ರಾಸಾಯನಿಕ ವಿಕಸನ?

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ಅತಿಥಿ ಮತ್ತು ಶಿಷ್ಯ
ಡಾ. ಟಿ.ಡಿ. ಸಿಂಗ್‌ ಅವರ ನಡುವೆ, 1973 ರಲ್ಲಿ, ಲಾಸ್‌ ಏಂಜಲೀಸ್‌ನ ವೆನಿಸ್‌ ಬೀಚ್‌ನಲ್ಲಿ ಬೆಳಗಿನ ವಾಯು ಸಂಚಾರದ ಸಂದರ್ಭದಲ್ಲಿ ನಡೆದ ಸಂವಾದ.

ಡಾ. ಸಿಂಗ್‌: ಒಂದು ಘಟ್ಟದಲ್ಲಿ ಭೂಮಿಯು ಅನಿಲದಂತಹ ವಸ್ತುವಿನಲ್ಲಿ ತೇಲಾಡುತ್ತಿರುವ ಧೂಳಿನ ಪದಾರ್ಥಗಳಿಂದ ರೂಪುಗೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅನಂತರದಲ್ಲಿ ಈ ಕಲಾಯ್ಡ್‌ (ಕಲಿಲ) ಸ್ಥಿತಿಯಲ್ಲಿ ಹಂಚಿಹೋಗಿರುವ ಘನ ಪದಾರ್ಥ ಉಳ್ಳ ದ್ರಾವಣ ಘನೀಕರಣ ಅಥವಾ ಮಂದಗೊಂಡು ಭೂಮಿ ರಚನೆಯಾಯಿತು.

ಶ್ರೀಲ ಪ್ರಭುಪಾದ: ಅದಿರಬಹುದು, ಆದರೆ ಅನಿಲ ಎಲ್ಲಿಂದ ಬಂದಿತು ?

ಡಾ. ಸಿಂಗ್‌: ಅವರೆನ್ನುತ್ತಾರೆ, ಅದು ಅಸ್ತಿತ್ವದಲ್ಲಿತ್ತು, ಅಷ್ಟೆ !

ಶ್ರೀಲ ಪ್ರಭುಪಾದ: ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ (7.4),

ಭೂಮಿರಾಪೋಽನಲೋ ವಾಯುಃ ಖಂ ಮನೋ ಬುದ್ಧಿರೇವ ಚ

ಅಹಙ್ಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ

ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ – ಈ ಎಂಟು ನನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗಳಾಗಿವೆ.

ವಾಯು (ಅನಿಲ) ತನ್ನಿಂದ ಬಂದಿತು ಎಂದು ಇಲ್ಲಿ  ಕೃಷ್ಣ ವಿವರಿಸುತ್ತಾನೆ. ಮತ್ತು ವಾಯುವಿಗಿಂತ ಸೂಕ್ಷ್ಮ ಎಂದರೆ ಖಮ್‌ (ಆಕಾಶ), ಆಕಾಶಕ್ಕಿಂತ ಸೂಕ್ಷ್ಮವಾದುದು ಮನಸ್ಸು, ಮನಸ್ಸಿಗಿಂತ ಸೂಕ್ಷ್ಮವಾದುದು ಬುದ್ಧಿ, ಬುದ್ಧಿಗಿಂತ ಸೂಕ್ಷ್ಮವಾದುದು ಹುಸಿ ಅಹಂ, ಹಾಗೂ ಹುಸಿ ಅಹಂಗಿಂತ ಸೂಕ್ಷ್ಮವಾದುದು ಆತ್ಮ. ಆದರೆ ವಿಜ್ಞಾನಿಗಳಿಗೆ ಇದು ಗೊತ್ತಿಲ್ಲ. ಅವರು ಸ್ಥೂಲ ವಿಷಯವನ್ನಷ್ಟೇ ಅರ್ಥ ಮಾಡಿಕೊಳ್ಳುತ್ತಾರೆ. ಅವರು ಅನಿಲ, ವಾಯುವಿನ ಬಗೆಗೆ ಪ್ರಸ್ತಾವಿಸುತ್ತಾರೆ. ಆದರೆ ಆ ವಾಯು ಎಲ್ಲಿಂದ ಬಂದಿತು?

ಡಾ. ಸಿಂಗ್‌: ಅದಕ್ಕೆ ಅವರು ಉತ್ತರಿಸುವುದಿಲ್ಲ.

ಶ್ರೀಲ ಪ್ರಭುಪಾದ: ಆದರೆ ನಾವು ಉತ್ತರಿಸಬಲ್ಲೆವು. ವಾಯುವು ಖಮ್‌ ಅಥವಾ ಆಕಾಶದಿಂದ, ಆಕಾಶ  ಮನಸ್ಸಿನಿಂದ, ಮನಸ್ಸು ಬುದ್ಧಿಯಿಂದ, ಬುದ್ಧಿ ಹುಸಿ ಅಹಂನಿಂದ ಮತ್ತು ಹುಸಿ ಅಹಂ ಆತ್ಮದಿಂದ ಬರುತ್ತದೆ ಎಂದು ನಮಗೆ ಭಗವದ್ಗೀತೆಯಿಂದ ತಿಳಿದು ಬಂದಿದೆ.

ಡಾ. ಸಿಂಗ್‌: ಡಾರ್ವಿನ್‌ನ ಜೀವಭೌತ ವಿಜ್ಞಾನ ರೀತಿಯ ವಿಕಸನ ಆಗುವ ಮುನ್ನ, `ಪೂರ್ವಜೀವ ರಾಸಾಯನಿಕ’ ಅಥವಾ ರಾಸಾಯನಿಕ ವಿಕಸನ ಎಂದು ಕರೆಯುವ ವಿಕಸನ ಇದ್ದಿರಬೇಕೆಂದು ವಿಜ್ಞಾನಿಗಳು ವಾದಿಸುತ್ತಾರೆ.

ಶ್ರೀಲ ಪ್ರಭುಪಾದ: ಹೌದು. `ರಾಸಾಯನಿಕ ವಿಕಸನ’ ಎಂದರೆ ರಾಸಾಯನಿಕಗಳಿಗೆ ಮೂಲವೆಂಬುದಿದೆ, ಮತ್ತು ಆ ಮೂಲವು ಚೇತನ ಅಥವಾ ಜೀವ, ಬದುಕು ಎಂದು ಅರ್ಥ. ನಿಂಬೆಹಣ್ಣು ಸಿಟ್ರಿಕ್‌ ಆಮ್ಲವನ್ನು ಉತ್ಪಾದಿಸುತ್ತದೆ. ಮೂತ್ರ, ರಕ್ತ, ಬೆವರು ಮತ್ತು ಸ್ರವಿಸುವ ಇತರೆ ದ್ರವಗಳಿಂದ ನಮ್ಮ ದೇಹವು ಅನೇಕ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಇದು ಏನನ್ನು ಸಾಬೀತುಪಡಿಸುತ್ತದೆ ಎಂದರೆ, ಜೀವವು ರಾಸಾಯನಿಕಗಳನ್ನು ಉತ್ಪಾದಿಸುತ್ತದೆ, ರಾಸಾಯನಿಕಗಳು ಜೀವವನ್ನು ಅಲ್ಲ. 

ಡಾ. ಸಿಂಗ್‌: ಒಮ್ಮೆ, ಬದುಕಿನ ಬೀಜವು ಕೋಶದಲ್ಲಿ ಕಂಡಕೂಡಲೇ, ಜೀವವು ಸ್ವಯಂ ಅಭಿವೃದ್ಧಿ ಹೊಂದಿ ಕಾರ್ಯಶೀಲವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಶ್ರೀಲ ಪ್ರಭುಪಾದ: ಸರಿ, ಆದರೆ ಬೀಜ ಯಾರು ನೀಡುತ್ತಾರೆ? ಭಗವದ್ಗೀತೆಯಲ್ಲಿ ಕೃಷ್ಣ ಇದಕ್ಕೆ ಉತ್ತರಿಸಿದ್ದಾನೆ (7.10).  ಬೀಜ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್‌ `ಪೃಥೆಯ ಪುತ್ರನೇ, ಎಲ್ಲ ಅಸ್ತಿತ್ವಗಳಿಗೆ ನಾನೇ ಮೂಲ ಬೀಜವೆಂದು ತಿಳಿದುಕೋ.’ ಅನಂತರ (14.4) ಕೃಷ್ಣ ಹೇಳುತ್ತಾನೆ,

ಸರ್ವ ಯೋನಿಷು ಕೌನ್ತೇಯ ಮೂರ್ತಯಃ ಸಮ್ಭವನ್ತಿ ಯಾಃ

ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ

ಕುಂತಿಯ  ಮಗನಾದ  ಅರ್ಜುನನೆ,  ಜೀವಂತ  ಪ್ರಾಣಿಗಳ  ಎಲ್ಲ  ವರ್ಗಗಳು ಇರುವುದು ಸಾಧ್ಯವಾಗುವುದು, ಐಹಿಕ ಪ್ರಕೃತಿಯಲ್ಲಿ ಹುಟ್ಟುವುದರಿಂದ; ನಾನೇ ಬೀಜವನ್ನು ನೀಡುವ ತಂದೆ; ಇದನ್ನು ತಿಳಿಯಬೇಕು.

ಡಾ. ವುಲ್‌-ರೋಟ್‌ಕೇ: ಆದರೆ, ವಿನಯದಿಂದ, ಶ್ರೀಲ ಪ್ರಭುಪಾದರೇ, ಜೀವಂತ ಅವಯವ ಅಥವಾ ಜೀವ ಕೋಶವನ್ನೇ ಕೃತಕವಾಗಿ ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾದರೆ? ನೀವೇನು ಹೇಳುವಿರಿ?

ಶ್ರೀಲ ಪ್ರಭುಪಾದ: ಇದರಲ್ಲಿ ಅವರ ದೊಡ್ಡಸ್ತಿಕೆ ಏನಿದೆ? ಅವರು ಈಗಾಗಲೇ ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿ ಇರುವುದನ್ನೇ ನಕಲು ಮಾಡುತ್ತಿದ್ದಾರಷ್ಟೆ, ಅಥವಾ ಅನುಕರಣೆ ಮಾಡುತ್ತಿದ್ದಾರೆ. ಜನರಿಗೆ ನಕಲೆಂದರೆ ಪ್ರೀತಿ ಹೆಚ್ಚು. ನೈಟ್‌ ಕ್ಲಬ್‌ನಲ್ಲಿ ವ್ಯಕ್ತಿಯೊಬ್ಬ ನಾಯಿಯಂತೆ ಅನುಕರಣೆ ಮಾಡಿದರೆ ಜನರು ಹಣ ಕೊಟ್ಟು ಹೋಗಿ ನೋಡುತ್ತಾರೆ. ಆದರೆ, ನಿಜವಾದ ನಾಯಿಯೊಂದು ಬೊಗಳುತ್ತಿದ್ದಾಗ ಅವರು ಗಮನ ಕೊಡುವುದೇ ಇಲ್ಲ.

ಡಾ. ಸಿಂಗ್‌: ಶ್ರೀಲ ಪ್ರಭುಪಾದ, ರಾಸಾಯನಿಕ ವಿಕಸನದ ವಿಚಾರವು ರಷ್ಯದ ಜೀವ ವಿಜ್ಞಾನಿಯಿಂದ ಬಂದದ್ದು, 1920ರಲ್ಲಿ. ಜೀವರಾಸಾಯನಿಕ ವಿಕಸನಕ್ಕೆ ಮುನ್ನ , ಭೂಮಿಯ ವಾತಾವರಣವು ಇಳಿಮುಖದ ಸ್ಥಿತಿಯಲ್ಲಿತ್ತು ಎಂದು ಆ ವಿಜ್ಞಾನಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ. ಅಂದರೆ, ವಾತಾವರಣವು ಹೆಚ್ಚಾಗಿ ಜಲಜನಕದಿಂದ ಕೂಡಿತ್ತು, ಆಮ್ಲಜನಕ ಪ್ರಮಾಣ ಕಡಮೆ ಇತ್ತು. ಅನಂತರದಲ್ಲಿ, ಈ ಜಲಜನಕ ಅಣುಗಳು ವಿವಿಧ ರಾಸಾಯನಿಕಗಳಾಗಲು ಸೂರ್ಯ ಕಿರಣಗಳು  ಕಾರಣವಾದವು.

ಶ್ರೀಲ ಪ್ರಭುಪಾದ: ಅದೊಂದು ಬದಿಯ ಅಧ್ಯಯನ. ಮೊದಲು ಹೇಳಿ, ಜಲಜನಕ ಎಲ್ಲಿಂದ ಬಂತು? ವಿಜ್ಞಾನಿಗಳು ಸುಮ್ಮನೆ ವಿಧಾನದ ಮಧ್ಯಭಾಗವನ್ನು ಅಧ್ಯಯನ ಮಾಡುತ್ತಾರೆ; ಅವರು ಮೂಲದ ಅಧ್ಯಯನ ಮಾಡುವುದಿಲ್ಲ. ನಮಗೆ ಆರಂಭದ ಬಗೆಗೆ ತಿಳಿದಿರಬೇಕು. ಅಲ್ಲೊಂದು ವಿಮಾನವಿದೆ (ಹಾರುತ್ತಿದ್ದ ವಿಮಾನ ತೋರಿಸಿದರು). ಆ ಯಂತ್ರದ ಮೂಲವು ಸಮುದ್ರವೆಂದು ನೀವು ಹೇಳುತ್ತೀರಾ? ಸಾಗರದಲ್ಲಿ ದಿಢೀರನೆ ಬೆಳಕು ಕಂಡಿತು, ಆ ರೀತಿ ವಿಮಾನ ಸೃಷ್ಟಿಯಾಯಿತು ಎಂದು ಒಬ್ಬ ಮೂರ್ಖ ಹೇಳಬಹುದು. ಆದರೆ ಅದು ವೈಜ್ಞಾನಿಕ ವಿವರವೇ? ಈ ವಿಜ್ಞಾನಿಗಳ ವಿವರಣೆ ಆ ರೀತಿಯದು. ಅವರು ಹೇಳುತ್ತಾರೆ. `ಇದು ಅಸ್ತಿತ್ವದಲ್ಲಿತ್ತು, ಮತ್ತು ದಿಢೀರನೆ, ಅಕಸ್ಮಾತ್‌, ಅದು ಸಂಭವಿಸಿತು.’ ಇದು ವಿಜ್ಞಾನವಲ್ಲ. ವಿಜ್ಞಾನವೆಂದರೆ ಮೂಲ ಕಾರಣವನ್ನು ವಿವರಿಸುವುದೇ ಆಗಿದೆ.

ಬಹುಶಃ ವಿಜ್ಞಾನಿಗಳು ಪ್ರಕೃತಿಯ ನಕಲನ್ನು ಸೃಷ್ಟಿಸಬಹುದು. ಆದರೆ ನಾವು ಅವರಿಗೆ ಯಾಕೆ ಅದರ ಕೀರ್ತಿ, ಲಾಭ ನೀಡಬೇಕು? ನಾವು ಆ ಯಶಸ್ಸಿನ ಕೀರ್ತಿಯನ್ನು ಮೂಲ ಸೃಷ್ಟಿಕರ್ತ, ಭಗವಂತನಿಗೆ ಕೊಡಬೇಕು. ಅದು ನಮ್ಮ ತತ್ತ್ವ.

ಡಾ. ಸಿಂಗ್‌: ವಿಜ್ಞಾನಿಯು ಯಾವುದಾದರೂ ನೈಸರ್ಗಿಕ ನಿಯಮ ಕಂಡುಹಿಡಿದರೆ, ಸಾಮಾನ್ಯವಾಗಿ ಅವನು ಅದಕ್ಕೆ ತನ್ನ ಹೆಸರು ಇಡುತ್ತಾನೆ.

ಶ್ರೀಲ ಪ್ರಭುಪಾದ: ಹೌದು, ಅದೇ. ಆ ನಿಯಮ ಅದಾಗಲೇ ಪ್ರಕೃತಿಯಲ್ಲಿ ಇರುತ್ತದೆ. ಆದರೆ ಮೂರ್ಖ ಅದರ ಲಾಭ ಪಡೆಯಲು ಹಾತೊರೆಯುತ್ತಾನೆ.

ಡಾ. ಸಿಂಗ್‌: ವಾಸ್ತವವಾಗಿ ಅವರು ಪ್ರಕೃತಿ ನಿಯಮದ ವಿರುದ್ಧ ಹೋರಾಟ ನಡೆಸುತ್ತಿರುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅವರು ಹೋರಾಟದಲ್ಲಿ ಒಂದು ರೀತಿಯ ಆನಂದವನ್ನು ಪಡೆದುಕೊಳ್ಳುತ್ತಾರೆ.

ಶ್ರೀಲ ಪ್ರಭುಪಾದ: ಆ ಸಂತೋಷ ಬಾಲಿಶ. ಮಗುವೊಂದು ಸಮುದ್ರ ತೀರದಲ್ಲಿ ಮರಳಿನಲ್ಲಿ ಕಷ್ಟಪಟ್ಟು ಕೋಟೆ ಕಟ್ಟುತ್ತದೆ ಎಂದು ಭಾವಿಸಿಕೊಳ್ಳಿ. ಅದರಿಂದ ಅದು ಖುಷಿ ಪಡಬಹುದು, ಆದರೆ ಅದು ಮಕ್ಕಳ ಆನಂದ. ಅದು ವಯಸ್ಕ ಮನುಷ್ಯನ ಸಂತೋಷವಲ್ಲ. ಲೌಕಿಕ ಮಾನವರು ಹುಸಿ ಸಂತೋಷದ ಮಾನದಂಡ ಒಂದನ್ನು ಸೃಷ್ಟಿಸಿದ್ದಾರೆ. ಸುಖಕರವಾದ ನಾಗರಿಕತೆಯನ್ನು ಕಾಪಾಡಿಕೊಂಡು ಬರಲು ಅವರು ಭರ್ಜರಿ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ. ಆದರೆ ಅವೆಲ್ಲ ಹುಸಿ. ಏಕೆಂದರೆ, ಶಾಶ್ವತವಾಗಿ ಸುಖ ಪಡುವಂತಹ ಪರಿಸ್ಥಿತಿಯನ್ನು ಅವರು ಸೃಷ್ಟಿಸಲಾರರು. ಯಾವುದೇ ಗಳಿಗೆಯಲ್ಲಿ ಯಾರನ್ನಾದರೂ ಸಾವಿನಿಂದ ಒದ್ದು ಹೊರಹಾಕಬಹುದು. ಆಗ ಅವನ ಎಲ್ಲ ಸುಖ ಸಂತೋಷಕ್ಕೆ ಇತಿಶ್ರೀಯೇ.

ಡಾ. ಸಿಂಗ್‌: ಆದುದರಿಂದಲೇ ಅವರು ಹೇಳುತ್ತಾರೆ – ದೇವರು ನಮಗೆ ಎಲ್ಲವನ್ನೂ ನೀಡಿಲ್ಲ – ಏಕೆಂದರೆ ನಾವು ಇಲ್ಲಿ ಸದಾ ಬದುಕುವುದು ಸಾಧ್ಯವಿಲ್ಲ.

ಶ್ರೀಲ ಪ್ರಭುಪಾದ: ಆದರೆ ದೇವರು ಅವರಿಗೆ ಶಾಂತಿಯುತವಾಗಿ ಬದುಕಲು ಅಗತ್ಯವಾದ ಎಲ್ಲವನ್ನೂ ಮತ್ತು ಅವನನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದುದೆಲ್ಲವನ್ನೂ ನೀಡಿದ್ದಾನೆ. ಆದುದರಿಂದ ಅವರು ಯಾಕೆ ಭಗವಂತನ ಕುರಿತು ಕೇಳುವುದಿಲ್ಲ? ಬದಲಿಗೆ. ದೇವರನ್ನು ಮರೆಯುವಂತಹುದನ್ನೇ ಮಾಡುತ್ತಾರೆ.

ಈ ಲೇಖನ ಶೇರ್ ಮಾಡಿ