ಮ ಅಭಿಪ್ರಾಯವೇನು ?
ವರದಿಗಾರ : ನಾನು ಹೇಳಲಾಗುವುದಿಲ್ಲ.
ಶ್ರೀಲ ಪ್ರಭುಪಾದ : ಒಂದು ವೇಳೆ ನಾನು ‘ಹೌದು’ ಎಂದರೆ ನೀನೇನು ಅರ್ಥಮಾಡಿಕೊಳ್ಳುವೆ? ನೀನೆ ನಿಪುಣನಲ್ಲದಿರುವಾಗ ”ಹೌದು ನಾನು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದೇನೆ” ಎಂದು ಹೇಳಿದರೆ, ನೀನು ಸತ್ಯವೆ೦ದು ತೆಗೆದುಕೊಳ್ಳುತ್ತೀಯಾ? ನಿನಗೆ ಭಗವಂತನ ಸಾಕ್ಷಾತ್ಕಾರ ಎನ್ನುವುದೇ ಗೊತ್ತಿಲ್ಲ. ಆದರೆ ನೀನು ಹೇಗೆ ಈ ಪ್ರಶ್ನೆಯನ್ನು ಕೇಳುವೆ? ಹೇಗೆ ನನ್ನ ಉತ್ತರದಿಂದ ನೀನು ತೃಪ್ತಿಗೊಳ್ಳುವೆ.
ವರದಿಗಾರ : ಹಾಗಾದರೆ ಭಗವಂತನ ಸಾಕ್ಷಾತ್ಕಾರ ಎಂದರೇನು?
ಶ್ರೀಲ ಪ್ರಭುಪಾದ : ಮೊದಲು ನೀನು ಈ ವಿಚಾರವನ್ನು ಅರ್ಥಮಾಡಿಕೋ. ಉದಾಹರಣೆಗೆ ಒಬ್ಬ ವೈದ್ಯಕೀಯ ಮನುಷ್ಯ ಇನ್ನೊಬ್ಬ ವೈದ್ಯ ಮನುಷ್ಯನಿಗೆ ” ನೀನು ವೈದ್ಯಕೀಯ ಮನುಷ್ಯನೇ ಎಂದು ಕೇಳಿದಾಗ ಆ ಮನುಷ್ಯ” “ಹೌದು” ಎಂದು ಹೇಳುತ್ತಾನೆ.
ತಮ್ಮ ವೈದ್ಯಕೀಯ ಪದಗಳ ತಾಂತ್ರಿಕ ವಿಚಾರ ವಿನಿಮಯದಿಂದ ಎರಡನೆಯ ಮನುಷ್ಯನು ವೈದ್ಯನೋ ಅಲ್ಲವೋ ಎಂದು ಮೊದಲನೆಯವನಿಗೆ ತಿಳಿಯುತ್ತದೆ. ಆದರೆ ಆ ಮನುಷ್ಯ ಸ್ವತಃ ವೈದ್ಯಕೀಯ ಮಗುವಾಗದೆ ಇನ್ನೊಬ್ಬ ಮನುಷ್ಯನನ್ನು ನೀನು ವೈದ್ಯಕೀಯ ಮನುಷ್ಯನೇ? ಎಂದು ಕೇಳುವುದರಲ್ಲಿ ಏನು ಉಪಯೋಗವಿದೆ? ಆದ್ದರಿಂದ ನನ್ನ ಉತ್ತರವನ್ನು ಸ್ವೀಕರಿಸುವ ಹಂತಕ್ಕೆ ಬರದೇ ನೀನು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದೀಯಾ? ಎಂದು ಪ್ರಶ್ನೆ ಮಾಡುವುದರಲ್ಲಿ ಏನು ಉಪಯೋಗವಿದೆ.

ಆದುದರಿಂದ ನೀನು ನನ್ನ ಉತ್ತರವನ್ನು ಸ್ವೀಕರಿಸುವ ಮಟ್ಟಕ್ಕೆ ತಲಪಿರುವೆಯೇನು ಅಥವಾ ನೀನೇನಾದರೂ ಸಾಕ್ಷಾತ್ಕರಿಸಿಕೊಂಡಿದ್ದೀಯಾ?
ವರದಿಗಾರ : ಹೌದು.
ಶ್ರೀಲ ಪ್ರಭುಪಾದ : ಹಾಗಾದರೆ ನಾನು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದೇನೆ. ನಾನು ಭಗವಂತನನ್ನು ಪ್ರತಿಕ್ಷಣದಲ್ಲಿಯೂ ನೋಡುತ್ತಿರುತ್ತೇನೆ.
ವರದಿಗಾರ : ಪರಮ ಪೂಜ್ಯರೇ, ಭಗವತ್ ಸಾಕ್ಷಾತ್ಕಾರಕ್ಕೆ ಧ್ಯಾನವೂ ಕೂಡ ಸಾಧನವೇ?
ಶ್ರೀಲ ಪ್ರಭುಪಾದ : ಹೌದು, ಧ್ಯಾನವೂ ಕೂಡ ಒಂದು ಸಾಧನ. ಆದರೆ ನೀನು ಈಗ ಧ್ಯಾನ ಮಾಡಲಿಕ್ಕೆ ಆಗುವುದಿಲ್ಲ. ಏಕೆಂದರೆ ನಿಮಗೆ ಭಗವಂತನು ಏನು ಎಂಬುದೇ ಗೊತ್ತಿಲ್ಲ. ಧ್ಯಾನವೆಂದರೆ ಯಾವುದೇ ವಸ್ತು ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು, ನಿನಗೆ ಭಗವಂತನೇ ಏನು ಎಂದು ತಿಳಿಯದಿದ್ದಾಗ ನೀನು ಏನನ್ನು, ಯಾರನ್ನು ಧ್ಯಾನಿಸುತ್ತೀಯೆ?
ಮೊದಲಿಗೆ ನೀನು ಭಗವಂತನ ಬಗ್ಗೆ ತಿಳಿದುಕೊಳ್ಳಬೇಕು. ಉದಾಹರಣೆಗೆ ನಮಗೆ ಭಗವಾನ್ ಕೃಷ್ಣನ ಬಗ್ಗೆ ಗೊತ್ತಿದೆ ಮತ್ತು ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ಮನ್-ಮನಾಭವ ಮದ್-ಭಕ್ತ: – “ಸದಾ ನನ್ನ ಬಗ್ಗೆ ಯೋಚಿಸು”, ಆದುದರಿಂದ ನಾವು ಕೃಷ್ಣನ ಬಗ್ಗೆ ಧ್ಯಾನಿಸುತ್ತೇವೆ. ಏಕೆಂದರೆ ಧ್ಯಾನ ಎಂದರೆ ಭಗವಂತನ ಬಗ್ಗೆ ಯೋಚಿಸುವುದು, ಆದರೆ ನಿನಗೆ ಭಗವಂತ ಏನು ಎಂಬುದೇ ಗೊತ್ತಿಲ್ಲದಿರುವಾಗ ನೀವು ಹೇಗೆ ಅವನನ್ನು ಕುರಿತು ಯೋಚಿಸುತ್ತೀಯೆ?
ವರದಿಗಾರ : ಭಕ್ತಿವೇದಾಂತರೇ, ಅನೇಕ ಶಾಸ್ತ್ರಗಳಲ್ಲಿ ಭಗವಂತನನ್ನು ಬೆಳಕು ಎಂದು ವಿವರಿಸಲಾಗಿದೆ.
ಶ್ರೀಲ ಪ್ರಭುಪಾದ : ಭಗವಂತ ಎಲ್ಲವೂ ಆಗಿದ್ದಾನೆ. ಭಗವಂತ ಕತ್ತಲೆಯೂ ಆಗಿದ್ದಾನೆ. ಆದ್ದರಿಂದ ಶ್ರೀಮದ್‌ಭಾಗವತಮ್ ಹೇಳುತ್ತದೆ – “ಯಾವುದರಿಂದ ಅಸ್ತಿತ್ವದಲ್ಲಿರುವುದೆಲ್ಲವೂ ಹೊರಬರುತ್ತದೆಯೋ ಅದೇ ಭಗವಂತ’, ಬೆಳಕೂ ಅಸ್ತಿತ್ವದಲ್ಲಿದೆ, ಕತ್ತಲೆಯೂ ಅಸ್ತಿತ್ವದಲ್ಲಿದೆ. ಆದ್ದರಿಂದ ಭಗವ೦ತನಿಂದ ಬೆಳಕು ಹೇಗೆ ಹೊರಹೊಮ್ಮುತ್ತದೆಯೋ ಹಾಗೆಯೇ ಕತ್ತಲೆಯೂ ಕೂಡ ಭಗವಂತನಿಂದ ಹೊರಹೊಮ್ಮುತ್ತದೆ.
ವರದಿಗಾರ : ಧ್ಯಾನವು ಭಗವಂತನನ್ನು ನಮ್ಮೊಳಗೆ ಕಾಣುವ ಒಂದು ಮಾರ್ಗವೆ?
ಶ್ರೀಲ ಪ್ರಭುಪಾದ : ಹೌದು, ಅದುವೇ ಧ್ಯಾನದ ಸರಿಯಾದ ವ್ಯಾಖ್ಯಾನ. ಧ್ಯಾನಾವಸ್ಥಿತ ತದ್-ಗತೇನ ಮನಸಾ ಪಶ್ಯಂತಿ ಯಾಮ್ ಯೋಗಿನಃ, ಮನಸ್ಸನ್ನು ಭಗವಂತನಲ್ಲಿ ಕೇಂದ್ರೀಕರಿಸುವುದರಿಂದ ಯೋಗಿಗಳು ಭಗವಂತನನ್ನು ತಮ್ಮ ಹೃದಯದಲ್ಲಿ ನೋಡುತ್ತಾರೆ.
ಆದರೆ ಭಗವಂತನ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅವನನ್ನು ಕಾಣುವುದಕ್ಕಿಂತ ಮುಂಚೆ ಭಗವಂತ ಏನೆಂದು ನೀವು ತಿಳಿದುಕೊಂಡಿರಬೇಕು. ಉದಾಹರಣೆಗಾಗಿ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಮೊದಲು ಭಗವಂತ ಎಂದರೇನು? ಅವನ ಲಕ್ಷಣಗಳೇನು? ಎಂದು ಕಲಿಯುತ್ತಾರೆ. ಆ ರೀತಿಯಾಗಿ ಅವರು ಭಗವಂತನ ಬಗ್ಗೆ ಯೋಚಿಸಬಹುದು. ಆದರ ನಿಮಗೆ ಭಗವಂತನ ಬಗ್ಗೆ ಒಂದು ತಿಳುವಳಿಕೆಯೇ ಇಲ್ಲ. ನೀವು ಅವನ ಬಗ್ಗೆ ಹೇಗೆ ವಿಚಾರಿಸುತ್ತೀರಿ?






Leave a Reply