ನೀರಿನಿಂದ ಹೊರಕ್ಕೆ ಬಂದ ಮೀನು

ನೀವು ನಿಮ್ಮ ಸಹಜ ನೆಲೆಯಿಂದ ಹೊರಬಂದಾಗ ಯಾವುದೂ ನಿಮಗೆ ತೃಪ್ತಿ ನೀಡುವುದಿಲ್ಲ.

ಆಂಗ್ಲ ಮೂಲ: ಬ್ಯಾಕ್‌ ಟು ಗಾಡ್‌ಹೆಡ್‌

ಫ್ರೆಡ್ರಿಕ್‌ ಜೆ. ಫಿಶ್‌ ವರ್ಷಾಂತರಗಳಿಂದ ಮಲಿಬು ಆಚೆಗೆ, ಪೆಸಿಫಿಕ್‌ ಸಾಗರದ ಅಲೆಗಳ ಅಡಿಯಲ್ಲಿ ತೀರಾ ಸಾಮಾನ್ಯವಾದ ಜೀವನವನ್ನು ನಡೆಸುತ್ತಿದ್ದ. ಆದರೆ ಒಂದು ದಿನ ಸಾಗರದ ದಂಡೆಯ ಮೇಲಿನ ದೃಶ್ಯವು ಅವನ ಜೀವನ ಮಾರ್ಗವನ್ನು ಬದಲಿಸುವಂತೆ ಮಾಡಿತು. ಅಲ್ಲಿ ಅವನು ಕಂಡಿದ್ದೇನು? ಈಜುರೆಕ್ಕೆ ಇಲ್ಲದ ಜೀವಿಯೊಂದು (ಪ್ರಾಣಿ) ತುಂಬ ಖುಷಿಯಿಂದ ಆಡುತ್ತಿರುವಂತೆ ಕಂಡಿತು. ತಾನೂ ಹಾಗೆ ಮಾಡಬಾರದೇಕೆ ಎಂದುಕೊಂಡ ಆ ಮೀನು ಅಲೆಯ ಮೇಲೆ ಸವಾರಿ ಮಾಡುತ್ತ ಬಿಸಿಲ ಮರಳಿನ ಮೇಲೆ ಧುಮುಕಿತು. ಅತಿ ಶೀಘ್ರದಲ್ಲಿ ಅದು ಸಮುದ್ರ ದಂಡೆಯ ಕುರ್ಚಿ, ಎಫ್‌ಎಂ ರೇಡಿಯೋ, ತಂಪು ಪಾನೀಯ, ಬಿಸಿಲಿನ ಕನ್ನಡಕ ಇವೆಲ್ಲವನ್ನೂ ಆನಂದಿಸಲು ನೆಲೆಯೂರಿತು. ಆದರೆ ಏನೋ ತಪ್ಪಾಗಿದೆ ಎಂದು ಅದಕ್ಕೆ ಅನ್ನಿಸಿತು. ಕ್ರಮೇಣ ಅಸೌಖ್ಯ ಭಾವನೆಯು ಗಾಬರಿ ಮೂಡಿಸಿತು. ಕೊನೆಗೆ, ಉಸಿರಾಡುವುದೂ ಕಷ್ಟವಾಗಿ ಅದು “ನಾನು ನನ್ನ ನೆಲೆಯಿಂದ ಹೊರಬಂದಿದ್ದೇನೆ!” ಎನ್ನುವುದನ್ನು ಅರಿತುಕೊಂಡಿತು.

ಪುರಾತನ ಭಾರತದ ಋಷಿಗಳ ಪ್ರಕಾರ, ನಾವೆಲ್ಲರೂ ನೆಲೆ ತಪ್ಪಿದ್ದೇವೆ. ಮೂಲತಃ ನಾವೆಲ್ಲರೂ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಪ್ರೀತಿಯ ಸೇವೆ ಸಲ್ಲಿಸುತ್ತ ಆಧ್ಯಾತ್ಮಿಕ ಲೋಕದಲ್ಲಿ ಆನಂದದಿಂದ ಇದ್ದೆವು. ಈ ಭೌತಿಕ ಲೋಕವು ನಮ್ಮ ನಿಜವಾದ ಮನೆಯಲ್ಲವಾದುದರಿಂದ ಎಷ್ಟೇ ಪ್ರಮಾಣದ ಲೌಕಿಕ ಸುಖವು ನಮಗೆ ತೃಪ್ತಿಯನ್ನು ನೀಡುವುದಿಲ್ಲ.

ಜನರು ಯಾವಾಗಲೂ ಕೇಳುತ್ತಾರೆ, ನಾವು ಅಷ್ಟು ಆನಂದವಾಗಿದ್ದರೆ ಆಧ್ಯಾತ್ಮಿಕ ಲೋಕವನ್ನು ತ್ಯಜಿಸಿದ್ದೇಕೆ? ದೇವೋತ್ತಮನಿಂದ ದೂರದಲ್ಲಿ ಇನ್ನೂ ಹೆಚ್ಚಿನ ಸುಖವನ್ನು ಅನುಭವಿಸುತ್ತೇವೆ ಎಂದು ನಾವು ತಪ್ಪಾಗಿ ಭಾವಿಸಿದೆವು. ಆಧ್ಯಾತ್ಮಿಕ ಲೋಕದಲ್ಲಿ ಭಗವಂತನು ಎಲ್ಲರ ಆಕರ್ಷಣೆಯ ಕೇಂದ್ರ. ಅವನಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರೂ ಸಹಕರಿಸುತ್ತಾರೆ. ಯಾವಾಗ ಜೀವಿಯು ಭಗವಂತನ ಸ್ಥಾನವನ್ನು ಹೊಂದಲು ಪ್ರಯತ್ನಿಸುವನೋ ಆಗ ಅವನು ಭೌತಿಕ ಲೋಕವನ್ನು ಪ್ರವೇಶಿಸಲೇಬೇಕಾಗುತ್ತದೆ. ಅಲ್ಲಿ ಅವನು ಪರಮ ಭೋಕ್ತನಾಗಿ ತನ್ನ ಕಲ್ಪನೆಗಳಿಂದ ಉಳಿಯಬಹುದು. ಭೌತಿಕ ಲೋಕದಲ್ಲಿ ವ್ಯಕ್ತಿಯು ಅತ್ಯುತ್ತಮ ಜನರೊಂದಿಗೆ ಮಿತ್ರನಾಗುತ್ತ, ಅತ್ಯಂತ ಸುಂದರ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುತ್ತ ಮತ್ತು ತನಗೂ, ತನ್ನ ಕುಟುಂಬದವರಿಗೂ ಉತ್ತಮ ಭವಿಷ್ಯದ ಭರವಸೆಗಾಗಿ ಸಾಧ್ಯವಾದುದೆಲ್ಲವನ್ನೂ ಮಾಡುತ್ತ ಸುಖವನ್ನು ಅನುಭವಿಸಲು ಪ್ರಯತ್ನಿಸುತ್ತಾನೆ. ಅವನು ತನಗೆ ಸಾಧ್ಯವಾದಷ್ಟೂ ಜಾಣ್ಮೆಯಿಂದ ಉಡುಗೆ ತೊಡುತ್ತಾನೆ, ತನಗೆ ಶಕ್ತಿ ಇದ್ದಷ್ಟೂ ಸಾಧ್ಯವಾದ ದುಬಾರಿ ಕಾರನ್ನು ಖರೀದಿಸುತ್ತಾನೆ, ವೈಭವೋಪೇತ ವಿಶ್ರಾಂತಿಧಾಮಗಳಲ್ಲಿ ರಜೆಯನ್ನು ಕಳೆಯುತ್ತಾನೆ ಮತ್ತು ಒಳ್ಳೆಯ ಪ್ರದೇಶದಲ್ಲಿ ಮನೆಯನ್ನು ಕೊಳ್ಳುತ್ತಾನೆ. ಅವನು ಅತ್ಯುತ್ತಮ ಹೊಟೇಲುಗಳಲ್ಲಿ ಊಟ ಮಾಡುತ್ತಾನೆ, ತನ್ನ ರುಚಿಗೆ ತಕ್ಕಂತಹ ಮದ್ಯವನ್ನು ಆಸ್ವಾದಿಸುತ್ತಾನೆ ಮತ್ತು ಹೊಸ ಚಲನಚಿತ್ರವನ್ನು ಮೊದಲನೆಯ ದಿನವೇ ನೋಡಲು ಹೋಗುತ್ತಾನೆ. ಆದರೆ ಈ ಲೌಕಿಕ ಅಂಶಗಳು ಆತ್ಮದ ಹಂಬಲವನ್ನು ತೃಪ್ತಿಪಡಿಸುವುದಿಲ್ಲ.

ಹೆನ್ರಿ ಫೋರ್ಡ್‌ ಅವರ ಮರಿ ಮಗ ಮತ್ತು ಈಗ ಇಸ್ಕಾನಿನ ಸದಸ್ಯನಾಗಿರುವ ಆಲರ್ಡ್‌ ಫೋರ್ಡ್‌ (ಅಂಬರೀಷ ದಾಸ) ಇತ್ತೀಚಿನ ಸಂದರ್ಶನದಲ್ಲಿ ಸುಖವನ್ನು ಖರೀದಿಸುವ ಪ್ರಯತ್ನದ ಹತಾಶ ಸ್ಥಿತಿಯ ಬಗೆಗೆ ಮಾತನಾಡಿದರು, “ಅತ್ಯಂತ ಶ್ರೀಮಂತ ಪರಿಸ್ಥಿತಿಯಲ್ಲಿ ಹುಟ್ಟಿ ಬೆಳೆದಿದ್ದರಿಂದಲೋ ಏನೋ, ಸಂಪತ್ತು ಮಾತ್ರವೇ ಮನುಷ್ಯನಿಗೆ ಸುಖವನ್ನು ತಂದುಕೊಡುವುದಿಲ್ಲ ಮತ್ತು ಒಳ್ಳೆಯ `ವಸ್ತು’ಗಳೂ ಸೇರಿದಂತೆ ಜಗತ್ತಿನ ಎಲ್ಲವೂ ತಾತ್ಕಾಲಿಕ ಎನ್ನುವುದನ್ನು ನಾನು ಚಿಕ್ಕ ವಯಸ್ಸಿನಲ್ಲಿಯೇ ಕಂಡುಕೊಂಡೆ.”

ಕೃಷ್ಣನ ಭಕ್ತರು ಲೌಕಿಕ ಸುಖವನ್ನು ತಿರಸ್ಕರಿಸುವುದರಿಂದ ಅವರು ನೀರಸ ಜೀವನವನ್ನು ನಡೆಸಬೇಕು ಎಂದು ಕೆಲವು ಬಾರಿ ಜನರು ಭಾವಿಸುತ್ತಾರೆ. ವಾಸ್ತವವಾಗಿ, ಅಲೌಕಿಕವಾದಿಗಳೇ ಆನಂದದ, ಸುಖದ ಅತ್ಯಂತ ವಿವೇಚನೆಯ ಸೂಕ್ಷ್ಮ ವಿಮರ್ಶಕರು.

ಸ್ವತಃ ಸುಖಿಸುವ ಬಗೆಗೆ ಶ್ರದ್ಧೆ ಉಳ್ಳವರು ಸಹಜವಾಗಿ ಕೀಳು ಮಟ್ಟದ ಆನಂದಗಳನ್ನು ತಿರಸ್ಕರಿಸುತ್ತಾರೆ ಮತ್ತು ಮೇಲ್ಮಟ್ಟದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ನಿಜವಾಗಿ ಹೇಳಬೇಕೆಂದರೆ, ಅವನು ಸಾಧ್ಯವಾದಷ್ಟೂ ಉನ್ನತ ಆನಂದವನ್ನು ಕಾಣಲು ಆಸಕ್ತಿಹೊಂದಬೇಕು. ಕೊನೆಯೆ ಇಲ್ಲದ ಆನಂದವು ಅತ್ಯಂತ ಉನ್ನತ ಮಟ್ಟದ್ದು. ಅಲ್ಲದೆ, ಶುದ್ಧ ಆನಂದವು ಯಾವುದಾದರೂ ರೀತಿಯ ಅಹಿತಕರವಾದುದನ್ನು ಮಿಶ್ರಣ ಮಾಡಿರುವ ಆನಂದಕ್ಕಿಂತ ಮೆಲ್ಮಟ್ಟದ್ದು. ಅಂತಿಮವಾಗಿ, ಸ್ಥಿರವಾಗಿರುವ ಅಥವಾ ಇಳಿಮುಖಗೊಳ್ಳುವ ಆನಂದಕ್ಕಿಂತ ಸತತವಾಗಿ ಪ್ರಗತಿಹೊಂದುವ ಆನಂದವು ಉನ್ನತ ಮಟ್ಟವಾದುದು.

ಈ ಗುಣಮಟ್ಟವನ್ನು ಬಳಸಿಕೊಂಡು, ಲೌಕಿಕ ವಸ್ತುವಿನಿಂದ ಪಡೆಯುವ ಯಾವುದೇ ರೀತಿಯ ಆನಂದವು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಸೇವೆ ಸಲ್ಲಿಸುವುದರಿಂದ ಪಡೆಯುವ ಆನಂದಕ್ಕಿಂತ ಕೆಳಮಟ್ಟದ್ದು ಎನ್ನುವುದನ್ನು ನಾವು ಕಾಣಬಹುದು, ಈ ಭೌತಿಕ ಲೋಕದಲ್ಲಿ ನಾವು ಆನಂದಿಸುವ ಯಾವುದೇ ವ್ಯಕ್ತಿ ಅಥವಾ ವಸ್ತು ಕಾಲದ ಪ್ರಭಾವದಿಂದ ಅಂತಿಮವಾಗಿ ನಾಶಗೊಳ್ಳುತ್ತದೆ. ಹಾಗೆಯೇ ನಾವು ಲೌಕಿಕ ವಸ್ತುಗಳನ್ನು ಆನಂದಿಸಲು ಯತ್ನಿಸುವ ಈ ದೇಹವೂ ನಾಶವಾಗುತ್ತದೆ. ಆದರೆ ಭಗವಂತ ಮತ್ತು ಆತ್ಮ ಎರಡೂ ಕೂಡ ಶಾಶ್ವತವಾಗಿರುವುದರಿಂದ ಕೃಷ್ಣನಿಗೆ ಸಲ್ಲಿಸುವ ಸೇವೆ ನೀಡುವ ಆನಂದವೂ ಶಾಶ್ವತ.

ಶಾಶ್ವತ ಆನಂದ ಸಾಗರ

ಇನ್ನೂ ಹೇಳಬೇಕೆಂದರೆ, ಲೌಕಿಕ ವಸ್ತುಗಳಿಂದ ಮತ್ತು ಬಾಂಧವ್ಯಗಳಿಂದ ಪಡೆಯುವ ಆನಂದವು ಯಾವಾಗಲೂ ನೋವು ಮಿಶ್ರಿತ. ಉದಾಹರಣೆಗೆ, ಸ್ತ್ರೀ ಪುರುಷರ ನಡುವಣ ಲೈಂಗಿಕ ಸಂಬಂಧದಲ್ಲಿ ಯಾವುದೋ ಸುಖ, ಆನಂದವಿರುತ್ತದೆ. ಆದರೆ ಅದರೊಂದಿಗೆ ಮದುವೆ, ವಿಚ್ಛೇದನ, ಅಸೂಯೆ, ಗರ್ಭಧಾರಣೆ, ಗರ್ಭಪಾತ, ಗುಹ್ಯರೋಗ, ವ್ಯಭಿಚಾರದಂತಹ ಹೊರೆ ಮತ್ತು ಕಷ್ಟಗಳು ಬರುತ್ತವೆ. ಆದರೆ ಕೃಷ್ಣನೊಂದಿಗೆ ಆತ್ಮದ ಶುದ್ಧ ಆಧ್ಯಾತ್ಮಿಕ ಬಾಂಧವ್ಯವು ಪರಿಶುದ್ಧವಾದ ಆನಂದವನ್ನು ನೀಡುತ್ತದೆ. ಅಪೂರ್ವ ಕೃತಿ ಭಕ್ತಿ ರಸಾಮೃತ ಸಿಂಧುವಿನ ಸಂಗ್ರಹ ರೂಪ ಭಕ್ತಿ ರಸಾಮೃತ ಸಿಂಧುವಿನಲ್ಲಿ ಶ್ರೀಲ ಪ್ರಭುಪಾದರು ಭಗವಂತನ ಪ್ರೇಮವನ್ನು ಪಡೆದ ವ್ಯಕ್ತಿಯ ಸ್ಥಿತಿಯನ್ನು ವರ್ಣಿಸುತ್ತಾರೆ, “ಆ ಸಮಯದಲ್ಲಿ ಅವನ ಹೃದಯವು ಸೂರ್ಯನಂತೆ ಬೆಳಗುತ್ತದೆ ಮತ್ತು ಸೂರ್ಯನ ಪ್ರಕಾಶಕ್ಕಿಂತ ಹೆಚ್ಚು ಭವ್ಯವಾದ ಆನಂದಪರವಶತೆಯು ಅವನ ಶುದ್ಧ ಹೃದಯದಿಂದ ಹರಡಿರುತ್ತದೆ.”

ಅಂತಿಮವಾಗಿ ಹೇಳಬೇಕೆಂದರೆ, ಲೌಕಿಕ ಪರಿಸ್ಥಿತಿಯನ್ನು ಆನಂದಿಸುವ ಪ್ರಯತ್ನವು ಅನಿವಾರ್ಯವಾಗಿ ಅವರೋಹಣ ಫಲವನ್ನು ನೀಡುತ್ತದೆ. ಮೊದಲ ಐಸ್‌ ಕ್ರೀಂ ಕೋನ್‌ ಅತ್ಯಂತ ಸ್ವಾದಿಷ್ಟವಾಗಿರುತ್ತದೆ. ಎರಡನೆಯದು ಚೆನ್ನಾಗಿರುತ್ತದೆ. ಮೂರನೆಯದನ್ನು ತಿನ್ನುವುದೇ ಕಷ್ಟವಾಗುತ್ತದೆ, ನಾಲ್ಕನೆಯದು ಅಸಹ್ಯ ಉಂಟುಮಾಡುತ್ತದೆ, ಐದನೆಯದು ವಾಂತಿ ಬರುವಂತೆ ಮಾಡುತ್ತದೆ. ಆದರೆ ಕೃಷ್ಣನನ್ನು ಕುರಿತ ಪ್ರೇಮವು ಸದಾ ವಿಸ್ತರಿಸುತ್ತಿರುವ ಅಲೌಕಿಕ ಆನಂದ ಸಾಗರದಂತೆ ಮತ್ತು ಅದರ ಅಲೆಗಳಲ್ಲಿ ಸದಾ ಮುಳುಗಿರುವಂತೆ ಮಾಡೆಂದು ಭಕ್ತರು ಪ್ರಾರ್ಥಿಸುತ್ತಾರೆ.

ಆ ಆನಂದ ಸಾಗರವನ್ನು ಯಾರು ಬೇಕಾದರೂ ಪ್ರವೇಶಿಸಬಹುದು. ಹೇಗೆ? ವೈದಿಕ ಸಾಹಿತ್ಯವು ತುಂಬ ಸರಳವಾದ ವಿಧಾನವನ್ನು ಶಿಫಾರಸು ಮಾಡಿದೆ: ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಮಂತ್ರವನ್ನು ಜಪಿಸುವುದೇ ಆ ವಿಧಾನ. ಈ ಮಂತ್ರವನ್ನು ಭಗವಂತನ ಸಂಸ್ಕೃತ ನಾಮಗಳಿಂದ ರಚಿಸಲಾಗಿದೆ. ಪರಮ ಸತ್ಯನಾದ ಭಗವಂತನ ಹೆಸರು ಭಗವಂತನಿಂದ ಭಿನ್ನವಲ್ಲ ಮತ್ತು ಅವನ ಎಲ್ಲ ಅಲೌಕಿಕ ಶಕ್ತಿಗಳನ್ನು ಹೊಂದಿದೆ. ಐದು ನೂರು ವರ್ಷಗಳ ಹಿಂದೆ ಕೃಷ್ಣನು ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದನು ಮತ್ತು ಅವನ ಅನುಯಾಯಿಗಳಿಗೆ ಬೋಧಿಸಿದನು: “ಭಗವಂತನ ಪವಿತ್ರ ನಾಮದ ಜಪವು ಅಲೌಕಿಕ ಜೀವನದ ಆನಂದ ಸಾಗರವನ್ನು ವಿಸ್ತರಿಸುತ್ತದೆ.” ನಾವು ನಿಜವಾಗಿಯೂ ಅಲ್ಲಿಗೇ ಸೇರಿರುವುದು. ಲೌಕಿಕ ಅಸ್ತಿತ್ವದ ದಂಡೆಯ ಮೇಲೆ ಅಲ್ಲ.

ಈ ಲೇಖನ ಶೇರ್ ಮಾಡಿ