ಧರ್ಮದ ವ್ಯಾಖ್ಯೆಗಳು

‘ಧರ್ಮ’ – ಈ ಪದದ ವ್ಯಾಖ್ಯಾನ ಬಹಳ ವಿಸ್ತೃತವಾದುದು. ಇದರ ಅರ್ಥವನ್ನು ಕಟ್ಟಿಕೊಡಬಲ್ಲ ಪದ ಯಾವ ಭಾಷೆಯಲ್ಲೂ ಮತ್ತೊಂದಿಲ್ಲವೆಂದೇ ಹೇಳಬಹುದು. ಸಾಮಾನ್ಯವಾಗಿ ಆಂಗ್ಲಭಾಷೆಯಲ್ಲಿ ‘ರಿಲಿಜನ್’ (Religion) ಅನ್ನು ಧರ್ಮಕ್ಕೆ ಸಮಾನಾರ್ಥಕ ಪದವಾಗಿ ಬಳಸುತ್ತಾರೆ.

ಮೂಲತಃ ಲ್ಯಾಟಿನ್ ಭಾಷೆಯ ಈ ಪದವು ಶ್ರದ್ಧೆ ಅಥವಾ ಆಚರಣೆಯನ್ನು ಸೂಚಿಸುತ್ತದೆ. ‘ದೇವರತ್ತ ಕರೆದೊಯ್ಯುವ ಮಾರ್ಗ” ಎನ್ನುವ ಅರ್ಥವನ್ನು ಸೂಚಿಸುತ್ತದೆಯೇ ಹೊರತು, ಧರ್ಮದ ವ್ಯಾಪಕ ಅರ್ಥವನ್ನಲ್ಲ.

ಸರಳ ಉದಾಹರಣೆ ನೀಡುವುದಾದರೆ, ‘ಸಿಹಿ’ಯು ಸಕ್ಕರೆಯ ಧರ್ಮ. ‘ಹರಿಯುವುದು’ ನೀರಿನ ಧರ್ಮ, ‘ಶಾಖ’ ಬೆಂಕಿಯ ಧರ್ಮ, ಇದು ಬದಲಾಗದು. ಇದು ಬದಲಾದರೆ, ಆಯಾ ಸಂಬಂಧಿತ ವಸ್ತುಗಳು ಅವೇ ಆಗಿ ಉಳಿಯುವು!

ಆದರೆ ಶ್ರದ್ಧೆಯ ಪಥ ಅಥವಾ ರಿಲಿಜನ್‌ನ ವ್ಯಾಪ್ತಿ ಬೇರೆಯೇ ಬಗೆಯದು. ಇಲ್ಲಿ ವ್ಯಕ್ತಿಯು ಯಾವುದೇ ಒಂದು ಪ್ರಕ್ರಿಯೆಯಲ್ಲಿ ಶ್ರದ್ಧೆ ತಳೆಯಬಹುದು. ಮುಂದೆ ಅದನ್ನು ಬದಲಿಸಿ ಮತ್ಯಾವುದೇ ಮಾರ್ಗದಲ್ಲಿ ಶ್ರದ್ಧೆ ಹೊಂದಬಹುದು. ಹೀಗೆ `ಧರ್ಮ’ ಹಾಗೂ ‘ರಿಲಿಜನ್’ ಅರ್ಥ ವ್ಯಾಖ್ಯೆಯಲ್ಲಿ ಮೂಲಭೂತ ವ್ಯತ್ಯಾಸವೇ ಇರುವುದು.

ಧರ್ಮತತ್ತ್ವಗಳನ್ನು ಸ್ವತಃ ದೇವೋತ್ತಮ ಪರಮಪುರುಷನೇ ರೂಪಿಸಿರುವನು. ಭಾಗವತದಲ್ಲಿ ಈ ಕುರಿತು ಹೀಗೆ ಹೇಳಲಾಗಿದೆ:

“ನೈಜ ಧಾರ್ಮಿಕ ತತ್ತ್ವಗಳು ಪರಮಪ್ರಭುವಿನಿಂದ ನಿರ್ದೇಶಿಸಲ್ಪಟ್ಟಿವೆ. ಸಾತ್ತ್ವಿಕ ಭಾವದಲ್ಲೇ ನಿರತರಾಗಿರುವ, ಮಹೋನ್ನತ ಗ್ರಹಗಳಲ್ಲಿ ವಾಸಿಸುವ ಋಷಿಗಳು ಕೂಡ ಈ ನೈಜ ಧಾರ್ಮಿಕ ತತ್ತ್ವಗಳನ್ನು ಅರಿಯಲಾರರು ಸಿದ್ಧ ಲೋಕದ ದೇವತೆಗಳು ಕೂಡಾ ಇದನ್ನು ತಿಳಿಯಲಾರರು ಎಂದಮೇಲೆ, ಅಸುರರು, ಹುಲು ಮಾನವರು, ವಿದ್ಯಾಧರರು ಮತ್ತು ಚಾರಣರ ಬಗ್ಗೆ ಹೇಳುವುದೇನಿದೆ?”

ಈ ಮಾತನ್ನು ಯಮರಾಜನು ಈ ಮುಂದಿನ ಮಾತುಗಳೊಡನೆ ಹೇಳಿರುವನು; “ಬ್ರಹ್ಮ, ನಾರದ, ಶಿವ, ಚತುರ್ಸನರು, ಕಪಿಲ, ಮನು, ಪ್ರಹ್ಲಾದ, ಜನಕ, ಭೀಷ್ಮ, ಬಲಿ, ಶುಕಮುನಿ ಹಾಗೂ ನಾನು ಈ ನೈಜ ಧರ್ಮ ತತ್ತ್ವಗಳನ್ನು ಅರಿತಿದ್ದೇವೆ.” (ಭಾಗವತ : 6.3.19)

ಈ ಪಾರಮಾರ್ಥಿಕವಾದ ಧಾರ್ಮಿಕ ತತ್ತ್ವವನ್ನು ನೇರವಾಗಿ ದೇವೋತ್ತಮ ಪರಮಪುರುಷನಿಂದ ಅಥವಾ ಆತನ ವಿಶೇಷ ಪ್ರತಿನಿಧಿಗಳಾದ ವೇದವ್ಯಾಸ ಮೊದಲಾದವರಿಂದ ತಿಳಿದುಕೊಳ್ಳಬೇಕು. ಭಗವಂತನನ್ನು ಅರಿಯುವುದೇ ನೈಜಧರ್ಮವಾಗಿದೆ.

ಮತ್ತು ಅವನೊಂದಿಗಿನ ನಮ್ಮ ಸಂಬಂಧ ಹಾಗೂ ಆತನಿಗಾಗಿ ನಾವು ಮಾಡಬೇಕಾದ ಕರ್ತವ್ಯಗಳು ಮತ್ತು ಈ ಲೌಕಿಕ ದೇಹ ತ್ಯಜಿಸಿದ ಅನಂತರ ನಾವು ತಲಪುವ ಅಂತಿಮ ಗುರಿಯ ಬಗ್ಗೆ ಅರಿಯುವುದು; ಇವೆಲ್ಲವೂ ಲೌಕಿಕ ಶಕ್ತಿಯಿಂದ ಮರೆಮಾಚಲ್ಪಟ್ಟ ಬದ್ಧಾತ್ಮಗಳು ಜೀವನದ ಈ ಯಾವ ತತ್ತ್ವಗಳನ್ನೂ ಅರಿತಿರುವುದಿಲ್ಲ.

ಅವುಗಳಲ್ಲಿ ಬಹುಪಾಲು, ಆಹಾರ, ನಿದ್ರೆ, ಭಯ, ಮೈಥುನಗಳಲ್ಲೇ ವ್ಯಸ್ತವಾಗಿರುತ್ತವೆ. ಅವರು ಧರ್ಮ, ಜ್ಞಾನ ಅಥವಾ ಮುಕ್ತಿಯ ಸೋಗಿನಲ್ಲಿ ನಿರಂತರವಾಗಿ ಇಂದ್ರಿಯ ತೃಪ್ತಿಯ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಕಲಿಯುಗದ ಮಾನವರು ಪ್ರಾಣಿಗಳಂತೆಯೇ ಇರುತ್ತಾರೆಂದರೂ ಸರಿಯೇ.

ಆಧ್ಯಾತ್ಮಿಕ ಜ್ಞಾನದ ಬಗೆಗಾಗಲೀ ಧಾರ್ಮಿಕ ಜೀವನದ ಬಗೆಗಾಗಲೀ ಅವರಿಗೆ ಆಸಕ್ತಿಯಿರುವುದಿಲ್ಲ. ಅವರದೆಷ್ಟು ಕುರುಡರಾಗಿರುವರೆಂದರೆ, ತಮ್ಮ ಲೌಕಿಕ ಮನಸ್ಸು, ಬುದ್ಧಿ ಅಥವಾ ಅಹಂಕಾರದ ಆಚೆಗೆ ಅವರಿಗೇನೂ ಕಾಣುವುದೇ ಇಲ್ಲ.

ಜೀವನದ ಅಂತಿಮ ಗುರಿಯನ್ನು ಅರಿಯುವಲ್ಲಿ ಸಂಪೂರ್ಣ ವಿಫಲರಾಗುವ ಅವರು, ಮುಂದಿನ ಜನ್ಮದಲ್ಲಿ ಪಶು ಜನ್ಮವನ್ನು ತಳೆಯುವ ಅಪಾಯದಲ್ಲಿರುತ್ತಾರೆ. ಇಂದಿನ ಜನರು ಸ್ವೇಚ್ಛೆಯನ್ನು ಬಯಸುತ್ತಾರೆ. ಅನರ್ಹ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿರುವ ಇವರು, ನಿರ್ಬಂಧಗಳನ್ನು ವಿರೋಧಿಸುತ್ತಾರೆ.

ಆಧುನಿಕ ಯುಗದ ಪರಿಭಾಷೆಯಲ್ಲಿ ಧರ್ಮವನ್ನು ಶ್ರದ್ಧಾ ಪಥಕ್ಕೆ ಅನ್ವಯಿಸಲಾಗುತ್ತಿದೆಯಲ್ಲದೆ, ಶ್ರದ್ಧೆಯ ಹೊರತಾದುದೆಲ್ಲವನ್ನೂ ಅಧರ್ಮವೆಂದು ಕರೆಯಲಾಗುತ್ತಿದೆ. ವಿವಿಧ ಶ್ರದ್ಧಾಪಂಥಗಳು ತಮ್ಮ ಮಾರ್ಗವೇ ‘ಧರ್ಮ’ವೆಂದೂ, ಉಳಿದದ್ದು ʼಅಧರ್ಮ’ವೆಂದೂ ಪರಿಗಣಿಸತೊಡಗಿ, ಇಂದು ಆಧುನಿಕ ಪರಿಭಾಷೆಯ ಧರ್ಮವು ವಿಭಜಕ ಶಕ್ತಿಯಾಗಿ ಪರಿಗಣಿಸಲ್ಪಡುತ್ತಿದೆ.

ಆದರೆ, ನಿಜವಾದ ಧರ್ಮವು ಇದಕ್ಕಿಂತ ಸಂಪೂರ್ಣ ಭಿನ್ನವಾದುದು. ಇದು ಎಲ್ಲರನ್ನೂ ಒಟ್ಟುಗೂಡಿಸುವಂತಹ ಸಂಯೋಜಕ ಶಕ್ತಿ ಇದನ್ನು ‘ರಿಲಿಜನ್’ ಪದವು ಹೊಮ್ಮಿಸುವ ಅರ್ಥವ್ಯಾಪ್ತಿಗೆ ಹೊಂದಿಸಲು ಸಾಧ್ಯವೇ ಇಲ್ಲ.

‘ಸನಾತನ ಧರ್ಮವು’ ಯಾವುದೇ ಪಂಥೀಯ ಧರ್ಮಕ್ಕೆ ಅನ್ವಯವಾಗುವಂಥದಲ್ಲ. ಸನಾತನ ಧರ್ಮವು ಜೀವರಾಶಿಗಳೊಂದಿಗೆ ನಿತ್ಯ ಸಂಯುಕ್ತವಾಗಿರುವಂತಹದು. ಇದು ಜೀವರಾಶಿಯ ನಿತ್ಯ ಕಾಯಕದ ಜೊತೆಗೆ ಬೆಸೆದುಕೊಂಡಿರುವಂತಹದು.

ಶ್ರೀಪಾದ ರಾಮಾನುಜಾಚಾರ್ಯರು ‘ಸನಾತನ’ ಎಂಬ ಪದವನ್ನು “ಆದ್ಯಂತವಿಲ್ಲದ್ದು” ಎಂದು ವಿವರಿಸಿದ್ದಾರೆ, ಯಾವುದಕ್ಕೆ ಆದಿಯೂ ಅಂತ್ಯವೂ ಇಲ್ಲವೋ ಅದು ಯಾವುದೋ ಒಂದು ʼಪಂಥ’ವೆಂಬ ಸೀಮಿತ ಪರಿಧಿಯಲ್ಲಿ ಬಂದಿಯಾಗುವುದು ಅಸಾಧ್ಯ. ಇಂತಹ ಶ್ರದ್ಧಾ ಪಂಥಗಳಿಗೆ ಸೇರಿದ ಇತರರು, ಸನಾತನ ಧರ್ಮವನ್ನು ಕೂಡ ಒಂದು ಪಂಥವೆಂದು ತಪ್ಪಾಗಿ ಭಾವಿಸುತ್ತಾರೆ.

ಭಾಗವತ ಪುರಾಣವು ಸ್ವತಃ ಭಗವಂತನ ಶಬ್ದಾವತಾರವಾಗಿದೆ. ಇದು ಪಾರಮಾರ್ಥಿಕ ಜ್ಞಾನ ಭಂಡಾರವಾಗಿದ್ದು, ಧಾರ್ಮಿಕ ತತ್ತ್ವಗಳ ಅಧಿಕೃತ ಪ್ರತಿನಿಧಿಯಾಗಿದೆ. “ಭಗವಂತನನ್ನು ಪ್ರೇಮಿಸುವುದು ಹಾಗೂ ಆತನಿಗೆ ಭಕ್ತಿಸೇವೆ ಸಲ್ಲಿಸುವುದೇ ಎಲ್ಲ ಜೀವಿಗಳ ಧರ್ಮ’ ಎಂಬುದನ್ನು ಅದು ಸಾರುತ್ತದೆ.

ಇದು ಭಗವಂತನೇ ಸರ್ವಕಾರಣ ಕಾರಣನೆಂಬುದನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಮಾತ್ರವಲ್ಲದೆ, ಭಗವಂತನಿಗೆ ನಾವು ಸಲ್ಲಿಸಬೇಕಾದ ಕರ್ತವ್ಯಗಳ ಕುರಿತಾಗಿಯೂ ಬೋಧಿಸುತ್ತದೆ. ಆದ್ದರಿಂದ ಭಾಗವತವನ್ನು ‘ಕೃಷ್ಣವಿಜ್ಞಾನ’ ಅಥವಾ ಭಗವದ್ವಿಜ್ಞಾನವೆಂದೂ ಕರೆಯಬಹುದು.

ಇದು ಭಕ್ತನ ಧರ್ಮವನ್ನು ಕುರಿತು ಹೇಳುತ್ತದೆ. ಇದರ ಪ್ರಕಾರ, ಭಗವಂತನಿಗೆ ಸಂಪೂರ್ಣವಾಗಿ ಶರಣಾಗುವುದು, ಆತನನ್ನು ಪ್ರೇಮಿಸುವುದು ಹಾಗೂ ಸೇವೆ ಸಲ್ಲಿಸುವುದು – ಇದೇ ನೈಜ ಧರ್ಮ. ಈ ಅಪೇಕ್ಷೆಗಳು ಜೀವಿಗಳಲ್ಲಿ ಸಹಜವಾಗಿ ಇರುವಂಥದ್ದು.

ದೇವೋತ್ತಮ ಪರಮ ಪುರುಷನ ಅಂಶಗಳಾದ ಎಲ್ಲ ಜೀವಿಗಳೂ ಅವನನ್ನು ಸೇರಿಕೊಳ್ಳಲು ತುಡಿಯುತ್ತಿರುತ್ತವೆ. ಮಾಯೆಯ ಪ್ರಭಾವದಿಂದ ಉಂಟಾದ ಭ್ರಮೆ, ‘ ಧರ್ಮ’ದ ಕುರಿತಾಗಿ ತಪ್ಪು ವ್ಯಾಖ್ಯಾನಗಳನ್ನು ಸೃಷ್ಟಿಸುತ್ತ, ಆದರ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದೆಯಷ್ಟೆ. ಇದನ್ನು ಅರ್ಥೈಸಿಕೊಳ್ಳುವ ವ್ಯಕ್ತಿಯು ಖಚಿತವಾಗಿ ಮುಕ್ತಿಯನ್ನು ಪಡೆಯುತ್ತಾನೆ. ಮರಳಿ ಭಗವದ್ಧಾಮಕ್ಕೆ ತೆರಳುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi