ಶ್ರೀಲ ಭಕ್ತಿವಿನೋದ ಠಾಕೂರ

ಶ್ರೀಲ ಭಕ್ತಿವಿನೋದರು ನಮ್ಮ ಪರಮ ಗುರುಗಳ ಪರಮ ಗುರುಗಳು. ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಂದೆ. ಅವರ ತೀರೋಭಾವದ ದಿನವಾದ ಇಂದು – ಜೂನ್‌ 25, 2025, ಅವರ ಜೀವನದ ಒಂದು ಸಂಕ್ಷಿಪ್ತ ಚಿತ್ರಣ ನಿಮಗಾಗಿ ನೀಡಿದೆ.

ನಮೋ ಭಕ್ತಿವಿನೋದಾಯ ಸಚ್ಚಿದಾನಂದ ನಾಮಿನೇ |

ಗೌರಶಕ್ತಿಸ್ವರೂಪಾಯ ರೂಪಾನುಗವರಾಯ ತೇ  ||

ಶ್ರೀ ಚೈತನ್ಯ ಮಹಾಪ್ರಭುಗಳ ಅಲೌಕಿಕ ಶಕ್ತಿಯಾದ ಸಚ್ಚಿದಾನಂದ ಭಕ್ತಿವಿನೋದ ಅವರಗೆ ನನ್ನ ಗೌರವಾನ್ವಿತ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಅವರು ಶ್ರೀಲ ರೂಪ ಗೋಸ್ವಾಮಿ ಅವರ ನೇತೃತ್ವದ ಗೋಸ್ವಾಮಿಗಳ ಕಟ್ಟುನಿಟ್ಟಿನ ಅನುಯಾಯಿ.”

ಬಾಲ್ಯ

ಶ್ರೀಲ ಭಕ್ತಿವಿನೋದ ಠಾಕುರ ಅವರು ವೀರ್‌ನಗರದಲ್ಲಿ (ಬೀರ್‌ನಗರ, ಬಂಗಾಳ), 1838ರಲ್ಲಿ ಜನಿಸಿದರು. ಆಗ ಅವರ ಹೆಸರು ಕೇದಾರನಾಥ ದತ್ತ. ಅವರು ಆನಂದ ಚಂದ್ರ ದತ್ತ ಮತ್ತು ಜಗತ್‌ ಮೋಹಿನಿ ದೇವಿ ಅವರ ಮೂರನೆಯ ಪುತ್ರ. ಕುಂಟುಂಬವು ಸಾಕಷ್ಟು ಶ್ರೀಮಂತ ವಾತಾವರಣಲ್ಲಿಯೇ ಇತ್ತು. ಆದರೆ 1849ರಲ್ಲಿ ಕೇದಾರನಾಥರ ತಂದೆ ನಿಧನರಾದ ಮೇಲೆ ಕುಟುಂಬವು ತೀವ್ರ ಬಡತನದಲ್ಲಿ ಸಿಲುಕಿತು.  1850ರಲ್ಲಿ ಕೇದಾರನಾಥರ ತಾಯಿ ರಾಣಘಾಟದ ಮಧುಸೂದನ ಮಿತ್ರ ಅವರ ಪುತ್ರಿಯೊಂದಿಗೆ ವಿವಾಹವನ್ನು ಏರ್ಪಡಿಸಿದರು.

ಕೇದಾರನಾಥ ಅವರು ಬಾಲ್ಯದಲ್ಲಿ ತಮ್ಮ ಸೋದರಮಾವ ಕಾಶಿಪ್ರಸಾದ್‌ ಘೋಷ್‌ ಅವರ ಬಳಿ, ಅವರ ಕಲ್ಕತ್ತ ಮನೆಯಲ್ಲಿ ಶಿಕ್ಷಣ ಪಡೆದಿದ್ದರು. ಕಾಶಿಪ್ರಸಾದ್‌ ಅವರು ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು ಮತ್ತು ಅನೇಕ ಸಾಹಿತ್ಯ ವಲಯಗಳಲ್ಲಿ ಪ್ರಮುಖರಾಗಿದ್ದರು. ಅಲ್ಲದೆ, ಅವರು “ಹಿಂದೂ ಇಂಟೆಲಿಜೆನ್ಸರ್‌” ಪತ್ರಿಕೆಯ ಸಂಪಾದಕರೂ ಆಗಿದ್ದರು. ಕೇದಾರನಾಥ್‌ ತಮ್ಮ ಮಾವನ ಪುಸ್ತಕಗಳ ಅಧ್ಯಯನ ಮಾಡಿದರು ಮತ್ತು ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸಲು ನೆರವಾದರು. ಅವರು ಉತ್ತಮ ಓದುಗರಾಗಿ, ಭಾಷಣಕಾರರಾಗಿ ಮತ್ತು ಲೇಖಕರಾಗಿ  ಇಂಗ್ಲಿಷ್‌ ಭಾಷಾ  ತಜ್ಞರಾದರು. 18ವರ್ಷ‌ ವಯಸ್ಸಿನವರಾಗಿದ್ದಾಗ ಅವರು ಕಲ್ಕತ್ತದ ಕಾಲೇಜು ವಿದ್ಯಾರ್ಥಿಯಾದರು. ಅಲ್ಲಿ ಅವರು ಇಂಗ್ಲಿಷ್‌ ಮತ್ತು ಬಂಗಾಳಿ ಭಾಷೆಯಲ್ಲಿ ಅಸಂಖ್ಯ ಲೇಖನಗಳನ್ನು ಬರೆದರು. ಅವು ಸ್ಥಳೀಯವಾಗಿ ಪ್ರಕಟಗೊಂಡವು. ಅವರು ಈ ಎರಡೂ ಭಾಷೆಗಳಲ್ಲಿ ಉಪನ್ಯಾಸವನ್ನೂ ನೀಡುತ್ತಿದ್ದರು.

ಶಿಕ್ಷಕರಾಗಿ (1858 – 1866)

ವಾಣಿಜ್ಯೋದ್ಯಮದಲ್ಲಿ ಭ್ರಷ್ಟಾಚಾರವನ್ನು ಕಂಡ ಮೇಲೆ ಕೇದಾರನಾಥರು ಆ ಉದ್ಯಮ ಹಿಡಿಯದೆ, ಶಿಕ್ಷಕರಾಗಲು ನಿರ್ಧರಿಸಿದರು. ಒರಿಸ್ಸಾದ ಕೇಂದ್ರಪಾರಾ ಗ್ರಾಮದಲ್ಲಿ ಅವರು ಇಂಗ್ಲಿಷ್‌ ಶಾಲೆಯನ್ನು ಆರಂಭಿಸಿದರು. ಹೀಗೆ ರಾಜ್ಯದಲ್ಲಿ ಇಂಗ್ಲಿಷ್‌ ಶಿಕ್ಷಣದ ಪ್ರವರ್ತಕರಾದರು. ಮುಂದೆ ಅವರು ಪುರಿಗೆ ಹೋಗಿ ಶಿಕ್ಷಕರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರಿಗೆ ಕಟಕ್‌ ಶಾಲೆಯೊಂದರಲ್ಲಿ ಶಿಕ್ಷಕರ ಕೆಲಸ ದೊರೆಯಿತು. ಅನಂತರ ಅವರು ಭದ್ರಕ್‌ ಶಾಲೆಯ ಮುಖ್ಯೋಪಾಧ್ಯಾಯರಾದರು. ಅದಾದ ಮೇಲೆ ಮದಿನಿಪುರದ ಶಾಲೆಯ ಮುಖ್ಯೋಪಾಧ್ಯಾಯರಾದರು. ಕೆಲಸದಲ್ಲಿನ ಅವರ ಶ್ರದ್ಧೆಯು ಶಾಲಾ ಆಡಳಿತ ವರ್ಗದ ಗಮನ ಸೆಳೆಯಿತು.

ಮುಖ್ಯೋಪಾಧ್ಯಾಯರಾಗಿ, ಭಕ್ತಿವಿನೋದ ಅವರು ಅನೇಕ ಧರ್ಮಗಳನ್ನು ಕುರಿತು ಅಧ್ಯಯನ ನಡೆಸಿದರು. ಶ್ರೀ ಚೈತನ್ಯ ಮಹಾಪ್ರಭು ಸ್ಥಾಪಿಸಿದ್ದ ಧರ್ಮವೇ‌ ನಿಜವಾದ ಧರ್ಮವೆಂದು ಅವರಿಗೆ ಸಾಕ್ಷಾತ್ಕಾರವಾಯಿತು.

ಸರ್ಕಾರಿ ಸೇವೆ (1866-1893)

ಭಕ್ತಿವಿನೋದ ಅವರು 1866 ರಲ್ಲಿ, ಬಂಗಾಳದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್‌ ಹುದ್ದೆಯನ್ನು ಸ್ವೀಕರಿಸಿದರು. ಮುಂದಿನ ವರ್ಷಗಳಲ್ಲಿ ಅವರು ಬಂಗಾಳದ ಅನೇಕ ಕಡೆಗಳಲ್ಲಿ  ಸರ್ಕಾರಿ ಹುದ್ದೆಗಳನ್ನು, ಮುಖ್ಯವಾಗಿ  ಡೆಪ್ಯುಟಿ ಮ್ಯಾಜಿಸ್ಟ್ರೇಟ್‌ ಸ್ಥಾನದಲ್ಲಿ ಕೆಲಸ ನಿರ್ವಹಿಸಿದರು.  

ಅವರು ಶ್ರೀ ಚೈತನ್ಯ ಚರಿತಾಮೃತವನ್ನು ಅನೇಕ ಬಾರಿ ಓದಿದರು.  ಅಂತಿಮವಾಗಿ ಅವರು ಪರಿಶುದ್ಧ ಭಕ್ತಿಶಾಸ್ತ್ರದಲ್ಲಿ ತಲ್ಲೀನರಾದರು.

ಪುರಿಯಲ್ಲಿದ್ದಾಗ, ಶ್ರೀ ಭಕ್ತಿವಿನೋದ ಠಾಕುರ ಅವರು ಜಗನ್ನಾಥ ಮಂದಿರದ ವ್ಯವಸ್ಥಾಪಕರಾದರು. ಅವರು ಮಂದಿರದಲ್ಲಿ ಕ್ರಮಬದ್ಧವಾದ ವಿಗ್ರಹ ಆರಾಧನೆಯನ್ನು ಸ್ಥಾಪಿಸಿದರು. ಮಂದಿರದ ಆವರಣದಲ್ಲಿ ಅವರು “ಭಕ್ತಿ ಮಂಟಪ”ವನ್ನು ಸ್ಥಾಪಿಸಿದರು. ಅಲ್ಲಿ ಪ್ರತಿದಿನ ಶ್ರೀಮದ್‌ ಭಾಗವತವನ್ನು ಕುರಿತು ಉಪನ್ಯಾಸ ನಡೆಯುತ್ತಿತ್ತು. ಭಕ್ತಿವಿನೋದ ಠಾಕುರರು ಮುಖ್ಯವಾಗಿ ತೋಟಾ ಗೋಪಿನಾಥ ಮಂದಿರ, ಹರಿದಾಸ ಠಾಕುರರ ಸಮಾಧಿ, ಸಿದ್ಧ ಬಕುಲ ಮತ್ತು ಗಂಭೀರಾಗಳಲ್ಲಿ ಕೃಷ್ಣನನ್ನು ಕುರಿತು ಚರ್ಚಿಸುತ್ತ ಮತ್ತು ಜಪಿಸುತ್ತ ಇರುತ್ತಿದ್ದರು.

ಭಕ್ತಿಸಿದ್ಧಾಂತರ ಜನನ

ಭಕ್ತಿವಿನೋದರ ಏಳನೆಯ ಪುತ್ರ ಬಿಮಲಾ ಪ್ರಸಾದ್‌ ಹುಟ್ಟಿದ್ದು ಫೆಬ್ರವರಿ 6, 1874ರಂದು, ಶ್ರೀ ಪುರುಷೋತ್ತಮ ಕ್ಷೇತ್ರದಲ್ಲಿ (ಜಗನ್ನಾಥಪುರಿ).  ಶ್ರೀ ಚೈತನ್ಯ ಮಹಾಪ್ರಭುಗಳ ಸಂದೇಶವನ್ನು ಜಗತ್ತಿನಾದ್ಯಂತ ಬೋಧಿಸಲು “ವಿಷ್ಣುವಿನ ಒಂದು ಕಿರಣ”ವನ್ನು ಕಳುಹಿಸು ಎಂದು ಭಕ್ತಿವಿನೋದರು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. ದೇವೋತ್ತಮನು ಅದಕ್ಕೆ ಉತ್ತರಿಸಿದನೋ ಎನ್ನುವಂತೆ ಬಿಮಲಾ ಪ್ರಸಾದರ ಜನನವಾಯಿತು.

ಬಿಮಲಾ ಪ್ರಸಾದರು ಮುಂದೆ  ಶ್ರೀ ಶ್ರೀಮದ್‌ ಭಕ್ತಿಸಿದ್ಧಾಂತ ಸರಸ್ವತಿಯಾಗುವವರಿದ್ದರು ಮತ್ತು ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಆಧ್ಯಾತ್ಮಿಕ ಗುರುವಾಗುವವರಿದ್ದರು. 

ಆಚಾರ್ಯರಾಗಿ (1874-1914)

ಶ್ರೇಷ್ಠ ಭಕ್ತರಾಗಿದ್ದ ಭಕ್ತಿವಿನೋದರು ಸದಾ ಮಾನವೀಯತೆಯನ್ನು ತೋರುತ್ತಿದ್ದರು. ಅವರು ನೈತಿಕ ಗುಣಮಟ್ಟಗಳನ್ನು ಅನುಸರಿಸುತ್ತಿದ್ದರು ಮತ್ತು ಯಾರಿಂದಲೂ ಏನೂ ಉಡುಗೊರೆ ಸ್ವೀಕರಿಸುತ್ತಿರಲಿಲ್ಲ. ತಮ್ಮ ಸರ್ಕಾರಿ ಕರ್ತವ್ಯಗಳಲ್ಲಿ ಕೂಡ ಅವರು  ಯಾವುದೇ ಗೌರವ ಅಥವಾ ಪದವಿಗಳನ್ನು ನಿರಾಕರಿಸಿದ್ದರು.

ಭಕ್ತಿವಿನೋದ ಠಾಕುರ ಅವರು 1881ರಲ್ಲಿ, ತಮ್ಮ ವೈಷ್ಣವ ಪತ್ರಿಕೆ “ಸಜ್ಜನತೋಷಣಿ”ಯನ್ನು ಪ್ರಕಟಿಸಲು ಆರಂಭಿಸಿದರು.

ಶ್ರೀಲ ಭಕ್ತಿವಿನೋದ ಠಾಕುರರು ಈ ಮೊದಲು, 1866ರಲ್ಲಿ,  ಕಾಶಿ, ಪ್ರಯಾಗ, ಮಥುರಾ ಮತ್ತು ವೃಂದಾವನಗಳ ಯಾತ್ರೆ ಕೈಗೊಂಡಿದ್ದರು. ವ್ರಜದಲ್ಲಿ ಅವರು ಶ್ರೀಲ ಜಗನ್ನಾಥ ದಾಸ ಬಾಬಾಜಿ ಅವರನ್ನು ಭೇಟಿ ಮಾಡಿದರು ಮತ್ತು ಅವರನ್ನು ತಮ್ಮ ಶಾಶ್ವತ ಪೂಜಾರ್ಹ‌ ಗುರುವಾಗಿ ಸ್ವೀಕರಿಸಿದರು.

ಭಕ್ತಿವಿನೋದ ಠಾಕೂರರು 1908 ಮತ್ತು 1914ರ ಮಧ್ಯೆ ತಮ್ಮ ಬಹಳ ಸಮಯವನ್ನು ಪವಿತ್ರ ನಾಮವನ್ನು ಜಪಿಸುತ್ತ ಏಕಾಂತದಲ್ಲಿ ಕಳೆದರು.

ಅವರು ಸಂಸ್ಕೃತದಲ್ಲಿ ಅನೇಕ ಪುಸ್ತಕಗಳನ್ನು ಬರೆದರು. ಅವುಗಳಲ್ಲಿ ಶ್ರೀ ಕೃಷ್ಣ ಸಂಹಿತ, ತತ್ತ್ವ ಸೂತ್ರಂ, ತತ್ತ್ವ ವಿವೇಕ ಹಾಗೂ ದತ್ತ  ಕೌಸ್ತುಭಗಳು ಸೇರಿವೆ. ಅವರು ಬಂಗಾಳಿ, ಸಂಸ್ಕೃತ, ಇಂಗ್ಲಿಷ್‌, ಲ್ಯಾಟಿನ, ಉರ್ದು‌, ಪರ್ಷಿಯನ್‌ ಮತ್ತು ಒರಿಯಾಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಅವರು ಚೈತನ್ಯೋಪನಿಷತ್‌ ಅನ್ನು ಪಡೆದು ಅದನ್ನು ಕುರಿತು ಸಂಸ್ಕೃತದಲ್ಲಿ ವ್ಯಾಖ್ಯಾನ ಬರೆದರು.

ಶ್ರೀಲ ಭಕ್ತಿವಿನೋದರು ಜೂನ್‌ 23, 1914 ರಂದು ಭೌತಿಕ ದೃಷ್ಟಿಯಿಂದ ಕಣ್ಮರೆಯಾದರು.

****************

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi