ವಿಶ್ವವನ್ನು ತುಂಬಿದ ದಕ್ಷ ಸೃಷ್ಟಿ

ದಕ್ಷನ ವಂಶಾವಳಿ (ಭಾಗ-2)

ದಕ್ಷನು ಅಸಿಕ್ನೀಯಲ್ಲಿ ಅರುವತ್ತು ಹೆಣ್ಣು ಮಕ್ಕಳನ್ನು ಪಡೆದ. ಅವರನ್ನು ಯೋಗ್ಯರಾದವರಿಗೆ ವಿವಾಹ ಮಾಡಿಸಿಕೊಟ್ಟ. ಕನ್ಯೆಯರ ಪ್ರಜಾಸಂತಾನಗಳಿಂದ ಮೂರು ಲೋಕಗಳೂ ತುಂಬಿ ಹೋದವು. ಇಪ್ಪತ್ತೇಳು ಹೆಣ್ಣುಮಕ್ಕಳನ್ನು ಚಂದ್ರನಿಗೆ ಧಾರೆ ಎರೆದ. ಚಂದ್ರ ರೋಹಿಣಿಯಲ್ಲೇ ಅನುರಕ್ತನಾಗಿ, ಉಳಿದ ಇಪ್ಪತ್ತಾರು ದಕ್ಷ ಪುತ್ರಿಯರನ್ನು ಕಡೆಗಣಿಸಿದ್ದರಿಂದ, ಆತನ ಕೋಪಕ್ಕೆ ಗುರಿಯಾಗಿ ಶಪಿಸಲ್ಪಟ್ಟ ಮತ್ತು ಸಂತಾನಹೀನನಾದ. ಅದಿತಿಗೆ ಕಶ್ಯಪರಿಂದ ದ್ವಾದಶಾದಿತ್ಯರು ಜನಿಸಿದರು. ಇವರಲ್ಲಿ ಹನ್ನೆರಡನೆಯವನೇ ವಾಮನ. ಸಾಕ್ಷಾತ್‌ ದೇವೋತ್ತಮ ಪರಮ ಪುರುಷನ ಪುಣ್ಯಾವತಾರ.

ಚಾಕ್ಷುಷ ಮನ್ವಂತರದಲ್ಲಿ ಪ್ರಚೇತಸರೆಂಬ ರಾಜಪುತ್ರರಿಂದ ಮಾರಿಷೆಯಲ್ಲಿ ಜನ್ಮ ತಾಳಿದ ದಕ್ಷ ಪ್ರಜಾಪತಿಯು, ಪಂಚಜನ ಪ್ರಜಾಪತಿಯ ಪುತ್ರಿಯಾದ ಅಸಿಕ್ನಿಯನ್ನು ವರಿಸಿ, ಭಗವದಾಜ್ಞೆಯಂತೆ ಸೃಷ್ಟಿಕಾರ್ಯವನ್ನು ಮುಂದುವರಿಸಲು ಅವಳಲ್ಲಿ ಹರ್ಯಶ್ವ ಮತ್ತು ಸವಲಾಶ್ವರೆಂಬ ಬಹುಸಂಖ್ಯೆಯ ಪುತ್ರರನ್ನು ಪಡೆದ. ಆದರೆ ಆ ಪುತ್ರರೆಲ್ಲರೂ ದೇವರ್ಷಿ ನಾರದರ ಆಧ್ಯಾತ್ಮಿಕ ತತ್ತ್ವೋಪದೇಶಗಳನ್ನು ಕೇಳಿ ವೈರಾಗ್ಯ ತಾಳಿ ಸಂನ್ಯಾಸಿಗಳಾಗಿ ದೇಶಾಂತರ ಹೊರಟುಹೋದರು. ಮತ್ತೆ ಮತ್ತೆ ಪುತ್ರಶೋಕ ಬಾಧಿತನಾದ ದಕ್ಷನು, ಬ್ರಹ್ಮದೇವನಿಂದ ಸಮಾಧಾನ ಹೊಂದಿದನು.

ದಕ್ಷನು ಪುನಃ ತನ್ನ ಪತ್ನಿ ಅಸಿಕ್ನಿಯಲ್ಲಿ ಮಕ್ಕಳನ್ನು ಪಡೆದ; ಈ ಬಾರಿ ಅವನಿಗೆ ಅರುವತ್ತು ಹೆಣ್ಣು ಮಕ್ಕಳು ಜನಿಸಿದರು. ಅವರೆಲ್ಲರೂ ತಮ್ಮ ತಂದೆಯಲ್ಲಿ ಬಹಳ ಭಕ್ತಿ ವಾತ್ಸಲ್ಯಗಳನ್ನು ಬೆಳೆಸಿಕೊಂಡರು.

ದಕ್ಷನು, ತನ್ನ ಸುಂದರ ಪುತ್ರಿಯರೆಲ್ಲರೂ ಬೆಳೆದು ಪ್ರಾಪ್ತವಯಸ್ಕರಾಗಲು, ಅವರನ್ನು ಯೋಗ್ಯ ವರರಿಗಿತ್ತು ವಿವಾಹ ಮಾಡಿದ; ಅವನು ತನ್ನ ಹತ್ತು ಕುವರಿಯರನ್ನು ಧರ್ಮನಿಗೂ, ಹದಿಮೂರು ಕನ್ಯೆಯರನ್ನು ಕಶ್ಯಪ ಮಹರ್ಷಿಗಳಿಗೂ, ಇಪ್ಪತ್ತೇಳು ಪುತ್ರಿಯರನ್ನು ಚಂದ್ರನಿಗೂ, ಇಬ್ಬಿಬ್ಬರು ಕನ್ಯೆಯರನ್ನು ಅಂಗೀರಸ, ಕೃಶಾಶ್ವ, ಮತ್ತು ಭೂತರಿಗೂ ವಿವಾಹ ಮಾಡಿಕೊಟ್ಟನು; ಇನ್ನುಳಿದ ನಾಲ್ಕು ಪುತ್ರಿಯರನ್ನು ಕಶ್ಯಪರಿಗೆ ಕೊಟ್ಟು ವಿವಾಹ ಮಾಡಿದನು. ಈ ಎಲ್ಲ ಕನ್ಯೆಯರ ಪ್ರಜಾಸಂತಾನಗಳಿಂದ ಮೂರು ಲೋಕಗಳೂ ತುಂಬಿಹೋದವು !

ಧರ್ಮನಿಗೆ ಕೊಡಲಾದ ಹತ್ತು ಕನ್ಯೆಯರು, ಭಾನು, ಲಂಬೆ, ಕಕುದ್‌, ಯಾಮಿ, ವಿಶ್ವೆ, ಸಂಧ್ಯೆ, ಮರುತ್ವತಿ, ವಸು, ಮುಹೂರ್ತೆ, ಮತ್ತು ಸಂಕಲ್ಪೆ. ಇವರಿಂದ, ಸಂಕಲ್ಪ, ಕಾಮ, ಭಗವದಂಶಜನಾದ ಉಪೇಂದ್ರ, ಸಾಧ್ಯರು, ವಿಶ್ವದೇವತೆಗಳು, ಅಷ್ಟವಸುಗಳು, ಶಿಶುಮಾರ, ಚಾಕ್ಷುಷ ಮನು, ಮೊದಲಾದ ಅನೇಕ ಪುತ್ರಪೌತ್ರರು ಜನಿಸಿ ದೇವಗಣಗಳಲ್ಲಿ ಸೇರಿಹೋದರು.

ಭೂತನ ಒಬ್ಬ ಪತ್ನಿಯಾದ ಸರೂಪೆಯು ಕೋಟಿ ಕೋಟಿ ರುದ್ರಗಣಗಳಿಗೆ ಜನ್ಮವಿತ್ತಳು. ಅವರಲ್ಲಿ ಹನ್ನೊಂದು ಮಂದಿ ಪ್ರಮುಖರು; ಅವನ ಇನ್ನೊಬ್ಬ ಪತ್ನಿಯು ಘೋರ ಭೂತಪ್ರೇತಗಳಿಗೆ ಜನ್ಮವಿತ್ತಳು. ಇವರೆಲ್ಲರೂ ರುದ್ರರಿಗೆ ಪಾರ್ಷದರಾದರು.

ಅಂಗೀರಸರ ಒಬ್ಬ ಪತ್ನಿಯಾದ ಸ್ವಧಾದೇವಿಯು ಪಿತೃದೇವತೆಗಳನ್ನೂ ಇನ್ನೊಬ್ಬ ಪತ್ನಿಯಾದ ಸತಿಯು ಅಥರ್ವಾಂಗೀರಸವೇದವನ್ನೂ ಪುತ್ರರನ್ನಾಗಿ ಸ್ವೀಕರಿಸಿದರು.

ಕೃಶಾಶ್ವನು ತನ್ನ ಒಬ್ಬ ಪತ್ನಿಯಾದ ಅರ್ಚಿಯಲ್ಲಿ ಧೂಮಕೇತು ಎಂಬ ಪುತ್ರನನ್ನು ಪಡೆದ; ತನ್ನ ಇನ್ನೊಬ್ಬ ಪತ್ನಿಯಾದ ಧಿಷಣೆಯಲ್ಲಿ ವೇದಶಿರಸ್‌, ದೇವಲ, ವಯುನ, ಮತ್ತು ಮನು ಎಂಬ ನಾಲ್ವರು ಪುತ್ರರನ್ನು ಪಡೆದ.

ಚಂದ್ರನಿಗೆ ಕೊಡಲಾದ ಅಶ್ವಿನಿ, ಭರಣಿ, ಕೃತ್ತಿಕಾ, ಮೊದಲಾದ ಇಪ್ಪತ್ತೇಳು ಕನ್ಯೆಯರು ತಾರಾಗಣಗಳಾದರು. ಈ ಇಪ್ಪತ್ತೇಳು ತಾರಾಪತ್ನಿಯರಲ್ಲಿ ರೋಹಿಣಿಯು ಅತ್ಯಂತ ಸುಂದರಿಯಾಗಿದ್ದುದರಿಂದ, ಚಂದ್ರನು ಅವಳಲ್ಲಿ ಬಹಳ ಅನುರಕ್ತನಾಗಿಬಿಟ್ಟನು ! ಸದಾ ರೋಹಿಣಿಯೊಂದಿಗೆ ಇರುತ್ತಿದ್ದ ಚಂದ್ರನು ತನ್ನ ಇತರ ಪತ್ನಿಯರ ಬಳಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟನು! ಕೋಪಾಸೂಯೆಗಳಿಂದಲೂ ಪತಿವಿರಹದಿಂದಲೂ ಬೇಸತ್ತ ಅವರೆಲ್ಲರೂ ತಮ್ಮ ತಂದೆ ದಕ್ಷ ಪ್ರಜಾಪತಿಯ ಬಳಿ, ತಮ್ಮ ಪತಿಯ ಪಕ್ಷಪಾತದ ವರ್ತನೆಯ ಬಗ್ಗೆ ದೂರಿತ್ತರು. ದಕ್ಷನು ಚಂದ್ರನನ್ನು ಕರೆಯಿಸಿ, ಎಲ್ಲ ಪತ್ನಿಯರನ್ನೂ ಸಮನಾಗಿ ಕಾಣಬೇಕೆಂದು ಎಚ್ಚರಿಸಿದನು. ಚಂದ್ರನು ಒಪ್ಪಿದರೂ ತನ್ನ ವರ್ತನೆಯನ್ನು ಬದಲಿಸಲಿಲ್ಲ. ಅವನ ಇತರ ಪತ್ನಿಯರು ದಕ್ಷನ ಬಳಿ ಪುನಃ ದೂರಿಡಲು, ಅವನು ಕೋಪಗೊಂಡು, ಚಂದ್ರನಿಗೆ ಯಕ್ಷ್ಮ ಕ್ಷಯರೋಗ ಪೀಡಿತನಾಗೆಂದು ಶಾಪವಿತ್ತನು ! ಇದರಿಂದ ಚಂದ್ರನು ದಿನೇ ದಿನೇ ಕ್ಷೀಣಿಸಿ, ಆ ಕಾರಣದಿಂದ ಲತೌಷಧಿಗಳೂ ಕ್ಷೀಣಿಸಲು, ದೇವತೆಗಳು ಶಾಪಪರಿಹಾರಕ್ಕಾಗಿ ದಕ್ಷನನ್ನು ಬೇಡಿದರು. ಚಂದ್ರನೇ ಸ್ವಯಂ ದಕ್ಷನ ಬಳಿ ಕ್ಷಮೆಯಾಚಿಸಲು, ದಕ್ಷನು ಶಿವಾರಾಧನೆ ಮತ್ತು ಸರಸ್ವತೀ ನದಿಯ ಸ್ನಾನದಿಂದ ಚಂದ್ರನ ಶಾಪ ಪರಿಹಾರವಾಗುತ್ತದೆಯೆಂದು ಹೇಳಿದನು. ಆದರೆ ಶಾಪದ ಪರಿಣಾಮಶೇಷವನ್ನು ಅನುಭವಿಸಲೇಬೇಕೆಂದು ಹೇಳಿದನು. ಇದರಿಂದ, ಚಂದ್ರನಿಗೆ ಶಾಪವಿಮೋಚನೆಯಾದರೂ, ಕೃಷ್ಣಪಕ್ಷದಲ್ಲಿ ಕ್ಷೀಣಿಸುತ್ತಲೂ ಶುಕ್ಲಪಕ್ಷದಲ್ಲಿ ವರ್ಧಿಸುತ್ತಲೂ ಇರತೊಡಗಿದನು. ಅನಂತರ ಅವನು ತನ್ನ ಎಲ್ಲ ಪತ್ನಿಯರನ್ನೂ ಸಮಾನವಾಗಿ ಕಾಣತೊಡಗಿದರೂ, ಅವರಲ್ಲಿ ಅವನಿಗೆ ಸಂತಾನವಾಗಲಿಲ್ಲ.

* * *

ಕಶ್ಯಪ ಮಹರ್ಷಿಗಳು ದಕ್ಷನ ಹದಿನೇಳು ಪುತ್ರಿಯರನ್ನು ವರಿಸಿದರಷ್ಟೇ? ಅವರ ಸಂತಾನಗಳು ಈ ಇಡಿಯ ಜಗತ್ತನ್ನೇ ತುಂಬಿದವು !

ಕಶ್ಯಪಮಹರ್ಷಿಗಳ ಒಬ್ಬ ಪತ್ನಿಯಾದ ಪತಂಗಿಯೆಂಬುವಳು ವಿವಿಧ ಪಕ್ಷಿಗಳಿಗೆ ಜನ್ಮವಿತ್ತಳು. ಯಾಮಿನಿಯೆಂಬ ಅವರ ಪತ್ನಿಯು ಮಿಡತೆಗಳಿಗೆ ಜನ್ಮವಿತ್ತಳು. ವಿನತೆಯು (ಸುಪರ್ಣೆ) ಗರುಡನೆಂಬ ಮಹಾಪಕ್ಷಿಗೆ ಜನ್ಮವಿತ್ತಳು; ಪಕ್ಷಿಗಳ ರಾಜನೆನಿಸಿದ ಇವನು, ಶ್ರೀಮನ್ನಾರಾಯಣನ ವಾಹನನಾದನು. ವಿನತೆಯು ಅರುಣನೆಂಬ ಇನ್ನೋರ್ವ ಪುತ್ರನಿಗೆ ಜನ್ಮವಿತ್ತಳು. ಇವನು ಸೂರ್ಯನ ಸಾರಥಿಯಾದನು. ಕದ್ರುವೆಂಬ ಕಶ್ಯಪರ ಪತ್ನಿಯು ವಿವಿಧ ನಾಗಗಳಿಗೆ ಜನ್ಮವಿತ್ತಳು.

ಕಶ್ಯಪ ಮಹರ್ಷಿಗಳ ಪತ್ನಿಯಾದ ಸುರಭಿಯೆಂಬುವಳ ಹೊಟ್ಟೆಯಲ್ಲಿ ಹಸು, ಎಮ್ಮೆ, ಮೊದಲಾದ ಎರಡು ಗೊರಸಿನ ಪಶುಗಳು ಹುಟ್ಟಿದವು. ತಾಮ್ರಳೆಂಬ ಅವರ ಪತ್ನಿಯು ಹದ್ದು, ರಣಹದ್ದುಗಳಿಗೆ ಜನ್ಮವಿತ್ತಳು, ಮುನಿಯೆಂಬ ಪತ್ನಿಯು ಅಪ್ಸರೆಯರಿಗೆ ಜನ್ಮವಿತ್ತಳು. ಕ್ರೋಧವಶಳೆಂಬ ಪತ್ನಿಯು ದಂದಶೂಕವೇ ಮೊದಲಾದ ಸರ್ಪಗಳನ್ನು, ಚೇಳು ಮೊದಲಾದ ಇತರ ವಿಷಜಂತುಗಳನ್ನು ಪ್ರಸವಿಸಿದಳು. ಇಳೆಯೆಂಬುವಳು ವೃಕ್ಷಲತೆಗಳಿಗೆ ಜನ್ಮವಿತ್ತಳು; ಸುರಸೆಯೆಂಬುವಳು ರಾಕ್ಷಸರಿಗೂ ದುಷ್ಟ ಶಕ್ತಿಗಳಿಗೂ ಜನ್ಮವಿತ್ತಳು. ತಿಮಿಯು ಜಲಚರಗಳಿಗೂ ಸರಮೆಯು ಹುಲಿ, ಸಿಂಹ, ಮೊದಲಾದ ಕ್ರೂರ ಪ್ರಾಣಿಗಳಿಗೂ ಜನ್ಮವಿತ್ತಳು.

ಅರಿಷ್ಟೆಯ ಯೋನಿಯಿಂದ ಗಂಧರ್ವರು ಜನಿಸಿದರೆ, ಕಾಷ್ಠೆಯ ಯೋನಿಯಿಂದ ಒಂದು ಗೊರಸಿನ ಕುದುರೆಯೇ ಮೊದಲಾದ ಪಶುಗಳು ಜನಿಸಿದವು. ದನುವೆಂಬ ಪತ್ನಿಯು ಅರುವತ್ತೊಂದು ದಾನವರಿಗೆ ಜನ್ಮವಿತ್ತಳು. ಅವರಲ್ಲಿ, ದ್ವಿಮೂರ್ಧ, ಶಂಬರ, ಅರಿಷ್ಟು, ಹಯಗ್ರೀವ, ವಿಭಾವಸು, ಅಯೋಮುಖ, ಶಂಕುಶಿರಸ್‌, ಸ್ವರ್ಭಾನು, ಕಪಿಲ, ಅರುಣ, ಪುಲೋಮ, ವೃಷಪರ್ವ, ಏಕಚಕ್ರ, ಅನುತಾಪನ, ಧೂಮ್ರಕೇಶ, ವಿರೂಪಾಕ್ಷ, ವಿಪ್ರಚಿತ್ತಿ, ಮತ್ತು ದುರ್ಜಯರೆಂಬ ಹದಿನೆಂಟು ದಾನವರು ಪ್ರಮುಖರು.

ಸ್ವರ್ಭಾನುವಿನ ಮಗಳಾದ ಸುಪ್ರಭೆಯನ್ನು ನಮುಚಿಯು ವರಿಸಿದ. ವೃಷಪರ್ವರಾಜನ ಮಗಳಾದ ಶರ್ಮಿಷ್ಠೆಯನ್ನು ನಹುಷನ ಮಗನಾದ ಯಯಾತಿರಾಜನು ವರಿಸಿದ.

ದನುವಿನ ಒಬ್ಬ ಪುತ್ರನಾದ ವೈಶ್ವಾನರ ಎಂಬುವನಿಗೆ ಉಪದಾನವಿ, ಹಯಶಿರೆ, ಪುಲೋಮೆ, ಕಾಲಕೆ, ಎಂಬ ನಾಲ್ವರು ಸುಂದರ ಮೊಗದ ಪುತ್ರಿಯರಾದರು. ಹಿರಣ್ಯಾಕ್ಷನೆಂಬ ರಾಕ್ಷಸನು ಉಪದಾನವಿಯನ್ನು ವರಿಸಿದ, ಕ್ರತುವು ಹಯಶಿರೆಯನ್ನು ವರಿಸಿದ. ಅನಂತರ, ಬ್ರಹ್ಮದೇವನು ಹೇಳಲು, ಪುಲೋಮೆ ಮತ್ತು ಕಾಲಕೆಯರನ್ನು ಕಶ್ಯಪ ಪ್ರಜಾಪತಿಯೇ ವರಿಸಿದ ! ಇವರಿಬ್ಬರಿಂದಲೂ ಪೌಲೋಮ ಕಾಲಕೇಯರೆಂದು ಪ್ರಸಿದ್ಧರಾದ ನಿವಾತಕವಚರೆಂಬ ಕ್ರೂರ ದಾನವರು ಜನಿಸಿದರು ! ಈ ರಾಕ್ಷಸರು ಅರುವತ್ತು ಸಹಸ್ರದ ಬೃಹತ್‌ ಸಂಖ್ಯೆಯಲ್ಲಿದ್ದರು ! ಸದಾ ಯಜ್ಞಗಳನ್ನು ನಾಶಮಾಡಹತ್ತಿದ ಇವರು, ಮುಂದೆ ಸ್ವರ್ಗದ ಮೇಲೂ ಆಕ್ರಮಣ ನಡೆಸಿ ದೇವೇಂದ್ರನನ್ನೇ ಪರಾಭವಗೊಳಿಸಿದರು! ಮಹಾಪರಾಕ್ರಮಿಗಳೂ ದುರ್ಜಯರೂ ಆದ ಈ ದುಷ್ಟ ರಾಕ್ಷಸರು ಸದಾ ದೇವತೆಗಳನ್ನೂ ಋಷಿಮುನಿಗಳನ್ನೂ ಪೀಡಿಸುತ್ತಿದ್ದರು! ಕಡೆಗೆ, ಪಾಂಡವರು ವನವಾಸ ಮಾಡತೊಡಗಿದಾಗ, ಅರ್ಜುನನು ದಿವ್ಯಾಯುಧಗಳ ಸಂಗ್ರಹಕ್ಕಾಗಿ ಸ್ವರ್ಗಲೋಕಕ್ಕೆ ತೆರಳಿ, ಏಕಾಂಗಿಯಾಗಿಯೇ ಇವರೆಲ್ಲರೊಂದಿಗೆ ಹೋರಾಡಿ, ಎಲ್ಲರನ್ನೂ ಕೊಂದು ಇಂದ್ರನಿಗೆ ಮಹದಾನಂದವನ್ನು ಉಂಟುಮಾಡಿದ !

ವಿಪ್ರಚಿತ್ತಿಯೆಂಬ ದನುಪುತ್ರನು ಸಿಂಹಿಕೆಯೆಂಬ ರಾಕ್ಷಸಿಯನ್ನು ವರಿಸಿದ. ಅವರಿಗೆ ನೂರೊಂದು ಪುತ್ರರು ಜನಿಸಿದರು. ಅವರಲ್ಲಿ ಜೇಷ್ಠಪುತ್ರನೇ ರಾಹು; ಉಳಿದ ನೂರು ಪುತ್ರರೂ ಕೇತುಗಳೆಂದು ಪ್ರಸಿದ್ಧರಾದರು ! ಇವರೆಲ್ಲರೂ ಗ್ರಹತ್ವವನ್ನು ಹೊಂದಿದರು.

* * *

ಕಶ್ಯಪ ಮಹರ್ಷಿಗಳ ಪತ್ನಿ ಅದಿತಿಯ ವಂಶ ಬಹಳ ಪುಣ್ಯಕರವಾದುದು. ಈ ವಂಶದಲ್ಲಿ ಸಾಕ್ಷಾತ್‌ ಶ್ರೀಮನ್ನಾರಾಯಣನೇ ತನ್ನ ಅಂಶದಿಂದ ಅವತರಿಸಿದ.

ಅದಿತಿಗೆ ಕಶ್ಯಪರಿಂದ ದ್ವಾದಶಾದಿತ್ಯರೆಂಬ ಹನ್ನೆರಡು ಪುತ್ರರಾದರು. ವಿವಸ್ವಾನ್‌, ಅರ್ಯಮ, ಪೂಷನ್‌, ತ್ವಷ್ಟೃ, ಸವಿತೃ, ಭಗ, ಧಾತ, ವಿಧಾತ, ವರುಣ, ಮಿತ್ರ, ಶಕ್ರ (ಇಂದ್ರ) ಮತ್ತು ಉರುಕ್ರಮ ಎಂಬುವರೇ ಆ ಪುತ್ರರು.

ವಿವಸ್ವಂತ (ಸೂರ್ಯದೇವ)ನು, ವಿಶ್ವಕರ್ಮನ ಮಗಳಾದ ಸಂಜ್ಞೆಯನ್ನು ವರಿಸಿ, ಅವಳಲ್ಲಿ ಶ್ರಾದ್ಧದೇವ (ವೈವಸ್ವತ ಮನು), ಮತ್ತು ಅವಳಿಗಳಾದ ಯಮ ಮತ್ತು ಯಮುನೆ ಎಂಬ ಮಕ್ಕಳನ್ನು ಪಡೆದ. ಯಮನು ಮೃತ್ಯುವಿನ ಅಧಿದೇವತೆಯೂ ಅಷ್ಟದಿಕ್ಪಾಲಕರಲ್ಲೊಬ್ಬನೂ ಆದರೆ ಯಮುನೆಯು ನದಿಯಾಗಿ ಹರಿದು ಲೋಕೋಪಕಾರಿಯಾದಳು.

ಸೂರ್ಯನ ಪ್ರಚಂಡ ತಾಪವನ್ನು ತಾಳಲಾರದೆ ಸಂಜ್ಞೆಯು ಒಂದು ದಿನ ತನ್ನ ನೆರಳಿಗೆ ಜೀವತುಂಬಿ ಆ ಹೆಣ್ಣನ್ನೇ ತಾನೆಂಬಂತೆ ಬಿಟ್ಟು ಹೊರಟುಹೋದಳು. ಛಾಯೆಯೆಂಬ ಈ ಹೆಣ್ಣಿನಲ್ಲಿ ಸೂರ್ಯನು, ಸಾವರ್ಣಿಮನು, ಶನೈಶ್ಚರ, ಮತ್ತು ತಪತಿಯೆಂಬ ಮಕ್ಕಳನ್ನು ಪಡೆದ. ಶನೈಶ್ಚರನು ಗ್ರಹತ್ವವನ್ನು ಹೊಂದಿದ; ತಪತಿಯು ಸಂವರಣನೆಂಬ ಭರತಕುಲೋತ್ಪನ್ನ ರಾಜನನ್ನು ವರಿಸಿ ಅವನಿಂದ ಕುರು ಎಂಬ ಪುತ್ರನನ್ನು ಪಡೆದಳು. ಈ ಕುರುವಿನಿಂದಲೇ ಪಾಂಡವ, ಕೌರವರು ಹುಟ್ಟಿದ ಕುರುವಂಶ ಆರಂಭವಾಯಿತು.

ಛಾಯೆಯು ತನ್ನ ಮಕ್ಕಳಿಗೂ ಸಂಜ್ಞೆಯ ಮಕ್ಕಳಿಗೂ ಪಕ್ಷಪಾತ ತೋರುತ್ತಿದ್ದುದನ್ನು ನೋಡಿ ಸೂರ್ಯನು ಆಕೆಯು ತನ್ನ ನಿಜಸತಿಯಲ್ಲವೆಂದು ಅರಿತು ಅವಳನ್ನು ತನ್ನಲ್ಲೇ ಅಡಗಿಸಿಬಿಟ್ಟ! ಅನಂತರ, ಅವನು ಸಂಜ್ಞೆಯನ್ನು ಹುಡುಕತೊಡಗಲು, ವಿಶ್ವಕರ್ಮನಿಂದ ಅವಳು ಅವನ ತಾಪಕ್ಕೆ ಹೆದರಿ ಕುದುರೆಯ ರೂಪದಲ್ಲಿ ಅಲೆಯುತ್ತಿದ್ದುದು ತಿಳಿಯಿತು. ಆಗ ವಿಶ್ವಕರ್ಮನೇ ಅವನ ತಾಪವನ್ನು ಕಡಮೆ ಮಾಡಿ ಕಳಿಸಿಕೊಟ್ಟ. ಸೂರ್ಯನು ತಾನೂ ಕುದುರೆಯ ರೂಪ ಧರಿಸಿ ಆ ಹೆಣ್ಣು ಕುದುರೆಯೊಡನೆ ಕೂಡಿದ! ಆಗ ಅವರಿಗೆ ಅಶ್ವಿನೀ ದೇವತೆಗಳೆಂಬ ಅವಳಿ ಪುತ್ರರು ಜನಿಸಿದರು. ಇವರು ದೇವ ವೈದ್ಯರಾದರು.

ಸೂರ್ಯನ ತಾಪವು ಕಡಮೆಯಾಗಿ ಅವನು ಇನ್ನಷ್ಟು ಸುಂದರನಾಗಿದ್ದುದನ್ನು ಕಂಡ ಸಂಜ್ಞಾದೇವಿ, ಸಂತೋಷದಿಂದ ಅವನೊಡನೆ ಹಿಂದಿರುಗಿದಳು.

ಅರ್ಯಮನು ಮಾತೃಕೆಯೆಂಬ ತನ್ನ ಪತ್ನಿಯಲ್ಲಿ ವಿದ್ವಾಂಸರಾದ ಅನೇಕ ಪುತ್ರರನ್ನು ಪಡೆದ. ಬ್ರಹ್ಮದೇವನು ಇವರಲ್ಲೇ ಮನುಷ್ಯ ಜಾತಿಯನ್ನು ಕಲ್ಪಿಸಿದ!

ಪೂಷನ್ನನು ದಕ್ಷಯಜ್ಞದ ಕಾಲದಲ್ಲಿ ಶಿವನು ದಕ್ಷನ ಮೇಲೆ ಕೋಪಿಸಿಕೊಂಡಿದ್ದಾಗ ಹಲ್ಲುಕಿರಿದು ನಕ್ಕಿದ್ದ ! ಇದರಿಂದ ಕ್ರುದ್ಧನಾದ ಶಿವಾಂಶಸಂಭೂತ ವೀರಭದ್ರನು ಅವನ ಹಲ್ಲುಗಳನ್ನು ಪುಡಿ ಪುಡಿ ಮಾಡಿದ್ದ ! ಅಂದಿನಿಂದ ಪೂಷನ್ನನು ಬರಿದೇ ಹಿಟ್ಟನ್ನುಂಡು ಜೀವಿಸುತ್ತಿದ್ದ! ಅವನಿಗೆ ಮಕ್ಕಳಾಗಲಿಲ್ಲ.

ತ್ವಷ್ಟೃವು ದೈತ್ಯಕನ್ಯೆಯಾದ ರಚನೆಯನ್ನು ವರಿಸಿದ. ಅವನು ಅವಳಲ್ಲಿ ಸನ್ನಿವೇಶ ಮತ್ತು ವಿಶ್ವರೂಪರೆಂಬ ಇಬ್ಬರು ವೀರ್ಯವಂತ ಪುತ್ರರನ್ನು ಪಡೆದ. ಒಮ್ಮೆ, ಇಂದ್ರನ ಅಹಂಕಾರದಿಂದ ಕ್ರುದ್ಧರಾದ ದೇವಗುರು ಬೃಹಸ್ಪತಿಗಳು ದೇವತೆಗಳನ್ನೇ ತ್ಯಜಿಸಿ ಹೊರಟುಹೋಗಲು, ವಿಶ್ವರೂಪನು ತಾಯಿಯ ಕಡೆಯಿಂದ ತಮ್ಮ ನಿತ್ಯಶತ್ರುಗಳಾದ ದೈತ್ಯರ ಸಂಬಂಧಿಯಾದರೂ, ಅವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು.

ಸವಿತೃವು ತನ್ನ ಪತ್ನಿಯಾದ ಪೃಶ್ನಿಯಲ್ಲಿ ಸಾವಿತ್ರಿ, ವ್ಯಾಹೃತಿ, ಮತ್ತು ತ್ರಯೀ ಎಂಬ ಮೂವರು ಪುತ್ರಿಯರನ್ನೂ ಅಗ್ನಿಹೋತ್ರ, ಪಶು, ಸೋಮ, ಚಾತುರ್ಮಾಸ್ಯ ಮತ್ತು ಪಂಚ ಮಹಾಯಜ್ಞಗಳನ್ನು ಪುತ್ರರನ್ನಾಗಿ ಪಡೆದ.

ಭಗನು ತನ್ನ ಪತ್ನಿಯಾದ ಸಿದ್ಧಿಯಲ್ಲಿ ಮಹಿಮಾನ್‌, ವಿಭು, ಮತ್ತು ಪ್ರಭು ಎಂಬ ಪುತ್ರರನ್ನೂ ತುಂಬು ಚೆಲುವೆಯಾದ ಆಶೀ ಎಂಬ ಮಗಳನ್ನೂ ಪಡೆದ.

ಧಾತನು, ಕೂಹೂ, ಸಿನೀವಾಲೀ, ರಾಕೆ, ಮತ್ತು ಅನುಮತಿ ಎಂಬ ತನ್ನ ನಾಲ್ವರು ಪತ್ನಿಯರಲ್ಲಿ ಸಾಯಂ, ದರ್ಶ, ಪ್ರಾತಃ ಮತ್ತು ಪೂರ್ಣಮಾಸರೆಂಬ ನಾಲ್ವರು ಪುತ್ರರನ್ನು ಪಡೆದ; ವಿಧಾತನು ತನ್ನ ಪತ್ನಿಯಾದ ಕ್ರಿಯೆಯಲ್ಲಿ ಪುರೀಷ್ಯರೆಂಬ ಪಂಚಾಗ್ನಿ ದೇವತೆಗಳನ್ನು ಪುತ್ರರನ್ನಾಗಿ ಪಡೆದ; ವರುಣನು ತನ್ನ ಪತ್ನಿ ಚರ್ಷಣಿಯಲ್ಲಿ ಭೃಗು ಮಹರ್ಷಿಗಳನ್ನು ಪುತ್ರರನ್ನಾಗಿ ಪಡೆದ. ಹಿಂದೆ ಬ್ರಹ್ಮದೇವನಿಂದ ಮಾನಸಪುತ್ರರಾಗಿ ಹುಟ್ಟಿದ್ದ ಭೃಗುಮಹರ್ಷಿಗಳು ಪುನಃ ಈಗ ವರುಣನಿಗೆ ಹುಟ್ಟಿದರು. ವರುಣನ ವೀರ್ಯದಿಂದ, ಮಹಾಮುನಿ ವಾಲ್ಮೀಕಿಗಳೂ ವಲ್ಮೀಕದಿಂದ (ಹುತ್ತದಿಂದ) ಜನ್ಮ ತಾಳಿದರು!

ವರುಣ ಮತ್ತು ಮಿತ್ರರ ವೀರ್ಯಗಳಿಂದ ಅಗಸ್ತ್ಯ ಮತ್ತು ವಸಿಷ್ಠ ಋಷಿಗಳು ಜನ್ಮತಾಳಿದರು.

ಒಮ್ಮೆ, ದೇವಲೋಕದ ಅಪ್ಸರೆಯಾದ ಊರ್ವಶಿಯನ್ನು ಕಂಡ ಮಿತ್ರ, ವರುಣರಿಬ್ಬರೂ ಅವಳ ಅಪೂರ್ವ ರೂಪ, ಲಾವಣ್ಯಗಳಿಗೆ ಮಾರುಹೋಗಿ ಅವಳಲ್ಲಿ ಮೋಹಗೊಂಡರು! ಆಗ ಅವರ ವೀರ್ಯ ಜಾರಲು, ಅವರು ಅವುಗಳನ್ನು ಒಂದು ಕುಂಭದಲ್ಲಿಟ್ಟು ಸಂರಕ್ಷಿಸಿದರು. ಆ ದಿವ್ಯವೀರ್ಯಗಳಿಂದ ಅಗಸ್ತ್ಯ ಮತ್ತು ವಸಿಷ್ಠರ ಜನನವಾಯಿತು ! ಈ ಕಾರಣದಿಂದಲೇ ಅಗಸ್ತ್ಯರನ್ನು ಕುಂಭಸಂಭವರೆನ್ನುತ್ತಾರೆ ! ಸೃಷ್ಟಿಕಾರ್ಯದಲ್ಲಿ ವಿಧಿಲೀಲೆ ಎಷ್ಟು ವಿಚಿತ್ರ, ವಿಸ್ಮಯಕರವಲ್ಲವೇ?

ಮಿತ್ರನಿಗೆ ರೇವತಿಯೆಂಬ ಪತ್ನಿಯಲ್ಲಿ, ಉತ್ಸರ್ಗ, ಅರಿಷ್ಟು ಮತ್ತು ಪಿಪ್ಹಲರೆಂಬ ಮೂವರು ಪುತ್ರರೂ ಹುಟ್ಟಿದರು.

ಅದಿತಿಯ ಹನ್ನೊಂದನೆಯ ಪುತ್ರನೇ ಸ್ವರ್ಗಲೋಕಕ್ಕೂ ದೇವತೆಗಳಿಗೂ ರಾಜನಾದ ದೇವೇಂದ್ರ; ಅವನು ತನ್ನ ಪತ್ನಿ ಪೌಲೋಮಿ (ಶಚೀದೇವಿ)ಯಲ್ಲಿ ಜಯಂತ, ಋಷಭ ಮತ್ತು ಮೀಢೂಷರೆಂಬ ಮೂವರು ಪುತ್ರರನ್ನು ಪಡೆದ.

ಅದಿತಿಯ ಹನ್ನೆರಡನೆಯ ಪುತ್ರನು ಬೇರಾರೂ ಅಲ್ಲ; ದೇವೋತ್ತಮ ಪರಮ ಪುರಷನೇ ವಾಮನರೂಪದಲ್ಲಿ ಅವತರಿಸಿದ ! ದೈತ್ಯಚಕ್ರವರ್ತಿಯಾದ ಬಲಿಯು ತನ್ನ ಪರಾಕ್ರಮದಿಂದ ಮೂರು ಲೋಕಗಳನ್ನೂ ವಶಪಡಿಸಿಕೊಳ್ಳಲು, ಇಂದ್ರಾದಿ ದೇವತೆಗಳು ಮಹಾವಿಷ್ಣುವಿನ ಮೊರೆಹೊಕ್ಕರು. ಆಗ ಶ್ರೀ ಹರಿಯು ಕಶ್ಯಪಸುತನಾಗಿ ಜನಿಸಿ, ಇಂದ್ರನಿಗೆ ತಮ್ಮನಾದುದರಿಂದ ಉಪೇಂದ್ರನೆನಿಸಿದನು ! ವಾಮನ ರೂಪದಲ್ಲಿದ್ದ ಉಪೇಂದ್ರನು ಬಲಿಯ ಬಳಿಗೆ ಭಿಕ್ಷೆಯ ನೆಪದಲ್ಲಿ ಹೋಗಿ ಮೂರು ಹೆಜ್ಜೆಗಳಷ್ಟು ದಾನ ಪಡೆದನು. ತನ್ನೆರಡು ಹೆಜ್ಜೆಗಳಿಂದ ಭೂಮ್ಯಂತರಿಕ್ಷಗಳನ್ನೇ ಅಳೆದು, ಮೂರನೆಯ ಹೆಜ್ಜೆಯನ್ನು ಬಲಿಯ ಶಿರದ ಮೇಲಿರಿಸಿ ಅವನನ್ನು ಸುತಲಲೋಕಕ್ಕೆ ತಳ್ಳಿಬಿಟ್ಟನು ! ಇಂಥ ಸಾಹಸ ಮಾಡಿ ಇಂದ್ರನಿಗೆ ಅವನ ರಾಜ್ಯವನ್ನು ಹಿಂದಿರುಗಿಸಿದ ವಾಮನನು ಉರುಕ್ರಮ, ತ್ರಿಮಿಕ್ರಮ ಎಂಬ ನಾಮಧೇಯಗಳನ್ನು ಪಡೆದನು !

ಉರುಕ್ರಮನು ತನ್ನ ಪತ್ನಿಯಾದ ಕೀರ್ತಿಯಲ್ಲಿ ಬೃಹತ್‌ಶ್ಲೋಕನೆಂಬ ಪುತ್ರನನ್ನು ಪಡೆದನು. ಬೃಹತ್‌ಶ್ಲೋಕನಿಗೆ ಸೌಭಗನು ಮೊದಲಾಗಿ ಅನೇಕ ಪುತ್ರರಾದರು.

* * *

ಕಶ್ಯಪ ಮಹರ್ಷಿಗಳ ಮತ್ತೊಬ್ಬ ಪತ್ನಿಯಾದ ದಿತಿಯಲ್ಲಿ ದೈತ್ಯರು ಹುಟ್ಟಿದರು. ಇವರೆಲ್ಲರೂ ಕ್ರೂರಸ್ವಭಾವದವರಾದರೂ ಇವರ ವಂಶದಲ್ಲಿ ಮಹಾಭಕ್ತನಾದ ಪ್ರಹ್ಲಾದನು ಜನಿಸಿದನು ! ಈ ಪ್ರಹ್ಲಾದನ ಮೊಮ್ಮಗನಾಗಿ ಮತ್ತೋರ್ವ ವಿಷ್ಣುಭಕ್ತನಾದ ಬಲಿಯು ಜನಿಸಿದನು.

ದಿತಿಗೆ ಮೊದಲು ಮಹಾಪರಾಕ್ರಮಿಗಳಾದ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರೆಂಬ ಪುತ್ರರು ಜನಿಸಿದರು. ಇವರೀರ್ವರನ್ನೂ ಸಕಲ ದೈತ್ಯದಾನವರೂ ಪೂಜಿಸುತ್ತಿದ್ದರು.

ಹಿರಣ್ಯಕಶಿಪುವು ದನುವಂಶಜಳೂ ಜಂಭದಾನವನ ಮಗಳೂ ಆದ ಕಯಾಧು ಎಂಬುವಳನ್ನು ವರಿಸಿದನು. ಇವರಿಗೆ ಸಂಹ್ಲಾದ, ಅನುಹ್ಲಾದ, ಹ್ಲಾದ, ಪ್ರಹ್ಲಾದರೆಂಬ ನಾಲ್ವರು ಪುತ್ರರೂ ಸಿಂಹಿಕೆಯೆಂಬ ಪುತ್ರಿಯೂ ಜನಿಸಿದರು.

ದೇವತೆಗಳೂ ರಾಕ್ಷಸರೂ ಅಮೃತಕ್ಕಾಗಿ ಸಮುದ್ರಮಥನ ಮಾಡಲು, ಅಮೃತವು ದೊರೆಯಿತು. ಶ್ರೀ ಹರಿಯು ಮೋಹಿನಿಯೆಂಬ ಸ್ತ್ರೀರೂಪ ಧರಿಸಿ ರಾಕ್ಷಸರಿಗೆ ತನ್ನ ಸೌಂದರ್ಯದಿಂದ ಮರುಳುಮಾಡುತ್ತಾ ದೇವತೆಗಳಿಗೆ ಮಾತ್ರ ಅಮೃತವನ್ನು ಹಂಚತೊಡಗಿದಳು! ಇದನ್ನರಿತ ರಾಹುವು ತಾನೂ ದೇವತೆಯಂತೆ ರೂಪಧರಿಸಿ ಅವರ ಸಾಲಿನಲ್ಲಿ ಕುಳಿತು ಅಮೃತಪಾನ ಮಾಡಿಬಿಟ್ಟನು ! ಸೂರ್ಯ ಚಂದ್ರರಿಂದ ಈ ವಿಷಯವನ್ನರಿತ ಶ್ರೀಹರಿಯು ಅವನ ಶಿರಚ್ಛೇದನ ಮಾಡಿದನು! ಅಮೃತಪಾನ ಮಾಡಿದ್ದ ಆ ಶಿರವು ಸಾಯದೇ ಗ್ರಹವಾಯಿತು! ಸೂರ್ಯಚಂದ್ರರ ಮೇಲಿನ ದ್ವೇಷದಿಂದ ಈ ರಾಹುಗ್ರಹವು ಪರ್ವಕಾಲಗಳಲ್ಲಿ ಅವರನ್ನು ನುಂಗಲು ಬರುತ್ತಾನೆ ! ಆಗ ಶ್ರೀಹರಿಯ ಸುದರ್ಶನಚಕ್ರ, ಅವರನ್ನು ಅವನಿಂದ ರಕ್ಷಿಸುತ್ತದೆ.

ಸಂಹ್ಲಾದನು ತನ್ನ ಪತ್ನಿ ಕೃತಿಯಲ್ಲಿ ಪಂಚಜನನೆಂಬ ಪುತ್ರನನ್ನು ಪಡೆದನು.

ಹ್ಲಾದನು ತನ್ನ ಪತ್ನಿ ಧಮನಿಯಲ್ಲಿ ಇಲ್ವಲ ಮತ್ತು ವಾತಾಪಿ ಎಂಬ ಇಬ್ಬರು ರಾಕ್ಷಸರನ್ನು ಪುತ್ರರನ್ನಾಗಿ ಪಡೆದನು. ಇವರಿಬ್ಬರೂ ಮಹಾದುಷ್ಟರೂ ಬ್ರಾಹ್ಮಣಭಕ್ಷಕರೂ ಆಗಿದ್ದರು. ಇವರು ಬ್ರಾಹ್ಮಣರನ್ನು ಆಹ್ವಾನಿಸಿ ಊಟವಿಕ್ಕುತ್ತಿದ್ದರು. ವಾತಾಪಿಯು ತನ್ನ ಮಾಯೆಯಿಂದ ಕುರಿಯಾಗಲು, ಇಲ್ವಲನು ಅದನ್ನು ಕೊಂದು ಅಡುಗೆ ಮಾಡಿ ಬ್ರಾಹ್ಮಣರಿಗೆ ಆ ಮಾಂಸಾನ್ನವನ್ನರ್ಪಿಸುತ್ತಿದ್ದನು. ಅವರು ಅದನ್ನು ತಿಂದು ಮುಗಿಸಿದಾಗ, ಇಲ್ವಲನು ಕರೆಯಲು ವಾತಾಪಿಯು ಪುನಃ ಕೂಡಿಕೊಂಡು ಬ್ರಾಹ್ಮಣನ ಹೊಟ್ಟೆಯನ್ನು ಸೀಳಿಕೊಂಡು ಬರುತ್ತಿದ್ದನು! ಆಗ ಇಬ್ಬರೂ ಆ ಬ್ರಾಹ್ಮಣನನ್ನು ತಿನ್ನುತ್ತಿದ್ದರು! ಈ ಮರ್ಮವನ್ನರಿತ ಅಗಸ್ತ್ಯರು ಅವರ ಮನೆಗೆ ಬರಲು, ಆ ರಾಕ್ಷಸರು ಅವರಿಗೂ ಹಾಗೆ ಮಾಡಲೆತ್ನಿಸಿದರು! ಆದರೆ ಭೋಜನ ಮುಗಿಯುತ್ತಿದ್ದಂತೆ, ಮಹಾಮಹಿಮರಾದ ಅಗಸ್ತ್ಯರು, ವಾತಾಪಿಜೀರ್ಣೋಭವ! ಎಂದು ಹೇಳಿ ತಮ್ಮ ಹೊಟ್ಟೆಯನ್ನು ನೀವಿಕೊಳ್ಳಲು ವಾತಾಪಿಯು ಒಳಗೇ ಜೀರ್ಣವಾಗಿ ಹೋದನು ಇಲ್ವಲನು ಎಷ್ಟು ಕೂಗಿದರೂ ಹೊರಬರಲಿಲ್ಲ ! ಕ್ರುದ್ಧನಾದ ಇಲ್ವಲನು ಅವರ ಮೇಲೆ ಬೀಳಲು, ತಮ್ಮ ಹುಂಕಾರದಿಂದಲೇ ಅವನನ್ನೂ ಸಂಹರಿಸಿದರು.

ಅನುಹ್ಲಾದನು ಸೂರ್ಯೆಯೆಂಬ ತನ್ನ ಪತ್ನಿಯಲ್ಲಿ ಬಾಷ್ಕಲ ಮತ್ತು ಮಹಿಷರೆಂಬ ಪುತ್ರರನ್ನು ಪಡೆದನು.

ಪ್ರಹ್ಲಾದನು ವಿರೋಚನನೆಂಬ ಒಬ್ಬ ಪುತ್ರನನ್ನು ಪಡೆದನು. ವಿರೋಚನನಿಗೆ ಬಲಿಯು ಮಗನಾಗಿ ಜನಿಸಿದನು. ಮೂರು ಲೋಕಗಳನ್ನೂ ತನ್ನ ಬಲಪರಾಕ್ರಮಗಳಿಂದ ವಶಪಡಿಸಿಕೊಂಡು ವಿಶ್ವಜಿತ್‌ ಯಾಗವನ್ನಾಚರಿಸಿದ ಅವನು ವಿಷ್ಣು ಭಕ್ತನೂ ಆಗಿದ್ದನು. ಅವನಿಂದ ಉಪಾಯವಾಗಿ ಇಂದ್ರನ ಸ್ವರ್ಗವನ್ನು ಮರಳಿ ಪಡೆಯಲು ವಿಷ್ಣುವು ವಾಮನಾವತಾರವನ್ನೆತ್ತಿದನು.

ಬಲಿಚಕ್ರವರ್ತಿಯು ತನ್ನ ಪತ್ನಿ ಅಶನೆಯಲ್ಲಿ ಬಾಣನಿಂದ ಮೊದಲ್ಗೊಂಡು ನೂರು ಪುತ್ರರನ್ನು ಪಡೆದನು. ಬಾಣಾಸುರನು ಸಹಸ್ರಬಾಹುಗಳನ್ನು ಪಡೆದಿದ್ದು ಪರಶಿವನ ಪರಮಭಕ್ತನಾದನು. ಅವನ ಮಗಳಾದ ಉಷೆಯೂ ಶ್ರೀ ಕೃಷ್ಣನ ಮೊಮ್ಮಗನಾದ ಅನಿರುದ್ಧನೂ ಪರಸ್ಪರ ರಹಸ್ಯದಲ್ಲಿ ಪ್ರೇಮಿಸುತ್ತಿರಲು, ಇದನ್ನು ತಿಳಿದು ಕ್ರುದ್ಧನಾದ ಅವನು ಅನಿರುದ್ಧನನ್ನು ಸೆರೆಯಲ್ಲಿಟ್ಟನು. ಇದರಿಂದ ಅವನು ಶ್ರೀಕೃಷ್ಣನೊಡನೆ ಯುದ್ಧ ಮಾಡುವಂತಾಗಿ ಕೃಷ್ಣನಿಂದ ಪರಾಭವಗೊಂಡನು. ಅನಂತರ ಅವನು ತನ್ನ ಮಗಳ ಮದುವೆಯನ್ನು ಅನಿರುದ್ಧನೊಂದಿಗೆ ನೆರವೇರಿಸಿ ಶಿವಗಣರಲ್ಲಿ ಸೇರಿಹೋದನು.

ದಿತಿಯ ಪರಾಕ್ರಮಿ ಪುತ್ರರಾದ ಹಿರಣ್ಯಾಕ್ಷ, ಹಿರಣ್ಯಕಶಿಪುಗಳು ಹರಿದ್ವೇಷಿಗಳಾಗಿ ಮೂರು ಲೋಕಗಳನ್ನು ಪೀಡಿಸಿ ಹರಿಯಿಂದ ಹತರಾದರು. ಇದಕ್ಕೆ ಪ್ರೇರಣೆ ಇಂದ್ರನೆಂದು ಬಗೆದು ದಿತಿಯು ಅವನ ಅಂತ್ಯಕ್ಕಾಗಿ ವ್ರತವಾಚರಿಸಿ ಸಂತಾನ ಪಡೆದಳು.ಆದರೆ ಅವಳಿಗೆ ನಲವತ್ತೊಂಬತ್ತು ಪುತ್ರರು ಜನಿಸಿ ಮರುತ್ತರೆಂಬ ಹೆಸರಿನ ದೇವತೆಗಳೇ ಆದರು.

ಹೀಗೆ ದಕ್ಷಪುತ್ರಿಯರು ಕಶ್ಯಪರೇ ಮೊದಲಾದ ಪ್ರಜಾಪತಿಗಳಿಂದ ವಿವಿಧ ಸಂತಾನಗಳನ್ನು ಪಡೆದರು. ಅವರಿಂದ ಈ ವಿಶ್ವವೇ ತುಂಬಿಹೋಯಿತು. ದಕ್ಷನ ಆಸೆಯೂ ನೆರವೇರಿತು.

ಈ ಲೇಖನ ಶೇರ್ ಮಾಡಿ