
ಸತ್ಯಯುಗದ ಪ್ರಾರಂಭದಲ್ಲಿ ಪ್ರಜಾಪತಿ ದಕ್ಷನಿಗೆ ಕದ್ರು ಮತ್ತು ವಿನತಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಿಬ್ಬರನ್ನು ಮಹಾತಪಸ್ವಿಗಳಾದ ಕಶ್ಯಪ ಮುನಿಗಳಿಗೆ ಕೊಟ್ಟು ಮದುವೆ ಮಾಡಲಾಯಿತು.
ತಮ್ಮ ಹೆಂಡತಿಯರ ಸೇವೆಯನ್ನು ಮೆಚ್ಚಿದ ಕಶ್ಯಪರು ಅವರಿಬ್ಬರಿಗೆ ವರಗಳನ್ನು ಬೇಡಲು ಹೇಳಿದರು. ಕದ್ರು ತನಗೆ ಒಂದು ಸಾವಿರ ಶಕ್ತಿಶಾಲಿ ನಾಗಗಳು ಹುಟ್ಟಬೇಕೆಂದು ವರ ಬೇಡುತ್ತಾಳೆ. ಕದ್ರುವಿನ ಆ ನಾಗಸಂತತಿಯ ಪರಾಕ್ರಮವನ್ನು ಮೀರಿಸುವ ಇಬ್ಬರಿಗೆ ತಾಯಿಯಾಗುವ ವರವನ್ನು ಬೇಡುತ್ತಾಳೆ ಕದ್ರುವಿನ ಸಹೋದರಿ ವಿನತಾ. `ತಥಾಸ್ತು’ ಎಂದು ಅವರಿಬ್ಬರಿಗೆ ವರಗಳನ್ನು ನೀಡಿ ಕಶ್ಯಪರು ತಪಸ್ಸಿಗಾಗಿ ಅರಣ್ಯಕ್ಕೆ ಹೋದರು.
ಕಶ್ಯಪರ ವರದಂತೆ ಬಹಳ ಸಮಯದ ಅನಂತರ ಕದ್ರು ಒಂದು ಸಾವಿರ ಮೊಟ್ಟೆಗಳಿಗೆ ಜನನ ನೀಡಿದಳು ಮತ್ತು ವಿನತಾ ಎರಡು ಮೊಟ್ಟೆಗಳಿಗೆ ಜನನ ನೀಡಿದಳು. ಅವರ ಸೇವಕಿಯರು ಅವುಗಳನ್ನು ಪ್ರತ್ಯೇಕವಾಗಿ ಬೆಚ್ಚಗಿನ ಪಾತ್ರೆಗಳಲ್ಲಿ ಇಟ್ಟರು. ಈ ರೀತಿ ಐದುನೂರು ವರ್ಷಗಳು ಕಳೆದವು. ಐದುನೂರು ವರ್ಷಗಳ ಅನಂತರ ಕದ್ರುವಿನ ಪುತ್ರರು ಮೊಟ್ಟೆಗಳಿಂದ ಹೊರಬಂದರು. ಆದರೆ ವಿನತೆಯ ಮೊಟ್ಟೆಗಳು ಹಾಗೆಯೇ ಉಳಿದವು. ಹಾಗಾಗಿ ಅವಮಾನಿತಳಾದ ವಿನತೆಯು ಒಂದು ಮೊಟ್ಟೆಯನ್ನು ಒಡೆದು ಅದರಲ್ಲಿದ್ದ ತನ್ನ ಮಗುವನ್ನು ನೋಡಿದಳು. ಆ ಮಗುವಿನ ದೇಹದ ಮೇಲ್ಭಾಗ ಮಾತ್ರ ಬೆಳೆದಿದ್ದು, ಕೆಳಭಾಗವು ಬೆಳೆದಿರಲಿಲ್ಲ. ಇದರಿಂದ ಕುಪಿತವಾದ ಮಗುವು ತನ್ನ ತಾಯಿಯನ್ನು ಶಪಿಸಿತು, “ಓ ಮಾತೆ, ಕದ್ರುವಿನ ಮೇಲಿನ ಹೊಟ್ಟೆ ಕಿಚ್ಚಿನಿಂದಾಗಿ ಈ ಮೊಟ್ಟೆಯನ್ನು ಸಮಯಕ್ಕೆ ಮುಂಚೆಯೇ ಒಡೆದು ನನ್ನ ದೇಹವನ್ನು ಸಂಪೂರ್ಣವಾಗಿ ಬೆಳೆಯಲು ನೀನು ಬಿಡಲಿಲ್ಲ. ಆದ್ದರಿಂದ ನೀನು ಅದೇ ಕದ್ರುವಿನ ದಾಸಿಯಾಗಿ ಅವಳ ಸೇವೆಯನ್ನು ಮಾಡು. ನೀನು ಐದು ನೂರು ವರ್ಷಗಳವರೆಗೆ ತಾಳ್ಮೆಯಿಂದಿದ್ದು ಆ ಇನ್ನೊಂದು ಮೊಟ್ಟೆಯನ್ನು ಒಡೆಯದಿದ್ದರೆ, ಅದರಿಂದ ಹುಟ್ಟುವ ಪುತ್ರನು ನಿನ್ನನ್ನು ಆ ದಾಸ್ಯದಿಂದ ಮುಕ್ತಗೊಳಿಸುತ್ತಾನೆ. ನಿನ್ನ ಪುತ್ರನು ಬಲಿಷ್ಠನಾಗಿರಬೇಕೆಂದು ನೀನು ಬಯಸುತ್ತಿದ್ದರೆ, ಐನೂರು ವರ್ಷಗಳವರೆಗೆ ಆ ಮೊಟ್ಟೆಯನ್ನು ಜೋಪಾನವಾಗಿ ನೋಡಿಕೊ.” ಹೀಗೆ ತನ್ನ ತಾಯಿಯನ್ನು ಶಪಿಸಿ ಆಕಾಶಕ್ಕೆ ಹಾರಿದ ಮಗು ಅರುಣನು, ಸೂರ್ಯನ ಸಾರಥಿಯಾದನು. ಐದು ನೂರು ವರ್ಷಗಳ ಅನಂತರ ವಿನತೆಯ ಎರಡನೇ ಮೊಟ್ಟೆಯಿಂದ ಗರುಡನು ಜನಿಸಿದನು.

ಹುಟ್ಟಿದ ತತ್‌ಕ್ಷಣವೇ ಗರುಡನು ರೆಕ್ಕೆಗಳನ್ನು ಬೀಸುತ್ತ, ಆಹಾರವನ್ನು ಅರಸುತ್ತಾ ಹೊರಟು ಹೋದನು.
ಪಕ್ಷಿರಾಜನಾದ ಈ ಗರುಡನೇ ಮುಂದೊಂದು ದಿನ ತಾಯಿಯನ್ನು ದಾಸ್ಯದಿಂದ ಬಿಡುಗಡೆ ಮಾಡುತ್ತಾನೆ.






Leave a Reply