ಡಾರ್ವಿನ್‌ ದೊಡ್ಡ ಅವಿವೇಕಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅತಿಥಿಯಾದ ಮನೋವಿಜ್ಞಾನಿ ಕ್ರಿಶ್ಚಿಯನ್‌ ಹೌಸರ್‌ ನಡುವೆ ಸೆಪ್ಟೆಂಬರ್‌, 1973ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದದ ಮುಂದುವರಿದ ಭಾಗ.

ಶ್ರೀಲ ಪ್ರಭುಪಾದ : ನೊಬೆಲ್‌ ಪ್ರಶಸ್ತಿ ಪಡೆದ ಆ ವಿಜ್ಞಾನಿಯು ನಾಲ್ಕು ರಾಸಾಯನಿಕಗಳಿಂದ ಜೀವ ಬರುತ್ತದೆ ಎಂದು ಹೇಳಿಕೊಂಡರು. ಆದರೆ ಅವರಿಗೆ ಈ ನಾಲ್ಕು ರಾಸಾಯನಿಕಗಳನ್ನು ನೀಡಿ, “ನಿಮಗೆ ಜೀವವನ್ನು ಉತ್ಪಾದಿಸುವುದು ಸಾಧ್ಯವೆ?” ಎಂದು ಕೇಳಿದಾಗ ಅವರಿಗೆ ಆ ಬಗ್ಗೆ ಖಾತ್ರಿ ಇಲ್ಲ, ವಿಶ್ವಾಸವಿಲ್ಲ. ಇದು ವಂಚನೆ.

ಡಾ. ಹೌಸರ್‌ : ಅವರು ಆತುರದ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಮೋಸ ಮಾಡುತ್ತಿಲ್ಲ.

ಶ್ರೀಲ ಪ್ರಭುಪಾದ : ಹೌದು, ಅವರು ಮೋಸ ಮಾಡುತ್ತಿದ್ದಾರೆ. ಏಕೆಂದರೆ ಅವರಿಗೆ ಜೀವವನ್ನು ಉತ್ಪಾದಿಸುವುದು ಸಾಧ್ಯವಿಲ್ಲ. ವಾಸ್ತವವಾಗಿ ಸಾಧ್ಯವಿಲ್ಲ. ಆದರೆ ರಾಸಾಯನಿಕಗಳಿಂದ ಜೀವ ಸೃಷ್ಟಿ ತಮ್ಮಿಂದ ಸಾಧ್ಯವೋ ಎಂಬಂತೆ ಅವರು ಉಪನ್ಯಾಸಗಳನ್ನು ನೀಡುತ್ತಿದ್ದಾರೆ.

ಡಾ. ಹೌಸರ್‌ : ಅವರು ನಿಜವಾದ ಜೀವವನ್ನು ಉತ್ಪಾದಿಸಿಲ್ಲವಾದರೂ ಜೀವದಲ್ಲಿರುವಂತೆ ಕಾಣುವ ಪ್ರೋಟೀನುಗಳನ್ನು ಅವರು ಒಂದುಗೂಡಿಸಿರಬಹುದು.

ಶ್ರೀಲ ಪ್ರಭುಪಾದ : ಆದರೆ ನಾವು ನಿಜ ಜೀವದ ಬಗೆಗೆ ಆಸ್ಥೆಹೊಂದಿದ್ದೇವೆ. ನಾವು ನಿಜ ಜೀವದ ಬಗೆಗೆ ಕಾಳಜಿಹೊಂದಿದ್ದೇವೆ. ಈ ಶ್ರೇಷ್ಠ ವಿಜ್ಞಾನಿಗೆ ನಾನು ಹೇಳುವುದು ಇಷ್ಟು : “ಮಾನವ ಜೀವಿಯಲ್ಲ, ಒಂದು ಸಣ್ಣ ಇರುವೆಯಂತಹ ನಿಜವಾದ ಜೀವಿಯನ್ನಾದರೂ ಉತ್ಪಾದಿಸುವುದು ನಿಮಗೆ ಸಾಧ್ಯವಾದರೆ, ನೀವು ಯಶಸ್ವಿಯಾದಿರೆಂದು ನಾನು ಭಾವಿಸುತ್ತೇನೆ. ಆದರೆ ಅದನ್ನು ನಿಮಗೆ ಮಾಡುವುದು ಸಾಧ್ಯವಿಲ್ಲ. ಆದುದರಿಂದ ಅಸಂಬದ್ಧವಾದುದನ್ನು ಏಕೆ ಮಾತನಾಡುವಿರಿ? `ಈ ನಾಲ್ಕು ರಾಸಾಯನಿಕಗಳಿಂದ ಜೀವ ಉತ್ಪತ್ತಿ.’ ನೀವು ವಂಚಿಸುತ್ತಿರುವಿರಿ.”

“ಅದನ್ನು ನನಗೆ ಹೇಳಲಾಗದು” ಎಂದು ವಿಜ್ಞಾನಿಯು ಏಕೆ ಹೇಳಿಕೊಂಡಿದ್ದು? ಜೀವವು ರಾಸಾಯನಿಕಗಳಿಂದ ಬರುತ್ತದೆ ಎಂಬ ಬಗೆಗೆ ಅವರಿಗೆ ವಿಶ್ವಾಸವಿಲ್ಲ. ಅದರರ್ಥ ವಂಚನೆ. ವಿಜ್ಞಾನಿಗಳೆನಿಸಿಕೊಳ್ಳುವ ಅನೇಕ ಜನರು ಇದನ್ನೇ ಮಾಡುತ್ತಿದ್ದಾರೆ. ಅವರಿಗೆ ತಮ್ಮ ಸಿದ್ಧಾಂತಗಳ ಬಗೆಗೆ ವಿಶ್ವಾಸವಿಲ್ಲದಿದ್ದರೂ ದೀರ್ಘ ಉಪನ್ಯಾಸಗಳನ್ನು ಮಾತ್ರ ನೀಡುತ್ತಾರೆ. ಜನರೆಷ್ಟು ಮೂರ್ಖರೆಂದರೆ ಅವರು ಅದನ್ನು ಕೇಳುತ್ತಲೇ ಇರುತ್ತಾರೆ. ಅಂಧಾ ಯಥಾಂಧೈರ್‌ ಉಪನೀಯಮಾನಾಃ ಅಂಧ ಅನುಯಾಯಿಗಳು ಹಳ್ಳದೊಳಗೆ ಬೀಳಲು ಅಂಧ ನಾಯಕರನ್ನು ಅನುಸರಿಸುತ್ತಿದ್ದಾರೆ.

ಡಾ. ಹೌಸರ್‌ : ಹಮ್‌. ಹೌದು.

ಶ್ರೀಲ ಪ್ರಭುಪಾದ : ಆದರೆ ಈ ವಿಜ್ಞಾನಿಗಳೆನಿಸಿಕೊಳ್ಳುವವರು ಪ್ರತಿಪಾದಿಸುತ್ತಾರೆ, “ನಾವು ರಾಸಾಯನಿಕಗಳಿಂದ ಇನ್ನೂ ಜೀವವನ್ನು ಉತ್ಪಾದಿಸಿಲ್ಲ. ಆದರೆ ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ನಾವು ಅದನ್ನು ಮಾಡುತ್ತೇವೆ.” `ಭವಿಷ್ಯದಲ್ಲಿ’. ಯಾರು ಬೇಕಾದರೂ ಭವಿಷ್ಯದ ಬಗೆಗೆ ಆಶ್ವಾಸನೆ ನೀಡಬಹುದು. ಆದರೆ ನೀವು ಈ ಮಾತನ್ನು ಕೇಳಿರಬಹುದು, “ಎಷ್ಟೇ ಆನಂದಮಯವಾಗಿದ್ದರೂ ಭವಿಷ್ಯವನ್ನು ನಂಬಬೇಡಿ.”

ಭವಿಷ್ಯದಲ್ಲಿ ಜೀವವನ್ನು ಉತ್ಪಾದಿಸುವ ಬಗೆಗೆ ಮಾತನಾಡಲು ಈ ವಿಜ್ಞಾನಿಗಳಿಗೆಷ್ಟು ಧೈರ್ಯ? ರಾಸಾಯನಿಕಗಳಿಂದ ಜೀವವನ್ನು ಸೃಷ್ಟಿಸಿರುವ ಬಗೆಗೆ ಇತಿಹಾಸವಿಲ್ಲ. ಈ ಹಿಂದೆ ಅವರಿಗೆ ಇದನ್ನು ಮಾಡುವುದು ಸಾಧ್ಯವಾಗಿಲ್ಲ. ಪ್ರಸ್ತುತದಲ್ಲಿ ಅವರಿಗೆ ಅದು ಸಾಧ್ಯವಿಲ್ಲ. ಭವಿಷ್ಯದಲ್ಲಿ ಅವರು ಅದನ್ನು ಮಾಡುವರೆಂಬ ಬಗೆಗೆ ಖಾತ್ರಿ ಏನಿದೆ?

ನೀವೇನು ಭಾವಿಸುವಿರಿ? ಜೀವವು ರಾಸಾಯನಿಕಗಳ ಉತ್ಪನ್ನವೆ? ಅಂದರೆ, ಜೀವವು ಕೇವಲ ರಾಸಾಯನಿಕಗಳ ಉತ್ಪನ್ನವೆನ್ನುವಿರಾ?

ಡಾ. ಹೌಸರ್‌ : ಹೌದು, ಅದನ್ನೇ ನನಗೆ ಬೋಧಿಸಿರುವುದು. ಭೂಮಿಯ ವಿಕಸನ ಮತ್ತು ಬದುಕಿನ ವಿವಿಧ ಹಂತಗಳ ಬಗೆಗೆ.

ಶ್ರೀಲ ಪ್ರಭುಪಾದ : ಅದು ವಾಸ್ತವವೆಂದು ಭಾವಿಸುವಿರಾ?

ಡಾ. ಹೌಸರ್‌ : ಅದು ವಾಸ್ತವ ಅಲ್ಲ. ಅದು ಸತ್ಯವೋ ಅಲ್ಲವೋ ನನಗೆ ತಿಳಿಯದು. ನಾನು… ಆದರೆ ಅದನ್ನೇ ನನಗೆ ಬೋಧಿಸಿರುವುದು.

ಶ್ರೀಲ ಪ್ರಭುಪಾದ : ಅಂದರೆ ಪ್ರಸ್ತುತದಲ್ಲಿ ನೀವು ಭ್ರಮೆಗೆ ಒಳಗಾಗಿರುವಿರಿ. ನಿಮಗೆ ವಿಶ್ವಾಸವಿಲ್ಲ, ಆದರೂ ನೀವು ಸಿದ್ಧಾಂತವನ್ನು ಸ್ವೀಕರಿಸುವಿರಿ. ಇದು ಭ್ರಮೆ.

ಡಾ. ಹೌಸರ್‌ : ಆದರೆ… ಹೌದು… ಆದರೆ…

ಶ್ರೀಲ ಪ್ರಭುಪಾದ : ನೀವು ನಿಮ್ಮ ವಿವೇಚನೆಯನ್ನು ಉಪಯೋಗಿಸಬೇಕು. ಪ್ರಾಯೋಗಿಕ ಅನುಭವಗಳಿಂದ ವಸ್ತುವಿನಿಂದ ಜೀವದ ಸೃಷ್ಟಿಯೋ, ಅಥವಾ ಜೀವದಿಂದ ವಸ್ತುವಿನ ಉತ್ಪಾದನೆಯೋ ಎಂದು ನೀವು ಸ್ವಯಂ ಕೇಳಿಕೊಳ್ಳಬೇಕು.

ಜೀವವನ್ನು ವಸ್ತುವಿನಿಂದ ಉತ್ಪಾದಿಸುವುದು ಸಾಧ್ಯವಿಲ್ಲ. ವೇದಾಂತ ಸೂತ್ರದಲ್ಲಿ ಹೇಳಲಾಗಿದೆ, ಜನ್ಮಾದಿ ಅಸ್ಯ ಯತಃ – “ಯಾರಿಂದ ಅಥವಾ ಯಾವುದರಿಂದ ಎಲ್ಲವೂ ಹೊರಹೊಮ್ಮುವುದೋ ಅದೇ ಪರಮ ಸತ್ಯ.” ಈಗ ಹೇಳಿ, ಈ ಪರಮ ಸತ್ಯವು ಜೀವಿಯೋ ಅಥವಾ ನಿರ್ಜೀವ ಬಂಡೆಯೋ? ಶ್ರೀಮದ್‌ ಭಾಗವತವು ನಮಗೆ ಅರುಹುತ್ತದೆ, ಅನ್ವಯಾದ್‌ ಇತರತಸ್‌ ಚಾರ್ಥೇಶ್ವ ಅಭಿಜ್ಞಃ – “ಈ ಪರಮ ಸತ್ಯವು ಜ್ಞಾನ ಉಳ್ಳದ್ದಾಗಿರಬೇಕು.” ಅಭಿಜ್ಞಃ – ಜ್ಞಾನ ಉಳ್ಳದ್ದು. ಬೇರೆ ಮಾತಿನಲ್ಲಿ ಹೇಳುವುದಾದರೆ, “ಈ ಕೊಠಡಿಯೊಳಗಿರುವುದನ್ನೆಲ್ಲ ನಾನು ಸೃಷ್ಟಿಸಿದ್ದು” ಎಂದು ನಾನು ಹೇಳಿದರೆ, ನಾನು ಜ್ಞಾನ ಹೊಂದಿರಬೇಕು ಎಂದು ಅರ್ಥ. ಜ್ಞಾನವು ನಿರ್ಜೀವ ವಸ್ತುವಿನಲ್ಲಿ ನೆಲೆಸುವುದು ಹೇಗೆ ಸಾಧ್ಯ? ಸೃಷ್ಟಿಕರ್ತನು ಜೀವಿಯಾಗಿರಲೇಬೇಕು. ಬದುಕಿನ ಮೂಲವು ಜೀವಿಯಾಗಿರಲೇ ಬೇಕು.

ಜೀವವು ವಸ್ತುವಿನಿಂದ ಬಂತೆಂಬುವುದಕ್ಕೆ ಪುರಾವೆ ಎಲ್ಲಿದೆ? ಚರಿತ್ರೆಯಲ್ಲಿ ಏನಾದರೂ ಪುರಾವೆ ಇದೆಯೆ?

ಡಾ. ಹೌಸರ್‌ : ಇಲ್ಲ. ಆದರೆ ನಮಗೆ ತಿಳಿದಂತೆ, ಜೀವ ವಿಕಸನವು ವಿವಿಧ ಹಂತಗಳಲ್ಲಿ ಸಾಗಿದೆ… ಹೇಗೆ ಹೇಳುವುದು…

ಶ್ರೀಲ ಪ್ರಭುಪಾದ : ಡಾರ್ವಿನ್‌ ಸಿದ್ಧಾಂತ. ನೀವು ಡಾರ್ವಿನ್‌ ಸಿದ್ಧಾಂತವನ್ನು ಪ್ರಸ್ತಾವಿಸುತ್ತಿರುವಿರಾ?

ಡಾ. ಹೌಸರ್‌ : ಹೌದು, ಹೌದು.

ಶ್ರೀಲ ಪ್ರಭುಪಾದ : ಅದೆಲ್ಲ ಅಸಂಬದ್ಧ. ಡಾರ್ವಿನ್‌ ಒಬ್ಬ ಅವಿವೇಕಿ. ಹೌದು, ಮೂರ್ಖ. ಅವರು ಇಡೀ ಜಗತ್ತನ್ನು ಗೊಂದಲಗೊಳಿಸಿದ್ದಾರೆ.

ಡಾ. ಹೌಸರ್‌ : ಹಮ್‌. ಏಕೆ?

ಶ್ರೀಲ ಪ್ರಭುಪಾದ : ವಸ್ತುವಿನ ವಿಕಾಸ ಕುರಿತಂತೆ ಅವರ ಅಭಿಪ್ರಾಯ. ವಸ್ತುವು ವಿಕಸನಗೊಳ್ಳದು. ಅದು ಸಾಧ್ಯವಿಲ್ಲ.

ಡಾ. ಹೌಸರ್‌ : ಆದರೆ ಜೀವ ವಿಕಾಸ…

ಶ್ರೀಲ ಪ್ರಭುಪಾದ : ನಿಮ್ಮ ಪ್ರಕಾರ `ಜೀವ’ ಎಂದರೇನು? ಜೀವವು ವಸ್ತುವಿಗಿಂತ ಭಿನ್ನವಾದುದು. ಜೀವವು ಭಿನ್ನವಾದ ಶಕ್ತಿ – ಆತ್ಮ. ಅದನ್ನೇ ನಾನು ಹೇಳುತ್ತಿರುವುದು. ಜೀವವು ವಸ್ತುವಿನ ಮೂಲ. ಆದುದರಿಂದ ವಿಕಾಸವು ವಸ್ತುವಿನದಲ್ಲ.

ಮೂಲ ಜೀವಿ ಭಗವಂತನು ಈಗಾಗಲೇ ಭೌತಿಕ ವರ್ಗ ಅಥವಾ ರೂಪಗಳ ಈ ಎಲ್ಲ ಅನೇಕ ಹಂತಗಳನ್ನು ಸೃಷ್ಟಿಸಿದ್ದಾನೆ. ಅಮೀಬ, ಇರುವೆ, ಜಿಂಕೆ, ಮಾನವ. ಸರಳವಾಗಿ `ವಿಕಾಸ’ ಎಂದರೆ ಇದು : ಒಮ್ಮೆ, ನಾವು ಜೀವಾತ್ಮಗಳು, ಲೌಕಿಕ ಹಿಡಿತಕ್ಕೆ ಬಿದ್ದರೆ, ಕರ್ಮದ ಅನುಸಾರ, ನಾವು ಹೇಗೆ ವರ್ತಿಸುತ್ತೇವೆಯೋ ಅದಕ್ಕೆ ಸೂಕ್ತವಾದ ರೂಪವನ್ನು ಪ್ರಕೃತಿಯು ನಮಗೆ ನೀಡುತ್ತದೆ.

ನಾಗರಿಕ ಮಾನವನಂತೆ ವರ್ತಿಸಿದರೆ, ನೀವು ಮಾನವ ದೇಹಗಳನ್ನು ಪಡೆಯುತ್ತ ಹೋಗುವಿರಿ. ನಾಯಿ ಅಥವಾ ಹಂದಿಯಂತೆ ವರ್ತಿಸಿ, ನೀವು ನಾಯಿ ಅಥವಾ ಹಂದಿಯ ರೂಪವನ್ನು ಪಡೆಯುವಿರಿ. ಆದರೂ ನೀವು ನಿಮ್ಮನ್ನು ಆ ಕೆಳ ವರ್ಗಗಳ ದರ್ಜೆಗೆ ಇಳಿಸಿಕೊಂಡರೂ, ಭಗವಂತನ ಕೃಪೆ ಮತ್ತು ಪ್ರಕೃತಿಯ ಕಾನೂನಿನಿಂದ, ನೀವು ಸಹಸ್ರಾರು ಹುಟ್ಟು-ಸಾವು, ಜನ್ಮದಿಂದ ಜನ್ಮಕ್ಕೆ, ಸಾವಿರಾರು ವರ್ಗಗಳ ಮೂಲಕ ಮೇಲ್ಮಟ್ಟಕ್ಕೆ, ಅಂತಿಮವಾಗಿ ಮತ್ತೆ ಮಾನವ ರೂಪಕ್ಕೆ `ವಿಕಾಸ’ಗೊಳ್ಳುವಿರಿ.

ಈ ಮಾನವ ರೂಪವು ನಮಗೆ ಲಭಿಸಿರುವ ಅಪರೂಪದ ಅವಕಾಶ. ಈ ಮಾನವ ರೂಪದಲ್ಲಿ ಮಾತ್ರ ನೀವು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲಿರಿ. ಇದು `ವಿಕಾಸ’ದ ನಿಜವಾದ ಅರ್ಥ. ನಿಮ್ಮ ಮೂಲ, ಆಧ್ಯಾತ್ಮಿಕ ರೂಪವನ್ನು ಮರಳಿ ಪಡೆಯಿರಿ. ಮನೆಗೆ ಮರಳಿ, ದೇವೋತ್ತಮನಲ್ಲಿಗೆ ಹಿಂದಿರುಗಿ, ಆಧ್ಯಾತ್ಮಿಕ ಲೋಕಕ್ಕೆ ವಾಪಸಾಗಿ.

ಹೀಗಾಗಿ, ವಸ್ತುವಿನ `ವಿಕಾಸ’ವಲ್ಲ, ಜೀವ, ಆಂತರಿಕ ಆತ್ಮದ ವಿಕಾಸ. ಅದು ಡಾರ್ವಿನ್‌ಗೆ ತಿಳಿದಿರಲಿಲ್ಲ. ಆದುದರಿಂದ ನಾನು ಡಾರ್ವಿನ್‌ನನ್ನು ಅತಿ ದೊಡ್ಡ ಅವಿವೇಕಿ ಎಂದು ಕರೆಯುವೆ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi