ಭಗವದ್ಗೀತೆಯ ಅಸಂಬದ್ಧ ವ್ಯಾಖ್ಯೆ

ಸ್ಥಳ: ಅಲಹಾಬಾದ್, ದಿನಾಂಕ: ಜನವರಿ 18, 1971 ಶ್ರೀ ಶ್ರೀಮದ್‌ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹಾಗೂ ಅತಿಥಿಗಳ ನಡುವಿನ ಸಂವಾದ

ಅತಿಥಿ 1: ನಾವು ಅಮೂರ್ತನಾದ ಭಗವಂತನಲ್ಲಿ ನಂಬಿಕೆಯಿರಿಸಿದ್ದೇವೆ.

ಶ್ರೀಲ ಪ್ರಭುಪಾದ: ಯಾರು ಹೇಳುವರು ಅಮೂರ್ತ ಎಂದು? ಯಾರು ಹೇಳುವರು?

ಅತಿಥಿ 1: ಶಾಸ್ತ್ರಗ್ರಂಥಗಳಲ್ಲಿ – ಜ್ಯೋತಿರ್ಲಿಂಗ, ಅಮೂರ್ತ ಎಂದಿದೆ.

ಶ್ರೀಲ ಪ್ರಭುಪಾದ: ನೀವು ಭಗವದ್ಗೀತೆಯ ಹೊರತಾಗಿ ಬೇರೇನನ್ನೋ ನಡುವೆ ತರುತ್ತಿದ್ದೀರಿ. ನಾವು ಭಗವದ್ಗೀತೆಯನ್ನು ಬೋಧಿಸುತ್ತಿರುವೆವೆಂಬುದನ್ನು ನೀವು ತಿಳಿದುಕೊಳ್ಳಬೇಕು. ಈ ಜ್ಯೋತಿರ್ಲಿಂಗವೇ ಮೊದಲಾದ ಚಿಂತನೆಗಳು ಭಗವದ್ಗೀತೆಯಲ್ಲಿ ಇಲ್ಲ. ಅವು ಬೇರೆ ಸಾಹಿತ್ಯಗಳಲ್ಲಿ ಇರಬಹುದು. ಆದರೆ ನಾವು ಕೇವಲ ಭಗವದ್ಗೀತೆಯ ಬೋಧನೆಯಲ್ಲಿ ಆಸಕ್ತರಾಗಿದ್ದೇವೆ. ಜಗತ್ತಿನೆಲ್ಲೆಡೆ ಭಗವದ್ಗೀತೆಯನ್ನು ಅಸಂಬದ್ಧ ವ್ಯಾಖ್ಯಾನಗಳೊಂದಿಗೆ ಬೋಧಿಸಲ್ಪಟ್ಟಿದೆಯಾದ್ದರಿಂದ, ಅದನ್ನು ಸರಿಪಡಿಸಲು ನಾವು ಬಯಸುತ್ತೇವೆ.

ಅತಿಥಿ 1: ಗೀತೆಯ ಬಗ್ಗೆ ಯಾವ ಬಗೆಯ ತಪ್ಪು ಬೋಧನೆ ಮಾಡಲಾಗಿದೆ?

ಶ್ರೀಲ ಪ್ರಭುಪಾದ: ಉದಾಹರಣೆಗೆ, ನಿನ್ನೆ ನಾನು ಗೀತಾ ಸಮಿತಿಗೆ ಹೋಗಿದ್ದೆ. ಅಲ್ಲಿ ಒಂದು ದೀಪವನ್ನಿರಿಸಲಾಗಿತ್ತು. ಅಲ್ಲಿ ಕೃಷ್ಣನ ಬದಲಿಗೆ ದೀಪವನ್ನೇಕೆ ಇಡಬೇಕು?

ಅತಿಥಿ 1: ನನಗೆ ಗೊತ್ತಿಲ್ಲ.

ಶ್ರೀಲ ಪ್ರಭುಪಾದ: ನಿಮಗೆ ಗೊತ್ತಿಲ್ಲ. ಆದ್ದರಿಂದಲೇ, ತಪ್ಪು ಬೋಧನೆ ನೀಡಲಾಗಿದೆಯೆಂದು ನಾನು ಹೇಳುತ್ತಿರುವುದು. ಅಲ್ಲಿ ಕೃಷ್ಣನ ಸ್ಥಳದಲ್ಲಿ ದೀಪವೇಕೆ ಇರಬೇಕು? ಇದನ್ನು ಕೃಷ್ಣ ಹೇಳಿರುವನೇನು?

ಅತಿಥಿ 1: ಗೀತಾ ಸಮಿತಿಯ ಜನರು ಈ ಚಿಂತನೆಯೊಂದಿಗೆ ವಿಕಸಿತ…

ಶ್ರೀಲ ಪ್ರಭುಪಾದ: ಇಲ್ಲ, ಇಲ್ಲ, ಗೀತೆಯು ಕೃಷ್ಣನಿಂದ ಹೇಳಲ್ಪಟ್ಟಿದೆ. ಮತ್ತೇಕೆ ಅಲ್ಲಿ ಕೃಷ್ಣನ ಚಿತ್ರಪಟವನ್ನು ಇಡಲಾಗಿಲ್ಲ?

ಅತಿಥಿ 1: ಅವರು ಚಿತ್ರಪಟವನ್ನು ಇರಿಸಿರಲಿಲ್ಲ.

ಶ್ರೀಲ ಪ್ರಭುಪಾದ: ಹೌದು. ಅದು ಅವರು ಕೃಷ್ಣನನ್ನು ಅರ್ಥೈಸಿಕೊಂಡಿಲ್ಲವೆಂಬುದನ್ನು ಸೂಚಿಸುತ್ತದೆ. ಆದ್ದರಿ೦ದ `ಗೀತಾಸಮಿತಿ’ ಎಂದು ಕರೆದುಕೊಳ್ಳುವ ಅದು ಅನಧಿಕೃತವಾಗಿದೆ. ರಾಜಕೀಯ ಸಭೆಗಳು ಆಯೋಜನೆಯಾದೆಡೆ ನೀವು ಗಾಂಧಿ ಅಥವಾ ಜವಹರಲಾಲ್ ನೆಹರೂರ ಚಿತ್ರಪಟಗಳಿಡುವಿರಿ.

ಏಕೆಂದರೆ ಅವರು ರಾಜಕೀಯ ನೇತಾರರು. ಗೀತಾ ಸಮಿತಿಯಲ್ಲಿ ಅವರು ಭಗವದ್ಗೀತೆಯನ್ನು ಬೋಧಿಸುತ್ತಿದ್ದರೂ, ಅಲ್ಲಿ ಕೃಷ್ಣನ ಒಂದೇ ಒಂದು ಚಿತ್ರವಿಲ್ಲ. ಅವರು ದಾರಿ ತಪ್ಪಿರುವರು. ಅವರು ಭಗವದ್ಗೀತೆಯನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಆದ್ದರಿಂದ ನಾವು ಭಗವದ್ಗೀತೆಯ ಆ ಮಿಥ್ಯಾ ಬೋಧನೆ ಸರಿದೂಗಿಸಬೇಕು.

ಅತಿಥಿ 2: ಆ ಬೋಧನೆ ಯಾವುದು?

ಶ್ರೀಲ ಪ್ರಭುಪಾದ: ಅದು ಒಂದು ನಿದರ್ಶನ. ಇಂತಹ ಹಲವು ನಿದರ್ಶನಗಳಿವೆ. ಒಂಬತ್ತನೇ ಅಧ್ಯಾಯದಲ್ಲಿ ಒಂದು ಶ್ಲೋಕವಿದೆ. “ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಮ್ ನಮಸ್ಕರು. (ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: “ನಿನ್ನ ಮನಸ್ಸನ್ನು ಸದಾ ನನ್ನ ಸ್ಮರಣೆಯಲ್ಲಿ ತೊಡಗಿಸು, ನನ್ನ ಭಕ್ತನಾಗು, ನನಗೆ ನಮಸ್ಕರಿಸು ಮತ್ತು ನನ್ನನ್ನು ಪೂಜಿಸು”) ಒಬ್ಬರು ಗೌರವಾನ್ವಿತ ವಿದ್ವಾಂಸರು ಹೇಳುವರು, “ಅದು ಕೃಷ್ಣನಿಗಲ್ಲ ಆದರೆ, ಕೃಷ್ಣನ ಅಂತಃಸತ್ತ್ವಕ್ಕೆ ನಾವು ಶರಣಾಗತರಾಗಬೇಕು” ಈ ಅಸಂಬದ್ಧ ಚಿಂತನೆಯನ್ನು ಅವರು ಎಲ್ಲಿಂದ ಪಡೆದರು?

ಅತಿಥಿ 1: ‘ವಿ’ ಅವರು ಕೂಡ ಹೇಳಿರುವರು…

ಶ್ರೀಲ ಪ್ರಭುಪಾದ: ಅವೆಲ್ಲವೂ ಅಸಂಬದ್ಧ. ಯಾರು ಗೀತೆಯ ಮೂಲ ಪಾಠಕ್ಕಿಂತ ವಿಭಿನ್ನವಾದುದನ್ನು ಹೇಳುವರೋ, ಅವೆಲ್ಲವೂ ಅಸಂಬದ್ಧ.

ಅತಿಥಿ 2: ಸ್ವಾಮೀಜಿ, ಉಳಿದ ವ್ಯಾಖ್ಯೆಗಳನ್ನು ಅಸಂಬದ್ಧವೆಂದು ಹೇಳುವ ಮೂಲಕ …

ಶ್ರೀಲ ಪ್ರಭುಪಾದ: ನೀವು ವ್ಯಾಖ್ಯಾನ ನೀಡಲಾರಿರಿ! ಎಲ್ಲಕ್ಕಿಂತ ಮೊದಲು, ನೀವು ವ್ಯಾಖ್ಯಾನ ನೀಡಬಾರದು ಎಂದು ನಾನು ಹೇಳಬಯಸುತ್ತೇನೆ.

ಅತಿಥಿ 2: ಅದೇ ವಿಷಯಕ್ಕೆ ಬರೋಣ. ಆದರೆ ನಾನು, ನೀವು ಸರಿಯಾದ ವ್ಯಾಖ್ಯಾನ ನೀಡುತ್ತಿಲ್ಲವೆಂದು ಹೇಳಿದ ಮಾತ್ರಕ್ಕೆ, ನಾನು ಸರಿಯಾಗಿರುವೆನೆಂದಾಗುವುದಿಲ್ಲ. ನಾನು ಕೂಡ ಸರಿಯಾಗಿಯೇ ಇರಬೇಕಾಗುತ್ತದೆ.

ಶ್ರೀಲ ಪ್ರಭುಪಾದ: ನಾನು ಎಲ್ಲಿಯವರೆಗೆ ಸರಿಯಾದುದನ್ನು ಹೇಳುತ್ತಿರುತ್ತೇನೋ ಅಲ್ಲಿಯವರೆಗೆ ಸರಿಯಾಗಿಯೇ ಇರುತ್ತೇನೆ. ನಾನು ಕೃಷ್ಣನನ್ನು ಅವನು ಇರುವಂತೆಯೇ ನಿರೂಪಿಸುತ್ತೇನಾದ್ದರಿಂದ, ನಾನು ಸರಿಯಾಗಿಯೇ ಇರುತ್ತೇನೆ.

ಅತಿಥಿ 2: ಸ್ವಾಮೀಜಿ, ಗೌರವದಿಂದ ಕೇಳುತ್ತೇನೆ, ”ನಾನು ಸರಿಯಾಗಿರುವೆ” ಎಂದು ನೀವು ಹೇಗೆ ನಿರ್ಣಯಿಸುತ್ತೀರಿ?

ಶ್ರೀಲ ಪ್ರಭುಪಾದ: ನಾನು ಕೃಷ್ಣನ ಮಾತುಗಳನ್ನೇ ನಿರೂಪಿಸುತ್ತೇನಾದ್ದರಿಂದ ಎಲ್ಲಕ್ಕಿಂತ ಮೊದಲು ನೀವು ಉತ್ತರಿಸಿ; ಸರಿಯಾಗಿರುವುದರ ಮಾನದಂಡ ಯಾವುದು? ನೀವು ಸರಿಯಾದುದನ್ನು ಸೃಷ್ಟಿಸಲಾರಿರಿ. ಸ್ವತಃ ಕೃಷ್ಣನೇ, ‘ಮನ್ಮನಾಭವ, ಮದ್ಭಕ್ತ – ‘ನನಗೆ ಶರಣಾಗಿ, ನನ್ನ ಭಕ್ತರಾಗಿ ಎಂದು ಹೇಳಿರುವಾಗ; ನೀವು ಅದು ಹೇಗೆ ”ಇದು ಕೃಷ್ಣನಿಗಲ್ಲ (ಅವನಿಗೆ ಶರಣಾಗಬೇಕಾದುದಿಲ್ಲ” ಎಂದು ಹೇಳುತ್ತೀರಿ?

ಇದು ಅಸಂಬದ್ಧವಲ್ಲವೆ? ನಾನೇನಾದರೂ, ”ನನಗೊಂದು ಲೋಟ ನೀರು ಕೊಡು” ಎಂದು ಕೇಳಿದಾಗ, ನೀವು, ”ಇದನ್ನು (ನೀರಿನ ಲೋಟವನ್ನು ಕೊಡಬೇಕಾದುದು ಸ್ವಾಮೀಜಿಗಲ್ಲ” ಎಂದು ಚಿಂತಿಸುವಿರಾದಲ್ಲಿ ಇದು ನಿಮ್ಮ ವ್ಯಾಖ್ಯಾನವಾಗುವುದಿಲ್ಲವೆ?

ಅತಿಥಿ 1: ಆದರೆ ಶರಣಾಗತಿಯನ್ನು ಏಸುಕ್ರಿಸ್ತನೂ ಸಾರಿರುವನು, ಮಹಮ್ಮದರೂ ಹೇಳಿರುವರು. ಪ್ರತಿಯೊಬ್ಬರೂ ಬೋಧಿಸಿರುವರು.

ಶ್ರೀಲ ಪ್ರಭುಪಾದ: ಇತರರು ಬೇಕಿದ್ದರೆ ಕ್ರಿಸ್ತನಿಗೆ ಶರಣಾಗಲಿ, ನೀವೇಕೆ ಕೃಷ್ಣನಿಗೆ ಶರಣಾಗಬಾರದು?

ಅತಿಥಿ 1: ಅದು ಸರಿ, ಆದರೆ…

ಶ್ರೀಲ ಪ್ರಭುಪಾದ: ಅದೇ ಸರಿ, ಆದರೆ ನಿಮಗೆ ಹೇಗೆ ಎಂಬುದು ತಿಳಿದಿಲ್ಲ.

ಅತಿಥಿ 1: ನಿಮ್ಮ ಯೋಚನಾ ಮಾರ್ಗ ಹಾಗೂ ನಿಮ್ಮ ಉದ್ದೇಶ ಭಗವಾನ್ ಶ್ರೀಕೃಷ್ಣನು ಸಮಸ್ತ ಜಗತ್ತಿನ ಭಗವಂತನೆಂದು ಸಾರುವುದು, ಆದ್ದರಿಂದ…

ಶ್ರೀಲ ಪ್ರಭುಪಾದ: ಹೌದು, ಭಗವಾನ್ ಶ್ರೀಕೃಷ್ಣನು ಜಗದೊಡೆಯನಾಗಿರುವನು.

ಅತಿಥಿ 1: ಹಾಗಾದರೆ ನೀವು ನನಗೆ ಅದನ್ನೇ ಹೇಳಲು ಬಯಸುತ್ತಿರುವಿರಿ?

ಶ್ರೀಲ ಪ್ರಭುಪಾದ: ಹೌದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi