ರುಚಿಕರ ಕೋಸಂಬರಿಗಳು

ಕೋಸಂಬರಿಯು ರಾಮ ನವಮಿಯಂದು ಎಲ್ಲೆಡೆಯೂ ಹಂಚುವ ಪ್ರಸಾದವಾಗಿ ಪ್ರಸಿದ್ಧವಾಗಿದೆ. ಕೋಸಂಬರಿಯನ್ನು ತಯಾರಿಸಲು ಹೆಸರುಬೇಳೆ, ಕಡಲೆಬೇಳೆ, ಸೌತೆಕಾಯಿ ಹೀಗೆ ಅನೇಕ ಸಾಮಗ್ರಿಗಳನ್ನು ಬಳಸುತ್ತಾರೆ. ಇದೊಂದು ರುಚಿಕರ ಮತ್ತು ಆರೋಗ್ಯಕರ ಖಾದ್ಯವಾಗಿದ್ದು ಇದನ್ನು ವಿಶೇಷ ಸಂದರ್ಭಗಳಲ್ಲಿ ತಪ್ಪದೇ ತಯಾರಿಸುತ್ತಾರೆ. ಭಕ್ತಿವೇದಾಂತ ದರ್ಶನದ ಓದುಗರಿಗೆ ಈ ಸಂಚಿಕೆಯಲ್ಲಿ ಕೋಸಂಬರಿಗಳನ್ನು ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಹೆಸರುಬೇಳೆ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಹೆಸರುಬೇಳೆ – 1 ಕಪ್‌

ಹಸಿತೆಂಗಿನತುರಿ – 1/2 ಕಪ್‌

ಹಸಿಮೆಣಸಿನಕಾಯಿ – 3

ಕ್ಯಾರೆಟ್‌ ತುರಿ – 1/2 ಕಪ್‌

ಸಾಸಿವೆ – 1/4 ಚಮಚ

ಕರಿಬೇವು – 1 ಎಸಳು

ಇಂಗು – 1 ಚಿಟಿಕೆ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಎಣ್ಣೆ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಮೊದಲು ಹೆಸರು-ಬೇಳೆಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಅನಂತರ ಇದನ್ನು ಬಸಿದು ಹಾಕಬೇಕು. ಎರಡು ಚಮಚ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಕಾಯಲು ಇಡಿ. ಕಾದ ಎಣ್ಣೆಗೆ ಸಾಸಿವೆ ಹಾಕಿ ಅನಂತರ ಇದಕ್ಕೆ ಇಂಗು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದು ಆರಿದ ಅನಂತರ ಇದಕ್ಕೆ ನೀರಿನಲ್ಲಿ ನೆನೆಸಿದ ಹೆಸರುಬೇಳೆ, ಹಸಿತೆಂಗಿನತುರಿ, ಕ್ಯಾರೆಟ್‌ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿದರೆ ಹೆಸರುಬೇಳೆ ಕೋಸಂಬರಿ ಸವಿಯಲು ಸಿದ್ಧ. ಬೇಕಿದ್ದರೆ ಇದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಸೇರಿಸಬಹುದು.

ಹೆಸರುಕಾಳು ಕೋಸಂಬರಿ

ಬೇಕಾಗುವ ಪದಾರ್ಥಗಳು :

ಮೊಳಕೆ ಬಂದ ಹೆಸರುಕಾಳು – 2 ಕಪ್‌

ಹಸಿತೆಂಗಿನ ತುರಿ – 1/2 ಕಪ್‌

ಹಸಿಮೆಣಸಿನಕಾಯಿ – 4

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹೆಸರುಕಾಳನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಇದನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಳ ಮುಚ್ಚಿ ಒಂದು ದಿನ ಹಾಗೆಯೇ ಇಡಿ. ಮಾರನೆಯ ದಿನ ಚೆನ್ನಾಗಿ ಮೊಳಕೆ ಬಂದ ಕಾಳುಗಳಿಗೆ ಕಾಯಿತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿದರೆ ಹೆಸರುಕಾಳು ಕೋಸಂಬರಿ ಸವಿಯಲು ಸಿದ್ಧ. ಇದು ತಿನ್ನಲು ತುಂಬ ರುಚಿಯಾಗಿರುತ್ತದೆ ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು.

ತರಕಾರಿ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಕ್ಯಾರೆಟ್‌ ತುರಿ – 1 ಕಪ್‌

ಬೀಟ್‌ರೂಟ್‌ ತುರಿ – 1 ಕಪ್‌

ಎಳೆ ಸೌತೆಕಾಯಿ – 1

ಸೀಮೆ ಬದನೆಕಾಯಿ ತುರಿ – 1/2 ಕಪ್‌

ಹಸಿ ತೆಂಗಿನ ತುರಿ – 1 ಕಪ್‌

ಹಸಿಮೆಣಸಿನಕಾಯಿ – 5

ಹಸಿಶುಂಠಿ – 1 ಚೂರು

ಕರಿಬೇವು – 1 ಎಸಳು

ಸಾಸಿವೆ – 1/4 ಚಮಚ

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಎಣ್ಣೆ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಸೌತೆಕಾಯಿಯ ಸಿಪ್ಪೆ ತೆಗೆದು ಶುಂಠಿ ಮತ್ತು ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ಬಿಸಿಮಾಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಶುಂಠಿ, ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿ. ಅನಂತರ ಇದಕ್ಕೆ ತುರಿದ ಕ್ಯಾರೆಟ್‌, ಬೀಟ್‌ರೂಟ್‌, ಸೀಮೆಬದನೆಕಾಯಿ, ಹೆಚ್ಚಿದ ಸೌತೆಕಾಯಿ, ತೆಂಗಿನತುರಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿದರೆ ತರಕಾರಿ ಕೋಸಂಬರಿ ತಿನ್ನಲು ಸಿದ್ಧ. ಊಟಕ್ಕೆ ತರಕಾರಿ ಕೋಸಂಬರಿ ಒಂದು ಆಕರ್ಷಣೆ, ಇದು ಚಪಾತಿ ಜೊತೆ ತಿನ್ನಲು ರುಚಿಯಾಗಿರುತ್ತದೆ.

ಸ್ವೀಟ್‌ ಕಾರ್ನ್‌ ಮತ್ತು ದಾಳಿಂಬೆ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಸ್ವೀಟ್‌ ಕಾರ್ನ್‌ – 1 ಕಪ್‌

ಬಿಡಿಸಿದ ದಾಳಿಂಬೆ – 1/2 ಕಪ್‌

ಕರಿಮೆಣಸಿನ ಪುಡಿ – 1/4 ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಒಂದು ಬಟ್ಟಲಿಗೆ ಸ್ವೀಟ್‌ ಕಾರ್ನ್‌, ದಾಳಿಂಬೆ, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನಪುಡಿ ಹಾಕಿ ಮಿಕ್ಸ್‌ ಮಾಡಿದರೆ ರುಚಿಯಾದ ಸ್ವೀಟ್‌ ಕಾರ್ನ್‌, ದಾಳಿಂಬೆ ಕೋಸಂಬರಿ ಸವಿಯಲು ಸಿದ್ಧ. ಬೇಕಿದ್ದರೆ ಇದಕ್ಕೆ ತುರಿದ ಕ್ಯಾರೆಟ್‌ಅನ್ನು ಸೇರಿಸಬಹುದು.

ಸೌತೆಕಾಯಿ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಎಳೆ ಸೌತೆಕಾಯಿ – 2

ಹಸಿ ತೆಂಗಿನ ತುರಿ – 1/2 ಕಪ್‌

ಸಾಸಿವೆ – 1/4 ಚಮಚ

ಕರಿಬೇವು – 1 ಎಸಳು

ಒಣಮೆಣಸಿನಕಾಯಿ – 2

ಕೊತ್ತಂಬರಿಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 2 ಚಮಚ

ಮಾಡುವ ವಿಧಾನ: ಮೊದಲು ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಇದಕ್ಕೆ ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಬಾಡಿಸಿ. ಆರಿದ ಅನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಹಸಿತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿದರೆ ಸೌತೆಕಾಯಿ ಕೋಸಂಬರಿ ತಿನ್ನಲು ಸಿದ್ಧ.

ಈ ಲೇಖನ ಶೇರ್ ಮಾಡಿ