ಚಾಟ್ಸ್
ಆಲೂ ಪನ್ನೀರ್ ಚಾಟ್

ಬೇಕಾಗುವ ಸಾಮಗ್ರಿಗಳು:
400 ಗ್ರಾಂ ಪನ್ನೀರು
400 ಗ್ರಾಂ ಬೇಯಿಸಿದ ಚಿಕ್ಕ ಆಲೂಗಡ್ಡೆ
450 ಗ್ರಾಂ ಬೇಯಿಸಿದ ಹಸಿ ಬಟಾಣಿ
1 ಹಸಿ ಶುಂಠಿ
5-6 ಚೆನ್ನಾಗಿ ಸಣ್ಣಗೆ ಚೂರು ಮಾಡಿದ ಹಸಿ ಮೆಣಸಿನಕಾಯಿ
2 ಚಮಚ ಚಾಟ್ ಮಸಾಲ ಪುಡಿ
1 ಹದಗಾತ್ರದ ನಿಂಬೆಹಣ್ಣಿನ ರಸ
5-6 ದೊಡ್ಡ ಚಮಚ ಖಾದ್ಯ ತೈಲ
ರುಚಿಗೆ ತಕ್ಕಷ್ಟು ಉಪ್ಪು
ಅಲಂಕರಿಸಲು ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಪನ್ನೀರ್ ಹಾಗೂ ಆಲೂಗಡ್ಡೆಯನ್ನು ಸ್ವಲ್ಪ ದೊಡ್ಡ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ, ಪನ್ನೀರು ಹಾಗೂ ಆಲೂಗಡ್ಡೆಯನ್ನು ಹಾಕಿ ತುಸು ಕಂದುಬಣ್ಣಕ್ಕೆ ತಿರುಗುವವರೆಗೂ ಹುರಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.
ಉಳಿದ ಎಣ್ಣೆಯನ್ನು ಬಾಣಲೆಯಲ್ಲಿ ಕಾಯಿಸಿ. ಹಸಿರುಬಟಾಣಿ ಮತ್ತು ಹಸಿ ಶುಂಠಿ ಚೂರುಗಳನ್ನು ಹಾಕಿ ಹುರಿಯಿರಿ. ಹುರಿದ ಬಟಾಣಿ ಮತ್ತು ಶುಂಠಿ ಚೂರಿಗೆ ಸ್ವಲ್ಪ ಉಪ್ಪು ಬೆರೆಸಿ, ½ ಬಟ್ಟಲು ನೀರು ಹಾಕಿ ಬೇಯಿಸಿ.
ಇದಕ್ಕೆ ಹುರಿದ ಆಲೂಗಡ್ಡೆ, ಪನ್ನೀರ್, ಹಸಿ ಮೆಣಸಿನಕಾಯಿ ಚೂರು, ಚಾಟ್ ಮಸಾಲ ಪುಡಿ, ನಿಂಬೆರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಎರಡು ನಿಮಿಷ ಹುರಿಯಿರಿ. ಬಿಸಿಯಿರುವಾಗಲೇ ಕೊತ್ತಂಬರಿ ಸೊಪ್ಪಿನ ಚೂರಿನೊಡನೆ ಅಲಂಕರಿಸಿ ನಂತರ ಸೇವಿಸಿ.
ದಹೀ ಬೇಲ್

“ಬೇಲ್ ಎಂದರೆ ಬೆರೆಸುವುದೆಂರ್ಥ. ದಹೀ ಬೇಲ್ ಎಂದರೆ ಹಲವಾರು ಬಗೆಯ ಸವಿತಿನಿಸುಗಳನ್ನು ಬೆರೆಸಿ ತಿನ್ನುವುದೆಂಬುದಾಗಿದೆ. ಪಾಪಡಿ (ಚಿಕ್ಕ ಪೂರಿ), ಮೊಸರು, ಚಟ್ನಿ-ಇತ್ಯಾದಿಗಳನ್ನು ಬೇರೆಸಿ ಸೇವಿಸುವುದಾಗಿದೆ.
ಬೇಕಾಗುವ ಸಾಮಗ್ರಿಗಳು:
15 ರಿಂದ 20 ಚೂರು ಮಾಡಿದ ಪಾಪಡಿಗಳು
ಬೇಕಾದಲ್ಲಿ ಚಿಕ್ಕ ಚಿಕ್ಕ ಚೂರಾಗಿ ಕತ್ತರಿಸಿದ ಒಂದು ಟೇಬಲ್ ಚಮಚ ಅನಾನಸ್ ಹಣ್ಣಿನ ತುಂಡುಗಳು
1 ಬೇಯಿಸಿ ಸಣ್ಣಗೆ ಹೆಚ್ಚಿದ ಆಲೂಗಡ್ಡೆ
150 ಗ್ರಾಂ ಗೋಧಿ ಹಿಟ್ಟು
50 ಗ್ರಾಂ ಕಡಲೆ ಹಿಟ್ಟು
1 ಟೇಬಲ್ ಚಮಚ ತುರಿದ ಮಾವಿನ ಕಾಯಿ
4 ಟೇಬಲ್ ಚಮಚ ಬೇಯಿಸಿದ ಕಾಬೂಲಿ ಕಡ್ಲೆಕಾಳು ಅಥವಾ ಹಸಿರು ಬಟಾಣಿ
2 ಅಥವಾ 3 ಟೇಬಲ್ ಚಮಚ ಮೀಥಿ ಸೂಂಥ್
1 ½ ಯಿಂದ 2 ಟೇಬಲ್ ಚಮಚ ಹಸಿರು ಚಟ್ನಿ
½ ಬಟ್ಟಲು ಗಟ್ಟಿ ಮೊಸರು
2 ಚಮಚ ಮೆಣಸಿನಕಾಯಿ ಪುಡಿ
2 ಚಮಚ ಚಾಟ್ ಮಸಾಲ ಪುಡಿ
ರುಚಿಗೆ ತಕ್ಕ ಉಪ್ಪು
6 ಟೇಬಲ್ ಚಮಚ ಖಾದ್ಯ ತೈಲ
ಮಾಡುವ ವಿಧಾನ:
ಪಾಪಡಿ ಮಾಡಿಕೊಳ್ಳಲು ಗೋಧಿಹಿಟ್ಟು ಮತ್ತು ಕಡಲೆಹಿಟ್ಟನ್ನು ಚೆನ್ನಾಗಿ ಜರಡಿ ಹಿಡಿದಿಟ್ಟುಕೊಳ್ಳಿ. ಒಂದು ಪಾತ್ರೆಗೆ ಎರಡೂ ಹಿಟ್ಟನ್ನೂ ಹಾಕಿ.
ರುಚಿಗೆ ತಕ್ಕ ಉಪ್ಪು ಬೆರೆಸಿ ಅದರ ಮೇಲೆ (ಪೂರಿ ಲಟ್ಟಿಸಲು ಮಾಡುವ ಹಿಟ್ಟಿನಂತೆ) ಸ್ವಲ್ಪ ಸ್ವಲ್ಪ ನೀರುಹಾಕಿ ಬೆರೆಸಿ ಹಿಟ್ಟು ಮೃದುವೂ ಇಲ್ಲದೇ ಗಟ್ಟಿಯೂ ಆಗದಂತೆ ಹದವಾಗಿ ನಾದಿ ತೆಗೆದಿಟ್ಟುಕೊಳ್ಳಿ. ಈ ಹಿಟ್ಟಿನ ಚಿಕ್ಕ ಚಿಕ್ಕ ಬಿಲ್ಲೆಗಳನ್ನು ಮಾಡಿ, ಲಟ್ಟಿಸಿಟ್ಟುಕೊಳ್ಳಿ. ಚಿಕ್ಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ತುಸು ಕಂದುಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ.
ಇದನ್ನು ಒಂದು ತಟ್ಟೆಗೆ ಹಾಕುವ ಮೊದಲು ತಟ್ಟೆಯ ಮೇಲೆ ಒಂದು ಪೇಪರ್ ಹಾಕಿ ಅದರ ಮೇಲೆ ಹರಡಿ. ಒಂದು ಪಾತ್ರೆಯಲ್ಲಿ 5 ನಿಮಿಷ ಬಿಟ್ಟು ಗರಿಗರಿಯಾದ ಪಾಪಡಿಗಳನ್ನು ಪುಡಿಮಾಡಿಕೊಳ್ಳಿ.
ಅನಾನಸ್ ಹಣ್ಣಿನ ಚೂರು, ಬೇಯಿಸಿದ ಆಲೂಗಡ್ಡೆ, ತುರಿದ ಮಾವಿನಕಾಯಿ, ಬೇಯಿಸಿದ ಕಾಬೂಲ್ ಕಡ್ಲೆಕಾಳು, ಮೀಥಿ ಸೂಂಥ್, ಹಸಿರು ಚಟ್ನಿ ಮತ್ತು ಮೊಸರನ್ನು ಅದೇ ಪಾತ್ರೆಗೆ ಹಾಕಿ ಚೆನ್ನಾಗಿ ಬೆರೆಸಿ. ಜೀರಿಗೆ ಪುಡಿ, ಮೆಣಸಿನಕಾಯಿ ಪುಡಿ, ರುಚಿಗೆ ತಕ್ಕ ಉಪ್ಪಿನ ಪುಡಿ ಚಾಟ್ ಮಸಾಲವನ್ನು ಇದರ ಮೇಲೆ ಉದುರಿಸಿ, ಚೆನ್ನಾಗಿ ಬೆರೆಸಿ. ನಂತರ ತಿನ್ನಿ.
ಮೊಳಕೆಕಾಳು ಮತ್ತು ಹಣ್ಣಿನ ಬೇಲ್

ಬೇಕಾಗುವ ಸಾಮಗ್ರಿಗಳು:
2 ಬಟ್ಟಲು ಗಟ್ಟಿ ಅವಲಕ್ಕಿ
½ ಬಟ್ಟಲು ಕರಿದ ಸೇವು
½ ಚಮಚ ಜೀರಿಗೆ
ಒಂದು ಚಿಟಿಕೆ ಇಂಗುಪುಡಿ
¼ ಚಮಚ ಅರಿಶಿನ ಪುಡಿ
¼ ಚಮಚ ಕಾಲಾ ನಮಕ್ (ಕಪ್ಪು ಉಪ್ಪು)
1 ½ ಟೇಬಲ್ ಚಮಚ ಎಣ್ಣೆ
¾ ಬಟ್ಟಲು ಮೊಳಕೆ ಕಟ್ಟಿದ ಹೆಸರುಕಾಳು
¾ ಬಟ್ಟಲು ಚೆನ್ನಾಗಿ ತುಂಡರಿಸಿದ ಟೊಮೊಟೊ
¾ ಬಟ್ಟಲು ಚಿಕ್ಕ ಚಿಕ್ಕದಾಗಿ ತುಂಡಿರಿಸಿದ ಸೇಬಿನಹಣ್ಣು
2 ಟೇಬಲ್ ಚೆನ್ನಾಗಿರುವ ದಾಳಿಂಬೆ ಬೀಜ
½ ಬಟ್ಟಲು ಬಿಡಿಸಿದ ಕತ್ತಳೆ ಹಣ್ಣಿನ ತುಂಡುಗಳು
4 ಟೇಬಲ್ ಚಮಚ ಚೆನ್ನಾಗಿ ತುಂಡರಿಸಿದ ಕೊತ್ತಂಬರಿ ಸೊಪ್ಪು
4 ಟೇಬಲ್ ಚಮಚ ಲಿಂಬೆಹಣ್ಣಿನ ರಸ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಜೀರಿಗೆ ಒಗ್ಗರಣೆ ಮಾಡಿ, ಅದಕ್ಕೆ ಇಂಗಿನಪುಡಿ, ಅರಿಶಿನ ಪುಡಿ ಮತ್ತು ಅವಲಕ್ಕಿ ಹಾಕಿ ಹುರಿದು ಚೆನ್ನಾಗಿ ಬೆರೆಸಿ. ಕಾಲಾ ನಮಕ್ ಮತ್ತು ಸೇವನ್ನು ಬೆರೆಸಿ ಪ್ರತ್ಯೇಕವಾಗಿ ಗಟ್ಟಿ ಮುಚ್ಚಳದ ಡಬ್ಬಿಯಲ್ಲಿ ತೆಗೆದಿಡಿ, ಬೇಕಾದಾಗ ಅಗತ್ಯಕ್ಕೆ ತಕ್ಕಂತೆ ಇದನ್ನು ಬಳಸಬಹುದು. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ, ಅಗತ್ಯಕ್ಕೆ ತಕ್ಕಂತೆ ಸೇವನ್ನು ಬೆರಸಿಕೊಂಡು ತಿನ್ನಿ.
ಸೇವ್ ಮಾಡಲು 1 ½ ಕಪ್ ಕಡಲೇ ಹಿಟ್ಟನ್ನು ಜರಡಿ ಹಿಡಿದು ರುಚಿಗೆ ತಕ್ಕ ಉಪ್ಪು, ಅಗತ್ಯಕ್ಕೆ ತಕ್ಕ ನೀರು ಬೆರೆಸಿ ನಾದಿ ಚಕ್ಕುಲಿ ಹಿಟ್ಟಿನಂತೆ ಕಲಸಿಟ್ಟುಕೊಳ್ಳಿ. ಅದಕ್ಕೆ ಸಣ್ಣ ರಂಧ್ರದ ಸೇವು ಬಿಡುವ ಬಿಲ್ಲೆ ಹಾಕಿ, ನಂತರ ಚಕ್ಕುಲಿ ಬಿಡುವ ಒರಳಿನಲ್ಲಿ ಹಾಕಿ ¼ ಕೆ.ಜಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಉಡುಪಿ ಚುರುಮುರಿ

ಬೇಕಾಗುವ ಸಾಮಗ್ರಿಗಳು:
ಸಣ್ಣಮಂಡಕ್ಕಿ (ಸಣ್ಣ ಕಡ್ಲೆಪುರಿ)
1 ಚಿಕ್ಕ ಕ್ಯಾರೆಟ್ ತುರಿ
1 ಸಣ್ಣಗೆ ಹೆಚ್ಚಿದ ಟೊಮೊಟೊ
ರುಚಿಗೆ ತಕ್ಕ ಉಪ್ಪು
ಕೆಂಪು ಮೆಣಸಿನಕಾಯಿ ಪುಡಿ
½ ಹೋಳು ತೆಂಗಿನತುರಿ
2 ಟೇಬಲ್ ಚಮಚ ಕೊಬ್ಬರಿ ಎಣ್ಣೆ
ಮಾಡುವ ವಿಧಾನ:
ಮಂಡಕ್ಕಿಯನ್ನು ಆರಿಸಿ, ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಮೆಣಸಿನಕಾಯಿ ಪುಡಿ ಬೆರೆಸಿ ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ಉಳಿದೆಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಬೆರೆಸಿ. ಅಗತ್ಯಕ್ಕೆ ತಕ್ಕಂತೆ ಮಂಡಕ್ಕಿ ಮಿಶ್ರಣವನ್ನು ಈ ತೆಂಗಿನತುರಿ ಮಿಶ್ರಣದೊಂದಿಗೆ ಬೆರೆಸಿದರೆ ಗರಿಗರಿಯಾಗಿ ತಿನ್ನಬಹುದು.






Leave a Reply