ಆರಂಭಿಕ ಆಸಕ್ತಿಯಿಂದ ಸಂಪೂರ್ಣ ನಂಬಿಕೆವರೆಗೆ ನಮ್ಮ ಶ್ರದ್ಧೆಯು ಹೇಗೆ ಬೆಳೆಯುತ್ತದೆ?
ಭಕ್ತಿ ಸೇವೆಯನ್ನು ನಿರ್ವಹಿಸಲು ಶ್ರದ್ಧೆಯು ಅತಿಮುಖ್ಯ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, (9.3), “ಶತ್ರು ಸಂಹಾರಕನಾದ ಅರ್ಜುನನೇ, ಈ ಭಕ್ತಿ ಸೇವೆಯಲ್ಲಿ ಶ್ರದ್ಧಾವಂತರಲ್ಲದವರು ನನ್ನನ್ನು ಪಡೆಯಲಾರರು. ಆದುದರಿಂದ ಅವರು ಈ ಐಹಿಕ ಜಗತ್ತಿನಲ್ಲಿ ಜನನ, ಮರಣ ಮಾರ್ಗಕ್ಕೆ ಹಿಂದಿರುಗುವರು.” ಶ್ರದ್ಧೆ ಇಲ್ಲದೆ ನಾವು ಕೃಷ್ಣನನ್ನು ಹೊಂದುವುದು ಸಾಧ್ಯವಿಲ್ಲ ಎಂದು ಶ್ರೀಲ ಪ್ರಭುಪಾದರು ಭಾವಾರ್ಥದಲ್ಲಿ ಬರೆಯುತ್ತಾರೆ. ಭಕ್ತರ ಸಹವಾಸದಿಂದ ಶ್ರದ್ಧೆಯು ಬೆಳೆಯುತ್ತದೆ. ಅಂತಹ ಭಕ್ತರ ಸಹವಾಸವಿಲ್ಲದಿದ್ದರೆ ನಾವು ಪೂರ್ಣವಾಗಿ ಶ್ರದ್ಧಾವಂತರಾಗುವುದು ಸಾಧ್ಯವಿಲ್ಲ.

ಶ್ರದ್ಧೆಯಲ್ಲಿ ಮೂರು ದರ್ಜೆಗಳು. ಅತ್ಯಂತ ಕೆಳ ದರ್ಜೆಯವರು ಭಕ್ತರ ಸಹವಾಸಕ್ಕೆ ಬರುವಷ್ಟು ಶ್ರದ್ಧೆಯನ್ನು ತೋರುವರು. ಆದರೆ ಅಲ್ಲೇ ನೆಲೆಸುವಷ್ಟು ಧರ್ಮಗ್ರಂಥಗಳ ಜ್ಞಾನವೂ ಅವರಿಗಿಲ್ಲ ಅಥವಾ ಅದರಲ್ಲಿ ನಂಬಿಕೆಯೂ ಇಲ್ಲ. ಎರಡನೆಯ ವಿಧವು ಮೂರನೆಯ ದರ್ಜೆಗಿಂತ ದೃಢವಾಗಿದೆ. ಧರ್ಮ ಗ್ರಂಥಗಳಲ್ಲಿ ಹೆಚ್ಚು ತಿಳಿವಳಿಕೆ ಇಲ್ಲದಿದ್ದರೂ ನಾವು ಅಲ್ಲಿ ಬೋಧಿಸಿದ ಸತ್ಯವನ್ನು ನಂಬುತ್ತೇವೆ. ಅತ್ಯುನ್ನತ ದರ್ಜೆಯ ಭಕ್ತನಿಗೆ ಧರ್ಮ ಗ್ರಂಥಗಳ ಬಗೆಗೆ ದೃಢವಾದ ಶ್ರದ್ಧೆ ಮತ್ತು ತಿಳಿವಳಿಕೆ ಎರಡೂ ಇರುತ್ತದೆ.
ಭಕ್ತರಾಗಲು ಅಪೇಕ್ಷೆ ಉಳ್ಳ ನಾವು ಶ್ರದ್ಧೆಯ ಪ್ರಶ್ನೆಯನ್ನು ಪರಿಗಣಿಸಿದಾಗ, ನಾವು ಅದನ್ನು ಆಗಲೇ ಹೊಂದಿದ್ದೇವೆ ಎಂದು ಅನೇಕ ಬಾರಿ ಭಾವಿಸುತ್ತೇವೆ. ಅಂತೂ, ನಾವು ನಮ್ಮ ಸಾಧನೆ, ನಮ್ಮ ಆಧ್ಯಾತ್ಮಿಕ ಆಚರಣೆಯ ನಿಯಂತ್ರಕ ತತ್ತ್ವಗಳನ್ನು ಶ್ರದ್ಧೆಯಿಂದ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಶ್ರದ್ಧೆಯು ಜೀವಂತ ವಿಷಯ. ಒಮ್ಮೆ ಸಾಧಿಸಿಬಿಟ್ಟರೆ ಹೆಚ್ಚಿನ ಚಿಂತನೆ ಇಲ್ಲದೆ ಶಕ್ತಿ ಉತ್ಸಾಹಗಳಿಂದಲೇ ಉಳಿಯುತ್ತದೆ ಎಂಬುದಲ್ಲ ಅದು. ಸಂಶಯ, ಸಂದೇಹದ ಪರಿಸರದಲ್ಲಿ ಬೆಳೆದ ಮತ್ತು ಶ್ರದ್ಧೆಯನ್ನು ಪ್ರಶ್ನಿಸು ಎಂಬ ಬೋಧನೆಗೊಳಗಾದ ನಮ್ಮಂತಹವರ ವಿಷಯದಲ್ಲಂತೂ ಅದು ನಿಜ.
ಆದುದರಿಂದ ನಾವು ಶ್ರದ್ಧೆ ಎಂದರೇನು ಮತ್ತು ನಮ್ಮ ಸ್ವಂತ ಶ್ರದ್ಧೆ ಏನು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು. ಈ ಮೊದಲು ಹೇಳಿದಂತೆ ಮೂರು ವಿಧದ ಶ್ರದ್ಧೆಗಳಲ್ಲದೆ, ಧರ್ಮ ಗ್ರಂಥಗಳು ಶ್ರದ್ಧೆಯನ್ನು ಆರಂಭಿಕ (ಶ್ರದ್ಧಾ) ಮತ್ತು ಸ್ಥಿರ (ನಿಷ್ಠೆ) ಎಂದೂ ನಿರೂಪಿಸುತ್ತವೆ. ಶ್ರೀಲ ಪ್ರಭುಪಾದರ ಪ್ರಕಾರ, ಮಂದಿರದೊಳಗೆ ಪರ್ಯಟನೆ ಮಾಡುವ ಇಚ್ಛೆ ಉಳ್ಳ ಮತ್ತು ಅಲ್ಲಿನ ಚಟುವಟಿಕೆಗಳ ಬಗೆಗೆ ಸದ್ಭಾವನೆ ಹೊಂದುವ ಸಾಮರ್ಥ್ಯ ಉಳ್ಳ ವ್ಯಕ್ತಿಯು ತೋರುವುದೇ ಶ್ರದ್ಧಾ. ಇದು ಹೆಚ್ಚೂ ಕಮ್ಮಿ ಆಶಾದಾಯಕ ಕುತೂಹಲದಂತೆ ಕಾಣುತ್ತದೆ. ಭಕ್ತರ ಸಹವಾಸ ಹೊಂದಲು ಆ ಆರಂಭಿಕ ಶ್ರದ್ಧೆಯೇ ಸಾಕು.
ನಿಷ್ಠಾ ಎಂದರೆ ಬದಲಾಗದಂತಹ ನಂಬಿಕೆ. ಇಂತಹ ಶ್ರದ್ಧೆ ಇರುವ ಭಕ್ತನು ತಾನು ಕೃಷ್ಣಪ್ರಜ್ಞೆಯನ್ನು ಪಡೆಯಬಹುದಾದರೆ ತನ್ನ ಎಲ್ಲ ಆಸೆಗಳು ಪೂರೈಸುತ್ತವೆ ಎಂದು ಭಾವಿಸುತ್ತಾನೆಂದು ಶ್ರೀಲ ಪ್ರಭುಪಾದರು ಬರೆಯುತ್ತಾರೆ. ಕೃಷ್ಣ ಪ್ರಜ್ಞೆಯ ಬೆಳವಣಿಗೆಗಿಂತ ಮುಖ್ಯವಾದುದು ಬೇರೊಂದಿಲ್ಲ. ನಿಷ್ಠಾ ಇರುವ ಭಕ್ತನು ಗುರಿಯನ್ನು ಮುಟ್ಟಿಲ್ಲದಿರಬಹುದು, ಆದರೆ ಅದರ ಪ್ರಾಮುಖ್ಯ ಮತ್ತು ವೌಲ್ಯದಲ್ಲಿ ಸ್ಥಿರವಾಗಿರುತ್ತಾನೆ.
ಪ್ರಭುಪಾದರ ಸಬಲ ಶ್ರದ್ಧೆ

ಶ್ರೀಲ ಪ್ರಭುಪಾದರ ಜೀವನ ಮತ್ತು ಬೋಧನೆಯನ್ನು ಪರಿಶೀಲಿಸಿದರೆ, ಅವರು ಸ್ವಂತ ಶ್ರದ್ಧೆ ಮತ್ತು ಇತರರಲ್ಲಿ ಶ್ರದ್ಧೆಯನ್ನು ಉಂಟುಮಾಡುವ ತಮ್ಮ ಸಾಮರ್ಥ್ಯದಲ್ಲಿ ಎಷ್ಟು ಸಬಲರಾಗಿದ್ದರು ಎಂಬುವುದನ್ನು ನೋಡಬಹುದಾಗಿದೆ. ನ್ಯೂಯಾರ್ಕ್ ನಗರದ ಭೋಗಜೀವಿಗಳಾಗಿದ್ದ ಯುವ ಜನರಿಗೆ ಹರೇ ಕೃಷ್ಣ ಮಂತ್ರವನ್ನು ಜಪಿಸುವಂತೆ ಮನವರಿಕೆ ಮಾಡಿದ ಮತ್ತು ಕೃಷ್ಣನ ರೂಪವನ್ನು ದೇವೋತ್ತಮನ ಶ್ರೇಷ್ಠ ಅಭಿವ್ಯಕ್ತಿ ಎಂದು ಸ್ವೀಕರಿಸುವಂತೆ ಮಾಡಿದ ಶ್ರೀಲ ಪ್ರಭುಪಾದರ ಶಕ್ತಿ ಅದ್ಭುತ. ಶ್ರೀಲ ಪ್ರಭುಪಾದರ ಮೊದಲ ಸಾರ್ವಜನಿಕ ಕೀರ್ತನೆಯ ಅನಂತರ ದಿ ಈಸ್ಟ್ ವಿಲೇಜ್ ಅದರ್ “ಸೇವ್ ಅರ್ಥ್ ನೌ!” ಎಂಬ ಶೀರ್ಷಿಕೆ ಪ್ರಕಟಿಸಿತ್ತು. ಅದರೊಂದಿಗಿನ ಲೇಖನದಲ್ಲಿ ವರದಿಗಾರನು ಚರ್ಚ್‌ನಲ್ಲಿ ವೃದ್ಧನನ್ನು ಕೊಂದ ದೇವತಾ ಶಾಸ್ತ್ರಜ್ಞರನ್ನು ಕುರಿತ ಕಾಲ್ಪನಿಕ ಕಥೆಯನ್ನು ಹೇಳಿದ್ದನು. ಅದರ ಅನಂತರ, ಈಗ ದೇವರು ಸತ್ತಿದ್ದಾನೆ ಎಂದು ವರದಿಯಾಗಿತ್ತು. ಕೆಲವರು ಅದನ್ನು ನಂಬಲಿಲ್ಲ. ಅವರು ದೇಹವನ್ನು ಹೊರತೆಗೆದರು. ಅದು ಭಗವಂತನದಾಗಿರಲಿಲ್ಲ . ಆದರೆ ಅದು ಅವನ ಪಿಆರ್ ವ್ಯಕ್ತಿಯದು, ಸುಸಂಘಟಿತ ಧರ್ಮ. ಆ ಕ್ಷಣ ವಿಶಾಲ ವಿಶ್ವದ ಮೂಲೆ ಮೂಲೆಗೂ ಸುದ್ದಿ ಹರಡಿತು : “ದೇವರು ಬದುಕಿದ್ದಾನೆ! ಆದರೆ ದೇವರು ಎಲ್ಲಿದ್ದ?”
ದೇವರು ಎಲ್ಲಿದ್ದಾನೆ ಎಂಬುವುದನ್ನು ಕಂಡು ಹಿಡಿಯಲು ನೆರವಾಗುವ ಮಾಹಿತಿಯನ್ನು ನೀಡಿದವರಿಗೆ ಬಹುಮಾನವನ್ನು ಘೋಷಿಸಿದ ಇಡೀ ಪುಟದ ಜಾಹೀರಾತು ನ್ಯೂಯಾರ್ಕ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಮಾರ್ಟಿನ್ ಲೂಥರ್ ಕಿಂಗ್ ಮತ್ತು ರೊನಾಲ್ಡ್ ರೇಗನ್ ಅದಕ್ಕೆ ಸಹಿಹಾಕಿದ್ದರು. ಇದಕ್ಕೆ ಏನೂ ಪ್ರತಿಕ್ರಿಯೆ ಬರಲಿಲ್ಲ. ಜನರು ಪುನಃ ಚಿಂತಿತರಾದರು ಮತ್ತು ಅಚ್ಚರಿಗೊಂಡರು. ಕೆಲವರೆಂದರು, “ದೇವರು ಸಕ್ಕರೆ ಘನದಲ್ಲಿ ಬದುಕಿದ್ದಾನೆ” ಎಂದರು. ಪವಿತ್ರ ರಹಸ್ಯವು ಸಿಗರೇಟ್‌ನಲ್ಲಿದೆ ಎಂದು ಕೆಲವರು ಪಿಸುಗುಟ್ಟಿದರು.
ಆದರೆ ಇದೆಲ್ಲಾ ನಡೆಯುತ್ತಿದ್ದಾಗ ವೃದ್ಧರೊಬ್ಬರು ನ್ಯೂಯಾರ್ಕ್‌ನ ಈಸ್ಟ್ ವಿಲೇಜ್‌ನಲ್ಲಿ ಸುತ್ತಾಡುತ್ತ ದೇವರನ್ನು ಎಲ್ಲಿ ಕಂಡುಹಿಡಿಯಬಹುದು ಎಂಬ ವಿಷಯ ತನಗೆ ಗೊತ್ತು ಎಂಬುವುದನ್ನು ಸಾಬೀತು ಪಡಿಸುವುದಾಗಿ ಸಾರಿದರು. ಮೂರು ತಿಂಗಳಿನಲ್ಲಿಯೇ, ಆ ವೃದ್ಧ, ಎ.ಸಿ. ಭಕ್ತಿವೇದಾಂತ ಸ್ವಾಮಿ ಅವರು ವಿಶ್ವದ ಅತಿ ಕಠಿಣ, ಒರಟು ಜನರಾದ ಬೊಹೀಮೀಯರು, ಮಾದಕ ದ್ರವ್ಯ ಸೇವಿಸುವವರು, ಭಂಗಿ ಕುಡುಕರು ಮತ್ತು ಹಿಪ್ಪಿಗಳಿಗೆ ದೇವರತ್ತ ಸಾಗುವ ದಾರಿ ತಮಗೆ ಗೊತ್ತು ಎಂಬುವುದನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಕೃಷ್ಣ ಪ್ರಜ್ಞೆಯ ತತ್ತ್ವವನ್ನು ಆಕರ್ಷಕವಾಗಿ ಪ್ರಸ್ತುತಪಡಿಸುವ ವಿಧಾನ ಪ್ರಭುಪಾದರಿಗೆ ಗೊತ್ತಿತ್ತು. ಮತ್ತು ಅವರ ಬದುಕು ಅವರ ಬೋಧನೆಗೆ ಪೂರಕವಾಗಿತ್ತು. ನಮಗೆ ಅವರಂತೆ ಇರಬೇಕೆನಿಸಿತ್ತು. ಪ್ರಭುಪಾದರು ಹೇಳುತ್ತಿದ್ದರು, “ಕೃಷ್ಣ ಪ್ರಜ್ಞೆ ಎಷ್ಟು ಒಳ್ಳೆಯದು.” ನಾವು ಅವರತ್ತ ನೋಡುತ್ತಿದ್ದೆವು ಮತ್ತು ಅದನ್ನು ಸತ್ಯವೆಂದು ನಂಬುತ್ತಿದ್ದೆವು.
ನಾನು ಇದನ್ನು ಪ್ರಸ್ತಾಪಿಸುವುದು ಏಕೆಂದರೆ ಶ್ರದ್ಧೆಯು ಪ್ರೀತಿಯಂತೆ : ಅದನ್ನು ಕಳೆದುಕೊಳ್ಳುವ ಭಯವಿಲ್ಲದೆ ನೀವು ಶ್ರದ್ಧೆಯನ್ನು ಅತ್ಯಂತ ನಿಕಟವಾಗಿ ವಿಶ್ಲೇಷಿಸಲಾರಿರಿ. ನಾವು ಶ್ರದ್ಧೆಯ ಫಲ, ಫಲಿತಾಂಶಗಳೊಂದಿಗೆ ಬದುಕುತ್ತೇವೆ : ನಾವು ನಮ್ಮ `ಸಾಧನಾ’ ವನ್ನು ಅಭ್ಯಾಸಮಾಡುತ್ತೇವೆ, ನಾವು ಕೃಷ್ಣ ಪ್ರಜ್ಞೆಯ ಕಷ್ಟದಲ್ಲಿ ಬದುಕುತ್ತೇವೆ ಮತ್ತು ನಾವು ಅವನಿಂದ ಆಕರ್ಷಿತರಾಗಿ ಉಳಿಯುತ್ತೇವೆ. ಶ್ರದ್ಧೆಯಿಂದ ನಾವು ನಮ್ಮ ಗುರುವನ್ನು ಪ್ರಶ್ನಿಸುತ್ತೇವೆ ಮತ್ತು ಶ್ರದ್ಧೆಯಿಂದ ಅವರ ಉತ್ತರವನ್ನು ಸ್ವೀಕರಿಸುತ್ತೇವೆ. ಅನಂತರ ಶ್ರದ್ಧೆಯಿಂದ ನಮ್ಮ ಆತ್ಮದೊಂದಿಗೆ ಅವರನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ ಹೃದಯದಲ್ಲಿ ಶ್ರದ್ಧೆಯನ್ನು ಎಚ್ಚರಿಸುವುದು ಯಾವುದೆಂದು ನಮಗೆ ಅನೇಕ ಬಾರಿ ತಿಳಿಯುವುದಿಲ್ಲ. ಆದರೆ, ಸಮಯ, ಸ್ಥಳ ಮತ್ತು ವ್ಯಕ್ತಿ ಸರಿಯಾಗಿದ್ದಾಗ ನಮಗೆ ಶ್ರದ್ಧೆ ಮೂಡುತ್ತಿರುವುದರ ಬಗೆಗೆ ಅರಿವು ಸಾಧ್ಯವಾಗುತ್ತದೆ.
ಆದರೆ ಮೊದಲು ಪ್ರಸ್ತಾವಿಸಿದಂತೆ, ದೃಢವಾದ ಶ್ರದ್ಧೆಯನ್ನು ಒಂದು ದಿನದಲ್ಲಿ ಗಳಿಸುವುದು ಸಾಧ್ಯವಿಲ್ಲ. ಶ್ರೀಲ ಪ್ರಭುಪಾದರ ಬೋಧನೆಯಲ್ಲಿ ಭಗವದ್ಗೀತೆಯ ಅಧ್ಯಯನ ಮಾಡಿದ್ದು ಮತ್ತು ನನ್ನ ನಂಬಿಕೆಯನ್ನು ಬಲಪಡಿಸಿಕೊಂಡ ಭಾವನೆ ನೆನಪಾಗುತ್ತದೆ. ಹೌದು, ಕೃಷ್ಣನು ಭಗವಂತ ಮತ್ತು ನಿಜ, ಆತ್ಮವು ಒಂದು ದೇಹದಿಂದ ಮತ್ತೊಂದು ದೇಹದಲ್ಲಿ ಪುನರ್ಜನ್ಮ ಹೊಂದುತ್ತದೆ. ಹೌದು, ನಾವು ಶಾಶ್ವತವಾಗಿ ಮತ್ತು ಸ್ವರೂಪ ಸ್ಥಿತಿಯಾಗಿ ಕೃಷ್ಣನ ಸೇವಕರು. ಅನಂತರ, ಒಂದು ದಿನ ಪ್ರಭುಪಾದರು ಕೃಷ್ಣನಿಗೆ 16,108 ಪತ್ನಿಯರಿದ್ದರೆಂದು ನಮಗೆ ತಿಳಿಸಿದರು. ಆ ಒಂದು ಮಾಹಿತಿಯು ನನ್ನ ಶ್ರದ್ಧೆಯ ಬುಡವನ್ನೇ ಅಲ್ಲಾಡಿಸುವ ಹಾಗಿತ್ತು.
ಕೆಲವು ಬಾರಿ ನಾವು ಧರ್ಮ ಗ್ರಂಥಗಳಲ್ಲಿ ಓದಿದ ಅಂಶಗಳಲ್ಲಿ ಕೆಲವನ್ನು ಮಾತ್ರ ನಂಬುತ್ತೇವೆ. ನಮ್ಮ ನಂಬಿಕೆ ವ್ಯವಸ್ಥೆಯಿಂದ ಆಚೆ ಕೆಲವನ್ನು ಸ್ವೀಕರಿಸಬೇಕೆಂದು ಹೇಳಿದಾಗ ಅದು ನಮ್ಮ ಇಡೀ ಆಚರಣೆಗೆ ಬೆದರಿಕೆ ಉಂಟುಮಾಡಬಹುದು.
ಕೃಷ್ಣನ ಪತ್ನಿಯರನ್ನು ಕುರಿತು ಶ್ರೀಲ ಪ್ರಭುಪಾದರ ವಿವರಣೆಯನ್ನು ಪ್ರಶ್ನಿಸಲು ನಾನು ನನ್ನ ಕೈಯನ್ನು ಎತ್ತಿದೆ.
“ಒಳ್ಳೆಯ ಶ್ರದ್ಧೆಯಿಂದ ಭಗವದ್ಗೀತೆಯನ್ನು ಸ್ವೀಕರಿಸಲು ನಾನು ಪ್ರಯತ್ನಿಸುತ್ತಿರುವೆ. ಆದರೆ ಇದನ್ನು ಕೇಳಿದಾಗ ನನಗೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ.”
ಪ್ರಭುಪಾದರು ಉತ್ತರಿಸಿದರು, “ನಿಮಗೆ ಕಷ್ಟವೇ? ದೊಡ್ಡ ದೊಡ್ಡ ವಿದ್ವಾಂಸರಿಗೇ ಅದು ಕಷ್ಟ.”
ಶ್ರದ್ಧೆ ಮತ್ತು ಜ್ಞಾನ
ಕ್ರಿಯಾಶೀಲವಾಗಿ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಜ್ಞಾನವನ್ನು ಹೊಂದುವುದಕ್ಕಿಂತ ಕೀಳಲ್ಲ ಎಂಬುವುದನ್ನು ಅರಿತುಕೊಳ್ಳುವುದು ನಮಗೆ ತುಂಬ ಮುಖ್ಯ ಎಂದು ನನಗನಿಸುತ್ತದೆ. ಅದು, ಶ್ರದ್ಧೆ ಹೊಂದುವುದೆಂದರೆ ತರ್ಕಬದ್ಧವಾಗಿರುವುದಕ್ಕೆ ವಿರೋಧವೆಂದಲ್ಲ ಮತ್ತು ಅದು ಭಾವನಾತ್ಮಕವಲ್ಲ. ಶ್ರದ್ಧೆಯು ಲೌಕಿಕ ಜೀವನಕ್ಕೂ ಅಗತ್ಯವಾದ ಭಾಗ.
ಕೆಲವು ಭಕ್ತರೊಂದಿಗೆ ಬೆಳಗಿನ ವಾಯು ಸಂಚಾರದ ಸಮಯದಲ್ಲಿ ಶ್ರೀಲ ಪ್ರಭುಪಾದರು ಇದು ನಿಜವೆಂದು ತೋರಿಸಿದರು :

ಶಿಷ್ಯ : ಅಂದರೆ, ಶ್ರದ್ಧೆಗೆ ಜ್ಞಾನ ಅಗತ್ಯವಿಲ್ಲ, ಆದರೆ ಜ್ಞಾನಕ್ಕೆ ಶ್ರದ್ಧೆ ಅಗತ್ಯ.
ಶ್ರೀಲ ಪ್ರಭುಪಾದ : ಹೌದು. ಆದುದರಿಂದ ಒಬ್ಬ ಭಕ್ತನು ಯಾವುದೇ ಜ್ಞಾನವಿಲ್ಲದೆ ಭಕ್ತನಾಗುತ್ತಾನೆ. ಅದು ಶ್ರದ್ಧೆ, ಕೇವಲ ಶ್ರದ್ಧೆ. ಭಕ್ತರು ಮುನ್ನಡೆಯುತ್ತಾರೆ. ಅನಂತರ, ಅವರು ಸ್ವಯಂ ಜ್ಞಾನ ಹೊಂದುತ್ತಾರೆ. ಏಕೆಂದರೆ ಅವರಲ್ಲಿ ಬಲವಾದ, ದೃಢವಾದ ಶ್ರದ್ಧೆ ಇರುತ್ತದೆ.
ಇದಕ್ಕೂ ಮುನ್ನ ಭಕ್ತರೊಬ್ಬರು ಶ್ರೀಲ ಪ್ರಭುಪಾದರನ್ನು ಕೇಳಿದರು, “ಅದು ಹೇಗೆ ಒಬ್ಬ ನಿರ್ದಿಷ್ಟ ವ್ಯಕ್ತಿಯು ಶ್ರದ್ಧೆಯನ್ನು ಸ್ಪಷ್ಟವಾಗಿ ತೋರುತ್ತಾರೆ ಮತ್ತು ಉಳಿದವರು ಇಲ್ಲ?” ಇದು ಪರಿಶುದ್ಧತೆಯಿಂದ ಎಂದು ಶ್ರೀಲ ಪ್ರಭುಪಾದರು ಉತ್ತರಿಸಿದರು. ಮತ್ತೊಬ್ಬ ಭಕ್ತರು ಮುಂದಾದರು, “ಅಂದರೆ, ಹಿಂದಿನ ಜನ್ಮ ಮತ್ತು ಪುಣ್ಯ ಕಾರ್ಯಗಳು ಎಂದು ಅರ್ಥವೇ?” ನಮ್ಮಲ್ಲಿ ಪರಿಶುದ್ಧತೆ ಇದ್ದರೆ ನಾವು ಹೆಚ್ಚು ಶ್ರದ್ಧೆ ಮತ್ತು ಜ್ಞಾನವನ್ನು ಪಡೆಯುತ್ತೇವೆ ಎಂದು ಶ್ರೀಲ ಪ್ರಭುಪಾದರು ನುಡಿದರು. ಆದರೆ ನಾವು ಶ್ರದ್ಧೆಯಿಂದ ಆರಂಭಿಸಬೇಕು. “ಅವನು ಶ್ರದ್ಧಾವಂತನಾದ ಕಾರಣ ಅವನಿಗೆ ಜ್ಞಾನ ಲಭಿಸಲು ನಾನು ನೆರವಾಗುವೆ. ಪುನಃ ನೀವು ಅಲ್ಲಿಗೇ ಬರುವಿರಿ.”
ಶಿಷ್ಯ : ಅಂಧ ಶ್ರದ್ಧೆಯು ನಂಬಿಕೆ…
ಶ್ರೀಲ ಪ್ರಭುಪಾದ : ಅಂಧ ಶ್ರದ್ಧೆ – ಅದನ್ನು ಈಗಾಗಲೇ ವಿವರಿಸಿದ್ದೇನೆ ನೀವು ಯಾಕೆ ಮರೆಯುವಿರಿ? ಅವನು ತೋರಿಸುತ್ತಾನೆ, “ಪ್ರಭುಪಾದ, ಈ ಕಡೆ ಬನ್ನಿ.” ಹೀಗಾಗಿ, ನನಗೆ ಶ್ರದ್ಧೆ ಇಲ್ಲ. ನಾನು ಯಾಕೆ ಹೋಗಬೇಕು? ನನಗೆ ಶ್ರದ್ಧೆ ಇಲ್ಲದಿದ್ದರೆ ನಾನು ಇಲ್ಲಿಯೇ ನಿಲ್ಲಬೇಕು ಮತ್ತು ನನ್ನ ಚಲನೆ ನಿಂತುಬಿಡುತ್ತದೆ. ನೀವು ಕಣ್ಣುಮುಚ್ಚಿಕೊಂಡು ಶ್ರದ್ಧೆಯನ್ನು ಇಟ್ಟುಕೊಳ್ಳಬೇಕು. ವ್ಯಕ್ತಿಯು ದಿಕ್ಕು ತೋರಿಸುತ್ತಿದ್ದಾನೆ. ಅವನು ಪರಿಪೂರ್ಣನಾಗಿದ್ದರೆ, ನಿಮ್ಮ ಶ್ರದ್ಧೆಯು ನಿಮ್ಮನ್ನು ಪ್ರಗತಿಹೊಂದುವಂತೆ ಮಾಡುತ್ತದೆ. ಆದರೆ ನೀವು ಧೂರ್ತನ ಬಳಿಗೆ ಹೋದರೆ, ನಿಮಗೆ ಅಂಧ ಶ್ರದ್ಧೆ ಇದ್ದರೆ, ನೀವು ಕಳೆದುಹೋದಂತೆ. ಮಗುವಿಗೆ ಏನೂ ಜ್ಞಾನವಿರುವುದಿಲ್ಲ, ಆದರೆ ಅದಕ್ಕೆ ತನ್ನ ಪೋಷಕರಲ್ಲಿ ನಂಬಿಕೆ ಇರುತ್ತದೆ ಮತ್ತು ಅದು ತನ್ನ ಪೋಷಕರು ಹೇಳಿದ್ದನ್ನು ನಂಬುತ್ತದೆ. ಆಗ ಅದು ಪ್ರಗತಿಹೊಂದುತ್ತದೆ.
ನೀವು ಕ್ಷೌರಿಕನ ಬಳಿಗೆ ಹೋಗುವಿರಿ ಮತ್ತು ನಿಮ್ಮ ಕತ್ತನ್ನು ಈ ರೀತಿ ಇಡುವಿರಿ. ಅವನು ಕ್ಷೌರದ ಕತ್ತಿ ಹೊಂದಿರುತ್ತಾನೆ. “ಇಲ್ಲ, ಅವನು ಒಳ್ಳೆಯ ಮನುಷ್ಯ. ಅವನು ನನ್ನ ಗಂಟಲನ್ನು ಕೊಯ್ಯುವುದಿಲ್ಲ.” ನಿಮಗೆ ಶ್ರದ್ಧೆ ಇಲ್ಲದಿದ್ದರೆ, ನೀವು ಹಾಗೆ ಮಾಡುವುದು ಹೇಗೆ ಸಾಧ್ಯ? ಶ್ರದ್ಧೆಯೇ ಆರಂಭ. “ನಿನ್ನಲ್ಲಿ ನನಗೆ ನಂಬಿಕೆ ಇಲ್ಲ” ಎಂದು ನೀವು ಹೇಳಿದರೆ, ಆಗ ನೀವು ಸ್ವಚ್ಛವಾಗುವುದು ಸಾಧ್ಯವಿಲ್ಲ.
ಶಿಷ್ಯ : ಕೆಲವು ಸಂದರ್ಭದಲ್ಲಿ ಕ್ಷೌರಿಕನು ನಮ್ಮ ಗಂಟಲು ಕೊಯ್ಯುವಂತೆ ಕಾಣುತ್ತಾನೆ.
ಶ್ರೀಲ ಪ್ರಭುಪಾದ : ಅವನು ಹಾಗೆ ಮಾಡಬಹುದು. ಆದರೆ ನಿಮಗೆ ನಂಬಿಕೆ ಇರಬೇಕು. ಇಲ್ಲವಾದರೆ ಕ್ಷೌರವೇ ಇಲ್ಲ. ನೀವು ಯಾವುದೋ ಅಪರಿಚಿತ ಸ್ಥಳಕ್ಕೆ ಹೋಗುತ್ತಿರುವಿರೆಂದು ಭಾವಿಸಿಕೊಳ್ಳಿ. ನಾವು 2,000 ಡಾಲರ್ ನೀಡಿ ಟಿಕೆಟ್ ಖರೀದಿಸುತ್ತೇವೆ. ಆದರೆ ನೀವು ಅಲ್ಲಿಗೆ ಹೋಗುವ ಖಚಿತವೆಲ್ಲಿದೆ? ನೀವು ಮೊದಲು ಹಣ ನೀಡುವಿರಿ, ಅದರೆ ನೀವು ಅಲ್ಲಿಗೆ ಹೋಗುವುದು ಖಚಿತವಿಲ್ಲ. ಶ್ರದ್ಧೆ ಅಥವಾ ನಂಬಿಕೆ ಇಲ್ಲದೆ ನೀವು ಟಿಕೆಟ್ ಹೇಗೆ ಪಡೆದಿರಿ ಮತ್ತು ವಿಮಾನ ಏರಿದಿರಿ? ಶ್ರದ್ಧೆ ಇಲ್ಲದೆ ನೀವು ಒಂದಂಗುಲವೂ ಮುಂದಡಿ ಇಡಲಾರಿರಿ. ಅದು ಇದ್ದೇ ಇರಬೇಕು.
ನೀವು ಹೇಳಬಹುದು, “ಈ ಟಿಕೆಟ್ ಅನ್ನು ಪ್ಯಾನ್ ಅಮೆರಿಕನ್ ನೀಡಿದೆ. ಅದು ಒಳ್ಳೆಯ ಸಂಸ್ಥೆ. ಆದುದರಿಂದ ಅನೇಕ ಜನರು ಹೋಗುವರು. ನಾನೂ ಹೋಗುವೆ.” ಅಷ್ಟೇ. ಅದು ನಂಬಿಕೆ. ನೀವು ಅಲ್ಲಿಗೆ ಎಂದೂ ಹೋಗಿಲ್ಲ, ಅಥವಾ ಅಲ್ಲಿಗೆ ಹೋಗುವುದು ಸಾಧ್ಯವೇ ಎಂಬುವುದೂ ನಿಮಗೆ ಗೊತ್ತಿಲ್ಲ. ನೀವು ಟಿಕೆಟ್ ಖರೀದಿಸಲೇ ಬೇಕು. “ಮೊದಲು ನಾನು ಅಲ್ಲಿಗೆ ಹೋಗುವೆ. ಅನಂತರ ನಾನು ಪಾವತಿಸುವೆ” ಎಂದು ನೀವು ಹೇಳಿದರೆ, ಅವರು, “ಹೊರಗೆ ನಡೆಯಿರಿ! ಮೊದಲು ಹಣ ಪಾವತಿಸಿ. ಅನಂತರ ನೀವು ಬರಬಹುದು” ಎನ್ನುತ್ತಾರೆ.
ಶಿಷ್ಯ : ಶ್ರೀಲ ಪ್ರಭುಪಾದರೆ, ನಾನು ಮೊದಲು ಈ ಆಂದೋಲನಕ್ಕೆ ಬರುತ್ತಿದ್ದಾಗ, ಭಗವದ್ಗೀತೆಯನ್ನು ತೆರೆದು ಹೇಳುತ್ತಿದ್ದೆ, “ನನಗೆ ಇದು ಅರ್ಥವಾಗುತ್ತಿಲ್ಲ.” ನಾನು ನೆಲ ಸ್ವಚ್ಛಗೊಳಿಸಲು, ಪಾತ್ರೆ ತೊಳೆಯಲು, ತರಕಾರಿ ಕತ್ತರಿಸಲು ಆರಂಭಿಸಿದೆ.
ಶ್ರೀಲ ಪ್ರಭುಪಾದ : ಹೌದು, ತುಂಬ ಸಂತೋಷ. ಸೇವೋನ್ಮುಖೇ ಹಿ ಜಿಹ್ವಾದೌ. ಸೇವೆಯಿಂದ ಮಾತ್ರ ನೀವು ಭಗವಂತನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ. ಬೇರೆ ಮಾರ್ಗವು ಇಲ್ಲ ಮತ್ತು ಶ್ರದ್ಧೆಯು ನಾಲಿಗೆಯಿಂದ ಆರಂಭವಾಗುತ್ತದೆ.
ಶ್ರದ್ಧೆಯು ಧರ್ಮದಲ್ಲಿ ನಂಬಿಕೆ ಉಳ್ಳವರಿಗೆ ಮಾತ್ರ ಎಂದು ಯಾರಾದರೂ ಹೇಳುತ್ತಿದ್ದರೆ ನೀವು ಹೆದರಬೇಕಾಗಿಲ್ಲ. ಈ ಲೋಕದಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯ ಮೇಲೆಯೇ ಬದುಕಿರುವುದು. ಒಬ್ಬರ ಶ್ರದ್ಧೆಯು ಎಲ್ಲಿ ನೆಲೆ ಕಂಡಿದೆ ಎಂಬುದಷ್ಟೇ ಮುಖ್ಯ.
ಭಕ್ತರಾಗಲು ಅಪೇಕ್ಷಿಸುವವರ ಕಷ್ಟವೆಂದರೆ, ಆಧ್ಯಾತ್ಮಿಕ ಬದುಕಿನ ಅಷ್ಟೊಂದು ಗಾಢತೆಯು ನಮಗಿರಬಹುದಾದ ಯಾವುದೇ ಲೌಕಿಕ ಅಥವಾ ಆಧ್ಯಾತ್ಮಿಕ ಅನುಭವದ ಆಚೆಗಿರುವುದಾಗಿದೆ. ಸತ್ಯಗಳನ್ನು ಶ್ರದ್ಧೆಯ ಮೇಲೆ ಸ್ವೀಕರಿಸುವುದಲ್ಲದೆ ನಾವು ಬೇರೇನು ಮಾಡುವುದು ಸಾಧ್ಯ? ಆದಾಗ್ಯೂ ನಮ್ಮ ಶ್ರದ್ಧೆಯ ಕೊರತೆಯು ನಮ್ಮ ಅನುಭವದ ಕೊರತೆಯಿಂದ ಹುಟ್ಟುತ್ತದೆ. ಉದಾಹರಣೆಗೆ, ನಮಗೆ ಧರ್ಮ ಗ್ರಂಥಗಳಲ್ಲಿ ನಂಬಿಕೆ ಇದೆ ಎಂದು ಹೇಳಲು ನಾವು ಇಚ್ಛಿಸಿದರೂ ಅದೇ ವೇಳೆ ನಾವು ಎಂದಿಗೂ ಹೊಂದಲು ಸಾಧ್ಯವಾಗದ ಆದರ್ಶಗಳನ್ನು ಆಧ್ಯಾತ್ಮಿಕ ಹೇಳಿಕೆಗಳು ವಿವರಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಇದು ನಮ್ಮಲ್ಲಿನ ಮತ್ತು ಅಂತಹ ಸ್ಥಿತಿಯನ್ನು ಹೊಂದುವುದು ಸಾಧ್ಯ ಎನ್ನುವ ಧರ್ಮ ಗ್ರಂಥಗಳ ಹೇಳಿಕೆಗಳಲ್ಲಿನ ನಮ್ಮ ಶ್ರದ್ಧೆಯ (ನಂಬಿಕೆಯ) ಕೊರತೆಯನ್ನು ಸೂಚಿಸುತ್ತದೆ.
ನಮ್ಮನ್ನು ಉನ್ನತಕ್ಕೇರಿಸುವ ಸಂಸ್ಥೆಯ ಶಕ್ತಿಯ ಬಗೆಗೂ ನಮಗೆ ಶ್ರದ್ಧೆಯ ಕೊರತೆ ಇರಬಹುದು. ಅಥವಾ ಶ್ರದ್ಧೆಯ ಇನ್ನಾವುದೋ ಕೊರತೆ. ಸಾಮಾನ್ಯವಾಗಿ ನಮ್ಮ ಶ್ರದ್ಧೆಯನ್ನು ಅಳೆಯಬಹುದು. ಅದು ಅಸೀಮಿತವಲ್ಲ. ಯಾವುದಾದರೂ ರೀತಿಯಲ್ಲಿ ನಮ್ಮ ಶ್ರದ್ಧೆಯನ್ನು ಪರೀಕ್ಷಿಸಿದಾಗಲೆಲ್ಲ ಆ ಅಳತೆಯು ಸ್ಪಷ್ಟವಾಗುತ್ತದೆ. ಆಗ ನಾವು ವೈಯಕ್ತಿಕ ವಿವರದ ಪಟ್ಟಿ ಮಾಡಬಹುದು.
ಶ್ರದ್ಧೆ ಉಳ್ಳವರು ಪರ್ವತವೂ ಚಲಿಸುವಂತೆ ಮಾಡಬಲ್ಲರು ಎಂದು ಸುವಾರ್ತೆಯಲ್ಲಿ ಜೀಸಸ್ ತಿಳಿಸಿದ್ದಾನೆ. ತಮ್ಮ ಪ್ರಾರ್ಥನೆಗೆ ಭಗವಂತನು ಪ್ರತಿಕ್ರಿಯಿಸಿದ ಎಂದು ಕೆಲವರು ಅದನ್ನು ತಮ್ಮ ಬದುಕಿನಲ್ಲಿ ಆದ ಪವಾಡಗಳನ್ನು ತೋರಿಸಿ ಹೇಳುತ್ತಾ ತಮ್ಮ ಶ್ರದ್ಧೆಯನ್ನು ಸಾಬೀತುಪಡಿಸಲು ಯತ್ನಿಸುತ್ತಾರೆ. ಆದರೆ ಅದು ಭಗವಂತನನ್ನು ಮುಟ್ಟುವ ಫಲಾಪೇಕ್ಷೆ ಉಳ್ಳ ದಾರಿ. ಈ ಲೋಕದಲ್ಲಿ ಅಳತೆ ಮಾಡಬಹುದಾದ ಯಾವುದರಿಂದಲೋ ತನ್ನ ಶಕ್ತಿಯನ್ನು ಸಾಬೀತು ಪಡಿಸಲು ಭಗವಂತನನ್ನು ಕೇಳಿದಂತೆ ಅದು. ಬದಲಿಗೆ, ಕೃಷ್ಣನ ಅಸ್ತಿತ್ವ ಮತ್ತು ಅವನ ಪ್ರೀತಿಯಲ್ಲಿ ಸರಳ ಶ್ರದ್ಧೆಯನ್ನು ಭಕ್ತರು ಆಶಿಸುತ್ತಾರೆ. ಕೃಷ್ಣನು ನಮ್ಮ ಸೇವೆಯನ್ನು ಸ್ವೀಕರಿಸಿತ್ತಾನೆಂಬ ಸರಳ ಶ್ರದ್ಧೆ ನಮಗೆ ಬೇಕು. ನಮ್ಮ ಲೌಕಿಕ ಸಮೃದ್ಧಿಯನ್ನು ಲೆಕ್ಕಿಸದೆ ಈ ಶ್ರದ್ಧಾವಂತ ಆಯಾಮವು ನಮ್ಮ ವಾಸ್ತವಿಕತೆ ಆಗಬೇಕು. ಕೃಷ್ಣನ ಅಪೇಕ್ಷೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದೇವೆ ಎಂಬ ವಿಶ್ವಾಸ ನಮಗೆ ಸದಾ ಇರುತ್ತದೆ.
ಸಂದೇಹಗಳೊಂದಿಗೆ ವ್ಯವಹರಿಸುವುದು
ಅಂತಹ ಶ್ರದ್ಧೆಯನ್ನು ಮುಟ್ಟುವುದು ಹೇಗೆ? ನಮಗೆ ಇನ್ನೂ ಶ್ರದ್ಧೆ ಇಲ್ಲ ಎಂಬುದರ ಬಗೆಗೆ ಪ್ರಾಮಾಣಿಕವಾಗಿರುವುದು ದೌರ್ಬಲ್ಯ ಎಂದು ನಾವು ಬಹುಶಃ ಭಾವಿಸುತ್ತೇವೆ. ಆದರೆ ತಮ್ಮ ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಪ್ರಾಮಾಣಿಕತೆಯೊಂದೇ ಮಾರ್ಗ. ನಾವು ಯಾರು ಮತ್ತು ನಾವು ಏನನ್ನು ಸ್ವೀಕರಿಸಬಹುದು ಎಂಬುದರಿಂದ ನಾವು ಆರಂಭಿಸಬೇಕು. ಅನಂತರ ಅಲ್ಲಿಂದ ಕೆಲಸ ನಿರ್ವಹಿಸಬೇಕು. ನಾವು ಪ್ರಾಮಾಣಿಕರಾಗಿರುವುದನ್ನು ನಿರಾಕರಿಸಿದರೆ, ನಾವು ತೋರಿಕೆ, ಆಲಸ್ಯ ಮತ್ತು ಚಿಂತನೆರಹಿತವಾದ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತೇವೆ. ಆಧ್ಯಾತ್ಮಿಕ ಜೀವನದಲ್ಲಿ ನಮ್ಮನ್ನು ಮುಂದಕ್ಕೆ ಒಯ್ಯುವ ಭಾವದ ತೀವ್ರತೆಯನ್ನು ನಾವು ಅರಿಯುವುದಿಲ್ಲ, ಆದರೆ ಸುಮ್ಮನೆ ಚಲನೆ ಮೂಲಕ ಸಾಗುತ್ತಿರುತ್ತೇವೆ.
ನಮಗೇನಾದರೂ ಪ್ರಜ್ಞೆ ಅಥವಾ ಸ್ವಯಂ ಅರಿವೇನಾದರೂ ಇದ್ದರೆ ನಾವು, “ನಾನು ಈ ಜ್ಞಾನವನ್ನು ಹೇಗೆ ಪಡೆಯುತ್ತಿರುವೆ? ಇದು ನನ್ನನ್ನು ನಿದ್ರೆಗೆ ಒಳಪಡಿಸುತ್ತಿದೆಯೇ? ಇದು ನನಗೆ ಸ್ಫೂರ್ತಿ ನೀಡುತ್ತಿದೆಯೇ? ನಾನು ನಿಜವಾಗಿಯೂ ಇದನ್ನು ನಂಬುವೆನೇ?” ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಕೃಷ್ಣ ಪ್ರಜ್ಞೆಯ ಆಚರಣೆಗೆ ನಮ್ಮನ್ನು ತಂದ ಆರಂಭಿಕ ಶ್ರದ್ಧೆಯು ನಮ್ಮ ಬದುಕಿನ ನೆನಪಾಗಿಬಿಡಬಾರದು.
ಶ್ರದ್ಧೆ ಇಲ್ಲದೆ ಇರುವುದು ದೌರ್ಬಲ್ಯದ ಸಂಕೇತ. ಶ್ರೀಲ ಪ್ರಭುಪಾದರು ಒಮ್ಮೆ ಕೆಲವು ಪಾದ್ರಿಗಳ ಜೊತೆ ಸಭೆಗೆ ಹೋದರು.
ಪಾದ್ರಿಯೊಬ್ಬರು ಕೇಳಿದರು, “ನಿಮಗೆ ಸಂದೇಹಗಳೇ ಬರುವುದಿಲ್ಲವೇ?”
ಶ್ರೀಲ ಪ್ರಭುಪಾದರು ಉತ್ತರಿಸಿದರು, “ಸಂದೇಹಗಳೇ? ಖಂಡಿತ ಇಲ್ಲ. ನನಗೆ ಸಂದೇಹಗಳಿದ್ದರೆ ನಾನು ಬೋಧಿಸುವುದು ಹೇಗೆ ಸಾಧ್ಯ?”
ಅವರ ಉತ್ತರದಿಂದ ಪಾದ್ರಿಗಳಿಗೆ ಗೊಂದಲವಾಯಿತು. ಅವರಿಗೆ ಪ್ರಭುಪಾದರು ಸಂದೇಹಗಳಿವೆ ಎಂದು ಒಪ್ಪಿಕೊಳ್ಳಬೇಕಾಗಿತ್ತು. ಏಕೆಂದರೆ ಸ್ವತಃ ಅವರಿಗೆ (ಪಾದ್ರಿಗಳಿಗೆ) ಸಂದೇಹಗಳಿದ್ದವು. ಸ್ಥಿರವಾದ ವ್ಯಕ್ತಿಗೆ ಸಂದೇಹಗಳಿರುವುದಿಲ್ಲ. ನಾವು ಅಷ್ಟು ಸ್ಥಿರವಾದವರಲ್ಲ ಎಂಬುವುದನ್ನು ನಾವು ಒಪ್ಪಿಕೊಳ್ಳಬೇಕು.
ಬೇರೆ ಬೇರೆಯವರಿಗೆ ಬೇರೆ ಬೇರೆ ಅಂಶಗಳು ಸಂದೇಹದ ವಿಷಯಗಳಾಗಿರುತ್ತವೆ. ನಾವು ಚಂದ್ರನಲ್ಲಿಗೆ ಹೋಗಲಿಲ್ಲ ಎಂದು ಶ್ರೀಲ ಪ್ರಭುಪಾದರು ಹೇಳಿದಾಗ ಕೆಲವರು ಹರೇ ಕೃಷ್ಣ ಆಂದೋಲನವನ್ನು ಬಿಟ್ಟು ಹೋದರು. ಇತರರು ಬಿಟ್ಟುಹೋಗದಿರಬಹುದು, ಆದರೆ ಅವರ ಹೇಳಿಕೆಗಳನ್ನು ಸ್ವೀಕರಿಸಲು ಸಾಧ್ಯವಾಗದೆ ಉಳಿದರು. ಶ್ರದ್ಧೆಯನ್ನು ಸಮಗ್ರತೆಯ ಜೊತೆ ಸಮತೋಲನಗೊಳಿಸಬೇಕು. ಕೆಲವು ಸಂದರ್ಭಗಳಲ್ಲಿ ಯಾರಿಗಾದರೂ ನಮ್ಮ ಸಂದೇಹಗಳನ್ನು ಹೊರಗೆಡಹಿದರೆ, ಅದು ನಮಗೆ ಸಮತೋಲನ ಕಂಡುಕೊಳ್ಳಲು ನೆರವಾಗಬಹುದು.
ನಮ್ಮ ಕೃಷ್ಣ ಪ್ರಜ್ಞೆಗೆ ಸಂದೇಹಗಳಿಂದ ಪ್ರಯೋಜನವಿಲ್ಲ. ಹಯಗ್ರೀವ ದಾಸ ಅವರು ಒಮ್ಮೆ ಸಂದೇಹಗಳನ್ನು ಕುರಿತು ಬರೆದರು. ಅದಕ್ಕೆ ಶ್ರೀಲ ಪ್ರಭುಪಾದರು “ಸಂದೇಹ, ನಿನ್ನ ಹೆಸರೇ ಬಂಧನ” ಎಂದು ಶೀರ್ಷಿಕೆ ನೀಡಿದರು.
ಜ್ಞಾನ ಬೆಳೆಸಿಕೊಳ್ಳಿ
ಸಂದೇಹವನ್ನು ಎದುರಿಸಲು ಮತ್ತು ಶ್ರದ್ಧೆಯನ್ನು ಬಲಪಡಿಸಿಕೊಳ್ಳಲು ಇರುವ ದೃಢವಾದ ಮಾರ್ಗವೆಂದರೆ ಜ್ಞಾನವನ್ನು ಬೆಳೆಸಿಕೊಳ್ಳುವುದು. ಜ್ಞಾನದೊಂದಿಗೆ ಸಂಯೋಜಿಸಿದ ಶ್ರದ್ಧೆಯು ನಮ್ಮನ್ನು ಅನಿಶ್ಚಿತ ಆಸ್ತಿಕನಿಂದ ತನ್ನ ನಂಬಿಕೆಗಳಲ್ಲಿ ದೃಢವಾಗಿರುವಂತೆ ಮೇಲಕ್ಕೆತ್ತಬಲ್ಲದು. ನಮ್ಮ ಸಂದೇಹಗಳನ್ನು ವ್ಯಕ್ತಪಡಿಸುತ್ತ, ಧರ್ಮ ಗ್ರಂಥದ ಬಗೆಗೆ ಮತ್ತು ಸಂತರಲ್ಲಿ ಬಿಚ್ಚು ಮನಸ್ಸಿನಿಂದ ಇದ್ದರೆ ನಾವು ತೃಪ್ತಿಕರ ಪ್ರತ್ಯುತ್ತರ ಕಂಡುಕೊಳ್ಳಬಹುದು. ನಮ್ಮನ್ನು ಹೆದರಿಸಲು ನಮ್ಮ ಸಂದೇಹಗಳಿಗೆ ಅವಕಾಶ ನೀಡಬಾರದು.
ಮತ್ತೂ ಹೇಳಬೇಕೆಂದರೆ, ಧರ್ಮ ಗ್ರಂಥಗಳಲ್ಲಿನ ನಿರ್ದಿಷ್ಟ ಅಂಶಗಳನ್ನು ನಾವು ಸ್ವೀಕರಿಸುವ ಅಥವಾ ನಿರಾಕರಿಸುವುದರಿಂದ ಅವು ಊರ್ಜಿತಗೊಳ್ಳುವುದೂ ಇಲ್ಲ, ಅನೂರ್ಜಿತಗೊಳ್ಳವುದೂ ಇಲ್ಲ. ಅವು ಅವುಗಳದೇ ರೀತಿಯಲ್ಲಿ ಶ್ರೇಷ್ಠವಾಗಿವೆ. ಶ್ರೀಲ ಪ್ರಭುಪಾದರು ಹೇಳುತ್ತಾರೆ, “ನೀವು ನಂಬಲಿ ಬಿಡಲಿ, ಅದು ಬೇರೆಯದೇ ವಿಷಯ.” ಸತ್ಯದ ಮುಂದೆ ನಮ್ಮ ಸಣ್ಣತನವನ್ನು ಅಂಗೀಕರಿಸುವುದು ಶ್ರದ್ಧೆಯ ಒಂದು ಭಾಗ.
ಶ್ರೀಲ ಪ್ರಭುಪಾದರು ಹೇಳಿರುವಂತೆ, ಶ್ರದ್ಧೆಯು ನಾಲಗೆಯಿಂದ, ಜಪ ಮತ್ತು ಪ್ರಸಾದ ಸ್ವೀಕಾರದಿಂದ, ಆರಂಭಗೊಳ್ಳುತ್ತದೆ. ಅನೇಕ ಜನರು ಯೋಚಿಸುವಂತೆ ಶ್ರದ್ಧೆಯು ಮನಸ್ಸಿನಿಂದ ಅಥವಾ ಕಣ್ಣುಗಳಿಂದ ಆರಂಭವಾಗುವುದಿಲ್ಲ. ಕೃಷ್ಣನ ಸೇವೆಯಲ್ಲಿ ನಾಲಗೆಯನ್ನು ತೊಡಗಿಸಿಕೊಳ್ಳುವುದರಿಂದ ನಾವು ಅತ್ಯುನ್ನತ ಸತ್ಯವನ್ನು ಅರ್ಥಮಾಡಿಕೊಳ್ಳಬಹುದು. ಏಕೆಂದರೆ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದೆಂದರೆ ದೈಹಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದಲ್ಲ. ಅದನ್ನು ಹೊಂದಲು ನಾವು ಪ್ರಯತ್ನಿಸುತ್ತೇವೆ, ಆದರೆ ಅಂತಿಮವಾಗಿ ಶ್ರದ್ಧೆಯು ಭಗವಂತನ ಕೊಡುಗೆ. ನಾವು ನಮ್ಮ ಪ್ರಾಮಾಣಿಕತೆಯನ್ನು ತೋರಿದರೆ ನಮಗೆ ಅದು ಇನ್ನಷ್ಟು ಸಿಗುತ್ತದೆ. ಅದರೊಂದಿಗೆ ಆಧ್ಯಾತ್ಮಿಕ ಜ್ಞಾನ ಕೂಡ ಲಭಿಸುತ್ತದೆ.
ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ವಿದ್ವತ್ತಿಗಿಂತ ಹೆಚ್ಚಿನದರ ಅಗತ್ಯವಿದೆ ಎಂದು ನಾನು ಅರಿತುಕೊಂಡೆ ಎಂದು ನಾನು ಒಮ್ಮೆ ಶ್ರೀಲ ಪ್ರಭುಪಾದರಿಗೆ ಬರೆದೆ. ನನಗೆ ಜ್ಞಾನವು ಆಧ್ಯಾತ್ಮಿಕ ವರ್ಗಾವಣೆಯಿಂದಲೇ ಹೆಚ್ಚು ಬರುತ್ತದೆ. ಕೃಷ್ಣನು ಅನುಗ್ರಹಿಸುವವರೆಗೂ ನನಗೆ ಅದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.
ಶ್ರೀಲ ಪ್ರಭುಪಾದರು ಉತ್ತರಿಸಿದರು, “ನೀವು ಪ್ರಾಮಾಣಿಕ ಭಕ್ತ. ಆದುದರಿಂದ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವ ಬುದ್ಧಿಯನ್ನು ಕೃಷ್ಣನು ನಿಮಗೆ ನೀಡುವನು.”
ಪ್ರಾಮಾಣಿಕತೆಯಿಂದ ಶ್ರದ್ಧೆ ಬರುತ್ತದೆ.
ಆದರೆ ಅದು ಪಾರಲೌಕಿಕ ಮಾತ್ರವಲ್ಲ. ಮನೋ ವಿಜ್ಞಾನದಂತೆಯೂ ಕೂಡ, ಕೃಷ್ಣ ಪ್ರಜ್ಞೆಯಲ್ಲಿ ನಾವು ಕೆಲಸ ಮಾಡಿ ನಮ್ಮ ಆಚರಣೆಯಿಂದ ಒಳ್ಳೆಯ ಫಲಿತಾಂಶಗಳು ಬಂದರೆ, ಶ್ರದ್ಧೆ, ನಂಬಿಕೆ ಮತ್ತು ನಿಷ್ಠೆ ಅರಳುವುದನ್ನು ನಾವು ಅನುಭವಿಸಬಹುದು.

ಕೃಷ್ಣ ಪ್ರಜ್ಞೆಯ ಅನುಭವದಲ್ಲಿ ಶ್ರದ್ಧೆಯ ಪರೀಕ್ಷೆಯೂ ಸೇರಿದೆ. ನೋವು, ಅಪಾಯ, ತಡೆ, ದುಃಖದಂತಹ ಪ್ರತಿರೋಧ ಪರಿಸ್ಥಿತಿಗಳಲ್ಲಿ ಅಥವಾ ಮಾಯೆಯ ಸೆಳೆತಕ್ಕೆ ಒಳಗಾದಾಗ ಸಾಮಾನ್ಯವಾಗಿ ಶ್ರದ್ಧೆಯು ಪರೀಕ್ಷೆಗೆ ಒಳಪಡುತ್ತದೆ. ಅಂತಹ ಸಂದರ್ಭಗಳಲ್ಲಿ ಭಕ್ತನು “ಕೃಷ್ಣ, ನೀನು ನನಗೆ ಏಕೆ ಹೀಗೆ ಮಾಡಿದೆ?” ಎಂದು ಯೋಚಿಸಬಹುದು. ಕೃಷ್ಣನು ನಮ್ಮ ಲಾಭಕ್ಕಾಗಿಯೇ ಹಾಗೆ ಮಾಡುತ್ತಿದ್ದಾನೆ ಎಂಬುವುದನ್ನು ಒಪ್ಪಿಕೊಳ್ಳುವ ಮನಸ್ಥಿತಿಹೊಂದಿದರೆ, ನಾವು ಪರೀಕ್ಷೆಯಲ್ಲಿ ಉತ್ತೀರ್ಣರಾದಂತೆಯೇ.
ಉತ್ಸಾಹ ಮತ್ತು ಶ್ರದ್ಧೆ
ಉತ್ಸಾಹದ ಪರಿಸರದಲ್ಲಿ ಶ್ರದ್ಧೆಯು ವರ್ಧಿಸುತ್ತದೆ. ಉತ್ಸಾಹವಿಲ್ಲದಿದ್ದರೆ ಮಂಕು ಕವಿಯುತ್ತದೆ. ನಮ್ಮ ಭಕ್ತಿ ಭಾವ ಕೆಳ ಮಟ್ಟದಲ್ಲಿರುತ್ತದೆ. ಶ್ರದ್ಧೆಯು ಭಗವಂತನಲ್ಲಿ ನಂಬಿಕೆ ಎಂಬುವುದಷ್ಟೇ ಅಲ್ಲ, ಅದು ಅವನ ಬಗೆಗೆ ಕೇಳುವ ಕ್ರಿಯಾಶೀಲ ಆಸಕ್ತಿ. ಒಬ್ಬ ಪರಿಶುದ್ಧ ಭಕ್ತನಿಗೆ ಅಸೀಮಿತವಾಗಿ ಕೃಷ್ಣನ ಬಗೆಗೆ ಕೇಳಬೇಕೆನಿಸುತ್ತದೆ ಮತ್ತು ಸೇವೆ ಸಲ್ಲಿಸುವ ಇಚ್ಛೆ ಇರುತ್ತದೆ. ನಮ್ಮ ಶ್ರದ್ಧೆಯು ಎಷ್ಟು ಹುಮ್ಮಸ್ಸಿನಿಂದ ಇರುತ್ತದೆಯೋ ಅದು ಅಷ್ಟೇ ಶಕ್ತಿಯುತವಾಗಿರುತ್ತದೆ. ನಮ್ಮ ಬದುಕಿಗೆ ಸಂಬಂಧವಿಲ್ಲದಂತೆ ಶ್ರದ್ಧೆಯು ನಮ್ಮ ವೈಯಕ್ತಿಕ ಅಭಿಪ್ರಾಯವೋ ಎಂಬಂತೆ ನಾವು ನಾಮ ಮಾತ್ರ ನಂಬಿಕೆಯಲ್ಲಿ ಆಸಕ್ತಿ ಹೊಂದಿಲ್ಲ. ನಮಗೆ ತೀವ್ರವಾದ ನಂಬಿಕೆ ಬೇಕು.
ಆದುದರಿಂದ ನಮ್ಮ ಉತ್ಸಾಹವು ಪ್ರೀತಿ ಆಧಾರಿತವಾಗಿರಬೇಕು, ಅದು ನಾವು ನಮ್ಮ ಸೇವೆಯಿಂದ ಪಡೆಯುವ ಫಲ ಆಧಾರಿತವಾಗಿರಬಾರದು. ನಾವು ಸೇವೆ ಸಲ್ಲಿಸಿ ಯಾವುದೋ ರೀತಿಯಲ್ಲಿ ಮೇಲ್ನೋಟಕ್ಕೆ ನಿಷ್ಫಲವಾದರೂ ನಮ್ಮ ಉತ್ಸಾಹವು ತಣ್ಣಗಾಗಬಾರದು. ಹುಮ್ಮಸ್ಸನ್ನು ರೂಪಿಸಿಕೊಳ್ಳಲು ನಾವು ಉತ್ಸಾಹಪೂರಿತ ಭಕ್ತರ ಸಹವಾಸ ಮಾಡಬೇಕು. ನಮ್ಮ ಕೃಷ್ಣ ಪ್ರಜ್ಞೆಯನ್ನು ಸಚೇತನಗೊಳಿಸುವ ಪರಿಸ್ಥಿತಿಗಳಲ್ಲಿ ನಾವು ನಮ್ಮನ್ನು ಜಾಗರೂಕತೆಯಿಂದ ನೆಲೆಗೊಳಿಸಬೇಕು. ಶ್ರದ್ಧೆಯು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿದಾಗ ಇದ್ದ ಮತ್ತು ಅನಂತರದಲ್ಲಿ ಅದು ಸಂಬಂಧಿಸಿದ್ದೇ ಅಲ್ಲ ಎಂಬುವಂತಹುದಲ್ಲ. ನಾವು ಅದರ ಮುಖ್ಯ ಅಂಶಕ್ಕೇ ಹೋಗಬೇಕು.
ಪುನಃ ನಾವು ಉದಾಹರಣೆಯಾಗಿ ಶ್ರೀಲ ಪ್ರಭುಪಾದರತ್ತಲೇ ನೋಡಬಹುದು : ಅವರು ದೊಡ್ಡ ಹೋರಾಟಗಾರರು. ಕೃಷ್ಣ ಪ್ರಜ್ಞೆಯನ್ನು ಹರಡಲು ಹೋದಾಗ ಅವರು ಬರೀ ಪ್ರತಿರೋಧವನ್ನೇ ಎದುರಿಸಿದಾಗ, ಅವರು ಇನ್ನೂ ಹೆಚ್ಚು ದೃಢ ಮನಸ್ಕರಾದರು. ಯಶಸ್ಸು ಅಥವಾ ವೈಫಲ್ಯ ಅವರ ಶ್ರದ್ಧೆಯನ್ನು ಎಂದೂ ಕುಗ್ಗಿಸಲಿಲ್ಲ. ಅವರು ಕೃಷ್ಣನಿಂದ ಕೊಟ್ಟು ಪಡೆದದ್ದರಲ್ಲಿಯೇ ಸದಾ ಬದುಕಿದ್ದರು. ಕೊಟ್ಟು ಪಡೆದದ್ದು ಏನೇ ಇರಬಹುದು. ನಾವೂ ಹಾಗೆ ಮಾಡುವುದನ್ನು ಕಲಿಯಬಹುದು.






Leave a Reply