ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅತಿಥಿಯಾದ ಮನೋವಿಜ್ಞಾನಿ ಕ್ರಿಶ್ಚಿಯನ್ ಹೌಸರ್ ನಡುವೆ ಸೆಪ್ಟೆಂಬರ್, 1973ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದದ ಮುಂದುವರಿದ ಭಾಗ.
ಶ್ರೀಲ ಪ್ರಭುಪಾದ : “ಹರೇ ಕೃಷ್ಣ ಜಪಿಸಿ” ಎಂದು ನಾನು ಸಲಹೆ ನೀಡುತ್ತಿರುವೆ. ನೀವು “ಹರೇ ಕೃಷ್ಣ” ಎಂದ ಕೂಡಲೇ ಉಪಶಮನ ಆರಂಭವಾಗುತ್ತದೆ. “ಇಲ್ಲ, ಇಲ್ಲ ಈ ಹರೇ ಕೃಷ್ಣ ಮಂತ್ರವನ್ನು ನನಗೆ ಜಪಿಸಲಾಗುವುದಿಲ್ಲ, ನನಗೆ ಅದರಲ್ಲಿ ನಂಬಿಕೆ ಇಲ್ಲ” ಎಂದು ನೀವು ಹೇಳಿದರೆ ಏನು ಮಾಡುವುದು? ಅದು ದೊಡ್ಡ ದುರದೃಷ್ಟವಾಗುತ್ತದೆ.
ಸುಮ್ಮನೆ ಇದನ್ನು ಪರಿಗಣಿಸಿ. ಹರೇ ಕೃಷ್ಣ ಎಂಬ ಎರಡು ಪದಗಳನ್ನು ಜಪಿಸುವಂತೆ ಯಾರಿಗೋ ಹೇಳಲಾಗುತ್ತದೆ. ಆದರೆ ಈ ಎರಡು ಪದಗಳನ್ನು ಜಪಿಸಿ ಪರಿಹಾರಪಡೆದುಕೊಳ್ಳಲು ಅವನು ಒಪ್ಪುವುದಿಲ್ಲ. ಬದಲಾಗಿ, ಅವನು ಹತ್ತು ಅಥವಾ ಹದಿನೈದು ಪದಗಳನ್ನು ಜಪಿಸುತ್ತಾನೆ : “ಇಲ್ಲ, ಇಲ್ಲ ಈ ಹರೇ ಕೃಷ್ಣ ಮಂತ್ರವನ್ನು ನನಗೆ ಜಪಿಸಲಾಗುವುದಿಲ್ಲ, ನನಗೆ ಅದರಲ್ಲಿ ನಂಬಿಕೆ ಇಲ್ಲ.” ಅವನು ಹರೇ ಕೃಷ್ಣ ಎಂದು ಜಪಿಸುವುದಿಲ್ಲ ಮತ್ತು ಪರಿಹಾರ ಪಡೆಯುವುದಿಲ್ಲ. ಆ ವ್ಯಕ್ತಿಗೆ ಅದು ದೊಡ್ಡ ದುರದೃಷ್ಟ.
ಡಾ. ಹೌಸರ್ : ಹೌದು. ಆದರೆ ಸುಮ್ಮನೆ ಜಪಿಸುವುದರ ಆಚೆಗೂ ಬೇರೆ ಏನೋ ಇದೆಯಲ್ಲವೆ? ನಾನು ಹೇಳುವುದು…
ಶ್ರೀಲ ಪ್ರಭುಪಾದ : ಅದು ಆರಂಭ. ಅದೊಂದು ಸಮುದ್ರದಂತೆ. ಆನಂದಾಂಬು : ಆನಂದ ಸಾಗರ. ಮೊಟ್ಟ ಮೊದಲು ತೀರಕ್ಕೆ ಬನ್ನಿ, ನೀರನ್ನು ಸ್ಪರ್ಶಿಸಿ. ಅದು ವಿಶಾಲವಾದ ಪೆಸಿಫಿಕ್ ಸಾಗರದಂತೆ. ಆದರೆ ಕಡಲ ತೀರಕ್ಕೆ ಬನ್ನಿ, ನೀರನ್ನು ಸ್ಪರ್ಶಿಸಿ. ಆಗ, ಕ್ರಮೇಣ ನಿಮಗೆ ಅರ್ಥವಾಗುತ್ತದೆ. ನೀವು ಪ್ರತ್ಯೇಕವಾಗಿ ನಿಂತು,
“ಇಲ್ಲ, ನಾನು ಅದನ್ನು ಸ್ಪರ್ಶಿಸುವುದಿಲ್ಲ” ಎಂದರೆ ಆಗ ನೀವು ಪೆಸಿಫಿಕ್ ಸಾಗರ ಏನೆಂದು ಹೇಗೆ ಅರ್ಥಮಾಡಿಕೊಳ್ಳುವಿರಿ?
ಡಾ. ಹೌಸರ್ : ಹೌದು, ಅದು ಅರ್ಥವಾಗುತ್ತದೆ.
ಶ್ರೀಲ ಪ್ರಭುಪಾದ : ಅಂಬು ಎಂದರೆ ಸಾಗರ. ಆನಂದ ಎಂದರೆ ಪರಮಾನಂದ. ಆದುದರಿಂದ ಆನಂದಾಂಬು ಎಂದರೆ “ಆನಂದ ಸಾಗರ.” ಮತ್ತು ಆನಂದಾಂಬು ವರ್ಧನಂ : ಈ ಆನಂದ ಸಾಗರವು ಅಸೀಮಿತವಾಗಿ ಹೆಚ್ಚುತ್ತಲೇ ಹೋಗುತ್ತದೆ.
ಹಾಗಾದರೆ, ಈ ಆನಂದ ಸಾಗರವು ಹೇಗೆ ಹೆಚ್ಚುತ್ತಲೇ ಹೋಗುತ್ತದೆ? ಚೇತೋದರ್ಪಣ ಮಾರ್ಜನಂ : ನೀವು ಭಗವಂತನ ಪವಿತ್ರ ನಾಮಗಳನ್ನು ಹೆಚ್ಚು ಜಪಿಸಿದಷ್ಟೂ ಹೆಚ್ಚು ನೀವು ನಿಮ್ಮ ಹೃದಯವನ್ನು ಶುದ್ಧಪಡಿಸಿಕೊಳ್ಳುವಿರಿ.
“ನಾನು ಬಿಳಿಯ”, “ನಾನು ಕರಿಯ”, “ನಾನು ಫ್ರಾನ್ಸ್‌ನವ”, “ನಾನು ಚೀನಿಯವ” ಎಂಬ ಅಶುದ್ಧ ವಿಚಾರ, ಅಶುಚಿಯಾದ ಭ್ರಮೆಗಳು ನಮ್ಮೆಲ್ಲರಲ್ಲಿಯೂ ಇವೆ. ಅವು ನಮ್ಮ ಹೃದಯವನ್ನು ಮುಚ್ಚಿವೆ. ಮೂಲತಃ ನಮ್ಮ ಭ್ರಮೆ ಏನೆಂದರೆ, “ನಾನು ಈ ದೇಹ.”
ಆದರೆ ಭಗವಂತನ ನಾಮಗಳ ಜಪದಿಂದ ನಾವು ನಮ್ಮ ಭ್ರಮೆಯನ್ನು ಶುದ್ಧಪಡಿಸಿಕೊಳ್ಳುತ್ತೇವೆ ಮತ್ತು ವಾಸ್ತವಕ್ಕೆ ಬರುತ್ತೇವೆ, “ನಾನು ಒಂದು ಆಧ್ಯಾತ್ಮಿಕ ಆತ್ಮ. ಪರಮ ಆತ್ಮನ ಅವಿಭಾಜ್ಯ ಅಂಗ. ಈಗ ನಾನು ಅವನಿಗೆ ಸೇವೆ ಸಲ್ಲಿಸುತ್ತೇನೆ.”
ಹೀಗಾಗಿ, ಈ ಲೋಕದಲ್ಲಿ ನಮ್ಮ ರೋಗಗ್ರಸ್ತ ಸ್ಥಿತಿಗೆ ನಮ್ಮ ಅಶುದ್ಧ ಹೃದಯವೇ ಕಾರಣ. ವಾಸ್ತವವಾಗಿ, ರೋಗ ಎಂದರೆ ಅಶುಚಿ ಅಲ್ಲವೆ?
ಡಾ. ಹೌಸರ್ : ಹಮ್.
ಶ್ರೀಲ ಪ್ರಭುಪಾದ : ಹೌದು. ಮೊದಲನೆಯದಾಗಿ, ನಮ್ಮ ಅಸ್ತಿತ್ವವಿರುವ ಈ ಭೌತಿಕ ಲೋಕದಲ್ಲಿ ನಮ್ಮ ಲೌಕಿಕ ರೋಗಕ್ಕೆ ನಮ್ಮ ಅಶುದ್ಧ ಹೃದಯವೇ ಕಾರಣ. ಆದುದರಿಂದ ಈ ರೋಗವನ್ನು ಗುಣಪಡಿಸಲು, ಚೇತೋದರ್ಪಣ ಮಾರ್ಜನಂ : ನಾವು ನಮ್ಮ ಹೃದಯವನ್ನು ಶುದ್ಧಮಾಡಿಕೊಳ್ಳಬೇಕು. ಇದೇ ವಿಧಾನ : ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಭಗವಂತನ ಪವಿತ್ರ ನಾಮಗಳು ನಮ್ಮ ಹೃದಯವನ್ನು ಶುದ್ಧಗೊಳಿಸಲಿ.
ಡಾ. ಹೌಸರ್ : ಪಶ್ಚಿಮ ಗೋಳದಲ್ಲಿ ಈ ಆಂದೋಲನ ಯಾವಾಗ ಶುರುವಾಯಿತು?
ಶ್ರೀಲ ಪ್ರಭುಪಾದ : ಈ ಪಾರಂಪಾರಿಕ ವೈದಿಕ ಸಂಸ್ಕೃತಿಯನ್ನು ಪಾಶ್ಚಿಮಾತ್ಯ ಲೋಕದಲ್ಲಿ ಪುನರ್ ಜಾಗೃತಿಗೊಳಿಸಬೇಕೆಂದು ನನ್ನ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರ ಅವರು ಆದೇಶಿಸಿದರು. ಇದು “ಆರಂಭ”ದ ಪ್ರಶ್ನೆಯಲ್ಲ. ಇದು ಜಗತ್ತಿನ ಪರಂಪರೆಯ, ಮೂಲ ಸಂಸ್ಕೃತಿ.
ಡಾ. ಹೌಸರ್ : ಕೆಲವರಿಗೆ ಇಂತಹ ವಿಷಯವನ್ನು ಅಕೃತವೆಂದು ಸ್ವೀಕರಿಸುವುದು ಕಷ್ಟ.
ಶ್ರೀಲ ಪ್ರಭುಪಾದ : ಏಕೆ? ಪ್ರತಿಯೊಂದು ಕ್ಷಣದಲ್ಲಿಯೂ ಪ್ರತಿಯೊಬ್ಬರೂ ಯಾವುದಾದರೂ ಒಂದಲ್ಲ ಒಂದನ್ನು ಪ್ರಮಾಣೀಕೃತವೆಂದು ಸ್ವೀಕರಿಸುತ್ತಿದ್ದಾರೆ. ಅದು ಯಾವುದೋ ವೈಜ್ಞಾನಿಕ ಸಿದ್ಧಾಂತವಿರಬಹುದು ಅಥವಾ ಸುದ್ದಿಯ ವರದಿ ಇರಬಹುದು. ಆದರೂ, ಸಾಮಾನ್ಯವಾಗಿ ನಾವು ಏನನ್ನು ಒಪ್ಪಿಕೊಳ್ಳುತ್ತಿದ್ದೆವೆಯೋ ಅದು ಕೆಲವು ವ್ಯಕ್ತಿಗಳ ಅಪರಿಪೂರ್ಣ ಪ್ರಜ್ಞೆ ಮತ್ತು ಅಪರಿಪೂರ್ಣ ಮನಸ್ಸಿನಿಂದ ತಯಾರಿಸಲ್ಪಟ್ಟಿದ್ದು. ಹೀಗಾಗಿ, ಅದು ಅಪರಿಪೂರ್ಣ.
ಡಾ. ಹೌಸರ್ : ಹೌದು.
ಶ್ರೀಲ ಪ್ರಭುಪಾದ : ಆದರೆ ನಾವು ಸರ್ವ ಪರಿಪೂರ್ಣ ದೇವೋತ್ತಮ ಪರಮ ಪುರುಷನಲ್ಲಿಗೆ ಹೋದರೆ ನಮಗೆ ಪರಿಪೂರ್ಣವಾದ, ನಿಜವಾಗಿಯೂ ಪ್ರಮಾಣೀಕೃತವಾದುದು ದೊರೆಯುತ್ತದೆ. ಈ ಸಾಂಪ್ರದಾಯಿಕ ವೈದಿಕ ಸಂಸ್ಕೃತಿಯನ್ನೇ ತೆಗೆದುಕೊಳ್ಳಿ. ಅದು ಭಗವಂತನ ಸಾಹಿತ್ಯಕ ಅವತಾರವಾದ ವ್ಯಾಸದೇವರ ವೈದಿಕ ಸಾಹಿತ್ಯದಿಂದ ಬಂದಿದೆ. ನೀವೇ ಪರೀಕ್ಷೆ ಮಾಡಿನೋಡಿ. ಉದಾಹರಣೆಗೆ, ಸಾವಿರಾರು ವರ್ಷಗಳ ಹಿಂದೆ ಭಾಗವತ ಪುರಾಣವು ಬುದ್ಧನ ಜನ್ಮ ಸ್ಥಳ, ಕುಟುಂಬ, ದಿನಾಂಕದ ಬಗೆಗೆ ಕರಾರುವಾಕ್ಕಾಗಿ ಭವಿಷ್ಯ ನುಡಿದಿತ್ತು. ಪರಿಪೂರ್ಣ ಪ್ರಮಾಣೀಕೃತ.
ಆದುದರಿಂದ ಭಗವಂತನ ನಾಮಗಳ ಈ ಜಪ, ನಾವು ಯಾವುದೋ ವಿಷಯವನ್ನು ಕಲ್ಪಿಸುತ್ತಿಲ್ಲ. ವೈದಿಕ ಸಾಹಿತ್ಯದಲ್ಲಿ ಭಗವಂತನು ಇದನ್ನು ಶಿಫಾರಸು ಮಾಡಿದ್ದಾನೆ. ಇದು
ಅಕೃತ. ಅದಕ್ಕೆ ಬದಲಿಗೆ ಯಾವುದೋ ವ್ಯಕ್ತಿಯ ಅಪರಿಪೂರ್ಣ ಪ್ರಜ್ಞೆ ಮತ್ತು ಮನಸ್ಸಿನಿಂದ ಉತ್ಪಾದಿಸಿದ್ದನ್ನು ಸ್ವೀಕರಿಸುವುದೇ ನಿಮಗೆ ಬೇಕಾಗಬಹುದು. ಆದರೆ ಅದು ಅಪರಿಪೂರ್ಣರಿಂದ ಆಗಿರುವುದರಿಂದ ಅದು ಅಪರಿಪೂರ್ಣವಾಗಿರಲೇಬೇಕು.
ಡಾ. ಹೌಸರ್ : ಹೌದು.
ಶ್ರೀಲ ಪ್ರಭುಪಾದ : ಆದರೂ, ಈ ಎಲ್ಲ ಅಪರಿಪೂರ್ಣತೆ ಇದ್ದರೂ ಕೂಡ ವ್ಯಕ್ತಿಯು ವಿಷಯವನ್ನು ಪರಿಪೂರ್ಣ ಎಂಬಂತೆ ಮುಂದಿಡುತ್ತಾನೆ. ಆದುದರಿಂದ ಅವನು ಮೋಸಮಾಡುತ್ತಿದ್ದಾನೆ.
ಅದು ನಡೆಯುತ್ತಲೇ ಇದೆ. ಇತ್ತೀಚೆಗೆ ನೊಬೆಲ್ ಬಹುಮಾನ ಪಡೆದ ದೊಡ್ಡ ಪ್ರಾಧ್ಯಾಪಕರೊಬ್ಬರು ರಾಸಾಯನಿಕ ವಿಕಸನದ ಮೇಲಿನ ತಮ್ಮ ಪುಸ್ತಕವನ್ನು ಪ್ರಚುರಪಡಿಸಲು ಲಾಸ್ ಏಂಜಲೀಸ್‌ಗೆ ಹೋದರು. ರಾಸಾಯನಿಕಗಳಿಂದ ಜೀವ ಆರಂಭವಾಗುತ್ತದೆ ಎಂದು ಅವರು ಉಪನ್ಯಾಸಗಳನ್ನು ನೀಡುವ ಉದ್ಧಟತನವನ್ನೂ ತೋರಿದರು.
ರಸಾಯನ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿರುವ ನನ್ನ ಶಿಷ್ಯರೊಬ್ಬರು ಈ ಪ್ರಾಧ್ಯಾಪಕರನ್ನು ಕೇಳಿದರು, “ನಾನು ರಾಸಾಯನಿಕಗಳನ್ನು ನೀಡಿದರೆ, ನಿಮಗೆ ಜೀವವನ್ನು ಉತ್ಪಾದಿಸುವುದು ಸಾಧ್ಯವೆ?” ಪ್ರಾಧ್ಯಾಪಕರು ಉತ್ತರಿಸಿದರು, “ಅದನ್ನು ನಾನು ಹೇಳಲಾರೆ.”
ರಾಸಾಯನಿಕಗಳಿಂದ ಜೀವದ ಆರಂಭ ಎಂದು ಅವರು ಪ್ರತಿಪಾದಿಸಿದ್ದನ್ನು ನೆನಪುಮಾಡಿಕೊಳ್ಳಿ. ಮತ್ತು ಅವರು ತಾಸುಗಟ್ಟಲೇ ಉಪನ್ಯಾಸಗಳನ್ನೂ ನೀಡಿದ್ದರು. ಆದರೂ ಅವರನ್ನು, “ವಾಸ್ತವವಾಗಿ ನಿಮ್ಮ ಬಳಿ ರಾಸಾಯನಿಕಗಳಿದ್ದರೆ ನಿಮಗೆ ಜೀವವನ್ನು ಉತ್ಪಾದಿಸುವುದು ಸಾಧ್ಯವೆ?” ಎಂದು ಕೇಳಿದಾಗ ಅವರ ಉತ್ತರ, “ಅದನ್ನು ನಾನು ಹೇಳಲಾರೆ.” ಸುಮ್ಮನೆ ನೋಡಿ. ಜೀವ ಉತ್ಪಾದನೆ ತಮ್ಮಿಂದ ಸಾಧ್ಯವೇ ಎಂಬ ಬಗೆಗೆ ಅವರು ದೃಢವಾಗಿಲ್ಲ. ಇದು ಮೋಸವಲ್ಲವೆ?
ಡಾ. ಹೌಸರ್ : ಹೌದು.
ಶ್ರೀಲ ಪ್ರಭುಪಾದ : ಆದುದರಿಂದ ನಾವು ಪರಿಹಾರಕ್ಕಾಗಿ ಠಕ್ಕರ ಬಳಿಗೆ ಹೋಗುವುದಿಲ್ಲ. ನಾವು ದೇವೋತ್ತಮನ ಬಳಿಗೆ ಹೋಗುತ್ತೇವೆ ಮತ್ತು ಅವನ ಪವಿತ್ರ ನಾಮಗಳನ್ನು ನಿರಂತರವಾಗಿ ಜಪಿಸುತ್ತೇವೆ.
(ಮುಂದುವರಿಯುವುದು)