ಚಿತ್ರಕೂಟ-ರಾಮಚಂದ್ರ ಅರಣ್ಯಧಾಮ

ಶ್ರೀರಾಮಚಂದ್ರನು ರಾಜ್ಯವನ್ನು ತೊರೆದು ಹೊರನಡೆದಿದ್ದ. ಆದರೂ ಅವನು ಈ ಪವಿತ್ರ ಸ್ಥಳದಲ್ಲಿ ಸುಖದಿಂದ ಜೀವಿಸಿದ.

ಶ್ರೀರಾಮಚಂದ್ರನು ತನ್ನ ಮಡದಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನೊಡನೆ ಚಿತ್ರಕೂಟ ವನದಲ್ಲಿ ಹನ್ನೆರಡು ವರ್ಷಕಾಲ ವಾಸ ಮಾಡಿದ. ಈ ಮೂವರೂ ಚಿತ್ರಕೂಟಕ್ಕೆ ಹೇಗೆ ಬಂದರೆಂಬ ಕಥೆಯನ್ನು ರಾಮಾಯಣದಲ್ಲಿ ವಿಸ್ತಾರವಾಗಿ ವರ್ಣಿಸಲಾಗಿದೆ.

ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ರಾಜ್ಯ ಬಿಟ್ಟು ಹೊರಗಿರಬೇಕಾಯಿತು. ಅವನು ಸೀತಾ ಲಕ್ಷ್ಮಣರೊಂದಿಗೆ ವನವನ್ನು ಪ್ರವೇಶಿಸಿದಾಗ ತಾವೆಲ್ಲಾ ಎಲ್ಲಿ ವಾಸಮಾಡಬೇಕೆಂದು ಭರದ್ವಾಜ ಮುನಿಗಳನ್ನು ಕೇಳಿದನು. ತನ್ನ ಆಶ್ರಮದಿಂದ ಸುಮಾರು ಹತ್ತು ಮೈಲಿ ದೂರದಲ್ಲಿದ್ದ ಚಿತ್ರಕೂಟಕ್ಕೆ ಹೋಗಿ ಅಲ್ಲಿ ವಾಸ ಮಾಡಬೇಕೆಂದು ಮುನಿ ಸಲಹೆ ಮಾಡಿದ.

ಚಿತ್ರಕೂಟದ ಋಷಿಗಳು ಶ್ರೀರಾಮಚಂದ್ರನು ತಮ್ಮ ಸ್ಥಳಕ್ಕೆ ಬಂದಿರಬೇಕೆಂದು ಪ್ರಾರ್ಥಿಸುತ್ತಿದ್ದರು – “ಈ ಜಗತ್ತು ದುಷ್ಟತನದಿಂದ ತುಂಬಿಹೋಗಿದೆ. ರಾಕ್ಷಸರ ಕಾಟ ತಾಳಲಿಕ್ಕಾಗುತ್ತಿಲ್ಲ. ಶ್ರೀರಾಮಚಂದ್ರನು ಅಯೋಧ್ಯೆಯಲ್ಲಿಯೇ ಇದ್ದುಬಿಟ್ಟರೆ ರಾಕ್ಷಸ ಸಂಹಾರ ಮಾಡುವ ಅವನ ಪ್ರತಿಜ್ಞೆಯ ಮಾತು ಏನಾಗಬೇಕು?” ಎಂದು ಋಷಿಗಳು ತಮ್ಮ ಮನಸ್ಸಿನಲ್ಲಿ ಆಲೋಚಿಸುತ್ತಿದ್ದರು.

ರಾಮನು ಚಿತ್ರಕೂಟಕ್ಕೆ ಬಂದ ಕಾಲದಲ್ಲಿ ರಾಕ್ಷಸರು ವನದಲ್ಲಿದ್ದ ಋಷಿಗಳ ಮೇಲೆ ದಾಳಿ ನಡೆಸುತ್ತಾ ಆ ಸ್ಥಳದ ಶಾಂತಿಯನ್ನು ಕೆಡಿಸುತ್ತಿದ್ದರು. ರಾಮನು ಚಿತ್ರಕೂಟದಲ್ಲಿದ್ದಾಗ ಅಲ್ಲಿನ ರಾಕ್ಷರಸಲ್ಲಿ ಬಹುಮಂದಿಯನ್ನು ಕೊಂದುಹಾಕಿದ.

ರಾಮನು ರಾಜ್ಯದ ಹೊರಹೊರಟಾಗ ಇತ್ತ ಅವನ ತಮ್ಮ ಭರತನು ಸ್ವಲ್ಪಕಾಲ ಅಯೋಧ್ಯೆಯಿಂದ ಹೊರಗಿರಬೇಕಾಯಿತು. ಭರತನು ಅಯೋಧ್ಯೆಗೆ ಹಿಂತಿರುಗಿದಾಗ ತಾನು ರಾಮನ ಸ್ಥಾನದಲ್ಲಿ ರಾಜನಾಗಬೇಕಾಗಿದ್ದುದು ಅವನಿಗೆ ಗೊತ್ತಾಯಿತು. ಈ ಸಂಗತಿಯಿಂದ ಬಹುವಾಗಿ ವ್ಯಥೆಪಟ್ಟ ಭರತನು ಪುರಜನರನ್ನು ಹಿಂದಿಟ್ಟುಕೊಂಡು ಚಿತ್ರಕೂಟಕ್ಕೆ ಹೋದ.

ಶ್ರೀರಾಮಚಂದ್ರನು ಪುನಃ ಅಯೋಧ್ಯೆಗೆ ಹಿಂತಿರುಗಿ ಬಂದು ರಾಜನಾಗಬೇಕೆಂದು ಕೇಳುವುದು ಭರತನ ಉದ್ದೇಶವಾಗಿತ್ತು. ರಾಮ-ಭರತನು ಸಂಧಿಸಿದ ಸ್ಥಳ “ಮಿಲಪ್‌” ಎಂಬ ಹೆಸರು ಪಡೆದು ಇಂದಿಗೂ ಜನರಿಗೆ ಆ ಸೋದರರ ಭೇಟಿ ನೆನಪು ತರುತ್ತದೆ.

ರಾಮನು ರಾಜ್ಯ ತೊರೆಯುವಂತೆ ಮಾಡಿದ್ದಕ್ಕಾಗಿ ಭರತನು ತುಂಬ ದುಃಖಪಟ್ಟನಾದರೂ ರಾಮನು ಶಾಂತಮನಸ್ಕನಾಗಿಯೇ ಇದ್ದ. ಭರತನ ಜೊತೆ ಬಂದಿದ್ದ ಪುರಜನರೂ ಅವನ ಮಾತಿಗೆ ತಮ್ಮ ದನಿ ಸೇರಿಸಿದರು. ಆದರೆ ರಾಮನು ಅಯೋಧ್ಯೆಗೆ ಹಿಂದಿರುಗಲು ಪುನಃ ಪುನಃ ನಿರಾಕರಿಸಿದ. “ಉಂಟೆ? ಹಾಗಾಗದು. ನಾನು ನನ್ನ ತಂದೆಗೆ ಮಾತು ಕೊಟ್ಟಿದ್ದೇನೆ. ಅದು ಮುಖ್ಯ” ಎಂದುಬಿಟ್ಟ ಶ್ರೀರಾಮಚಂದ್ರ.

ಕೊನೆಗೆ ರಾಮನು ಈ ವಿಚಾರದಲ್ಲಿ ನಿರ್ಧಾರಕ್ಕೆ ಬರುವುದನ್ನು ತನ್ನ ಮಾವ ಜನಕ ಮಹಾರಾಜನಿಗೆ ಬಿಟ್ಟ. “ಜನಕ ಮಹಾರಾಜನು ಅನುಭವಿ, ಧರ್ಮಿಷ್ಟ ಹಾಗೂ ರಾಜ್ಯ ವಿಷಯಗಳಲ್ಲಿ ನುರಿತವ. ನಾನು ಚಿತ್ರಕೂಟದಲ್ಲಿ ನಿಲ್ಲಬೇಕೋ ಅಥವಾ ರಾಜ್ಯಭಾರ ಹೊರಲು ಅಯೋ‍ಧ್ಯೆಗೆ ಹಿಂದಿರುಗಬೇಕೋ ಎಂಬುದನ್ನು ಅವನೇ ತೀರ್ಮಾನಿಸಲಿ” ಎಂದು ಆಲೋಚಿಸಿದ.

ರಾಮನ ಮನಸ್ಸಿನಲ್ಲಿದ್ದುದನ್ನು ಊಹಿಸಿದ ಜನಕ ಮಹಾರಾಜನು ರಾಮನು ಚಿತ್ರಕೂಟದಲ್ಲೇ ಇರಲೆಂದು ಹೇಳಿದ.

ತನ್ನ ವನವಾಸ ಕಾಲದ ಹದಿನಾಲ್ಕು ವರ್ಷಗಳಲ್ಲಿ ಹನ್ನೆರಡನ್ನು ರಾಮನು ಚಿತ್ರಕೂಟದಲ್ಲಿ ಕಳೆದ. ಬಳಿಕ ತನ್ನದೇ ಉದ್ದೇಶ ಸಾಧನೆಗಾಗಿ ದಂಡಕಾರಣ್ಯಕ್ಕೆ ತರಳಿದ.

ಋಷಿಮುನಿಗಳಿಗೆ ಹೇಳಿ ಮಾಡಿಸಿದ ಸ್ಥಳ.

ಚಿತ್ರಕೂಟ ಎಂದರೆ “ರಮ್ಯವಾದ ಆಶ್ರಮ” ಮತ್ತು ಅದು ಬಹುಕಾಲದಿಂದ ತಪಸ್ವಿಗಳ ತಾಣವಾಗಿದೆ. ಅರಣ್ಯದ ಬೆಟ್ಟಗುಡ್ಡಗಳಲ್ಲಿ ಹಾಗೂ ಮರಗಿಡಗಳ ನಡುವೆ ಅನೇಕ ಗುಹೆಗಳಿದ್ದು ಋಷಿಮುನಿಗಳು ಆ‍ಧ್ಯಾತ್ಮಿಕ ಜೀವನ ನಡೆಸಲು ಪ್ರಶಸ್ತವಾಗಿವೆ. ಅಲ್ಲಿನ ಗಾಳಿ ಶುದ್ಧ ಹಾಗೂ ನಿರ್ಮಲ.

ಆಗಾಗ ಬೀಸುವ ತಂಗಾಳಿ ಹಿತರಕವಾಗಿರುತ್ತದೆ. ನಾವು ಅಲ್ಲಿಗೆ ಹೋದದ್ದು ಅಕ್ಟೋಬರ್‌ ತಿಂಗಳ ಮೊದಲ ಭಾಗದಲ್ಲಿ. ಬೆಳಗು ಹಾಗೂ ಸಂಜೆಗಳು ತುಸು ಚುರುಕಾಗಿಯೂ ತಣ್ಣಗೂ ಇರುತ್ತಿದ್ದವು. ದಿನದ ಮ‍ಧ್ಯಕಾಲ ಸ್ವಲ್ಪ ಶಾಖದಿಂದಲೇ ಕೂಡಿರುತ್ತಿದ್ದರೂ, ತಡೆದುಕೊಳ್ಳವ ಹಾಗಿರುತ್ತಿತ್ತು.

ಚಿತ್ರಕೂಟ ಅರಣ್ಯದ ಸುತ್ತ ಅನೇಕ ಬೆಟ್ಟದ ಸಾಲುಗಳಿವೆ. ಅರಣ್ಯದ ತುಂಬ ಹಾಡುವ ಹಕ್ಕಿಗಳ ಕಲರವ. ಹಿಂಡು ಹಿಂಡು ಮಂಗಗಳು ಬೇರೆ. ‍ಶ್ರೀರಾಮಚಂದ್ರನನ್ನು ವನವಾಸಕ್ಕೆ ಅಟ್ಟಲಾಯಿತಾದರೂ ಅವನಿಗೂ ಸೀತಾದೇವಿಗೂ ಚಿತ್ರಕೂಟ ಅಪ್ಯಾಯಮಾನಕರವಾಗಿತ್ತು.

ಈ ಹೊತ್ತಿಗೂ ಚಿತ್ರಕೂಟವು ಶಾಂತ ಬದುಕಿಗೆ ಪ್ರಶಸ್ತವಾದ ಸ್ಥಳ. ಯಾವುದೋ ಭಾರಿ ನಗರದಿಂದ ಅದು ದೂರದಲ್ಲಿದೆ. ಉತ್ತರಪ್ರದೇಶ ಬಯಲು ಸೀಮೆಯ ಮಧ್ಯೆಭಾರತದ ಗಿರಿವನ ಹಾಗೂ ಪರ್ವಗಳಿಗೆ ಎಡೆಮಾಡಿಕೊಡುವ ತಾಣದಲ್ಲಿ ಚಿತ್ರಕೂಟವಿದೆ. ಇಂದಿನ ಚಿತ್ರಕೂಟ ಪಟ್ಟಣವು ಎರಡು ಭಾಗಗಳಲ್ಲಿದ್ದು ಒಂದು ಭಾಗ ಉತ್ತರಪ್ರದೇಶದಲ್ಲೂ ಇನ್ನೊಂದು ಮಧ್ಯಪ್ರದೇಶದಲ್ಲೂ ಸೇರಿಕೊಂಡಿದೆ.

ಈ ಊರಿನ ನಿವಾಸಿಗಳು ಸರಳ ಸಾತ್ವಿಕ ಜೀವನ ನಡೆಸುತ್ತಾರೆ. ಯಾತ್ರಾರ್ಥಿಗಳಾಗಿ ಬರುವ ಜನರಿಗೆಂದು ಮಾಡಲಾಗಿರುವ ಕೊಠಡಿಗಳು ತುಂಬ ಸರಳವಾಗಿವೆ. ಆಹಾರವೂ ಅಷ್ಟೇ. ಚಿತ್ರಕೂಟವು ದೊಡ್ಡ ದೊಡ್ಡ ನಗರಗಳಿಂದ ದೂರದಲ್ಲಿರುವ ಕಾರಣ ಆ ಊರಿನ ಸುತ್ತಮುತ್ತ ಬೆಳೆಯಲಾಗುವ ಹಣ್ಣು ತರಕಾರಿಗಳೇ ಅಲ್ಲಿಗೆ ಬರುವವರಿಗೆ ಸಿಗುವುದು.

ಚಿತ್ರಕೂಟದಲ್ಲಿ ಅನೇಕ ದೇವಸ್ಥಾನಗಳಿವೆ. ಇವುಗಳಲ್ಲಿ ಬಹುಪಾಲಿನವು ರಾಮಘಟ್ಟದ (ರಾಮಘಾಟ್‌) ಬಳಿ ಇವೆ. ರಾಮನು ಮಂದಾಕಿನಿ ಗಂಗಾ ತೀರದಲ್ಲಿ ಹಾಗೂ ಕಾಮದ ನಾಥಜೀ ಬೆಟ್ಟದ ತಪ್ಪಲಿನ ಸರೋವರಗಳಲ್ಲಿ ಸ್ನಾನಮಾಡುತ್ತಿದ್ದನಾಗಿ ಅದು ರಾಮಘಟ್ಟ. (ಕಾಮದ ನಾಥಜೀ ಬೆಟ್ಟವು ಅಪೇಕ್ಷಿಸಿದ್ದನ್ನು ಈಡೇರಿಸುವ ಗಿರಿ).

ಘಟ್ಟದ ಅಸುಪಾಸಿನ ದೇವಸ್ಥಾನಗಳಲ್ಲಿ ಬಹುಪಾಲಿನವು ಸೀತಾರಾಮರವು. ಕೆಲವು ಕೃಷ್ಣ ದೇಗುಲಗಳು. ಒಂದು ಜಗನ್ನಾಥ ಬಲರಾಮ ಸುಭದ್ರಾ ದೇವಸ್ಥಾನವಿದೆ. ಹಲವು ಶಿವದೇವಾಲಯಗಳೂ ಉಂಟು. ಸುಮಾರು ಒಂದು ನೂರು ವರ್ಷಗಳ ಹಿಂದೆ ಚಿತ್ರಕೂಟದಲ್ಲಿ ಹಲವಾರು ಕಟ್ಟಡಗಳಿದ್ದ ಹಾಗೆ ತೋರುತ್ತದೆ. ಏಕೆಂದರೆ ಅಲ್ಲಿನ ಬಹುಸಂಖ್ಯೆಯ ದೇವ‍ಸ್ಥಾನಗಳು ನಿರ್ಮಿತವಾದದ್ದು ಆ ಕಾಲದಲ್ಲಿ. ಅನೇಕ ಮಹಾರಾಜರು ಇಲ್ಲಿ ದೇವಾಲಯಗಳನ್ನು ಕಟ್ಟಿಸಿದರು.

ಚಿತ್ರಕೂಟದ ದೇವಾಲಯಗಳಲ್ಲಿ ಹೆಚ್ಚಿನವುಗಳನ್ನು ಅಲ್ಲಿನ ಸಾಧು ದಂಪತಿಗಳು ನೋಡಿಕೊಳ್ಳುತ್ತಾರೆ. ದೇವತಾ ವಿಗ್ರಹಗಳಿಗೆ ಮಾಡಲಾಗಿರುವ ಏರ್ಪಾಟು ಸೊಸಗಾಗಿದೆ. ಹಾಗೂ ದೇವಮಂದಿರಗಳನ್ನು ಶುಚಿಯಾಗಿಯೂ ಒಪ್ಪವಾಗಿಯೂ ಇರಿಸಿರುತ್ತಾರೆ. ಬಹುಸಂಖ್ಯೆಯ ದೇವಸ್ಥಾನಗಳಲ್ಲಿ ಅನೇಕ ಶಾಲಿಗ್ರಾಮ ಶಿಲೆಗಳಿವೆ. ಆ ಶಿಲೆಗಳನ್ನು ಬಹು ಭಕ್ತಿಯಿಂದ, ಪ್ರತಿದಿನ ಹೊಸ ತಿಲಕವಿಟ್ಟು ಪೂಜಿಸಲಾಗುತ್ತದೆ.

ಜಾನಕೀ ಕುಂಡದ ಬಳಿಯೂ ದೇವಸ್ಥಾನಗಳಿವೆ. ಇದು ಜಾನಕಿಯು-ಸೀತೆ-ಸ್ನಾನ ಮಾಡುತ್ತಿದ್ದ ಸ್ಥಳ. ಇಲ್ಲಿ ಎರಡು ಜಾನಕೀ ಕುಂಡಗಳಿವೆ. ಒಂದು ಗುಪ್ತ ಗೋದಾವರಿ ಎಂಬಲ್ಲಿದೆ. ಇನ್ನೊಂದು ರಾಮಘಟ್ಟದಿಂದ ಮೂರು ಕಿಲೋಮೀಟರ್‌ ದೂರದಲ್ಲಿದೆ.

ಚಿತ್ರಕೂಟದಲ್ಲಿ ದೊಡ್ಡ ಸಂಖ್ಯೆಯ ಆಶ್ರಮಗಳಿವೆ. ಆದರೆ ಅವುಗಳ ಸಂಖ್ಯೆ ದೇವಾಲಯಗಳ ಸಂಖ್ಯೆಯಷ್ಟಿಲ್ಲ. ಎರಡು ಆ‍ಶ್ರಮಗಳಲ್ಲಿ ರಾಮನಾಮ ಸಂಕೀರ್ತನೆಯು ಹಗಲೂ ರಾತ್ರಿ ನಡೆಯುತ್ತದೆ. ಒಂದು ಆಶ್ರಮದಲ್ಲಿ ಈ ಸಂಕೀರ್ತನೆ ಇಪ್ಪತ್ತೈದು ವರ್ಷಗಳಿಗೂ ಮೇಲ್ಪಟ್ಟು ನಡೆಯುತ್ತಿದ್ದರೆ ಇನ್ನೊಂದು ಆಶ್ರಮದಲ್ಲಿ ನಲವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ.

ಜಾನಕೀಕುಂಡದಲ್ಲಿ ಇರುವ ಒಂದು ಆಶ್ರಮದಲ್ಲಿ ಸುಮಾರು ಹತ್ತು ಜನ ಸಾಧುಗಳು ವಾಸಿಸುತ್ತಿದ್ದಾರೆ. ಅಲ್ಲಿಗೆ ಬರುವ ಯಾತ್ರಿಕರಿಗೆ ಅವರು ದಿನಕ್ಕೆರಡು ಸಲ ಭೋಜನ ಸೌಕರ್ಯ ಏರ್ಪಡಿಸುತ್ತಾರೆ.

ನಾವು ಹೋದ ದಿನ ಅಲ್ಲಿನ ಸಾಧುಗಳು ಹೊರಗಿನಿಂದ ಬಂದಿದ್ದ ಇಪ್ಪತ್ತೈದು ಮಂದಿ ಸಾಧುಗಳಿಗೂ, ಇತರೇ ಸುಮಾರು ನಲವತ್ತು ಯಾತ್ರಿಕರಿಗೂ ಊಟ ಹಾಕಿದರು. ಪ್ರಸಾದ ಸೇವನೆಯ ಹೊತ್ತಿನಲ್ಲಿ ಯಾತ್ರಿಕರು ಶ್ರೀರಾಮನ ಲೀಲಾಪ್ರಸಂಗಗಳನ್ನು ಆಲಿಸುತ್ತಾರೆ. ರಾಮಕಥೆ ಓದುವ ಕೆಲಸ ದಿನದ ಇಪ್ಪತ್ನಾಲ್ಕು ಗಂಟೆಯೂ ನಡೆಯುತ್ತದೆ.

ಚಿತ್ರಕೂಟ ಧಾಮ ಎಂದು ಹೆಸರಾದ ಸ್ಥಳದಲ್ಲಿ ನಾವೊಬ್ಬ ಶಾಲಾ ಮಾಸ್ತರರನ್ನು ಭೇಟಿ ಮಾಡಿದೆವು. ಆ ‍ಸ್ಥಳದ ಆ‍ಧ್ಯಾತ್ಮಿಕ ಗುಣಗಳನ್ನು ಕುರಿತು ಶಾಲಾಮಾಸ್ತರು ಹುಮ್ಮಸಿನಿಂದ ಮಾತನಾಡಿದರು. ಅನೇಕ ಇತರರಂತೆ ಆ ಮಾಸ್ತರು ಕೂಡ ನಮ್ಮೊಡನೆ ಮಾತನಾಡಲು ನಿಂತರು.

“ಪರಿಶುದ್ಧರಾದವರು ಈ ಹೊತ್ತಿಗೂ ಚಿತ್ರಕೂಟದಲ್ಲಿ ರಾಮನನ್ನು ಕಾಣಬಹುದು. ರಾಮನು ನಡೆದು ಹೋಗುತ್ತಿರುವುದು, ರಾಮನು ಸ್ನಾನ ಮಾಡುತ್ತಿರುವುದು… ನದಿಯ ಪಾತ್ರದಲ್ಲಿ ರಾಮನು ಬಗ್ಗಿ ನೀರು ಕುಡಿಯುತ್ತಿರುವುದು ಹೀಗೆ… ಪರಿಶುದ್ಧರಾದವರು ಈಗಲೂ ಚಿತ್ರಕೂಟದಲ್ಲಿ ರಾಮನನ್ನು ಕಾಣಬಹುದು” ಎಂದು ಶಾಲಾ ಮಾಸ್ತರು ಅಭಿಮಾನದಿಂದ ನುಡಿದರು.

ರಾಮನು ವರ್ಣಿಸಿರುವ ಚಿತ್ರಕೂಟ

ಚಿತ್ರಕೂಟದಲ್ಲಿ ಸ್ವಲ್ಪ ಕಾಲವಿದ್ದು ಸುಖಿಸಿದ್ದು ಪ್ರಭು ಶ್ರೀರಾಮಚಂದ್ರನು ಒಂದು ದಿನ ಸೀತಾದೇವಿಗೆ ಆ ಸ್ಥಳದ ಸೌಂದರ್ಯವನ್ನು ವರ್ಣಿಸಿದ.

“ಓ ಸುದೈವಿ ರಾಜಕುಮಾರಿ, ಮನಸೂರೆಗೊಳ್ಳುವ ಈ ಪರ್ವತವನ್ನು ಕಂಡಾಗ ನನಗೆ ರಾಜ್ಯ ಕಳೆದುಕೊಂಡದ್ದೂ, ನನ್ನ ಸ್ನೇಹಿತರು ಬಳಿಯಿಲ್ಲದ್ದೂ ದುಃಖವನ್ನುಂಟು ಮಾಡುವುದಿಲ್ಲ. ಹೇ ಸುದೈವಿ, ಪಕ್ಷಿಸಂಕುಲ ಹಿಂಡು ಹಿಂಡಾಗಿ ಬಂದು ನೆರೆಯುವ, ಖನಿಜ ಸಂಪತ್ತು ಹೇರಳವಾಗಿರುವ, ಕಿರೀಟಗಳಂತಿರುವ ಶಿಖರಗಳು ಆಕಾಶವನ್ನು ಚುಂಬಿಸಲು ಹೊರಟಂತಿವೆಯೋ ಎಂಬಂತಿರುವ  ಆ ಪರ್ವತವನ್ನು ನೋಡು.

ಪರ್ವತ ಶೃಂಗಗಳಲ್ಲಿ ಕೆಲವು ಬೆಳ್ಳಿಯ ಹೊಳಪನ್ನು ಪಡೆದಿರುವುದನ್ನು ಕೆಲವು ಹಳದಿ ಬಣ್ಣದವು, ಕೆಲವು ಮುತ್ತು ಹವಳಗಳಂತೆ ಬೆಳಗುತ್ತಿವೆ. ಕೆಲವಂತೂ ಹೂವುಗಳನ್ನೂ ಹೋಲುತ್ತಿವೆ. ಮತ್ತೆ ಕೆಲವಂತೂ ಸ್ಫಟಿಕವನ್ನು, ಕೇತಕೀ ವೃಕ್ಷಗಳನ್ನು ನಾಚಿಸುವಂತಿವೆ. ಕೆಲವು ಶೃಂಗಗಳು ಪಾದರಸದಂತೆ ಪ್ರಕಾಶಿಸುತ್ತಿವೆ.

ಅಂಥಲ್ಲಿ ಯಥೇಷ್ಟ ಪ್ರಮಾಣದ ಲೋಹಗಳಿವೆ. ಪರ್ವತ ಸಾಲಿನ ಇಂದ್ರ ಎನ್ನಿಸಿಕೊಳ್ಳುವ ಆ ಗಿರಿಯ ಸಾಲು ಜಿಂಕೆಗಳು ಹುಲಿ-ಚಿರತೆಗಳು ಹಾಗೂ ಕರಡಿಗಳಿಂದ ಗಿಡಿದುಹೋಗಿದೆ. ಪಕ್ಷಿಗಳ ಹಿಂಡು ಆ ಗಿರಿಸಾಲಿನಲ್ಲಿ ಗದ್ದಲ ಎಬ್ಬಿಸಿದೆ. ವಿವಿಧ ಜಾತಿಯ ಮಾವು, ನೇರಳೆ ಹಾಗೂ ಆಸನ ವೃಕ್ಷಗಳ ಗುಂಪು ಗುಂಪೇ ಹೂತಳೆದು, ಫಲಭರಿತವಾಗಿ ಸ್ವರ್ಗೀಯ ನೆರಳನ್ನು ದಯಪಾಲಿಸುತ್ತಿದ್ದು ಈ ಇಡೀ ಗಿರಿಯ ಸಾಲು ಒಂದು ಮನೋಹರ ವಿಹಾರತಾಣವಾಗಿದೆ.

ಅಗೋ ನೋಡು ಬೆಟ್ಟದ ಕಿಬ್ಬಿಗಳಿಂದ ನೀರಿನ ಝರಿಗಳು ಎಲ್ಲೆಡೆಯಿಂದಲೂ ಜೊಂಪೆ ಚೊಂಪೆಯಾಗಿ ಹರಿಯುತ್ತಿವೆ. ಇದರಿಂದಾಗಿ ಇಡೀ ದೃಶ್ಯವು ಆನೆಯೊಂದು ತನ್ನ ಹಣೆಯಿಂದ ಲಸಿಕೆಯನ್ನು ಸುರಿಸುತ್ತಿದೆಯೋ ಎನ್ನುವ ಹಾಗೆ ಕಾಣುತ್ತದೆ. ಅನೇಕ ಬಗೆಯ ಪುಷ್ಪಗಳ ಸೌರಭವನ್ನು ಹರಡುತ್ತಿರುವ ಈ ವಿಶಾಲವಾದ ಬಯಲುಗಳಿಂದ ಯಾರ ಮನಸ್ಸು ತಾನೆ ಆನಂದಪುಳಕಿತವಾಗದು? ಇದು ಇಂದ್ರಿಯಗಳಿಗೆ ಸುಖವಾದ ಅನುಭವ.

ಹೇ ಸಾಟಿಯಿಲ್ಲದ ರಾಣಿ, ನಾನು ಈ ಸ್ಥಳದಲ್ಲಿ ನಿನ್ನ ಹಾಗೂ ಲಕ್ಷ್ಮಣನ ಜೊತೆ ಎಷ್ಟು ಶರತ್ಕಾಲಗಳನ್ನು ಕಳೆದರೂ ದುಃಖ ನನ್ನ ಬಳಿ ಸುಳಿಯುವುದಿಲ್ಲ. ಫಲಪುಷ್ಪಭರಿತವಾದ ಈ ಪರ್ವತಕೂಟವು, ಪಕ್ಷಿಗಳು ಹಿಂಡು ಹಿಂಡಾಗಿ ಬಂದು ವಿಹರಿಸುವ ಈ ತಾಣವು ಮನಸೂರೆಗೈಯುವ ಶಿಖರಗಳುಳ್ಳ ಈ ಗಿರಿಸಾಲು ನನ್ನ ಮನಸ್ಸನ್ನು ಸೊರೆಗೊಂಡಿವೆ, ಹೇ ನನ್ನ ಪ್ರೇಮಪಾತ್ರಳೆ.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi