– ಆಂಗ್ಲಮೂಲ: ಕೃಪಾಕರ ದಾಸ, ಅನುವಾದ: ಗಾಯತ್ರಿ
ಶ್ರೀ ಚೈತನ್ಯ ಮಹಾಪ್ರಭುಗಳಿಂದ ಬೋಧಿಸಲ್ಪಟ್ಟ ಯೋಗವು ಹಾಡುವ, ವರ್ತಿಸುವ, ರುಚಿಯಾದ ಆಹಾರಗಳನ್ನು ಸೇವಿಸುವ ಪ್ರಕ್ರಿಯೆಯಷ್ಟೆ ಸುಲಭವಾದುದಾಗಿದೆ.

ಇತ್ತೀಚಿನ ದಿನಗಳಲ್ಲಿ ಜನರು ಯೋಗದ ಬಗ್ಗೆ ಯೋಚಿಸುವಾಗಲೆಲ್ಲ ಸಾಮಾನ್ಯವಾಗಿ ಉದ್ದ ಕೂದಲಿನ ಅರೆನಗ್ನ ಯೋಗಿಗಳು ಹಿಮಾಲಯ ಶ್ರೇಣಿಗಳಲ್ಲಿ ಪದ್ಮಾಸನದಲ್ಲಿ ಕುಳಿತಿರುವುದನ್ನು ಮನಸ್ಸಿಗೆ ತಂದುಕೊಳ್ಳುತ್ತಾರೆ. ಅಥವಾ ತಮಗೆ ಚಿರಪರಿಚಿತವಿರುವ ವಿವಿಧ ಭಾವಭಂಗಿಗಳ ಮೂಲಕ ದೇಹದ ಮೇಲೆ ನಿಯಂತ್ರಣ ಸಾಧಿಸುತ್ತಿರುವ ವ್ಯಕ್ತಿಗಳ ಹಠಯೋಗ ಚಿತ್ರ ಶಾಲೆಯಲ್ಲಿ ಇರಬಹುದಾದ೦ದ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ.
ಈ ಜನಪ್ರಿಯ ಚಿತ್ರಣಗಳು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನ ಗೆಳೆಯ ಮತ್ತು ಶಿಷ್ಯನಾದ ಅರ್ಜುನನಿಗೆ ಉಪದೇಶಿಸುವ ವಿವಿಧ ಯೋಗ ಪದ್ಧತಿಗಳಿಗೆ ಬಹಳ ದೂರವಾಗಿದೆ.
“ಯೋಗ” ಅಂದರೆ ಭಗವಂತನೊಡನೆ ಸಂಪರ್ಕ ಸಾಧಿಸುವುದು ಎಂದರ್ಥ. ಹೀಗೆ ಭಗವದ್ಗೀತೆಯಲ್ಲಿ ಯೋಗದ ವಿವಿಧ ಪದ್ಧತಿಗಳ ಬಗ್ಗೆ ಹೇಳಿರುವ ಶ್ರೀಕೃಷ್ಣನ ಉದ್ದೇಶವು ಅರ್ಜುನನಿಗೆ, ಹೇಗೆ ವಿವಿಧ ರೀತಿಯ ಯೋಗ ಮಾರ್ಗಗಳ ಮೂಲಕ ಯೋಗಿಗಳು ತನ್ನನ್ನು ಹೊಂದಲು ಯತ್ನಿಸುತ್ತಿದ್ದಾರೆ ಎಂದು ತೋರಿಸುವುದೇ ಆಗಿದೆ. ಇಲ್ಲಿ ಕೃಷ್ಣನು ನಾಲ್ಕು ಬಗೆಯ ಯೋಗಗಳನ್ನು ಕುರಿತು ವಿವರಿಸಿದ್ದಾನೆ. ಅವು ಕರ್ಮಯೋಗ, ಜ್ಞಾನಯೋಗ, ಧ್ಯಾನಯೋಗ ಮತ್ತು ಭಕ್ತಿಯೋಗ.
ಪ್ರಾಥಮಿಕವಾಗಿ ಎಲ್ಲ ಯೋಗಿಗಳು ಈ ವಿಶ್ವದಲ್ಲಿ ನಡೆಯುವ ಎಲ್ಲ ಕ್ರಿಯೆಗಳು ವ್ಯಕ್ತಿಯನ್ನು ಭೌತಿಕ ಜಗತ್ತಿನಲ್ಲಿ ಬಂಧಿಯಾಗಿರಿಸುವ ಪ್ರಕ್ರಿಯೆಗೆ ಈಡುಮಾಡುತ್ತದೆ ಎಂದು ಅರಿತಿರುತ್ತಾರೆ. ಪ್ರತಿಯೊಂದು ಯೋಗ ಪದ್ಧತಿಯೂ ಸಾಧಕನನ್ನು ಕರ್ಮದಿಂದ ಮುಕ್ತಗೊಳಿಸಿ (ಪರಮ ಪುರುಷನ ಬಗ್ಗೆ ಅರಿವು ಹೊಂದಬಹುದಾದ) ಅಲೌಕಿಕ ಸಾಮ್ರಾಜ್ಯಕ್ಕೆ ಪ್ರವೇಶ ದೊರಕಿಸಿಕೊಡುತ್ತದೆ.
ಕರ್ಮಯೋಗವು ಈ ಜಗತ್ತಿನಲ್ಲಿ ಸಾಧಾರಣ ಕೆಲಸಗಳನ್ನು ಮಾಡಿಕೊಂಡು ಅದರ ಫಲವನ್ನು ದೇವೋತ್ತಮನಿಗೆ ಅರ್ಪಿಸುವ ಪರಂಪರೆಯನ್ನು ಹೊಂದಿದೆ. ಈ ರೀತಿಯಲ್ಲಿ ಪರಮ ಪುರುಷನಿಗಾಗಿ ಕೆಲಸಗಳನ್ನು ಮಾಡುವುದರಿಂದ, ವ್ಯಕ್ತಿಯು ತಾನು ಮಾಡುವ ಕೆಲಸದ ಪ್ರತಿಕ್ರಿಯೆಯಿಂದ ಮುಕ್ತನಾಗುತ್ತಾನೆ ಮತ್ತು ಈ ರೀತಿಯ ಸ್ವಾರ್ಥರಹಿತ ಕಾರ್ಯಗಳಿಂದ ಆತನು ಪರಿಶುದ್ಧನಾಗಿ ನಿಜವಾದ ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಳ್ಳುತ್ತಾನೆ.
ಆಧ್ಯಾತ್ಮಿಕ ಜ್ಞಾನವನ್ನು ಬಿತ್ತುವ ಕ್ರಿಯೆಯು ‘ಜ್ಞಾನಯೋಗ’ ಎಂದು ಕರೆಯಲ್ಪಡುತ್ತದೆ, ಜ್ಞಾನ ಯೋಗಿಯು, ಭೌತಿಕ ಪರಿಣಾಮಗಳಿಗಾಗಿ ಮಾಡುವ ಕೆಲಸಗಳ ನಿರರ್ಥಕತೆಯನ್ನು ಅರಿತು, ತನ್ನನ್ನು ತಾನು ವೇದಾಂತ, ಇಲ್ಲವೇ ಪರಿಪೂರ್ಣ ಸತ್ಯದ ಬಗೆಗಿನ ವೈದಿಕ ತತ್ತ್ವಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಧ್ಯಾನಯೋಗವು ಒಂದು ಯಾಂತ್ರಿಕ ಪ್ರಕ್ರಿಯೆಯಾಗಿದ್ದು, ಎಂಟು ಹಂತಗಳಲ್ಲಿ ವಿಭಜಿತವಾಗಿದೆ. ಇದು ಹೃದಯದಲ್ಲಿ ನೆಲೆಯಾಗಿರುವ ಭಗವಂತನಲ್ಲಿ ಏಕಾಗ್ರತೆಯನ್ನು ಸಾಧಿಸಲು ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವ ಮೂಲಕ ಸಹಕರಿಸುತ್ತದೆ. ಸಾಮಾನ್ಯವಾಗಿ ಜನರು ಯೋಗದೊಡನೆ ಸಮೀಕರಿಸುವ ದೈಹಿಕ ವ್ಯಾಯಾಮಗಳು ಇತ್ತೀಚಿನ ದಿನಗಳಲ್ಲಿ ಅಭ್ಯಸಿಸಲು ದುಷ್ಕರವಾದ ಧ್ಯಾನಯೋಗದ ಒಂದು ಭಾಗ ಮಾತ್ರವಾಗಿದೆ.
ನಾವು ನಮ್ಮ ಉದ್ದನೆಯ ಕೂದಲು ಗಡ್ಡಗಳ ಮೂಲಕ ಆಧ್ಯಾತ್ಮಿಕ ಪುರುಷ ಎಂದು ತೋರಿಸಿಕೊಳ್ಳಬಹುದು, ಅಥವಾ ನಾವು ಯೋಗಿಕ ವ್ಯಾಯಾಮಗಳಿಂದ ದೃಢತೆಯನ್ನು ಸಾಧಿಸಬಹುದು. ಆದರೆ ಉಸಿರಿನ ಮೇಲಿನ ನಿಯಂತ್ರಣ ಮತ್ತು ಯೌಗಿಕ ಪ್ರದರ್ಶನಗಳ ಮಾತ್ರದಿಂದಲೇ ಯೋಗದ ಗುರಿಯನ್ನು ತಲಪಲು ಸಾಧ್ಯವಾಗುವುದಿಲ್ಲ.
ಇಂದಿನ ದಿನಗಳಲ್ಲಿ ಯೋಗವನ್ನು ಅಭ್ಯಸಿಸುವ ಬಹುತೇಕ ಜನರಿಗೆ ಆಧ್ಯಾತ್ಮಿಕ ಪ್ರಗತಿ ಸಾಧಿಸುವ ಉದ್ದೇಶವಿರುವುದಿಲ್ಲ. ಅವರು ಕೇವಲ ತಮ್ಮ ಆರೋಗ್ಯ ಮತ್ತು ಲೈಂಗಿಕ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಬಯಸುತ್ತಾರೆ. ಮತ್ತು ಒಬ್ಬವ್ಯಕ್ತಿಯು ಪ್ರಾಮಾಣಿಕವಾಗಿದ್ದರೂ ಇಂದಿನ ಯುಗದಲ್ಲಿ ಅತಿಕಡಿಮೆ ಅವಧಿಯಲ್ಲಿ ಧ್ಯಾನವನ್ನು ಸಾಧಿಸುವುದು ಅತ್ಯಂತ ಕಠಿಣವೆ೦ದೆನಿಸುತ್ತದೆ.
ನಿಜವಾಗಿಯೂ ಧ್ಯಾನಯೋಗವನ್ನು ಅಭ್ಯಸಿಸಬಯಸುವ ವ್ಯಕ್ತಿಯು ಬ್ರಹ್ಮಚಾರಿಯಾಗಿದ್ದುಕೊಂಡು ಮನಸ್ಸನ್ನು ಹತೋಟಿಯಲ್ಲಿರಿಸಿಕೊ೦ಡು, ಎಲ್ಲ ರೀತಿಯ ಇಂದ್ರಿಯ ಚಟುವಟಿಕೆಗಳಿಂದ ಮುಕ್ತನಾಗಿರಬೇಕು.
ವೈದಿಕ ಸಾಹಿತ್ಯಗಳು ಸಾರುವಂತೆ ಈ ಯುಗದಲ್ಲಿ ಪ್ರತಿಯೊಬ್ಬನೂ ದೇವೋತ್ತಮ ಪರಮ ಪುರುಷನಲ್ಲಿ ಭಕ್ತಿಯೋಗವನ್ನು ಅಭ್ಯಸಿಸಬೇಕು. ನಿಜವಾದ ಅರ್ಥದಲ್ಲಿ ಭಕ್ತಿಯೋಗವೇ ಎಲ್ಲ ಯೌಗಿಕ ಕ್ರಿಯೆಗಳ ಅಂತಿಮ ಗುರಿಯಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಎಲ್ಲ ಇತರ ಯೋಗಿಗಳಿಗಿಂತ ತನ್ನ ಸೇವೆಯಲ್ಲಿ ನಿರತನಾದವನೇ ಹೆಚ್ಚು ಶ್ರೇಷ್ಟ ಎಂದು ಹೇಳಿದ್ದಾನೆ.
ಭಗವಾನ್ ಶ್ರೀ ಕೃಷ್ಣನು ಐನೂರು ವರ್ಷಗಳ ಹಿಂದೆ ಈ ಯುಗದಲ್ಲಿ ಭಕ್ತಿಯನ್ನು ಹರಡುವ ಉದ್ದೇಶದಿಂದ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದನು. ಭಗವಾನ್ ಚೈತನ್ಯರು ಭಕ್ತಿಯ ಸಾರದ ಮೂಲಧಾತುವನ್ನು ಪರಿಚಯಿಸಿದರು. ಅದು, ಭಗವಂತನ ನಾಮವನ್ನು ಜಪಿಸುವುದು; ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ, ಭಕ್ತಿಯೋಗವು ಈ ಸಂಕೀರ್ತನೆಯ ಮೇಲೆ ಆಧಾರಿತವಾಗಿದೆ.

ಭಕ್ತಿಯೋಗದ ಇತರ ಲಕ್ಷಣಗಳೆಂದರೆ, ಭಗವಂತನ ವೈಭವದ ಕಥನಗಳನ್ನು ಆಲಿಸುವುದು, ಆತನನ್ನು ನೆನೆಯುವುದು, ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವಾಲಯಗಳಲ್ಲಿ ಆರ್ತ ವಿಗ್ರಹಗಳಿಗೆ ಪೂಜೆ ಸಲ್ಲಿಸುವುದು.
ಲೌಕಿಕ ಜವಾಬ್ದಾರಿಗಳಲ್ಲಿ ನಿಯುಕ್ತಗೊಂಡಿದ್ದರೂ ಯಾವುದೇ ವ್ಯಕ್ತಿಯು ಯಾವುದೇ ಸಂದರ್ಭದಲ್ಲೂ ಭಕ್ತಿಯೋಗದ ಮಜಲುಗಳಲ್ಲಿ ಯಾವುದಾದರೊಂದನ್ನು ಆಚರಿಸಬಹುದು. ಗೃಹಿಣಿ, ಉದ್ಯಮಿ ಕೊನೆಯದಾಗಿ ಒಂದು ಮಗುವೂ ಕೂಡ ದೇವೋತ್ತಮನ ನಾಮಜಪ ಮಾಡಬಹುದು ಮತ್ತು ಆಧ್ಯಾತ್ಮಿಕ ಎಳ್ಗೆ ಪಡೆಯಬಹುದು.
ಧರ್ಮಗ್ರಂಥಗಳಲ್ಲಿ ಈ ಕಾಲದಲ್ಲಿ ದೇವತೆಗಳು ಭೂಮಿಯಲ್ಲಿ ಜನಿಸಿ, ಶ್ರೀ ಚೈತನ್ಯರಿಂದ ಹೇಳಲ್ಪಟ್ಟಿರುವ ಈ ಸುಗಮವಾದ ಮಾರ್ಗದಲ್ಲಿ ಸಾಧನೆ ಮಾಡಲು ಉತ್ಸುಕರಾಗಿ ಪ್ರಾರ್ಥಿಸಿಕೊಳ್ಳುವರು’ ಎಂದು ಹೇಳಿರುವುದರಲ್ಲಿ ಅಚ್ಚರಿಯೇನಿಲ್ಲ.
ಭಗವಾನ್ ಚೈತನ್ಯರ ಅಂತರ್ಧಾನದ ನಂತರ ಅವರ ಪ್ರಮುಖ ಶಿಷ್ಯರಾದ ವೃಂದಾವನದ ಆರು ಗೋಸ್ವಾಮಿಗಳು ಭಕ್ತಿಯ ವಿಜ್ಞಾನವನ್ನು ಮತ್ತಷ್ಟು ವಿಸ್ತರಿಸಿ, ವಿಶ್ವದ ಪ್ರತಿಯೊಂದನ್ನು ಭಗವಂತನ ಸೇವೆಗೆ ಅರ್ಪಿಸುವ ಯುಕ್ತ ವೈರಾಗ್ಯದ ಆದರ್ಶವನ್ನು ಮುಖ್ಯವಾಗಿ ಬೋಧಿಸಿದರು. ಈ ತತ್ತ್ವವನ್ನು ಅನುಸರಿಸುವ ವ್ಯಕ್ತಿಯು ಎಲ್ಲವನ್ನು ಭಗವಂತನ ತೃಪ್ತಿಗಾಗಿ ಅರ್ಪಿಸಿ, ಅದರ ಉಚ್ಛಿಷ್ಟವನ್ನು ತಾನು ಪ್ರಸಾದವೆಂದು ಸ್ವೀಕರಿಸಿ ಆನಂದಿಸುತ್ತಾನೆ.
ಇದರಿಂದ ವ್ಯಕ್ತಿಯು ಇಂದ್ರಿಯಗಳನ್ನು ಕೃತಕವಾಗಿ ನಿಯಂತ್ರಿಸುವ ಬದಲು ಅದನ್ನು ಆಧ್ಯಾತ್ಮಿಕವಾಗಿ ತೊಡಗಿಸಿದಂತಾಗುತ್ತದೆ. ಭಕ್ತಿಯೋಗದಲ್ಲಿ ಭಕ್ತನು ಜೀವನವನ್ನು ಸಂಕೀರ್ತನೆ, ನರ್ತನ ಮತ್ತು ರುಚಿಯಾದ ನೈವೇದ್ಯಗೊಂಡ ಪವಿತ್ರ ಆಹಾರವನ್ನು ಸೇವಿಸುವ ಮೂಲಕ ಆನಂದಿಸುತ್ತಾನೆ.
ಭಕ್ತನು ಕೃಷ್ಣನಿಗಾಗಿ ಕೆಲಸ ಮಾಡುತ್ತ ಮತ್ತು ಅವನ ಬಗ್ಗೆ ಹೆಚ್ಚು ಹೆಚ್ಚು ಶ್ರವಣ ಮಾಡುತ್ತ ಪ್ರತಿಯೊಂದರಲ್ಲೂ ಆತನನ್ನು ಕಾಣಲು ಆರಂಭಿಸುತ್ತಾನೆ. ಹೀಗೆ ಅವನು ಜೀವನದಲ್ಲಿ ಅತ್ಯುತ್ತಮವಾದ ಆಧ್ಯಾತ್ಮಿಕ ಆನಂದವನ್ನು ಹೊಂದುತ್ತಾನೆ.

ಭಕ್ತಿಯೋಗವನ್ನು ಕಡ್ಡಾಯವಾಗಿ ಪ್ರತಿಯೊಂದು ಕಾರ್ಯವನ್ನೂ ಕೃಷ್ಣಪ್ರಜ್ಞೆಗೆ ಜೋಡಿಸುವ ಕಲೆಯನ್ನು ಬಲ್ಲ ಅರ್ಹ ಗುರುವಿನ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಬೇಕು. ಭಕ್ತಿಯೋಗವು ಇತರ ಯೋಗ ಸಾಧಕರು ಹೇಳುವಂತೆ ಅವೈಜ್ಞಾನಿಕ ಅಥವಾ ಕೇವಲ ಭಾವನಾತ್ಮಕ ಪ್ರಕ್ರಿಯೆಯಲ್ಲ.
ಇದು ಇಂದಿನ ಆಧುನಿಕ ಯುಗಕ್ಕೆ ಸೂಕ್ತವಾದುದಾಗಿದೆ ಮತ್ತು ನಮ್ಮ ಲಾಭಕ್ಕಾಗಿ ಆರು ಗೋಸ್ವಾಮಿಗಳ ಮತ್ತು ಅವರ ಅನುಯಾಯಿಗಳಿಂದ ಅತ್ಯಂತ ಕಾಳಜಿಯಿಂದ ನಿರ್ದಿಷ್ಟ ಆಧ್ಯಾತ್ಮಿಕ ಸಾಹಿತ್ಯಗಳಲ್ಲಿ ಹೇಳಲಾಗಿದೆ. ಗೋಸ್ವಾಮಿಗಳಲ್ಲಿ ಒಬ್ಬರ ಅರ್ಹ ಅನುಯಾಯಿಯಾದ (ಹರೇಕೃಷ್ಣ ಚಳುವಳಿಯ ದೃಷ್ಟಾರರಾದ) ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಆಧ್ಯಾತ್ಮಿಕ ಪುಸ್ತಕಗಳ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ.
ಆಧುನಿಕ ಸಮಾಜಕ್ಕೆ ಬೇಕಾದ ಪ್ರಾಯೋಗಿಕ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಿದ್ದರೂ ಅವರು ಯೋಗದ ಡಾಂಭಿಕ ಪ್ರದರ್ಶನದೊಂದಿಗೆ ರಾಜಿಮಾಡಿಕೊಳ್ಳಲಿಲ್ಲ. ಅವರ ತತ್ ಸಂಬಂಧಿತ ಉಪದೇಶಗಳನ್ನು ಕಾಳಜಿಯಿ೦ದ ಅಳವಡಿಸಿಕೊಳ್ಳುವ ಯಾವುದೇ ವ್ಯಕ್ತಿಯು ಈ ಲೌಕಿಕ ಯುಗದಲ್ಲಿಯೂ ‘ಕೃಷ್ಣ ಪ್ರಜ್ಞೆ’ ಯೆಂಬ ಅತ್ಯುನ್ನತ ಗುರಿ ಸಾಧಿಸಬಹುದು.






Leave a Reply