ದೇವರನ್ನು ತಿಳಿಯಬೇಕೆಂಬ ಪ್ರಜ್ಞೆ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, 1969, ಹ್ಯಾಂಬರ್ಗ್‌ನಲ್ಲಿ ನೀಡಿದ ಉಪನ್ಯಾಸ

ಇಂದ್ರಿಯಗಳು, ಭಕ್ತಿಸೇವೆ ಮತ್ತು ದೈವ ಸಾಕ್ಷಾತ್ಕಾರದ
ನಡುವೆ ಒಂದು ಅವಿಭಾಜ್ಯ ಸಂಬಂಧವಿದೆ.

        ವಿಷ್ಣುಶಕ್ತಿ ಪರಾ ಪ್ರೋಕ್ತಾ ಕ್ಷೇತ್ರಜ್ಞಾಖ್ಯಾ ತಥಾ ಪರಾ

        ಅವಿದ್ಯಾ ಕರ್ಮ ಸಂಙ್ಞಾಯಾ ತೃತೀಯ ಶಕ್ತಿರ್‌ ಇಷ್ಯತೇ

“ಪ್ರಭು ವಿಷ್ಣುವಿನ ಶಕ್ತಿಯನ್ನು ಈ ಮೂರು ವರ್ಗಗಳಲ್ಲಿ ಸಂಗ್ರಹಿಸಿ ಹೇಳಲಾಗಿದೆ – ಅವು ಯಾವುವೆಂದರೆ ಆಧ್ಯಾತ್ಮಿಕ ಶಕ್ತಿ, ಜೀವಿಗಳು ಮತ್ತು ಅಜ್ಞಾನ. ಆಧ್ಯಾತ್ಮಿಕ ಶಕ್ತಿಯು ಜ್ಞಾನದಿಂದ ತುಂಬಿದೆ. ಜೀವಿಗಳು ಆಧ್ಯಾತ್ಮಿಕ ಶಕ್ತಿಗೆ ಸೇರಿದ್ದವಾಗಿದ್ದರೂ ಗೊಂದಲಕ್ಕೆ ಒಳಪಟ್ಟಿವೆ. ಮೂರನೆಯ ಶಕ್ತಿಯು ಅಜ್ಞಾನದಿಂದ ತುಂಬಿದ್ದು , ಕಾಮ್ಯಕರ್ಮಗಳಲ್ಲಿ ಸದಾ ಗೋಚರವಾಗುತ್ತದೆ.

(ಚೈ.ಚ.ಮಧ್ಯ – 6.154)

ವಿಷ್ಣುಪುರಾಣದ ಈ ಶ್ಲೋಕವು ಹೇಳುವುದೇನೆಂದರೆ ಪರಮ ಪ್ರಭುವಿನ ಶಕ್ತಿಯು (ವಿಷ್ಣು ಶಕ್ತಿ) ಮೂಲತಃ ಆಧ್ಯಾತ್ಮಿಕವಾಗಿದೆ, ಆದರೆ ಅದು ಮೂರು ವಿಧಗಳಲ್ಲಿ ಪ್ರಕಟವಾಗುತ್ತದೆ. ಅದು ಸೂರ್ಯಗೋಳದ ಶಕ್ತಿಯಾದ ಬಿಸಿಲಿನಂತೆ. ಬಿಸಿಲು ಒಂದು ಶಕ್ತಿ. ಆದರೆ ಅದು ಬೆಳಕು ಮತ್ತು ಶಾಖಗಳಾಗಿ ಪ್ರಕಟವಾಗುತ್ತದೆ. ಅದೇ ರೀತಿಯಲ್ಲಿ ದೇವರಿಗೆ ಒಂದು ಶಕ್ತಿಯಿದೆ. ಅದು ಆಧ್ಯಾತ್ಮಿಕವಾದದ್ದು. ಅದು ಅವನ ಆಧ್ಯಾತ್ಮಿಕ ಧಾಮವನ್ನು ಧಾರಣೆ ಮಾಡುತ್ತದೆ. ಅದೇ ಶಕ್ತಿಯು ಇನ್ನೊಂದು ಆಧ್ಯಾತ್ಮಿಕ ರೂಪದಲ್ಲಿ ಪ್ರಕಟವಾಗುತ್ತದೆ. ಅದೇ ಕ್ಷೇತ್ರಜ್ಞ ಅಥವಾ ತಟಸ್ಥ ಶಕ್ತಿ. ಅದರಲ್ಲಿ ಜೀವಿಗಳಾದ ನಾವು ಒಳಗೊಂಡಿದ್ದೇವೆ. ಅನಂತರ, ಅವಿದ್ಯಾ ಕರ್ಮ ಸಂಜ್ಞಾಯಾ ತೃತೀಯಾ ಶಕ್ತಿರ್‌ ಇಷ್ಯತೇ “ಪ್ರಭುವಿನ ಈ ಎರಡು ಶಕ್ತಿಗಳಲ್ಲದೆ, ಅವನ ಮೂರನೆಯ ಶಕ್ತಿ ರೂಪವೊಂದಿದೆ. ಅದನ್ನು ಅವಿದ್ಯಾ ಅಥವಾ ಅಜ್ಞಾನ ಎಂದು ಕರೆಯುತ್ತಾರೆ. ಅದು ಕಾಮ್ಯಕರ್ಮಗಳನ್ನು ಆಧರಿಸಿದೆ.” ಈ ಶಕ್ತಿಯ ಪ್ರಭಾವಕ್ಕೆ ಒಳಗಾದವನು ಅವನ ಪರಿಶ್ರಮದ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ಅನುಭವಿಸಬೇಕಾಗುತ್ತದೆ. ಇದು ಐಹಿಕ ಜಗತ್ತು. ಐಹಿಕ ಜಗತ್ತು ಕೂಡ ಕೃಷ್ಣ ಅಥವಾ ದೇವರ ಒಂದು ಶಕ್ತಿ. ಆದರೆ ಇಲ್ಲಿ ಅಜ್ಞಾನದ್ದೇ ಮೇಲುಗೈ. ಆದ್ದರಿಂದ ವ್ಯಕ್ತಿಯು ಕರ್ಮವನ್ನು ಮಾಡಬೇಕಾಗುತ್ತದೆ. ನಮ್ಮ ಮೂಲ ಸ್ಥಿತಿಯಲ್ಲಿ ನಾವು ಕರ್ಮವನ್ನು ಮಾಡಬೇಕಾಗಿಲ್ಲ. ಆದರೆ ನಾವು ಅಜ್ಞಾನದಲ್ಲಿರುವಾಗ ಕರ್ಮವನ್ನು ಮಾಡಬೇಕಾಗುತ್ತದೆ.

ಆದ್ದರಿಂದ ಕೃಷ್ಣನಿಗೆ ದಿಟದಲ್ಲಿ ಇರುವುದು ಆಧ್ಯಾತ್ಮಿಕ ಶಕ್ತಿ ಎಂಬ ಒಂದು ಶಕ್ತಿ. ಅವನು ಅಖಂಡ ಚೈತನ್ಯ. ಅವನಿಂದ ಹೊರ ಹೊಮ್ಮುವ ಶಕ್ತಿ ಕೂಡ ಆಧ್ಯಾತ್ಮಿಕವಾದದ್ದು. ಶಕ್ತಿಮತೋರ್‌ ಅಭಿನ್ನಃ ವೇದಾಂತ ಸೂತ್ರದಿಂದ ನಾವು ತಿಳಿಯುವುದೇನೆಂದರೆ ಶಕ್ತಿವಂತನಾದ ಪ್ರಭು ಕೃಷ್ಣನು ಅವನ ಶಕ್ತಿಗಿಂತ ಬೇರೆಯೇನಲ್ಲ. ಆದ್ದರಿಂದ ಐಹಿಕ ಶಕ್ತಿಯು ಕೂಡ ಕೃಷ್ಣನಿಗಿಂತ ಬೇರೆಯೇನಲ್ಲ. ವೈದಿಕ ಸಾಹಿತ್ಯದಲ್ಲಿ ಇನ್ನೊಂದು ಕಡೆ ಸರ್ವಂ ಖಲ್‌್ವ ಇದಂ ಬ್ರಹ್ಮ  “ಎಲ್ಲವೂ ಬ್ರಹ್ಮ, ಚೈತನ್ಯ” ಎಂದು ಹೇಳಲಾಗಿದೆ. ಭಗವದ್ಗೀತೆಯಲ್ಲಿ (9.4) ಕೃಷ್ಣ ಹೀಗೆ ಹೇಳುತ್ತಾನೆ: ಮಯಾ ತತಮ್‌ ಇದಂ ಸರ್ವಂ ಜಗದ್‌ ಅವ್ಯಕ್ತ ಮೂರ್ತಿನಾ “ನಾನು ಈ ಬ್ರಹ್ಮಾಂಡ ಸ್ವರೂಪದಲ್ಲಿ ವಿಸ್ತರಣೆಗೊಂಡಿದ್ದೇನೆ. ಅದು ನನ್ನ ನಿರಾಕಾರ ಸ್ವರೂಪ.” ಮತ್‌ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ  “ಎಲ್ಲ ಜೀವಿಗಳೂ ನನ್ನಲ್ಲಿ ಆಶ್ರಯ ಪಡೆದಿವೆ ಅಥವಾ ಪ್ರತಿಯೊಂದೂ ನನ್ನ ಒಂದು ವಿಸ್ತರಣೆಯಾಗಿದೆ, ಆದರೆ ನಾನು ವೈಯಕ್ತಿಕವಾಗಿ ಅಲ್ಲಿಲ್ಲ.”

ಇದು ಅಚಿಂತ್ಯ ಭೇದಾಭೇದ, ದೇವರು ಮತ್ತು ಅವನ ಶಕ್ತಿಗಳು ಏಕಕಾಲದಲ್ಲಿ ಒಂದಾಗಿರುವುದು ಮತ್ತು ಬೇರೆಯಾಗಿರುವುದು ಎಂಬ ತತ್ತ್ವಜ್ಞಾನ. ವೇದಾಂತ ಸೂತ್ರದ ನಿಯಮಾವಳಿಯಲ್ಲಿ ಅದು ಇದೆಯಾದರೂ ಶ್ರೀ ಚೈತನ್ಯ ಮಹಾಪ್ರಭುಗಳು ಇದನ್ನು ಉದ್ಘಾಟಿಸಿದರು. ಈ ತತ್ತ್ವಜ್ಞಾನವು ಪರಮ ಸತ್ಯವನ್ನು ಅಧ್ಯಯನ ಮಾಡುವ ಎರಡು ವರ್ಗದ ತತ್ತ್ವಜ್ಞಾನಿಗಳನ್ನು ತೃಪ್ತಿಪಡಿಸಬಲ್ಲದ್ದಾಗಿದೆ. ಒಂದು ವರ್ಗ ದೇವರು ಮತ್ತು ಜೀವಿಗಳು ಬೇರೆ ಬೇರೆ ಎಂದು, ಇನ್ನೊಂದು ವರ್ಗದ ತತ್ತ್ವಜ್ಞಾನಿಗಳು ಅದ್ವೈತಿಗಳಾಗಿದ್ದು ದೇವರು ಮತ್ತು ಜೀವಿಗಳು ಒಂದೇ ಎಂದು ಹೇಳುತ್ತಾರೆ. ಈ ಅಚಿಂತ್ಯ ಭೇದಾಭೇದ ತತ್ತ್ವಜ್ಞಾನವು ದೇವರು ಮತ್ತು ಜೀವಿಗಳು ಏಕಕಾಲದಲ್ಲಿ ಒಂದು ಮತ್ತು ಬೇರೆ ಎಂದು ಹೇಳುತ್ತದೆ. ಗುಣದಲ್ಲಿ ಅವು ಒಂದು, ಆದರೆ ಗಾತ್ರದಲ್ಲಿ ಬೇರೆ.

ಮತ್ತೆ ನಾವು ಬಿಸಿಲು ಮತ್ತು ಸೂರ್ಯ ಗೋಳದ ಉದಾಹರಣೆಯನ್ನು ಕೊಡಬಹುದು – ಶಕ್ತಿ ಮತ್ತು ಶಕ್ತಿವಂತ. ಬಿಸಿಲಿನಲ್ಲಿ ಶಾಖ ಮತ್ತು ಬೆಳಕು ಇವೆ. ಸೂರ್ಯಗೋಳದಲ್ಲಿಯೂ ಕೂಡ ಶಾಖ ಮತ್ತು ಬೆಳಕು ಇವೆ. ಆದರೆ ಬೆಳಕು ಮತ್ತು ಶಾಖದ ಪ್ರಮಾಣ ತೀರ ಬೇರೆಯಾಗಿದೆ. ಬಿಸಿಲಿನ ಶಾಖವನ್ನು ನೀವು ತಡೆದುಕೊಳ್ಳಬಹುದು. ಆದರೆ ನೀವು ಸೂರ್ಯಗೋಳಕ್ಕೆ ಹೋದರೆ ಅಲ್ಲಿನ ಶಾಖವನ್ನು ನಿಮಗೆ ತಡೆದುಕೊಳ್ಳಲಾಗುವುದಿಲ್ಲ. ಅದು ಒಂದು ಕ್ಷಣದಲ್ಲಿ ಎಲ್ಲವನ್ನೂ ಸುಟ್ಟು ಬೂದಿಮಾಡಿಬಿಡುತ್ತದೆ. ಅದೇ ರೀತಿಯಲ್ಲಿ ಕೃಷ್ಣ ಮತ್ತು ಜೀವಿಗಳು ಗುಣಾತ್ಮಕವಾಗಿ ಒಂದು, ಆದರೆ ಗಾತ್ರಾತ್ಮಕವಾಗಿ ತೀರ ಬೇರೆ.

ಕೃಷ್ಣ ಅನಂತ. ನಾವಾದರೋ ಪರಮಾಣುವಿಗಿಂತ ಚಿಕ್ಕವರು. ಆದ್ದರಿಂದ ನಮ್ಮ ಸಾಧಾರಣವಾದ ಇಂದ್ರಿಯ ಗ್ರಹಿಕೆಯಿಂದ ದೇವೋತ್ತಮ ಪರಮಪುರುಷನನ್ನು ತಿಳಿಯಲು ನಮಗೆ ಸಾಧ್ಯವಿಲ್ಲ. ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್‌ ಗ್ರಾಹ್ಯಮ್‌ ಇಂದ್ರಿಯೈಃ “ಕೃಷ್ಣನು ನಮ್ಮ ಮೊಂಡಾದ ಐಹಿಕ ಇಂದ್ರಿಯಗಳಿಂದ ಗ್ರಾಹ್ಯನಲ್ಲ.” `ನಾಮಾದಿ’ ಎಂಬ ಶಬ್ದದ ಅರ್ಥ “ಅವನ ಹೆಸರಿನಿಂದ ಆರಂಭ.” ನಮ್ಮ ಐಹಿಕ ಇಂದ್ರಿಯಗಳಿಂದ ಕೃಷ್ಣನ ಹೆಸರುಗಳನ್ನಾಗಲೀ ಅಥವಾ ಅವನ ರೂಪವನ್ನಾಗಲಿ ಅಥವಾ ಅವನ ಗುಣಗಳನ್ನಾಗಲಿ ಅಥವಾ ಅವನ ಪರಿಕರವನ್ನಾಗಲಿ ಅಥವಾ ಅವನ ಚಟುವಟಿಕೆಗಳನ್ನಾಗಲಿ ನಾವು ಅರ್ಥಮಾಡಿಕೊಳ್ಳಲಾರೆವು. ಅದು ಸಾಧ್ಯವಿಲ್ಲ.

ಹಾಗಾದರೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮ್‌ ಏವ ಸ್ಫುರತಿ ಅದಃ “ನಾವು ನಮ್ಮ ನಾಲಗೆಯಿಂದ ಪ್ರಾರಂಭಿಸಿ ಪ್ರಭುವಿನ ದಿವ್ಯ ಪ್ರೇಮ ಸೇವೆಯನ್ನು ಪ್ರಾರಂಭಿಸಿದರೆ ಪ್ರಭುವು ಸ್ವತಃ ಪ್ರಕಟಗೊಳ್ಳುತ್ತಾನೆ.” ನಮ್ಮ ಮೊದಲನೆಯ ಕೆಲಸವೆಂದರೆ ನಮ್ಮ ನಾಲಗೆಯನ್ನು ಪ್ರಭುವಿನ ಸೇವೆಯಲ್ಲಿ ತೊಡಗಿಸುವುದು. ಪ್ರಭುವಿನ ಸೇವೆಯಲ್ಲಿ ನಾಲಗೆಯನ್ನು ನೀವು ಹೇಗೆ ತೊಡಗಿಸಬಹುದು? ಅವನ ನಾಮ, ಕೀರ್ತಿ, ಗುಣಗಳು, ಆಕಾರ, ಪರಿವಾರ ಮತ್ತು ಲೀಲೆಗಳನ್ನು ಭಜಿಸುವ ಮೂಲಕ ಮತ್ತು ಸಂಕೀರ್ತಿಸುವ ಮೂಲಕ. ಇದು ನಾಲಗೆಯ ಕೆಲಸ. ನಾಲಗೆಯು ಪ್ರಭುವಿನ ಸೇವೆಯಲ್ಲಿ ಮಗ್ನವಾದಾಗ, ಇತರ ಎಲ್ಲ ಇಂದ್ರಿಯಗಳೂ ಕ್ರಮೇಣ ಅದರಲ್ಲಿ ತೊಡಗಿಕೊಳ್ಳುತ್ತವೆ.

ನಾಲಗೆಯು ಈ ದೇಹದಲ್ಲಿ ಅತ್ಯಂತ ಮುಖ್ಯವಾದ ಇಂದ್ರಿಯ. ಆದ್ದರಿಂದ ನಾವು ನಮ್ಮ ಇಂದ್ರಿಯಗಳನ್ನು ನಿಯಂತ್ರಿಸಬೇಕೆಂದರೆ, ಮೊದಲು ನಾಲಗೆಯನ್ನು ನಿಯಂತ್ರಿಸಬೇಕು ಎಂದು ಸೂಚಿಸಲಾಗಿದೆ. ಶ್ರೀಲ ಭಕ್ತಿವಿನೋದ ಠಾಕುರರು ಇದನ್ನು ಒತ್ತಿ ಹೇಳಿದ್ದಾರೆ. ಅವರು ನಮ್ಮ ಬದ್ಧ ಸ್ಥಿತಿಯನ್ನು ಶರೀರ ಅವಿದ್ಯಾಜಾಲ್‌ ಎಂದು ವರ್ಣಿಸಿದ್ದಾರೆ.

ಈ ಐಹಿಕ ದೇಹವೆಂಬ ಬಲೆಯಲ್ಲಿ ನಾವು ಬಂಧಿತರಾಗಿದ್ದೇವೆ. ನಾವು ಬಲೆಯಲ್ಲಿ ಸಿಲುಕಿಕೊಂಡ ಮೀನಿನಂತೆಯೇ ಇದ್ದೇವೆ. ನಾವು ಈ ದೇಹದಲ್ಲಿ ಬಂಧಿತರಾಗಿರುವುದಷ್ಟೇ ಅಲ್ಲ, ಈ ಬಲೆಯನ್ನು ಜನ್ಮದಿಂದ ಜನ್ಮಕ್ಕೆ – 84,00,000 ಜೀವ ಜಾತಿಗಳ ಮುಖಾಂತರ ಬದಲಾಯಿಸುತ್ತಲೂ ಇದ್ದೇವೆ. ಈ ರೀತಿಯಲ್ಲಿ ನಾವು ಅಜ್ಞಾನವೆಂಬ ಬಲೆಯಲ್ಲಿ ಬಂಧಿತರಾಗಿ ಉಳಿದಿದ್ದೇವೆ. ಅನಂತರ, `ಜೋಡೇಂದ್ರಿಯ ತಾಹೇ ಕಾಲ್‌’ ಇಂದ್ರಿಯ ಭೋಗದ ಬಗೆಗೆ ನಮಗಿರುವ ತೀವ್ರವಾದ ಆಸೆಯಿಂದಾಗಿ ಅಜ್ಞಾನವೆಂಬ ಈ ಬಲೆಯಲ್ಲಿರುವ ನಮ್ಮ ಬಂಧನವು ಮುಂದುವರಿಯುತ್ತಲೇ ಇದೆ. ಎಲ್ಲ ಇಂದ್ರಿಯಗಳಲ್ಲಿ ನಾಲಗೆಯು ಅತ್ಯಂತ ಅಪಾಯಕಾರಿ ಎಂದು ಭಕ್ತಿವಿನೋದ ಠಾಕುರರು ಹೇಳುತ್ತಾರೆ. ನಾವು ನಮ್ಮ ನಾಲಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದಿದ್ದರೆ, ಒಂದಾದ ಮೇಲೊಂದರಂತೆ ನಾನಾ ಬಗೆಯ ದೇಹಗಳನ್ನು ಸ್ವೀಕರಿಸಲು ನಾಲಗೆಯು ನಮಗೆ ಒತ್ತಾಯಪಡಿಸುತ್ತದೆ. ಒಬ್ಬ ಮನುಷ್ಯನು ರಕ್ತ ಮತ್ತು ಮಾಂಸವನ್ನು ತಿನ್ನುವುದರ ಮೂಲಕ ತನ್ನ ನಾಲಗೆಗೆ ತೃಪ್ತಿಪಡಿಸುವುದರಲ್ಲಿ ಬಹಳ ಆಸಕ್ತನಾಗಿದ್ದರೆ, ಆಗ ಐಹಿಕ ಪ್ರಕೃತಿಯು ನಿರಂತರವಾಗಿ ರಕ್ತ ಮಾಂಸಗಳನ್ನು ಆಸ್ವಾದಿಸುವ ಸೌಕರ್ಯವನ್ನು ಅವನಿಗೆ ಒದಗಿಸಿಕೊಡುತ್ತದೆ. ಅವನಿಗೆ ಹುಲಿಯ ದೇಹ ಸಿಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಆಹಾರ ಸೇವನೆಯಲ್ಲಿ ವಿವೇಚನೆಯನ್ನು ಬಳಸದಿದ್ದರೆ – ಎಲ್ಲ ಬಗೆಯ ಅಸಂಬದ್ಧಗಳನ್ನೂ, ಕಣ್ಣಿಗೆ ಕಂಡ ಎಲ್ಲವನ್ನೂ ಮತ್ತು ಪ್ರತಿಯೊಂದನ್ನೂ – ಆಗ ಐಹಿಕ ಪ್ರಕೃತಿಯು ಅವನಿಗೆ ಒಂದು ಹಂದಿಯ ದೇಹವನ್ನು ನೀಡುತ್ತದೆ. ಆ ಜನ್ಮದಲ್ಲಿ ಅವನು ಮಲವನ್ನು ತನ್ನ ಆಹಾರವೆಂದು ಸ್ವೀಕರಿಸಬೇಕಾಗುತ್ತದೆ. ಅನಿಯಂತ್ರಿತ ನಾಲಗೆಯಿಂದ ಇಷ್ಟೆಲ್ಲಾ ಯಾತನೆಗಳು ಉಂಟಾಗುತ್ತವೆ.

ಆದ್ದರಿಂದ ಈ ಮಾನವ ರೂಪದ ದೇಹವು ಒಂದು ದೊಡ್ಡ ಅವಕಾಶವನ್ನು ನಮಗೆ ಒದಗಿಸಿದೆ. ಪ್ರಭುವಿನ ಪ್ರೇಮ ಸೇವೆಯಲ್ಲಿ ನಾಲಗೆಯನ್ನು ತೊಡಗಿಸುವ ಮೂಲಕ ನಾವು ಕೃಷ್ಣಪ್ರಜ್ಞೆಯಲ್ಲಿ ಪ್ರಗತಿಯನ್ನು ಸಾಧಿಸಬಹುದು. ಕೇವಲ ಅವನ ಸೇವೆಯಲ್ಲಿ ನಾಲಗೆಯನ್ನು ತೊಡಗಿಸುವ ಮೂಲಕ ದೇವರ ಆತ್ಯಂತಿಕ ಸಾಕ್ಷಾತ್ಕಾರವನ್ನು ನಾವು ಸಾಧಿಸಬಹುದು. ಇತರ ದೇಹಗಳಲ್ಲಿ – ಬೆಕ್ಕಿನ ದೇಹ, ನಾಯಿಯ ದೇಹ, ಹುಲಿಯ ದೇಹ – ನಾವು ಇದನ್ನು ಮಾಡಲಾಗುವುದಿಲ್ಲ. ಆದ್ದರಿಂದ ಜನನ ಮರಣದ ಚಕ್ರದಲ್ಲಿ ಪಯಣ ಮಾಡುತ್ತಾ, ನಿರಂತರವಾಗಿ ನಾನಾ ಬಗೆಯ ದೇಹಗಳನ್ನು ಪಡೆಯುತ್ತಿರುವ ಜೀವಿಗೆ – ಈ ಮಾನವ ದೇಹವು ದೊಡ್ಡ ವರವಾಗಿದೆ. ಐಹಿಕ ಪ್ರಕೃತಿಯ ಬಿಗಿಮುಷ್ಟಿಯಿಂದ ಪಾರಾಗುವುದಕ್ಕೆ ಮಾನವ ದೇಹವು ಒಂದು ಅವಕಾಶವಾಗಿದೆ.

ನಾವು ನಮ್ಮ ನಾಲಗೆಯನ್ನು ಸದಾ ಹರೇಕೃಷ್ಣ ಮಹಾಮಂತ್ರವನ್ನು ಜಪಿಸುವುದರಲ್ಲಿ ತೊಡಗಿಸಿದರೆ, ಕೃಷ್ಣನ ಸಾಕ್ಷಾತ್ಕಾರವನ್ನು ಪಡೆಯುತ್ತೇವೆ. ಏಕೆಂದರೆ ಕೃಷ್ಣನ ನಾಮದ ಧ್ವನಿಯು ಸ್ವತಃ ಕೃಷ್ಣನಿಗಿಂತ ಬೇರೆ ಅಲ್ಲ. ಏಕೆ? ಏಕೆಂದರೆ ಕೃಷ್ಣನು ಪರಾತ್ಪರನಾಗಿದ್ದಾನೆ. ಈ ಐಹಿಕ ಜಗತ್ತಿನಲ್ಲಿ ಪ್ರತಿಯೊಂದೂ ತನ್ನ ಅಂಕಿತಕ್ಕಿಂತ ವಿಭಿನ್ನವಾಗಿದೆ. ಸ್ವತಃ ನಾನೇ ನನ್ನ ಹೆಸರು ಮತ್ತು ದೇಹಕ್ಕಿಂತ ಬೇರೆಯಾಗಿದ್ದೇನೆ. ಆದರೆ ಕೃಷ್ಣ ಹಾಗಲ್ಲ. ಕೃಷ್ಣ ಮತ್ತು ಕೃಷ್ಣನ ದೇಹ ಒಂದೇ ಆಗಿವೆ. ಧೂರ್ತರು ಇದನ್ನು ಅರ್ಥಮಾಡಿಕೊಳ್ಳಲಾರರು. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವಂತೆ (9.11), ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮ್‌ ಆಶ್ರಿತಮ್‌: “ಧೂರ್ತರು ಮತ್ತು ಮೂರ್ಖರು,ನಾನು ಮನುಷ್ಯರೂಪದಲ್ಲಿ ಅವತರಿಸಿದಾಗ ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನಾನು ಸಾಧಾರಣ ಮನುಷ್ಯ ಎಂದು ಅವರು ಯೋಚಿಸುತ್ತಾರೆ.” ಪರಂ ಭಾವಮ್‌ ಅಜಾನನ್ತೋ ಮಮ ಭೂತ ಮಹೇಶ್ವರಮ್‌: “ಈ ಧೂರ್ತರಿಗೆ ನಾನು ಏನು ಎಂದು ಗೊತ್ತಿಲ್ಲ. ನನ್ನ ದಿವ್ಯ ಪ್ರಕೃತಿ ಮತ್ತು ಸಮಸ್ತ ಸೃಷ್ಟಿಯ ಮೇಲೆ ನನಗಿರುವ ಪರಮೋಚ್ಚ ಪ್ರಭಾವ ಅವರಿಗೆ ತಿಳಿಯದು.”

ಕೃಷ್ಣನನ್ನು ಅರ್ಥಮಾಡಿಕೊಳ್ಳದೆ ಮೂರ್ಖರು ಅವನನ್ನು ಸಾಧಾರಣ ಮಾನವ ಜೀವಿಯೆಂದು ಪರಿಗಣಿಸುತ್ತಾರೆ. “ಮೂಢ” ಎಂಬ ಶಬ್ದಕ್ಕೆ “ಅವಿವೇಕಿ” ಎಂದು ಅರ್ಥ. ಕೃಷ್ಣನು ಈ ಎಚ್ಚರಿಕೆಯನ್ನು ಕೊಟ್ಟಿದ್ದರೂ ಅನೇಕ ದೂರ್ತರು ಮಹಾಪಂಡಿತರಂತೆ ವರ್ತಿಸುತ್ತಿದ್ದಾರೆ, “ನನಗೆ ಶರಣಾಗಿ” ಎಂದು ಕೃಷ್ಣನು ಆಜ್ಞೆ ಮಾಡಿದರೆ ಈ ಧೂರ್ತರು, “ಕೃಷ್ಣನಿಗಲ್ಲ , ಕೃಷ್ಣನಲ್ಲಿರುವ ಇನ್ನೂ ಜನಿಸಿಲ್ಲದ ಚೇತನಕ್ಕೆ ನಾವು ಶರಣಾಗಬೇಕು” ಎಂದು ಟೀಕೆ ಮಾಡುತ್ತಾರೆ. ಕೃಷ್ಣನು ತನ್ನ ದೇಹದಿಂದ ಬೇರೆಯಲ್ಲ, ಕೃಷ್ಣನು ತನ್ನ ನಾಮದಿಂದ ಬೇರೆಯಲ್ಲ, ಕೃಷ್ಣನು ತನ್ನ ಕೀರ್ತಿಯಿಂದ ಬೇರೆಯಲ್ಲ ಎಂದು ಅವರು ತಿಳಿದಿಲ್ಲ. ಕೃಷ್ಣನಿಗೆ ಸೇರಿದ ಯಾವುದೇ ಆಗಲಿ ಅದು ಕೃಷ್ಣನೇ ಆಗಿರುತ್ತದೆ. ಈ ಧೂರ್ತರು ಅದ್ವೈತಿಗಳು. “ಏಕತೆ”ಯನ್ನು ಕುರಿತು ತಾತಿ್ತ್ವಕಗೊಳಿಸುತ್ತಿದ್ದಾರೆ. ಆದರೆ ಕೃಷ್ಣನ ವಿಚಾರಕ್ಕೆ ಬರುತ್ತಿದ್ದಂತೆಯೇ ಕೂಡಲೇ ಅವರು ಅವನನ್ನು ಅವನ ದೇಹದಿಂದ ಅಥವಾ ಅವನ ನಾಮದಿಂದ ಪ್ರತ್ಯೇಕಿಸುತ್ತಾರೆ.

ಆದರೆ ವಾಸ್ತವ ಸಂಗತಿಯೇನೆಂದರೆ ಕೃಷ್ಣನ ನಾಮ ಮತ್ತು ಕೃಷ್ಣ ಬೇರೆ ಬೇರೆಯಲ್ಲ. ಆದ್ದರಿಂದ ನಿಮ್ಮ ನಾಲಗೆಯು ಕೃಷ್ಣನ ಪವಿತ್ರ ನಾಮವನ್ನು ಸ್ಪರ್ಶಿಸುತ್ತಿದ್ದಂತೆಯೇ ನೀವು ಕೃಷ್ಣನ ಒಡನಾಟಕ್ಕೆ ಬರುತ್ತೀರಿ.ನೀವು ಹರೇಕೃಷ್ಣ ಮಂತ್ರವನ್ನು ಜಪಿಸುತ್ತಾ ಕೃಷ್ಣನ ನಿರಂತರ ಒಡನಾಟಕ್ಕೆ ಬಂದರೆ, ಈ ಕೇವಲ ಜಪಿಸುವ ವಿಧಾನದಿಂದ ಎಷ್ಟು ಪರಿಶುದ್ಧರಾಗುತ್ತೀರಿ ಎಂಬುದನ್ನು ಊಹೆ ಮಾಡಿಕೊಳ್ಳಿ.

ನಮ್ಮ ನಾಲಗೆಯು ಅತ್ಯಂತ ರುಚಿಕರವಾದ ಆಹಾರ ಪದಾರ್ಥಗಳನ್ನು ಆಸ್ವಾದಿಸಲು ಕೂಡ ಬಯಸುತ್ತದೆ. ಆದ್ದರಿಂದ ಪರಮ ದಯಾಳುವಾದ ಕೃಷ್ಣನು ನೂರಾರು, ಸಾವಿರಾರು ರುಚಿಕರವಾದ ಭಕ್ಷ್ಯಗಳನ್ನು ನಮಗೆ ಕೊಟ್ಟಿದ್ದಾನೆ – ಅವನು ತಿಂದು ಬಿಟ್ಟ ಶೇಷ ಆಹಾರಗಳು. “ಕೃಷ್ಣನಿಗೆ ಅರ್ಪಿಸದ ಯಾವುದೇ ಆಹಾರವನ್ನೂ ರುಚಿ ನೋಡಲು ನನ್ನ ನಾಲಗೆಗೆ ನಾನು ಅವಕಾಶ ಕೊಡುವುದಿಲ್ಲ ಮತ್ತು ನನ್ನ ನಾಲಗೆಯನ್ನು ಸದಾ ಹರೇಕೃಷ್ಣ ಜಪದಲ್ಲಿ ತೊಡಗಿಸುತ್ತೇನೆ” ಎಂಬ ದೃಢ ನಿಶ್ಚಯವನ್ನು ನೀವು ಮಾಡಿದರೆ ಸಾಕು. ಆಗ ಎಲ್ಲ ಪರಿಪೂರ್ಣತೆಯೂ ನಿಮ್ಮ ಮುಷ್ಟಿಯಲ್ಲಿರುತ್ತದೆ. ಎಲ್ಲ ಪರಿಪೂರ್ಣತೆ. ಎರಡು ಸರಳವಾದ ವಿಧಾನಗಳು: ಕೃಷ್ಣನಿಗೆ ಅರ್ಪಿಸದ ಏನನ್ನೂ ತಿನ್ನಬೇಡಿ, ಸದಾ ಹರೇಕೃಷ್ಣ ಜಪಮಾಡಿ. ಅಷ್ಟೇ.

ವೈವಿಧ್ಯವೇ ಆಸ್ವಾದನೆಯ ಮೂಲ. ಕೃಷ್ಣ ಪ್ರಸಾದವನ್ನು ಅನೇಕ ಸೊಗಸಾದ ವೈವಿಧ್ಯಗಳಲ್ಲಿ ತಯಾರಿಸಬಹುದು. ನಿಮ್ಮ ನಾಲಗೆಗೆ ಎಷ್ಟು ಸಂತೋಷ ಬೇಕು? ಕೇವಲ ಕೃಷ್ಣ ಪ್ರಸಾದವನ್ನು ಸೇವಿಸುವ ಮೂಲಕವೇ ಅದನ್ನು ನೀವು ಪಡೆಯಬಹುದು. ಕೃಷ್ಣ ಪ್ರಸಾದವನ್ನು ಸೇವಿಸಿ ನಿಮ್ಮ ನಾಲಗೆಯು ಪರಿಶುದ್ಧವಾದಷ್ಟೂ ನೀವು ಹರೇಕೃಷ್ಣ ಮಂತ್ರದ ಜಪವನ್ನು ಆನಂದಿಸಲು ನಿಮಗೆ ಸಾಧ್ಯವಾಗುತ್ತದೆ. ಚೈತನ್ಯ ಮಹಾಪ್ರಭುಗಳು ಹೇಳುವಂತೆ, ಆನಂದಾಂಬುಧಿ  ವರ್ಧನಮ್‌: “ಹರೇಕೃಷ್ಣ ಜಪವು ದಿವ್ಯ ಆನಂದದ ಸಾಗರವನ್ನು ವರ್ಧಿಸುತ್ತದೆ.” ಈ ಐಹಿಕ ಜಗತ್ತಿನಲ್ಲಿ ಸಾಗರವು ಹೆಚ್ಚಾಗುವುದರ ಅನುಭವ ನಮಗೆ ಇಲ್ಲ. ಸಾಗರಗಳು ಉಕ್ಕೇರಿದ್ದರೆ ಎಷ್ಟೋ ವರ್ಷಗಳ ಹಿಂದೆಯೇ ಸಮಸ್ತ ಭೂಪ್ರದೇಶವನ್ನೂ ಅವು ಕಬಳಿಸಿಬಿಡುತ್ತಿದ್ದವು. ಆದರೆ ಹರೇಕೃಷ್ಣ ಮಂತ್ರ ಜಪದಿಂದ ಲಭಿಸುವ ದಿವ್ಯ ಆನಂದವೆಂಬ ಸಾಗರವು ಸದಾ ಕಾಲವೂ ಉಕ್ಕೇರುತ್ತಲೇ ಇರುತ್ತದೆ.

ಮಹಾನ್‌ ಆಚಾರ್ಯ ಶ್ರೀಲ ರೂಪ ಗೋಸ್ವಾಮಿ ಹೇಳುತ್ತಾರೆ: “ಒಂದು ನಾಲಗೆಯಿಂದ ಹರೇಕೃಷ್ಣ ಜಪವನ್ನು ಮಾಡಿ ಏನು ಪ್ರಯೋಜನ? ನನಗೆ ಒಂದು ಕೋಟಿ ನಾಲಗೆಗಳಿದ್ದಿದ್ದರೆ ಆಗ ನಾನು ನನಗೆ ಸಂಪೂರ್ಣ ತೃಪ್ತಿಯಾಗುವಷ್ಟು ಜಪವನ್ನು ಮಾಡುತ್ತಿದ್ದೆ. ಈ ಎರಡು ಕಿವಿಗಳಿಂದ ಏನು ಪ್ರಯೋಜನ? ನನಗೆ ಕೋಟಿ ಕಿವಿಗಳಿದ್ದಿದ್ದರೆ ನಾನು ಹರೇಕೃಷ್ಣ ಮಂತ್ರವನ್ನು ಸಂತೃಪ್ತನಾಗಿ ಕೇಳುತ್ತಿದ್ದೆ.” ಹರೇಕೃಷ್ಣ ಜಪವನ್ನು ಆಸ್ವಾದಿಸಲು ಅವರು ಕೋಟಿ ಕೋಟಿ ಕಿವಿಗಳೂ ನಾಲಗೆಗಳೂ ಇರಬೇಕಾಗಿತ್ತೆಂದು ಹಂಬಲಿಸಿದ್ದಾರೆ. ಸಹಜವಾಗಿಯೇ ಇದೊಂದು ಉನ್ನತ ಸ್ಥಿತಿ. ಜಪವು ಮಧುರವೂ ಇಂಪೂ ಆಗಿರುವಾಗ ಅದನ್ನು ಆಸ್ವಾದಿಸಲು ನಾವು ಹೆಚ್ಚು ಕಿವಿಗಳೂ ನಾಲಗೆಗಳೂ ಇರಬೇಕೆಂದು ಬಯಸುತ್ತೇವೆ.

ಆದರೆ ಪ್ರಸ್ತುತದಲ್ಲಿ ನಾವು ಕೃಷ್ಣನ ನಾಮವು ಎಷ್ಟು ಆಸ್ವಾದ ಯೋಗ್ಯವೆಂದು ತಿಳಿಯಲಾರೆವು (ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್‌ ಗ್ರಾಹ್ಯಮ್‌ ಇಂದ್ರಿಯೈಃ). ನಮಗೆ ಈಗಿರುವ ಇಂದ್ರಿಯಗಳಿಂದ ನಾವು ಕೃಷ್ಣನ ನಾಮ, ರೂಪ ಮತ್ತು ಗುಣಗಳನ್ನು ಅರ್ಥಮಾಡಿಕೊಳ್ಳಲಾರೆವು. ಆದ್ದರಿಂದ ನಾವು ಕೃಷ್ಣನ ಚಿತ್ರವನ್ನು ನೋಡುವ ಮೂಲಕ ಕೂಡಲೇ ಅವನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಆಗ ನಾವು ಹೀಗೆ ಯೋಚಿಸುತ್ತೇವೆ: “ಓಹ್‌, ಕೃಷ್ಣನು ರಾಧಾರಾಣಿ ಮತ್ತು ಇತರ ಗೋಪಿಯರನ್ನು ಆಲಿಂಗಿಸುತ್ತಿರುವ ಯುವಕ.” ನಮ್ಮ ಇಂದ್ರಿಯಗಳು ಪರಿಶುದ್ಧಿಗೊಂಡಿಲ್ಲದಿದ್ದರೆ, ಕೃಷ್ಣ ಮತ್ತು ರಾಧಾರಾಣಿಯ ನಡುವಣ ಸಂಬಂಧಗಳನ್ನು ಒಬ್ಬ ತರುಣ ಮತ್ತು ಒಬ್ಬ  ತರುಣಿಯ ನಡುವಣ ವ್ಯವಹಾರಗಳೆಂದು ಅಂಗೀಕರಿಸುತ್ತೇವೆ. ದಿಟದಲ್ಲಿ, ಇದು ವಾಸ್ತವಾಂಶವಲ್ಲ. ಅವರ ನಡುವಣ ಸಂಬಂಧಗಳು ಸಂಪೂರ್ಣವಾಗಿ ಪರಿಶುದ್ಧವಾದುವು.

 ಚೈತನ್ಯ ಚರಿತಾಮೃತದಲ್ಲಿ ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರು ವಿವರಿಸುವಂತೆ ಗೋಪಿಯರು ಮತ್ತು ಕೃಷ್ಣನ ನಡುವಿನ ಪ್ರೇಮ ವ್ಯವಹಾರಗಳಿಗೂ ಮತ್ತು ಮಾನವರ ಸಾಧಾರಣ ವಿಷಯಾಸಕ್ತ ವ್ಯವಹಾರಗಳಿಗೂ ಸಾಗರದಷ್ಟು ಅಂತರವಿದೆ. ಅವರು ಕೃಷ್ಣನ ಬಗೆಗಿನ ಗೋಪಿಯರ ಪ್ರೇಮವನ್ನು ಚಿನ್ನಕ್ಕೂ ಮತ್ತು ನಮ್ಮ ಪ್ರೇಮವೆಂಬುದನ್ನು ಕಬ್ಬಿಣಕ್ಕೂ ಹೋಲಿಸಿದ್ದಾರೆ. ಚಿನ್ನಕ್ಕೂ ಕಬ್ಬಿಣಕ್ಕೂ ಅಪಾರ ವ್ಯತ್ಯಾಸವಿರುವಂತೆ, ಕೃಷ್ಣ-ಗೋಪಿಯರ ಪ್ರೇಮ ವ್ಯವಹಾರಗಳಿಗೂ, ಪುರುಷರು ಮತ್ತು ಸ್ತ್ರೀಯರ ಅಥವಾ ತರುಣ ತರುಣಿಯರ ನಡುವಣ ಲೌಕಿಕ, ವಿಷಯಾಸಕ್ತ ವ್ಯವಹಾರಗಳಿಗೂ ಅಪಾರವಾದ ವ್ಯತ್ಯಾಸವಿದೆ. ಪ್ರೇಮ ಮತ್ತು ಕಾಮ ಎಂದೂ ಸಮಾನವಲ್ಲ.

ಆದ್ದರಿಂದ ಕೃಷ್ಣನನ್ನು ಯಥಾರೂಪದಲ್ಲಿ ನಾವು ಅರ್ಥಮಾಡಿಕೊಳ್ಳಬೇಕೆಂದರೆ ನಮ್ಮ ಇಂದ್ರಿಯಗಳನ್ನು ನಾವು ಪರಿಶುದ್ಧಗೊಳಿಸಿಕೊಳ್ಳಬೇಕು. ಅದನ್ನು ಮಾಡಬೇಕಾದರೆ ನಾವು ಜಾಗರೂಕತೆಯಿಂದ ಸೇವೋನ್ಮುಖೇ ಹಿ ಜಿಹ್ವಾದೌ ಸೂತ್ರಗಳನ್ನು ಅನುಸರಿಸಬೇಕು: ಮೊದಲನೆಯದಾಗಿ ಹರೇಕೃಷ್ಣ ಜಪದಲ್ಲಿ ಮಗ್ನರಾಗಿ: ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ/ ಹರೇರಾಮ ಹರೇರಾಮ ರಾಮರಾಮ ಹರೇಹರೇ. ನಿಮ್ಮ ಪ್ರಸ್ತುತ ಇಂದ್ರಿಯಗಳ ಮೂಲಕ ರಾಧಾಕೃಷ್ಣರ ಪ್ರೇಮ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಡಿ. ಆದರೆ ಕೇವಲ ಅವರ ಪವಿತ್ರ ನಾಮಗಳನ್ನು ಜಪಿಸಿ: ಹರೇಕೃಷ್ಣ. ಅನಂತರ ನಿಮ್ಮ ಹೃದಯದ ಕನ್ನಡಿಯ ಮೇಲಿರುವ ಧೂಳು ಸ್ವಚ್ಛವಾದ ಮೇಲೆ, ನೀವು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತೀರಿ.    

ವಂದನೆಗಳು.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು