ಬುದ್ಧಿಯೋಗ

ವಿಶ್ಲೇಷಣೆಯಿಂದ ಪ್ರೇಮದ ಕಡೆಗೆ

ದೇವರನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ನಮ್ಮ ನಿರ್ಣಯ ಏನಾಗಿರುತ್ತದೆ?

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಸೆಪ್ಟೆಂಬರ್‌ 1973ರಲ್ಲಿ ಲಂಡನ್‌ನಲ್ಲಿ  ನೀಡಿದ ಒಂದು ಉಪನ್ಯಾಸ.

  ಏಷಾ ತೇಽಭಿಹಿತಾ ಸಾಙ್ಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು

  ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬನ್ಧಂ ಪ್ರಹಾಸ್ಯಸಿ

“ಈವರೆಗೆ ನಾನು ಈ ಜ್ಞಾನವನ್ನು ನಿನಗೆ ವಿಶ್ಲೇಷಣಾತ್ಮಕವಾಗಿ ತಿಳಿಸಿಕೊಟ್ಟಿದ್ದೇನೆ. ಈಗ ನಾನು ಇದನ್ನು ಕಾಮ್ಯಫಲವಿಲ್ಲದ ಕಾರ್ಯದ ರೀತಿಯಲ್ಲಿ ವಿವರಿಸುತ್ತೇನೆ ಕೇಳು. ಓ ಪೃಥಾ ಪುತ್ರನೇ, ನೀನು ಇಂತಹ ಜ್ಞಾನದಿಂದ ಕರ್ಮದಲ್ಲಿ ತೊಡಗಿದರೆ ಕರ್ಮಬಂಧನದಿಂದ ಮುಕ್ತನಾಗುವೆ.”                          

(ಭಗವದ್‌ಗೀತಾ: 2.39)

ನೀವು ಒಳ್ಳೆಯ ಕರ್ಮಗಳನ್ನಾದರೂ ಮಾಡಿ ಅಥವಾ ಕೆಟ್ಟ ಕರ್ಮಗಳನ್ನಾದರೂ ಮಾಡಿ, ಅದಕ್ಕೆ ಪ್ರತಿಫಲಗಳು ಇರುತ್ತವೆ. ಈ ದೇಹದಲ್ಲಿರುತ್ತ ನಾವು ಧರ್ಮಶ್ರದ್ಧೆಯಿಂದ ವರ್ತಿಸಿದರೆ, ಆಗ ನಮ್ಮ ಭವಿಷ್ಯವು ಬಹಳ ಉತ್ತಮವಾಗಿರುತ್ತದೆ. ನಾವು ಧರ್ಮಶ್ರದ್ಧೆಯಿಲ್ಲದೆ ವರ್ತಿಸಿದರೆ ಆಗ ನಮ್ಮ ಭವಿಷ್ಯವು ಬಹಳ ಉತ್ತಮವಾಗಿರುವುದಿಲ್ಲ. ಆದ್ದರಿಂದ ನಾವು ಧರ್ಮಶ್ರದ್ಧೆಯಿಂದ ವರ್ತಿಸಬೇಕೆ ವಿನಾ ಧರ್ಮಶ್ರದ್ಧೆಯಿಲ್ಲದೆ ಅಲ್ಲ. ಅದೇ ಮಾನವ ಜೀವನ. ಯಾವ ಬಗೆಯ ಕೆಲಸಗಳನ್ನು ಮಾಡಬೇಕು ಎಂದು ನಾವು ತಿಳಿದಿರಬೇಕು. ಭಗವದ್‌ಗೀತೆಯ ಹದಿನಾರನೆಯ ಅಧ್ಯಾಯದಲ್ಲಿ ನೀವು ಈ ಶ್ಲೋಕವನ್ನು ನೋಡುತ್ತೀರಿ (16.7) ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರ್‌ ಅಸುರಾಃ “ಆಸುರೀ ಪ್ರಕೃತಿಯವರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿಯದು.”

ಒಬ್ಬ ವ್ಯಕ್ತಿಯು ತಾನು ಬಯಸಿದ ಯಾವುದನ್ನು ಬೇಕಾದರೂ ಮನಸೋಯಿಚ್ಛೆ ಮಾಡಬಹುದು ಎಂದು ಹೇಳಲಾಗದು. ಕನಿಷ್ಠಪಕ್ಷ ಮಾನವ ಜೀವಿಗಳಿಗಾದರೂ ಅದಕ್ಕೆ ಅವಕಾಶವಿಲ್ಲ. ಸಾಮಾನ್ಯ ಜೀವನದಲ್ಲಿಯೂ ನೀವು ಹುಚ್ಚು ಹುಚ್ಚಾಗಿ ವರ್ತಿಸಿದರೆ ಸರ್ಕಾರದ ಕಾನೂನುಗಳ ಹಿಡಿತದಲ್ಲಿ ನೀವು ಅನೇಕ ಕಷ್ಟಗಳಿಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಅದೇ ರೀತಿಯಲ್ಲಿ ದೇವರ ನಿಯಮಗಳನ್ನು ನೀವು ಮುರಿದರೆ ಐಹಿಕ ಪ್ರಕೃತಿಯಿಂದ ನಮಗೆ ಶಿಕ್ಷೆಯಾಗುತ್ತದೆ.

 ಭಗವದ್‌ ಗೀತೆಯಲ್ಲಿ ಇಲ್ಲಿಯವರೆಗೆ ಕೃಷ್ಣನು ಆತ್ಮ ಮತ್ತು ದೇಹದ ವಿಶ್ಲೇಷಣಾತ್ಮಕ ಅಧ್ಯಯನವಾದ ಸಾಂಖ್ಯವನ್ನು ವರ್ಣಿಸಿದ್ದಾನೆ. ಉದಾಹರಣೆಗೆ, ಒಬ್ಬ ವೈದ್ಯಕೀಯ ವ್ಯಕ್ತಿಯು ದೇಹದ ಅಂಗರಚನೆ ಮತ್ತು ಶರೀರ ವಿಜ್ಞಾನಗಳ ನೆರವಿನಿಂದ ದೇಹದ ಭಾಗಶಃ ವಿಶ್ಲೇಷಣೆಯನ್ನು ಮಾಡಬಲ್ಲ. ಮಿದಿಳು ಹೇಗೆ ಕೆಲಸ ಮಾಡುತ್ತದೆ, ವಿವಿಧ ಸ್ರಾವಗಳು ಹೇಗೆ ರಕ್ತವಾಗಿ ರೂಪಾಂತರಗೊಳ್ಳುತ್ತವೆ, ಹೃದಯವು ಹೇಗೆ ಕೆಲಸ ಮಾಡುತ್ತದೆ ಎಂದು ಅವನು ಅಧ್ಯಯನ ಮಾಡಿದ್ದಾನೆ. ಇದು ಒಂದು ವಿಶ್ಲೇಷಣಾತ್ಮಕ ಅಧ್ಯಯನ.

ದೇಹ ಮತ್ತು ಆತ್ಮಕ್ಕೆ ಸಂಬಂಧಿಸಿದಂತೆ ಆ ವಿಷಯವನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದೆ. ಈಗ ಕೃಷ್ಣನು ಹೇಳುತ್ತಾನೆ, ಬುದ್ಧಿ: ಯೋಗೇ ತ್ವಿಮಾಂ ಶೃಣು “ಜ್ಞಾನದ ಇನ್ನೊಂದು ಶಾಖೆಯನ್ನು ಕುರಿತು ಈಗ ಕೇಳು. ಅದೇ ಬುದ್ಧಿಯೋಗ.” ಬುದ್ಧಿಯೋಗವೆಂದರೆ ಆಧ್ಯಾತ್ಮಿಕ ಜೀವನ.

ಆಧ್ಯಾತ್ಮಿಕ ಜೀವನವನ್ನು ಕುರಿತು ನಾವು ಕೃಷ್ಣನಿಂದ ಬೋಧನೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅವನೇ ಪರಮ ಪ್ರಮಾಣ. ಪರಮ ಚೇತನನಾದ ಕೃಷ್ಣ ಮತ್ತು ಬಿಡಿ ವ್ಯಕ್ತಿಯ ಚೇತನನಾದ ಜೀವಿಯ ನಡುವೆ ಸಂಭಾಷಣೆ ನಡೆದಾಗ ಜೀವಿಯು ಸದಾ ಅಧೀನ ಸ್ಥಾನದಲ್ಲಿರುತ್ತಾನೆ. ಪ್ರಸ್ತುತ ಸನ್ನಿವೇಶದಲ್ಲಿ ಜನರಿಗೆ ಪರಮ ಪುರುಷ ಯಾರು ಎಂದು ತಿಳಿದಿಲ್ಲ. ನಾವು ವೇದಗಳಿಂದ ಆದೇಶಗಳನ್ನು ತೆಗೆದುಕೊಳ್ಳಬೇಕು: ನಿತ್ಯೋ ನಿತ್ಯಾನಾಂ ವಿದಧಾತಿ ಕಾಮಾನ್‌ “ಎಲ್ಲ ಶಾಶ್ವತ ಜೀವಿಗಳಲ್ಲಿ ಅತ್ಯಂತ ಶ್ರೇಷ್ಠನಾದ ಶಾಶ್ವತ ಜೀವಿಯು ಇತರ ಎಲ್ಲರಿಗೆ ಜೀವನದ ಆವಶ್ಯಕ ವಸ್ತುಗಳನ್ನು ಒದಗಿಸುತ್ತಿದ್ದಾನೆ.” ಪಕ್ಷಿಗಳು, ಮೃಗಗಳು ಮತ್ತು ಮಾನವ ಜೀವಿಗಳಿಗೆ ಜೀವಿಸಲೂ ಅನೇಕ ವಸ್ತುಗಳು ಆವಶ್ಯಕವಾಗಿವೆ – ಹೂವುಗಳು, ಹಣ್ಣುಗಳು, ಹಾಲು – ಮತ್ತು ಪ್ರತಿಯೊಂದನ್ನೂ ಕೃಷ್ಣನು ಒದಗಿಸುತ್ತಿದ್ದಾನೆ. ಆದ್ದರಿಂದ ಅವನು ಪರಮ ಪುರುಷ.

ಅವನು ಹೇಗೆ ಸರ್ವೋತ್ಕೃಷ್ಟ? ಒಂದು ಕುಟುಂಬದಲ್ಲಿ ತಂದೆಯೇ ಸರ್ವೋನ್ನತ ಎಂದು ಪರಿಗಣಿಸಲಾಗುತ್ತದೆ. ಏಕೆ? ಏಕೆಂದರೆ ಅವನು ಇಡೀ ಕುಟುಂಬದ ಕಾಳಜಿಯನ್ನು ವಹಿಸುತ್ತಾನೆ. ಅದೇ ರೀತಿಯಲ್ಲಿ ಪರಮ ಪುರುಷನಾದ ಕೃಷ್ಣನು ಸಮಸ್ತ ಸೃಷ್ಟಿಯನ್ನೇ ಪಾಲಿಸುತ್ತಾನೆ – ಐಹಿಕ ಮತ್ತು ಆಧ್ಯಾತ್ಮಿಕವಾದ ಸಮಸ್ತ ಅಸಂಖ್ಯಾತವಾದ ವಿಶ್ವಗಳೆಲ್ಲವನ್ನೂ ಪಾಲಿಸುತ್ತಾನೆ.

ಆದ್ದರಿಂದ, ನಾವು ಸರ್ವೋತ್ಕೃಷ್ಟನ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದರೆ ಅದೇ ನಮ್ಮ ಸಹಜ ಸ್ಥಿತಿ. ಏಕೆಂದರೆ ನಾವು ಸಹಜವಾಗಿಯೇ ಅವನಿಗೆ ಅಧೀನರಾಗಿದ್ದೇವೆ. ಅಧೀನ ಸ್ಥಾನದಲ್ಲಿ ಇರುವುದು ಎಂದರೆ ಧಣಿಯ ಆದೇಶಗಳ ಪ್ರಕಾರ ನಾವು ನಡೆದುಕೊಳ್ಳಬೇಕು. ಪ್ರತಿಯೊಬ್ಬನೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾನೆ. ಆದ್ದರಿಂದ ನಾವು ಕೃಷ್ಣನನ್ನು ಪರಮಾಚಾರ್ಯ ಎಂದು ಗುರುತಿಸಿ ಅವನ ಆದೇಶಗಳನ್ನು ಅನುಸರಿಸಿದರೆ, ಅದನ್ನೇ ಬುದ್ಧಿಯೋಗ ಎಂದು ಕರೆಯುತ್ತಾರೆ. ಅದೇ ನಿಜವಾದ ಬುದ್ಧಿವಂತಿಕೆ.

`ಬುದ್ಧಿ’ ಎಂದರೆ `ತಿಳಿವಳಿಕೆ’ ಮತ್ತು `ಯೋಗ’ ಎಂದರೆ `ಜೋಡಿಸುವುದು’. ಭಗವದ್‌ಗೀತೆಯ ಹತ್ತನೆಯ ಅಧ್ಯಾಯದಲ್ಲಿ ನೀವು ಈ ಶ್ಲೋಕವನ್ನು ನೋಡುತ್ತೀರಿ:

ತೇಷಾಂ ಸತತ ಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್‌

ದದಾಮಿ ಬುದ್ಧಿಯೋಗಂ ತಂ ಯೇನ ಮಾಮ್‌ ಉಪಯಾಂತಿತೇ

ಹಾಗಾದರೆ ಬುದ್ಧಿಯೋಗ ಎಂದರೆ ಏನು? ಇಲ್ಲಿ ಕೃಷ್ಣನು ವಿವರಿಸುತ್ತಾನೆ: ತೇಷಾಂ ಸತತ ಯುಕ್ತಾನಾಂ “ಜನರು ದಿನದ ಇಪ್ಪತ್ತನಾಲ್ಕು ಗಂಟೆಯೂ ಮಗ್ನರಾಗಿರುತ್ತಾರೆ….” ಯಾವ ಬಗೆಯ ಮಗ್ನತೆ? ಭಜತಾಂ ಪ್ರೀತಿಪೂರ್ವಕಮ್‌ “ಸದಾ ಪ್ರಭುವಿಗೆ ಏನಾದರೂ ಸೇವೆಯನ್ನು ಮಾಡಲು ಪ್ರಯತ್ನಿಸುತ್ತಿರುವುದು.” ಹೇಗೆ? ಪ್ರೀತಿಪೂರ್ವಕಮ್‌ “ಪ್ರೀತಿ ಮತ್ತು ಶ್ರದ್ಧೆಯಿಂದ.” “ಓಹ್‌ ಇದನ್ನು ನಾನು ಮಾಡಬೇಕಲ್ಲಾ” ಎಂದು ಯೋಚಿಸಿಕೊಂಡಲ್ಲ. ಬದಲಿಗೆ, “ಓಹ್‌! ಇದನ್ನು ನಾನು ಚೆನ್ನಾಗಿ ಮಾಡೋಣ.” ಅದೇ ನಿಜವಾದ ಪ್ರೀತಿ.

ಪ್ರೀತಿ ಇಲ್ಲದಿದ್ದರೆ ಈ ಐಹಿಕ ಜಗತ್ತಿನಲ್ಲಿ ನೀವು ಯಾವುದನ್ನೂ ಸೊಗಸಾಗಿ ಮಾಡಲಾಗುವುದಿಲ್ಲ. ಯಾವುದರ ಬಗೆಗಾಗಲಿ ನಿಮಗೆ ಒಲವು ಇಲ್ಲದಿದ್ದರೆ, ಅದನ್ನು  ನೀವು ಬಹಳ ಸೊಗಸಾಗಿ ಮಾಡಲಾರಿರಿ. ಉದಾಹರಣೆಗೆ ಸಂಗೀತವನ್ನೇ ತೆಗೆದುಕೊಳ್ಳಿ. ಸಂಗೀತಗಾರನಿಗೆ ಸಂಗೀತದ ಬಗೆಗೆ ಗಾಢವಾದ ಒಲವು ಇರುವುದರಿಂದ ಅವನು ಪರಿಪೂರ್ಣವಾಗಿ ಹಾಡಲು ಪ್ರಯತ್ನಿಸುತ್ತಾನೆ. ಆದ್ದರಿಂದ ಪ್ರೀತಿಯೇ ಆಧಾರ.

ಅದೇ ರೀತಿಯಲ್ಲಿ, ಕೃಷ್ಣನಿಗೆ ನೀವು ಸೇವೆಯನ್ನು ಸಲ್ಲಿಸುವಾಗ, ನಿಮಗೆ ಅವನಲ್ಲಿ ಪ್ರೀತಿ ಇಲ್ಲದಿದ್ದರೆ ನೀವು ಅವನಿಗೆ ಬಹಳ ಸೊಗಸಾಗಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಅಪಾರವಾದ ಪ್ರೀತಿ ಮತ್ತು ವಾತ್ಸಲ್ಯವಿಲ್ಲದೆ ನೀವು ಸೇವೆ ಸಲ್ಲಿಸಿದರೆ ಕೃಷ್ಣನು ನಿಮ್ಮ ಸೇವೆಯನ್ನು ಸ್ವೀಕರಿಸುವುದಿಲ್ಲ. ಕೃಷ್ಣನಿಗೆ ನಿಮ್ಮ ಸೇವೆಯ ಅಗತ್ಯವಿಲ್ಲ. ಅವನು ಸ್ವಪರ್ಯಾಪ್ತ. (ಸ್ವಯಂಸಂಪೂರ್ಣ). ಅವನಿಗೆ ಎಲ್ಲಾದರೂ ಮತ್ತು ಎಲ್ಲ ಕಡೆಯೂ ಅನೇಕ ಸೇವಕರಿದ್ದಾರೆ. ಆದ್ದರಿಂದ ಕೃಷ್ಣನಿಗೆ ನಮ್ಮ ಸೇವೆಯ ಅಗತ್ಯವಿಲ್ಲ. ಆದರೆ ನಾವು ಕೃಷ್ಣನಿಗೆ ಸೇವೆ ಸಲ್ಲಿಸುವುದು ನಮ್ಮ ಹಿತದೃಷ್ಟಿಯಿಂದ. ಆಗ ನಾವು ಸಂತೋಷಗೊಳ್ಳುತ್ತೇವೆ.

ಇನ್ನೊಂದು ಶ್ಲೋಕದಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ (9.26):

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ

ತದ್‌ ಅಹಂ ಭಕ್ತಿ ಉಪಹೃತಮ್‌ ಅಶ್ನಾಮಿ ಪ್ರಯತಾತ್ಮನಃ

“ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಯಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು, ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.” ಯೋ ಮೇ ಭಕ್ತ್ಯಾ ಪ್ರಯಚ್ಛತಿ: ನಿಜವಾದ ಅರ್ಪಣೆಯು ಪ್ರೀತಿ. ಪರಮ ಪುರುಷನಾದ ಕೃಷ್ಣನು ಎಲ್ಲ ಜೀವಿಗಳಿಗೂ ಜೀವನದ ಎಲ್ಲ ಆವಶ್ಯಕತೆಗಳನ್ನೂ ಕೊಡುತ್ತಿದ್ದಾನೆ. ಅವನು ದಿಟದಲ್ಲಿ ಎಲ್ಲರಿಗೂ ಕೊಡುವವನು ಮತ್ತು ಎಲ್ಲರನ್ನೂ ಪಾಲಿಸುವವನು. ಹಾಗಾದರೆ ಅವನು ಒಂದು ಚಿಕ್ಕ ಹಣ್ಣು ಮತ್ತು ನೀರನ್ನು ಕೊಡುವಂತೆ ನಿಮ್ಮನ್ನು ಏಕೆ ಕೇಳುತ್ತಿದ್ದಾನೆ? ಅವನಿಗೆ ಹಸಿವಾಗಿದೆಯೇ? ಇಲ್ಲ. ಅವನನ್ನು ಪ್ರೀತಿಸುವಂತೆ ನಿಮ್ಮನ್ನು ಪ್ರೇರೇಪಿಸಲಷ್ಟೇ ಅವನು ಹಾಗೆ ಮಾಡುತ್ತಿದ್ದಾನೆ. ಅದೇ ಇಲ್ಲಿನ ಸಂಗತಿ.

ಐಹಿಕ ಸ್ಥಿತಿಯಲ್ಲಿ ನೀವು ಜನನ, ವೃದ್ಧಾಪ್ಯ, ವ್ಯಾಧಿ ಮತ್ತು ಮರಣ ಹಾಗೂ ಇದರ ಜೊತೆಯಲ್ಲಿ ಅನೇಕ ಇತರ ಯಾತನೆಗಳಿಗೆ ಬದ್ಧರಾಗಿದ್ದೀರಿ. ನೀವು ಕೃಷ್ಣನನ್ನು ಮರೆತಿರುವ ಕಾರಣದಿಂದ ಈ ಸ್ಥಿತಿಗೆ ಪತನಹೊಂದಿದ್ದೀರಿ. ಉದಾಹರಣೆಗೆ ನಿನ್ನೆ ರಾತ್ರಿ ಅನೇಕ ಜನರು ಚರ್ಚೆ ಮಾಡಲು ಮತ್ತು ಮಾತನಾಡಲು ಬಂದಿದ್ದರು. ಆದರೆ ಅವರು ಕೃಷ್ಣನನ್ನು ಕುರಿತು ಮಾತನಾಡಲು ಆಸಕ್ತರಾಗಿರಲಿಲ್ಲ. ಈ ಕೃಷ್ಣಪ್ರಜ್ಞಾ ಪ್ರಕ್ರಿಯೆಯನ್ನು ಅವರು ಪ್ರಾರಂಭಿಸಿದರೆ ಅವರ ಇಂದ್ರಿಯ ತುಷ್ಟಿಗೆ ಹೇಗೆ ಅಡಚಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಅವರು ಆಸಕ್ತರಾಗಿದ್ದರು. ಅದು ಅವರ ಕಾಳಜಿಯಾಗಿತ್ತು. ಇಲ್ಲಿ ನಾವು ಕೃಷ್ಣನನ್ನು ಕುರಿತು ಬೋಧಿಸಲು ಬಂದಿದ್ದೇವೆ. ಆದರೆ ಅವರು ಕೃಷ್ಣನನ್ನು ಕುರಿತು ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಅವನು ಯಾರು? ಅವನ ತತ್ತ್ವಚಿಂತನೆ ಏನು? ಇಲ್ಲ. ಅವರು ತಮ್ಮ ಇಂದ್ರಿಯತುಷ್ಟಿಯ ವಿಷಯದಲ್ಲಿ ಮಾತ್ರ ಆಸಕ್ತರಾಗಿದ್ದರು. ಅಷ್ಟೆ.

ಐಹಿಕ ಜಗತ್ತಿನಲ್ಲಿರುವ ಜನರ ಸ್ಥಿತಿ ಹೀಗಿದೆ. ಪ್ರತಿಯೊಬ್ಬರೂ ಕೇವಲ ಇಂದ್ರಿಯ ತುಷ್ಟಿಯಲ್ಲಿ ಆಸಕ್ತರಾಗಿದ್ದಾರೆ. “ದೇವರು ಎಂದರೆ ಯಾರು? ನಾನು ಯಾರು? ಈ ಜಗತ್ತು ಏನು?” ಎಂದು ಕೇಳುವ ಪ್ರಶ್ನೆಗಳೇ ಇಲ್ಲ. ಆದರೆ ಮಾನವ ಜನ್ಮದಲ್ಲಿ ಹುಟ್ಟಿರುವವನ ಪ್ರಶ್ನೆಗಳು ಇವು ಆಗಿರಬೇಕು. ವೇದಾಂತ ಸೂತ್ರವು (1.1.1) ಹೀಗೆ ಹೇಳುತ್ತದೆ: ಅಥಾತೋ ಬ್ರಹ್ಮ ಜಿಜ್ಞಾಸಾಃ : “ಈಗ ಪರಮ ಸತ್ಯವಾದ ಪರಮ ಪುರುಷನನ್ನು ಕುರಿತು ವಿಚಾರ ಮಾಡೋಣ.” ಅದೊಂದೇ ನಮ್ಮ ಕೆಲಸ. ಆದರೆ ಸಮಸ್ತ ಜಗತ್ತಿನಾದ್ಯಂತ ಜನರು ತಮ್ಮ ಇಂದ್ರಿಯಗಳ ತುಷ್ಟಿಯಲ್ಲಿಯೇ ವ್ಯಸ್ತರಾಗಿದ್ದಾರೆ. ಆಧ್ಯಾತ್ಮಿಕ ಲೋಕದಿಂದ ನಾವು ಪತನವಾಗುವುದಕ್ಕೆ ಇದೇ ಕಾರಣ. ಏಕೆಂದರೆ ನಾವು ಕೃಷ್ಣನನ್ನು ಮರೆತಿದ್ದೇವೆ. ಈಗ ನಾವು ಮಾಯೆಯ ಬಿಗಿ ಮುಷ್ಟಿಯಲ್ಲಿದ್ದೇವೆ.

ಹೀಗೆ ನಾವು ಕೃಷ್ಣನನ್ನು ಮರೆತಿದ್ದೇವೆ, ಮತ್ತು ಅದರಿಂದಾಗಿ ನಾವು ಯಾತನೆಗಳನ್ನು ಅನುಭವಿಸುತ್ತಿದ್ದೇವೆ. ಆದರೆ ನಾವು ಕೃಷ್ಣನ ವಿಭಿನ್ನಾಂಶವಾಗಿರುವುದರಿಂದ ಅವನು ಹೀಗೆ ಪ್ರಸ್ತಾವಿಸುತ್ತಿದ್ದಾನೆ: “ಯಾಕೆ ಯಾತನೆ ಪಡುತ್ತಿದ್ದೀರಿ? ನನಗೆ ಸುಮ್ಮನೆ ಶರಣಾಗಿ. ನಾನು ಎಲ್ಲ ರಕ್ಷಣೆಯನ್ನೂ ಕೊಡುತ್ತೇನೆ.” ಇಲ್ಲ. ಜನರು ಅವನ ಕೊಡುಗೆಯನ್ನು ಸ್ವೀಕರಿಸುವುದಿಲ್ಲ.

ಕೃಷ್ಣನಿಗೆ ಶರಣಾಗುವುದು ಹೇಗೆ ಎಂದು ತರಬೇತಿಯನ್ನು ಪಡೆದವನು ಭಕ್ತಿಸೇವೆಯನ್ನು ಆಚರಿಸುತ್ತಾನೆ. ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ. ಅವನಿಗೆ ಸೇವೆ ಸಲ್ಲಿಸಲು ನೀವು ಪ್ರಾಮಾಣಿಕವಾಗಿ ಸಿದ್ಧವಾಗಿದ್ದೀರಾ ಎಂಬುದನ್ನು ಅವನು ನೋಡಬಲ್ಲ. ನೀವು ಪ್ರಾಮಾಣಿಕವಾಗಿ ಅವನಿಗೆ ಸೇವೆ ಸಲ್ಲಿಸುತ್ತಿದ್ದೀರಾ ಅಥವಾ ಐಹಿಕ ಉದ್ದೇಶ ನಿಮಗೆ ಏನಾದರೂ ಇದೆಯೋ ಎಂದು ಅವನು ಅರ್ಥಮಾಡಿಕೊಳ್ಳಬಲ್ಲ. ಯಾವುದೋ ಐಹಿಕ ಉದ್ದೇಶದಿಂದ ನೀವು ಕೃಷ್ಣನಿಗೆ ಸೇವೆ ಸಲ್ಲಿಸಿದರೂ, ನಿಮ್ಮ ಸೇವೆಯು ಎಂದೂ ವ್ಯರ್ಥವಾಗಿ ಹೋಗುವುದಿಲ್ಲ. ಕೃಷ್ಣನು ಅಂಥಾ ಕರುಣಾಳು.

ಪೂತನಾಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪೂತನಾಳು ತನ್ನ ಎದೆಹಾಲನ್ನು ಕೃಷ್ಣನಿಗೆ ಕೊಡುವ ಮೂಲಕ ಅವನಿಗೆ ಸೇವೆ ಸಲ್ಲಿಸಲು ಬಯಸಿದ್ದಳು. ಆದರೆ ಅವಳ ಉದ್ದೇಶವು ಕೃಷ್ಣನನ್ನು ಕೊಲ್ಲುವುದೇ ಆಗಿತ್ತು. ಅವಳು ತನ್ನ ಕುಚಕ್ಕೆ ವಿಷವನ್ನು ಲೇಪಿಸಿಕೊಂಡಿದ್ದಳು. ಕೃಷ್ಣನು ಅವಳ ಹಾಲನ್ನು ಪೂರ್ತಿಯಾಗಿ ಹೀರಿದ. ಅವಳು ಸತ್ತಳು. ಅವಳಿಗೆ ರಾಕ್ಷಸೀಯ ಉದ್ದೇಶವಿತ್ತು. ಆದರೂ ಕೃಷ್ಣನು ಹೀಗೆ ಯೋಚಿಸಿದ, “ಈ ಧೂರ್ತಳಾದ ಪೂತನಿಯು ನನ್ನನ್ನು ಕೊಲ್ಲಲು ಬಯಸಿದ್ದಳು. ಆದರೆ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಎನ್ನುವುದು ಅವಳಿಗೆ ಗೊತ್ತಿರಲಿಲ್ಲ. ನನ್ನನ್ನು ಕೊಲ್ಲುವುದು ಅವಳ ಉದ್ದೇಶವಾಗಿದ್ದರೂ ಕೂಡ, ಅವಳ ಎದೆಹಾಲನ್ನು ಹೀರಲು ನನಗೆ ಅವಕಾಶ ಕೊಡುವ ಮೂಲಕ ಅವಳು ನನಗೆ ಸೇವೆ ಸಲ್ಲಿಸಿದ್ದಾಳೆ. ಅವಳ ಹಾಲನ್ನು ನಾನು ಕುಡಿದದ್ದರಿಂದ ಅವಳು ನನಗೆ ತಾಯಿಯೇ ಆದಂತಾಯಿತು. ರಾಕ್ಷಸೀಯ ಉದ್ದೇಶದಿಂದ ಅವಳು ಬಂದಿದ್ದಳು ಎನ್ನುವುದು ನನಗೆ ಮುಖ್ಯವಾಗುವುದಿಲ್ಲ.” ಕೃಷ್ಣನು ಅಷ್ಟು ಕರುಣಾಶಾಲಿ.

ಕೃಷ್ಣಪ್ರಜ್ಞೆಯನ್ನು ಆಚರಿಸುವುದರ ಪ್ರಯೋಜನವಿದು. ಸಹಜವಾಗಿಯೇ, ಕೃಷ್ಣನನ್ನು ಸೇವಿಸುವುದರಲ್ಲಿ ನಮಗೆ ರಾಕ್ಷಸೀಯ ಉದ್ದೇಶ ಇರಬಾರದು. ಕಂಸನು ಕೂಡ ಕೃಷ್ಣನನ್ನು ಕುರಿತು ಯೋಚಿಸುವುದರಲ್ಲೇ ಮಗ್ನನಾಗಿದ್ದ. ಅವನು ಪೂರ್ಣ ಕೃಷ್ಣಪ್ರಜ್ಞಾವಂತನಾಗಿದ್ದ, ಸದಾ ಕೃಷ್ಣನನ್ನು ಕುರಿತೇ ಯೋಚಿಸುತ್ತಿದ್ದ. ಆದರೆ ಅವನ ಉದ್ದೇಶ ಕೃಷ್ಣನನ್ನು ಕೊಲ್ಲುವುದಾಗಿತ್ತು. ಆದರೂ ಕಂಸನಿಗೆ ಮುಕ್ತಿ ಸಿಕ್ಕಿತು. ಏಕೆಂದರೆ ಅವನು ನಿರಂತರವಾಗಿ ಕೃಷ್ಣನನ್ನು ಕುರಿತೇ ಯೋಚಿಸುತ್ತಿದ್ದ.

ಆದರೆ ಇದು ಭಕ್ತಿಯಲ್ಲ. ಭಕ್ತಿ ಎಂದರೆ ಕೃಷ್ಣನನ್ನು ಕುರಿತು ಸದಾ ಯೋಚಿಸುವುದು ಎಂಬ ಅರ್ಥವೂ ಇದೆ. ಆದರೆ ಇದು ಅನುಕೂಲಕರವಾಗಿ ಇರಬೇಕು. ಅದು ಭಕ್ತಿ. ಕೃಷ್ಣನನ್ನು ಒಬ್ಬ ಶತ್ರು ಎಂಬಂತೆ ಭಾವಿಸಿ ಯೋಚಿಸುವುದನ್ನು ಸೂಚಿಸಲಾಗಿಲ್ಲ. ಕೃಷ್ಣನನ್ನು ಒಬ್ಬ ಶತ್ರು ಎಂದು ಒಬ್ಬ ಭಕ್ತನು ಹೇಗೆ ತಾನೆ ಯೋಚಿಸಬಲ್ಲ? ಕೃಷ್ಣನು ಒಬ್ಬ ಗೆಳೆಯ, ಮಗ, ಒಡೆಯ, ಪ್ರಿಯತಮ ಎಂದು ಭಕ್ತನು ಯೋಚಿಸುತ್ತಾನೆ. ಆದರೆ ಒಬ್ಬ ರಾಕ್ಷಸನು ಕೃಷ್ಣನನ್ನು ಒಬ್ಬ ಶತ್ರುವೆಂಬಂತೆ ನೋಡುತ್ತಾನೆ. ಸದಾ ಕೃಷ್ಣನನ್ನು ಕೊಲ್ಲುವ ವಿಧಾನಗಳನ್ನು ಕುರಿತು ಯೋಚಿಸುತ್ತಿರುತ್ತಾನೆ. ರಾಕ್ಷಸನಿಗೂ ಭಕ್ತನಿಗೂ ಇರುವ ವ್ಯತ್ಯಾಸ ಇದೇ.

ರಾಕ್ಷಸರು ಕೃಷ್ಣನನ್ನು ನಾಶಮಾಡುವುದು ಹೇಗೆ, ತೊಲಗಿಸುವುದು ಹೇಗೆ, ಕೊಲೆ ಮಾಡುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ಅವನನ್ನು ಕುರಿತು ಅವರು ಹಗೆತನದಿಂದ ಇರುವ ಕಾರಣದಿಂದಲೇ ಅವರು ಸದಾ ಯಾತನೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಆದ್ದರಿಂದ ಕೃಷ್ಣನು ಹೇಳುತ್ತಾನೆ (ಭಗವದ್‌ಗೀತೆ: 16.7) ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರ್‌ ಆಸುರಾಃ : “ರಾಕ್ಷಸರಿಗೆ ಏನು ಮಾಡಬೇಕು ಏನು ಮಾಡಬಾರದು ಎಂದು ಗೊತ್ತಿಲ್ಲ.”

ಹೇಗೆ ಬಾಳಬೇಕು, ಏನನ್ನು ತಿಳಿದುಕೊಳ್ಳಬೇಕು, ಮತ್ತು ಏನನ್ನು ಮರೆಯಬೇಕು ಎನ್ನುವುದನ್ನು ವ್ಯಕ್ತಿಯು ಕಲಿಯಬೇಕು. ಪ್ರತಿಯೊಂದು ಪ್ರಗತಿಶೀಲ ವಿಧಾನದಲ್ಲಿಯೂ ವಿಧಿ ನಿಷೇಧಗಳಿರುತ್ತವೆ. ಹೀಗೆ ರಾಕ್ಷಸರಿಗೆ ಅವರು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂದು ಗೊತ್ತಿಲ್ಲ. ಆದರೆ ಭಕ್ತನಿಗೆ ಗೊತ್ತು. ನ್ಯಾಯಬಾಹಿರವಾದ ಕಾಮವು ನಿಷಿದ್ಧ. ನಿಷಿದ್ಧಗಳಲ್ಲಿ ಅದು ಒಂದು. ಆದರೆ ಒಂದು ವಿಧಿಯೂ ಇದೆ: ನೀವು ಕಾಮಜೀವನವನ್ನು ನಡೆಸಬೇಕಾದರೆ ಧಾರ್ಮಿಕ ತತ್ತ್ವಗಳಿಗೆ ಅನುಗುಣವಾಗಿ ವಿವಾಹವಾಗಿ ಮತ್ತು ಉತ್ತಮ ಸಂತಾನವನ್ನು ಪಡೆಯಿರಿ. ಅದು ಒಂದು ವಿಧಿ. ಮಾದಕವಸ್ತುಗಳು ನಿಷಿದ್ಧ. ನಿಷಿದ್ಧಗಳಲ್ಲಿ ಅದು ಒಂದು. ಆದರೆ ನೀವು ಕೃಷ್ಣಪ್ರಸಾದವನ್ನು (ಕೃಷ್ಣನಿಗೆ ಅರ್ಪಿಸಿದ ಆಹಾರ) ಸೇವಿಸಬೇಕು ಮತ್ತು ಕೃಷ್ಣನ ಪ್ರೀತಿಯಲ್ಲಿ ಮತ್ತರಾಗಬೇಕು. ಅದು ಒಂದು ವಿಧಿ. ಅದೇ ರೀತಿಯಲ್ಲಿ ಜೂಜು ನಿಷಿದ್ಧ. ನಿಷಿದ್ಧಗಳಲ್ಲಿ ಅದು ಒಂದು. ಆದರೆ ನೀವು ಒಂದು ಬಗೆಯ ಜೂಜಿನಲ್ಲಿ ತೊಡಗಬಹುದು ಅದು ಏನು? ಕೃಷ್ಣನಿಗೆ ನಿಮ್ಮ ಜೀವನವನ್ನು ಮುಡಿಪಾಗಿಡಬೇಕು ಮತ್ತು ಫಲಿತಾಂಶವನ್ನು ನೋಡಬೇಕು. ಅದೂ ಕೂಡ ಒಂದು ಜೂಜೇ. ನನ್ನ ಶಿಷ್ಯರೆಲ್ಲ ತಮ್ಮ ತಮ್ಮ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರೆ. ಆದರೆ ಆ ವ್ಯವಹಾರವನ್ನು ತೊರೆದು ಈ ಕೃಷ್ಣ ವ್ಯವಹಾರವನ್ನು ಕೈಗೆತ್ತಿಕೊಳ್ಳಬೇಕು ಎಂದು ನಾನು ಸಲಹೆಕೊಟ್ಟಿದ್ದೇನೆ. ಹೀಗೆ ಅವರು ಜೂಜಾಡುತ್ತಿದ್ದಾರೆ, ಏಕೆಂದರೆ ಮುಂದೆ ಏನಾಗುತ್ತದೆಯೋ ಎಂದು ಅವರಿಗೆ ಗೊತ್ತಿಲ್ಲ. ಆದರೆ ನನ್ನ ಉಪದೇಶದಲ್ಲಿ ಶ್ರದ್ಧೆಯನ್ನಿಟ್ಟು ಅವರು ಅನುಸರಿಸುತ್ತಿದ್ದಾರೆ.

ಹೇಗಾದರೂ ಮಾಡಿ ಕೃಷ್ಣಸೇವೆಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಶ್ರದ್ಧೆ ಮತ್ತು ಪ್ರೀತಿಯಿಂದ ನಾವು ತೊಡಗಿಕೊಳ್ಳಬೇಕಾಗುತ್ತದೆ. ನಾವು ಹೀಗೆ ಯೋಚಿಸಬೇಕು, “ಕೃಷ್ಣನು ದಿಟವಾಗಿಯೂ ನನ್ನ ವಿಷಯದಲ್ಲಿ ಕರುಣಾಳುವಾಗಿರುತ್ತಾನೆ. ಅವನು ಐಹಿಕ ಜೀವನದ ಈ ಯಾತನಾಮಯ ಪರಿಸ್ಥಿತಿಯಿಂದ ನನ್ನನ್ನು ಉದ್ಧಾರ ಮಾಡುತ್ತಾನೆ.”

ಕೃಷ್ಣನು ನಿಮ್ಮೊಳಗೇ ಇದ್ದಾನೆ. ಆದ್ದರಿಂದ ನೀವು ಅವನನ್ನು ಮೋಸಗೊಳಿಸಲಾಗುವುದಿಲ್ಲ. ನೀವು ವಂಚಕರಾಗಿದ್ದರೆ ಕೃಷ್ಣನು ಸರ್ವೋನ್ನತ ವಂಚಕ. ನೀವು ಅವನ ಪ್ರೇಮಿಯಾಗಿದ್ದರೆ ಆಗ ಕೃಷ್ಣನು ನಿಮ್ಮ ಪಾಲಿಗೆ ಸರ್ವೋನ್ನತ ಪ್ರೇಮಿಯಾಗುತ್ತಾನೆ. ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್‌ ತಥೈವ ಭಜಾಮಿ ಅಹಮ್‌ “ನೀವು ಕೃಷ್ಣನೊಡನೆ ಹೇಗೆ ವ್ಯವಹರಿಸುತ್ತೀರೋ ಹಾಗೆ ಅವನು ಪ್ರತಿಕ್ರಿಯಿಸುತ್ತಾನೆ.” ಅದೇ ಕೃಷ್ಣಪ್ರಜ್ಞೆ.

ಆದ್ದರಿಂದ ಕೃಷ್ಣನು ಈಗ ಬುದ್ಧಿಯೋಗವನ್ನು ವರ್ಣಿಸುತ್ತಿದ್ದಾನೆ. ಬುದ್ಧಿಯೋಗವೆಂದರೆ ಭಕ್ತಿಯೋಗ ಅಥವಾ ಕೃಷ್ಣನಿಗೆ ಸಲ್ಲಿಸುವ ಭಕ್ತಿಸೇವೆ. ಬುದ್ಧಿ ಎಂದರೆ “ತಿಳಿವಳಿಕೆ”. ಬಹಳ ಬುದ್ಧಿವಂತನಾದವನು ಕೃಷ್ಣಪ್ರಜ್ಞೆಯನ್ನು ತೆಗೆದುಕೊಳ್ಳಬಹುದು. ಕೃಷ್ಣನು ಮುಂದೆ (7.19) ಇದನ್ನು ದೃಢಪಡಿಸುತ್ತಾನೆ:

ಬಹೂನಾಂ ಜನ್ಮಾನಾಂ ಅಂತೇ ಜ್ಞಾನವಾನ್‌ ಮಾಂ ಪ್ರಪದ್ಯತೇ

ವಾಸುದೇವಃ ಸರ್ವಮ್‌ ಇತಿ ಸ ಮಹಾತ್ಮಾ ಸುದುರ್ಲಭಃ

“ಅನೇಕ ಜನ್ಮಗಳ ಅನಂತರ ಜ್ಞಾನಿಯಾದವನು ನನಗೆ ಶರಣಾಗುತ್ತಾನೆ.”

ಪ್ರತಿಯೊಬ್ಬನೂ ಸಂತೋಷವಾಗಿರುವುದಕ್ಕಾಗಿ ಹೆಣಗಾಡುತ್ತಿದ್ದಾನೆ. ಕೆಲವು ಸಲ ನಾವು ಕರ್ಮಿಗಳಾಗಿ (ಪ್ರತಿಫಲಾಪೇಕ್ಷೆಯ ಕೆಲಸಗಾರರು), ಕೆಲವು ಸಲ ಜ್ಞಾನಿಗಳಾಗಿ (ಊಹಾಪೋಹದ ತತ್ತ್ವಜ್ಞಾನಿಗಳು), ಮತ್ತು ಕೆಲವು ಸಲ ಯೋಗಿಗಳಾಗಿ ನಾವು ಹೆಣಗಾಡುತ್ತಿರುತ್ತೇವೆ. ಆದರೆ ನೀವು ಒಬ್ಬ ಭಕ್ತನಾದಾಗ, ಕೃಷ್ಣನ ಒಬ್ಬ ಭಕ್ತನಾದಾಗ ಅದು ಸರ್ವೋನ್ನತವಾದದ್ದು. ಎಲ್ಲಿಯವರೆಗೆ ನೀವು ಭಕ್ತನಾಗಿರುವುದಿಲ್ಲವೋ ಅಲ್ಲಿಯವರೆಗೆ ನೀವು ಸಂತೋಷವಾಗಿರಲು ಸಾಧ್ಯವಿಲ್ಲ.

ಆದ್ದರಿಂದ ಶ್ರೀಲ ರೂಪಗೋಸ್ವಾಮಿ ಅವರು ಭುಕ್ತಿಯ ಆಸೆ (ಇಂದ್ರಿಯ ಸಂತುಷ್ಟಿ) ಮತ್ತು ಮುಕ್ತಿಯ ಆಸೆ (ವಿಮೋಚನೆ)ಗಳನ್ನು ಇಬ್ಬರು ಮಾಟಗಾತಿಯರಿಗೆ ಹೋಲಿಸಿದ್ದಾರೆ. ಈ ಇಬ್ಬರು ಮಾಟಗಾತಿಯರು ವ್ಯಕ್ತಿಯ ಹೃದಯದಲ್ಲಿರುವವರೆಗೂ ಅವನು ಭಕ್ತಿಸೇವೆಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ. ಬಹುಪಾಲು ಜನರು ಕೆಲಸ ಮಾಡುವ ಮೂಲಕ ಈ ಐಹಿಕ ಜಗತ್ತನ್ನು ಅನುಭೋಗಿಸಲು ಬಯಸುತ್ತಾರೆ. ಎಲ್ಲರೂ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಾ ಅದಕ್ಕಾಗಿ ಪ್ರಯತ್ನ ಮಾಡುತ್ತಿರುತ್ತಾರೆ. “ಈ ಐಹಿಕ ಜಗತ್ತನ್ನು ನಾನು ಸಂಪೂರ್ಣವಾಗಿ ಅನುಭೋಗಿಸಬೇಕು” ಎಂದು ಅವರು ಯೋಚಿಸುತ್ತಿರುತ್ತಾರೆ. ಇದನ್ನು ಭುಕ್ತಿ ಎಂದು ಕರೆಯುತ್ತಾರೆ. ಇನ್ನೊಂದು ಮಾಟಗಾತಿ ಎಂದರೆ ಮುಕ್ತಿ (ವಿಮೋಚನೆ). ಯಾರು ಹತಾಶರಾಗುತ್ತಾರೋ ಅವರು ಮುಕ್ತಿಗೆ ಪ್ರಯತ್ನಿಸುತ್ತಾರೆ. ಆದರೆ ವ್ಯಕ್ತಿಗೆ ನಿರಾಶೆಯೇ ಕಾದಿದೆ. ಏಕೆಂದರೆ ಕರ್ಮೀ ಯೋಜನೆಯನ್ನು ಅನುಸರಿಸಿ ಇಲ್ಲಿ ಯಾರೂ ಸುಖವಾಗಿರಲು ಸಾಧ್ಯವಿಲ್ಲ. ಅದು ಅಸಾಧ್ಯ. ಹೀಗೆ ಜನರು ಹತಾಶರಾಗುತ್ತಾರೆ ಮತ್ತು ಪರಾತ್ಪರನಲ್ಲಿ ಲೀನವಾಗುವ ಮೂಲಕ ತಮ್ಮ ಬಿಡಿ ಅಸ್ತಿತ್ವವನ್ನು ಕೊನೆಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅದು ಕೂಡಾ ನಿರಾಶಾದಾಯಕ.

ಹೀಗೆ ಅನೇಕ ಜನ್ಮಗಳ ಕಾಲ ಅಸ್ತಿತ್ವಕ್ಕಾಗಿ ಹೋರಾಟವನ್ನು ನಡೆಸುತ್ತಾ ವ್ಯಕ್ತಿಯು ಹತಾಶನಾಗುತ್ತಾನೆ. ಅದು ವಾಸ್ತವ ಸಂಗತಿ. ಏಕೆಂದರೆ ಸಂತೋಷವಾಗಿರಬೇಕು ಎಂಬ ಕಾರಣಕ್ಕಾಗಿ ಅನೇಕ ಜನ್ಮಗಳಲ್ಲಿ ಒಬ್ಬ ವ್ಯಕ್ತಿಯು ಕೆಲವು ಸಲ ಕರ್ಮಿಯಾಗಬಹುದು, ಕೆಲವು ಸಲ ಜ್ಞಾನಿಯಾಗಬಹುದು ಮತ್ತು ಕೆಲವು ಸಲ ಯೋಗಿಯಾಗಬಹುದು. ಆದರೆ ನಿರಂತರವಾಗಿ ಅವನು ಸೋಲನ್ನೇ ಎದುರಿಸಬೇಕಾಗುತ್ತದೆ. ಪ್ರಕೃತಿಯು ಅಷ್ಟು ಶಕ್ತಿಶಾಲಿ.

ಆದ್ದರಿಂದ ಕೃಷ್ಣನು ಹೇಳುತ್ತಾನೆ, ಬಹೂನಾಂ ಜನ್ಮಾನಾಮ್‌ ಅಂತೇ ಜ್ಞಾನವಾನ್‌ ಮಾಂ ಪ್ರಪದ್ಯತೇ.

“ಅನೇಕ ಜನ್ಮಗಳ ಕಾಲ ಹೀಗೆ ಹೋರಾಟವನ್ನು ಮಾಡಿದ ಮೇಲೆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾದ ಮೇಲೆ, ನನಗೆ ಶರಣಾಗತನಾಗುತ್ತಾನೆ.” ಅವನು ಹೇಗೆ ಶರಣಾಗುತ್ತಾನೆ? ಕುರುಡಾಗಿಯೆ? ಇಲ್ಲ. ವಾಸುದೇವಃ ಸರ್ವಮ್‌ ಇತಿ ಸ ಮಹಾತ್ಮಾ ಸುದುರ್ಲಭಃ “ಆ ಸಮಯದಲ್ಲಿ ಕೃಷ್ಣನೇ ಸರ್ವಸ್ವ ಎಂದು ವ್ಯಕ್ತಿಯು ಅರ್ಥಮಾಡಿಕೊಳ್ಳುತ್ತಾನೆ. ಅಂತಹ ಮಹಾತ್ಮನು ಅಪರೂಪ.” ಅಂತಹ ಮಹಾನ್‌ ಜ್ಞಾನಿಯನ್ನು ಕಾಣುವುದು ಬಹಳ ಕಷ್ಟ.

ಅನೇಕಾನೇಕ ಜನ್ಮಗಳ ಅನಂತರ ಕೃಷ್ಣನಿಗೆ ಶರಣಾಗುವುದೇ ನನ್ನ ಅಂತಿಮ ಗುರಿ ಎಂದು ನಾನು ಅರ್ಥಮಾಡಿಕೊಂಡರೆ ಈ ಕೂಡಲೇ ಏಕೆ ಶರಣಾಗಬಾರದು? ಅದೇ ಬುದ್ಧಿವಂತಿಕೆ. ನನ್ನ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಬೇಕಾದರೆ ಅಂತಿಮವಾಗಿ ನಾನು ಈ ಬಿಂದುವಿಗೆ ಬರಬೇಕೆಂದರೆ, ಈ ಕೂಡಲೇ ಏಕೆ ನನ್ನ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಬಾರದು? ಅನೇಕಾನೇಕ ಜನ್ಮಗಳ ಕಾಲ ಏಕೆ ನಾನು ಕಾಯಬೇಕು? ಈ ಕೂಡಲೇ ಏಕೆ ಶರಣಾಗಬಾರದು? ಅದೇ ಬುದ್ಧಿವಂತಿಕೆ. ವ್ಯಕ್ತಿಯು ಅಸಾಧಾರಣವಾದ ಬುದ್ಧಿವಂತನಾಗಿಲ್ಲದಿದ್ದರೆ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಲಾರ.

ಹೀಗೆ ಈ ಅಧ್ಯಾಯದ ಪ್ರಾರಂಭದಲ್ಲಿ ಕೃಷ್ಣನು ಅರ್ಜುನನಿಗೆ ಸಾಂಖ್ಯವನ್ನು ವರ್ಣಿಸಿದ್ದಾನೆ: “ಇದು ನಿನ್ನ ಕರ್ತವ್ಯ. ನೀನು ಒಬ್ಬ ಕ್ಷತ್ರಿಯ (ಯೋಧ). ಆದ್ದರಿಂದ ನೀನು ಏಕೆ ಯುದ್ಧ ಮಾಡಲು ನಿರಾಕರಿಸುತ್ತೀಯೆ? ದೇಹವು ನಶ್ವರ ಆದರೆ ಆತ್ಮವು ಅಮರ, ಆದ್ದರಿಂದ ನಿನ್ನ ತಾತ ಮತ್ತು ಇತರ ಬಾಂಧವರು ಸಾಯುವುದಿಲ್ಲ.” ಇದು ಐಹಿಕ ದೃಷ್ಟಿಕೋನದಿಂದ ಸನ್ನಿವೇಶದ ವಿಶ್ಲೇಷಣಾತ್ಮಕ ಅಧ್ಯಯನ. ಆದ್ದರಿಂದ ಕೃಷ್ಣನಿಗೆ ಪ್ರೀತಿಯಿಂದ ಸೇವೆಯನ್ನು ಸಲ್ಲಿಸುವ ಬಿಂದುವಿಗೆ ಅರ್ಜುನನು ಬರುತ್ತಿದ್ದಂತೆಯೇ (ಯಾವುದೇ ವಿಶ್ಲೇಷಣಾತ್ಮಕ ತಿಳಿವಳಿಕೆಯ ನೆರವಿಲ್ಲದೆ) ಅದು ಅವನ ಪರಿಪೂರ್ಣತೆಯಾಗುತ್ತದೆ.

ಉದಾಹರಣೆಗೆ, ಬೆಂಕಿಯನ್ನು ನೀವು ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡದೆಯೇ ಬೆಂಕಿಯ ಪರಿಣಾಮಗಳನ್ನು ನೀವು ತಿಳಿದಿರುತ್ತೀರಿ. ನೀವು ಬೆಂಕಿಯನ್ನು ಸ್ಪರ್ಶಿಸಿದರೆ ಅದು ಸುಡುತ್ತದೆ. ಬೆಂಕಿಯ ಸಂಯೋಜನೆಯನ್ನು ಕುರಿತು ಅಧ್ಯಯನ ಮಾಡಬೇಕಾದ ಅಗತ್ಯವಿಲ್ಲ. ಅದೇ ರೀತಿಯಲ್ಲಿ ವೃಂದಾವನದ ಗೋಪಿಯರು ಕೃಷ್ಣನನ್ನು ಅಧ್ಯಯನ ಮಾಡುವುದಿಲ್ಲ. ಅವರು ಯಾವುದನ್ನೂ ಲಕ್ಷಿಸುವುದಿಲ್ಲ. ಅವರು ಸುಮ್ಮನೆ ಕೃಷ್ಣನನ್ನು ಪ್ರೀತಿಸುತ್ತಾರೆ. ಅದು ಅವರ ಏಕಮೇವ ಅರ್ಹತೆ. ಅಷ್ಟಲ್ಲದೇ ಹೋದರೆ, ಅವರು ಸಾಧಾರಣವಾದ ಹಳ್ಳಿಯ ಹುಡುಗಿಯರು. ಅದೇ ರೀತಿಯಲ್ಲಿ ಗೋಪ ಬಾಲಕರು ಉನ್ನತ ಶಿಕ್ಷಣವನ್ನೇನು ಪಡೆದಿರಲಿಲ್ಲ. ಅವರಿಗೆ ವೇದಾಂತದ ಜ್ಞಾನವೂ ಇರಲಿಲ್ಲ. ಅವರು ಸುಸಂಸ್ಕಾರಯುತರಾದ ಸಜ್ಜನರೂ ಆಗಿರಲಿಲ್ಲ. ಅವರು ಕೇವಲ ಹಳ್ಳಿಯ ಗೊಲ್ಲ ಬಾಲಕರು. ಆದರೆ ಅವರು ಕೃಷ್ಣನನ್ನು ತಮ್ಮ ನಿಕಟ ಗೆಳೆಯನೆಂದು ಪ್ರೀತಿಸಿದರು.

ಗೊಲ್ಲ ಬಾಲಕಿಯರಿಗೆ ಕೃಷ್ಣನನ್ನು ಪ್ರೀತಿಸುವುದಲ್ಲದೆ ಬೇರೆ ಯಾವುದೇ ವ್ಯವಹಾರವೂ ತಿಳಿದಿರಲಿಲ್ಲ. ಅದೇ ಪರಿಪೂರ್ಣತೆ. ಯಾವುದೇ ವಿಶ್ಲೇಷಣಾತ್ಮಕ ಜ್ಞಾನವೂ ಇಲ್ಲದೆ ಅವರು ಅವನನ್ನು ಪ್ರೀತಿಸಿದರು. ಅವರು ನಾರಾಯಣನನ್ನು ನೋಡಿದಾಗ – “ಓಹ್‌, ಇಲ್ಲಿದ್ದಾನೆ ನಾರಾಯಣ” – ಅಲ್ಲಿ ಪ್ರೀತಿ ಇರಲಿಲ್ಲ. ಅವನ ವಿಷಯದಲ್ಲಿ ಅವರಿಗೆ ಗೌರವವಿತ್ತು. ಪ್ರೀತಿಯಿಲ್ಲದಿದ್ದರೂ ನೀವು ಯಾರಿಗೆ ಬೇಕಾದರೂ ಗೌರವವನ್ನು ತೋರಿಸಬಹುದು. ಆದರೆ ಪ್ರೀತಿಯೇ ಬೇರೆಯ ಸಂಗತಿ. ಪ್ರೀತಿ ಇರುವುದು ಕೃಷ್ಣನಿಗಾಗಿ ಮತ್ತು ಈ ಪ್ರೀತಿಯೇ ಬುದ್ಧಿಯೋಗ ಅಥವಾ ಕೃಷ್ಣಪ್ರಜ್ಞೆಯ ಆತ್ಯಂತಿಕ ಗುರಿ.

ನಿಮಗೆ ವಂದನೆಗಳು. ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi