ಸುಂದರ ತಾಣದಲ್ಲಿ ಬಿಳಿಗಿರಿ ರಂಗನಾಥ

ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ, ಹಸಿರು ದಟ್ಟ ಅರಣ್ಯದಿಂದ ಕೂಡಿರುವ, ತಂಪಾದ ಹವೆಯ ಒಂದು ಸುಂದರ ಗಿರಿಧಾಮ. ಬೆಟ್ಟದ ಮೇಲೆ ಲೋಕವನ್ನು ಕಾಯುತ್ತಾ ನಿಂತಿರುವ ರಂಗನಾಥ ಸ್ವಾಮಿಯ ದೇವಾಲಯ, ಈ ಗಿರಿಧಾಮದ ಗಾಳಿಯಲ್ಲಿ ಜ್ಞಾನ, ಭಕ್ತಿ, ವೈರಾಗ್ಯಗಳ ಪರಿಮಳವನ್ನೂ ಪಸರಿಸಿ ಮನಸ್ಸಿಗೆ ಅಪೂರ್ವ ಶಾಂತಿ ತರುತ್ತದೆ. ಅಲ್ಲದೇ ಈ ದೇವರ ವಿಷಯದಲ್ಲಿನ ಕಥೆಗಳೂ ಆಚರಣೆಗಳೂ ಆಶ್ಚರ್ಯ ತರುತ್ತವೆ.

ಮೈಸೂರಿನಿಂದ ಆಗ್ನೇಯಕ್ಕೆ 90 ಕಿ.ಮೀ. ದೂರದಲ್ಲಿರುವ ಯಳಂದೂರಿನ ಮೂಲಕ ತಲಪಲಾಗುವ ಈ ಕ್ಷೇತ್ರ ತಿರುಪತಿಯನ್ನು ಹೋಲುತ್ತದೆ. ತಿರುಪತಿಯಲ್ಲಿನ ಶೇಷಾಚಲ ಅಥವಾ ವೇಂಕಟಾದ್ರಿಯ ಪ್ರತೀಕವೇ ಈ ಬಿಳಿಗಿರಿ ಅಥವಾ ಶ್ವೇತಾಚಲ ಪರ್ವತ. ಅಲ್ಲಿನ ಶ್ರೀ ವೇಂಕಟೇಶ್ವರನೇ ಇಲ್ಲಿನ ಶ್ವೇತಾಚಲೇಶ್ವರ ಅಥವಾ ರಂಗನಾಥ. ಅಲ್ಲಿನ ಪುಷ್ಕರಣಿಯ ಪ್ರತೀಕವೇ ಇಲ್ಲಿನ ಗಜಪುಷ್ಕರಣಿ ಎಂಬ ಕಲ್ಯಾಣಿ. ಅಲ್ಲಿನ ಆಕಾಶಗಂಗೆಯನ್ನು ಇಲ್ಲಿ ಭಾರ್ಗವೀನದಿ ಹೋಲುತ್ತದೆ. ಅಲ್ಲಿ ಕಪಿಲೇಶ್ವರನೆಂಬ ಹೆಸರಿನಲ್ಲಿ ನೆಲೆಸಿರುವ ಶಿವನು ಇಲ್ಲಿ ಗಂಗಾಧರೇಶ್ವರನೆಂಬ ಹೆಸರಿನಲ್ಲಿ ನೆಲೆಸಿದ್ದಾನೆ. ಅಲ್ಲಿ ವರಾಹ ಸ್ವಾಮಿಯನ್ನು ಮೊದಲು ದರ್ಶಿಸಿ ಅನಂತರ ವೆಂಕಟೇಶ್ವರನ ದರ್ಶನ ಮಾಡುವಂತೆ, ಇಲ್ಲಿಯೂ ಮೊದಲು ಯಳಂದೂರಿನಲ್ಲಿರುವ ಶ್ವೇತವರಾಹಸ್ವಾಮಿಯ ದರ್ಶನ ಮಾಡಿ ಅನಂತರ ಬಿಳಿಗಿರಿ ರಂಗನಾಥನ ದರ್ಶನ ಮಾಡುವುದು ಸಂಪ್ರದಾಯ. ಶ್ವೇತವರಾಹ ಸ್ವಾಮಿಯ ವಿಗ್ರಹ ಬಹಳ ಸುಂದರವಾಗಿದೆ. ಅಂತೆಯೇ, ಈ ಗುಡಿಯ ಸನಿಹವೇ ಇರುವ ಕಲಾತ್ಮಕವಾದ ಗೌರೀಶ್ವರ ದೇವಾಲಯ ನೋಡತಕ್ಕದಾಗಿದೆ.

ರಂಗನಾಥಸ್ವಾಮಿಯ ದೇವಾಲಯ ಬಹಳ ಪ್ರಾಚೀನವಾದುದಾಗಿದೆ. ಅದರಲ್ಲೂ ಗರ್ಭಗುಡಿ ಬಹಳ ಪ್ರಾಚೀನವಾದುದೆಂದು ಪ್ರಾಚ್ಯ ಸಂಶೋಧನಾ ಇಲಾಖೆಯವರ ಅಭಿಪ್ರಾಯವಾಗಿದೆ. ದೇವಾಲಯವು ದ್ರಾವಿಡ ಶೈಲಿಯದಾಗಿದ್ದು, ಮೊದಲಿಗೆ ಚೋಳರೂ, ಸ್ವಲ್ಪ ಭಾಗವನ್ನು ಹತ್ತಿರದ ಮೂಗೂರಿನ ಪಾಳೇಗಾರರೂ ಕಟ್ಟಿರಬಹುದೆಂದು ಹೇಳಲಾಗಿದೆ. ಯಳಂದೂರು ತಾಲ್ಲೂಕಿನ ಅಗರಗ್ರಾಮದ ನರಸಿಂಹ ಸ್ವಾಮಿ ದೇವಾಲಯದ ಶಾಸನದ ಪ್ರಕಾರ, `ಗಣಪತಿ ಪ್ರಭು’ ಎಂದು ಕರೆಯಲಾಗಿದ್ದ ವಿಷ್ಣುವರ್ಧನನು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ. ಇಲ್ಲಿನ ದೇವರು, ಶಂಖಚಕ್ರ ಗದಾಧಾರಿಯಾಗಿಯೂ ವರದಹಸ್ತ ತೋರುತ್ತಲೂ ಇರುವ ಚತುರ್ಬಾಹುಗಳ ಸುಂದರವಾದ ಶ್ರೀನಿವಾಸ ಅಥವಾ ವೆಂಕಟೇಶ್ವರಮೂರ್ತಿ. ವಸಿಷ್ಠ ಮಹರ್ಷಿಗಳು ಈ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಇಲ್ಲಿರುವ ಕಠಾರಿಯನ್ನು ಮೈಸೂರಿನ ಮಹಾರಾಜರು ಅರ್ಪಿಸಿದರೆಂದು ಹೇಳುತ್ತಾರೆ. ಶ್ರೀ ವಿಗ್ರಹದ ಎಡಬಲಗಳಲ್ಲಿ ಅಲರ್‌-ಮಲರ್‌ ಮಂಗೈ ಎಂದು ಕರೆಯಲ್ಪಡುವ ಶ್ರೀದೇವಿ, ಭೂದೇವಿಯವರ ಸನ್ನಿಧಿಗಳಿವೆ. ಶ್ರೀ ವಿಗ್ರಹದ ಒಡ್ಯಾಣದ ಬಳಿ ಭಗವಂತನು ಪ್ರೀತಿಸಿ ವರಿಸಿದ ಸೋಲಿಗರ ಹೆಣ್ಣಾದ ಕುಸುಮಾಲೆದೇವಿಯೆಂಬುವಳ ಚಿನ್ನದ ಪುಟ್ಟ ಪ್ರತಿಮೆಯಿದೆ. ಈ ಬಗ್ಗೆ ಮುಂದೆ ನೋಡೋಣ. ನವರಂಗದ ಗೂಡುಗಳಲ್ಲಿ ಬಿಳಿಗಿರಿರಂಗ, ಹನುಮಂತ, ರಾಮಾನುಜಾಚಾರ್ಯರ, ಮುನಿಗಳ, ಆಳ್ವಾರರ ಪ್ರತಿಮೆಗಳಿವೆ. ದೇವರ ದರ್ಶನವಾದ ಕೂಡಲೇ ಗರ್ಭಗುಡಿಯ ಹೊರಗೆ ಕಾಣುವ ಒಂದು ವಿಸ್ಮಯಕರ ವಸ್ತುವೆಂದರೆ ಒಂದು ಜೊತೆ ಬೃಹತ್‌ ಚಪ್ಪಲಿಗಳು. ಇವು ದೇವರ ಚಪ್ಪಲಿಗಳೆಂದೂ ದೇವರು ರಾತ್ರಿಯ ವೇಳೆ ಈ ಚಪ್ಪಲಿಗಳನ್ನು ಧರಿಸಿ ಕಠಾರಿ ಹಿಡಿದು ಅರಣ್ಯದಲ್ಲಿ ಗಸ್ತು ತಿರುಗುವನೆಂದು ಹೇಳುತ್ತಾರೆ ಭಕ್ತರು. ಇದಕ್ಕೆ ಸಾಕ್ಷಿಯಾಗಿ ಚಪ್ಪಲಿಗಳು ಕ್ರಮೇಣ ಸವೆದಿರುವುದನ್ನೂ ಅವುಗಳಿಗೆ ಮಣ್ಣು ಮೆತ್ತಿಕೊಂಡಿರುವುದನ್ನೂ ತೋರಿಸುತ್ತಾರೆ. ಈ ಚಪ್ಪಲಿಗಳನ್ನು ಯಳಂದೂರು ತಾಲ್ಲೂಕಿನ ಬೂದಿತಿಟ್ಟು ಗ್ರಾಮದ ಆದಿಜಾಂಬವರೆಂಬ ಚಮ್ಮಾರರು ಎರಡು ವರ್ಷಗಳಿಗೊಮ್ಮೆ ಸುಂದರವಾಗಿ ತಯಾರಿಸಿ ಪಲ್ಲಕ್ಕಿಯಲ್ಲಿಟ್ಟು ಮಹಾರಥೋತ್ಸವದ ದಿನ ದೇವರಿಗೆ ಅರ್ಪಿಸುತ್ತಾರೆ. ಈ ಪಾದುಕೆಗಳು ಮೆರವಣಿಗೆಯಲ್ಲಿ ಬರುವಾಗ ದಾರಿಯ ಹಳ್ಳಿಗಳಲ್ಲಿ ಪೂಜೆ, ನೈವೇದ್ಯಗಳು ನಡೆಯುತ್ತವೆ. ಹಳೆಯ ಚಪ್ಪಲಿಗಳನ್ನು ತುಂಡರಿಸಿ ಭಕ್ತಾದಿಗಳಿಗೆ ಹಂಚಲಾಗುತ್ತದೆ. ಈ ತುಂಡುಗಳನ್ನು ರಕ್ಷಣೆಗಾಗಿ ತೊಟ್ಟಿಲಿಗೆ, ಕುತ್ತಿಗೆಗೆ ಕಟ್ಟಿಕೊಳ್ಳುವುದು ಮೊದಲಾಗಿ ಬಳಸುತ್ತಾರೆ.

ಬಿಳಿಗಿರಿ ರಂಗನಾಥಸ್ವಾಮಿಯ ವಿಷಯದಲ್ಲಿ ಅನೇಕ ಕಥೆಗಳನ್ನು ಹೇಳುತ್ತಾರೆ. ಮೊದಲಿಗೆ ಈ ದೇವರು ಶ್ರೀನಿವಾಸನಾದರೂ ರಂಗನಾಥನೆಂದು ಏಕೆ ಕರೆಯಲ್ಪಟ್ಟನೆಂಬುದು. ರಂಗನಾಥನು ಮಲಗಿರುವ ವಿಷ್ಣುರೂಪ. ಆದರೆ ಇಲ್ಲಿನ ಮೂರ್ತಿ ನಿಂತಿರುವ ಶ್ರೀನಿವಾಸ. ಹಾಗಾಗಿ, ಏಕೆ ಈ ದೇವರನ್ನು ರಂಗನಾಥನೆನ್ನುತ್ತಾರೆ? ಇದಕ್ಕೆ ಕಾರಣ, ಮತಾಂಧನಾದ ಟಿಪ್ಪುಸುಲ್ತಾನನು ಹಿಂದೂ ದೇವಾಲಯಗಳನ್ನು ಕೆಡವುತ್ತಾ ಇಲ್ಲಿಗೆ ಬಂದಾಗ, ಇಲ್ಲಿನ ಭಕ್ತರು, ಈ ದೇವರು ರಂಗನಾಥ ಎಂದರು. ಟಿಪ್ಪುವಿಗೆ ರಂಗನಾಥ, ನಂಜುಂಡೇಶ್ವರರಲ್ಲಿ ಮಾತ್ರ ವಿಶೇಷ ಗೌರವವಿತ್ತು. ಆದರೆ ರಂಗನಾಥ, ಶ್ರೀನಿವಾಸ, ಎರಡೂ ವಿಷ್ಣುವಿನ ರೂಪಗಳೇ ಎಂದು ಅವನಿಗೆ ತಿಳಿದಿರಲಿಲ್ಲ. ಹಾಗಾಗಿ ಇದು ರಂಗನಾಥನ ದೇವಾಲಯ ಎಂದರೆ ಅವನು ಹೊರಟು ಹೋಗುತ್ತಿದ್ದನಂತೆ. ಅಂತೆಯೇ ಇಲ್ಲಿಯೂ ಆಯಿತು. ಅಂದಿನಿಂದ ಈ ದೇವರು ರಂಗನಾಥ ಸ್ವಾಮಿ ಎಂದೇ ಪ್ರಸಿದ್ಧನಾದ. ಮಾಗಡಿ ರಂಗನಾಥ ಸ್ವಾಮಿಯ ವಿಷಯವೂ ಹೀಗೆಯೇ ಇದೆ.

ಸ್ಥಳಪುರಾಣ

ಬೆಟ್ಟದ ಮೇಲೆ ಮೂರನೆಯ ಶ್ರೇಣಿಯ ಮಧ್ಯದಲ್ಲಿ ಒಂದು ಬಿಳಿಯ ಕಮರಿ ಬಂಡೆಯಿರುವುದರಿಂದ ಬಿಳಿಗಿರಿ ಎಂದು ಹೆಸರಾಗಿರುವ ಇದನ್ನು ಶ್ವೇತಾಚಲ, ಶ್ವೇತಾದ್ರಿ, ಎಂದು ಸ್ಕಾಂದಪುರಾಣದ ತೀರ್ಥವೈಭವಖಂಡದಲ್ಲಿ ವರ್ಣಿಸಲಾಗಿದೆ. ಅಂತೆಯೇ ಬ್ರಹ್ಮಾಂಡಪುರಾಣದ ತೀರ್ಥಪ್ರಶಂಸನ ಖಂಡದಲ್ಲಿ ಶ್ವೇತಾಚಲಮಹಾತ್ಮೆಯ ಕಥೆ ಬರುತ್ತದೆ. ಅದರಂತೆ, ವಸಿಷ್ಠ ಮಹರ್ಷಿಗಳು ವಿಶ್ವಾಮಿತ್ರರ ಕೋಪದಿಂದ ತಮ್ಮ ಮಕ್ಕಳನ್ನು ಕಳೆದುಕೊಂಡು ಬಹುದುಃಖಿತರಾಗಿ ತಿರುಮಲೆ ಅಥವಾ ಶೇಷಾಚಲ ಪರ್ವತದಲ್ಲಿ (ತಿರುಪತಿ) ದುಷ್ಕರ ತಪಸ್ಸು ಮಾಡಿದಾಗ ಭಗವಂತನು ಪ್ರತ್ಯಕ್ಷನಾಗಿ ಈ ಶ್ವೇತಾದ್ರಿಗೆ ಹೋಗಿ ತನ್ನನ್ನು ಧ್ಯಾನಿಸುವಂತೆಯೂ ತಾನೂ ಅಲ್ಲಿಗೆ ಬರುವುದಾಗಿಯೂ ಹೇಳಿದನು. ವಸಿಷ್ಠರು ಈ ಸುಂದರ ಸ್ಥಳಕ್ಕೆ ಬಂದು ಭಗವಂತನ ಧ್ಯಾನ ಮಾಡಲು ಭಗವಂತನು ಶ್ರೀದೇವಿ, ಭೂದೇವಿಯರ ಸಹಿತನಾಗಿ ವೆಂಕಟೇಶ್ವರನ ರೂಪದಲ್ಲಿ ಪ್ರತ್ಯಕ್ಷನಾದನು. ಪರಮಾನಂದಭರಿತರಾದ ವಸಿಷ್ಠರು, ಭಗವಂತನನ್ನು ಆ ಪ್ರಶಾಂತ ವಾತಾವರಣದಲ್ಲಿಯೇ ನೆಲೆಸಲು ಕೇಳಿಕೊಂಡರು. ಅದಕ್ಕೆ ಶ್ರೀಹರಿಯು, “ಹಾಗೆಯೇ ಆಗಲಿ! ಪರಮಪವಿತ್ರಳಾದ ಗಂಗೆಯೂ ಇಲ್ಲಿನ ಗಜಕುಂಡದಲ್ಲಿ ನೆಲೆಸುತ್ತಾಳೆ” ಎಂದು ವಿಗ್ರಹರೂಪಿಯಾದನು. ಆಗ ವಸಿಷ್ಠರು ಸಕಲ ಋಷಿಗಳೊಂದಿಗೆ ಈ ವಿಗ್ರಹವನ್ನು ಪೂಜಿಸಿದರು. ಇದು ಎರಡನೆಯ ತಿರುಪತಿಯೆಂದು ಪ್ರಸಿದ್ಧವಾಯಿತು. ಮುಂದೆ ದೇವಾಲಯವನ್ನು ನಿರ್ಮಿಸಲಾಯಿತು.

ಗಂಗಾಧರೇಶ್ವರ ದೇವಾಲಯ

ಬೆಟ್ಟದ ಮೇಲೆಯೇ ದಕ್ಷಿಣ ಭಾಗದಲ್ಲಿ ಗಂಗಾಧರೇಶ್ವರನ ದೇವಾಲಯವಿದೆ. ಶಿವನು ಇಲ್ಲಿ ನೆಲೆಸಿರುವುದಕ್ಕೆ ಕಾರಣವಾಗಿ ಭಸ್ಮಾಸುರನ ಕಥೆಯನ್ನು ಹೇಳುತ್ತಾರೆ. ಯಾರ ತಲೆಯ ಮೇಲೆ ಕೈಯಿಟ್ಟರೂ ಅವನು ಕೂಡಲೇ ಭಸ್ಮವಾಗುವಂತಹ ವರವನ್ನು ಭಸ್ಮಾಸುರನು ಶಿವನಿಂದ ಪಡೆದು ಶಿವನ ಮೇಲೆಯೇ ಪ್ರಯೋಗಿಸಲು ಹೊರಟಾಗ, ವಿಷ್ಣುವು ಮೋಹಿನಿಯ ರೂಪದಲ್ಲಿ ಬಂದು ಅವನನ್ನು ಆಕರ್ಷಿಸಿದನು. ಭಸ್ಮಾಸುರನು ತನ್ನನ್ನು ಮದುವೆಯಾಗಲು ಮೋಹಿನಿಯನ್ನು ಕೇಳಿಕೊಳ್ಳಲು ಮೋಹಿನಿಯು ಅವನಿಗೆ ಮೊದಲು ಸ್ನಾನ ಮಾಡಿ ಬರಲು ಹೇಳಿದಳು. ಆದರೆ ಅಲ್ಲಿ ಸ್ನಾನಕ್ಕೆ ನೀರಿಲ್ಲದಿರಲು, ಮೋಹಿನಿಯೇ ತನ್ನ ಹೆಬ್ಬೆರಳಿನಿಂದ ನೆಲವನ್ನು ಕೆರೆದು ನೀರು ಬರುವಂತೆ ಮಾಡಿದಳು. ಆ ನೀರಿನಲ್ಲಿ ಸ್ನಾನ ಮಾಡುತ್ತಾ ಭಸ್ಮಾಸುರನು ತನ್ನ ಕೈಯಿಂದ ತನ್ನ ತಲೆಯನ್ನೇ ಮುಟ್ಟಿಕೊಳ್ಳಲು ಕೂಡಲೇ ಭಸ್ಮವಾಗಿ ಹೋದನು. ಹೀಗೆ ವಿಷ್ಣುವು ತನ್ನ ಪ್ರಾಣ ಉಳಿಸಲು, ಶಿವನು ಗಂಗಾಧರೇಶ್ವರನಾಗಿ ಅವನ ಬಳಿಯೇ ನಿಂತನು. ವಿಷ್ಣುವಿನ ಪಾದದಿಂದ ಹುಟ್ಟಿದ ತೀರ್ಥ, ಪಾದಸರೋವರವೆಂದೂ ಶಿವನ ತಾಪವನ್ನು ಪರಿಹರಿಸಿದುದರಿಂದ ತಾಪಹಾರಿಣಿಯೆಂದೂ ಪ್ರಸಿದ್ಧವಾಗಿ ಅದು ಪುಷ್ಕರಣಿಯಾಯಿತು. ಆದರೆ ಇದು ಗಜಪುಷ್ಕರಣಿಯೆಂದು ಹೆಚ್ಚು ಪ್ರಸಿದ್ಧವಾಗಿದೆ. ಇದಕ್ಕೊಂದು ಕಥೆಯಿದೆ.

ಗಜಪುಷ್ಕರಣಿ

ಒಮ್ಮೆ ಕುಬೇರನ ಮಿತ್ರನಾದ ಪುಷ್ಪಕೇತುವೆಂಬ ಗಂಧರ್ವನು ತನ್ನ ಪತ್ನಿಯೊಂದಿಗೆ ಹಿಮಪರ್ವತದಲ್ಲಿ ವಿಹರಿಸುತ್ತಿದ್ದಾಗ, ದುರ್ವಾಸ ಮುನಿಗಳು ಅಲ್ಲಿ ಬಂದರೂ ಗಮನಿಸಲಿಲ್ಲ. ಇದರಿಂದ ಕುಪಿತಗೊಂಡ ಅವರು, ಆ ದಂಪತಿಗೆ ಆನೆಗಳಾಗುವಂತೆ ಶಪಿಸಿದರು. ಆಗ ಅವರಿಬ್ಬರೂ ಪಶ್ಚಾತ್ತಾಪಪಡಲು, ದುರ್ವಾಸರು ಅವರಿಗೆ ಈ ಶ್ವೇತಾದ್ರಿಗೆ ಹೋಗಿ ವಿಷ್ಣುಪಾದೋದ್ಭವವಾದ ಈ ಸರೋವರದಲ್ಲಿ ವಿಹರಿಸುತ್ತಾ ತಮ್ಮ ಸಂತತಿಯನ್ನು ಬೆಳೆಸಲು, ವಸಿಷ್ಠರು ಬಂದು ಶಾಪವಿಮೋಚನೆ ಮಾಡುವರೆಂದು ಹೇಳಿದರು. ಅದರಂತೆ ಅವರಿಬ್ಬರೂ ಆನೆಗಳಾಗಿ ಈ ಸರೋವರದಲ್ಲಿ ಆಡುತ್ತಾ ಅದನ್ನು ವಿಸ್ತರಿಸಿದರು. ವಸಿಷ್ಠರು ಇಲ್ಲಿಗೆ ಬಂದು ಈ ಸರೋವರದಲ್ಲಿ ಸ್ನಾನ ಮಾಡತೊಡಗಿದಾಗ ಗಜರೂಪದ ಪುಷ್ಪಕೇತು ಅವರ ಮೇಲೆ ಆಕ್ರಮಣ ಮಾಡಿದನು. ಆಗ ವಸಿಷ್ಠರು ಒಂದಿಷ್ಟು ನೀರನ್ನು ತೆಗೆದುಕೊಂಡು ಮಂತ್ರಿಸಿ ಎರಡೂ ಆನೆಗಳ ಮೇಲೆ ಪ್ರೋಕ್ಷಿಸಲು, ಇಬ್ಬರಿಗೂ ಶಾಪವಿಮೋಚನೆಯಾಗಿ ಅವರು ತಮ್ಮ ಪೂರ್ವರೂಪ ಹೊಂದಿದರು.

ಬಿಳಿಗಿರಿರಂಗನಾಥನ ಮದುವೆ

ಬಿಳಿಗಿರಿರಂಗನಾಥನು ಸೋಲಿಗರ ಹೆಣ್ಣುಮಗಳಾದ ಕುಸುಮಾಲೆಯನ್ನು ಮೋಹಿಸಿ ಮದುವೆಯಾದನೆಂದು ಹೇಳಲಾಗುವ ಕಥೆ ಇಲ್ಲಿ ಬಹು ಪ್ರಸಿದ್ಧವಾದುದು. ಬಿಳಿಗಿರಿಯಲ್ಲಿ ಬಹಳ ಕಾಲದಿಂದಲೂ ಸೋಲಿಗರೆಂಬ ಆದಿವಾಸಿಗಳು ವಾಸಿಸುತ್ತಿದ್ದಾರೆ. ಅಂಥ ಬೊಮ್ಮೆಗೌಡನೆಂಬ ಶ್ರೀಮಂತ ಸೋಲಿಗನೊಬ್ಬನಿಗೆ ಐದು ಹೆಣ್ಣು ಮಕ್ಕಳಿದ್ದು ಅದರಲ್ಲಿ ಕೊನೆಯವಳಾದ ಕುಸುಮಾಲೆ ಸುರಸುಂದರಿಯಾಗಿದ್ದಳು. ರಂಗನಾಥನು ಅವಳ ಗುಣ ಪರೀಕ್ಷಿಸಲು ಮೈಯೆಲ್ಲಾ ಕಜ್ಜಿಯಿರುವ ಕುರೂಪಿ ಮುದುಕ ದಾಸಯ್ಯನ ರೂಪದಲ್ಲಿ ಆಶ್ರಯ ಕೇಳಲು ಬಂದನಂತೆ. ಬೊಮ್ಮೆಗೌಡನು ತನ್ನ ಮಕ್ಕಳಿಗೆ ಆವನನ್ನು ಓಡಿಸಲು ಹೇಳಲು, ಕುಸುಮಾಲೆಯು ಮಾತ್ರ ಕನಿಕರಗೊಂಡು ಅವನಿಗೆ ಆಶ್ರಯ ಕೊಡಿಸಿದಳು. ಆಗ ರಂಗನಾಥನು ತನ್ನ ನಿಜರೂಪ ತೋರಿಸಿ ಅವಳನ್ನು ವರಿಸಿದನೆಂದು ಕಥೆ. ಇದರಿಂದ ಸೋಲಿಗರು ರಂಗನಾಥನನ್ನು ತಮ್ಮ ಭಾವನೆಂದು ಭಾವಿಸುತ್ತಾರೆ. ಯಾವುದೇ ಉತ್ಸವವಾದರೂ ಅವರು ಅದರಲ್ಲಿ ಭಾಗವಹಿಸುತ್ತಾರೆ. ಮಹಾಕರುಣಾಶಾಲಿಯಾದ ರಂಗನಾಥಸ್ವಾಮಿಗೆ ಮೇಲುಕೀಳೆಂಬ ಭಾವವಿಲ್ಲ; ಹಾಗಾಗಿ ಅವನು ಈ ಸೋಲಿಗರ ಹೆಣ್ಣನ್ನೂ ವರಿಸಿ ಅವರಿಂದಲೂ ಸೇವೆ ಮಾಡಿಸಿಕೊಳ್ಳುತ್ತಾನೆ ಎಂಬುದು ಇಲ್ಲಿನ ಸಂದೇಶ.

ವೆಂಕಟೇಶ್ವರನು, ತನ್ನ ಪತ್ನಿ ಅಲಮೇಲು ಮಂಗಮ್ಮಳ ಅಭ್ಯಂಜನ ಸ್ನಾನಕ್ಕಾಗಿ ಸೀಗೇಕಾಯಿ ತರಲು ಶ್ವೇತಾದ್ರಿಗೆ ಬಂದಾಗ ಕುಸುಮಾಲೆಯನ್ನು ಕಂಡನೆಂದೂ ಅವಳನ್ನು ವರಿಸಿದ ಬಳಿಕ, ಅಲಮೇಲು ಮಂಗಮ್ಮಳಿಗೆ ತಿಳಿಯದಂತೆ ಅವಳನ್ನು ಕಮರಿ ಬಂಡೆಯ ಗುಹೆಯಲ್ಲಿರಿಸಿದ್ದನೆಂದೂ ಈಗಲೂ ಈ ಗುಹೆಯನ್ನು ತೋರಿಸುತ್ತಾರೆ. ಅವಳನ್ನು ರಾತ್ರಿ ನೋಡಲು ಬೇಟೆಯ ನೆಪದಲ್ಲಿ ಹೋಗಿ, ಹಿಂದಿರುಗುವಾಗ ಅಲಮೇಲು ಮಂಗಮ್ಮಳನ್ನು ನಂಬಿಸಲು ಒಂದು ಮೊಲವನ್ನು ತರುತ್ತಿದ್ದ, ಆದರೆ ಅವಳಿಗೆ ನಿಜವಿಷಯ ತಿಳಿದುಹೋಗಿ ಬಾಗಿಲು ತೆಗೆಯುತ್ತಿರಲಿಲ್ಲ, ಆಗ ಅವರಿಬ್ಬರ ಮಾತುಕತೆ, ಕೊನೆಗೆ ಪತ್ನಿಯೇ ಸೋತು ಬಾಗಿಲು ತೆಗೆಯುವುದು, ಹೀಗೆ ಈ ಕಥೆ, ಒಂದು ಜಾನಪದ ಹಾಡಾಗಿ ಬೆಳೆದಿದೆ, ಹಾಗೂ ಜಾನಪದ ಕಲಾವಿದರು ಇದನ್ನು ಹಾಡುತ್ತಾರೆ. ಇವುಗಳ ಸಿ.ಡಿ.ಗಳು ದೇವಾಲಯದ ಹೊರಗೆ ದೊರೆಯುತ್ತವೆ.

ಜಾತ್ರೆ

ಜಾತ್ರೆ ಉತ್ಸವಗಳು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ವೈಶಿಷ್ಟ್ಯ. ಬ್ರಹ್ಮ ರಥೋತ್ಸವ, ತೆಪ್ಪೋತ್ಸವ, ಚಿಕ್ಕಜಾತ್ರೆ, ಮೊದಲಾದ ಉತ್ಸವಗಳು ಇಲ್ಲಿ ನಡೆಯುತ್ತವೆ. ರಥೋತ್ಸವದ ಸಮಯದಲ್ಲಿ ರಥವನ್ನು ಎಳೆಯುವ ಮೊದಲು ಆಕಾಶದಲ್ಲಿ ಗರುಡಪಕ್ಷಿಯು ಕಾಣಿಸಿಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತದೆ ಎಂದು ಪ್ರತೀತಿ. ಚಿಕ್ಕ ಜಾತ್ರೆಯು ಸಂಕ್ರಾಂತಿಯ ದಿನದಿಂದ ನಾಲ್ಕು ದಿನಗಳು ನಡೆಯುತ್ತದೆ. ಹಲವಾರು ಉತ್ಸವಗಳಿರುವ ಈ ಜಾತ್ರೆಯಲ್ಲಿ ಮೊಲದ ಬೇಟೆ ಅಥವಾ ಅಂಗಮಣಿ ಉತ್ಸವ ಆಕರ್ಷಕವಾಗಿದೆ. ಸ್ವಾಮಿಯ ಮೊಲದ ಬೇಟೆಯನ್ನು ಸ್ಮರಿಸಲು ಒಂದು ಮೊಲವನ್ನು ಹಿಡಿದು ಪುನಃ ಕಾಡಿಗೆ ಬಿಡಲಾಗುತ್ತದೆ. ಅಂತೆಯೇ ನೆಪದ ಬೇಟೆ ಹಾಗೂ ಕುಸುಮಾಲೆಯ ವಿಷಯದಲ್ಲಿ ಸ್ವಾಮಿಗೂ ಅಲಮೇಲು ಮಂಗಮ್ಮಳಿಗೂ ನಡೆದ ಸಂಭಾಷಣೆಯನ್ನು ಅರ್ಚಕರು ನಡೆಸಿ ಪುನರಾವರ್ತಿಸುತ್ತಾರೆ. ಇದರೊಂದಿಗೆ ಉತ್ಸವಮೂರ್ತಿಯ ಮೆರವಣಿಗೆ ಮಾಡುತ್ತಾರೆ.

ಸ್ವಾಮಿಗೆ ವಿವಿಧ ವೇಷ, ಅಲಂಕಾರಗಳನ್ನೂ ಮಾಡುತ್ತಾರೆ. ಇವುಗಳಲ್ಲಿ ಪ್ರತಿ ಶನಿವಾರ ಮಾಡಲಾಗುವ ವೇಷ ಬೇಟೆಯ ವೇಷ ಸ್ವಾರಸ್ಯಕರವಾಗಿರುತ್ತದೆ. ಅಂದು ಸ್ವಾಮಿಯನ್ನು ಬ್ಯಾಟರಾಯ (ಬೇಟೆರಾಯ) ಎಂದು ಕರೆಯುತ್ತಾರೆ. ಈ ಎಲ್ಲ ಉತ್ಸವಗಳಲ್ಲಿ ಸೋಲಿಗರು, ಹರಿಜನರು ಇರಲೇಬೇಕು. ಇದರಿಂದ ಭಗವಂತನು ಯಾವುದೇ ಭೇದಭಾವವಿಲ್ಲದೇ ಎಲ್ಲರಿಗೂ ಪ್ರೀತಿಪಾತ್ರನು ಎಂದು ತಿಳಿಯುತ್ತದೆ. ಈ ಸ್ವಾರಸ್ಯಕರ ಉತ್ಸವಗಳು ಅವರ ಪ್ರೀತಿಯನ್ನು ತೋರಿಸುತ್ತವೆ.

ಬಿಳಿಗಿರಿಪರ್ವತದಲ್ಲಿ ನೋಡಬೇಕಾದ ಇನ್ನೊಂದು ಪ್ರಮುಖ ತಾಣ, ದೊಡ್ಡ ಸಂಪಿಗೆ ಮರದ ತಾಣ. ಆನೆಗಳು ಹೆಚ್ಚಾಗಿ ಓಡಾಡುವ ದಟ್ಟ ಕಾಡಿನ ಈ ತಾಣಕ್ಕೆ ಹೋಗಲು ಈಗ ಅವಕಾಶ ಕೊಡುತ್ತಿಲ್ಲ. ಇಲ್ಲಿ ಭಾರ್ಗವೀ ನದಿಯಿದೆ ಹಾಗೂ ಅದರ ದಡದಲ್ಲಿ ದೈತ್ಯಾಕಾರವಾದ ದೊಡ್ಡ ಸಂಪಿಗೆ ಮರವಿದೆ. ಪರಶುರಾಮನು ತನ್ನ ತಂದೆಯ ಆಜ್ಞೆಯಂತೆ ತಾಯಿಯ ತಲೆ ಕಡಿದ ಪಾಪವನ್ನು ಈ ಭಾರ್ಗವೀ ನದಿಯಲ್ಲಿ ಪರಿಹರಿಸಿಕೊಂಡನೆಂದು ಕಥೆ. ವಿಷ್ಣುವನ್ನು ಕುರಿತು ತಪಸ್ಸು ಮಾಡಲು, ವಿಷ್ಣುವು ಅವನಿಗೆ ತನ್ನ ಪಾದವನ್ನು ವಿರಜಾನದಿಯ ನೀರಿನಿಂದ ತೊಳೆಯಲು ಹೇಳಿದನಂತೆ. ಗರುಡನು ವೈಕುಂಠದಿಂದ ವಿರಜಾನದಿಯ ನೀರನ್ನು ತರಲು, ಪರಶುರಾಮನು ಅದರಿಂದ ವಿಷ್ಣುವಿನ ಪಾದವನ್ನು ತೊಳೆದನು. ಆಗ ಆ ನೀರು ಹರಿದು ನದಿಯಾಗಿ ಭಾರ್ಗವನಾದ ಪರಶುರಾಮನಿಂದ ಭಾರ್ಗವೀ ಎಂಬ ಹೆಸರು ಪಡೆಯಿತು. ಇದು ಕಾವೇರಿಯನ್ನು ಸೇರುತ್ತದೆ. ಇಲ್ಲಿ ಗರುಡನ ಪಾತ್ರವಿರುವುದರಿಂದಲೇ ಬ್ರಹ್ಮರಥೋತ್ಸವದ ಸಮಯದಲ್ಲಿ ಗರುಡಪಕ್ಷಿ ಬರುತ್ತದೆ ಎನ್ನುತ್ತಾರೆ. ಅದನ್ನು ಗರುಡೋತ್ಸವ ಎನ್ನುತ್ತಾರೆ. ದೊಡ್ಡ ಸಂಪಿಗೆ ಮರದ ಮೂರು ದೊಡ್ಡ ಕೊಂಬೆಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತೀಕವೆಂದು ಭಾವಿಸುತ್ತಾರೆ.

ಕ್ಯಾತದೇವರ ಗುಡಿ ಎಂಬ ಒಂದು ಪುಟ್ಟ ಗುಡಿಯೂ ನೋಡತಕ್ಕದ್ದು. ಶಿವನ ರೂಪವಾದ ಕ್ಯಾತದೇವರು ಸೋಲಿಗರ ಮನೆದೇವರು. ಈ ಗುಡಿಯ ಪ್ರಶಾಂತ ಪ್ರದೇಶವನ್ನು ಚಿಕ್ಕದಾಗಿ ಕೆ. ಗುಡಿಯೆನ್ನುತ್ತಾರೆ. ಇಲ್ಲಿ ಬಿಳಿಗಿರಿ ಅಭಯಾರಣ್ಯವನ್ನು ತೋರಿಸಲು ಹಾಗೂ ಇಳಿದುಕೊಳ್ಳಲು ಸರ್ಕಾರದ ಜಂಗಲ್‌ ಲಾಡ್ಜ್‌ ಇದೆ. ಬಿಳಿಗಿರಿ ರಂಗನಾಥಸ್ವಾಮಿ ಅಭಯಾರಣ್ಯ ಅಥವಾ ಬಿ.ಆರ್‌. ಹಿಲ್ಸ್‌ ಅಭಯಾರಣ್ಯ, ಈ ಬೆಟ್ಟದ ಮೇಲಿನ ಅಭಯಾರಣ್ಯವಾಗಿದ್ದು ಅನೇಕ ವನ್ಯ ಪ್ರಾಣಿ, ಪಕ್ಷಿಗಳನ್ನು ಹೊಂದಿದೆ. ಇವನ್ನು ನೋಡಿ ಭಗವಂತನ ಸೃಷ್ಟಿಯನ್ನು ಆಸ್ವಾದಿಸಬೇಕು.

ಒಟ್ಟಿನಲ್ಲಿ ಬಿಳಿಗಿರಿ ಒಂದು ಸುಂದರ ತಾಣ. ಇಲ್ಲಿನ ರಂಗನಾಥಸ್ವಾಮಿ ದೇವಾಲಯ, ಅದರ ವಿವಿಧ ಪೌರಾಣಿಕ ಹಾಗೂ ಜಾನಪದ ಆಯಾಮಗಳು, ಅಭಯಾರಣ್ಯ, ಸೋಲಿಗರ ಜೀವನ, ಎಲ್ಲವೂ ಆಕರ್ಷಕ ಹಾಗೂ ಅಧ್ಯಯನೀಯ. ಮಳೆಗಾಲ ಮುಗಿದ ಕೂಡಲೇ ಇದು ಹಸಿರಿನಿಂದ ಕಂಗೊಳಿಸುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಮೈಸೂರಿನಲ್ಲಿ ಇಳಿದುಕೊಂಡು ಇಲ್ಲಿಗೆ ಹೋಗಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi