ದೇವರಿದ್ದಾನೆಯೇ?

  • ದೇವರೆಲ್ಲಿದ್ದಾನೆ?

ಬೆಳಗ್ಗೆ ಒಂಬತ್ತು ಗಂಟೆ, ರಮೇಶ ಮತ್ತು ಸತೀಶ ಲಗುಬಗನೆಯಿಂದ ತಮ್ಮ ಇಂಜಿನಿಯರಿಂಗ್‌ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ಹೋಗಲು ಸಾರ್ವಜನಿಕ ಬಸ್‌ ನಿಲ್ದಾಣಕ್ಕೆ ಅವರ ಪಯಣ ನಡೆದಿತ್ತು. ರಮೇಶ ಹೇಳಿದ “ಸತೀ, ದೇವರು ಪುಸ್ತಕ ಓದಿದ್ದೀಯಾ? ದೇವರಿಲ್ಲ ಪ್ರೊ.ಎ.ಎನ್‌.ಮೂರ್ತಿರಾಯರು ಅವರು ಬಹು ಸುಂದರವಾಗಿ ತೋರಿಸಿದ್ದಾರೆ. ನಾನು ಅಷ್ಟೇ ದೇವರಿರುವನು ಎಂದು ನಂಬುವುದಿಲ್ಲ. ಅದೊಂದು ಬರಿಯ ಮೂಢನಂಬಿಕೆ. ದೇವರು ಒಂದು ಭಾರಿ ಉತ್ಪ್ರೇಕ್ಷಿತ ಕಲ್ಪನೆಯಷ್ಟೆ” ಸತೀಶನಿಗೆ ಈ ಮಾತುಗಳು ಹಿಡಿಸಲಿಲ್ಲ. ಅವನೆಂದ “ನೀನು ವಾಸುದೇವ ಕಾರಂತರ “ದೇವರಿದ್ದಾನೆ” ಅಥವಾ ಡಿ.ವಿ.ಜಿ. ಯವರ ಬಾಳಿಗೊಂದು ನಂಬಿಕೆ ಓದಿದ್ದೀಯಾ? ಓದಿ ನೋಡು. ಆಗ ಮೂರ್ತಿರಾಯರ ಪುಸ್ತಕಕ್ಕೆ ನಿನಗೇ ಪ್ರತಿವಾದ ಹೊಳೆಯುತ್ತದೆ. ಅಷ್ಟೇ ಅಲ್ಲದೆ ಮಹಾನ್‌ ಆಚಾರ್ಯರುಗಳು ಇಂತಹ ಪ್ರಶ್ನೆಗಳಿಗೆ ಕರಾರುವಕ್ಕಾದ ಉತ್ತರಗಳನ್ನು ನೀಡಿದ್ದಾರೆ. ಭಕ್ತಿವೇದಾಂತ ಸ್ವಾಮಿಯವರ ಪುಸ್ತಕಗಳನ್ನು ನೀನು ಓದಿ ನೋಡು. ಅವರು ಇವುಗಳಿಗೆ ತರ್ಕಬದ್ಧ ಉತ್ತರಗಳನ್ನು ನೀಡಿದ್ದಾರೆ.”

  • ಕಲಾವಿದನಾರು?

ರಮೇಶ ಅಷ್ಟು ಸುಲಭವಾಗಿ ಬಗ್ಗುವವನಲ್ಲ. “ನಾನು ಈಗಾಗಲೇ ಹೇಳಿದಂತೆ ಅವರೆಲ್ಲ ಬುದ್ಧಿವಂತಿಕೆಯಿಂದ ಏನೇನೂ ವಾದಗಳನ್ನು ಮಂಡಿಸಿರುತ್ತಾರೆ. ನೀನು ಒಂದು ವಾದವನ್ನು ಹೇಳು, ನಾನೇ ಅದನ್ನು  ಚೂರು ಚೂರು ಮಾಡುತ್ತೇನೆ” ಎಂದ ಅತಿ ಉತ್ಸಾಹದಿಂದ. ಒಂದೆರೆಡು ಹೆಜ್ಜೆ ಮುಂದೆ ನಡೆದರು. ಸತೀಶ ನಸುನಕ್ಕ. ದೊಡ್ಡ ಜಾಹೀರಾತು ಫಲಕದೆಡೆ ತನ್ನ ಕೈ ತೋರಿಸಿ” ರಮೇಶ, ಅಲ್ಲಿ ನೋಡು! ಈ ಜಾಹೀರಾತಿನಲ್ಲಿರುವ ಸುಂದರ ಹೂವನ್ನು ಎಂದ. ರಮೇಶ ತಲೆಯಾಡಿಸಿದ. “ನಿನಗೆ ಅದರಲ್ಲಿ ಆಕರ್ಷಣೆ ಉಂಟಾವುಗುವುದು ಏತಕ್ಕಾಗಿ”? ಸತೀಶ ಪ್ರಶ್ನಿಸಿದ. “ಅದರ ವಿನ್ಯಾಸ, ಅದರ ಕೆಂಪು ಬಣ್ಣ, ಅದಕ್ಕೆ ಹೊಂದಿಕೆಯಾಗಿರುವ ಕಲೆಗಾರಿಕೆ ಎಲ್ಲವೂ ಅಪ್ಯಾಯಮಾನವಾಗಿದೆ. ಆದ್ದರಿಂದಲೇ ಅದು ಆಕರ್ಷಕ.”

ಹೇಗೋ ಏನೋ ಬಣ್ಣ ಚಲ್ಲಿ ಹೂವಿನ ಚಿತ್ರವುಂಟಾಯಿತು ಎಂದರೆ ನೀನು ನಂಬುತ್ತೀಯಾ?” “ಅಂತಹ ಬುರುಡೆಗಳನ್ನೆಲ್ಲ ನಾನೇಕೆ ನಂಬಲಿ ನಿನ್ನಂತಹ ಮೂಢರು ಮಾತ್ರ ಹಾಗೆ ಊಹಿಸಬಹುದು.” ರಮೇಶ ಸ್ವಲ್ಪ ಕೋಪದಿಂದ ಪ್ರತಿಕ್ರಿಯೆ ನೀಡಿದ. “ಮತ್ತೆ ಅದು ಹೇಗೆ ಮೂಡಿಬಂತೋ!”. “ಪೆದ್ದ ಪ್ರಶ್ನೆಗಳನ್ನು ಯಾಕೆ ಹಾಕುತ್ತೀಯಾ? ಒಬ್ಬ ಕಲಾವಿದನಿಂದ ಆ ಚಿತ್ರವು ಹೊರಹೊಮ್ಮಿದೆ. ಅವನು ಹೂವಿನ ಬಣ್ಣ, ವಿನ್ಯಾಸ, ಸಂಯೋಜನೆಯ ನಯನಾಜೂಕು ಹೀಗಿರಬೇಕು ಎಂದು ಕಲ್ಪಿಸಿ ಇಂತಹ ಸುಂದರ ಸೃಷ್ಟಿಗೆ ಕಾರಣನಾಗಿದ್ದಾನೆ” ಎಂದು  ಸ್ವಲ್ಪ ಸಿಡುಕಿನ ಧ್ವನಿಯಲ್ಲೇ ಉತ್ತರಿಸಿದ. ಸತೀಶನು ನಸು ನಗುತ್ತ “ಅವನನ್ನು ನೀನು ನೋಡಿಲ್ಲವಲ್ಲ?” ಎಂದು ಮತ್ತೆ ಕಿರಿಕಿರಿಯುಂಟು ಮಾಡುವಂತೆ ಪ್ರಶ್ನಿಸಿದ. “ಲೋ ಸತೀಶ ಕಲೆ ಕಲಾವಿದನಿಲ್ಲದೆ ಹೇಗೆ ಹುಟ್ಟುತ್ತೋ? ಕಲೆ ಇದ್ದರೆ ಒಬ್ಬ ಕಲಾವಿದರನಿರಲೇಬೇಕು ಎಂಬುದು ಸಾಮಾನ್ಯ ಜ್ಞಾನ.” ಎಂದು ಉತ್ತರಿಸಿದ ರಮೇಶನ ಧ್ವನಿ ಏರಿತ್ತು.

ಬಸ್‌ ನಿಲ್ದಾಣಕ್ಕೆ ತಲುಪುವ ಮುನ್ನ ಉದ್ಯಾನವನದ ಮೂಲಕ ಹಾದು ಹೋಗುವಾಗ ಹೂವೊಂದರ ಹತ್ತಿರ ರಮೇಶನನ್ನು ಕೆರೆದೊಯ್ದ ಸತೀಶ. ಈ ಹೂವನ್ನು ನೋಡು. ಇದರ ಸೌಂದರ್ಯ, ಸುಗಂಧ, ನಾಜೂಕಾದ ದಳಗಳು ಎಲ್ಲವೂ ಸುಮಧುರ. ಅವನ್ನು ನೋಡಿದರೆ, ಮೂಸಿದರೆ ಸಂತೋಷವೋ ಸಂತೋಷ. ನಿನಗೆ ಗೊತ್ತಿರುವ ಹಾಗೆ ಈ ಹೂವು ಬರುವುದು ಒಂದು ಸಣ್ಣ ಬೀಜದಿಂದ. ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತ ತನ್ನ ಕೊಂಬುಗಳಲ್ಲಿ ಮುಳ್ಳಿನೊಡನೆ ಒಂದು ಕೋಮಲ, ಸುಗಂಧ ಹೂವನ್ನು ಬೆಳೆಸುತ್ತದೆ. ಇದರ ಸೌಂದರ್ಯ ನಾವು ನೋಡಿದ ಚಿತ್ರಕ್ಕಿಂತ ಸಾವಿರಾರು ಪಟ್ಟು ದೊಡ್ಡದು. ಅಷ್ಟೇ ಅಲ್ಲದೆ ಹೂವಿನ ಚಿತ್ರ ಬರೆಯುವುದಕ್ಕಿಂತ ಒಂದು ನಿಜವಾದ ಹೂವನ್ನು ಸೃಷ್ಟಿಸುವುದು ಇನ್ನೂ ಹೆಚ್ಚು ಕ್ಲಿಷ್ಟಕರವಾದದ್ದು. ಒಬ್ಬ “ಕಲಾವಿದ” ನಿಲ್ಲದೆ ನಿಜವಾದ ಹೂವು ಬರಲು ಸಾಧ್ಯವೇ? ಆ ಕಲಾವಿದನಿಗೆ ಮಹಾನ್‌ ಕಲಾಶಕ್ತಿಯೊಂದಿರಬೇಕು ಅಲ್ಲವೇ?” “ಕಲಾವಿದನೇ ದೇವರು.” ಸತೀಶ ಉತ್ತರಿಸಿದ. ರಮೇಶನಿಗೆ ಪ್ರತ್ಯುತ್ತರ ನೀಡಲಾಗಲಿಲ್ಲ.

ಕಾಲೇಜಿಗೆ ಹೋಗುವ ಬಸ್‌ ಬಂತು ಇಬ್ಬರು ಹತ್ತಿ ಕುಳಿತರು. “ಕಲಾವಿದನಿಲ್ಲದೆ ಕಲೆಯಿಲ್ಲ ಎಂದು ಈಗಿನ್ನು ಹೇಳಿದ ನನ್ನ ಮಾತೇ ನನಗೆ ತಿರುಗುಮಂತ್ರವಾಯಿತು.” ರಮೇಶ ಸ್ವಲ್ಪ ನಿಬ್ಬೆರಗಾದ ಆದರೂ ತನ್ನ ಸೋಲನ್ನೊಪ್ಪದೆ, “ನಾವು ಇರುವುದು ಇಪ್ಪತ್ತೊಂದನೇ ಶತಮಾನ! ಉಪಗ್ರಹಗಳನ್ನು ಆಕಾಶಕ್ಕೆ ಕಳುಹಿಸಿದ ಯುಗ! ವಿಜ್ಞಾನ ಬಹಳಷ್ಟು ಮುಂದುವರೆದಿದೆ. ಈ ಹೂವಿನ ಹಿಂದೆ ದೇವರು ಇದ್ದಾನೆ ಎನ್ನುವ ಓಬೀರಾಯನ ಕಾಲದ ಕಥೆಯನ್ನು ನನಗೆ ಹೇಳಬೇಡ. ನಾವೀಗ ಸ್ಪೇಸ್‌ ಯುಗದಲ್ಲಿದ್ದೇವೆ.”

“ನೀನಗೇ ಗೊತ್ತು. ಭಾರತ ಮೂಲದ ಕಲ್ಪನಾ ಚಾವ್ಲಾ ಎನ್ನುವ ಗಗನಯಾತ್ರಿ ತೀರಿಹೋಗಿದ್ದು ಯಾವುದೋ ತಾಂತ್ರಿಕ ಲೋಪದಿಂದಾಗಿ ಹಾಗಾಯಿತು. ಒಂದು ಉಪಗ್ರಹವನ್ನು ಆಕಾಶಕ್ಕೆ ಕಳುಹಿಸುವುದು ಅಷ್ಟು ಸುಲಭವಲ್ಲ. ಅದರ ಹಿಂದೆ ಭಾರಿ ಭಾರಿ ಬಿ.ಟೆಕ್‌., ಎಂ.ಟೆಕ್‌.ಗಳು ಕಾರ್ಯನಿರ್ವಹಿಸುತ್ತಾರೆ. ಉಪಗ್ರಹ ಮೇಲೆ ಕಳುಹಿಸುವುದಷ್ಟೇ ಅಲ್ಲದೆ ಅದನ್ನು ಅದರ ಕಕ್ಷೆಯಲ್ಲಿಡಲು ಅನೇಕ ಕಸರತ್ತುಗಳನ್ನು ಮಾಡಬೇಕು. ಅದನ್ನು ನಡೆಸಲು ನೂರಾರು ಕಂಪ್ಯೂಟರ್‌ಗಳು ಬೇಕು. ಅವುಗಳು ದಿನದ ಇಪ್ಪತ್ತುನಾಲ್ಕು ಗಂಟೆಗಳು ಕೆಲಸ ಮಾಡಬೇಕು. ಎರಡು ಮೂರು ಶಿಫ್ಟ್‌ಗಳಲ್ಲಿ ತಂತ್ರಜ್ಞಾನಿಗಳು ಕೆಲಸ ಮಾಡುತ್ತಾರೆ. ಇದು ನಿಜವಾಗಿಯೂ ಭಾರಿ ದೊಡ್ಡ ಏರ್ಪಾಡು ಮತ್ತು ಇದು ನಮ್ಮ ತಂತ್ರಜ್ಞಾನದ ಅಭಿವೃದ್ಧಿಯನ್ನು ಸೂಚಿಸುತ್ತದೆ” ಎಂದ ರಮೇಶ.

ಬಸ್‌ ಶಬ್ದ ಮಾಡುತ್ತ ಒಂದು ದೊಡ್ಡ ತಿರುವನ್ನು ಹಾದು ಹೋಯಿತು. ಬಸ್ಸಿನ ಕೆಲವು ಪ್ರಯಾಣಿಕರ ಗದ್ದಲ ಹೀಗೆ ಸ್ವಲ್ಪ ಅವರ ಸಂವಾದ ನಿಂತಿತು.

ಸತೀಶ ಸಂವಾದವನ್ನು ಮತ್ತೆ ಪ್ರಾರಂಭಿಸಿದ. “ಒಂದು ಉಪಗ್ರಹದ ಭಾರ ಎಷ್ಟಿರಬಹುದು?” “ಕೆಲವು ಸಾವಿರ ಟನ್‌ಗಳು” ರಮೇಶನೆಂದ. “ನೂರಾರು ರಾಷ್ಟ್ರಗಳು, ಸಾವಿರಾರು ನದಿಗಳು ಪರ್ವತಗಳನ್ನು ಹೊತ್ತಿರುವ ಭೂಮಿಯ ಭಾರ ಎಷ್ಟು ಮೆಟ್ರಿಕ್‌ ಟನ್‌ಗಳು ಗೊತ್ತೆ? 6 x 10 24 ಮೆಟ್ರಿಕ್‌ ಟನ್‌ಗಳು. ಅದರ ವೇಗ 250 ಕಿಮೀ/ಸೆಂ. ಅಂದರೆ ಕಣ್ಣು ಮುಚ್ಚಿತೆಗೆಯುವುದರೊಳಗೆ ಮೈಸೂರಿಗೆ ಹೋಗಿ ಬರುವಷ್ಟು ವೇಗದಲ್ಲಿ ಅದು ಚಲಿಸುತ್ತದೆ” ಎಂದು ಸತೀಶ ತನ್ನ ಮಾತನ್ನು ಸೇರಿಸಿದ.

ಬಸ್‌ ತಿರುಗುತ್ತಾ ಯುನಿವರ್ಸಿಟಿ ಹತ್ತಿರ ಬಂತು. ಒಬ್ಬರು ಇಳಿದು ಅರ್ಧ ಕಿಲೋ ಮೀಟರ್‌ ದೂರದ ತಮ್ಮ ಕಾಲೇಜಿ ನೆಡೆಗೆ ಹೆಜ್ಜೆ ಹಾಕಿದರು. ಸತೀಶ, ರಮೇಶನೆಡೆಗೆ ತಿರುಗಿ ನಸುನಕ್ಕು “ನಮ್ಮ ಭೂಮಿ ಸಣ್ಣ ಉಪಗ್ರಹಕ್ಕಿಂತ ಲಕ್ಷಾಂತರ ಪಟ್ಟು ದೊಡ್ಡದು ಮತ್ತು ಲಕ್ಷಾಂತರ ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಅದು ಸೂರ್ಯನ ಸುತ್ತ ಸುತ್ತುತ್ತದೆ. ಆದರೂ ಅದು ಎಂದೂ ಪೂರ್ವದಲ್ಲಿ ಹುಟ್ಟಿಲ್ಲ. ಅಷ್ಟೇ ಅಲ್ಲದೆ ನಮ್ಮ ಭೂಮಿ ತನ್ನ ಕಕ್ಷೆಯಿಂದ ಸ್ವಲ್ಪ ಮುಂದು ಹೋದರೆ ಅದರ ತಾಪಮಾನ ಹೆಚ್ಚಿ ನಾವೆಲ್ಲ ಜೀವಿಸಲಾರೆವು. ಸೂರ್ಯನ ಸುತ್ತ ಅನೇಕ ಗ್ರಹಮಂಡಲಗಳಿದ್ದಂತೆ ಅನೇಕ ಗ್ರಹಮಂಡಲಗಳಿವೆ. ಪ್ರತಿಯೊಂದು ಗ್ರಹಕ್ಕೆ ತನ್ನದೇ ಆದ ಕಕ್ಷೆ, ವೇಗ ಇತ್ಯಾದಿ ಇದೆ.

“ನಮ್ಮ ಚಿಕ್ಕ ಉಪಗ್ರಹವನ್ನು ಅದರ ಪಥದಲ್ಲಿರುವಂತೆ ಚಲಿಸಲು ಒಂದು ದೊಡ್ಡ ಕಂಟ್ರೋಲ್‌ ರೂಮ್‌ ಮತ್ತು ಅದರ ವಿಜ್ಞಾನಿಗಳು, ತತ್ವಜ್ಞಾನಿಗಳು ಇರುವಹಾಗೆ ಲಕ್ಷಾಂತರ ಗ್ರಹಗಳು-ಗ್ರಹವ್ಯೂಹಗಳು ಹಿಂದೆ ಕಂಟ್ರೋಲ್‌ ರೂಮ್‌ ಇರಲೇಬೇಕು. ಅಷ್ಟೇ ಅಲ್ಲ ಲಕ್ಷಾಂತರ ಗ್ರಹಮಂಡಲಗಳು ಎಷ್ಟೊಂದಿದ್ದರೂ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ. ಸುಸೂತ್ರತೆ ಕಂಡು ಬಂದಲ್ಲಿ ಅದರ ಹಿಂದೆ ಬುದ್ಧಿ ಮತ್ತು ನಿಯಂತ್ರಣವಿರಬೇಕೆನ್ನುವುದು ಸಾಮಾನ್ಯ ಜ್ಞಾನ (Common Sense). ನಿಯಂತ್ರಕನಿಲ್ಲದೆ ಸುಸೂತ್ರತೆ ಸಾಧ್ಯವಿಲ್ಲ. ಆ ನಿಯಾಮಕನು ಅಸಾಧಾರಣ ಬುದ್ಧಿವಂತಿಕೆಯನ್ನು ಹೊಂದಿರಬೇಕು ಅವನು ನಮ್ಮಂತಹ ಸಾಧಾರಣ ವ್ಯಕ್ತಿಯಾಗಿರಲಾರ. ಅವನೇ ಭಗವಂತ. ನೀನೆ ಹೇಳಿದೆಯಲ್ಲ. ಕಲೆಯೊಂದಿದ್ದರೆ ಅವರ ಹಿಂದೆ ಕಲಾವಿದರನಿರಲೇಬೇಕೆಂದು. ಹಾಗೇಯೇ ಯಾವುದೇ ಸುಯಂತ್ರಿತ ವ್ಯವಸ್ಥೆಯ ಹಿಂದೆ ಒಬ್ಬ ವ್ಯವಸ್ಥಾಪಕನಿರಲೇಬೇಕು. ನಿಸರ್ಗದಲ್ಲಿ ಕಾಣುವ ಇನ್ನೂ ಅನೇಕ ಸುಂದರ, ವಿಸ್ಮಯಗಳಿವೆ. ಅವುಗಳೆಲ್ಲದರ ಹಿಂದು ಒಬ್ಬ ಸೃಷ್ಟಿಕರ್ತನಿರಲೇಬೇಕು.”

“ವಿಜ್ಞಾನವನ್ನು ಓದಿ ನೀನು ಈ ತೆರನಾಗಿ ಮಾತನಾಡುತ್ತಿರುವುದು ಕಂಡು ನನಗೆ ಆಶ್ಚರ್ಯ. ನಿನ್ನ ಕಲ್ಪನಾಶಕ್ತಿಯನ್ನು ರಬ್ಬರ್‌ಬ್ಯಾಂಡ್‌ನಂತೆ ಎಳೆದು ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದಿಯಾ. ನಕ್ಷತ್ರಗಳ ಹಿಂದೆ ಒಬ್ಬ ವ್ಯಕ್ತಿ ಎಂಬ ಭಾರಿ ಊಹೆಯನ್ನೇ ನೀನು ಮುಂದಿಟ್ಟಿರುವೆ” ಎಂದ ರಮೇಶ.

  • ನ್ಯೂಟನ್‌ ವಾದ

“ನಿನಗೆ ನ್ಯೂಟನ್‌ ಅವರ ಜೀವನದ ವೃತ್ತಾಂತವೊಂದು ಗೊತ್ತೆ? ನ್ಯೂಟನ್‌ ದೊಡ್ಡ ವಿಜ್ಞಾನಿಯೆಂದು ಖ್ಯಾತಿ ಪಡೆದಿದ್ದ ಆದರೂ ಅವನು ಆಸ್ತಿಕನಾಗಿದ್ದ. ಅವನು ಗ್ರಹಮಂಡಲದ ಒಂದು ಸುಂದರ “ಮಾಡೆಲ್‌” ಅನ್ನು ಮಾಡಿ ತನ್ನ ಟೇಬಲ್‌ ಮೇಲಿಟ್ಟಿದ್ದ. ಒಮ್ಮೆ ಅವನನ್ನು ನೋಡಲು ಮೊತ್ತೊಬ್ಬ ವಿಜ್ಞಾನಿ ಬಂದರು. ಅವರು ಸ್ವಭಾವತಃ ನಾಸ್ತಿಕರು. ಅವರಿಬ್ಬರ ನಡುವೆ ಸ್ವಲ್ಪ ಹೊತ್ತು ವಿಜ್ಞಾನದ ಬಗ್ಗೆ ಚರ್ಚೆ ನಡೆಯಿತು. ಆ ವಿಜ್ಞಾನಿ ಮಾಡಿದ ಮೊದಲ ಪ್ರಶ್ನೆ- “ಇದನ್ನು ನಿರ್ಮಿಸಿದ ವಿಜ್ಞಾನಿ ಯಾರು?” ಅದಕ್ಕೆ ನ್ಯೂಟನ್‌ ನಕ್ಕು ಇದರ ಹಿಂದೆ ಯಾವ “ವಿಜ್ಞಾನಿಯೂ ಇಲ್ಲ. ಅದು ತಾನಾಗಿಯೇ ಬಂದಿತು” ಎಂದರು.

ಆಗ ಅವರ ಸಹವರ್ತಿ “ಏಕೆ ಅತಾರ್ಕಿಕವಾಗಿ ಮಾತನಾಡುತ್ತಿರುವಿರಿ?” ಒಬ್ಬ ನಿರ್ಮಾತೃವಿಲ್ಲದೆ ಹೇಗೆ ತಾನೆ ಈ ಸುಂದರ ಮಾಡಲ್‌ ಬರಲು ಸಾಧ್ಯ” ಎಂದು ಸ್ವಲ್ಪ ಗಡುಸಾಗಿಯೇ ಪ್ರಶ್ನಿಸಿದರು. ನ್ಯೂಟನ್‌ ಅದಕ್ಕೆ “ಈ ಬ್ರಹ್ಮಾಂಡ ಎಷ್ಟು ಆಗಾಧವಾದದ್ದು. ಅದರಲ್ಲಿ ಎಷ್ಟು ಜಟಿಲತೆಗಳಿವೆ ಮತ್ತು ಅದೆಷ್ಟು ಭಾರಿಯಾದದ್ದು, ಅಷ್ಟೇ ಅಲ್ಲದೆ ತುಂಬ ಸುಂದರವೂ ಹೌದು. ಅಂತಹ ಒಂದು ಬ್ರಹ್ಮಾಂಡದ ಹಿಂದೆ ಒಬ್ಬ  ನಿರ್ಮಾತೃವಿಲ್ಲವೆಂದು ನೀವು ನಂಬಬಲ್ಲಿರಾದರೆ, ಈ ಸಾಧಾರಣ ಮಾಡಲ್‌ ಹಿಂದೆ ಒಬ್ಬ ವಿಜ್ಞಾನಿ ಇಲ್ಲ ಎಂಬುದನ್ನು ಏಕೆ ನಂಬಲಾರಿರಿ?” ಎಂದು ನ್ಯೂಟನ್‌ ಪ್ರಶ್ನಿಸಿದಾಗ ಆ ಮೊತ್ತಬ್ಬ ವಿಜ್ಞಾನಿಯು ತಮ್ಮ ತರ್ಕದಲ್ಲಿರುವ ಲೋಪಗಳನ್ನು ಮನಗಂಡು ದೇವರಿದ್ದಾನೆ, ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬುದನ್ನು ಒಪ್ಪಿದರು.

ರಮೇಶ ತನ್ನ ವಾದವನ್ನು ಮುಂದುವರೆಸುತ್ತ “ಸೃಷ್ಟಿಕರ್ತ” ನೆನ್ನುವುದು ಬರೀ ಭ್ರಮೆ. ಅಂತಿಮ ಎಂದರೆ – ಪ್ರಕೃತಿ, ಮತ್ತು ಪ್ರಕೃತಿಯ ನಿಯಮಗಳು- ಇವು ಜಗತ್ತಿನ ಮೂಲ ಕಾರಣಗಳು. ಸೃಷ್ಟಿಕರ್ತನಿದ್ದಾನೆ ಎನ್ನುವುದು ಬರಿಯ ಭ್ರಮೆಯಷ್ಟೆ ಎಂದ.”

ಅಂತಿಮ ಕಾರಣ ಯಾವುದು?

ಸತೀಶ ಮಂದಹಾಸ ಬೀರಿ… “ನಿನ್ನದು ಜಟ್ಟಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಪರಿ! ಸರಿ ಪ್ರಕೃತಿಯ ಹಿಂದೆ ನಿಯಮಗಳಿರುವುದಕ್ಕೆ ಯಾವುದೇ ಸಂಶಯವಿಲ್ಲ. ಅಣುವಿನ ಲೋಕದಿಂದ ಗ್ರಹಗಳವರೆಗೂ, ನಮ್ಮ ದೃಷ್ಟಿಗೆ ಕಾರಣವಾಗಿರುವ ಬೆಳಕಿನ ಚಾಲನೆಗೆ ನಿಯಮಗಳಿವೆ. ಎಲ್ಲಕ್ಕೂ ನಿಯಮಗಳುಂಟು. ಆದರೆ ನಿಯಮವೇ ಕಟ್ಟಕಡೆಯ ಕಾರಣವಲ್ಲ. ನಿಯಮಗಳನ್ನು ಮಾಡಿದ ನಿಯಾಮಕನೇ ಅಂತಿಮ ಕಾರಣ. ಶ್ರೀಲ ಪ್ರಭುಪಾದರು ಇದಕ್ಕೊಂದು ಉದಾಹರಣೆ ನೀಡುತ್ತಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ 3ನೆಯ ಬೋಗಿಯಲ್ಲಿರುವವನು ನನ್ನ ಬೋಗಿಯನ್ನು ಎರಡನೇಯ ಬೋಗಿಯು ಎಳೆಯುತ್ತಿದೆ ಎಂದು ಊಹಿಸಿಕೊಳ್ಳುತ್ತಾನೆ. 2ನೇಯ ಬೋಗಿಯಲ್ಲಿರುವವನು 1ನೇ ಬೋಗಿ ನನ್ನ ಚಾಲನೆಗೆ ಕಾರಣ ಎಂದು ಊಹಿಸಿಕೊಳ್ಳಬಹುದು. 1ನೇ ಬೋಗಿ ನನ್ನ ಚಾಲನಗೆ ಕಾರಣ ಎಂದು ಊಹಿಸಿಕೊಳ್ಳಬಹುದು. ಆದರೆ ಇಡೀ ರೈಲಿನ ಚಲನೆಗೆ ತನ್ನ ಅಂತರ್ಯದಲ್ಲೇ ಚಲನಶಕ್ತಿಯನ್ನು ಹೊಂದಿರುವ ಎಂಜಿನ್‌-ಕಾರಣ. ಹಾಗೆಯೇ ಪ್ರಕೃತಿ ಹಾಗೂ ಪ್ರಕೃತಿಯ ನಿಯಮಗಳು ಸೃಷ್ಟಿಯಲ್ಲಿ ತಮ್ಮ ಪಾತ್ರವಹಿಸಿದರೂ ಅವು ಮೂಲ ಕಾರಣಗಳಲ್ಲ. ಲೇಖನಕ್ಕೆ ಲೇಖನಿಯು  ಕಾರಣೀಭೂತವಲ್ಲ. ಅದನ್ನು ಹಿಡಿದು ಬರೆದ ಲೇಖಕನು ಲೇಖನಕ್ಕೆ ಕಾರಣೀಭೂತನು. ನಿಜವಾಗಿಯೂ ಆ ಲೇಖಕನ ಹೃದಯದಲ್ಲಿ ಭಾವ ಚಿಂತನೆಗಳ ಸ್ಫುರಣೆ ಮಾಡಿದ ಪರಮಾತ್ಮನೆ ಆ ಲೇಖನದ ನಿಜ ಕಾರಣೀಭೂತನು.

ಬುದ್ಧಿವಂತನು ಅಂತಿಮ ಕಾರಣವನ್ನು ಹುಡುಕುತ್ತಾನೆ ಹೊರತು ಗೌಣ ಕಾರಣಗಳಲ್ಲಿ ತಲ್ಲೀನನಾಗುವುದಿಲ್ಲ. ಇದನ್ನೇ ವೇದಾಂತಸೂತ್ರ ಹೇಳುವುದು “ಜನ್ಮಾದ್ಯಸ್ಯಯತಃ”- ಸೃಷ್ಟಿ, ಸ್ಥಿತಿ ಲಯಗಳಿಗೆ ಮೂಲಭೂತ ಕಾರಣವೇ ಪರಮ ಸತ್ಯ. ಬ್ರಹ್ಮಸಂಹಿತೆಯಲ್ಲಿ- ಅನಾದಿರ್‌ ಆದಿರ್‌ ಗೋವಿಂದಃ ಸರ್ವ ಕಾರಣ ಕಾರಣಮ್‌ – ಎಂದು ಹೇಳಲಾಗಿದೆ.

ಅಂದರೆ ಎಲ್ಲ ಕಾರಣಗಳ ಕಾರಣನು ಗೋವಿಂದ, ಪರಮ ದೇವೋತ್ತಮ ಪುರುಷ. ಕಾಲೇಜಿನ ಆವರಣದೊಳಗಡೆ ಅವರ ಪ್ರವೇಶ, ಅವರಿಬ್ಬರ ಸಂವಾದಕ್ಕೆ ತೆರೆ ಬಿತ್ತು. ಅವರ ಸಹಪಾಠಿಗಳೊಡನೆ ತರಗತಿಗಳಿಗೆ ಹಿಂತಿರುಗಿದರು. ತರಗತಿಯ ವಿಚಾರಗಳೆಲ್ಲ ರಮೇಶನ ತಲೆಯ ಮೇಲೆ ಹಾರಿಹೋಯಿತು. ಸತೀಶನು ಹೇಳಿದ ವಾದಗಳನ್ನು ಮತ್ತೆ ಮತ್ತೆ ಮೆಲುಕು ಹಾಕಿದನು. ಪ್ರತಿವಾದಗಳನ್ನು ಮನದಲ್ಲೆ ತಿರುವು ಹಾಕತೊಡಗಿದನು. ಆದರೆ ಇವು ಯಾವುವು ನಿಲ್ಲುವುದಿಲ್ಲ ಎಂಬುದನ್ನು ಮನಗಂಡನು.

ಭತವಂತನೇಕೆ ನಮ್ಮ ಕಣ್ಣಿಗೆ ಕಾಣುವುದಿಲ್ಲ?

ಮಧ್ಯಾಹ್ನದ ಊಟದ ಸಮಯದಲ್ಲಿ ಮತ್ತೊಂದು ವಾದ ರಮೇಶನ ಮನಸ್ಸಿಗೆ ಬಂತು. “ನಿನ್ನ ಭಗವಂತ ಎಲ್ಲದರ ಕಾರಣನಾಗಿದ್ದರೆ ಅವನು ಏಕೆ ಇನ್ನೂ ಪ್ರತಿಯೊಬ್ಬರ ಕಣ್ಣಿಗೂ ಕಾಣುವುದಿಲ್ಲ? ನನಗೆ ಆ ಭಗವಂತನನ್ನು ತೋರಿಸು. ನಾನು ಅವನನ್ನು ಕಣ್ಣಾರೆ ಕಾಣದಿದ್ದರೆ ಅವನಿದ್ದಾನೆಂದು ನಂಬಲಾರೆನು.” ಎಂಬ ವಾದವನ್ನು ರಮೇಶ ಸತೀಶನಿಗೆ ಮಂಡಿಸಿದ. ಮನೆಗೆ ಹಿಂತಿರುಗುವಾಗ ಮಾತನಾಡೋಣ, ಈಗ ಸಮಯವಿಲ್ಲ ಎಂದ ಸತೀಶ.

ಸಂಜೆ ಬಸ್‌ ನಿಲ್ದಾಣದಲ್ಲಿ ಅವರಿಬ್ಬರ ಭೇಟಿ. ಆಗ ಸತೀಶ ಕೇಳಿದ “ನಿಮ್ಮ ದೇಶದ ಪ್ರಧಾನಿ ಯಾರು?” “ನರೇಂದ್ರಮೋದಿ” “ಅವರನ್ನು ನೀನು ನೋಡಬೇಕಾದರೆ ಏನೇನು ಕಸರತ್ತು ಮಾಡಬೇಕು ಗೊತ್ತೆ?” “ಹೌದು, ಸಾಮಾನ್ಯ ಜನರಿಗೆ ಅವರನ್ನು ಕಾಣುವುದಂತು ಬಹು ಕಷ್ಟ” ರಮೇಶ ತಲೆದೂಗಿದ. ಭಾರತವು ಒಂದು ಪ್ರಗತಿಶೀಲ ಥರ್ಡ್‌ ವರ್ಲ್ಡ್‌ ರಾಷ್ಟ್ರ. ಅಂತಹ ಪ್ರಧಾನಿಯನ್ನೇ ನಾವು ಕಾಣಲು ಇಷ್ಟು ಪ್ರಯತ್ನಿಸಬೇಕಾದರೆ, ಪರಮ ಪುರುಷನು ಕೂಗಿದೊಡನೆಯೆ ಬಂದು ಕಾಣಿಸಿಕೊಳ್ಳುವಂತೆ ಅಪೇಕ್ಷಿಸುತ್ತಿಯಲ್ಲ. ನಿನಗೆ ಪರಮ-ಪುರಷನ ಮೌಲ್ಯ ಗೊತ್ತಿಲ್ಲ. ಭಗವಂತ ಎಂದರೆ “ಅವನು ಷಡೈಶ್ವರ್ಯಗಳನ್ನು – ಐಶ್ವರ್ಯ, ಜ್ಞಾನ, ವಿರಕ್ತಿ, ಸೌಂದರ್ಯ, ಶಕ್ತಿ ಮತ್ತು ಖ್ಯಾತಿ – ಅಪರಿಮಿತವಾಗಿ ಹೊಂದಿರುವವನು ಅಂತಹವನನ್ನು ನೀನು ಸಾಮಾನ್ಯ ವ್ಯಕ್ತಿಯಂತೆ ನಿನ್ನ ಮುಂದೆ ಬಂದು ನೀನು ಕೇಳಿದಾಗ ಕಾಣಿಸಿಕೊಳ್ಳಬೇಕೆನ್ನುತ್ತಿಯಲ್ಲ.

“ಕಣ್ಣಿಗೆ ಕಾಣದೇ ಭಗವಂತನಿದ್ದಾನೆ ಎಂದು ಹೇಗೆ ನಂಬಲಿ? ನಮ್ಮ ವಿಜ್ಞಾನ ಅದನ್ನೇ ಹೇಳಿದೆಯಲ್ಲಾ!” ಎಂದ ರಮೇಶ. “ಅದು ಬರೀ ಮೌಢ್ಯ. ಏಕೆಂದರೆ ನಮ್ಮ ಇಂದ್ರಿಯದಿಂದ ನಮಗೆ ಈ ಭೌತಿಕ ಜಗತ್ತಿನ ಬಗ್ಗೆಯೇ ಅರಿಯಲಾಗುವುದಿಲ್ಲ. ನಮ್ಮ ಕಣ್ಣುಗಳಿಗಿಂತ ಸೂಕ್ಷ್ಮವಾದ ಕಣ್ಣು ಹದ್ದುಗಳಿಗಿದೆಯಂತೆ ನಿನಗೆ ಗೊತ್ತಾ? ಅದು ಎಂಟು ಮೈಲಿ ದೂರದಿಂದ ಶವವನ್ನು ಗುರುತಿಸುವ ಶಕ್ತಿಯುಳ್ಳ ಕಣ್ಣುಗಳನ್ನು ಹೊಂದಿದೆ. ಅದೇ ನಮ್ಮ ಕಣ್ಣುಗಳಿಂದ 100 ಮೀಟರ್‌ಗಳನ್ನು ದಾಟಿ ವಸ್ತುಗಳನ್ನು ಗುರುತಿಸಲಾರೆವು.

“ಇತಂಹ ಪರಿಮಿತ ಮತ್ತು ಅಪರಿಪೂರ್ಣ ಇಂದ್ರಿಯಗಳಿಂದ ನೀನು ಪರಮ ಪ್ರಭುವನ್ನು ಕಾಣಬಲ್ಲೆಯಾ?

ರಮೇಶ “ಅವನನ್ನು ಕಾಣಲಾರೆವು. ಆದರೆ ಅವನು ಇದ್ದಾನೆ. ಒಳ್ಳೆಯ ಮಾತು ನಿನ್ನದು. ಅವನನ್ನು ಹೇಗೆ ಕಾಣಬಹುದಪ್ಪ?”

  • ಭಗವತ್ಪ್ರೇಮ ಪಡೆಯುವ ವಿಧಾನ

ಸತೀಶ ಹೇಳಿದ “ಪ್ರೇಮಾಂಜನ ಚ್ಹುರಿತ ವಿಲೋಚನೇನ….” ನಿನ್ನ ಮನಸ್ಸು ಇಂದ್ರಿಯಗಳ ಮತ್ತು ನಿನ್ನ ವ್ಯಕ್ತಿತ್ವದ ಆಳದಲ್ಲಿ ಕೃಷ್ಣಪ್ರೇಮ ಮೊಳಕೆಯೊಡೆದಾಗ ನೀನು ಅವನನ್ನು ಕಾಣಬಹುದು. ನೀನು ಧನಿಕನಾಗಲಿ, ಸೌಂದರ್ಯವಂತನಾಗಲಿ, ಪಂಡಿತನಾಗಲಿ ಆಗಬೇಕಾಗಿಲ್ಲ.

ರಮೇಶನ ಮನಸ್ಸು ಸ್ವಲ್ಪ ಕರಗಿತ್ತು. “ಆ ಪ್ರೇಮವನ್ನು ಹೇಗೆ ಬೆಳೆಸಿಕೊಳ್ಳಬಹುದು” ಎಂದು ಕೇಳಿದ.

ಸತೀಶ “ಮೊದಲು ಭಗವಂತನಿಲ್ಲ ಎಂಬ ಹುಸಿ ನಂಬಿಕೆಯನ್ನು ಬಿಟ್ಟು ವೇದಶಾಸ್ತ್ರಗಳ ತರ್ಕವನ್ನು ಶ್ರವಣ ಮಾಡು. ಅದರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೋ. ಕೃಷ್ಣ ಪ್ರೇಮವನ್ನು ಬೆಳೆಸಲು ಕಲಿಯುಗದಲ್ಲಿ ಹರಿನಾಮ ಸಂಕೀರ್ತನೆಯೇ ಮಾರ್ಗ ಮತ್ತು ಅದರಲ್ಲೂ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಮಹಾಮಂತ್ರವನ್ನು ಜಪಿಸು. ಯೋಚಿಸುವವನಂತೆ ರಮೇಶ ತಲೆಯಾಡಿಸಿದ. ರಮೇಶನಿಗೆ ನಿಧಾನಕ್ಕೆ ದೇವರಿದ್ದಾನೆ ಅನ್ನಿಸತೊಡಗಿತು. ಶ್ರೀಲ ಪ್ರಭುಪಾದರ “ಪರಿಪೂರ್ಣ ಪ್ರಶ್ನೆಗಳು, ಪರಿಪೂರ್ಣ ಉತ್ತರಗಳು” ಎಂಬ ಪುಸ್ತಕವನ್ನು ಸತೀಶ ರಮೇಶನಿಗೆ ಕೊಟ್ಟು ಮೃದುವಾಗಿ ಕೈಯನ್ನು ಒತ್ತಿದ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi