ನೈಜ ಭೌಗೋಳಿಕತೆಯತ್ತ ಗಮನ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಸಂಸ್ಥಾಪನಾಚಾರ್ಯ, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ, ಇಂಟರ್‌ನ್ಯಾಷನಲ್‌ ಸ್ಟೂಡೆಂಟ್‌ ಸೊಸೈಟಿ, ಬೋಸ್ಟನ್‌ನಲ್ಲಿ, 1969ರಲ್ಲಿ ನೀಡಿದ ಉಪನ್ಯಾಸ

ಹರೇಕೃಷ್ಣಾಂದೋಲನದ ಈ ಸಂಘ ಅಂತಾರಾಷ್ಟ್ರೀಯ ಸಂಘವಾಗಿದೆ. ವಿಶ್ವಸಂಸ್ಥೆಯಂತಹ ಹಲವಾರು ಅಂತಾರಾಷ್ಟ್ರೀಯ ಸಂಘಗಳಿಂದು ಅಸ್ತಿತ್ವದಲ್ಲಿವೆ. ಅಂತಾರಾಷ್ಟ್ರೀಯ ಸಂಘಗಳಿರುವುದು ಒಳ್ಳೆಯದೇ. ಆದರೆ ಇಂತಹ ಸಂಘಟನೆಗಳ ಮೂಲೋದ್ದೇಶದ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇರುವುದು ಅಗತ್ಯ.

ಕೊಳದ ಮಧ್ಯದಲ್ಲೊಂದು ಕಲ್ಲನ್ನು ಒಗೆದರೆ, ವೃತ್ತವು ಮೂಡಿ ಅದು ತೀರದ ಸೀಮೆಯವರೆಗೂ ಹಿಗ್ಗುತ್ತ ಹೋಗುತ್ತದೆ. ಹಾಗೆಯೇ ರೇಡಿಯೋದ ಅಲೆಗಳು ವೃತ್ತಾಕಾರದಲ್ಲಿ ಹಿಗ್ಗುತ್ತವೆ, ಮತ್ತು ನಿಮ್ಮ ರೇಡಿಯೋದ ಮೂಲಕ ಆ ಕಂಪನವನ್ನು ಹಿಡಿದುಕೊಂಡಾಗ ಅದರೊಳಗಿನ ಸಂದೇಶ ನಿಮ್ಮ ಕಿವಿ ತಲಪುತ್ತದೆ. ಇದೇ ಬಗೆಯಲ್ಲಿ ನಮ್ಮ ಪ್ರೇಮ ಭಾವವೂ ವಿಸ್ತರಿಸಬಲ್ಲದು.

ನಮ್ಮ ಜೀವನದ ಆರಂಭದಲ್ಲಿ ನಾವು ಸುಮ್ಮನೆ ತಿನ್ನುತ್ತಿರಲು ಬಯಸುತ್ತೇವೆ. ಮಗುವಿನ ಕೈಗೆ ಏನು ಸಿಗುತ್ತದೋ ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುತ್ತದೆ. ಅದೊಂದೇ ಮಗುವಿನ ಆಸಕ್ತಿ. ಮುಂದೆ, ಮಗು ಬೆಳೆದಂತೆಲ್ಲ ಅದು ತನ್ನ ಸಹೋದರರೊಂದಿಗೆ ಹಂಚಿಕೊಳ್ಳತೊಡಗುತ್ತದೆ; “ಸರಿ ನೀನೂ ಸ್ವಲ್ಪ ತೆಗೆದುಕೋ” ಇದು ಸಂಬಂಧದ ಆಪ್ತತೆಯನ್ನು ಹೆಚ್ಚಿಸುತ್ತದೆ. ಮುಂದೆ ಅದು ಬೆಳೆದಂತೆಲ್ಲ ತನ್ನ ಪೋಷಕರೆಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳತೊಡಗುತ್ತದೆ. ಅನಂತರ ತನ್ನ ಸಮುದಾಯದೆಡೆಗೆ, ತನ್ನ ದೇಶದೆಡೆಗೆ, ಅಂತಿಮವಾಗಿ ಎಲ್ಲ ದೇಶಗಳೆಡೆಗೆ. ಎಲ್ಲಿಯವರೆಗೆ ಕೇಂದ್ರವು ಸರಿಯಾಗಿರದೋ – ಅದು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯವೇ ಆಗಿರಲಿ – ಅಲ್ಲಿಯವರೆಗೆ ಆ ಪ್ರೀತಿಯು ಪರಿಪೂರ್ಣವಾಗಿರದು.

ಉದಾ: ರಾಷ್ಟ್ರೀಯ ಎಂಬ ಪದದ ಅರ್ಥ “ನಿರ್ದಿಷ್ಟ ದೇಶಕ್ಕೆ ಸಂಬಂಧಪಟ್ಟಿದ್ದು,” ಮತ್ತೊಬ್ಬ ಅಮೆರಿಕನ್ನನ ಬಗ್ಗೆ ನೀವು ಭಾವಿಸುವಂಥದ್ದು. ನೀವು ನಿಮ್ಮ ದೇಶಬಾಂಧವರಿಗಾಗಿ ಪ್ರಾಣವನ್ನು ಅರ್ಪಿಸಲು ತಯಾರಿರುತ್ತೀರಿ. ಆದರೆ ಅಲ್ಲೊಂದು ತೊಡಕಿದೆ: ರಾಷ್ಟ್ರೀಯ ಎಂಬುದರ ಅರ್ಥ “ಒಂದು ನಿರ್ದಿಷ್ಟ ರಾಷ್ಟ್ರಕ್ಕೆ ಸೇರಿದ್ದು” ಎಂದಾದರೆ, ಅಮೆರಿಕದಲ್ಲಿ ಹುಟ್ಟಿದ ಜೀವ ಜಂತುಗಳೆಲ್ಲವೂ `ಅಮೆರಿಕನ್‌’ ಆಗಬೇಕಲ್ಲವೇ? ಸಮಸ್ಯೆ ನಾವು ನಮ್ಮ ಭಾವನೆಗಳನ್ನು ಮಾನವ ಸಮಾಜದಾಚೆಗೆ ವಿಸ್ತರಿಸಿಕೊಳ್ಳುತ್ತಿಲ್ಲ. ಪ್ರಾಣಿಗಳನ್ನು `ನಮ್ಮ ರಾಷ್ಟ್ರದ್ದು’ ಎಂದು ನಾವು ಭಾವಿಸುವುದಿಲ್ಲವಾದ್ದರಿಂದ ಅವನ್ನು ಕಸಾಯಿಖಾನೆಗೆ ಕಳಿಸುತ್ತೇವೆ.

ನಮ್ಮ ರಾಷ್ಟ್ರಭಾವ ಅಥವಾ ಅಂತಾರಾಷ್ಟ್ರೀಯ ಭಾವಗಳು ನಿರ್ದಿಷ್ಟ ವಸ್ತುವಿಷಯಕ್ಕೆ ಹೊಂದಿಕೊಂಡಿದ್ದಾಗಿರುವುದಿಲ್ಲ. ಕೇಂದ್ರವು ಸರಿಯಾಗಿದ್ದರೆ, ನೀವು ಒಂದರ ಮೇಲೊಂದು ಬರದಂತೆ ಎಷ್ಟು ವೃತ್ತಗಳನ್ನಾದರೂ ಎಳೆಯಬಹುದು. ಅವು ಸುಮ್ಮನೆ ಬೆಳೆಯುತ್ತ, ಬೆಳೆಯುತ್ತ, ಬೆಳೆಯುತ್ತ ಹೋಗುವವು. ಕೇಂದ್ರವು ಸರಿಯಾಗಿದ್ದರೆ, ಅವು ಒಂದನ್ನೊಂದು ಛೇದಿಸಿ ಹಾದು ಹೋಗುವುದಿಲ್ಲ. ದುರದೃಷ್ಟವಶಾತ್‌, ಪ್ರತಿಯೊಬ್ಬರೂ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಭಾವನೆ ಹೊಂದಿರುತ್ತಾರೆ, ಆದರೆ ಕೇಂದ್ರ ತಪ್ಪುತ್ತಿದೆ. ಆದ್ದರಿಂದ ನಿಮ್ಮ ಅಂತಾರಾಷ್ಟ್ರೀಯ ಭಾವನೆ ಮತ್ತು ನನ್ನ ಅಂತಾರಾಷ್ಟ್ರೀಯ ಭಾವನೆಗಳು ಒಂದರ ಮೇಲೊಂದು ಹಾದುಹೋಗುತ್ತಿದೆ ಮತ್ತು ಗೋಜಲಾಗುತ್ತಿದೆ. ಆದ್ದರಿಂದ ನಾವು ನಮ್ಮ ಪ್ರೀತಿಯ ಭಾವನೆಗಳಿಗೆ ಸೂಕ್ತವಾದೊಂದು ಕೇಂದ್ರವನ್ನು ಕಂಡುಕೊಳ್ಳಬೇಕಿದೆ. ಅನಂತರ ನೀವು ನಿಮ್ಮ ಭಾವನೆಗಳ ವೃತ್ತವನ್ನು ವಿಸ್ತರಿಸಿಕೊಳ್ಳಬಹುದು, ಮತ್ತದು ಇನ್ನೊಬ್ಬರ ವೃತ್ತದೊಂದಿಗೆ ತಗಲುವುದಿಲ್ಲ. ಮತ್ತು ಆ ಕೇಂದ್ರನೇ ಕೃಷ್ಣ.

ನಮ್ಮ ಸಂಘ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘವು ಎಲ್ಲ ದೇಶಗಳ ಜನರಿಗೆ ಕೃಷ್ಣನನ್ನು ತಮ್ಮ ಪ್ರೇಮದ ಕೇಂದ್ರವನ್ನಾಗಿಸಿಕೊಳ್ಳುವುದು ಹೇಗೆಂದು ಬೋಧಿಸುತ್ತಿದೆ. ನಾವು ಜನರಿಗೆ ಮಹಾತ್ಮರಾಗುವುದು ಹೇಗೆಂದು ಬೋಧಿಸುತ್ತಿದ್ದೇವೆ. ನಮ್ಮ ಆತ್ಮವನ್ನು ಹಿಗ್ಗಿಸಿಕೊಂಡಾಗ ನಾವು ಮಹಾತ್ಮರಾಗುತ್ತೇವೆ.

ಭಗವದ್ಗೀತೆ (7.19)ಯು ತನ್ನ ಭಾವನೆಯನ್ನು ವಿಸ್ತರಿಸಿಕೊಳ್ಳುವ ವ್ಯಕ್ತಿಯ ಬಗ್ಗೆ ಹೀಗೆ ಹೇಳುತ್ತದೆ:

ಬಹೂನಾಂ ಜನ್ಮನಾಮನ್ತೇ ಜ್ಞಾನವಾನ್ಮಾಂ ಪ್ರಪದ್ಯತೇ ।

ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ॥19॥

ಈ ಶ್ಲೋಕದ ಮುಖ್ಯ ಅರ್ಥ, ಜೀವಿಯೊಂದು ಹಲವಾರು ಜನ್ಮಗಳ ಅನಂತರವಷ್ಟೆ ಮಹಾತ್ಮನಾಗಲು ಸಾಧ್ಯ. ಆತ್ಮವು ಒಂದರ ಅನಂತರ ಮತ್ತೊಂದರಂತೆ ಹಲವು ದೇಹಗಳನ್ನು ಬದಲಿಸುತ್ತ ವಲಸೆ ಹೋಗುತ್ತಿರುತ್ತದೆ. ಒಟ್ಟು 84,00,000 ಬಗೆಯ ಜೀವ ಸಂಕುಲಗಳಿದ್ದು, ನಾವು ಈ ಮಾನವ ದೇಹ ಪಡೆಯುವವರೆಗೂ ಅವೆಲ್ಲವನ್ನು ಹಾದು ವಿಕಸಿತರಾಗಿ ಬಂದಿದ್ದೇವೆ. ಆಗ ಮಾತ್ರ ನಾವು ಮಹಾತ್ಮರಾಗಲು ಸಾಧ್ಯ. ಈ ಕಾರಣದಿಂದಲೇ ಕೃಷ್ಣನು `ಬಹೂನಾಮ್‌ ಜನ್ಮನಾಮ್‌ ಅಂತೇ’ ಎಂದಿದ್ದಾನೆ.

ಭಾಗವತದಲ್ಲಿ ಇದೇ ಬಗೆಯ ಮತ್ತೊಂದು ಶ್ಲೋಕವಿದೆ: ಲಬ್ಧ್ವಾ ಸುದುರ್ಲಭಮ್‌ ಇದಮ್‌ ಬಹುಸಂಭವಾನ್ತೇ – “ಹಲವಾರು ಜನ್ಮಗಳ ಅನಂತರ ನೀನು ಮಾನವ ದೇಹವನ್ನು ಸಾಧಿಸಿರುವೆ. ಇದನ್ನು ಪಡೆಯುವುದು ಅತ್ಯಂತ ಕಷ್ಟಕರ.” ಈ ಮಾನವ ಜನ್ಮವು ಅಗ್ಗವೇನಿಲ್ಲ. ನಾಯಿ, ಬೆಕ್ಕು ಮತ್ತಿತರ ಪ್ರಾಣಿಗಳ ಜನ್ಮ ಅಗ್ಗವಿರಬಹುದು, ಆದರೆ ಈ ಮಾನವ ಜನ್ಮವಲ್ಲ. ಆದ್ದರಿಂದ ಭಾಗವತ ಹಾಗೂ ಭಗವದ್ಗೀತೆಗಳು ಒಂದೇ ಸಂಗತಿಯನ್ನು ಹೇಳುತ್ತವೆ. ಎಲ್ಲ ವೈದಿಕ ಸಾಹಿತ್ಯಗಳೂ ಮತ್ತೊಂದನ್ನು ಪುಷ್ಟೀಕರಿಸುತ್ತವೆ ಮತ್ತು ಅವನ್ನು ಅರ್ಥೈಸಿಕೊಂಡಿರುವ ವ್ಯಕ್ತಿಗೆ ಅವು ಗೊಂದಲವೆನಿಸುವುದಿಲ್ಲ.

ಈ ಮಾನವ ಶರೀರವು ಮಾನವ ಸ್ವರೂಪವಲ್ಲದ ಇತರ ಬೇರೆ ಬೇರೆ ಜನ್ಮಗಳನ್ನು ಹಾದು ಪಡೆದಿದೆ. ಆದರೆ ಈ ಮಾನವ ಸ್ವರೂಪದಲ್ಲಿ ಕೂಡ, ಹಲವು ಜನ್ಮಗಳು ಕೇಂದ್ರ ಬಿಂದುವಿನ ಅರಿವನ್ನು ಹೊಂದಲು ಬೇಕಾಗುತ್ತವೆ. ವ್ಯಕ್ತಿಯೊಬ್ಬ ನಿಜವಾಗಿಯೂ ಆಧ್ಯಾತ್ಮಿಕ ಜ್ಞಾನದ ಉನ್ನತವೇದಿಕೆಯಾದ `ಜ್ಞಾನವಾನ್‌’ ಮಟ್ಟಕ್ಕೆ ಏರುತ್ತಾನೆ – ಇದರ ಅರ್ಥ “ನೈಜ ಜ್ಞಾನವನ್ನು ಹೊಂದಿರುವನು” ಎಂದು. ಅನಂತರ ಕೃಷ್ಣನು ಮಾಮ್‌ ಪ್ರಪದ್ಯತೇ ಎನ್ನುವನು. ಅವನು, ಕೃಷ್ಣ ಅಥವಾ ಭಗವಂತನಿಗೆ ಶರಣಾಗುತ್ತಾನೆ.

ಈಗ, ಯಾಕೆ ಜ್ಞಾನಿಯಾದ ಮನುಷ್ಯನು ಕೃಷ್ಣನಿಗೆ ಶರಣಾಗಬೇಕು? `ವಾಸುದೇವಃ ಸರ್ವಮ್‌ ಇತಿ’ ಏಕೆಂದರೆ ಅವನಿಗೆ ವಾಸುದೇವ, ಕೃಷ್ಣನೇ ಎಲ್ಲವೂ ಆಗಿರುವನೆಂಬ ಅರಿವು ಇರುತ್ತದೆ. ಅವನೇ ಎಲ್ಲ ಪ್ರೇಮದ ಭಾವಗಳ ಕೇಂದ್ರ ಬಿಂದು ಎಂಬುದರ ಅರಿವಿರುತ್ತದೆ. ಅನಂತರ, ಸ ಮಹಾತ್ಮಾ ಸುದುರ್ಲಭಃ – ಇಲ್ಲಿ `ಮಹಾತ್ಮ’ ಎಂಬ ಪದ ಬಳಕೆಯಾಗಿದೆ. ಬಹಳ ಜನ್ಮಗಳ ಅನಂತರ ಯಾವ ವ್ಯಕ್ತಿಯು ತನ್ನ ಪ್ರಜ್ಞೆಯನ್ನು ಭಗವತ್ಪ್ರೇಮದ ಕೇಂದ್ರದೆಡೆಗೆ ವಿಸ್ತರಿಸಿಕೊಳ್ಳುವನೋ ಅವನು ಮಹಾತ್ಮ. ಭಗವಂತ ಪರಮಶ್ರೇಷ್ಠನು. ಅವನ ಭಕ್ತ ಕೂಡ ಶ್ರೇಷ್ಠ. ಆದರೆ ಕೃಷ್ಣ ಹೇಳುವನು, ಸ ಮಹಾತ್ಮಾ ಸುದುರ್ಲಭಃ ಎಂದು. ಆ ಬಗೆಯ ಉನ್ನತಾತ್ಮರು ಸಿಗುವುದು ಅತ್ಯಂತ ಅಪರೂಪ. ಮಹಾತ್ಮರ ಕುರಿತಾದ ಈ ನಿರ್ವಚನೆಯು ಭಗವದ್ಗೀತೆಯಲ್ಲಿ ನೀಡಲಾಗಿದೆ.

ಈಗ ನಾವು ಇತರ ವಸ್ತುಗಳೆಡೆಗೆ ಪ್ರೇಮಭಾವವನ್ನು ವಿಸ್ತರಿಸಿಕೊಂಡಿದ್ದೇವೆ. ನಾವು ನಮ್ಮ ದೇಶವನ್ನು, ಸಮುದಾಯವನ್ನು, ಕುಟುಂಬವನ್ನು, ನಮ್ಮ ನಾಯಿ ಬೆಕ್ಕುಗಳನ್ನೂ ಪ್ರೀತಿಸಬಹುದು. ಯಾವುದೇ ಸಂದರ್ಭದಲ್ಲೂ ನಾವು ಪ್ರೀತಿಸದೆ ಇರಲಾರೆವು, ಮತ್ತು ಅದನ್ನು ನಮ್ಮ ಜ್ಞಾನಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳುತ್ತೇವೆ. ನಮ್ಮ ಜ್ಞಾನವು ಪರಿಪೂರ್ಣವಾದಾಗ ನಾವು ಕೃಷ್ಣಪ್ರೇಮದ ಕೇಂದ್ರವನ್ನು ತಲಪುತ್ತೇವೆ. ಇದು ಪರಿಪೂರ್ಣತೆ. ಕೃಷ್ಣಪ್ರೇಮವೇ ಎಲ್ಲ ಚಟುವಟಿಕೆಗಳ, ಜೀವನದ ಗುರಿಯಾಗುವುದು.

ಭಾಗವತವು (1:2:8) ಜೀವನದ ಗುರಿ ಶ್ರೀಕೃಷ್ಣನೇ ಆಗಿರುವನೆಂದು ದೃಢಪಡಿಸುತ್ತದೆ:

ಧರ್ಮಃ ಸ್ವನುಷ್ಠಿತಃ ಪುಂಸಾಂ ವಿಷ್ವಕ್ಸೇನಕಥಾಸು ಯಃ ।

ನೋತ್ಪಾದಯೇದ್‌ ಯದಿ ರತಿಂ ಶ್ರಮ ಏವ ಹಿ ಕೇವಲಮ್‌ ॥

ಈ ಶ್ಲೋಕದ ಮೊದಲ ಪದಗಳು ಧರ್ಮಃ ಸ್ವನುಷ್ಠಿತಃ ಪುಂಸಾಮ್‌ ಇದರರ್ಥ ಪ್ರತಿಯೊಬ್ಬರೂ ತಮ್ಮ ಸ್ಥಾನಕ್ಕನುಗುಣವಾಗಿ ತಮ್ಮ ಕೆಲಸ ಮಾಡುತ್ತಿರುವರು. ಗೃಹಸ್ಥನಿಗೆ ಕೆಲವು ಕರ್ತವ್ಯಗಳಿರುವವು. ಸಂನ್ಯಾಸಿಗೆ ಕೆಲವು ಕರ್ತವ್ಯಗಳು ಹಾಗೆಯೇ ಬ್ರಹ್ಮಚಾರಿಗೂ ಕೆಲವು ಕರ್ತವ್ಯಗಳಿರುವವು. ವಿವಿಧ ರೀತಿಯ ಕೆಲಸಗಳನ್ನು ಮಾಡುವವರಿಗಾಗಿಯೇ ವಿಭಿನ್ನ ಕರ್ತವ್ಯಗಳು ನಿಗದಿಯಾಗಿರುವವು. ಆದರೆ ಭಾಗವತವು ಹೇಳುವುದು, ಯಾವ ಕೆಲಸವಾದರೂ ಅದು ಕೃಷ್ಣನೆಡೆಗೆ ಕರೆದೊಯ್ಯದಿದ್ದರೆ ಅಂತಹ ಕೆಲಸ ಬರೀ ಶ್ರಮವಷ್ಟೆ ಹೊರತು ಅದರಿಂದೇನೂ ಪ್ರಯೋಜನವಿರದು. ಆದ್ದರಿಂದ ನೀವು ಪರಿಪೂರ್ಣತೆಯ ಕೇಂದ್ರವನ್ನು ತಲಪಬೇಕೆಂದರೆ, ನೀವು ಕೃಷ್ಣನನ್ನು ಅರಿಯಲು ಮತ್ತು ಪ್ರೇಮಿಸಲು ಕಲಿಯಬೇಕು. ಅನಂತರ ನಿಮ್ಮ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಪ್ರೇಮಭಾವಗಳು ತಮ್ಮ ಸೀಮಿತವನ್ನು ದಾಟಿ ವಿಸ್ತರಿಸುವವು.

ಮನುಷ್ಯನೊಬ್ಬ ಹೇಳುವನೆಂದುಕೊಳ್ಳಿ, “ಹೌದು, ನಾನು ನನ್ನ ಪ್ರೇಮಭಾವವನ್ನು ಅತ್ಯಂತ ವಿಸ್ತಾರವಾಗಿ ಹಿಗ್ಗಿಸಿಕೊಂಡಿರುವೆ” ಎಂದು. ಸರಿ. ಆದರೆ ಅವನು ತನ್ನ ಪ್ರೇಮಭಾವ ವಿಸ್ತೃತಗೊಂಡಿರುವ ಲಕ್ಷಣಗಳನ್ನು ವ್ಯಕ್ತಪಡಿಸಬೇಕು. ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ (5.18)

ವಿದ್ಯಾವಿನಯಸಮ್ಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ।

ಶುನಿ ಚೈವ ಶ್ವಪಾಕೇ ಚ ಪಣ್ಡಿತಾಃ ಸಮದರ್ಶಿನಃ ॥

ಪರಿಪೂರ್ಣ ಜ್ಞಾನದ ಹಂತಕ್ಕೇರಿದವನು ಪಂಡಿತನೆನಿಸಿಕೊಳ್ಳುವನು. ಆತನು ಪ್ರತಿಯೊಬ್ಬರನ್ನೂ ಸಮಾನ ವೇದಿಕೆಯಲ್ಲಿ ಕಾಣಬೇಕು (ಸಮದರ್ಶಿನಃ). ಏಕೆಂದರೆ ಪಂಡಿತನ ದರ್ಶನವು ಕೇವಲ ದೇಹದಿಂದ ಗ್ರಹಿಸಲ್ಪಡುವುದಿಲ್ಲ, ಅವನು ವಿದ್ವಾಂಸ ಬ್ರಾಹ್ಮಣನನ್ನೂ ಒಂದು ನಾಯಿಯನ್ನೂ, ಒಂದು ಆನೆಯನ್ನೂ, ಅಂತ್ಯಜನನ್ನೂ ಎಲ್ಲರನ್ನೂ ಚೇತನಾತ್ಮಾವಾಗಿಯೇ ಕಾಣುವನು. ಉನ್ನತ ಕುಲದಲ್ಲಿ ಜನಿಸಿದ ಬ್ರಾಹ್ಮಣನಿಂದಾರಂಭಿಸಿ ಚಾಂಡಾಲನವರೆಗೆ ಸಮಾಜದ ಎಲ್ಲ ಸ್ತರದ ಜನಗಳನ್ನೂ ಸಮಾನವಾಗಿ ಕಾಣುವನು. ಅದು ನೈಜ ಕಲಿಕೆಯ ಹಂತವಾಗಿರುವುದು.

ನಾವು ನಮ್ಮ ಭಾವನೆಗಳನ್ನು ಸಾಮಾಜಿಕವಾಗಿ, ಕೋಮುವಾರು, ರಾಷ್ಟ್ರವಾರು, ಅಂತಾರಾಷ್ಟ್ರೀಯವಾರು, ಜಾಗತಿಕವಾರು ವಿಂಗಡಣೆಗಳಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿರುವೆವು. ಅದು – ನಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುವುದು ನಮ್ಮ ಸಹಜ ಪ್ರಕ್ರಿಯೆಯಾಗಿದೆ. ಆದರೆ, ನಾವು ನಮ್ಮ ಪ್ರಜ್ಞೆಯನ್ನು ಪರಮೋನ್ನತ ಸ್ತರಕ್ಕೆ ವಿಸ್ತರಿಸಿಕೊಳ್ಳುವುದೇ ಆದರೆ, ಅಸ್ತಿತ್ವದ ನೈಜ ಕೇಂದ್ರವನ್ನು ಅರಿತಿರಬೇಕೆಂಬುದು ನನ್ನ ಮಂಡನೆಯಾಗಿದೆ. ಆ ಕೇಂದ್ರವೇ ಕೃಷ್ಣ ಅಥವಾ ಭಗವಂತ. ಕೃಷ್ಣನೇ ಭಗವಂತ ಎಂದು ಹೇಗೆ ತಿಳಿಯುವುದು? ಕೃಷ್ಣನು ತನ್ನನ್ನೂ ತಾನು ಭಗವಂತನೆಂದು ಭಗವದ್ಗೀತೆಯಲ್ಲಿ ಘೋಷಿಸಿಕೊಂಡಿರುವನು. ಕೃಷ್ಣಪ್ರಜ್ಞಾಂದೋಲನವು ಭಗವದ್ಗೀತೆಯನ್ನು ಯಥಾರೂಪದಲ್ಲಿ ಅರ್ಥೈಸಿಕೊಳ್ಳುವ ಅಂಶದ ಮೇಲೆ ರೂಪಿತವಾಗಿದೆಯೆಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ನಾನು ಹೇಳುವುದೆಲ್ಲವೂ ಭಗವದ್ಗೀತೆಯಲ್ಲಿದೆ. ದುರದೃಷ್ಟವಶಾತ್‌, ಭಗವದ್ಗೀತೆಯು ಹಲವಾರು ವ್ಯಾಖ್ಯಾನಕಾರರಿಂದ ತಪ್ಪು ವ್ಯಾಖ್ಯೆಗೊಳಗಾಗಿದೆ. ವಾಸ್ತವದಲ್ಲಿ ಭಗವದ್ಗೀತೆಯ ತಾತ್ಪರ್ಯವು ಕೃಷ್ಣಪ್ರಜ್ಞೆಯ ಬೆಳವಣಿಗೆಗಾಗಿ ಮತ್ತು ಕೃಷ್ಣ ಪ್ರೇಮಕ್ಕಾಗಿಯೆ ಇದೆ. ನಾವು ಅದನ್ನೇ ಬೋಧಿಸಲು ಯತ್ನಿಸುತ್ತಿದ್ದೇವೆ.

ಭಗವದ್ಗೀತೆಯಲ್ಲಿ ಕೃಷ್ಣನು `ಮಹಾತ್ಮಾ’ ಪದಕ್ಕೆ ಹಲವಾರು ವಿವರಣೆಗಳನ್ನು ನೀಡಿರುವನು. ಅವನು ಹೇಳುವನು, ಮಹಾತ್ಮಾನಸ್ತು ಮಾಮ್‌ ಪಾರ್ಥದೈವೀಮ್‌ ಪ್ರಕೃತಿಮ್‌ ಆಶ್ರಿತಾಃ – ವಿದ್ವಾಂಸ ಹಾಗೂ ವಿಶಾಲಬುದ್ಧಿಯ ಮಹಾತ್ಮನು ನನ್ನ ಆಧ್ಯಾತ್ಮಿಕ ಶಕ್ತಿಯ ಆಶ್ರಯದಲ್ಲಿರುವನು. ಆತನು ಭೌತಿಕ ಶಕ್ತಿಯ ಹಿಡಿತದಲ್ಲಿರುವುದಿಲ್ಲ.

ನಾವು ಕಾಣುತ್ತಿರುವ ಪ್ರತಿಯೊಂದೂ ಭಗವಂತನ ವಿವಿಧ ಶಕ್ತಿಗಳಿಂದ ನಿರ್ಮಿತವಾಗಿದೆ. ಉಪನಿಷತ್ತುಗಳಲ್ಲಿ ಪರಾಸ್ಯ ಶಕ್ತಿರ್‌ ವಿವಿಧೈವ ಶ್ರೂಯತೇ ಎಂದು ಹೇಳಿದೆ. “ಪರಮ ಸತ್ಯವು ಹಲವು ವಿಧದ ಶಕ್ತಿಗಳನ್ನು ಹೊಂದಿದೆ. ಈ ಶಕ್ತಿಗಳು ತಾವು ಯಾಂತ್ರಿಕವಾಗಿ ಕ್ರಿಯಾಶೀಲವಾಗಿವೆಯೇನೋ ಎಂಬಂತೆ ವರ್ತಿಸುತ್ತಿರುತ್ತವೆ (ಸ್ವಭಾವಿಕೀ ಜ್ಞಾನಬಲ ಕ್ರಿಯಾಚ) ಉದಾಹರಣೆಗೆ, ನಾವೆಲ್ಲರೂ ಹೂವು ಅರಳುವುದನ್ನು ನೋಡಿದ್ದೇವೆ. ಅದು ತನ್ನಿಂದ ತಾನೇ ಅರಳಿ ಸುಂದರವಾಯಿತೇನೋ ಎಂದು ಯೋಚಿಸುತ್ತೇವೆ. ಆದರೆ, ಭಗವಂತನ ಭೌತಿಕ ಶಕ್ತಿ ಅಲ್ಲಿ ಕ್ರಿಯಾಶೀಲವಾಗಿದೆ.

ಹಾಗೆಯೇ, ಕೃಷ್ಣನು ಆಧ್ಯಾತ್ಮಿಕ ಶಕ್ತಿಯನ್ನೂ ಹೊಂದಿದ್ದಾನೆ ಮತ್ತು ವಿಶಾಲ ಬುದ್ಧಿಯ ಮಹಾತ್ಮನು ಈ ಆಧ್ಯಾತ್ಮಿಕ ಶಕ್ತಿಯ ರಕ್ಷಣೆಯಲ್ಲಿರುತ್ತಾನೆ. ಆದರೆ, ಆ ರಕ್ಷಣೆಯ ಲಕ್ಷಣಗಳು ಯಾವುವು? ಕೃಷ್ಣ ಹೇಳುವನು, ಮಾಮ್‌… ಭಜಂತಿ ಅನನ್ಯ ಮನಸಃ – ಮಹಾತ್ಮನಾದವನು ಸದಾ ನನ್ನ ಭಕ್ತಿಸೇವೆಯಲ್ಲಿ ತೊಡಗಿರುತ್ತಾನೆ. ಅದು ಮಹಾತ್ಮನ ಪ್ರಮುಖ ಲಕ್ಷಣ. ಅವನು ಸದಾ ಕೃಷ್ಣನ ಸೇವೆಯಲ್ಲಿ ತೊಡಗಿರುತ್ತಾನೆ. ಅವನು ಕುರುಡನಂತೆ ಹಾಗೆ ಮಾಡುವನೇನು? ಇಲ್ಲ. ಕೃಷ್ಣನು ಹೇಳುವನು, ಜ್ಞಾತ್ವಾ ಭೂತಾದಿಮ್‌ ಅವ್ಯಯಮ್‌ – ಅವನು ಕೃಷ್ಣನೇ ಪ್ರತಿಯೊಂದರ ಮೂಲನಾಗಿರುವೆನೆಂದು ಅರಿತಿರುತ್ತಾನೆ.

ಕೃಷ್ಣನು ಭಗವದ್ಗೀತೆಯಲ್ಲಿ ಪ್ರತಿಯೊಂದನ್ನೂ ವಿವರಿಸುತ್ತಾನೆ. ಭಗವದ್ಗೀತೆಯಲ್ಲಿ ಅಡಕವಾಗಿರುವ ಎಲ್ಲ ಜ್ಞಾನವನ್ನೂ ಯಾವುದೇ ಮೂರ್ಖ ವ್ಯಾಖ್ಯಾನವಿಲ್ಲದೆ, ಯಥಾರೂಪದಲ್ಲಿ ವಿತರಿಸಬೇಕೆಂಬುದು ನಮ್ಮ ಕೃಷ್ಣ ಪ್ರಜ್ಞಾಂದೋಲನದ ಉದ್ದೇಶ. ಇದರಿಂದ ಮಾನವ ಸಮಾಜಕ್ಕೆ ಪ್ರಯೋಜನ ಉಂಟಾಗುವುದು. ಇಂದಿನ ಸಮಾಜ ಸ್ವಸ್ಥ ಸ್ಥಿತಿಯಲ್ಲಿ ಇಲ್ಲ. ಜನರು ಒಂದು ಬಾರಿ ಭಗವದ್ಗೀತೆಯನ್ನು ಅರ್ಥೈಸಿಕೊಂಡರೆ, ಅವರು ತಮ್ಮ ಹೊರನೋಟವನ್ನು ವಿಸ್ತರಿಸಿಕೊಂಡರೆ, ಎಲ್ಲ ಬಗೆಯ – ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ ಸಮಸ್ಯೆಗಳೆಲ್ಲವು ತನ್ನಿಂತಾನೇ ಪರಿಹಾರ ಕಾಣುವವು.

ಅದರಲ್ಲೇನೂ ಸಮಸ್ಯೆಯಿರದು. ಆದರೆ, ನಾವು ಅಸ್ತಿತ್ವದ ಕೇಂದ್ರವನ್ನು ಕಾಣಲಾರೆವಾದರೆ, ನಾವು ನಮ್ಮ ಪ್ರೇಮಭಾವಗಳ ವಿಸ್ತರಣೆಗೆ ನಮ್ಮದೇ ಮಾರ್ಗಗಳನ್ನು ತಯಾರಿಸಿಕೊಳ್ಳುವೆವಾದರೆ, ಆಗ ಕೇವಲ ಮನುಷ್ಯರ ನಡುವೆ ಮಾತ್ರವಲ್ಲ, ರಾಷ್ಟ್ರಗಳ ನಡುವೆಯೂ ಘರ್ಷಣೆ ಆರಂಭವಾಗುವುದು. ರಾಷ್ಟ್ರಗಳು ಒಂದಾಗಿರಲು ಯತ್ನಿಸುತ್ತಿರುವವು; ನಿಮ್ಮ ರಾಷ್ಟ್ರದಲ್ಲಿ ಸಂಯುಕ್ತ ಸಂಸ್ಥಾನ ಇರುವುದು. ದುರದೃಷ್ಟವಶಾತ್‌, ರಾಷ್ಟ್ರಗಳು ಒಂದಾಗುವ ಬದಲು ಇಂದು ಬಾವುಟಗಳು ಹೆಚ್ಚುತ್ತಿವೆ. ಹಾಗೆಯೇ, ಭಾರತ ಒಂದು ರಾಷ್ಟ್ರವಾಗಿತ್ತು – ಹಿಂದೂಸ್ಥಾನವೆಂದಿತ್ತು. ಈಗ ಅಲ್ಲಿ ಪಾಕಿಸ್ತಾನವೂ ಇದೆ. ಕೆಲವು ವರ್ಷಗಳಲ್ಲಿ `ಸಿಖ್ಖಿಸ್ತಾನ್‌’ ಬರಬಹುದು, ಮತ್ತೊಮ್ಮೆ ಮತ್ತೊಂದು `ಸ್ತಾನ್‌’.

ಒಂದಾಗುವ ಬದಲು ನಾವು ಬೇರಾಗುತ್ತ ನಡೆದಿರುವೆವು. ಏಕೆಂದರೆ ನಾವು ಕೇಂದ್ರವನ್ನು ಕಳಕೊಳ್ಳುತ್ತಿರುವೆವು. ಆದ್ದರಿಂದ, ನಾನು ವಿನಂತಿಸುತ್ತೇನೆ, ನೀವೆಲ್ಲರೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿದ್ದೀರಿ, ದಯವಿಟ್ಟು ನೀವು ನಿಮ್ಮ ಅಂತಾರಾಷ್ಟ್ರೀಯ ಚಳವಳಿಯ ನೈಜ ಕೇಂದ್ರವನ್ನು ಹುಡುಕಿಕೊಳ್ಳಲು ಯತ್ನಿಸುವಿರೇನು? ನೀವು ಈ ಕೇಂದ್ರವು ಕೃಷ್ಣನೇ ಎಂದರಿತಾಗ ನಿಜವಾದ ವಿಶ್ವಾತ್ಮ ಭಾವವು ಸಾಧ್ಯವಾಗುವುದು. ಆಗ ನಿಮ್ಮ ಅಂತಾರಾಷ್ಟ್ರೀಯ ಚಳವಳಿಯು ಪರಿಪೂರ್ಣವಾಗುವುದು.

ಭಗವದ್ಗೀತೆಯ ಹದಿನಾಲ್ಕನೇ ಅಧ್ಯಾಯ (14.4) ದಲ್ಲಿ ಕೃಷ್ಣನು ಹೇಳಿರುವನು;

ಸರ್ವ ಯೋನಿಷು ಕೌನ್ತೇಯ ಮೂರ್ತಯಃ ಸಮ್ಭವನ್ತಿ ಯಾಃ ।

ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ ॥

ಇಲ್ಲಿ ಕೃಷ್ಣನು ಹೇಳುವನು, “ನಾನು ಎಲ್ಲ ಬಗೆಯ ಜೀವ ಜಂತುಗಳ ತಂದೆಯಾಗಿರುವೆ. ಭೌತಿಕ ಪ್ರಕೃತಿಯು ತಾಯಿಯಾಗಿರುವಳು ಮತ್ತು ನಾನು ಬೀಜಪ್ರದವಾದ ತಂದೆಯಾಗಿರುವೆ” ತಾಯ್ತಂದೆಯರಿಲ್ಲದೆ ಯಾರ ಜನನವೂ ಸಾಧ್ಯವಿಲ್ಲ. ತಂದೆಯು ಬೀಜವನ್ನು ಪ್ರದಾನ ಮಾಡುವನು ಮತ್ತು ತಾಯಿಯು ದೇಹವನ್ನು ನೀಡುವಳು. ಈ ಭೌತಿಕ ಜಗತ್ತಿನಲ್ಲಿ ಇರುವೆಯಿಂದ ಹಿಡಿದು ಬ್ರಹ್ಮನವರೆಗೆ ನಮ್ಮೆಲ್ಲರ ತಾಯಿಯಾಗಿರುವಳು ಭೌತಿಕ ಪ್ರಕೃತಿ. ನಮ್ಮ ದೇಹವು ಭೌತಿಕ; ಆದ್ದರಿಂದ ಇದು ಭೌತಿಕ ಪ್ರಕೃತಿಯ ಕೊಡುಗೆ. ಆದರೆ ನಾನು – ಚೇತನಾತ್ಮ, ನಾನು ಪರಮಪಿತ ಕೃಷ್ಣನ ಅಂಶಭಾಗ. ಕೃಷ್ಣನು `ಮಮೈವಾಂಶೋ ಜೀವಲೋಕೇ ಜೀವಭೂತಃ’ ಎಂದು ಹೇಳಿರುವನು.

“ಈ ಎಲ್ಲ ಜೀವಸಂಕುಲಗಳು ನನ್ನ ಅಂಶಭಾಗಗಳು”

ನೀವು ನಿಮ್ಮ ಭಾವನೆಗಳನ್ನು ಪರಮೋನ್ನತ ಮಿತಿಯವರೆಗೆ ವಿಸ್ತರಿಸಿಕೊಳ್ಳಲು ಬಯಸುವಿರಾದರೆ, ದಯವಿಟ್ಟು ಭಗವದ್ಗೀತೆಯನ್ನು ಅರಿಯಲು ಪ್ರಯತ್ನಿಸಿ. ನೀವು ಆನಂದವನ್ನು ಹೊಂದುವಿರಿ; ನೀವು ನಿಜವಾದ ಮಹಾತ್ಮರಾಗುವಿರಿ. ನೀವು ಬೆಕ್ಕು, ನಾಯಿ ಅಥವಾ ಹಲ್ಲಿಯನ್ನು ಕೂಡ ಪ್ರೀತಿಸಲು ತೊಡಗುವಿರಿ. ಭಾಗವತದ ಏಳನೆಯ ಸ್ಕಂಧದಲ್ಲಿ ನಾರದ ಮುನಿಯ ಹೇಳಿಕೆ ಹೀಗಿದೆ – “ನಿಮ್ಮ ಮನೆಯಲ್ಲಿ ಸರ್ಪವು ಕಾಣಿಸಿಕೊಂಡರೆ ಅದಕ್ಕೂ ಏನಾದರೂ ತಿನ್ನಲು ಕೊಡಿ.” ಭಾವವಿಸ್ತಾರವನ್ನು ನೋಡಿ! ನೀವು ಒಂದು ಸರ್ಪಕ್ಕೆ ಕೂಡ ಕಾಳಜಿ ತೋರುವಿರಿ; ಮತ್ತೆ ಇತರ ಪ್ರಾಣಿ ಹಾಗೂ ಮನುಷ್ಯರ ಬಗ್ಗೆ ಹೇಳುವುದೇನಿದೆ?

ನಾವು ಭಗವಂತ ಅಥವಾ ಕೃಷ್ಣನ ಅರಿವಿನ ಕೇಂದ್ರವನ್ನು ತಲಪುವ ಹೊರತು ಜ್ಞಾನೋದಯ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ನಾವು ಜಗತ್ತಿನುದ್ದಗಲಕ್ಕೂ ಕೃಷ್ಣಪ್ರಜ್ಞೆಯನ್ನು ಬೋಧಿಸುತ್ತಿರುವೆವು. ಕೃಷ್ಣಪ್ರಜ್ಞಾಂದೋಲನವು ಹೊಸತೇನಲ್ಲ. ನಾನು ಹೇಳಿದಂತೆ, ಅದು ಭಗವದ್ಗೀತಾ ತತ್ತ್ವಗಳನ್ನು ಆಧರಿಸಿದೆ ಮತ್ತು ಭಗವದ್ಗೀತೆಯು ಪುರಾತನ ಶಾಸ್ತ್ರಗ್ರಂಥವಾಗಿದೆ. ಐತಿಹಾಸಿಕ ನೆಲೆಗಟ್ಟಿನಿಂದ ಅದಕ್ಕೆ 5 ಸಾವಿರ ವರ್ಷಗಳಷ್ಟು ಪ್ರಾಚೀನತೆಯಿದೆ. ಇತಿಹಾಸಪೂರ್ವ ದೃಷ್ಟಿಯಿಂದ ಅದು ಕೋಟ್ಯಂತರ ವರ್ಷಗಳಷ್ಟು ಪ್ರಾಚೀನ. ಕೃಷ್ಣನು ನಾಲ್ಕನೆಯ ಅಧ್ಯಾಯದಲ್ಲಿ ಹೇಳಿರುವನು. ಇಮಮ್‌ ವಿವಸ್ವತೇ ಯೋಗಮ್‌ ಪ್ರೋಕ್ತವಾನ್‌ ಅಹಮ್‌ ಅವ್ಯಯಮ್‌ – `ನಾನು ಇದನ್ನು ಮೊದಲು ಸೂರ್ಯದೇವನಿಗೆ ಹೇಳಿದೆನು’. ಅದರರ್ಥ, ಕೃಷ್ಣನು ಮೊದಲ ಬಾರಿಗೆ ಭಗವದ್ಗೀತೆಯನ್ನು ಕೆಲವು ಕೋಟಿ ವರ್ಷಗಳ ಮೊದಲೇ ಹೇಳಿದ್ದನು. ಆದರೆ ಸರಳವಾಗಿ ಐತಿಹಾಸಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ, ಭಗವದ್ಗೀತೆಯು ಕುರುಕ್ಷೇತ್ರ ಯುದ್ಧಾರಂಭದ ದಿನದಂದು ಅವತರಿಸಿತು. ಈ ಯುದ್ಧ 5 ಸಾವಿರ ವರ್ಷಗಳ ಹಿಂದೆ ನಡೆಯಲ್ಪಟ್ಟಿತು. ಆದ್ದರಿಂದ ಇದು ಜಗತ್ತಿನ ಇನ್ನಾವುದೇ ಶಾಸ್ತ್ರಗ್ರಂಥಕ್ಕಿಂತ ಪುರಾತನವಾದುದು.

ಭಗವದ್ಗೀತೆಯನ್ನು ಯಥಾರೂಪವಾಗಿ ಗ್ರಹಿಸಲು ಯತ್ನಿಸಿ. ಯಾವುದೇ ಭಾಷ್ಯದ ಮೊರೆ ಹೋಗದಿರಿ. ಭಗವದ್ಗೀತೆಯ ಮಾತುಗಳೆ ನಿಮಗೆ ಜ್ಞಾನಾನಂದ ನೀಡಲು ಸಾಕು. ಆದರೆ ದುರದೃಷ್ಟವಶಾತ್‌ ಜನರು ಭಗವದ್ಗೀತೆಯ ಜನಪ್ರಿಯತೆಯನ್ನು ಬಳಸಿಕೊಂಡು ಅದರ ಅಡಿಯಲ್ಲಿ ತಮ್ಮದೇ ತತ್ತ್ವಗಳನ್ನು ಅಭಿವ್ಯಕ್ತಿಸಲು ಪ್ರಯತ್ನಿಸಿರುವರು. ಅದು ನಿರುಪಯುಕ್ತ. ಭಗವದ್ಗೀತೆಯನ್ನು ಯಥಾರೂಪವಾಗಿ ಅರಿಯಿರಿ. ಆಗಷ್ಟೆ ನೀವು ಆನಂದವನ್ನು ಹೊಂದುವಿರಿ. ಕೃಷ್ಣನೇ ಎಲ್ಲ ಚಟುವಟಿಕೆಗಳ ಕೇಂದ್ರವೆಂದು ಅರಿಯುವಿರಿ. ನೀವೊಮ್ಮೆ ಕೃಷ್ಣಪ್ರಜ್ಞಾವಂತರಾದರೆ ಸಾಕು, ಎಲ್ಲವೂ ಪರಿಪೂರ್ಣಗೊಳ್ಳುವುದು ಮತ್ತು ಎಲ್ಲ ಸಮಸ್ಯೆಗಳೂ ಪರಿಹಾರ ಕಾಣುವವು.

ಈ ಲೇಖನ ಶೇರ್ ಮಾಡಿ