ಭೂಸಂರಕ್ಷಕ ಭೂವರಾಹನಾಥ ಸ್ವಾಮಿ

ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ವರಾಹಾವತಾರ ಮತ್ತು ನರಸಿಂಹಾವತಾರಗಳ ಕಥೆ ಬಹಳ ರೋಮಾಂಚಕರ. ಭಕ್ತನಾದ ಶಿಶು ಪ್ರಹ್ಲಾದನ ನಂಬಿಕೆಯನ್ನುಳಿಸಲು, ಹಾಗೂ ತಾನು ಎಲ್ಲೆಲ್ಲೂ ಇರುವೆನೆಂದು ತೋರಿಸಲು, ಒಂದು ಕಂಬದಿಂದ ಪ್ರತ್ಯಕ್ಷನಾಗಿ ದುಷ್ಟ ಹಿರಣ್ಯಕಶಿಪುವನ್ನು ವಧಿಸಿದ ನರಸಿಂಹರೂಪಿ ಭಗವಂತನಿಗೆ ಹಲವಾರು ದೇವಾಲಯಗಳಿವೆ. ಆದರೆ ಹಿರಣ್ಯಕಶಿಪುವಿನ ತಮ್ಮನಾದ ಹಿರಣ್ಯಾಕ್ಷ ದೈತ್ಯನನ್ನು ವಧಿಸಿ ಭೂಮಿಯನ್ನು ಉದ್ಧರಿಸಿದ ವರಾಹರೂಪಿ ಭಗವಂತನಿಗೆ ದೇವಾಲಯಗಳಿರುವುದು ಬಹಳ ಕಡಮೆ. ಅಂಥ ಒಂದು ದೇವಾಲಯ, ನಮ್ಮ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿದೆ. ಇದೊಂದು ನೋಡಲೇಬೇಕಾದ ಅದ್ಭುತ ದೇವಾಲಯವಾಗಿದೆ.

ತಲಪುವುದು ಹೇಗೆ?

ಈ ದೇವಾಲಯವು ಮಂಡ್ಯಜಿಲ್ಲೆಯ ಬೂಕನಕೆರೆ ಗ್ರಾಮದ ಸಮೀಪವಿರುವ ಕಲ್ಲಹಳ್ಳಿ ಗ್ರಾಮದಲ್ಲಿದೆ. ಕಾವೇರಿ ನದಿಯ ಹಿನ್ನೀರು ಪ್ರದೇಶದಲ್ಲಿರುವ ಇದು, ಹೇಮಾವತೀ ನದಿಯ ಎಡದಂಡೆಯ ಮೇಲಿದೆ. ಮೈಸೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಇದು, ಕೃಷ್ಣರಾಜಪೇಟೆಯಿಂದ ನೈಋತ್ಯ ದಿಕ್ಕಿನಲ್ಲಿ 18 ಕಿ.ಮೀ. ದೂರದಲ್ಲಿದೆ. ಕಲ್ಲಹಳ್ಳಿ ಗ್ರಾಮದಿಂದ 2.5 ಕಿ.ಮೀ. ದೂರದಲ್ಲಿರುವ ದೇವಾಲಯ ತಲಪಲು ರಸ್ತೆ ಚೆನ್ನಾಗಿದೆ. ಆದರೆ ಖಾಸಗಿ ಇಲ್ಲವೇ ಸ್ವಂತ ವಾಹನದಲ್ಲಿ ಹೋದರೆ ಒಳ್ಳೆಯದು. ದಾರಿಯಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಮಾರ್ಗಸೂಚೀ ಫಲಕಗಳಿರುವುದರಿಂದ ದೇವಾಲಯವು ಗ್ರಾಮದೊಳಗಿದ್ದರೂ ತಲಪುವುದು ಕಷ್ಟವಾಗದು. ವರಾಹನಾಥ ದೇವಾಲಯವಿರುವುದರಿಂದ ಈ ಹಳ್ಳಿಗೆ ವರಾಹನಾಥ ಕಲ್ಲಹಳ್ಳಿ ಎಂದೇ ಕರೆಯುತ್ತಾರೆ.

ಶ್ರೀ ಭೂವರಾಹನಾಥ ಸ್ವಾಮಿಯ ಅಪೂರ್ವ ವಿಗ್ರಹ

ಹೊಯ್ಸಳರ ಕಾಲದ ಈ ದೇವಾಲಯವು ಸುಮಾರು 800 ವರ್ಷಗಳಷ್ಟು ಹಳೆಯದಾಗಿದ್ದು ಕಾಲಗತಿಯಲ್ಲಿ ಶಿಥಿಲವಾಗಿ ಈಗ ಭಕ್ತಾದಿಗಳ ಸಹಾಯದಿಂದ ಪುನಶ್ಚೇತನಗೊಂಡಿದೆ. ಆದರೆ ದೇವಾಲಯದ ಗರ್ಭಗುಡಿಯು ವಿಶಾಲವಾಗಿದ್ದು ಭಗವಂತನ ಶ್ರೀ ವಿಗ್ರಹವು ಅತ್ಯದ್ಭುತವಾಗಿದೆ. ಲಕ್ಷ್ಮೀವರಾಹನಾಥ ಅಥವಾ ಭೂವರಾಹನಾಥ ಎಂದು ಕರೆಯಲ್ಪಡುವ ಭಗವಂತನ ಶ್ರೀವಿಗ್ರಹವು ಬೃಹದಾಕಾರವಾಗಿದ್ದು ನೋಡುತ್ತಿದ್ದಂತೆ ಯಾರಿಗಾದರೂ ಆಶ್ಚರ್ಯ, ಮತ್ತು ಭಕ್ತಿಭಾವಗಳನ್ನು ಒಮ್ಮೆಲೆ ಉಕ್ಕಿಸುತ್ತದೆ. ಸುಮಾರು 12-13 ಅಡಿ ಎತ್ತರದ ಕಪ್ಪು ಶಿಲೆಯ ಭಗವಂತನ ಶ್ರೀವಿಗ್ರಹ, ಅತ್ಯಂತ ಸುಂದರವಾದ ಶಿಲ್ಪಕಲಾಕೃತಿಯಾಗಿದೆ. ಪ್ರಾಯಃ  ಇಡೀ ಭಾರತದಲ್ಲೇ ಈ ರೀತಿಯ ಬೃಹತ್‌ ವರಾಹಮೂರ್ತಿಯಿರುವುದು ಅಪರೂಪ. ವರಾಹ ಅಥವಾ ಕಾಡುಹಂದಿಯ ಮುಖವಿರುವ ಭಗವಂತನು ಒಂದು ಎತ್ತರವಾದ ಪೀಠದ ಮೇಲೆ ಲಲಿತಾಸನದಲ್ಲಿ ಕುಳಿತಿದ್ದು ತನ್ನ ಎಡತೊಡೆಯ ಮೇಲೆ ಭೂದೇವಿಯನ್ನು ಕೂರಿಸಿಕೊಂಡು ಅವಳ ನಡುವನ್ನು ತನ್ನ ಎಡತೋಳಿನಿಂದ ಬಳಸಿ ಹಿಡಿದಿದ್ದಾನೆ, ಹಾಗೂ ತನ್ನ ಬಲಗಾಲನ್ನು ಕೆಳಗಿನ ಪೀಠದ ಮೇಲೆ ಇಳಿಬಿಟ್ಟು ತನ್ನ  ಪಾದಾರವಿಂದವನ್ನು ಅದರ ಮೇಲಿರಿಸಿದ್ದಾನೆ. ಚತುರ್ಭುಜಧಾರಿಯಾಗಿರುವ ಭಗವಂತನು ತನ್ನೆರಡು ಕೈಗಳಲ್ಲಿ ಶಂಖ, ಚಕ್ರಗಳನ್ನು ಧರಿಸಿದ್ದು ಇನ್ನೊಂದು ಕೈಯಿಂದ ಅಭಯಮುದ್ರೆಯನ್ನು ತೋರಿಸಿದ್ದಾನೆ.

ದೇವಾಲಯದ ಮುಂದಿರುವ ಒಂದು ಶಾಸನವು ಕ್ರಿ.ಶ. 1334ರ ಕಾಲದಾಗಿದ್ದು, ಹೊಯ್ಸಳ ಮುಮ್ಮಡಿ ಬಲ್ಲಾಳನದ್ದಾಗಿದೆ. ಈ ಶಾಸನದಲ್ಲಿ ಒಂದು ವರಾಹಸ್ತುತಿಯಿದೆ, ಹಾಗೂ ಈ ರಾಜನು ಕಲ್ಲಹಳ್ಳಿ ಗ್ರಾಮವನ್ನು ಒಂದು ಅಗ್ರಹಾರವನ್ನಾಗಿಸಿ, ತನ್ನ ರಾಣಿ ದೇಮಲಾದೇವಿಯ ಹೆಸರಿನಲ್ಲಿ ರಾಜಗುರು ಗುಮ್ಮಟದೇವನಿಗೆ ದಾನವಾಗಿತ್ತಿದ್ದನ್ನು ಅದು ಹೇಳುತ್ತದೆ. ಹಾಗಾಗಿ, ಇವನೇ ಈ ದೇವಾಲಯವನ್ನು ಕಟ್ಟಿಸಿರಬಹುದೆನಿಸುತ್ತದೆ. ಆದರೆ ಇದು ಇವನಿಗೂ ಹಿಂದೆಯೇ ಇದ್ದಿರಬಹುದೆಂಬ ಅಭಿಪ್ರಾಯವೂ ಇದೆ.

ಈ ಲೇಖನ ಶೇರ್ ಮಾಡಿ