ದೇವರು – ಒಂದು ವಸ್ತುನಿಷ್ಠ ಸಂಗತಿಯೇ?

ಆಂಗ್ಲ ಮೂಲ: ಧನಂಜಯ ಪಂಡಿತ ದಾಸ      ಅನುವಾದ : ಈಶ್ವರಚಂದ್ರ

ದೇವರನ್ನು ನೋಡಬಹುದು, ಆದರೆ ಅಣುವನ್ನು ನೋಡಬೇಕಾದರೆ ಹೇಗೋ ಹಾಗೆ ಸಂಬಂಧಪಟ್ಟ ಮಾಹಿತಿಯನ್ನು ಅರ್ಥೈಸಲು ನಮಗೆ ತರಬೇತಿಯನ್ನು ಕೊಡಬೇಕು.

‘ಧರ್ಮವು ಜನರ ಅಫೀಮು’ ಎಂಬ ಕಾರ್ಲ್‌ ಮಾರ್ಕ್ಸ್‌ ಹೇಳಿಕೆಯನ್ನು ಅನೇಕ ಬುದ್ಧಿಜೀವಿಗಳು ಒಪ್ಪಿಕೊಂಡಂತೆ ತೋರುತ್ತದೆ. ಈ ಕಾಲದ ಒಂದು ಸಾಮಾನ್ಯ ತಪ್ಪು ಗ್ರಹಿಕೆಯೆಂದರೆ ದೇವರು, ಮನುಷ್ಯನ ಸೃಷ್ಟಿ ಜೀವನದ ಸಮಸ್ಯೆಗಳಿಂದ ತತ್ತರಿಸಿ, ವಾಸ್ತವ ಸ್ಥಿತಿಯನ್ನು ಎದುರಿಸಲು ಧೈರ್ಯವಿಲ್ಲದವರಿಗೆ ಮಾನಸಿಕವಾದ ಒಂದು ಊರುಗೋಲು, ದುರದೃಷ್ಟಕರವಾದ ಈ ತಪ್ಪುಗ್ರಹಿಕೆಯು, ದೇವರ ಅಸ್ತಿತ್ವವು ಒಂದು ವಸ್ತುನಿಷ್ಠ ಸಂಗತಿ ಎಂಬುದನ್ನು ಕಲಿಯದಂತೆ ತಡೆಯುತ್ತದೆ.

ಒಂದು ಇಟ್ಟಿಗೆ ಗೋಡೆಯು ಎಷ್ಟು ವಸ್ತುನಿಷ್ಠವೋ ಅಷ್ಟರಮಟ್ಟಿಗೆ ದೇವರ ಅಸ್ತಿತ್ವವನ್ನು ತೋರ್ಪಡಿಸಬೇಕೆಂದರೆ, ವಸ್ತುನಿಷ್ಟ ಎಂದರೆ ಏನು ಎಂದು ಮೊದಲು ನಾವು ವ್ಯಾಖ್ಯೆ ಮಾಡಬೇಕು. ಕನ್ನಡ ನಿಘಂಟಿನ ಪ್ರಕಾರ ಆಕ್ಟಿವ್ ಎಂದರೆ, “ಕರ್ತೃವಿನ ಮನದಲ್ಲಿ ಮಾತ್ರ ಅಸ್ತಿತ್ವದಲ್ಲಿ ಇರುವ ಯಾವುದೋ ಒಂದಕ್ಕಿಂತ ವಿಭಿನ್ನವಾದ, ತಿಳಿದ ಅಥವಾ ಗ್ರಹಿಸಿದ ವಸ್ತುವಿನ ಅಥವಾ ವಸ್ತುವನ್ನು ಕುರಿತಂತೆ ಇರುವ” ಎಂದು ಅರ್ಥವಾಗುತ್ತದೆ.

ಯಾವುದೋ ಒಂದು ವಸ್ತುನಿಷ್ಠವಾಗಿ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ತನ್ನದೇ ಆದ ಸ್ವತಂತ್ರ ಅಸ್ತಿತ್ವವಿದೆ ಮತ್ತು ಅದು ಯಾರೋ ಒಬ್ಬರ ಕಲ್ಪನೆಯ ಕೂಸು ಅಲ್ಲ ಎಂದು ಅರ್ಥವಾಗುತ್ತದೆ. ಹಾಗಾದರೆ ದೇವರ ಅಸ್ತಿತ್ವವು ನಮ್ಮ ಕಲ್ಪನೆಯ ಕೂಸು ಅಲ್ಲ ಎಂದು ತೋರ್ಪಡಿಸುವುದು ಹೇಗೆ?

“ದೇವರನ್ನು ನನಗೆ ತೋರಿಸಿ” ಎಂದು ಅನೇಕ ಜನರು ಕೇಳುತ್ತಾರೆ. ಸದಾಕಾಲವೂ ಇದನ್ನು ನಾನು ಕೇಳುತ್ತೇನೆ. “ಸರಿ, ದೇವರು ಇದ್ದಾನೆಂದರೆ, ಸಾಧಿಸಿ ತೋರಿಸಿ. ಈ ಕ್ಷಣವೇ ದೇವರನ್ನು ತೋರಿಸಿ” – ಯಾವುದಾದರೊಂದರ ಅಸ್ತಿತ್ವವನ್ನು ಪರೀಕ್ಷಿಸಬೇಕೆಂದರೆ ನೋಡುವುದೊಂದೇ ಮಾರ್ಗ ಎಂಬಂತೆ ಕೇಳುತ್ತಾರೆ.

ಆಗಲಿ, ದೇವರನ್ನು ನೀವು ನೋಡಬಹುದು, ಆದರೆ ದೇವರನ್ನು ನೋಡುವುದು ಅಷ್ಟು ಅಗ್ಗದ ಸಂಗತಿಯೇನಲ್ಲ. ಸಮಸ್ಯೆಯೇನೆಂದರೆ ಜನರಿಗೆ ಕೇಳಿದ ಕೂಡಲೇ ದಿಢೀರ್ ಎಂದು ದೇವರು ಪ್ರತ್ಯಕ್ಷನಾಗಬೇಕು. ಈ ಪುಟವನ್ನು ನೀವು ನೋಡುತ್ತಿರುವಷ್ಟು ನೇರವಾಗಿಯೇ ನೀವು ದೇವರನ್ನು ನೋಡಬಹುದು. ಆದರೆ ಅದಕ್ಕೆ ಸಮಯ ಹಿಡಿಯುತ್ತದೆ. ಅದಕ್ಕೆ ನೀವು ಅರ್ಹತೆಯನ್ನು ಗಳಿಸಬೇಕು.

ಮಿಗಿಲಾಗಿ, ಯಾವುದಾದರೊಂದನ್ನು ನಂಬಬೇಕಾದರೆ ನಾವು ನೋಡಲೇಬೇಕಾದ ಅಗತ್ಯವೇನಿದೆ? “ನೋಡುವುದೇ ನಂಬುವುದು” ಎಂದು ನಾವು ಹೇಳುತ್ತೇವೆ. ಆದರೆ ವಾಸ್ತವದಲ್ಲಿ ನಾವು ಕಣ್ಣಿಗೆ ಕಾಣದ ಎಷ್ಟೋ ಸಂಗತಿಗಳನ್ನು ನಂಬುತ್ತೇವೆ. ನಮಗೆ ನಂಬಲು ಇಷ್ಟವಿಲ್ಲದಿದ್ದಾಗ ಮಾತ್ರ ಕಠಿಣವಾದ ನಿಯಮಗಳನ್ನು ರೂಪಿಸುತ್ತೇವೆ. ನೋಡಿದಾಗ ಮಾತ್ರ ಅದನ್ನು ನಂಬುತ್ತೇವೆ ಎಂದು ಹೇಳುತ್ತೇವೆ.

ನಗರದ ಇನ್ನೊಂದು ಮೂಲೆಯ ರಾಸಾಯನಿಕಗಳ ಕಾರ್ಖಾನೆಯಲ್ಲಿ ದಳ್ಳುರಿ ಹಬ್ಬಿದೆ ಎಂದು ಆಕಾಶವಾಣಿಯಲ್ಲಿ ಕೇಳಿದಾಗ ಆ ಸುದ್ದಿಯನ್ನು ಒಪ್ಪಿಕೊಳ್ಳುತ್ತೇವೆ. “ನನಗೆ ಬೆಂಕಿಯನ್ನು ತೋರಿಸಿ’ ಎಂದು ನಾವು ಹೇಳುವುದಿಲ್ಲ. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ.

ಏಕೆಂದರೆ ಆಕಾಶವಾಣಿ ಉದ್ಘೋಷಕರನ್ನು ನಾವು ನಂಬುತ್ತೇವೆ. ಅಲ್ಲದೆ ನಗರದ ಆ ಭಾಗಕ್ಕೆ ವಾಹನದಲ್ಲಿ ಹೋಗಿ ಸ್ವತಃ ಪರೀಕ್ಷಿಸುವಷ್ಟು ವ್ಯವಧಾನ ನಮಗಿಲ್ಲ. ನಾವು ಸ್ವತಃ ನೋಡದಿದ್ದರೂ ಬೆಂಕಿಯು ಒಂದು ವಸ್ತುನಿಷ್ಠ ಸಂಗತಿಯಾಗಿದೆ.

ಮೃತ್ಯುವು ಕೂಡ ಒಂದು ವಸ್ತುನಿಷ್ಠ ಸಂಗತಿ. ಮೃತ್ಯುವು ನಮ್ಮ ಕಲ್ಪನೆಯ ಕೂಸು ಎಂದು ಹೇಳುವಷ್ಟು ಧೈರ್ಯ ಯಾರಿಗಾದರೂ ಇದೆಯೆ? ಯಾರಿಗೂ ಇಲ್ಲ ಎನ್ನಿಸುತ್ತದೆ ನನಗೆ. ಆದರೆ ನಾವು ಯಾರೂ ನಮ್ಮದೇ ಸಾವನ್ನು ಕಂಡಿಲ್ಲ. ಎಂದ ಮೇಲೆ, ನಾವು ನೋಡದೇ ಇರುವುದರಿಂದ ನಮ್ಮ ಮೃತ್ಯು ಸುನಿಶ್ಚಿತ ಎಂದು ನಮಗೆ ಹೇಗೆ ಗೊತ್ತು? ಜ್ಞಾತದಿಂದ ಅಜ್ಞಾತವನ್ನು ಅರಿಯುವ ಕ್ರಮದಿಂದ ನಾವು ತಿಳಿಯಬಹುದು.

ಹಿಂದಿನವರು ಎಲ್ಲರೂ, ಒಬ್ಬರೂ ಉಳಿಯದಂತೆ ಮೃತರಾಗಿ ಹೋಗಿದ್ದಾರೆ. ಎಂದಮೇಲೆ ನಮಗೂ ಕೂಡ ಮೃತ್ಯುವು ಅನಿವಾರ್ಯ ಸಂಗತಿ ಎಂಬ ನಿರ್ಣಯಕ್ಕೆ ಬರುವುದು ಔಚಿತ್ಯಪೂರ್ಣ.

ಪರಮಾಣುವಿನ ಅಸ್ತಿತ್ವದ ಸಂಗತಿ ಏನು? ಪರಮಾಣುವಿನ ಅಸ್ತಿತ್ವವು ವ್ಯಕ್ತಿಯೊಬ್ಬನ ವೈಯಕ್ತಿಕ ನಂಬಿಕೆ ಮಾತ್ರ ಎಂದು ಖಂಡಿತ ಯಾರೂ ದೂರಲಾರರು. ಆದರೆ ಯಾರಿಗಾದರೂ ನಾವು ಪರಮಾಣುವನ್ನು ತೋರಿಸಬಲ್ಲೆವೆ? ಪರಮಾಣುಗಳು ಅಸ್ತಿತ್ವದಲ್ಲಿವೆ ಎಂದು ನಾವು ಪ್ರದರ್ಶಿಸಿ ತೋರಿಸಬಹುದು, ಆದರೆ ಅದಕ್ಕೆ ಸಮಯ ಹಿಡಿಯುತ್ತದೆ.

ಇದ್ದಕ್ಕಿದ್ದಂತೆಯೇ ಕಣ ವೇಗವರ್ಧಕ ಪ್ರಯೋಗಶಾಲೆಗೆ (particle accelerator laboratory) ನುಗ್ಗಿ ತಿರುಗಣೆ ತಿರುಗಿಸುತ್ತ ಗಣಕಯಂತ್ರದ ತೆರೆಯನ್ನು ನೋಡುತ್ತಾ ಕಾರ್ಯಮಗ್ನರಾಗಿರುವ ವಿಜ್ಞಾನಿಗಳ ಸಮೂಹದ ಬಳಿ ಧಾವಿಸಿ, ಪರಮಾಣುಗಳನ್ನು ತೋರಿಸುವ ಮೂಲಕ ಅವುಗಳ ಅಸ್ತಿತ್ವವನ್ನು ಕೂಡಲೇ ಸಾಧಿಸಿ ತೋರಿಸಿ ಎಂದು ಕೇಳಲಾಗುವುದಿಲ್ಲ.

ಮೊಟ್ಟಮೊದಲನೆಯದಾಗಿ, ಪರಮಾಣುಗಳು ಎಷ್ಟು ಸೂಕ್ಷ್ಮವಾಗಿರುತ್ತವೆಂದರೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ಕೂಡ ಅದನ್ನು ನೋಡಲಾಗುವುದಿಲ್ಲ. ಆದ್ದರಿಂದ ಯಾರಾದರೊಬ್ಬರು ನಿಮಗೆ ಪರಮಾಣುವನ್ನು ತೋರಿಸುವ ಸಂಭವವಿಲ್ಲ.

ಪರಮಾಣುವಿನ ಅಸ್ತಿತ್ವವನ್ನು ಕೂಡಲೇ ಸಾಧಿಸಿ ತೋರಿಸಬೇಕೆಂದು ಯಾವ ವಿಜ್ಞಾನಿಗಳ ಬಳಿ ಉದ್ಧಟತನದಿಂದ ನೀವು ಕೇಳಿದ್ದೀರೋ ಅವರು ಸಾಕ್ಷ್ಯಗಳನ್ನು ಒದಗಿಸಬೇಕೆಂದರೆ, ಗಣಕಯಂತ್ರದ ಮುದ್ರಿತ ಕಾಗದದ ಮೇಲೆ ದಿಗ್ಭ್ರಮೆ ಹುಟ್ಟಿಸುವಂತಹ ಸೂತ್ರಗಳನ್ನೂ, ಸಂಖ್ಯೆಗಳನ್ನೂ ತೋರಿಸಿದಾಗ, ಅದನ್ನು ಅರ್ಥಮಾಡಿಕೊಳ್ಳಲೂ ನಿಮಗೆ ಸಾಧ್ಯವಾಗುವುದಿಲ್ಲ.

ಆಗ ನೀವು, “ಎಲ್ಲಿದೆ ಪರಮಾಣು? ನನಗೆ ಯಾವ ಪರಮಾಣುವೂ ಕಾಣಿಸುತ್ತಿಲ್ಲವಲ್ಲ?” ಎನ್ನಬಹುದು. ಪರಮಾಣುವಿನ ಅಸ್ತಿತ್ವವನ್ನು ಸಾಧಿಸಿ ತೋರಿಸುವಂತಹ ದತ್ತಾಂಶಗಳನ್ನು ಅರ್ಥೈಸುವ ತರಬೇತಿ ನಿಮಗೆ ಆಗಿಲ್ಲದಿರುವುದರಿಂದ ನೀವು ಪರಮಾಣುವನ್ನು ನೋಡಲಾಗುವುದಿಲ್ಲ. ಸತ್ಯನಿಷ್ಠವಾಗಿ ಮತ್ತು ವಸ್ತುನಿಷ್ಠವಾಗಿ ಯಾವುದಾದರೂ ಅಸ್ತಿತ್ವದಲ್ಲಿರಬೇಕಾದರೆ, ಅದನ್ನು ನೀವು ಕಣ್ಣಾರೆ ನೋಡಲು ಸಾಧ್ಯವಾಗಬೇಕು ಎಂಬ ಬಾಲಿಶ ಅಭಿಪ್ರಾಯ ನಿಮಗಿದೆ.

ಸತ್ಯಾಂಶ ಮೊದಲಾದವುಗಳ ಆಧಾರದಿಂದ ಮಾತ್ರ ನಾವು ಪರಮಾಣುವನ್ನು ಗ್ರಹಿಸಬಹುದಷ್ಟೆ. ಕರಾರುವಾಕ್ಕಾಗಿ ನಿಯಂತ್ರಿತವಾದ ಸನ್ನಿವೇಶಗಳಲ್ಲಿ ಭೌತದ್ರವ್ಯ ವಸ್ತು ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಪರಮಾಣುವು ಅಸ್ತಿತ್ವದಲ್ಲಿ ಇರಬೇಕು ಎಂದು ನಾವು ಅರ್ಥಮಾಡಿಕೊಳ್ಳಬಹುದು.

ಆದರೆ ಈ ಸನ್ನಿವೇಶಗಳಿಲ್ಲದೆ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರಗಳನ್ನು ಅಧ್ಯಯನ ಮಾಡದೆ ನಾವು ಪರಮಾಣುವಿನ ಅಸ್ತಿತ್ವದ ಸಾಕ್ಷ್ಯಗಳನ್ನು ಎಂದಿಗೂ ಅರ್ಥ ಮಾಡಿಕೊಳ್ಳಲಾರೆವು.

ಎಂದ ಮೇಲೆ ದೇವರ ಅಸ್ತಿತ್ವವನ್ನು ಸಾಧಿಸುವ ವಿಷಯ ಬಂದಾಗ ಇಬ್ಬಗೆಯ ನೀತಿಯನ್ನು ಅನುಸರಿಸುವುದು ಏಕೆ? ನಗರದ ಇನ್ನೊಂದು ಪಾರ್ಶ್ವದಲ್ಲಾದ ಬೆಂಕಿಯನ್ನು ನೋಡದೆಯೇ ನಾವು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ನಾವು ನಮ್ಮ ಸಾವನ್ನು ನೋಡಿಲ್ಲದಿದ್ದರೂ, ನಾವು ಒಂದು ದಿನ ಸಾಯುತ್ತೇವೆ ಎಂದು ಒಪ್ಪಿಕೊಳ್ಳುತ್ತೇವೆ.

ವಿಜ್ಞಾನಿಗಳೇ ಸ್ವತಃ ಪರಮಾಣುವನ್ನು ನೋಡಿಲ್ಲದಿದ್ದರೂ ಅವು ಇವೆ ಎಂಬ ಅವರ ಘೋಷಣೆಯನ್ನು ನಾವು ಅಂಗೀಕರಿಸುತ್ತೇವೆ. ಆದರೆ ಯಾರಾದರೂ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿದ್ದರೆ, ಚಾರಿತ್ರ್ಯದ ದೌರ್ಬಲ್ಯದಿಂದಾಗಿ ಮಾನಸಿಕ ಊರುಗೋಲೊಂದಕ್ಕೆ ಅವರು ತಡಕಾಡುತ್ತಿದ್ದಾರೆ ಎಂದು ಮುಖ ತಿರುಗಿಸಿ ಹೇಳುವುದೇಕೆ?

ಪ್ರತಿಯೊಂದನ್ನು ಅರ್ಥ ಮಾಡಿಕೊಳ್ಳಲೂ ಒಂದೊಂದು ಪ್ರಕ್ರಿಯೆ ಇರುತ್ತದೆ. ದೇವರನ್ನು ಅರ್ಥಮಾಡಿಕೊಳ್ಳಲೂ ಒಂದು ಸೂಕ್ತವಾದ ಪ್ರಕ್ರಿಯೆ ಇದೆ. ಅಧಿಕೃತ ಅಧ್ಯಯನ ತರಗತಿಗೆ ನೀವು ಸೇರಿಕೊಳ್ಳಬೇಕು.

ಕ್ಷೇತ್ರದಲ್ಲಿರುವ ತಜ್ಞರು ಶಿಫಾರಸು ಮಾಡಿದ ಹಾಗೂ ಆಧ್ಯಾತ್ಮಿಕ ಶಿಕ್ಷಣಕ್ಕೆ ಅತ್ಯಂತ ಪರಿಣಾಮಕಾರಿ ಕೈಪಿಡಿ ಎಂದು ಸಾಧಿತವಾದ ಪಠ್ಯಪುಸ್ತಕಗಳನ್ನು ಬಳಸಿ, ದೇವರ ನೇರ ಗ್ರಹಿಕೆಯನ್ನು ಪಡೆಯಬೇಕೆಂದಿದ್ದರೆ ನಿಯಂತ್ರಿತ ಸನ್ನಿವೇಶಗಳಲ್ಲಿ ಸೂಕ್ತವಾದ ವಿಧಾನಗಳನ್ನು ಅನುಸರಿಸಿ, ಯಾವುದೇ ವಿಜ್ಞಾನದ ಹಾಗೆ ಇದೂ ವ್ಯವಸ್ಥಿತವಾದದ್ದು ಮತ್ತು ನಿರೀಕ್ಷಿಸಬಹುದಾದದ್ದು.

ಆದರೂ ದೇವರನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗೂ, ಭೌತದ್ರವ್ಯವನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗೂ ನಡುವೆ ವ್ಯತ್ಯಾಸವಿದೆ – ಏಕೆಂದರೆ ದೇವರಾದ ಕೃಷ್ಣನು ಒಬ್ಬ ವ್ಯಕ್ತಿ.

ಭೌತದ್ರವ್ಯವು ನಿರ್ಜೀವವಾದುದರಿಂದ, ನಾವು ಅದನ್ನು ಯಾವುದೇ ತೊಂದರೆ ಇಲ್ಲದೆ ಎಲ್ಲಿ ಬೇಕೆಂದರಲ್ಲಿ ಎಸೆಯಬಹುದು. ಆದರೆ ಜ್ಞಾನವನ್ನು ಪಡೆಯಲು ನಿಯಂತ್ರಿತ ಅನುಸಂಧಾನವೊಂದೇ ಇರುವ ಪ್ರಕ್ರಿಯೆ ಎಂದು ಯಾರು ಹೇಳಿದರು? ಭೌತದ್ರವ್ಯವನ್ನು ಕುರಿತ ಸಂಶೋಧನೆಗೆ ಬಳಸುವ ವಿಧಾನಗಳನ್ನೇ ಪರಮ ಪ್ರಭುವಿನ ಹುಡುಕಾಟಕ್ಕೂ ಅನ್ವಯಿಸಬಹುದೆಂದು ಭಾವಿಸುವುದು ಔಚಿತ್ಯಪೂರ್ಣವೆ?

ದೇವರಾದ ಕೃಷ್ಣನು ಕೂಡ ನಮ್ಮಂತೆಯೇ ಚಿಂತಿಸುವ, ಪರಿಭಾವಿಸುವ, ಆಸೆಪಡುವ ವ್ಯಕ್ತಿ. ಆದರೆ ಅವನು ನಮ್ಮಂತೆ ಪರಿಮಿತನಲ್ಲ – ಅಪರಿಮಿತ. ಅವನು ಸರ್ವಜ್ಞ. ಅವನು ಅನಂತ. ಅವನು ಸಮಸ್ತವನ್ನೂ ನಿಯಂತ್ರಿಸುತ್ತಾನೆ. ಇಷ್ಟಾದರೂ ಅವನು ಪ್ರಜ್ಞಾವಂತನಾದ ವ್ಯಕ್ತಿ.

ಈಗ ನೀವು ಯಾವುದಾದರೂ ಒಬ್ಬ ವ್ಯಕ್ತಿಯ ಬಗೆಗೆ ಏನನ್ನಾದರೂ ತಿಳಿದುಕೊಳ್ಳಬೇಕೆಂದರೆ ಅವನನ್ನೇ ಕೇಳುವುದು ಅತ್ಯುತ್ತಮ ವಿಧಾನ. ಒಬ್ಬ ವ್ಯಕ್ತಿ ಕೊರಳಲ್ಲಿ ಒಂದು ಪಾಕವನ್ನು ಏಕೆ ಧರಿಸಿದ್ದಾನೆಂದು ನೀವು ತಿಳಿದುಕೊಳ್ಳಬೇಕೆಂದರೆ, ಭೌತದ್ರವ್ಯ ಪರೀಕ್ಷಣೆಯ ವಿಧಾನವನ್ನು ಅನುಸರಿಸುವುದು ಸೂಕ್ತವಲ್ಲ ಎಂದು ತಿಳಿದುಕೊಳ್ಳಬೇಕು.

ವ್ಯಕ್ತಿಯ ಬಳಿಗೆ ನೇರವಾಗಿ ಹೋಗಿ, ಅವನಿಗೆ ಏನೂ ಹೇಳದೆ ಪದಕವನ್ನು ಎಳೆದುಕೊಂಡು ಪರೀಕ್ಷಿಸುವುದಾಗಲಿ, ಅದನ್ನು ತೆರೆದು ನೋಡಲು ಪ್ರಯತ್ನಿಸುವುದಾಗಲಿ ಅನಪೇಕ್ಷಣೀಯ. ನೀವು ಹಾಗೆ ಮಾಡಿದರೆ ಅವನು ಝಾಡಿಸಿ ಒದ್ದಾನು ವ್ಯಕ್ತಿಗಳೊಡನೆ ವೈಯಕ್ತಿಕ ಸಂಪರ್ಕವನ್ನು ಸಾಧಿಸಬೇಕು. ಅವನ ಮನಸ್ಸಂತೋಷಪಡಿಸಲು ಪ್ರಯತ್ನಿಸಬೇಕು. ಆಗ ಅವನು ಬಯಸಿದರೆ ತನ್ನನ್ನು ಕುರಿತು ಎಲ್ಲವನ್ನೂ ತಿಳಿಸಬಲ್ಲ.

ಪ್ರಭು ಕೃಷ್ಣನು ಒಬ್ಬ ವ್ಯಕ್ತಿ. ಅವನು ನಮ್ಮ ಸರ್ವೋನ್ನತ ವ್ಯಕ್ತಿ. ಅವನು ಏಕೆ ನಮ್ಮ ಹಕ್ಕೊತ್ತಾಯಕ್ಕೆ ಕೂಡಲೇ ಪ್ರತಿಕ್ರಿಯಿಸಿ ನಮ್ಮ ಮುಂದೆ ಪ್ರತ್ಯಕ್ಷನಾಗಬೇಕು? ನಾನು ನಿಮಗೆ ದೂರವಾಣಿ ಕರೆ ಮಾಡಿ, “ನಮ್ಮ ಮನೆಗೆ ಕೂಡಲೇ ಬನ್ನಿ ಎಂದು ಆಜ್ಞಾಪಿಸುತ್ತಿದ್ದೇನೆ” ಎಂದರೆ ನೀವು ಹಾಗೆ ಮಾಡುತ್ತೀರಾ? ನನಗೇನೋ ಅನುಮಾನ.

ತನ್ನನ್ನು ಅರಿತುಕೊಳ್ಳುವುದು ಹೇಗೆ ಎಂದು ಸ್ವತಃ ಕೃಷ್ಣನೇ ಭಗವದ್ಗೀತೆಯಲ್ಲಿ (18.55) ಹೇಳಿದ್ದಾನೆ – ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿತತ್ತ್ವತಃ – “ಭಕ್ತಿಸೇವೆಯಿಂದ ಮಾತ್ರ, ದೇವೋತ್ತಮ ಪರಮ ಪುರುಷನಾದ ನನ್ನನ್ನು ನಾನಿರುವಂತೆ ಮನುಷ್ಯನು ಅರ್ಥಮಾಡಿಕೊಳ್ಳಬಲ್ಲ.

“ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ಎಂದರೆ ಅವನನ್ನು ಸಂತುಷ್ಟಿಗೊಳಿಸುವುದು. ಆಗ ಅವನು ಇಚ್ಛಿಸಿದರೆ, ಅವನನ್ನು ಕುರಿತ ಜ್ಞಾನವನ್ನು ನಮಗೆ ನೀಡುತ್ತಾನೆ. ಆದರೆ ಅವನನ್ನು ಸಂತುಷ್ಟಿಗೊಳಿಸಲು ನಿರ್ದಿಷ್ಟವಾಗಿ ನಾವು ಏನು ಮಾಡಬೇಕು? ನಾವು ಏನು ಹೇಳಬೇಕು? ಸರಿಯಾದ ರೀತಿಯಲ್ಲಿ ಮಾಡುತ್ತಿದ್ದೇವೆಂದು ನಮಗೆ ಹೇಗೆ ಗೊತ್ತಾಗುತ್ತದೆ?

ದಾರಿ ತಪ್ಪದೆ ಅಥವಾ ಅಡ್ಡದಾರಿ ಹಿಡಿಯದೆ ಶೀಘ್ರವಾಗಿ ಕಲಿಯಬೇಕೆಂದರೆ ಯಾವುದೇ ಕ್ಷೇತ್ರದಲ್ಲಿ ನಮಗೊಬ್ಬರು ಗುರುಗಳು ಬೇಕು. ದೈವ ವಿಜ್ಞಾನವನ್ನು ತಿಳಿದವರೊಬ್ಬರು ನಮಗೆ ಬೇಕು. ನಮ್ಮ ಅಧ್ಯಯನದ ಉದ್ದಕ್ಕೂ ಮಾರ್ಗದರ್ಶಕರೊಬ್ಬರು ಬೇಕು. “ಆಧ್ಯಾತ್ಮಿಕವಾಗಿ ಕಾಣಿಸುವ” ಯಾವುದೇ ವ್ಯಕ್ತಿಯನ್ನು ಆರಿಸಿಕೊಳ್ಳಬೇಡಿ. ದೀರ್ಘಕಾಲದಿಂದ ಈ ಪ್ರಕ್ರಿಯೆಯನ್ನು ಆಚರಣೆಯಲ್ಲಿಟ್ಟುಕೊಂಡಿರುವ ಮತ್ತು ತಜ್ಞರಾದ ವ್ಯಕ್ತಿ ನಮಗೆ ಬೇಕು. ಅವರು ಎಲ್ಲ ಶ್ರೇಷ್ಠ ಆಧ್ಯಾತ್ಮಿಕ ಗ್ರಂಥಗಳನ್ನು ತಿಳಿದವರಾಗಿರಬೇಕು.

ಎಲ್ಲದಕ್ಕಿಂತ ಮುಖ್ಯವಾಗಿ, ಬೇರೆಲ್ಲದಕ್ಕಿಂತ ಮಿಗಿಲಾಗಿ ಅವರು ಕೃಷ್ಣನನ್ನು ಪ್ರೀತಿಸುತ್ತಿರಬೇಕು. ಕೃಷ್ಣ ಪ್ರೇಮದ ಹುಚ್ಚು ಹಿಡಿದ ವ್ಯಕ್ತಿಗೆ ತನ್ನ ದೇಹದ ಅಗತ್ಯಗಳಿಗೆ ಸರಬರಾಜು ಮಾಡುವ ಆಸಕ್ತಿ ಇರುವುದಿಲ್ಲ. ಅವನು ತನ್ನ ನಾಲಗೆ, ಕಣ್ಣುಗಳು, ಕಿವಿಗಳು ಅಥವಾ ಜನನೇಂದ್ರಿಯದ ಮೂಲಕ ಸಂತೋಷವನ್ನು ಪಡೆಯಲು ಬಯಸುತ್ತಿರುವುದಿಲ್ಲ ಏಕೆಂದರೆ ಇನ್ನೂ ಉನ್ನತವಾದ ಸಂತೋಷದಲ್ಲಿ ಅವನು ಮಗ್ನನಾಗಿರುತ್ತಾನೆ.

ಗುರುಗಳು ಕೋಪ ಮತ್ತು ವ್ಯಾಮೋಹಗಳಿಂದಲೂ ಮುಕ್ತವಾಗಿರಬೇಕು. ವಾಹನ ನಿಲ್ಲಿಸುವ ಜಾಗದಲ್ಲಿ ಯಾರೋ ಅವರ ವಾಹನದ ಬಂಪರಿಗೆ ಡಿಕ್ಕಿ ಹೊಡೆದು ನೆಗ್ಗಿಸಿದ್ದಾರೆ ಎಂಬ ಕಾರಣಕ್ಕೆ ಅವರು ಕೋಪೋದ್ರಿಕ್ತಗೊಳ್ಳಬಾರದು.

ಅವರ ಮನೆಗೆ ಬೆಂಕಿ ಹತ್ತಿ ಉರಿಯಲಿ, ಅವರ ಹೆಂಡತಿ ಬೇರೊಬ್ಬನೊಡನೆ ಓಡಿ ಹೋಗಲಿ, ಅವರಿಗೆ ಮಿಲಿಯನ್ ಡಾಲರ್ ಹಣ ಉತ್ತರಾಧಿಕಾರದಿಂದ ಲಭಿಸಲಿ – ಎಲ್ಲ ಒಂದೇ ದಿನದಲ್ಲಿ ಸಂಭವಿಸಿದರೂ – ಅವರು ನಿರುದ್ವಿಗ್ನರಾಗಿಯೂ, ಶಾಂತರಾಗಿಯೂ ಇರುತ್ತಾರೆ. ಏಕೆಂದರೆ ಕೃಷ್ಣನನ್ನು ಬಲ್ಲವರು, ಈ ಲೋಕದಾಚೆ ಕೃಷ್ಣನೊಡನೆ ಇರುತ್ತಾರೆ. ನನಗಾಗಲಿ, ನಿಮಗಾಗಲಿ, ಇದು ಕಷ್ಟಸಾಧ್ಯವಾದ ಕೆಲಸದಂತೆ ತೋರಬಹುದು. ಆದರೆ ಇವೆಲ್ಲ ಸದ್ಗುರುಗಳ ಅರ್ಹತೆಗಳು.

ಅಂತಹ ಗುರುಗಳು ನಿಮಗೆ ದೊರಕಿದರೂ, ಶಿಷ್ಯರಾಗಿ ನೀವೂ ಕೂಡ ಅರ್ಹತೆಯನ್ನು ಗಳಿಸಿರಬೇಕು. ಗುರುಗಳ ಬೋಧನೆಗಳನ್ನು ನೀವು ಅನುಸರಿಸಬೇಕು. ನೀವು ಹಾಗೆ ಮಾಡಿದರೆ ಆಗ ಕೃಷ್ಣನನ್ನು ನೋಡುತ್ತೀರಿ. ಮಾಡದಿದ್ದರೆ ನೋಡಲಾಗುವುದಿಲ್ಲ.

ಆಗ ನೀವೂ ಕೂಡ ಪ್ರಾಮಾಣಿಕವಾಗಿ ಹಿಂದೆ ಎಷ್ಟೋ ಜನ ಹೇಳಿದಂತೆ, “ಕೃಷ್ಣನು ಒಂದು ವಸ್ತುನಿಷ್ಠ ಸಂಗತಿ. ಇದು ನನಗೆ ಗೊತ್ತು. ಏಕೆ೦ದರೆ ನಾನು ಅವನನ್ನು ನೋಡಿದ್ದೇನೆ” ಎಂದು ಹೇಳಲು ಸಾಧ್ಯವಾಗುತ್ತದೆ.

ನಾವು ಕೂಡಲೇ ದೇವರನ್ನು ತೋರಿಸದಿದ್ದರೆ ದೇವರು ಇರುವನ್ನು ಒಪ್ಪಿಕೊಳ್ಳದ ಜನ ಕಣ್ಣಿಗೆ ಕಟ್ಟಿಕೊಂಡ ಬಟ್ಟೆಯನ್ನು ಕಳಚದೆ ಸೂರ್ಯನನ್ನು ತೋರಿಸು ಎನ್ನುವವರ ಹಾಗೆ. ದುರದೃಷ್ಟವಶಾತ್, ಅಂತಹ ಮನೋಧರ್ಮದ ವ್ಯಕ್ತಿಗಳು ದೇವರೊಂದು ವಸ್ತುನಿಷ್ಠ ಸಂಗತಿ ಎಂದು ಎಂದಿಗೂ ತಿಳಿಯುವುದಿಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi