ವನಿತಾ: ಕೃಷ್ಣ ಪಾಕಶಾಲೆ: ವಿಧ ವಿಧದ ದೋಸೆ

ಭಾರತದಲ್ಲಿ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ, ಉಪ್ಪಿಟ್ಟಿನಂತಹ ತಿಂಡಿಗಳು ಬೆಳಗ್ಗಿನ ಉಪಹಾರದ ಅವಿಭಾಜ್ಯ ತಿನಿಸುಗಳಾಗಿವೆ. ಅತ್ಯಂತ ಜನಪ್ರಿಯವಾದ ಮಸಾಲೆ ದೋಸೆ ಸೇರಿದಂತೆ ವೈವಿದ್ಯಮಯವಾದ ದೋಸೆಗಳನ್ನು ತಯಾರಿಸಬಹುದು. ಇಲ್ಲಿ ನಾಲ್ಕು ಬಗೆಯ ದೋಸೆಗಳನ್ನು ಮಾಡುವ ವಿಧಾನ ತಿಳಿಸಲಾಗಿದೆ.

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್‌

ಅವಲಕ್ಕಿ – 1 ಕಪ್‌

ಉದ್ದಿನಬೇಳೆ – 1 ಟೇಬಲ್‌ ಸ್ಪೂನ್‌

ಮೊಸರು – 1 ಕಪ್‌ (ಇದಕ್ಕೆ 2 ಕಪ್‌ ನೀರು ಬೆರಸಬೇಕು)

ಅಡುಗೆ ಸೋಡ – ¼ ಟೀ ಸ್ಪೂನ್‌

ಉಪ್ಪು – 1 ಟೀ ಸ್ಪೂನ್‌

ಎಣ್ಣೆ – ದೋಸೆ ಬೇಯಿಸಲು ಅಗತ್ಯವಾದಷ್ಟು

ಮಾಡುವ ವಿಧಾನ:

ಅಕ್ಕಿ, ಅವಲಕ್ಕಿ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆಯಿರಿ. ನೀರು ಹಾಕಿದ ಮೊಸರನ್ನು ಪಾತ್ರೆಯಲ್ಲಿ ಹಾಕಿ ಅದರಲ್ಲಿ ಈ ಪದಾರ್ಥಗಳನ್ನು ನೆನೆಸಿ. ಸುಮಾರು 3 ತಾಸು ನೆನೆಯಲಿ. ಆನಂತರ ನೀರು ಬಸಿದು ಅದನ್ನು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ.

ಈ ನೀರುನ್ನು ಹಾಕಿಕೊಳ್ಳುತ್ತಾ ನೆನೆಸಿದ ಅಕ್ಕಿ, ಅವಲಕ್ಕಿ ಮತ್ತು ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಿ. ಸೋಡ ಮತ್ತು ಉಪ್ಪು ಹಾಕಿ ಕಲಸಿ. ಹುದುಗು ಬರಲು 4-5 ಗಂಟೆಗಳ ಕಾಲ ಇಡಬೇಕು. ತವಾವನ್ನು ಬಿಸಿ ಮಾಡಿ. ಎಣ್ಣೆ ಸವರಿ ದೋಸೆ ಹುಯ್ಯಿರಿ. ದೋಸೆ ಸುತ್ತಲೂ ಎಣ್ಣೆ ಹಾಕಿ. ಒಂದೆರಡು ನಿಮಿಷ ಬೆಂದ ಮೇಲೆ ತಿರುವಿರಿ. ಮೇಲೆ ಮೃದುವಾದ ಮತ್ತು ಅಂಚಿನಲ್ಲಿ ಗರಿಗರಿಯಾದ ದೋಸೆ ಸಿದ್ಧ. ಚಟ್ನಿಯೊಂದಿಗೆ ನೀಡಿ.

ಬೇಕಾಗುವ ಸಾಮಗ್ರಿಗಳು:

ಹೆಸುರ ಕಾಳು – 250 ಗ್ರಾಂ

ಶುಂಠಿ – ಒಂದು ತುಂಡು

ಜೀರಿಗೆ – 1 ಟೇಬಲ್‌ ಸ್ಪೂನ್‌

ಉಪ್ಪು – ರುಚಿಗೆ ತಕ್ಕಷ್ಟು

ಹಸಿಮೆಣಸಿನಕಾಯಿ – 4

ಕೊತ್ತಂಬರಿ ಸೊಪ್ಪು – 1 ಟೇಬಲ್‌ ಸ್ಪೂನ್‌

ಹಸಿ ಮೆಣಸು – ಸ್ವಲ್ಪ

ಎಣ್ಣೆ – 50 ರಿಂದ 100 ಗ್ರಾಂ

ಮಾಡುವ ವಿಧಾನ:

ಹೆಸರು ಕಾಳನ್ನು 5-6 ಗಂಟೆ ನೆನೆಸಿಡಿ. ಆನಂತರ ನೀರು ಬಸಿಯಿರಿ. ಇದಕ್ಕೆ ಹಸಿ ಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಆನಂತರ ಉಪ್ಪು ಹಾಕಿ ಚೆನ್ನಾಗಿ ಕಲಸಿ. ತವಾ ಬಿಸಿ ಮಾಡಿಕೊಂಡು ಎಣ್ಣೆ ಸವರಿ. ಹಿಟ್ಟನ್ನು ಚಕ್ರಾಕಾರವಾಗಿ ಹುಯ್ಯಿರಿ. ಎಣ್ಣೆ ಹಾಕಿ ತಿರುವಿದ ಮೇಲೆ ಕೂಡ ಎಣ್ಣೆ ಹಾಕಿ. ಈಗ ಹೆಸರು ಕಾಳು ದೋಸೆ ಸಿದ್ಧ. ಚಟ್ನಿಯೊಂದಿಗೆ ಸವಿಯಿರಿ. ಪೌಷ್ಟಿಕಾಂಶ ದೋಸೆ ಇದು.

ಬೇಕಾಗುವ ಸಾಮಗ್ರಿಗಳು:

ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ – 2

ಮೈದಾ ಹಿಟ್ಟು – 2 ಟೇಬಲ್‌ ಸ್ಪೂನ್‌

ಉದ್ದಕ್ಕೆ ಸೀಳಿದ ಹಸಿಮೆಣಸು – 2

ಕೊತ್ತಂಬರಿ ಸೊಪ್ಪು – ಒಂದು ಮುಷ್ಟಿಯಷ್ಟು

ಎಣ್ಣೆ – 2-3 ಸ್ಪೂನ್‌

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಒಂದು ಬೇಸಿನ್‌ನಲ್ಲಿ ಇಡಿ. ಇದಕ್ಕೆ ಮೈದಾ ಹಿಟ್ಟು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ಇಡ್ಲಿ ಹಿಟ್ಟಿನಂತೆ ಸ್ವಲ್ಪ ದಪ್ಪವಾಗಿ ಇರಲಿ. ಇದಕ್ಕೆ ಹಸಿ ಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ. ಸೊಪ್ಪು ಕಣ್ಣಿಗೆ ಕಾಣದಂತಿರಲು ಅಥವಾ ಹಲ್ಲಿಗೆ ಸಿಕ್ಕಿ ಹಾಕಿಕೊಳ್ಳದಂತಿರಲು ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಹಾಕಬಹುದು. ಇತ್ತ ಸ್ಟವ್‌ ಮೇಲೆ ತವಾ ಇಟ್ಟು ಬಿಸಿ ಮಾಡಿಕೊಳ್ಳಿ. ತವಾ ತುಂಬಾ ಕಾಯಬಾರದು. ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ ದೋಸೆ ಹುಯ್ಯಿರಿ. ದೋಸೆ ಸುತ್ತಲೂ ಎಣ್ಣೆ ಹಾಕಿ. ಒಂದು ಕಡೆ ದೋಸೆ ಬೆಂದ ಮೇಲೆ ಅದನ್ನು ತಿರುವಿ ಹಾಕಿ. ದೋಸೆ ಮೇಲೆ ಬೆಣ್ಣೆ ಹಾಕಿ ತಿನ್ನಲು ಕೊಡಿ. ಇದನ್ನು ಚಟ್ನಿ ಅಥವಾ ಟೊಮ್ಯಾಟೊ ಸಾಸ್‌ ಜೊತೆ ಸವಿಯಬಹುದು.

(ಈ ಅಳತೆ ಸಾಮಗ್ರಿಯಲ್ಲಿ ನಾಲ್ಕು ಆಲೂ ದೋಸೆ ತಯಾರಿಸಬಹುದು)

ಬೇಕಾಗುವ ಸಾಮಗ್ರಿಗಳು:

ಸಾಮಾನ್ಯವಾಗಿ ಬಳಸುವ ಅಕ್ಕಿ – 4 ಲೋಟ

ತೊಗರಿ ಬೇಳೆ – ಅರ್ಧ ಲೋಟ

ಉದ್ದಿನ ಬೇಳೆ – ಒಂದೂವರೆ ಲೋಟ

ಮೆಂತ್ಯ – ಒಂದೂವರೆಯಿಂದ 2 ಟೇಬಲ್‌ ಚಮಚ

ಅವಲಕ್ಕಿ – ಒಂದು ಹಿಡಿ

ಸಕ್ಕರೆ – ಒಂದು ಟೇಬಲ್‌ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ ಅಥವಾ ತುಪ್ಪ – ದೋಸೆ ಬೇಯಿಸಲು ಅಗತ್ಯವಾದಷ್ಟು

ಪಲ್ಯಕ್ಕೆ

ಆಲೂಗಡ್ಡೆ – 6 ರಿಂದ 8

ಕೊತ್ತಂಬರಿ ಸೊಪ್ಪು – ಒಂದು ಟೇಬಲ್‌ ಸ್ಪೂನ್‌

ಬಟಾಣೆ ಕಾಳು (ಅಗತ್ಯವಾದರೆ) – ಒಂದು ಚಿಕ್ಕ ಬಟ್ಟಲು

ಕಡಲೆ ಬೇಳೆ – 2 ಟೇಬಲ್‌ ಸ್ಪೂನ್‌

ಒಣ ಮೆಣಸಿನಕಾಯಿ – 2

ತೆಂಗಿನ ತುರಿ – 4 ಟೇಬಲ್‌ ಸ್ಪೂನ್‌

ಹುಣಸೆಹಣ್ಣು ಮತ್ತು ಉಪ್ಪು – ರುಚಿಗೆ ತಕ್ಕಷ್ಟು

ಬೇಳೆ, ತೆಂಗಿನ ತುರಿ ಮತ್ತು ಮೆಣಸಿಕಾಯಿಯನ್ನು ಹುರಿದು ಆರಿದ ಮೇಲೆ ರುಬ್ಬಿಕೊಳ್ಳಿ.

ಮಾಡುವ ವಿಧಾನ:

ಉಪ್ಪು ಮತ್ತು ಸಕ್ಕರೆ ಬಿಟ್ಟು ದೋಸೆ ಹಿಟ್ಟಿನ ಉಳಿದ ಎಲ್ಲ ಸಾಮಾನುಗಳನ್ನು 6 ರಿಂದ 8 ಗಂಟೆಗಳ ಕಾಲ ನೆನೆಸಿಡಿ. ಆನಂತರ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಉಪ್ಪು ಮತ್ತು ಸಕ್ಕರೆ ಹಾಕಿ ಕಲಸಿಡಿ. ಇತ್ತ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಪುಡಿ ಮಾಡಿಟ್ಟುಕೊಳ್ಳಿ.

ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ಬಾಣಲೆಯಲ್ಲಿ ಸಾಸಿವೆ ಒಗ್ಗರಣೆ ಮಾಡಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ ಬಾಡಿಸಿ. ಆನಂತರ ಬಟಾಣಿ ಕಾಳು ಹಾಕಿ. ಹತ್ತು ನಿಮಿಷ ಬೆಂದಮೇಲೆ ಪುಡಿ ಮಾಡಿದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಸಿ. ಇದನ್ನು ಒಂದು ಬೇಸಿನ್‌ಗೆ ಹಾಕಿಟ್ಟುಕೊಳ್ಳಿ. ದೋಸೆ ತವಾ ಕಾದ ಮೇಲೆ ಒಂದು ಚಮಚದಷ್ಟು ತುಪ್ಪ ಸವರಿ.

ಅದರ ಮೇಲೆ ದೋಸೆ ಹಾಕಿ. ಆನಂತರ ತುಪ್ಪ ಅಥವಾ ಎಣ್ಣೆ ಹಾಕಿ. ದೋಸೆ ತಿರುವಿದ ಮೇಲೆಯೂ ಎಣ್ಣೆ ಅಥವಾ ತುಪ್ಪ ಹಾಕಿ. ಆನಂತರ ದೋಸೆಗೆ ಮಸಾಲೆ ಚಟ್ನಿ ಸವರಿ. ಅದರ ಮೇಲೆ ಪಲ್ಯವಿಟ್ಟು ಮಡಚಿ. ನಿಮಗಿಷ್ಟ ಬಂದ ಆಕಾರಕ್ಕೆ ದೋಸೆಯನ್ನು ಮಡಚಬಹುದು. ಮಸಾಲೆ ದೋಸೆ ಜೊತೆ ಪುದೀನ ಚಟ್ನಿ ಇದ್ದರೆ ರುಚಿ ಹೆಚ್ಚು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi