ಮಳೆಗಾಲದಲ್ಲಿ ಬಿಸಿ ಬಿಸಿಯಾದ ಬೋಂಡ, ವಡೆ, ಬಜ್ಜಿ ಯಾರಿಗೆ ತಾನೆ ಬೇಡ? ಆದರೆ ಬೇಗನೆ ಮತ್ತು ರುಚಿಯಾಗಿ ಮಾಡುವುದು ಹೇಗೆನ್ನುವಿರಾ? ಮನೆಯಲ್ಲಿಯೇ ಇರುವ ತರಕಾರಿ, ಧಾನ್ಯಗಳು ಮತ್ತು ಸೊಪ್ಪುಗಳನ್ನು ಬಳಸಿ ತಯಾರಿಸುವ ಬಗೆ ಬಗೆ ತಿಂಡಿಗಳು ಇಲ್ಲಿವೆ. ಇವೆಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಮೂಂಗ್ ದಾಲ್ ಮಿಕ್ಸೆಡ್ ವಡೆ
ಬೇಕಾಗುವ ಪದಾರ್ಥಗಳು:
ಮೂಂಗ್ ದಾಲ್ (ಹೆಸರು ಬೇಳೆ) – 1 ಕಪ್
ಕಡಲೆಬೇಳೆ – 1 ಕಪ್
ತೆಂಗಿನ ತುರಿ – 1/2 ಕಪ್
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಪುದೀನಾ – 1/4 ಕಟ್ಟು
ಹಸಿಮೆಣಸಿನಕಾಯಿ – 5
ಶುಂಠಿ – 1/2 ಇಂಚು
ಚೆಕ್ಕೆಪುಡಿ – 1/2 ಚಮಚ
ಕರಿಬೇವು – 2 ಎಸಳು
ಸೋಡ – 1 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಮೊದಲು ಎರಡು ತರದ ಬೇಳೆಗಳನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಅನಂತರ ಬೇಳೆಗಳನ್ನು ಚೆನ್ನಾಗಿ ತೊಳೆದು ನೀರು ಬಸಿದು ಮಿಕ್ಸಿಯಲ್ಲಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದೀನಾ, ಶುಂಠಿ, ಹಸಿಮೆಣಸಿನಕಾಯಿ, ಚೆಕ್ಕೆಪುಡಿ, ಕರಿಬೇವು, ತೆಂಗಿನತುರಿ, ಸೋಡ, ಉಪ್ಪು ಹಾಕಿ ಕಲೆಸಿ. ನಿಂಬೆಗಾತ್ರದ ಉಂಡೆಗಳನ್ನು ತೆಗೆದುಕೊಂಡು ಅಂಗೈಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ಬಿಸಿಬಿಸಿಯಾದ ಮೂಂಗ್ ದಾಲ್ ಮಿಕ್ಸೆಡ್ ವಡೆ ತಿನ್ನಲು ಸಿದ್ಧ.
ಗೋಡಂಬಿ ರವೆ ಪಕೋಡ
ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ – 1 ಕಪ್
ಗೋಡಂಬಿ ಚೂರುಗಳು – 1 ಕಪ್
ಮೈದಾಹಿಟ್ಟು – 2 ಚಮಚ
ಅಕ್ಕಿಹಿಟ್ಟು – 2 ಚಮಚ
ಹಸಿಮೆಣಸಿನಕಾಯಿ – 5
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಕರಿಬೇವು – 2 ಎಸಳು
ಶುಂಠಿ – 1/2 ಇಂಚು
ಡಾಲ್ಡಾ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಮೊದಲು ಗೋಡಂಬಿ, ಚಿರೋಟಿ ರವೆ, ಮೈದಾ, ಅಕ್ಕಿಹಿಟ್ಟು, ಡಾಲ್ಡಾ, ಉಪ್ಪು ಹಾಕಿ ಬೆರೆಸಿ. ಅನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಕಲೆಸಿ. ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ ಉಂಡೆಗಳಾಗಿ ಹಾಕಿ ಗರಿ ಗರಿಯಾಗುವವರೆಗೂ ಬೇಯಿಸಿ. ಮೃದುವಾಗಿರಬೇಕೆನ್ನುವವರು ಒಂದು ಚಿಟಿಕೆ ಸೋಡ ಹಾಕಿ ಕಲೆಸಿ ಮಾಡಬಹುದು. ಇದನ್ನು 2 ದಿನವಿಟ್ಟು ತಿನ್ನಬಹುದು.
ಗೋಳಿ ಬಜೆ
ಬೇಕಾಗುವ ಪದಾರ್ಥಗಳು:
ಮೈದಾ – 2 ಕಪ್
ಮೊಸರು – ಹಿಟ್ಟು ಕಲೆಸಲು ಬೇಕಾಗುವಷ್ಟು
ಸಕ್ಕರೆ – 2 ಚಮಚ
ಜೀರಿಗೆ – 1 ಚಮಚ
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಮೈದಾಗೆ ಉಪ್ಪು, ಜೀರಿಗೆ, ಸಕ್ಕರೆ, ಚಿಟಿಕೆ ಅಡಿಗೆ ಸೋಡಾ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ. ತುಂಬಾ ತೆಳ್ಳಗೆ ಕಲೆಸಬೇಡಿ. ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು.
ಎಣ್ಣೆ ಕಾದ ಅನಂತರ ಕಲೆಸಿದ ಮಿಶ್ರಣವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಒಂದೊಂದಾಗಿ ಗುಂಡಗೆ ಎಣ್ಣೆಯಲ್ಲಿ ಬೋಂಡಾ ತರಹ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಕೊಡಿ.
ಪನ್ನೀರ್ ಪಕೋಡ
ಬೇಕಾಗುವ ಪದಾರ್ಥಗಳು:
ಪನ್ನೀರ್ ತುರಿ – 1 ಕಪ್
ಬೇಯಿಸಿದ ಆಲೂಗಡ್ಡೆ – 2
ಬ್ರೆಡ್ ಸ್ಲೈಸ್ – 5
ಕಡ್ಲೆಹಿಟ್ಟು – 1 ಕಪ್
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 4
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1/4 ಕಟ್ಟು
ಕೆಂಪು ಮೆಣಸಿನಕಾಯಿ ಪುಡಿ – 1/2 ಚಮಚ
ಜೀರಿಗೆ ಪುಡಿ – 1/2 ಚಮಚ
ಗರಂ ಮಸಾಲ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಪ್ಯಾನ್‌ಗೆ ಒಂದು ಚಮಚ ಎಣ್ಣೆ ಹಾಕಿ ಪನ್ನೀರ್ ತುರಿ, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಗರಂ ಮಸಾಲ, ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಹುರಿದು ಬಟ್ಟಲಿಗೆ ಹಾಕಿಟ್ಟುಕೊಳ್ಳಿ. ಅದಕ್ಕೆ ಬೇಯಿಸಿದ ಆಲೂಗಡ್ಡೆ, ಪುಡಿಮಾಡಿದ ಬ್ರೆಡ್‌ಸ್ಲೈಸ್, ಕಡ್ಲೆಹಿಟ್ಟು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕಲೆಸಿ.
ಕೈಯನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ಈ ಮಿಶ್ರಣವನ್ನು ಬೇಕಾದ ಆಕಾರಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದರೆ ಪನ್ನೀರ್ ಪಕೋಡ ಸವಿಯಲು ಸಿದ್ಧ. ಇದನ್ನು ಸಾಸ್ ಜೊತೆ ತಿನ್ನಲು ರುಚಿ.
ಗೋಡಂಬಿ ಬೋಂಡ
ಬೇಕಾಗುವ ಪದಾರ್ಥಗಳು:
ಗೋಡಂಬಿ – 1 ಕಪ್
ಕಡಲೆಹಿಟ್ಟು – 1/2 ಕಪ್
ಬಿಳಿ ಎಳ್ಳು – 2 ಚಮಚ
ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ
ಇಂಗು – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಎರಡು ಟೇಬಲ್ ಚಮಚ ನೀರಿನಲ್ಲಿ ಇಂಗು ಮತ್ತು ಉಪ್ಪನ್ನು ಹಾಕಿ ಕಲಸಿ. ಇದರಲ್ಲಿ ಗೋಡಂಬಿ ಹಾಕಿಡಿ. ಸ್ವಲ್ಪ ಸಮಯದ ಅನಂತರ ಎಳ್ಳು ಸೇರಿಸಿ. ಆಗಾಗ ಕೈಯಾಡಿಸಿ. ಒಂದು ಗಂಟೆಯ ಅನಂತರ ಕಡಲೆಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಎಲ್ಲ ಗೋಡಂಬಿಗೂ ಹಿಟ್ಟು ಚೆನ್ನಾಗಿ ಮೆತ್ತಿರಬೇಕು. ಒಂದಕ್ಕೊಂದು ಅಂಟದಂತೆ ಬೇರೆ ಬೇರೆಯಾಗಿ ಇರಬೇಕು. ಇದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಇದು ಹತ್ತು ದಿನ ಇಟ್ಟರೂ ಕೆಡುವುದಿಲ್ಲ.
ಮೈಸೂರು ಬೋಂಡ
ಬೇಕಾಗುವ ಪದಾರ್ಥಗಳು:
ಉದ್ದಿನಬೇಳೆ – 2 ಕಪ್
ಹಸಿಮೆಣಸಿನಕಾಯಿ – 6
ಕಾಳು ಮೆಣಸು – 1/4 ಚಮಚ
ತೆಂಗಿನಕಾಯಿ ಸಣ್ಣಗೆ ಕತ್ತರಿಸಿದ್ದು – 1/4 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಉದ್ದಿನ ಬೇಳೆಯನ್ನು ನಾಲ್ಕು ಗಂಟೆ ಕಾಲ ನೀರಿನಲ್ಲಿ ನೆನೆಸಿ. ಹೆಚ್ಚು ನೀರು ಹಾಕದೆ ನುಣ್ಣಗೆ ಗಟ್ಟಿಯಾಗಿ ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ಕತ್ತರಿಸಿದ ಮೆಣಸಿನಕಾಯಿ, ತೆಂಗಿನ ತುರಿ, ಕಾಳು ಮೆಣಸು, ಹೆಚ್ಚಿದ ಕರಿಬೇವು, ಉಪ್ಪು ಹಾಕಿ ಕಲೆಸಿ. ನಿಂಬೆಗಾತ್ರದ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಕೊಡಿ.