ರೋಲ್ ಎಂದರೆ ಒಳಗಡೆ ಸ್ಟಫಿಂಗ್ ತುಂಬಿ ಸುರುಳಿ ಸುತ್ತಿ ಮಾಡಿರುವ ತೆಳ್ಳಗಿನ ರೊಟ್ಟಿ. ಸ್ಟಫಿಂಗ್‌ಗೆ ಬೇರೆ ಬೇರೆ ತರಹದ ಪದಾರ್ಥಗಳನ್ನು ಬಳಸಿ ಮಾಡಬಹುದು. ರೋಲ್‌ಗೆ ಬಳಸುವ ತೆಳ್ಳಗೆ ಲಟ್ಟಿಸಿದ ಮೈದಾ ಪದರಗಳು ಸೂಪರ್ ಮಾರ್ಕೆಟ್‌ಗಳಲ್ಲಿ ಸಾಮಾನ್ಯವಾಗಿ ಸಿಗುತ್ತವೆ. ಇಲ್ಲವೇ ಈ ಪದರಗಳನ್ನು ಮನೆಯಲ್ಲೇ ತಯಾರಿಸಬಹುದು. ಇದನ್ನು ಮೈದಾ ಅಥವಾ ಗೋಧಿ ಹಿಟ್ಟಿನಿಂದ ತಯಾರಿಸಬಹುದು. ಈ ಕ್ರಿಸ್ಪಿ ರೋಲ್‌ಗಳನ್ನು ಮಕ್ಕಳ ಊಟದ ಡಬ್ಬಿಗೆ ಹಾಕಿಕೊಟ್ಟರೆ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಇದೇ ಸ್ಟಫಿಂಗ್ ಅನ್ನು ಚಪಾತಿ ಒಳಗೆ ಹಾಕಿ ರೋಲ್ ಮಾಡಿ ಅದನ್ನು ಸಿಲ್ವರ್ ಫಾಯಿಲ್‌ನಲ್ಲಿ ಸುತ್ತಿದರೆ ಚಪಾತಿ ರೋಲ್ ಸಿದ್ಧ. ಇಲ್ಲಿ ರುಚಿಕರ ರೋಲ್‌ಗಳನ್ನು ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಇವೆಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ವೆಜಿಟೆಬಲ್ ರೋಲ್
ಬೇಕಾಗುವ ಪದಾರ್ಥಗಳು :
ಸ್ಟಫಿಂಗ್‌ಗೆ –
ತೆಳ್ಳಗೆ ಉದ್ದುದ್ದವಾಗಿ ಹೆಚ್ಚಿದ:
ಕ್ಯಾಬೆಜ್ – 1 ಕಪ್
ಕ್ಯಾರೆಟ್ – 1 ಕಪ್
ಬೀನ್ಸ್ – 1/2 ಕಪ್
ಹಸಿಮೆಣಸಿನಕಾಯಿ – 3
ಕೊತ್ತಂಬರಿ ಸೊಪ್ಪು – ಸ್ವಲ್ಪ
ಚಿಲ್ಲಿ ಪೌಡರ್ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ರೋಲ್ ಮಾಡುವ ವಿಧಾನ (ಪದರಗಳು):
ಮೈದಾ – 2 ಕಪ್
ಉಪ್ಪು – 2 ಚಿಟಿಕೆ
ಮೈದಾಹಿಟ್ಟಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟನ್ನು 30 ನಿಮಿಷ ನೆನೆಯಲು ಬಿಡಿ. ಅನಂತರ ಇದರಿಂದ ಒಂದೇ ಗಾತ್ರದ ಉಂಡೆಗಳನ್ನು ಮಾಡಿಕೊಂಡು ತೆಳುವಾದ ಪದರಗಳನ್ನು ಲಟ್ಟಿಸಿ. ಲಟ್ಟಿಸುವಾಗ ಮೈದಾವನ್ನು ಎಷ್ಟು ಬೇಕಾದರು ಬಳಸಿ. ಹೀಗೆ ಮಾಡಿದರೆ ರೋಲ್‌ಗಳು ಗರಿಗರಿಯಾಗಿ ಇರುತ್ತದೆ.
ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ಕತ್ತರಿಸಿದ ತರಕಾರಿಗಳನ್ನು ಹಾಕಿ ಬಾಡಿಸಿಕೊಳ್ಳಿ. ಸ್ವಲ್ಪ ಬೆಂದ ಅನಂತರ ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಚಿಲ್ಲಿ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಇಳಿಸಿದರೆ ಸ್ಟಫಿಂಗ್ ಸಿದ್ಧ. ಇದು ಸ್ವಲ್ಪ ಆರಿ ತಣ್ಣಗಾದ ಮೇಲೆ ತೆಳುವಾಗಿ ಲಟ್ಟಿಸಿರುವ ಪದರದ ಒಳಗೆ ಮೂರು ಚಮಚ ತರಕಾರಿ ಮಿಶ್ರಣವನ್ನು ಹಾಕಿ ಸುರುಳಿ ಸುತ್ತಿ. ಸುರುಳಿಯ ಪಕ್ಕದ ಎರಡು ಕೊನೆಗಳನ್ನು ಒಳಗೆ ಬರುವಂತೆ ಮಡಚಿ ಪ್ರೆಸ್ ಮಾಡಿ. ಒಂದು ಚಮಚದಷ್ಟು ಮೈದಾಹಿಟ್ಟನ್ನು ಸ್ವಲ್ಪ ನೀರಿನೊಂದಿಗೆ ಕಲೆಸಿ ದಪ್ಪಗೆ ಪೇಸ್ಟ್‌ನಂತೆ ಮಾಡಿಕೊಳ್ಳಿ. ಅಂಚುಗಳಿಗೆ ಮೈದಾ ಪೇಸ್ಟ್ ಸವರಿಕೊಂಡು ಪೂರ್ತಿ ಸುರುಳಿ ಸುತ್ತಿ ಕೊನೆಗಳನ್ನು ಒತ್ತಿ. ಅನಂತರ ಎಣ್ಣೆಯನ್ನು ಹದವಾಗಿ ಕಾಯಿಸಿ ವೆಜಿಟೆಬಲ್ ರೋಲ್‌ಗಳನ್ನು ಮುಕ್ಕಾಲು ಭಾಗ ಕರಿದು, ಎಣ್ಣೆಯಿಂದ ತೆಗೆದು, ತಣ್ಣಗಾದ ಅನಂತರ ಪುನಃ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಹೀಗೆ ಮಾಡುವುದರಿಂದ ರೋಲ್ ಗರಿ ಗರಿಯಾಗುವುದಲ್ಲದೆ ಒಳ್ಳೆಯ ಬಣ್ಣವು ಬರುತ್ತದೆ. ಕರಿದ ರೋಲ್‌ಗಳನ್ನು ಒಂದು ಟಿಶ್ಯೂ ಪೇಪರ್ ಮೇಲೆ ಹಾಕಿ ಎಣ್ಣೆ ಹೀರುವಂತೆ ಮಾಡಿ. ಇದನ್ನು ಬಿಸಿಯಿರುವಾಗಲೇ ಪುದೀನಾ ಚಟ್ನಿಯೊಂದಿಗೆ ಸವಿಯಿರಿ.
ಡೇಟ್ಸ್ ಅಂಡ್ ನಟ್ಸ್‌ರೋಲ್
ಬೇಕಾಗುವ ಪದಾರ್ಥಗಳು :
ಸಣ್ಣದಾಗಿ ಕತ್ತರಿಸಿದ ಹಸಿ ಖರ್ಜೂರ – 1 ಕಪ್
ಗೋಡಂಬಿ ಚೂರು – 1/4 ಕಪ್
ಬಾದಾಮಿ ಚೂರು – 1/4 ಕಪ್
ಒಣಕೊಬ್ಬರಿ ತುರಿ – 1/4 ಕಪ್
ಏಲಕ್ಕಿಪುಡಿ – 1/2 ಚಮಚ
ಬ್ರೆಡ್ ಕ್ರಮ್ಸ್ – 6 ಚಮಚ
ಮಾಡುವ ವಿಧಾನ : ಕತ್ತರಿಸಿದ ಖರ್ಜೂರ, ಗೋಡಂಬಿ ಚೂರು, ಬಾದಾಮಿ ಚೂರು, ಕೊಬ್ಬರಿ ತುರಿ, ಏಲಕ್ಕಿಪುಡಿ, ಬ್ರೆಡ್‌ಕ್ರಮ್ಸ್, ಎಲ್ಲವನ್ನು ಚೆನ್ನಾಗಿ ಕಲೆಸಿಕೊಳ್ಳಿ. ಕಲೆಸಿದ ಮಿಶ್ರಣವನ್ನು ಲಟ್ಟಿಸಿದ ಮೈದಾ ಪದರವನ್ನು ತೆಗೆದುಕೊಂಡು ಅದರ ಅಂಚಿನಲ್ಲಿ 3 ಚಮಚ ಕಲೆಸಿದ ಮಿಶ್ರಣವನ್ನು ಹಾಕಿ ಸುರುಳಿ ಸುತ್ತಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ರುಚಿಯಾದ ಡೇಟ್ಸ್ ಅಂಡ್ ನಟ್ಸ್ ರೋಲ್ ಸಿದ್ಧ. ಇದನ್ನು ಆರಿದ ಮೇಲೆ ಸವಿಯಿರಿ.
ಬ್ರೆಡ್ ರೋಲ್
ಬೇಕಾಗುವ ಪದಾರ್ಥಗಳು :
ಬ್ರೆಡ್ ಸ್ಲೈಸ್ – 8
ಬೇಯಿಸಿದ ಆಲೂಗಡ್ಡೆ – 3
ಹಸಿಮೆಣಸಿನಕಾಯಿ – 4
ಕೊತ್ತಂಬರಿ ಸೊಪ್ಪು – ಸ್ವಲ್ಪ
ಟೊಮೆಟೊ ಸಾಸ್ – 1/2 ಚಮಚ
ಸಕ್ಕರೆ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಪುಡಿಮಾಡಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಟೊಮೆಟೊ ಸಾಸ್, ಸಕ್ಕರೆ, ಉಪ್ಪು ಹಾಕಿ ಕಲೆಸಿ, ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಬ್ರೆಡ್ ಸ್ಲೈಸ್‌ನ ಅಂಚನ್ನು ತೆಗೆದು ಬಿಳಿಭಾಗವನ್ನು ಮಾತ್ರ ಉಳಿಸಿಕೊಳ್ಳಿ. ಬ್ರೆಡ್ ಸ್ಲೈಸ್ ಅನ್ನು ನೀರಿನಲ್ಲಿ ಅದ್ದಿ, ಕೈಯಿಂದ ನೀರನ್ನು ಒತ್ತಿ ತೆಗೆದು ಅದರಲ್ಲಿ ಆಲೂಗಡ್ಡೆ ಮಿಶ್ರಣವನ್ನು ತುಂಬಿ ರೋಲ್ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದರೆ ರುಚಿಯಾದ ಬ್ರೆಡ್ ರೋಲ್ ಸವಿಯಲು ಸಿದ್ಧ.
ಪನ್ನೀರ್ ಕ್ಯಾಪ್ಸಿಕಂ ರೋಲ್
ಬೇಕಾಗುವ ಪದಾರ್ಥಗಳು :
ಪನ್ನೀರ್ – 1 ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1/2 ಕಪ್
ಚಿಲ್ಲಿ ಪೌಡರ್ – 1 ಚಮಚ
ಧನಿಯಾ ಪೌಡರ್ – 1/2 ಚಮಚ
ಗರಂ ಮಸಾಲ – 1/4 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ಅನಂತರ ಇದಕ್ಕೆ ಪುಡಿ ಮಾಡಿದ ಪನ್ನೀರ್, ಚಿಲ್ಲಿ ಪೌಡರ್, ಧನಿಯಾ ಪೌಡರ್, ಗರಂಮಸಾಲ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೆಳಗಿಳಿಸಿ. ಆರಿದ ಅನಂತರ ಇದನ್ನು ಮೈದಾ ಪದರದ ಮೇಲೆ ಹರಡಿ ಸುರುಳಿ ಸುತ್ತಿ ಅಂಚನ್ನು ಸರಿಯಾಗಿ ಒತ್ತಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ರುಚಿಯಾದ ಪನ್ನೀರ್, ಕ್ಯಾಪ್ಸಿಕಂ ರೋಲ್ ಸಿದ್ಧ. ಇದನ್ನು ಟೊಮೆಟೊ ಸಾಸ್ ಜೊತೆ ಸವಿಯಬಹುದು.
ಸೋಯಾ ರೋಲ್
ಬೇಕಾಗುವ ಪದಾರ್ಥಗಳು :
ಸೋಯಾ ಫ್ಲೇಕ್ಸ್ – 1 ಕಪ್
ಶುಂಠಿ ಪೇಸ್ಟ್ – 1/4 ಚಮಚ
ಹಸಿಮೆಣಸಿನಕಾಯಿ – 3
ಚಿಲ್ಲಿ ಪೌಡರ್ – 1/2 ಚಮಚ
ಧನಿಯಾ ಪೌಡರ್ – 1/2 ಚಮಚ
ಗರಂ ಮಸಾಲ – 1/2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಮೊದಲು ಸೋಯಾ ಫ್ಲೇಕ್ಸ್ ಅನ್ನು ಚೆನ್ನಾಗಿ ತೊಳೆದು ಅದನ್ನು ಕುಕ್ಕರಿನಲ್ಲಿ ಸ್ವಲ್ಪ ನೀರು, ಉಪ್ಪು ಹಾಕಿ ಎರಡು ಸೀಟಿ ಬರುವಂತೆ ಬೇಯಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಬಿಸಿಮಾಡಿ. ಕಾದ ಎಣ್ಣೆಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್ ಹಾಕಿ ಬಾಡಿಸಿ. ಅನಂತರ ಚಿಲ್ಲಿ ಪೌಡರ್, ಧನಿಯಾ ಪೌಡರ್, ಗರಂಮಸಾಲ ಸೇರಿಸಿ. ಬೇಯಿಸಿದ ಸೋಯಾ ಫ್ಲೇಕ್ಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಬೇಯಿಸಿ. ಕೊನೆಯದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ. ತಣ್ಣಗಾಗಲು ಬಿಡಿ. ಆರಿದ ಅನಂತರ ಇದನ್ನು ಲಟ್ಟಿಸಿದ ಮೈದಾ ಪದರದ ಮೇಲೆ ಹರಡಿ ಸುರುಳಿ ಸುತ್ತಿ ಕಾದ ಎಣ್ಣೆಯಲ್ಲಿ ಬೇಯಿಸಿದರೆ ರುಚಿಯಾದ ಸೋಯಾಫ್ಲೇಕ್ಸ್ ರೋಲ್ ತಿನ್ನಲು ಸಿದ್ಧ. ಇದನ್ನು ಚಿಲ್ಲಿ ಮತ್ತು ಟೊಮೆಟೊ ಸಾಸ್‌ನೊಂದಿಗೆ ಸವಿಯಬಹುದು. ಇದು ಸ್ವಲ್ಪ ಖಾರವಾಗಿದ್ದರೆ ತಿನ್ನಲು ತುಂಬ ಚೆನ್ನಾಗಿರುತ್ತದೆ.