ಹೊಸ ಚರಿತ್ರೆ ನಿರ್ಮಾಣ

ಭಾರತೀಯ ಜ್ಞಾನಪರಂಪರೆಗೆ ವೇದಮೂರ್ತಿ ದೇವವ್ರತರ ನೆನಪಿನ ದೀವಿಗೆ

– ಮಂಜುನಾಥ್‌.ಇ.ಎ

ವೇದಮೂರ್ತಿ ಮಹೇಶ್‌ ಅವರು ಹತ್ತೊಂಬತ್ತನೇ ವಯೋಮಾನದಲ್ಲಿಯೇ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ವೇದ ಪರಂಪರೆಯಲ್ಲಿಯೇ ಅತ್ಯಂತ ಕಠಿಣವೆಂದು ಪರಿಗಣಿಸಲಾದ 2000 ಮಂತ್ರಗಳನ್ನು ಒಳಗೊಂಡ “ದಂಡಕ್ರಮ ಪಾರಾಯಣ”ವನ್ನು ಯಾವುದೇ ತಪ್ಪಿಲ್ಲದೇ ಕೇವಲ 50 ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ಹೊಸ ಚರಿತ್ರೆ ನಿರ್ಮಿಸಿದ್ದಾರೆ.

ವೇದಮೂರ್ತಿ ದೇವವ್ರತ ಮಹೇಶ ರೇಖೆ ಅವರ ಅಮೋಘ ಸಾಧನೆ ರಾಷ್ಟ್ರದಾದ್ಯಂತ ಕೀರ್ತಿಗಳಿದ್ದು   ನಮ್ಮೆಲ್ಲರಿಗೂ ತಿಳಿದಿದೆ. ವೈದಿಕ ಸಂಪ್ರದಾಯದ ಬಹುತೇಕ ಎಲ್ಲ ಪಾರಿಭಾಷಿಕಪದಗಳು ಮಾಧ್ಯಮಗಳಿಗೆ ಹೊಸದೇ ಆದ್ದರಿಂದ ಸಾಕಷ್ಟು ಅಸ್ಪಷ್ಟತೆಯ ವರದಿಗಳು ಬಿತ್ತರಗೊಂಡಿದ್ದು ಸಹ ಇದೆ.

ಪ್ರಾಯೇಣ ವಿಶಾಲ ಭಾರತೀಯ ಶ್ರೀಸಾಮಾನ್ಯ ಸಮಾಜವು ದೇವವ್ರತ ಅವರ ಅಪರೂಪದ ಸಾಧನೆಯನ್ನು ಮನದುಂಬಿ ಸಂಭ್ರಮಿಸಿತಲ್ಲದೆ ಭಾರತೀಯ ವೈದಿಕ ಸಂಪ್ರದಾಯದಲ್ಲಿ ಹೀಗೊಂದು ಅಧ್ಯಯನ ಕ್ರಮ ಇದೆಯೆಂಬುದು ಇವರ ಮೂಲಕ ಪರಿಚಯವಾಗಿದೆ ಎಂದರೆ ತಪ್ಪಾಗಲಾರದು.

ವೇದಮೂರ್ತಿ ರೇಖೆಯವರು ಯಾವುದೇ ಲಿಖಿತ ಪಾಠದ ಸಹಾಯವಿಲ್ಲದೆ ಶುಕ್ಲಯಜುರ್ವೇದ ಸಂಹಿತೆಯ ಮಧ್ಯಂದಿನ ಶಾಖೆಯ ಅಜಮಾಸು ಎರಡು ಸಾವಿರ ಯಜುಸ್ಸುಗಳನ್ನು (ಮಂತ್ರ) ದಂಡಪಾಠ ಕ್ರಮದಲ್ಲಿ 50 ದಿನಗಳ ಅವಧಿಯಲ್ಲಿ ಸ್ಮೃತಿಯಿಂದಲೇ ಪಾರಾಯಣ ಮಾಡಿದ್ದಾರೆ. ಇವರ ಈ ಸಾಧನೆಯನ್ನು ವೈದಿಕ ಪರಿಷತ್ತುಗಳು, ಆಮ್ನಾಯ ಪೀಠಗಳು, ಪ್ರಧಾನಮಂತ್ರಿ, ನಾನಾ ರಾಜ್ಯದ ಮುಖ್ಯಮಂತ್ರಿಗಳು, ವಿವಿಧ ವಲಯದ ಪ್ರಮುಖರು ಗುರುತಿಸಿ ಅಭಿನಂದಿಸಿದ್ದಾರೆ.

ಮುಂದುವರೆದು, ವೇದಮೂರ್ತಿ ರೇಖೆಯವರು ವೇದಪಾರಾಯಣ ಮಾಡುವ ಹೊತ್ತಿನಲ್ಲಿ ಕೈಚಲನೆ ಮಾಡುತ್ತಿದ್ದದನ್ನು ಎಲ್ಲರೂ ಗಮನಿಸಿದ್ದೇವೆ. ಇದಕ್ಕೂ ಬಹು ಮುಖ್ಯ ಕಾರಣವಿದೆ. ಶುಕ್ಲ ಮತ್ತು ಕೃಷ್ಣ ಎಂಬ ವಿಭಕ್ತವಾದ ಯಜುರ್ವೇದದಲ್ಲಿ ಕೃಷ್ಣಯಜುರ್ವೇದವು ದಕ್ಷಿಣದ ಪರಂಪರೆಯಲ್ಲಿ ಹೆಚ್ಚಾಗಿರುವುದನ್ನು ಗಮನಿಸಿದ್ದೇವೆ.

ಆದರೆ ಉತ್ತರದಲ್ಲಿ ಶುಕ್ಲಯಜುರ್ವೇದಕ್ಕೆ ಹೆಚ್ಚಿನ ಒತ್ತು ಇದೆ. ತ್ರೈಸ್ವರ್ಯ (ಉದಾತ್ತ ಅನುದಾತ್ತ ಮತ್ತು ಸ್ವರಿತವೆನ್ನುವ ಧ್ವನಿ ಪ್ರಕಾರಗಳು) ಎಲ್ಲ ವೇದಕ್ಕೂ ಇದೆಯಾದರೂ ಶುಕ್ಲ ಯಜುರ್ವೇದದ ಪರಂಪರೆಯಲ್ಲಿ ಸ್ವರಗಳನ್ನು ಕಂಠದಿಂದ ಮಾತ್ರ ಹೇಳದೆ ಅದನ್ನು ಕೈ ಚಲನೆಯಿಂದ ತೋರಿಸಲೂ ಬೇಕಾಗುತ್ತದೆ.

ಕಳೆದ ಹಲವು ದಶಕಗಳಿಂದ ಭಾರತೀಯ ಶಿಕ್ಷಣದಲ್ಲಿ ಕಂಠಪಾಠದ ಪ್ರಮಾಣವನ್ನು ಅತ್ಯಂತ ಕಡಿತಗೊಳಿಸಲಾಗಿದೆ. ಆದರೆ ವೇದ ಮತ್ತು ಶಾಸ್ತ್ರಗಳ ಪಾರಂಪರಿಕ ಅಧ್ಯಯನದಲ್ಲಿ ಇವತ್ತಿಗೂ ಕಂಠಪಾಠಕ್ಕೆ ಪ್ರಾಧಾನ್ಯವಿದೆ. ವೇದಾಧ್ಯಯನವು ಕಂಠಪಾಠವಿಲ್ಲದಿದ್ದರೆ ಅದು ಅಸಾಧ್ಯವೇ ಸರಿ. ಈ ಹಿನ್ನೆಲೆಯಲ್ಲಿ ನಾವು ವೇದಪಾಠದ ಪರಿಪಾಠವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಇಷ್ಟರ ಮಧ್ಯೆ ಹಲವರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಇದ್ದು, ಆಧುನಿಕ ತಂತ್ರಜ್ಞಾನ ಯುಗದಲ್ಲಿರುವುದರಿಂದ ನಮ್ಮಲ್ಲಿ ಸಂಗತಿಗಳನ್ನು ಯಥಾವತ್ತಾಗಿ ನೆನಪಿಟ್ಟುಕೊಳ್ಳಬೇಕೆಂದಾಗ ಬಳಸಲಿಕ್ಕೆ ಒದಗಿಸುವಂಥ ಹತ್ತಾರು ಸಾಧನಗಳಿವೆ. ಸ್ಮೃತಿ ಎಂಬುದು ನಮ್ಮ ಕಾಲದಲ್ಲಿ ಮಾನವ ಕೌಶಲವೇನಲ್ಲ- ಹಾಗಿದ್ದರೆ ದೇವವ್ರತ ವೇದಸಾಧನೆಯು ಹೇಗೆ ಭಿನ್ನವೆನಿಸಿಕೊಳ್ಳುತ್ತದೆ? ಎಂಬ ಅರ್ಥದಲ್ಲಿ ಈ ಪ್ರಶ್ನೆಗಳು ಸಾಗಿವೆ.

ವೇದಗಳೆಂದರೆ ಅದು ಮನುಕುಲದ ಅನನ್ಯ ಸಾಹಿತ್ಯರಾಶಿ. ವೇದಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಪಠ್ಯವಸ್ತುಗಳು. ಅಂದರೆ ಓದಲು ಸಾಧ್ಯವಾಗುವ ಲಿಖಿತರೂಪದ ಅಕ್ಷರರಾಶಿ ಎನ್ನಿಕೊಳ್ಳುತ್ತದೆ. ವೇದಗಳಲ್ಲಿ ಮಾತ್ರ ಶ್ರವಣ (ಶುತ್ರಿ) ಮತ್ತು ಅನುವಾದಗಳನ್ನು ಕಾಣಬಹುದು.

ಅನುವಾದವೆಂದರೆ ಇಲ್ಲಿ ಭಾಷಾಂತರವಲ್ಲ, ಬದಲಾಗಿ ಗುರುಗಳು ಹೇಳಿದ್ದನ್ನು ಶಿಷ್ಯನು ಪುನರುಚ್ಚರಿಸುವ ಒಂದು ಅಧ್ಯಯನ ವಿಧಾನ. ಹಾಗಾಗಿ ವೇದಗಳು ಶ್ರವಣ ಮತ್ತು ಅನುವಾದದ ಮೂಲಕವೇ ಉಳಿದು ಬಂದಿರುವ ಸಾಹಿತ್ಯರಾಶಿ. ವೇದವಾಙ್ಮಯದ ಮುದ್ರಿತ ಪುಸ್ತಕಗಳು ಇವತ್ತಿಗೂ ಸಿಗುತ್ತವಾದರೂ ಅವುಗಳಲ್ಲಿ ದನಿ ಇಲ್ಲವಾದ್ದರಿಂದ ವೇದಾಧ್ಯಯನಕ್ಕೆ ಅದರಿಂದ ದೊಡ್ಡ ಪ್ರಯೋಜನವಿಲ್ಲ.

ಶಿಕ್ಷಾ ವೇದಾಂಗದ ಪ್ರಾಮುಖ್ಯತೆ ಏನೆಂದರೆ ವೈದಿಕ ಪದ ಮತ್ತು ವರ್ಣಗಳ ಧ್ವನಿಯ ನಿಖರತೆಯನ್ನು ತಲೆಮಾರುಗಳ ಆಚೆಗೂ ಉಳಿಸಿಕೊಳ್ಳುವುದಾಗಿದೆ. ಇದಲ್ಲದೆ ವಿಕೃತಿಪಾಠಗಳು ವೈದಿಕಪಾಠದ ನಿಖರತೆ ಮತ್ತು ಶುದ್ಧಿಯ ಸಾಧನೆಯೇ ಆಗಿದ್ದು, ವಿಕೃತಿಪಾಠಗಳು ಎಂದು ಕರೆಯಿಸಿಕೊಳ್ಳುವ ಎಂಟು ಬಗೆಯ ವೇದೋಚ್ಛಾರಣ ಪದ್ಧತಿಗಳೂ ಇವೆ.

ಹಾಗೆಯೇ ವೇದಸಾಹಿತ್ಯದಲ್ಲಿ ಪ್ರಕೃತಿಪಾಠ ಹಾಗೂ ವಿಕೃತಿಪಾಠ ಎಂಬ ಎರಡು ಬಗೆಯ ಪರಿಪಾಠಗಳಿವೆ. ಸಂಹಿತಾಭಾಗವನ್ನು ವೇದಸಾಹಿತ್ಯದ ವಿಸ್ತಾರವಾದ ಭಾಗವೆಂದು ಅರ್ಥಮಾಡಿಕೊಂಡರೆ, ಆ ಭಾಗವನ್ನು ಅದಿರುವಂತೆಯೇ ಪಠಿಸುವುದು ಪ್ರಕೃತಿಪಾಠವೆನ್ನಿಸಿಕೊಳ್ಳುತ್ತದೆ. ಸಂಹಿತಾಭಾಗದ ಪದಗಳನ್ನು ಬೇರೆ ಬೇರೆ ಕ್ರಮದಲ್ಲಿ ಮರುಜೋಡಿಸಿ ಪಠಿಸುವುದು ವಿಕೃತಿಪಾಠವೆನ್ನಿಸಿಕೊಳ್ಳುತ್ತದೆ.

ದಂಡಕ್ರಮ ಪಾಠ ಎಂದರೇನು?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಂಟು ಬಗೆಯ ವಿಕೃತಿಪಾಠಗಳ ಪೈಕಿ ವೇದಮೂರ್ತಿ ರೇಖೆಯವರು ಅನುಸರಿಸಿದ್ದು ದಂಡಕ್ರಮವನ್ನು. ಅದರ ಕ್ರಮವನ್ನು ಅರ್ಥಮಾಡಿಕೊಳ್ಳವುದಕ್ಕಾಗಿ ಒಂದು ಮಾದರಿಯನ್ನು ಗಮನಿಸಬಹುದು. ಕ ಖ ಗ ಘ ಙ ಚ ಎಂಬ ಆರು ಪದಗಳ ಒಂದು ವಾಕ್ಯವಿದೆ ಎಂದುಕೊಂಡರೆ ಅದರ ದಂಡವಿಕೃತಿಪಾಠ ಈ ಕೆಳಗಿನಂತಿರುತ್ತದೆ….

1 2 – ಕ ಖ

2 1 – ಖ ಕ

1 2 2 3 – ಕ ಖ ಖ ಗ

3 2 1 – ಗ ಖ ಕ

1 2 2 3 3 4 – ಕ ಖ ಖ ಗ ಗ ಘ

4 3 2 1 – ಘ ಗ ಖ ಕ

1 2 2 3 3 4 4 5 – ಕ ಖ ಖ ಗ ಗ ಘ ಘ ಙ

5 4 3 2 1 – ಙ ಘ ಗ ಖ ಕ

1 2 2 3 3 4 4 5 5 6 – ಕ ಖ ಖ ಗ ಗ ಘ ಘ ಙ ಙ ಚ

6 5 4 3 2 1 – ಚ ಙ ಘ ಗ ಖ ಕ

ಪದಗಳ ಸಂಖ್ಯೆಗೆ ಅನುಗುಣವಾಗಿ ಈ ಸರಣಿಯು ಹೀಗೇ ಮುಂದುವರೆಯುತ್ತದೆ. ವೇದಮೂರ್ತಿ ರೇಖೆಯವರು ಈ ಮಾದರಿಯಲ್ಲಿ ಶುಕ್ಲಯಜುರ್ವೇದದ ಪೂರ್ತಿ ಸಂಹಿತಾಭಾಗವನ್ನು ದಂಡಕ್ರಮದಲ್ಲಿ ಪಾರಾಯಣ ಮಾಡಿರುವುದು.

ಒಂದು ಸರಳ ವಾಕ್ಯವನ್ನು ದಂಡಕ್ರಮದಲ್ಲಿ ಸ್ವರ ಮತ್ತು ಸಂಧಿ ನಿಯಮಗಳಿಲ್ಲದೆ ನಮಗೆ ನಾವೇ ಹೇಳಿಕೊಳ್ಳುವುದು ಎಷ್ಟು ಕಷ್ಟವೆಂದು ಸ್ವತಃ ಪ್ರಯೋಗ ಮಾಡಿ ನೋಡಿದರೆ, ಸ್ವರಸಹಿತವಾಗಿ ಸಂಹಿತಾ ನಿಯಮಗಳನ್ನು ಪಾಲಿಸುತ್ತಾ ಬರಿಯ ನೆನಪಿನಿಂದಲೇ ವೇದಪಾರಾಯಣ ಮಾಡುವುದು ಅದೆಂಥ ಅಧ್ಭುತವೆಂಬುದು ನಮ್ಮ ತರ್ಕಗೆ ನಿಲುಕುತ್ತದೆ.

ಪ್ರಕೃತಿ ಪಾಠ

ವೇದಾಧ್ಯಯನದ ಪ್ರಕೃತಿ ಪಾಠದಲ್ಲಿ (ಅಂದರೆ ಯಥಾವತ್ತಾದ ಪಾಠದಲ್ಲಿ) ಇರುವ ಸಂಧಿ ಮತ್ತು ಸ್ವರಗಳು ವಿಕೃತಿ ಪಾಠದಲ್ಲಿ ಬದಲಾಗುತ್ತವೆ. ಅವುಗಳ ಬದಲಾಣೆಯ ಅರಿವಿಲ್ಲದೆ ವಿಕೃತಿಪಾಠವನ್ನು ಪಾರಾಯಣ ಮಾಡಲಾಗದು. ಅದನ್ನು ಅರಿಯಲು ವ್ಯಾಕರಣದ ಗಂಧವಿರಲೇಬೇಕಾಗುತ್ತದೆ. ಹೀಗಾಗಿ ವೇದಪಾರಾಯಣವು ಬರಿಯ ನೆನಪಿನಶಕ್ತಿಯ ಚಮತ್ಕಾರವಲ್ಲ, ಅದೊಂದು ನಾನಾ ಶಾಸ್ತ್ರೀಯ ಕೋನಗಳ ಏಕತ್ರೀಭವನ.

ವೈದಿಕ ಪರಂಪರೆಯಲ್ಲಿ ನೆನಪಿನ ಶಕ್ತಿಯ ಪ್ರಾಮುಖ್ಯತೆ

ವೇದಾಧ್ಯಯನವು ಒಂದು ಸರಪಣಿಯ ಕೊಂಡಿ ಇದ್ದಂತೆ. ಪಾಠ್ಯವನ್ನು ನೆನಪಿಟ್ಟುಕೊಳ್ಳುವಾಗ ನಮ್ಮ ಮಿದುಳು ಪಠ್ಯಕ್ರಮವನ್ನು ಸರಪಣಿಯಂತೆ ನೆನಪಿಟ್ಟುಕೊಳ್ಳಬೇಕಾಗುತ್ತದೆ. ವಾಕ್ಯಗಳ ಸರಣಿಯಲ್ಲಿ ಹಿಂದು ಮುಂದಿನ ಪದಗಳ ಅಥವಾ ಸಾಲುಗಳ ಆಧಾರದ ಮೇಲೆ ನೆನಪು ಆಧರಿಸಿ ಇರುತ್ತದೆ. ಕಂಠಪಾಠ ಮಾಡಿದ ಪಠ್ಯವನ್ನು ಉಚ್ಚರಿಸುವಾಗ ನಡುವೆ ನೆನಪು ಹಾರಿಹೋದರೆ ಮುಂದಿನ ಪದ ಅಥವಾ ಸಾಲು ನೆನಪಾಗದೆ ಉಳಿಯುತ್ತದೆ.

ನೆನಪಿನ ಶಕ್ತಿ ಹೇಗೆ ಕಾರ್ಯನಿರ್ವಹಿಸುತ್ತದೆ?

ವೇದಾಧ್ಯಯನದಲ್ಲಿ ನೆನಪಿನ ಶಕ್ತಿಗೆ ಅದರದ್ದೇ ಆದ ವಿಶೇಷತೆ ಇದೆ. ಇದನ್ನು ಎರಡು ಬಗೆಯಾಗಿ ಕಾಣಬಹುದು.

  1. ಸೀಕ್ವನ್ಯಿಯಲ್‌ ಮೆಮರಿ/ ಅಸೋಸಿಯೇಟೆವ್‌ ಮೆಮರಿ ಅಥವಾ ಕ್ರಮಸಾಪೇಕ್ಷವಾದ ನೆನಪು. ಇದರ ಅರ್ಥ ಪಠ್ಯವನ್ನು ಉಚ್ಚರಿಸುವಾಗ ಮರೆತುಹೋದ ಪದ ಅಥವಾ ಸಾಲು ಪುನಃ ನೆನಪಾಗುವುದು.
  2. ನಾನ್‌ ಲೀನಿಯರ್‌ ಮೆಮರಿ ಅಥವಾ ಕ್ರಮನಿರಪೇಕ್ಷವಾದ ನೆನಪು. ಅಂದರೆ ಸರಪಣಿಯಂತೆ ಪರಸ್ಪರ ಸಂಬಂಧಿಸಿದ ನೆನಪಾಗಿರದೆ ಪ್ರತಿಯೊಂದು ಪದ ಮತ್ತು ಅನುವಾಕವನ್ನು (ಅನುವಾಕವೆಂದರೆ ಒಂದಿಷ್ಟು ವಾಕ್ಯಗಳ ಗುಂಪು ಎಂದು ಸ್ಥೂಲವಾಗಿ ಅರ್ಥಮಾಡಿಕೊಳ್ಳಬಹುದು) ವೇದ ವಿದ್ಯಾರ್ಥಿಯು ಅದರ ಸಂಖ್ಯೆಯ ಆಧಾರದ ಮೇಲೆ ನೆನಪಿಸಿಕೊಳ್ಳಬಲ್ಲವನಾಗಿರುತ್ತಾನೆ. ಅಂದರೆ ಸಂಖ್ಯೆಯನ್ನು ಕೊಟ್ಟರೆ ಅದಕ್ಕನುಗುಣವಾದ ಮಂತ್ರ ಮತ್ತು ಮಂತ್ರವನ್ನು ಹೇಳಿದರೆ ಅದರ ಸಂಖ್ಯೆಯನ್ನು ಹೇಳ ಬಲ್ಲವಾನಾಗುತ್ತಾನೆ.

ಪರೀಕ್ಷೆಯ ಸ್ವರೂಪ

ನಿರ್ದಿಷ್ಟ ಅನುವಾಕದ ಮಂತ್ರಗಳನ್ನು ತಪ್ಪಿಲ್ಲದೆ ಉಚ್ಚರಿಸುತ್ತ ಪರೀಕ್ಷಾರ್ಥಿಯು ಸರಿಯಾಗಿ 250 ಪದಗಳಿಗೆ ನಿಲ್ಲಿಸಬೇಕು. ಅದಕ್ಕಿಂತ ಒಂದು ಕಡಮೆ ಅಥವಾ ಒಂದು ಹೆಚ್ಚಿಗೆ ಪದವಾದರೂ ಪರೀಕ್ಷೆಯಲ್ಲಿ ಅನುತ್ತೀರ್ಣವಾದಂತೆ. ಪರೀಕ್ಷೆಯಲ್ಲಿ 250ನೆಯ ಪದ ಇಲ್ಲಿಯೇ ನಿಲ್ಲುತ್ತದೆಂಬ ಸುಳಿವನ್ನು ಯಾರೂ ನೀಡುವುದಿಲ್ಲ.

ಪರೀಕ್ಷಾರ್ಥಿಯೇ ಸ್ವತಃ ನಿಲ್ಲಿಸಿ “ಇಲ್ಲಿಗೆ ಇನ್ನೂರೈವತ್ತು ಪದ ಪೂರ್ಣ” ಎಂದು ಹೇಳಬೇಕು. ಅದು ಸರಿಯಿದ್ದರೆ ತೇರ್ಗಡೆ ಇಲ್ಲದಿದ್ದರೆ ನಿಲುಗಡೆ. ಪರೀಕ್ಷಾರ್ಥಿಗೆ ಕಾಂಡ, ಪ್ರಶ್ನ, ಅನುವಾಕ ಮತ್ತು ಅದರಲ್ಲಿನ ವಾಕ್ಯಗಳ ಪರಿಚಯದ ಜೊತೆಗೆ ಪ್ರತಿಯೊಂದು ಪದದ ಪರಿಚಯವಿರಬೇಕಾಗುತ್ತದೆ. ಪದೆವೆಂದರೆ ಏನು, ಮತ್ತು ಅದರ ಸ್ವರೂಪವೇನು ಎನ್ನುವ ಪರಿಜ್ಞಾನವಿಲ್ಲದೆ ಈ ಪರೀಕ್ಷೆಯನ್ನು ಯಾವ ವಿದ್ಯಾರ್ಥಿಯೂ ಕನಸಿನಲ್ಲಿಯೂ ಊಹಿಸಿಕೊಳ್ಳಲಾಗದು.

ದೇವತ್ರರೇಖೆಯವರ ಸಾಧನೆಯು ಸ್ಮೃತಿಶಕ್ತಿಯ ಮಹತ್ತಿನ ಕುರಿತು ಬೆರಗು ಮೂಡಿಸುವುದರ ಜೊತೆಗೆ ಸನಾತನಧರ್ಮ ಪರಂಪರೆಯ ಕುರಿತು ಆಸಕ್ತಿಯನ್ನೂ ಹೆಚ್ಚಿಸಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi