ಸರ್ವಶಕ್ತಿಯುತ ಪರಮ ನಿಯಂತ್ರಕನ ಶ್ರೇಷ್ಠ ಸೇವಕರು ಅವನನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಪ್ರಸನ್ನಗೊಳಿಸುತ್ತಾರೆ.
ಆಂಗ್ಲಮೂಲ : ಬ್ಯಾಕ್ ಟು ಗಾಡ್‌ಹೆಡ್
ಭಗವಂತನನ್ನು ಪರಮ ಜೀವಿ ಎಂದು ನಿರೂಪಿಸಲಾಗಿದೆ ಮತ್ತು ಅವನು ಎಲ್ಲದರ ಮೂಲ, ಮಾಲೀಕ ಮತ್ತು ನಿಯಂತ್ರಕ ಎಂದು ಅರ್ಥಮಾಡಿಕೊಳ್ಳಲಾಗಿದೆ. ಆದುದರಿಂದ ಅನೇಕ ಜನರು ಅವನನ್ನು ಪೂಜ್ಯಭಾವದಿಂದ ಆರಾಧಿಸುತ್ತಾರೆ ಮತ್ತು ರಕ್ಷಣೆಗಾಗಿ ಅವನ ಮೇಲೆ ಅವಲಂಬಿತರಾಗುತ್ತಾರೆ. ಆದರೂ ಕೆಲವು ಬಾರಿ ದೇವರಿಗೂ ನಿಯಂತ್ರಣಕ್ಕೆ ಒಳಪಡುವುದು ಇಷ್ಟವಾಗುತ್ತದೆ. ತನ್ನ ಪ್ರೀತಿಯ ಭಕ್ತಿಸೇವೆಯ ಶಕ್ತಿಯಿಂದ ಅವನನ್ನು ಜಯಿಸುವ ಅವನ ಶುದ್ಧ ಭಕ್ತ ಮಾತ್ರ ಅಂತಹ ನಿಯಂತ್ರಕನಾಗುವುದು ಸಾಧ್ಯ. ಶ್ರೀಲ ಶುಕದೇವ ಗೋಸ್ವಾಮಿ ಅವರಂತಹ ಅನೇಕ ಭಕ್ತರು ಮತ್ತು ಕವಿಗಳು ದೇವೋತ್ತಮ ಶ್ರೀ ಕೃಷ್ಣನ ಈ ಗುಣವನ್ನು ಭಕ್ತ-ವಶ್ಯತ (ಭಕ್ತರಿಂದ ನಿಯಂತ್ರಿಸಲ್ಪಟ್ಟ), ಭೃತ್ಯ-ವಶ್ಯತ (ಸೇವಕರಿಂದ ನಿಯಂತ್ರಿಸಲ್ಪಟ್ಟ), ಭಕ್ತೈರ್-ಜಿತತ್ವಂ (ಭಕ್ತರಿಂದ ಜಯಿಸಲ್ಪಟ್ಟ), ಭಕ್ತಿ-ಬದ್ಧಂ (ಪ್ರೀತಿಯ ಭಕ್ತಿಯಿಂದ ಬದ್ಧ) ಮತ್ತು ಭಕ್ತ-ಪರಾಧೀನ (ಭಕ್ತರ ಮೇಲೆ ಅವಲಂಬಿತ) ಎಂದು ವರ್ಣಿಸಿದ್ದಾರೆ.
ಶಿವ, ಬ್ರಹ್ಮ ಮತ್ತು ಇಂದ್ರರಂತಹ ಶ್ರೇಷ್ಠ ದೇವತೆಗಳೊಂದಿಗೆ ಇಡೀ ವಿಶ್ವವು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ನಿಯಂತ್ರಣದಲ್ಲಿದೆ. ಆದರೂ ಅವನ ಅಲೌಕಿಕ ಲಕ್ಷಣಗಳಲ್ಲಿ ಅವನು ತನ್ನ ಸೇವಕರ ನಿಯಂತ್ರಣಕ್ಕೆ ಒಳಪಟ್ಟಿರುವುದೂ ಸೇರಿದೆ. ಭಗವಂತನನ್ನು ತಮ್ಮ ಜೀವಾಳವೆಂದು ಭಾವಿಸುವ ಮತ್ತು ತಮ್ಮ ದೇಹಗಳು, ಮನಸ್ಸುಗಳು ಹಾಗೂ ಮಾತುಗಳನ್ನು ಅವನ ಆನಂದಕ್ಕಾಗಿಯೇ ಅರ್ಪಿಸಿರುವ ವೃಂದಾವನದ ನಿವಾಸಿಗಳಾದ ವ್ರಜವಾಸಿಗಳೊಂದಿಗೆ ವ್ಯವಹರಿಸುವಾಗ ಕೃಷ್ಣನು ಈ ಗುಣಲಕ್ಷಣವನ್ನು ಸ್ಪಷ್ಟವಾಗಿ ನಿರೂಪಿಸುತ್ತಾನೆ. ಕೃಷ್ಣನು ಗೆಳೆತನ, ತಂದೆತಾಯಿ ವಾತ್ಸಲ್ಯ ಮತ್ತು ದಾಂಪತ್ಯ ಪ್ರೇಮದ ಮನೋಭಾವದ ಮೂಲಕ ಅವರ ಪ್ರೀತಿಯ ಸೇವೆಯಿಂದ ಬಂಧಿಸಲ್ಪಡಲು ಆನಂದಿಸುತ್ತಾನೆ.
ಪರಮ ಮಾಲೀಕನು ಕದಿಯುತ್ತಾನೆ
ಶ್ರೀ ಕೃಷ್ಣನು ಸಾಟಿ ಇಲ್ಲದ ಪರಮ ಮಾಲೀಕ ಮತ್ತು ಎಲ್ಲ ಭೌತಿಕ ಮತ್ತು ಆಧ್ಯಾತ್ಮಿಕ ಲೋಕಗಳ ಮಾಲೀಕ. ಸಾವಿರಾರು ಭಾಗ್ಯ ಲಕ್ಷ್ಮಿಯರು ಅವನ ಸೇವೆಗೈಯುತ್ತಾರೆ. ಆದಾಗ್ಯೂ, ಅವನು ವ್ರಜ ಗೋಪಿಯರ ಮನೆಗಳಲ್ಲಿ ಬೆಣ್ಣೆಯನ್ನು ಕದಿಯುತ್ತಾನೆ. ತಮ್ಮ ಮನೆಗಳಿಂದ ಕೃಷ್ಣನು ಬೆಣ್ಣೆ ಕದಿಯುತ್ತಾನೆ ಎಂದು ತಿಳಿದ ಗೋಪಿಯರು ಕೃಷ್ಣನ ಕಣ್ಣಿಗೆ ಬೆಣ್ಣೆ ಕಾಣಬಾರದೆಂದು ಬೆಣ್ಣೆಯ ಮಡಕೆಗಳನ್ನು ಛಾವಣಿಯಿಂದ ತೂಗು ಬಿಡುವುದು ಅಥವಾ ಮಡಕೆಗಳನ್ನು ಕತ್ತಲೆ ಕೋಣೆಯಲ್ಲಿ ಇಡುವುದು – ಇಂತಹ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಕೃಷ್ಣನು ಕಳ್ಳತನದ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತ ಜಾಣತನದಿಂದ ಅವುಗಳತ್ತ ಸಾಗುತ್ತಾನೆ. ಗೋಪಿಯರು ಕೃಷ್ಣನ ಈ ಲೀಲೆಗಳನ್ನು ಆನಂದಿಸಿದರೂ ಬಾಹ್ಯವಾಗಿ ಅವರು ಅವನನ್ನು ಗದರಿಸುತ್ತಾರೆ. ಸರಳ ಮನಸ್ಸಿನ ಈ ಗೋಪಿಯರು ಕೃಷ್ಣನ ತಾಯಿಯಾದ ಯಶೋದೆಯ ಅದೃಷ್ಟವನ್ನು ಕೊಂಡಾಡುತ್ತಾರೆ.
ಯಶೋದಾಗೂ ಅದೇ ಆನಂದವನ್ನು ನೀಡಲು ಗೋಪಿಯರು ಅವಳ ಮನೆಗೆ ಹೋಗಿ ಕೃಷ್ಣನನ್ನು ಟೀಕಿಸುತ್ತ ಮತ್ತು ಅವನ ವಿರುದ್ಧ ದೂರು ನೀಡುತ್ತ ಅವನ ಬೆಣ್ಣೆ ಕದಿಯುವ ಲೀಲೆಯನ್ನು ವರ್ಣಿಸುತ್ತಾರೆ. ಕೃಷ್ಣನ ಲೀಲೆಗಳು ತುಂಬ ಆಕರ್ಷಕ. ಆದರೆ ಶುದ್ಧ ಭಕ್ತರಾದ ಗೋಪಿಯರು ಅಥವಾ ಭಾಗವತದಲ್ಲಿ ಶುಕದೇವ ಗೋಸ್ವಾಮಿಯವರು ಅದನ್ನು ವರ್ಣಿಸಿದಾಗ, ಅವರ ಪ್ರೀತಿ ಅಲ್ಲಿ ಸೇರಿರುವುದರಿಂದ ಅದು ಇನ್ನೂ ಹೆಚ್ಚು ಸವಿಯನ್ನು ನೀಡುತ್ತದೆ. ಆದುದರಿಂದ ಕೃಷ್ಣನು ಬೆಣ್ಣೆ ಕದ್ದ ಪ್ರಸಂಗವನ್ನು ಕೇಳಿದಾಗ ತಾಯಿ ಯಶೋದಾಳು ಗೋಪಿಯರಿಗಿಂತ ಹೆಚ್ಚು ಅದನ್ನು ಆಸ್ವಾದಿಸಿದಳು. ಗೋಪಿಯರ ಕೋಪದ ದೂರುಗಳು ಕೃಷ್ಣನನ್ನು ಕುರಿತ ಅವರ ಪ್ರೀತಿಯ ಅಭಿವ್ಯಕ್ತಿಯಷ್ಟೇ.
ಪರಮ ಸತ್ಯನು ಸುಳ್ಳು ಹೇಳುತ್ತಾನೆ
ಗೋಪಿಯರು ದೂರಿದಾಗ, ಕೃಷ್ಣನು ತನ್ನ ತುಂಟತನದ ಲೀಲೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ, ಅವನು ಅವರ ವಿರುದ್ಧ ಅನೇಕ ಸುಳ್ಳುಗಳನ್ನು ಹೇಳುತ್ತಾನೆ ಮತ್ತು ಯಶೋದಾಳ ಮುಂದೆ ಮುಗ್ಧತೆಯನ್ನು ತೋರ್ಪಡಿಸುತ್ತಾನೆ. ಕೃಷ್ಣನು ಪರಮ ಸತ್ಯ. ಅವನ ಶಾಶ್ವತ ಅಸ್ತಿತ್ವವು ಅವನೇ ಕಾರಣನಾದ ಸೃಷ್ಟಿ, ನಿರ್ವಹಣೆ ಮತ್ತು ಬ್ರಹ್ಮಾಂಡದ ವಿಸರ್ಜನೆಯನ್ನು ಮೀರಿದುದು. ಆದರೂ ಅವನು ಗೋಪಿಯರಿಗೆ ಸುಳ್ಳು ಹೇಳುತ್ತಾನೆ, ಅವರಿಗೆ ಮೋಸ ಮಾಡುತ್ತಾನೆ. ಅವರ ಬಳಿ ತಂತ್ರ ಹೂಡುತ್ತಾನೆ, ಅವರಿಗೆ ಗೊಂದಲ ಉಂಟುಮಾಡುತ್ತಾನೆ ಮತ್ತು ಈ ರೀತಿ ಅವರ ಹೃದಯಗಳನ್ನು ವಶಪಡಿಸಿಕೊಳ್ಳುತ್ತಾನೆ. ಕೃಷ್ಣನು ಯಶೋದಾಳ ಮನೆಯಲ್ಲಿ ಬೆಣ್ಣೆ ಕದಿಯುತ್ತಾನೆ ಮತ್ತು ಹೆಚ್ಚು ತುಂಟತನ ತೋರುತ್ತಾನೆ. ಆದರೆ ಅವಳು ಪ್ರಶ್ನಿಸಿದಾಗ, ಅವನು ಮರಳುಗೊಳಿಸುವ ಜಾಣತನದಿಂದ ಹುಸಿ ಹೇಳಿಕೆಗಳನ್ನು ನೀಡುತ್ತಾನೆ. ಉದಾಹರಣೆಗೆ, “ಮಂಗಗಳಿಗೆ ಯಾರು ಬೆಣ್ಣೆ ಹಂಚಿದ್ದು?” ಎಂದು ಯಶೋದಾ ಕೇಳಿದಾಗ, ಕೃಷ್ಣನು “ಅವುಗಳನ್ನು ಸೃಷ್ಟಿಸಿದವನು!” ಎಂದು ಜಾಣತನದಿಂದ ಉತ್ತರಿಸುತ್ತಾನೆ.
ವಿರೋಧಾಭಾಸದ ಹಿಂದಿನ ಕಾರಣ
ಪರಮಸತ್ಯನ `ಸುಳ್ಳುಗಳು’ ಅವನ ಭಕ್ತರಿಗೆ ಆನಂದ ಉಂಟುಮಾಡುವ ಅವನ ಗುಣಕ್ಕೆ ಭೂಷಣಪ್ರಾಯವಾಗಿವೆ. ಅನೇಕ ರೀತಿಯಲ್ಲಿ ವಿರೋಧಾತ್ಮಕವಾಗಿ ನಡೆದುಕೊಳ್ಳುತ್ತ ಕೃಷ್ಣನು ತನ್ನ ಭಕ್ತರ ಪ್ರೀತಿಯನ್ನು ಆಸ್ವಾದಿಸುತ್ತಾನೆ ಮತ್ತು ಅವರಿಗಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ಭಕ್ತ-ವಶ್ಯತ ಗುಣವನ್ನು ವ್ಯಕ್ತಪಡಿಸಲು ಕೃಷ್ಣನು ಕೆಲವು ಬಾರಿ ತನ್ನ ಇತರ ವೈಭವ ಮತ್ತು ಲಕ್ಷಣಗಳನ್ನು ಬಿಟ್ಟುಬಿಡುತ್ತಾನೆ ಮತ್ತು ತನ್ನ ಮೇಲೆ ಪೂರ್ಣ ನಿಯಂತ್ರಣ ಉಳ್ಳ ತನ್ನ ಭಕ್ತರ ಗುಣಗಾನ ಮಾಡುತ್ತಾನೆ. (ಭಾಗವತ 10.11.9) ಭಕ್ತ-ವಶ್ಯತ ಗುಣವನ್ನು ಬಿಂಬಿಸಲು ಕೃಷ್ಣನು ತೋರಿದ ವೈರುಧ್ಯವಾದ ವರ್ತನೆಗೆ, ಅವನ ಮಾತೆಯು ಅವನನ್ನು ಕಟ್ಟಿ ಹಾಕುವ ಪ್ರಸಂಗವಿರುವ ದಾಮೋದರ ಲೀಲೆಯು, ಒಂದು ಉತ್ತಮ ಉದಾಹರಣೆ.
ಸಂತೃಪ್ತನಿಗೆ ಹಸಿವು
ಒಂದು ದಿನ ದೀಪಾವಳಿಯ ಮುಂಜಾನೆ ಯಶೋದಾ ಮಾತೆಯು ತನ್ನ ದಾಸಿಯರಿಗೆ ಕೆಲಸಗಳನ್ನು ಹಂಚಿ ತಾನು ಕೃಷ್ಣನಿಗಾಗಿ ಬೆಣ್ಣೆ ಕಡೆಯಲು ಕುಳಿತಳು. ಅವಳ ದೇಹವು ಬೆಣ್ಣೆಯನ್ನು ಕಡೆಯುತ್ತಿದ್ದರೂ ಅವಳ ಮನಸ್ಸು ಪ್ರೀತಿಯ ಕೃಷ್ಣನ ಬಗೆಗೇ ಯೋಚಿಸುತ್ತಿತ್ತು ಮತ್ತು ಅವಳು ಅವನ ಲೀಲೆಗಳನ್ನು ಕುರಿತು ಹಾಡುತ್ತಿದ್ದಳು. ಅವಳ ಪೂರ್ಣ ತಲ್ಲೀನತೆಯು, ಎಲ್ಲ ರೀತಿಯಲ್ಲಿಯೂ ಸರ್ವಾಕರ್ಷಕ ಮತ್ತು ಸಂತೃಪ್ತನಾದ ಕೃಷ್ಣನನ್ನು ಸೆಳೆಯಿತು. ನಿದ್ರೆಯಿಂದ ಎದ್ದ ಕೃಷ್ಣನು ಸ್ತನಪಾನಕ್ಕಾಗಿ ಕಾತರದಿಂದ ಅವಳ ಬಳಿಗೆ ಬಂದನು. ಅವಳ ತೊಡೆಯೇರಿದನು. ಅವಳು ಸ್ತನಪಾನ ಮಾಡಿಸಲಾರಂಭಿಸಿದಳು. ಈ ರೀತಿ ಹಾಲುಣಿಸುವ ಕಾರ್ಯವು ಸಾಕಷ್ಟು ಸಮಯ ನಡೆಯಿತು. ಅವನಿಗಂತೂ ಸಮಯದ ಪರಿವೆಯೇ ಇರಲಿಲ್ಲ.
ಶಾಂತಿಯ ಸಾಕಾರ ರೂಪಕ್ಕೆ ಕೋಪ
ಅದೇ ಸಮಯದಲ್ಲಿ ವಿಶೇಷವಾದ ಪದ್ಮ-ಗಂಧ ಗೋವಿನ ಹಾಲು ಅಡುಗೆ ಮನೆಯಲ್ಲಿ ಕುದಿಯುತ್ತ ಉಕ್ಕಿ-ಚೆಲ್ಲಲಾರಂಭಿಸಿತು. ಆಗ ಯಶೋದಾಳು ಕೃಷ್ಣನನ್ನು ಕೆಳಗಿಳಿಸಿ ಅಡುಗೆ ಮನೆಯತ್ತ ಧಾವಿಸಿದಳು. ತಾಯಿಯ ಹಾಲಿನಿಂದ ವಂಚಿತನಾದ, ಕೃಷ್ಣನು ತುಂಬ ಅತೃಪ್ತಗೊಂಡನು. ಅವನು ವಿಶುದ್ಧ-ಸತ್ತ್ವ-ವಿಗ್ರಹ ಅಥವಾ ರಜಸ್-ತಮಸ್‌ನ ಪ್ರಭಾವ ಇಲ್ಲದ ಶುದ್ಧ ಸಾತ್ತ್ವಿಕ ಎಂದು ಪ್ರಸಿದ್ಧನು. ಆದರೂ ಅವನು ಕಣ್ಣೀರಿಟ್ಟನು ಮತ್ತು ಮಡಕೆಯನ್ನು ಒಡೆದು ಬೆಣ್ಣೆ ಕದ್ದು ಕೋಪವನ್ನು ಪ್ರದರ್ಶಿಸಿದನು. ಅವನು ಮಂಗಗಳಿಗೆ ಬೆಣ್ಣೆಯನ್ನು ಹಂಚಿದನು. ತಾಯಿಯು ಯಾವಾಗಲಾದರೂ ಬಂದು ತನ್ನನ್ನು ದಂಡಿಸುವಳು ಎಂದು ಅಶಾಂತತೆಯಿಂದ ಸುತ್ತಮುತ್ತ ನೋಡಲಾರಂಭಿಸಿದನು.
ಭಯದಿಂದ ಓಡಿದ…
ಕಳ್ಳನು ಯಾವುದಾದರೂ ಸುಳಿವು ಬಿಟ್ಟುಹೋಗುವುದು ಸಾಮಾನ್ಯ. ಯಶೋದಾಳು ಅವನನ್ನು ಹಿಡಿಯುವುದು ಸಾಧ್ಯವಾಗುವಂತೆ ಕೃಷ್ಣನು ತನ್ನ ಬೆಣ್ಣೆ-ಹೆಜ್ಜೆ ಗುರುತು ಬಿಟ್ಟು ಹೋಗಿದ್ದ. ಸರ್ವಜ್ಞನಾದ ತುಂಟ ಕೃಷ್ಣನಿಗೆ ಬುದ್ಧಿ ಕಲಿಸಬೇಕೆಂದು ಯಶೋದಾಳು ಕೈಯಲ್ಲಿ ಕೋಲು ಹಿಡಿದು ಆ ಹೆಜ್ಜೆಗಳನ್ನು ಅನುಸರಿಸುತ್ತ ಅಲ್ಲಿಗೆ ಬಂದಳು. ಕೃಷ್ಣನಿಗೆ ದಿಗ್ಭ್ರಮೆ. ಮೃತ್ಯು ದೇವತೆ ಯಮರಾಜನೇ ಭಯಪಡುವ ಕೃಷ್ಣನು ಈಗ ಮಾತೆ ಯಶೋದಾಳ ಕೈಯಲ್ಲಿದ್ದ ಕೋಲಿಗೆ ಭಯಪಡುತ್ತಿದ್ದ. ಅವನು ಮುಖ್ಯ ದ್ವಾರದ ಬಳಿಗೆ ಓಡಿದ. ತಾಯಿಯು ಎಲ್ಲರ ಮುಂದೆ ದಂಡಿಸುವುದಿಲ್ಲ ಎನ್ನುವ ಅಚಲ ವಿಶ್ವಾಸ ಅವನದು.
ವೇಗಧಾರಿ ಸೆರೆಗೆ
ಆಯಾಸವಾಗುತ್ತಿದ್ದರೂ ಲೆಕ್ಕಿಸದೆ ಮಾತೆ ಯಶೋದಾಳು ದೃಢ ಸಂಕಲ್ಪದಿಂದ ಕೃಷ್ಣನನ್ನು ಅಟ್ಟಿಸಿಕೊಂಡು ಹೋದಳು. ಆದರೆ ಅವನು ಆಗಾಗ್ಗೆ ಹಿಂದಿರುಗಿ ನೋಡುತ್ತ ಅವಳ ಕೈಗೆಟುಕದಷ್ಟು ದೂರದಲ್ಲಿಯೇ ಓಡುತ್ತಿದ್ದನು. ಒಂದು ಸಮಯದಲ್ಲಿ ಅವಳು ಇನ್ನೇನು ಹಿಡಿದೇಬಿಟ್ಟಳು ಎನ್ನುವಂತಿತ್ತು. ಆದರೆ ಅವನು ತಪ್ಪಿಸಿಕೊಂಡನು. ಯೋಗಿಗಳು ತಮ್ಮ ಹೃದಯದಲ್ಲಿ ಅವನನ್ನು ಸೆರೆ ಹಿಡಿಯಲಾರರು. ಅವನು ಮನಸ್ಸಿಗಿಂತ ಹೆಚ್ಚು ವೇಗದಲ್ಲಿ ಓಡಬಲ್ಲನು ಎಂದು ಉಪನಿಷತ್‌ಗಳು ಸಾರಿವೆ. ಆದರೆ ಈಗ ವೃಂದಾವನದ ಸರಳ ಗೋಪಿ, ಯಶೋದಾಳು ಅವನನ್ನು ಕೊನೆಗೂ ಹಿಡಿದೇಬಿಟ್ಟಳು. ಇದು ಅವಳ ಶುದ್ಧ ಪ್ರೇಮದ ಹಿರಿಮೆ.
ಆನಂದ ಸ್ವರೂಪನು ಅಳುವನು
ಯಶೋದಾಗೆ ಅವನನ್ನು ಹೊಡೆಯುವ ಉದ್ದೇಶ ಇರಲಿಲ್ಲ. ಆದರೂ ಅವಳು ಕೋಲನ್ನು ಮೇಲಕ್ಕೆತ್ತಿ ಅವನನ್ನು ಹೆದರಿಸಿದಳು. ಅವನು ಇನ್ನಷ್ಟು ಭಯದಿಂದ ಅಳಲಾರಂಭಿಸಿದ. ಅವನ ಕಣ್ಣೀರು ಕಣ್ಕಪ್ಪಿನೊಂದಿಗೆ ಮಿಶ್ರಣವಾಯಿತು. ಸಾಮಾನ್ಯವಾಗಿ ಕೃಷ್ಣನು ಅತ್ತಾಗ ಅವಳು ತನ್ನ ವಸ್ತ್ರದಿಂದ ಅವನ ಕಣ್ಣೀರು ಒರೆಸುತ್ತಿದ್ದಳು. ಆದರೆ ಈಗ ಅವನು ತನ್ನ ಕೈಗಳಿಂದಲೇ ಕಣ್ಣನ್ನು ಉಜ್ಜಿಕೊಂಡ. ಇದರಿಂದ ಕಣ್ಕಪ್ಪು ಮುಖದ ಮೇಲೆಲ್ಲ ಹರಡಿತು. ಅವನು ಭಯದಿಂದ ನಡುಗಿದ ಮತ್ತು ಅಳುತ್ತ ಭಾರವಾಗಿ ಉಸಿರಾಡಲಾರಂಭಿಸಿದ. ಬದ್ಧ ಆತ್ಮಗಳ ಗೋಳಾಟದಿಂದ ಸೃಷ್ಟಿಯಾಗುವ ಕಣ್ಣೀರ ಸಾಗರವು, ಕೃಷ್ಣನ ಮುಗುಳ್ನಗೆಯಿಂದ ಬತ್ತಿಹೋದರೂ, ಅವನು ಈಗ ತನ್ನ ತಾಯಿಯ ಭಯದಿಂದ ಅಳುತ್ತಿದ್ದಾನೆ.
ಅವನೇ ಪ್ರಾರ್ಥನೆಯ ಗುರಿ. ಆದರೆ…
ಮಡಕೆ ಒಡೆದದ್ದು, ಬೆಣ್ಣೆ ಕದ್ದದ್ದು, ಅದನ್ನು ಮಂಗಗಳಿಗೆ ಹಂಚಿದ್ದು ಮತ್ತು ಅವಳು ಅಟ್ಟಿಸಿಕೊಂಡು ಹೋಗುವಂತೆ ಓಡಿದ್ದು – ಈ ಎಲ್ಲ ಅಪರಾಧಗಳಿಗೆ ಅವಳು ಕೃಷ್ಣನನ್ನು ತರಾಟೆಗೆ ತೆಗೆದುಕೊಂಡಳು. ಮಾತೃ ಪ್ರೇಮದಿಂದ ಭಗವಂತನನ್ನು ತನ್ನ ಮಗನೆಂದು ಪರಿಗಣಿಸಿದ ಅವಳು ಅವನಿಗೆ ಶಿಸ್ತು ಕಲಿಸಲು ಕಾತರಳಾಗಿದ್ದಳು. ಅವನನ್ನು ಗದರಿಸಿಕೊಂಡಳು. ಅವನಿಗೆ ಹಾಲಿನ ಪದಾರ್ಥಗಳನ್ನು ನೀಡುವುದಿಲ್ಲ ಅಥವಾ ಆಟಿಕೆಗಳನ್ನು ಕೊಡುವುದಿಲ್ಲ ಅಥವಾ ಗೆಳೆಯರೊಂದಿಗೆ ಆಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದಳು.
ಪರಮ ನ್ಯಾಯಾಧೀಶನು ನ್ಯಾಯಕ್ಕಾಗಿ ಕಾದ
ಕೃಷ್ಣನು ಅಪರಾಧಿ. ಅವನ ವಿಧಿ ಸಂಪೂರ್ಣವಾಗಿ ಅವಳ ಕೈಯಲ್ಲಿತ್ತು. ಅವಳು ಅವನನ್ನು ಶಿಕ್ಷಿಸಬಹುದು, ಕಟ್ಟಿ ಹಾಕಬಹುದು ಅಥವಾ ಮನಸ್ಸಿಗೆ ಬಂದಾಗ ಅವನನ್ನು ಬಿಡುಗಡೆ ಮಾಡಬಹುದು. ಅವನು ಅವಳ ಮುಂದೆ ತಲೆತಗ್ಗಿಸಿಕೊಂಡು ನಿಂತ. ಇನ್ನು ಎಂದಿಗೂ ಅಂತಹ ತುಂಟಾಟ ಮಾಡುವುದಿಲ್ಲವೆಂದು ಅವಳಿಗೆ ಭರವಸೆ ನೀಡಿದ ಮತ್ತು ಕೋಲನ್ನು ಕೆಳಗೆ ಹಾಕಬೇಕೆಂದು ಆತಂಕದಿಂದಲೇ ಕೋರಿದ. ಅಪಾರವಾದ ವಾತ್ಸಲ್ಯದಿಂದಾಗಿ ಯಶೋದಾಳು ಅವನ ಭಯ ಕಂಡು ಚಿಂತಿತಳಾದಳು. ಅವನನ್ನು ಕಟ್ಟಿಹಾಕುವುದು ಒಳಿತು ಎಂದು ಭಾವಿಸಿದಳು. ಆದುದರಿಂದ ಒಂದಷ್ಟು ನಯವಾದ ಹಗ್ಗವನ್ನು ತರಬೇಕೆಂದು ಅವಳು ತನ್ನ ಸೇವಕರಿಗೆ ಆದೇಶಿಸಿದಳು.
ಸರ್ವವ್ಯಾಪಿಯ ಬಂಧನ
ದೇವೋತ್ತಮ ಶ್ರೀ ಕೃಷ್ಣನು ಸರ್ವವ್ಯಾಪಿ. ಅವನಿಗೆ ಆದಿ ಅಂತ್ಯವಿಲ್ಲ, ಬಾಹ್ಯ ಅಥವಾ ಆಂತರಿಕವಿಲ್ಲ, ಮತ್ತು ಅವನು ಇಂದ್ರಿಯ ಗ್ರಹಣ ಶಕ್ತಿಯನ್ನು ಮೀರಿದವನು (ಅಧೋಕ್ಷಜ). ಅವನನ್ನು ತನ್ನ ಮಗನೆಂದೇ ಭಾವಿಸಿದ ಮಾತೆ ಯಶೋದಾಳು ಅವನನ್ನು ಮರದ ಒರಳಿಗೆ ಕಟ್ಟಿಹಾಕಲು ಪ್ರಯತ್ನಿಸಿದಳು. ಬೇರೆ ಮಾತಿನಲ್ಲಿ ಹೇಳುವುದಾದರೆ, ಬ್ರಹ್ಮನಿಂದ ಹುಲ್ಲುಕಡ್ಡಿಯವರೆಗೆ ಎಲ್ಲರನ್ನೂ ಮಾಯೆ ಎನ್ನುವ ಹಗ್ಗದಿಂದ ಕಟ್ಟಿಹಾಕುವ ಸರ್ವವ್ಯಾಪಿ ಭಗವಂತನನ್ನು ತನ್ನ ಗಾಢ ಪ್ರೇಮವೆಂಬ ಹಗ್ಗದಿಂದ ಕಟ್ಟಿಹಾಕಲು ಪ್ರಯತ್ನಿಸಿದಳು.
ಕೃಷ್ಣನಿಗೆ ಕಟ್ಟಿಹಾಕಿಸಿಕೊಳ್ಳುವುದು ಬೇಕಾಗಿರಲಿಲ್ಲ. ಮೊಸರು ಕದಿಯುವ ಮತ್ತು ಗೆಳೆಯರೊಂದಿಗೆ ಆಡುವ ತನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದು ಬೇಕಾಗಿತ್ತು. ಆದುದರಿಂದ ಅವನ ವಿಭೂತಿ ಶಕ್ತಿ (ಅವನ ವೈಭವ ತೋರುವ ಶಕ್ತಿ) ಅವನ ದೇಹದಲ್ಲಿ ವ್ಯಕ್ತವಾಗಲು ಅವನ ಸತ್ಯ-ಸಂಕಲ್ಪ-ಶಕ್ತಿಯು (ಅವನ ಎಲ್ಲ ಅಪೇಕ್ಷೆಯನ್ನೂ ನೆರವೇರಿಸುವ ಶಕ್ತಿ) ಸ್ಫೂರ್ತಿ ನೀಡಿತು. ಈ ರೀತಿ ಅವನನ್ನು ಕಟ್ಟಿಹಾಕುವ ಹಗ್ಗವು ಎರಡು ಬೆರಳಿನಷ್ಟು ಕಡಮೆಯಾಗುತ್ತಿತ್ತು. ಅವಳು ಹೆಚ್ಚು ಹೆಚ್ಚು ಹಗ್ಗವನ್ನು ತರಿಸಿ ಒಂದಕ್ಕೊಂದು ಗಂಟುಹಾಕಿದರೂ ಅದೂ ಕೂಡ ಎರಡು ಬೆರಳಿನಷ್ಟು ಕಡಮೆಯಾಗುತ್ತಿತ್ತು.
ದೇವರ ಅಪೇಕ್ಷೆ ಮತ್ತು ಭಕ್ತರ ದೃಢ ಸಂಕಲ್ಪ
ವಿಫಲವಾದರೂ ಯಶೋದಾಳ ಸಂಕಲ್ಪ ಕುಗ್ಗಲಿಲ್ಲ. ಆದುದರಿಂದ ಕೃಷ್ಣನೇ ತನ್ನ ಅಪೇಕ್ಷೆಯನ್ನು ಪರಿವರ್ತಿಸಿಕೊಳ್ಳಬೇಕಾಯಿತು. ಅವಳ ಪ್ರೀತಿಯ ಪರಿಶ್ರಮವನ್ನು ಕಂಡು ಕೃಷ್ಣನು ಕೃಪಾಳುವಾದ. ಅವನೆಲ್ಲ ಶಕ್ತಿಗಳಲ್ಲಿ ಪ್ರಮುಖವಾದ ಕೃಪಾ-ಶಕ್ತಿಯು ಅವನ ಹೃದಯವನ್ನು ಕರಗಿಸುತ್ತದೆ. ಅವನು ತನ್ನ ಸತ್ಯ-ಸಂಕಲ್ಪ-ಶಕ್ತಿ ಮತ್ತು ವಿಭೂತಿ-ಶಕ್ತಿ ತತ್‌ಕ್ಷಣ ಕಣ್ಮರೆಯಾಗುವಂತೆ ಮಾಡಿದ. ಎರಡು ಬೆರಳುಗಳ ಅಂತರವನ್ನು ಭಕ್ತನ ಪರಿಶ್ರಮ ಮತ್ತು ಭಗವಂತನ ಕಾರಣರಹಿತ ಕೃಪೆಯು ಮುಚ್ಚಿತು.
“ಯಶೋದೆಯ ಕಠಿಣ ಪರಿಶ್ರಮದಿಂದ ಅವಳ ದೇಹವಿಡೀ ಬೆವರಿನಿಂದ ತೊಯ್ದುಹೋಯಿತು. ಅವಳ ತಲೆಗೂದಲಿನಿಂದ ಹೂಗಳು ಮತ್ತು ಬಾಚಣಿಗೆ ಉದುರಿ ಬೀಳುತ್ತಿದ್ದವು. ತನ್ನ ತಾಯಿಯು ಹೀಗೆ ದಣಿದದ್ದನ್ನು ಕಂಡು ಮಗು ಕೃಷ್ಣನು ಅವಳ ಬಗ್ಗೆ ಕರುಣಾಳುವಾಗಿ ಅವಳಿಂದ ಬಂಧಿತನಾಗಲು ಒಪ್ಪಿದನು.” (ಭಾಗವತ 10.9.18)
ವಿಮೋಚಕನೇ ಬಂಧನದಲ್ಲಿ
ಲೌಕಿಕ ಬಂಧನದಿಂದ ಎಲ್ಲರನ್ನೂ ವಿಮೋಚನೆಗೊಳಿಸುವ ಕೃಷ್ಣನು ಸ್ವತಃ ಭಕ್ತರ ಪ್ರೀತಿಯ ಬಂಧನಕ್ಕೆ ಒಳಗಾಗಿದ್ದಾನೆ. ಯಶೋದೆಯು ಅವನನ್ನು ಕಟ್ಟಿಹಾಕಿದ ಹಗ್ಗವು ಅವಳ ಶುದ್ಧ ಪ್ರೇಮದ ಹಗ್ಗ. ಈ ದಾಮೋದರ ಲೀಲೆಯಲ್ಲಿ ಕೃಷ್ಣನು ಪ್ರೀತಿ ಮಾತ್ರ ತನ್ನನ್ನು ಬಂಧಿಸಲು ಸಾಧ್ಯ ಎನ್ನುವುದನ್ನು ಇಡೀ ವಿಶ್ವಕ್ಕೆ ತೋರಿಸಿದ್ದಾನೆ. ಅಂತಹ ಬಂಧನದ ಸ್ಥಿತಿಯಲ್ಲಿಯೂ ಕೂಡ ಅವನು ಇತರರನ್ನು ವಿಮೋಚನೆಗೊಳಿಸುವ ಗುಣವನ್ನು ಉಳಿಸಿಕೊಂಡಿದ್ದಾನೆ. ಆದುದರಿಂದಲೇ ಅವನು ಯಮಲಾರ್ಜುನ ವೃಕ್ಷಗಳನ್ನು ಕೆಡವಿ ಕುಬೇರನ ಮಕ್ಕಳನ್ನು ಮುಕ್ತಿಗೊಳಿಸುವುದು ಸಾಧ್ಯವಾಯಿತು. ಅವರನ್ನು ಮುಕ್ತಿಗೊಳಿಸುವ ಮೂಲಕ ತಾನು ಭಕ್ತರ ನಿಯಂತ್ರಣಕ್ಕೆ ಒಳಪಟ್ಟಿದ್ದೇನೆ ಎನ್ನುವುದನ್ನು ಪುನಃ ತೋರಿದ್ದಾನೆ. ಏಕೆಂದರೆ, ಕುಬೇರರ ಪುತ್ರರು ಕೃಷ್ಣನಿಂದ ವಿಮೋಚನೆಗೊಳ್ಳಬೇಕೆಂದು, ಭಕ್ತರಾದ ನಾರದ ಮುನಿಗಳು ಅಪೇಕ್ಷಿಸಿದ್ದರು.
ಭಕ್ತನು ದೇವರಿಗಿಂತ ಶ್ರೇಷ್ಠ
ಕೃಷ್ಣನು ಅಸಮೋರ್ಧ್ವ – ಯಾರೂ ಕೂಡ ಅವನಿಗೆ ಸಮಾನರಲ್ಲ ಅಥವಾ ಅವನಿಗಿಂತ ಶ್ರೇಷ್ಠರಲ್ಲ. ಕೆಲವು ತತ್ತ್ವಜ್ಞಾನಿಗಳು ದೇವರಲ್ಲಿ ಒಂದಾಗಬೇಕೆನ್ನುವ ಇಚ್ಛೆ ಹೊಂದಿರಬಹುದು. ಆದರೆ ವೈಷ್ಣವ ಸಿದ್ಧಾಂತದಲ್ಲಿ ಭಕ್ತನು ದೇವರಿಗಿಂತ ಎಷ್ಟು ಹೆಚ್ಚು ಶಕ್ತಿಶಾಲಿ ಆಗಿಬಿಡುತ್ತಾನೆಂದರೆ ಅವನು ಭಗವಂತನನ್ನೇ ನಿಯಂತ್ರಿಸಬಹುದು. ಕುರುಕ್ಷೇತ್ರದಲ್ಲಿ ಅರ್ಜುನನು ನಾಯಕನಾಗಿ, ಕೃಷ್ಣನು ಕೇವಲ ಸಾರಥಿಯಾದಂತೆ ದೇವೋತ್ತಮ ಶ್ರೀ ಕೃಷ್ಣನು ತನ್ನ ಭಕ್ತನನ್ನು ತನ್ನ ಸ್ಥಾನಕ್ಕಿಂತಲೂ ಮೇಲಕ್ಕೆತ್ತುತ್ತಾನೆ. ಮಾತೆ ಯಶೋದಳು ವಾತ್ಸಲ್ಯ-ರಸ ಅಥವಾ ಮಾತೃ ಪ್ರೇಮದ ಸಾಕಾರ ರೂಪ.
ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು ಪ್ರತಿಯೊಬ್ಬರ ಸಹಜ ಸ್ವಭಾವ. ಇನ್ನು ಕೃಷ್ಣನ ಬಗೆಗೆ ಹೇಳುವುದೇನಿದೆ? ಕೃಷ್ಣನು ಎಲ್ಲ ಜೀವಾತ್ಮರನ್ನು ಪ್ರೀತಿಸುತ್ತಾನೆ ಮತ್ತು ಎಲ್ಲ ಆತ್ಮಗಳೂ ತನ್ನನ್ನು ಪ್ರೀತಿಸಲಿ ಎಂದು ಅಪೇಕ್ಷಿಸುತ್ತಾನೆ. ಆದರೆ ಕೇವಲ ಅವನ ಶುದ್ಧ ಭಕ್ತರು ಮಾತ್ರ ಅವನೊಂದಿಗಿನ ಬಾಂಧವ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬೇಷರತ್ತಾಗಿ ಅವನನ್ನು ಪ್ರೀತಿಸುತ್ತಾರೆ. ತಮ್ಮೊಲವಿರುವವರಿಂದ ನಿಯಂತ್ರಿಸಲ್ಪಡುವುದು ಮತ್ತು ಪ್ರಭಾವಿತರಾಗುವುದು ಪ್ರೀತಿ, ಪ್ರೇಮದಲ್ಲಿ ಸೇರಿದೆ. ಹೀಗೆ ಕೃಷ್ಣನು ತನ್ನ ಶುದ್ಧ ಭಕ್ತರಿಂದ ನಿಯಂತ್ರಿಸಲ್ಪಡುವುದನ್ನು ಆನಂದಿಸುತ್ತಾನೆ. ಕೃಷ್ಣನ ಈ ಗುಣವನ್ನು ಭಕ್ತ ವಶ್ಯತ ಎಂದು ಆಚರಿಸಲಾಗುತ್ತದೆ.