ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರೊಂದಿಗೆ ಜಿನೀವಾದಲ್ಲಿ ಜೂನ್ 6, 1974 ರಲ್ಲಿ ನಡೆದ ಸಂವಾದ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ : ಒಂದು ವಿಷಯ ನನಗೆ ಅರ್ಥವಾಗುತ್ತಿಲ್ಲ. ಭಾರತೀಯನಾಗಿ ನನಗೆ ಈ ಪ್ರಶ್ನೆಯು ಪದೇ ಪದೇ ಕಾಡುತ್ತದೆ. ಸರಳ, ಸಹಜ ಬದುಕಿಗೆ ಹಿಂದಿರುಗುವ ಬಗೆಗೆ ನೀವು ಹೇಳಿದ ಅನೇಕ ವಿಷಯಗಳಲ್ಲಿ ನನಗೆ ನಂಬಿಕೆ ಇದೆ. ನಮ್ಮ ಆಧ್ಯಾತ್ಮಿಕ ಆಯಾಮದಲ್ಲಿ ತೃಪ್ತಿ ಕಂಡುಕೊಳ್ಳುವುದು. ಅದು ಪ್ರಶ್ನಾತೀತ. ನೀವು ಕರೆಯುವ “ಪಾಶ್ಚಿಮಾತ್ಯ ಭಾರತೀಯ” ನಾನು ಅಲ್ಲ.
ಆದರೆ ಒಂದು ವಿಷಯ ನನಗೆ ಅರ್ಥವಾಗುತ್ತಿಲ್ಲ – ನಮಗೆ ಈ ಆಧ್ಯಾತ್ಮಿಕ ಜ್ಞಾನ ಮತ್ತು ನಮ್ಮ ಎಲ್ಲ ಸಾಂಸ್ಕೃತಿಕ ಮಾರ್ಗದರ್ಶನಗಳಿವೆ. ಅವು ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂದು ನೀವು ಈಗಷ್ಟೇ ಹೇಳಿದಿರಿ. ಈ ಮಾರ್ಗದರ್ಶನಗಳು ಇದ್ದರೂ ನಾವು ನಮ್ಮ ಸಮಾಜವನ್ನು ಅನೇಕ ಕೆಡಕುಗಳಿಂದ ದೂರವಿಡಲು ಸಾಧ್ಯವಾಗಿಲ್ಲ. ನಾನು ದಾರಿದ್ರ್ಯದ ಬಗೆಗೆ ಮಾತ್ರ ಪ್ರಸ್ತಾವಿಸುತ್ತಿಲ್ಲ, ನಿರುದ್ಯೋಗ, ಹಸಿವು ಮತ್ತು ಇತರ ಅನೇಕ ವಿಷಯಗಳ ಬಗೆಗೆ ಕೂಡ ಹೇಳುತ್ತಿರುವೆ.
ಶ್ರೀಲ ಪ್ರಭುಪಾದ : ಇಲ್ಲ. ಇದು ನಮ್ಮ ಸಾಂಸ್ಕೃತಿಕ ಮಾರ್ಗದರ್ಶನದಿಂದ ಅಲ್ಲ. ಅವುಗಳನ್ನು ಪಾಲಿಸದ ಕೆಟ್ಟ ನಾಯಕರೇ ಅದಕ್ಕೆ ಕಾರಣ. ಇದು ಈ ಕೆಟ್ಟ ನಾಯಕರಿಂದಾಗಿ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ : ಅವರು ನಮ್ಮವರೇ. ಅವರು…
ಶ್ರೀಲ ಪ್ರಭುಪಾದ : ಅವರು ನಮ್ಮವರಿರಬಹುದು. ಅವರು ನಮ್ಮ ತಂದೆಯೇ ಆಗಿರಬಹುದು. ಪ್ರಹ್ಲಾದ ಮಹಾರಾಜನು ಭಗವಂತನ ಭಕ್ತ. ಆದರೂ ಅವನ ತಂದೆ ರಾಕ್ಷಸ ಹಿರಣ್ಯಕಶಿಪು. ಆದುದರಿಂದ ಏನು ಮಾಡುವುದು? ಅನೇಕ ಜನರು ಒಳ್ಳೆಯವರು. ಆದರೆ ಅವರ ನಾಯಕರು ದೈವಹೀನ ರಾಕ್ಷಸರೆಂಬುದನ್ನು ನಾವು ಪದೇ ಪದೇ ನೋಡುತ್ತೇವೆ.

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ : ಹೌದು, ಹಿರಣ್ಯಕಶಿಪುವನ್ನು ನಾಶಪಡಿಸಬೇಕಾಯಿತು.
ಶ್ರೀಲ ಪ್ರಭುಪಾದ : ದೇವರ ಕೃಪೆಯಿಂದ ಅವನನ್ನು ಸಂಹರಿಸಲಾಯಿತು. ಮತ್ತು ಈ ಆಧುನಿಕ ರಾಕ್ಷಸ ನಾಯಕರೆಲ್ಲರನ್ನೂ ನಾಶಪಡಿಸಲಾಗುವುದು. ಈ ರಾಕ್ಷಸ ನಾಯಕರು ಇರುವುದಿಲ್ಲ. ಅವರನ್ನು ನಿರ್ನಾಮ ಮಾಡಲಾಗುವುದು. ಆದರೆ ಎಲ್ಲದಕ್ಕೂ ಸಮಯ ಬೇಕು.
ಪ್ರಸ್ತುತದಲ್ಲಿ ನಮ್ಮ ನಾಯಕರು ಒಳ್ಳೆಯವರಲ್ಲ. ಅವರು ಅಂಧರು. ಅವರಿಗೆ ಜ್ಞಾನವಿಲ್ಲ, ಆದರೂ ಅವರು ನಾಯಕರಾಗಿದ್ದಾರೆ. ಅಂಧಾ ಯಥಾಂಧೈರ್ ಉಪನೀಯಮಾನಾಸ್ : ಅಂಧನು ಅಂಧನನ್ನು ನಡೆಸಿಕೊಂಡು ಹೋಗುವುದು, ಕಂದಕಕ್ಕೆ. ಈ ನಾಯಕರು ಜಗತ್ತಿನ ಮೂಲ, ಆಧ್ಯಾತ್ಮಿಕ ಸಂಸ್ಕೃತಿಯನ್ನು ನಾಶಪಡಿಸಿದ್ದಾರೆ. ಅದರ ಸ್ಥಳದಲ್ಲಿ ಬೇರೆಯದನ್ನು ನೀಡಲು ಅವರಿಗೆ ಸಾಧ್ಯವಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ : ಹಾಗಾದರೆ, ನಿಮ್ಮ ಆಂದೋಲನವು ಸಾಮಾಜಿಕ ತತ್ತ್ವದಲ್ಲಿ ತೊಡಗಿದೆಯೆ?
ಶ್ರೀಲ ಪ್ರಭುಪಾದ : ಹೌದು, ಈ ಆಂದೋಲನವು ಅತ್ಯಂತ ಪ್ರಾಯೋಗಿಕ. ಉದಾಹರಣೆಗೆ, ನಾವು ಮಾಂಸ ತಿನ್ನಬಾರದೆಂದು ಶಿಫಾರಸು ಮಾಡುತ್ತೇವೆ. ಆದರೆ ನಾಯಕರಿಗೆ ಅದು ಇಷ್ಟವಿಲ್ಲ. ಅವರ ಪ್ರಚಾರದ ಬಗೆಗೆ ನಮಗೆ ಒಲವಿಲ್ಲ. ಹೀಗಾಗಿ ನಾಯಕರಿಗೆ ನಾವು ಇಷ್ಟವಿಲ್ಲ. ಆದರೂ ಅವರು ಕಸಾಯಿಖಾನೆಗೆ ಮತ್ತು ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳಿಗೆ ಅವಕಾಶ ನೀಡಿದ್ದಾರೆ. ನಾವು ಹೇಳುತ್ತೇವೆ, “ಮಾಂಸ ಸೇವನೆ ಇಲ್ಲ.” ಅವರು ನಮ್ಮನ್ನು ಹೇಗೆ ಇಷ್ಟಪಡುತ್ತಾರೆ? ಅದೇ ಕಷ್ಟವಾದದ್ದು. “ಮೂರ್ಖತನವೇ ಆನಂದವಾಗಿರುವೆಡೆ ವಿವೇಕಿಯಾಗಿರುವುದು ಮೂರ್ಖತನ.” ಆದರೂ ನಾವು ಹೋರಾಡುತ್ತಿದ್ದೇವೆ. ನಾವು ಶಿಫಾರಸು ಮಾಡುತ್ತಿರುವ ಪರ್ಯಾಯ ಕೂಡ ಪ್ರಾಯೋಗಿಕವಾಗಿದೆ. ಈ ದೈವ ಪ್ರಜ್ಞೆಯ ಕೃಷಿ ಗ್ರಾಮಗಳು ಯಶಸ್ವಿಯಾಗಿವೆ. ಅಲ್ಲಿನ ನಿವಾಸಿಗಳು ತಮ್ಮ ಬದುಕು ಸಂತೋಷ ಮತ್ತು ಸಮೃದ್ಧಿಯಿಂದ ಇದೆ ಎಂದು ಕಂಡುಕೊಳ್ಳುತ್ತಿದ್ದಾರೆ. ಪ್ರಕೃತಿಯು ಧಾರಾಳವಾಗಿ ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಪೂರೈಸುತ್ತಿದೆ. ಹಸುಗಳು ಹಾಲು ನೀಡುತ್ತವೆ. ಅದರಿಂದ ನೀವು ಮೊಸರು, ಬೆಣ್ಣೆ, ತುಪ್ಪ ಮತ್ತು ಚೀಸ್ ಪಡೆಯಬಹುದು. ಈ ಎಲ್ಲ ಸಾಮಗ್ರಿಗಳಿಂದ ನೀವು ನೂರಾರು ಸ್ವಾದಿಷ್ಟ ತಿನಿಸುಗಳನ್ನು ತಯಾರಿಸಬಹುದು. ನೀವು ಪೂರ್ಣ ತೃಪ್ತಿ ಹೊಂದುವಿರಿ. ಅದೇ ಮೂಲ ತತ್ತ್ವ.

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ : ಯಶಸ್ವೀ ಉದ್ದಿಮೆಗೆ ಅದೊಂದು ಉದಾಹರಣೆ. ಆದರೆ ಈವರೆಗೆ ಪ್ರಯತ್ನಿಸದ ಯಾವುದಾದರ ಬಗೆಗಾದರೂ ಹೇಳುವಿರಾ?
ಶ್ರೀಲ ಪ್ರಭುಪಾದ : “ಹೊಸ ವಿಷಯ” ಎಂದರೆ ದೈವಿ ಪ್ರಜ್ಞೆ. ಗ್ರಾಮದ ಜನರು ಈಗ ತಮ್ಮ ದಿನ ನಿತ್ಯದ ಅಗತ್ಯಗಳಿಗೆ ಹೊರಗೆ ಹೋಗಬೇಕಾಗಿಲ್ಲ. ಆಧುನಿಕ ಸಮಾಜಕ್ಕೆ ಅದೊಂದು ಹೊಸತು.
ಈಗ ಜನರು ಕಾರ್ಖಾನೆ ಅಥವಾ ಕಚೇರಿಗಳಿಗೆ ಹೋಗಲು ಸ್ವಲ್ಪ ದೂರ ಪ್ರಯಾಣಿಸಬೇಕು. ರೈಲು ಮುಷ್ಕರ ನಡೆದಾಗ ನಾನು ಮುಂಬಯಿಯಲ್ಲಿ ಇದ್ದೆ. ಜನರು ಎಷ್ಟೊಂದು ಕಷ್ಟಪಡುತ್ತಿದ್ದರು. ರೈಲಿಗಾಗಿ ಅವರು ಬೆಳಗ್ಗೆ 5 ಗಂಟೆಯಿಂದಲೇ ಸಾಲಿನಲ್ಲಿ ನಿಲ್ಲುತ್ತಿದ್ದರು. ಮುಷ್ಕರದ ಸಮಯದಲ್ಲಿ ರೈಲುಗಳು ಇರುತ್ತಿರಲಿಲ್ಲ. ಜನರಿಗೆ ಕಷ್ಟವಾಗಿತ್ತು. ಅಪರೂಪಕ್ಕೆ ಒಮ್ಮೆ ರೈಲು ಬಂದಾಗ ಜನರು ನುಗ್ಗುತ್ತಿದ್ದರು, ಹೇಗಾದರೂ ರೈಲಿನೊಳಗೆ ತೂರಲು ಪ್ರಯತ್ನಿಸುತ್ತಿದ್ದರು. ರೈಲಿನ ಮೇಲೆ ಕೂಡ ಜನರು ಕೂರುತ್ತಿದ್ದರು.
ಕೈಗಾರಿಕಾಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನರು ಕಚೇರಿಗಳಿಗೆ ಕಾರಿನಲ್ಲಿ ಹೋಗುತ್ತಾರೆ, ನಿಜ. ಆದರೆ ಅಲ್ಲಿ ಅಪಘಾತದ ಅಪಾಯವಿದೆ.
ಆದುದರಿಂದ ಈ ಪ್ರಶ್ನೆ ಮೂಡುತ್ತದೆ – ತಮ್ಮ ಜೀವನೋಪಾಯಕ್ಕಾಗಿ ಜನರು ಮೈಲಿಗಟ್ಟಲೆ ಹೋಗುವಂತೆ ಏಕೆ ಮಾಡಬೇಕು? ಇದು ಬಹಳ ಕೆಟ್ಟ ನಾಗರಿಕತೆ. ಸ್ಥಳೀಯವಾಗಿಯೇ ಆಹಾರ ಸಿಗಬೇಕು. ಅದು ಒಳ್ಳೆಯ ನಾಗರಿಕತೆ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ : ಆಹಾರದ ವಿಷಯದಲ್ಲಿ ಎಲ್ಲರೂ ಸ್ವಾವಲಂಬಿತರಾಗಬೇಕೆಂಬ ನಿಮ್ಮ ಗುರಿ ಅರ್ಥವಾಯಿತು. ಆದರೆ ಎಲ್ಲರೂ ಆಹಾರ ಉತ್ಪಾದನೆಯಲ್ಲಿಯೇ ತೊಡಗಿದರೆ ಇತರವುಗಳನ್ನು ಯಾರು ಒದಗಿಸುತ್ತಾರೆ?

ಶ್ರೀಲ ಪ್ರಭುಪಾದ : ಎಲ್ಲರೂ ಆಹಾರ ಉತ್ಪಾದನೆಯಲ್ಲಿ ತೊಡಗಬೇಕೆಂದು ನಾವು ಹೇಳುತ್ತಿಲ್ಲ. ಭಗವದ್ಗೀತೆಯ ಪ್ರಕಾರ, ಸ್ವಾಭಾವಿಕವಾಗಿಯೇ ಆಹಾರ ಉತ್ಪಾದಿಸುವ ವರ್ಗ, ಆಧ್ಯಾತ್ಮಿಕ ನಿರ್ದೇಶನ ನೀಡುವ ವರ್ಗ ಮತ್ತು ಸರಕಾರ ಅಥವಾ ರಾಜನಾಗಿ ನಿರ್ವಹಿಸುವ ವರ್ಗಗಳಿವೆ. ಉಳಿದ ಜನರು ಕಾರ್ಮಿಕರಾಗಿ ಇತರ ವರ್ಗಗಳಿಗೆ ನೆರವಾಗುತ್ತಾರೆ.
ಪ್ರತಿಯೊಬ್ಬರೂ ಕೃಷಿಕರೆಂಬುದಲ್ಲ. ಇಲ್ಲ. ಮಿದುಳು ವಿಭಾಗ, ಆಡಳಿತ ವಿಭಾಗ ಮತ್ತು ಕಾರ್ಮಿಕ ವಿಭಾಗಗಳು ಇರಬೇಕು. ಈ ಗುಂಪುಗಳು ಯಾವುದೇ ಸಮಾಜದೊಳಗೆ ಸಹಜವಾಗಿ ಇರತಕ್ಕಂಥವು. ಮತ್ತು ಅವೆಲ್ಲವೂ ಆಧ್ಯಾತ್ಮಿಕ ಬೆಳವಣಿಗೆಗೆ ಒಟ್ಟಾಗಿ ಕೆಲಸ ಮಾಡಬೇಕು.






Leave a Reply