ತರಕಾರಿಗಳಲ್ಲಿ ಒಂದೊಂದು ತರಕಾರಿಯದು ಒಂದೊಂದು ರುಚಿ ಇರುತ್ತದೆ. ಸಿಮ್ಲಾ ಮೆಣಸಿನಕಾಯಿ ಎಂದರೆ ದೊಣ್ಣೆ ಮೆಣಸಿನಕಾಯಿಯ ತಿನಿಸುಗಳಲ್ಲಿ ಒಂದು ವಿಧದ ವಿಶೇಷ ರುಚಿ ಇರುತ್ತದೆ. ಇದು ಹಸಿರು, ಹಳದಿ, ಕೆಂಪು ಬಣ್ಣಗಳಲ್ಲಿ ದೊರೆಯುತ್ತದೆ. ಇದರಲ್ಲಿ ಸಿಮ್ಲಾ ಎಣ್ಣೆಗಾಯಿ, ಸಿಮ್ಲಾ ಸಲಾಡ್, ಗ್ರೇವಿ, ಸಿಮ್ಲಾ ಬೋಂಡಾ… ಹೀಗೆ ಹಲವಾರು ರೀತಿಯ ರುಚಿಯಾದ ತಿನಿಸುಗಳನ್ನು ಮಾಡಬಹುದು.
ಇಲ್ಲಿ ದೊಣ್ಣೆಮೆಣಸಿನಕಾಯಿಯಿಂದ (ಕ್ಯಾಪ್ಸಿಕಂ) ಮಾಡುವ ವಿವಿಧ ಅಡಿಗೆಗಳನ್ನು ನೀಡಿದ್ದೇವೆ. ಇವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಸಿಮ್ಲಾ ಮೆಣಸಿನಕಾಯಿ ಎಣ್ಣೆಗಾಯಿ

ಬೇಕಾಗುವ ಪದಾರ್ಥಗಳು :
ದೊಣ್ಣೆ ಮೆಣಸಿನಕಾಯಿ ಚಿಕ್ಕದು – 8
ಕಾಯಿತುರಿ – 1/2 ಕಪ್
ಮೆಣಸಿನಕಾಯಿಪುಡಿ – 2 ಚಮಚ
ಹುರಿದ ಧನಿಯಪುಡಿ – 1 ಚಮಚ
ಹುರಿದ ಜೀರಿಗೆ ಪುಡಿ – 1/2 ಚಮಚ
ಹುರಿದ ಶೇಂಗಾ ಬೀಜದ ತರಿಯಾದ ಪುಡಿ – 4 ಚಮಚ
ಹುರಿದ ಎಳ್ಳಿನ ಪುಡಿ – 2 ಚಮಚ
ಮಸಾಲೆ ಪುಡಿ – 2 ಚಮಚ
ಸಣ್ಣದಾಗಿ ಕತ್ತರಿಸಿದ ಟೊಮೆಟೊ – 1 ಕಪ್
ಅರಿಶಿನ – ಸ್ವಲ್ಪ
ಸಕ್ಕರೆ – 1 ಚಮಚ
ಕರಿಬೇವು – 1 ಎಸಳು
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 6 ಚಮಚ
ಮಾಡುವ ವಿಧಾನ : ಮೊದಲು ದೊಣ್ಣೆ ಮೆಣಸಿನಕಾಯಿಯ ತೊಟ್ಟು ಮತ್ತು ಬೀಜವನ್ನು ತೆಗೆದು ತೊಳೆದಿಡಿ. ಒಂದು ತಟ್ಟೆಯಲ್ಲಿ ಸ್ವಲ್ಪ ತರಿಯಾಗಿ ಗ್ರೈಂಡ್ ಮಾಡಿದ ಕಾಯಿತುರಿ, ಮೆಣಸಿನಕಾಯಿಪುಡಿ, ಧನಿಯಪುಡಿ, ಜೀರಿಗೆ ಪುಡಿ, ಕಡಲೆಕಾಯಿ ಬೀಜದ ಪುಡಿ, ಎಳ್ಳುಪುಡಿ, ಮಸಾಲೆಪುಡಿ, ಅರಿಶಿನ, ಸಕ್ಕರೆ, ಉಪ್ಪು, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಂದು ಚಮಚ ಎಣ್ಣೆ, ಸ್ವಲ್ಪ ನೀರು ಹಾಕಿ ಚಟ್ನಿಯ ಹದಕ್ಕೆ ಕಲೆಸಿಕೊಳ್ಳಿ. ಇದನ್ನು ತೊಟ್ಟು ತೆಗೆದ ಮೆಣಸಿನಕಾಯಿಯೊಳಗೆ 2 ಚಮಚದಂತೆ ತುಂಬಿ. ಎಲ್ಲ ಮೆಣಸಿನಕಾಯಿಗೂ ಇದೇ ರೀತಿ ತುಂಬಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ಆರು ಚಮಚ ಎಣ್ಣೆ ಹಾಕಿ ಕಾಯಿಸಿ, ಕಾದ ಎಣ್ಣೆಗೆ ಕರಿಬೇವು ಹಾಕಿ, ಅನಂತರ ಮೆಣಸಿನಕಾಯಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹದವಾಗಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊ ಹಣ್ಣು ಮತ್ತು ಉಳಿದ ಮಸಾಲೆ ಮಿಶ್ರಣವನ್ನು ಹಾಕಿ ಬಾಡಿಸಿ. ಅನಂತರ ಒಂದು ಲೋಟ ನೀರು ಹಾಕಿ ಬೇಯಿಸಿ, ಇದು ಚಪಾತಿ, ಕುಲ್ಚಾ ಮತ್ತು ರೊಟ್ಟಿಯ ಜೊತೆ ಚೆನ್ನಾಗಿರುತ್ತದೆ.
ಕ್ರಿಸ್ಪಿ ಬ್ರೆಡ್ ರೋಲ್

ಬೇಕಾಗುವ ಪದಾರ್ಥಗಳು :
ಬ್ರೆಡ್ ಸ್ಲೈಸ್ – 6
ಆಲೂಗಡ್ಡೆ – 1
ದೊಣ್ಣೆ ಮೆಣಸಿನಕಾಯಿ – 1
ಬೇಯಿಸಿದ ಹೆಸರುಕಾಳು – 1/2 ಕಪ್
ಹಸಿಮೆಣಸಿನಕಾಯಿ ಪೇಸ್ಟ್ – 1/2 ಚಮಚ
ಶುಂಠಿ ಪೇಸ್ಟ್ – 1/2 ಚಮಚ
ಜೀರಿಗೆ – 1/2 ಚಮಚ
ಓಂಕಾಳು – 1/2 ಚಮಚ
ಕರಿಮೆಣಸಿನಪುಡಿ – 1/4 ಚಮಚ
ಗರಂ ಮಸಾಲ – 1 ಚಮಚ
ಬೆಲ್ಲ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಆಲೂಗಡ್ಡೆಯನ್ನು ತೊಳೆದು ಬೇಯಿಸಿ ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಶುಂಠಿ ಪೇಸ್ಟ್, ಹಸಿಮೆಣಸಿನಕಾಯಿ ಪೇಸ್ಟ್, ಓಂಕಾಳು ಹಾಕಿ ಹುರಿಯಿರಿ. ಅನಂತರ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, ಹೆಸರುಕಾಳು, ಗರಂಮಸಾಲ, ಕರಿಮೆಣಸಿನಪುಡಿ, ಆಲೂಗಡ್ಡೆ, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಮಿಶ್ರಮಾಡಿ ಬೇಯಿಸಿ. ಐದು ನಿಮಿಷದ ಅನಂತರ ಒಲೆಯಿಂದ ಕೆಳಗಿಳಿಸಿ. ಬ್ರೆಡ್ಡಿನ ಸುತ್ತಲೂ ಇರುವ ಗಟ್ಟಿ ಭಾಗವನ್ನು ಚಾಕುವಿನಿಂದ ಕತ್ತರಿಸಿ. ಮಧ್ಯದ ಭಾಗವನ್ನು ಲಟ್ಟಣಿಗೆಯಿಂದ ಲಟ್ಟಿಸಿ ಅದರ ಮಧ್ಯೆ ಆಲೂಗಡ್ಡೆ ಮಿಶ್ರಣವನ್ನು ಉದ್ದ ಗೋಲಾಕಾರವಾಗಿ ಉಂಡೆ ಮಾಡಿ ಇಟ್ಟು ಬ್ರೆಡ್ಡಿನ ತುದಿಗೆ ಸ್ವಲ್ಪ ನೀರು ಸವರಿ ಸುತ್ತಲೂ ಮುಚ್ಚಿ ರೋಲ್ ಮಾಡಿ. ಕಾಯಿಸಿದ ಎಣ್ಣೆಯಲ್ಲಿ ಕರಿದರೆ ಕ್ರಿಸ್ಪಿ ಬ್ರೆಡ್ ರೋಲ್ ಸಿದ್ಧ. ಇದನ್ನು ಟೊಮೆಟೊ ಸಾಸ್ ಜೊತೆ ಸವಿಯಲು ಕೊಡಿ.
ಸ್ಟಫ್ಡ್ ಕ್ಯಾಪ್ಸಿಕಂ

ಬೇಕಾಗುವ ಪದಾರ್ಥಗಳು :
ದೊಣ್ಣೆ ಮೆಣಸಿನಕಾಯಿ – 6
ಆಲೂಗಡ್ಡೆ – 1
ಬೇಯಿಸಿದ ಹಸಿಬಟಾಣಿ – 1/2 ಕಪ್
ತುರಿದ ಕ್ಯಾರೆಟ್ – 1/2 ಕಪ್
ಗರಂ ಮಸಾಲ – 1/2 ಚಮಚ
ಅಚ್ಚಮೆಣಸಿನಕಾಯಿ ಪುಡಿ – 1/2 ಚಮಚ
ಹಸಿಮೆಣಸಿನಕಾಯಿ – 2
ಜೀರಿಗೆ ಪುಡಿ – 1/4 ಚಮಚ
ಸಾಸಿವೆ – 1/2 ಚಮಚ
ಉಪ್ಪು – ರುಚಿಗೆ
ಎಣ್ಣೆ – 8 ಚಮಚ
ಮಾಡುವ ವಿಧಾನ : ಆಲೂಗಡ್ಡೆಯನ್ನು ತೊಳೆದು ಬೇಯಿಸಿ ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ಒಗ್ಗರಣೆಗೆ 1 ಚಮಚ ಎಣ್ಣೆ ಹಾಕಿ ಬಿಸಿಮಾಡಿ, ಕಾದ ಎಣ್ಣೆಗೆ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ. ತುರಿದ ಕ್ಯಾರೆಟ್, ಹಸಿ ಮೆಣಸಿನಕಾಯಿ, ಬಟಾಣಿ, ಆಲೂಗಡ್ಡೆ ಗರಂಮಸಾಲ, ಮೆಣಸಿನಕಾಯಿಪುಡಿ, ಉಪ್ಪು ಹಾಕಿ ಮಿಶ್ರ ಮಾಡಿ ಬಿಸಿಯಾಗಿ ಇಳಿಸಿ. ದೊಣ್ಣೆ ಮೆಣಸಿನಕಾಯಿಯ ತೊಟ್ಟು ತೆಗೆದು ಅದರೊಳಗೆ ರಂಧ್ರಮಾಡಿ ಅದನ್ನು ಎಣ್ಣೆಯಲ್ಲಿ ಹಾಕಿ ಐದು ನಿಮಿಷ ಎಲ್ಲ ಕಡೆ ಬಾಡಿಸಿ. ಅನಂತರ ಅದರೊಳಗೆ ಆಲೂಗಡ್ಡೆ ಮಿಶ್ರಣವನ್ನು ತುಂಬಿ ಮತ್ತೆ ಎಣ್ಣೆಯೊಳಗೆ ಜೋಡಿಸಿ ಬೇಯಿಸಿ ತೆಗೆಯಿರಿ. ಇದನ್ನು ಪುದೀನಾಚಟ್ನಿ ಅಥವಾ ಸಾಸ್ ಜೊತೆ ತಿನ್ನಲು ರುಚಿಯಾಗಿರುತ್ತದೆ.
ಸಿಮ್ಲಾ ಪಲಾವ್

ಬೇಕಾಗುವ ಪದಾರ್ಥಗಳು :
ಬಾಸುಮತಿ ಅಕ್ಕಿ – 1 ಕಪ್
ಸಿಮ್ಲಾ ಮೆಣಸಿನಕಾಯಿ – 2
ಕತ್ತರಿಸಿದ ಕ್ಯಾರೆಟ್ – 1 ಕಪ್
ಹಸಿ ಬಟಾಣಿ – 1 ಕಪ್
ಕತ್ತರಿಸಿದ ಆಲೂಗಡ್ಡೆ – 1/2 ಕಪ್
ಹಸಿಮೆಣಸಿನಕಾಯಿ – 5
ಚೆಕ್ಕೆ – 2 ಚೂರು
ಲವಂಗ – 5
ಏಲಕ್ಕಿ – 3
ಪಲಾವ್ ಎಲೆ – 2
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 5 ಚಮಚ
ಮಾಡುವ ವಿಧಾನ : ಅಕ್ಕಿಯನ್ನು ತೊಳೆದು ನೀರಿನಲ್ಲಿ ಹತ್ತು ನಿಮಿಷ ನೆನೆಸಿಡಿ. ಕುಕ್ಕರ್‌ನಲ್ಲಿ ಐದು ಚಮಚ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಮಸಾಲೆ ಪದಾರ್ಥಗಳನ್ನು ಹಾಕಿ ಹುರಿಯಿರಿ. ಅನಂತರ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ತರಕಾರಿಗಳನ್ನು ಹಾಕಿ ಬಾಡಿಸಿ. ಈಗ ತೊಳೆದ ಅಕ್ಕಿಯನ್ನು ಹಾಕಿ ಘಂ ಎಂದು ವಾಸನೆ ಬರುವವರೆಗೆ ಹುರಿದು, ಉಪ್ಪು, 2 ಲೋಟ ನೀರು ಹಾಕಿ ಕುದಿಸಿ, ಕುಕ್ಕರನ್ನು ಮುಚ್ಚಿ 2 ವಿಷಲ್ ಬರಿಸಿದರೆ ಬಿಸಿಯಾದ ಸಿಮ್ಲಾ ಪಲಾವ್ ಸವಿಯಲು ಸಿದ್ಧ. ಉಳಿದ ತರಕಾರಿ ಪಲಾವ್‌ಗಳಿಗಿಂತಲೂ ಸಿಮ್ಲಾಮೆಣಸಿನ ಹೋಳುಗಳು ಇರುವುದರಿಂದ ಇದರದೇ ರುಚಿ ಬೇರೆ ರೀತಿ ಇರುತ್ತದೆ. ಇದನ್ನು ಮೊಸರು ಬಜ್ಜಿಯೊಂದಿಗೆ ಸವಿಯಬಹುದು.
ದೊಣ್ಣೆ ಮೆಣಸಿನಕಾಯಿ ಮೊಸರು ಬಜ್ಜಿ

ಬೇಕಾಗುವ ಪದಾರ್ಥಗಳು :
ದೊಣ್ಣೆ ಮೆಣಸಿನಕಾಯಿ – 2
ಮೊಸರು – 2 ಕಪ್
ಹಸಿಮೆಣಸಿನಕಾಯಿ – 1
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಮೆಂತ್ಯ – ಸ್ವಲ್ಪ
ಇಂಗು – ಚಿಟಿಕೆ
ಕರಿಬೇವು – 1 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಸಕ್ಕರೆ – 1 ಚಮಚ
ಮಾಡುವ ವಿಧಾನ : ಮೊದಲು ದೊಣ್ಣೆ ಮೆಣಸಿನಕಾಯಿಗಳನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಗ್ಗರಣೆಗೆ 2 ಚಮಚ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಮೆಂತ್ಯ, ಹೆಚ್ಚಿದ ಹಸಿಮೆಣಸಿನಕಾಯಿ, ಇಂಗು ಹಾಕಿ ಬಾಡಿಸಿ. ಒಂದು ಬಟ್ಟಲಿಗೆ ಮೊಸರನ್ನು ಹಾಕಿ ಅದಕ್ಕೆ ಕತ್ತರಿಸಿದ ದೊಣ್ಣೆಮೆಣಸಿನಕಾಯಿ, ಉಪ್ಪು, ಸಕ್ಕರೆ, ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿದರೆ ದೊಣ್ಣೆ ಮೆಣಸಿನಕಾಯಿ ಮೊಸರು ಬಜ್ಜಿ ತಿನ್ನಲು ಸಿದ್ಧ.