ಮುಕ್ತ ಆತ್ಮರನ್ನು ಅನುಸರಿಸಿ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು ನ್ಯೂಯಾರ್ಕ್‌ನಲ್ಲಿ ಮಾರ್ಚ್‌ 7, 1966 ರಂದು ನೀಡಿದ ಉಪನ್ಯಾಸ.

ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ ।

ನ ಚೈವ ನ ಭವಿಷ್ಯಾಮಃ ಸರ್ವೇ ವಯಂ ಅತಃ ಪರಂ ॥

“ನಾನು ಇರಲಿಲ್ಲ ಎನ್ನುವ ಕಾಲವೇ ಇರಲಿಲ್ಲ. ನೀನೂ ಈ ರಾಜರೂ ಇರಲಿಲ್ಲ ಎನ್ನುವ ಕಾಲವೇ ಇರಲಿಲ್ಲ. ಭವಿಷ್ಯದಲ್ಲಿಯೂ ನಾವೆಲ್ಲರೂ ಇರುವುದಿಲ್ಲ ಎನ್ನುವುದೇ ಇಲ್ಲ.” – ಗೀತೆ 2.12

ಸಾವು ಬರುವುದಿಲ್ಲ ಎಂಬುದನ್ನು ಕೃಷ್ಣ ಅರ್ಜುನನಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾನೆ. “ಈ ಶ್ರೇಷ್ಠ ರಣಭೂಮಿಯಲ್ಲಿ ನೆರೆದಿರುವ ನೀನು, ನಾನು ಮತ್ತು ಎಲ್ಲ ರಾಜರು, ಸೈನಿಕರು ಹಿಂದೆಯೂ ಇದ್ದೆವು. ಪ್ರಸ್ತುತದಲ್ಲಿ ನಾವು ಮುಖಾಮುಖಿಯಾಗಿದ್ದೇವೆ ಮತ್ತು ನಮ್ಮ ಅಸ್ತಿತ್ವ ಕಾಣುತ್ತಿದೆ. ಮುಂದೆ, ಭವಿಷ್ಯದಲ್ಲಿಯೂ ನಾವು ಇದೇ ರೀತಿ ಅಸ್ತಿತ್ವದಲ್ಲಿ ಇರುತ್ತೇವೆ.”

`ಇದೇ ರೀತಿ,’ ಎಂದರೆ ವೈಯಕ್ತಿಕವಾಗಿ. ನಾನು ಒಬ್ಬ ವ್ಯಕ್ತಿ, ನೀನು ಒಬ್ಬ ವ್ಯಕ್ತಿ. ಅವನಿಗೂ ವೈಯಕ್ತಿಕ ವ್ಯಕ್ತಿತ್ವವಿದೆ. ಪ್ರತಿಯೊಂದು ಜೀವಿಯ ವೈಯಕ್ತಿಕ ವ್ಯಕ್ತಿತ್ವ ವಾಸ್ತವ. ಆದುದರಿಂದ ನಾವು ಅಭಿಪ್ರಾಯ ಭೇದಗಳನ್ನು ಕಾಣುತ್ತೇವೆ. ನನ್ನ ಚಿಂತನೆಯನ್ನು ನೀವು ಒಪ್ಪದಿರಬಹುದು, ಏಕೆಂದರೆ ನಿಮಗೆ ನಿಮ್ಮದೇ ವ್ಯಕ್ತಿತ್ವವಿದೆ. ಅದೇ ರೀತಿ ಮತ್ತೊಬ್ಬ ವ್ಯಕ್ತಿಯು ನಿಮ್ಮ ಅಭಿಪ್ರಾಯಗಳನ್ನು ಒಪ್ಪದಿರಬಹುದು.

ಆದುದರಿಂದ ಪ್ರತಿಯೊಬ್ಬರಿಗೂ ಅವರದೇ ವ್ಯಕ್ತಿತ್ವವಿದೆ. ಆದರೂ ಆತ್ಮವು ಏಕ ರೂಪದ ಅಸ್ತಿತ್ವ ಉಳ್ಳದ್ದು ಮತ್ತು ದೇಹ ನಾಶವಾದ ಕೂಡಲೇ ಆತ್ಮವು ಆ ಅಸ್ತಿತ್ವದಲ್ಲಿ ಮಿಲನಗೊಳ್ಳುತ್ತದೆ ಎಂದು ತತ್ತ್ವಜ್ಞಾನಿಗಳ ಒಂದು ವರ್ಗ ಹೇಳುತ್ತದೆ. ಉದಾಹರಣೆಗೆ, ನೀರು ಯಾವ ಪಾತ್ರೆಯಲ್ಲಿರುತ್ತದೆಯೋ ಆ ಆಕಾರವನ್ನು ಪಡೆದುಕೊಳ್ಳುತ್ತದೆ. ವೃತ್ತಾಕಾರದ ಪಾತ್ರೆಯಲ್ಲಿನ ನೀರು ವೃತ್ತದಂತೆ ಕಾಣುತ್ತದೆ, ಚೌಕಾಕಾರದ ಪಾತ್ರೆಯಲ್ಲಿನ ನೀರು ಅದೇ ಆಕಾರದಂತೆ ಕಾಣುತ್ತದೆ. ಆದರೆ ನೀವು ಲಕ್ಷಾಂತರ ಕೊಡಗಳ ನೀರನ್ನು ಮಿಶ್ರಣ ಮಾಡಿದರೆ, ಸ್ಪಷ್ಟ ಆಕಾರ ಇರುವುದಿಲ್ಲ. ಆದುದರಿಂದ, ನೀರಿನ ಒಂದು ಹನಿಯನ್ನು ಪುನಃ ಸಮುದ್ರಕ್ಕೆ ಹಾಕಿದಾಗ ಅದು ಸಾಗರದ ನೀರಿನೊಂದಿಗೆ ಸೇರುವಂತೆ ಆತ್ಮವು ಮುಕ್ತವಾದಾಗ ಅದು ಪರಮಾತ್ಮನೊಂದಿಗೆ ಸೇರಿಕೊಳ್ಳುತ್ತದೆ ಎಂಬುದು ತತ್ತ್ವಜ್ಞಾನಿಗಳ ಒಂದು ವರ್ಗದ ಸಿದ್ಧಾಂತ. ಆತ್ಮವು ತನ್ನ ಸ್ವರೂಪ ಅಥವಾ ಗುರುತನ್ನು ಕಳೆದುಕೊಳ್ಳುತ್ತದೆ, ಅದೇ ಅವರ ತತ್ತ್ವ.

ಆದರೆ, ಇಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ, “ಇಲ್ಲಿಗೆ ಬಂದಿರುವ ನಾನು, ನೀನು ಮತ್ತು ಇತರ ಎಲ್ಲರೂ…” ಕುರುಕ್ಷೇತ್ರ ಯುದ್ಧವು ದೊಡ್ಡ ವಿಶ್ವ ಸಮರವೇ ಆಗಿತ್ತು. ಜಗತ್ತಿನ ಎಲ್ಲ ರಾಜರೂ ಸೇರಿದಂತೆ ಸುಮಾರು ಅರವತ್ತು ಕೋಟಿ ಜನರು ಅದರಲ್ಲಿ ಪಾಲ್ಗೊಂಡಿದ್ದರು. ಮತ್ತೂ ಕೃಷ್ಣ ಹೇಳುತ್ತಾನೆ, “ಹಿಂದೆ ಅವರು ಒಬ್ಬ ವ್ಯಕ್ತಿಯಾಗಿದ್ದರು. ಅವರು ಈಗ ಅದೇ ವ್ಯಕ್ತಿಗಳು ಮತ್ತು ಮುಂದೆ ದೇಹ ನಾಶವಾದ ಮೇಲೆ ಕೂಡ ಅವರು ವ್ಯಕ್ತಿಗಳಾಗಿ ಮುಂದುವರಿಯುತ್ತಾರೆ.”

ಹಾಗಾದರೆ ಎರಡೂ ಸಿದ್ಧಾಂತಗಳನ್ನು ಹೇಗೆ ಹೊಂದಿಸುವುದು? ಸಮುದ್ರಕ್ಕೆ ಹಾಕುವ ಒಂದು ಹನಿ ನೀರು ಒಂದೇ ಅಸ್ತಿತ್ವ ಪಡೆದುಕೊಳ್ಳುವಂತೆ ಮುಕ್ತಿಯ ಅನಂತರ ಎಲ್ಲ ಆತ್ಮಗಳೂ ಒಂದೇ ಆಗುತ್ತವೆ ಎಂದು ಒಂದು ಸಿದ್ಧಾಂತ ಹೇಳುತ್ತದೆ. ಮತ್ತು ಶ್ರೀ ಕೃಷ್ಣ ಹೇಳುತ್ತಾನೆ, “ಇಲ್ಲ, ಅವರು ತಮ್ಮ ವೈಯಕ್ತಿಕ ವ್ಯಕ್ತಿತ್ವವನ್ನು ಉಳಿಸಿಕೊಳ್ಳುತ್ತಾರೆ. ಅವರು ಸೇರಿಕೊಳ್ಳುವುದಿಲ್ಲ.”

ತರ್ಕ, ವಿವೇಚನೆಯಿಂದ

ನಾವು ತಿಳುವಳಿಕೆ ಇಲ್ಲದ ಸಾಮಾನ್ಯ ಜನ. ಆದರೆ ಯಾವ ಸಿದ್ಧಾಂತ ಸರಿ ಎಂಬುದನ್ನು ಪರಿಗಣಿಸಲು ನಮಗೆ ನಮ್ಮದೇ ವಿವೇಚನೆ ಇದೆ. ಉದಾಹರಣೆಗೆ, ನಿಮಗೆಲ್ಲರಿಗೂ ಇತಿಹಾಸದ ಬಗೆಗೆ ಸ್ವಲ್ಪವಾದರೂ ಜ್ಞಾನವಿರುತ್ತದೆ. ಇತಿಹಾಸದ ಪುಸ್ತಕಗಳಲ್ಲಿ ಎರಡು ನೂರು ವರ್ಷಗಳ ಹಿಂದಿನ ಜಗತ್ತಿನ ಬಗೆಗೆ ಓದುತ್ತೀರಿ ಎಂದುಕೊಳ್ಳಿ. ಎಲ್ಲ ಜನರೂ ವ್ಯಕ್ತಿಗಳೆಂಬುದನ್ನು ನೀವು ಕಂಡುಕೊಳ್ಳುತ್ತೀರ. ಪ್ರಸ್ತುತದಲ್ಲಿ ನೀವು ಎಲ್ಲ ಜೀವಿಗಳು – ಪಕ್ಷಿ, ಪ್ರಾಣಿ, ಮಾನವರು – ವ್ಯಕ್ತಿಗಳೆಂಬುದನ್ನು ನೋಡುತ್ತೀರ. ಮುಂದೆ, ಭವಿಷ್ಯದಲ್ಲಿಯೂ ಅವರು ವ್ಯಕ್ತಿಗಳಾಗಿ ಉಳಿಯುವರೆಂಬುದನ್ನು ನೀವು ಯಾಕೆ ನಂಬುವುದಿಲ್ಲ? ಹಿಂದೆ ಅವರು ವ್ಯಕ್ತಿಗಳು, ಪ್ರಸ್ತುತದಲ್ಲಿ ಅವರು ಅದೇ ವ್ಯಕ್ತಿಗಳು. ಭವಿಷ್ಯದಲ್ಲಿಯೂ ಅವರು ವ್ಯಕ್ತಿಗಳಾಗಿ ಏಕೆ ಉಳಿಯುವುದಿಲ್ಲ?

ಅವರು ವ್ಯಕ್ತಿಗಳಾಗಿ ಮುಂದುವರಿಯುವರೆಂಬ ತೀರ್ಮಾನ ಸ್ವಾಭಾವಿಕ. ಈ ಎರಡೂ ಸಿದ್ಧಾಂತಗಳ ಬಗೆಗೆ ನಮಗೆ ಸಾಕಷ್ಟು ಅರಿವಿಲ್ಲದಿದ್ದರೂ ಹಿಂದೆ ವ್ಯಕ್ತಿಗಳಿದ್ದರೆಂಬುದು ಇತಿಹಾಸದ ಮಾಹಿತಿಗಳಿಂದ ತಿಳಿದುಬಂದಿದೆ ಮತ್ತು ಪ್ರಸ್ತುತ ನಾವೇ ವ್ಯಕ್ತಿಗಳನ್ನು ನೋಡುತ್ತಿದ್ದೇವೆ. ಹೀಗಾಗಿ ನಮ್ಮದೇ ಸಣ್ಣ ತರ್ಕದಿಂದ ನಾವು ಅವುಗಳನ್ವಯ ಅರ್ಥ ಮಾಡಿಕೊಳ್ಳಬಲ್ಲೆವು. ಭವಿಷ್ಯದಲ್ಲಿ ಏಕಿಲ್ಲ? ಮುಂದೆ ಅವರು ಮಿಲನಗೊಂಡು ಏಕ ರೂಪ ತಳೆಯುವುದು ಹೇಗೆ?

ಮತ್ತೊಂದು ಉದಾಹರಣೆ: 200 ವರ್ಷಗಳ ಹಿಂದೆ, ಮಾರ್ಚ್‌ನ ಹವಾಮಾನವು 1966ರ ಮಾರ್ಚ್‌ನ ಹವಾಮಾನದಂತೆಯೇ ಇತ್ತು. ಸ್ವಾಭಾವಿಕವಾಗಿ ನಾನು ತೀರ್ಮಾನಿಸುವುದೇನೆಂದರೆ, ಮುಂದಿನ ಮಾರ್ಚ್‌ನಲ್ಲಿ ಕೂಡ ಹವಾಮಾನ ಹಾಗೇ ಇರುತ್ತದೆ. 1966 ರ ಮಾರ್ಚ್‌ನ ಒಂದು ನಿರ್ದಿಷ್ಟ ದಿನದಂದು ಸೂರ್ಯನು ಈ ಹಿಂದೆ ಅದೇ ದಿನದಂದು ಉದಯಿಸಿದ ಸಮಯಕ್ಕೇ ಉದಯಿಸುತ್ತಾನೆ ಎಂದು ಖಗೋಳ ವಿಜ್ಞಾನದಿಂದ ತಿಳಿದು ಬರುತ್ತದೆ. ಇಡೀ ಖಗೋಳ ವಿಜ್ಞಾನವು ಈ ಸಿದ್ಧಾಂತದ ಆಧಾರಿತ. ಖಗೋಳ ವಿಜ್ಞಾನಿಗಳು ನೂರು ವರ್ಷಗಳಿಗೆ ಖಗೋಳ ನಕ್ಷೆಗಳನ್ನು ಸಿದ್ಧಪಡಿಸುತ್ತಾರೆ. ಹೇಗೆ? ಈ ಲೆಕ್ಕಾಚಾರದಿಂದ: ಹಿಂದೆ ಅದು ಹಾಗಿತ್ತು, ಪ್ರಸ್ತುತ ಹೀಗಿದೆ, ಆದುದರಿಂದ ಸ್ವಾಭಾವಿಕವಾಗಿ ಭವಿಷ್ಯದಲ್ಲಿಯೂ ಹಾಗೇ ಇರುತ್ತದೆ.

ನೀವು ಈಗ ತತ್‌ಕ್ಷಣದ ವಸಂತ ಋತುವಿನ ಬಗೆಗೆ ಮಾತನಾಡುತ್ತಿರುವಿರಿ. ಏಕೆಂದರೆ, ನಿಮಗೆ ಅನುಭವವಿದೆ. ನೀವು ಮುನ್ಸೂಚನೆ ನೀಡುತ್ತಿರುವಿರಿ. ಇದು ವಾಸ್ತವವಾಗಿ ಮುನ್ಸೂಚನೆ ಅಥವಾ ಭವಿಷ್ಯ ನುಡಿಯುವುದಲ್ಲ. ನಿಮ್ಮ ಹಿಂದಿನ ಅನುಭವದ ಆಧಾರದ ಮೇಲೆ ನೀವು ಏನಾಗುವುದೆಂದು ಹೇಳುತ್ತಿದ್ದೀರ.

ಹೀಗೆ ನಾವು ನಮ್ಮ ತರ್ಕದಿಂದ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು. ಆದರೆ ನಮ್ಮ ತರ್ಕದ ಆಚೆಗೂ ಕೆಲವು ವಿಷಯಗಳಿವೆ, ದೇವರು ಅಥವಾ ದೇವರ ಅಸ್ತಿತ್ವ. ಪ್ರತಿಯೊಂದಕ್ಕೂ ಸೃಷ್ಟಿಕರ್ತನಿರುವುದರಿಂದ ನಾವು ನಮ್ಮದೇ ತರ್ಕದಿಂದ ದೇವರಿದ್ದಾನೆ ಎಂದು ಭಾವಿಸುತ್ತೇವೆ. ಉದಾಹರಣೆಗೆ, ಈ ಟೇಪ್‌ ರೆಕಾರ್ಡರ್‌ ತಯಾರಕನಿದ್ದಾನೆಂದು ನಮಗೆ ಗೊತ್ತು. ಟೈಪ್‌ರೈಟರ್‌ಗೂ ತಯಾರಕನಿದ್ದಾನೆ. ಪ್ರತಿಯೊಂದಕ್ಕೂ ತಂದೆ ಅಥವಾ ತಯಾರಕರು ಇದ್ದಾರೆ. ನನ್ನ ತಂದೆ ನನ್ನನ್ನು ಸೃಷ್ಟಿಸಿದ. ನನ್ನ ತಂದೆ ಅವನ ತಂದೆಯಿಂದ ಸೃಷ್ಟಿಸಲ್ಪಟ್ಟ. ಅದೇ ರೀತಿ, ಇಡೀ ಬ್ರಹ್ಮಾಂಡ ಸ್ಥಿತಿಗೆ ಸೃಷ್ಟಿಕರ್ತನಿದ್ದಾನೆ ಎಂದು ಸ್ವಾಭಾವಿಕವಾಗಿ ನಾವು ತೀರ್ಮಾನಿಸಬಹುದು. ನೋಡಿ, ಇದು ತುಂಬಾ ಸರಳವಾದ ಸಮರ್ಥನೆ, ತರ್ಕ. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ.

ಆದರೆ ನಮ್ಮ ಅನುಭವ, ನಮ್ಮ ತರ್ಕ, ನಮ್ಮ ಸಾಮಾನ್ಯ ಜ್ಞಾನವನ್ನೂ ಮೀರಿದ ವಿಷಯಗಳಿವೆ. ಆ ವಿಷಯಗಳನ್ನು ಅಚಿಂತ್ಯ ಎನ್ನುತ್ತಾರೆ. ಅಚಿಂತ್ಯ ಎಂದರೆ `ಊಹಿಸಲಾಗದ್ದು, ಕಲ್ಪಿಸಲಾಗದ್ದು.’ ನಮ್ಮ ಕಲ್ಪನೆಗೆ ಮೀರಿದ್ದನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುವುದು? ಧರ್ಮಗ್ರಂಥಗಳು ಹೇಳುತ್ತವೆ. ಅಚಿಂತ್ಯಾಃ ಖಲು ಯೇ ಭಾವಾ ನ ತಾಂಸ್‌ ತರ್ಕೇನ ಯೋಜಯೇತ್‌, “ನಮ್ಮ ಕಲ್ಪನೆ , ನಮ್ಮ ತರ್ಕ ಶಕ್ತಿಯನ್ನೂ ಮೀರಿದುದನ್ನು ಕೇವಲ ವಾದಗಳಿಂದ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬಾರದು.”

ಮತ್ತೊಂದು ವೈದಿಕ ಆದೇಶ ಹೇಳುತ್ತದೆ, ತರ್ಕೋ ಅಪ್ರತಿಷ್ಠ ಶ್ರುತಯೋ ವಿಭಿನ್ನಃ – “ನಾವು ಬೇರೆ ಬೇರೆ ಧರ್ಮಗ್ರಂಥಗಳನ್ನು ನೋಡಿದರೆ, ಒಂದು ಗ್ರಂಥ ಒಂದು ರೀತಿ ಹೇಳಿದರೆ, ಮತ್ತೊಂದು ಭಿನ್ನವಾದುದನ್ನು ಹೇಳುತ್ತದೆ.” ಉದಾಹರಣೆಗೆ, ಗೋಹತ್ಯೆಯನ್ನೇ ತೆಗೆದುಕೊಳ್ಳಿ. ಗೋಹತ್ಯೆ ಅಧರ್ಮ ಎಂದು ಹಿಂದೂಗಳು ಹೇಳುತ್ತಾರೆ. ಮುಸ್ಲಿಮರು ಹೇಳುತ್ತಾರೆ, `ಇಲ್ಲ, ಗೋಹತ್ಯೆ ಧರ್ಮ.’ ಹಾಗಾದರೆ ಯಾವ ಧರ್ಮಗ್ರಂಥವನ್ನು ನಾವು ಸ್ವೀಕರಿಸಬೇಕು? ಯಾವುದು ಸರಿ? ಆದುದರಿಂದ ನೀವು ಭಿನ್ನ ಧರ್ಮಗ್ರಂಥಗಳನ್ನು ಪರಿಶೀಲಿಸಿದರೆ ನೀವು ವಿವಾದಾತ್ಮಕ ಹೇಳಿಕೆಗಳನ್ನು ನೋಡುವಿರಿ. ನಿಮ್ಮ ಧರ್ಮಗ್ರಂಥ ನನ್ನದಕ್ಕಿಂತ ಭಿನ್ನವಾಗಿರಬಹುದು. ಮತ್ತು, ನಾಸಾವ್‌ ಋಷಿರ್‌ ಯಸ್ಯ ಮತಂ ನ ಭಿನ್ನಂ : ನೀವು ತತ್ತ್ವಜ್ಞಾನಿಗಳ ಸಲಹೆ ಪಡೆದರೆ ಒಬ್ಬ ತತ್ತ್ವಜ್ಞಾನಿ ಮತ್ತೊಬ್ಬನಿಗಿಂತ ಭಿನ್ನ ಎಂಬುವುದು ನಿಮಗೆ ತಿಳಿಯುತ್ತದೆ. ಇತರ ತತ್ತ್ವಜ್ಞಾನಿಗಳ ವಾದವನ್ನು ಬದಿಗೊತ್ತಿ ತನ್ನ ಸಿದ್ಧಾಂತವನ್ನು ಮುಂದಿಡುವವನು `ದೊಡ್ಡ’ ತತ್ತ್ವಜ್ಞಾನಿ.

ಯಾವುದು ಸರಿಯಾದ ಮಾರ್ಗ?

ಹಾಗಾದರೆ ಸರಿಯಾದ ಮಾರ್ಗ ಯಾವುದೆಂದು ತೀರ್ಮಾನಿಸುವುದು ಹೇಗೆ? ನನ್ನ ಅಪರಿಪೂರ್ಣ ವಾದಗಳಿಂದ ಅದನ್ನು ಸಮರ್ಥಿಸುವುದು ಸಾಧ್ಯವಿಲ್ಲ. ಧರ್ಮಗ್ರಂಥಗಳ ಸಲಹೆ ಪಡೆಯುವುದೂ ಸಾಧ್ಯವಿಲ್ಲ. ವಿವಿಧ ತತ್ತ್ವಜ್ಞಾನಿಗಳ ಬೋಧನೆ ಪಡೆಯುವುದೂ ಸಾಧ್ಯವಿಲ್ಲ. ಹಾಗಾದರೆ, ನಿಜವಾದುದನ್ನು ಪಡೆಯುವುದು ಹೇಗೆ? ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾಂ : “ಧರ್ಮದ ಸತ್ಯವು ತುಂಬಾ ಗೌಪ್ಯವಾದುದು. ತುಂಬಾ ರಹಸ್ಯ.” ಹಾಗಾದರೆ ಅದನ್ನು ತಿಳಿಯುವುದು ಹೇಗೆ? ಮಹಾಜನೋ ಏನ ಗತಃ ಸ ಪಂಥಾಃ : ಶ್ರೇಷ್ಠ ವ್ಯಕ್ತಿಗಳು ಧರ್ಮವನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುವುದನ್ನು ನಾವು ಗಮನಿಸಿ ಅವರನ್ನು ಅನುಸರಿಸಬೇಕು. ಅಷ್ಟೇ. ಉದಾಹರಣೆಗೆ, ಕ್ರಿಶ್ಚಿಯನ್‌ ಧರ್ಮದಲ್ಲಿ, ಎಲ್ಲರಿಗೂ ಬೈಬಲ್‌ ಆದೇಶಗಳು ಅರ್ಥವಾಗದಿರಬಹುದು. ಆದರೆ, ಜೀಸಸ್‌ ಕ್ರೈಸ್ತನ ಆದರ್ಶ ಬದುಕನ್ನು ಅನುಸರಿಸಿದರೆ ಅವನಿಗೆ ದೊರೆತ ಫಲವೇ ನಿಮಗೂ ಲಭ್ಯವಾಗುತ್ತದೆ. ಅದೇ ರೀತಿ, ಮುಸ್ಲಿಮರು ಹಜರತ್‌ ಮಹಮದರ ಆದರ್ಶ ಬದುಕನ್ನು ಅನುಸರಿಸಿದರೆ ಅವರಿಗೂ ಅದೇ ಫಲ ಸಿಗುತ್ತದೆ.

ನಗರದಲ್ಲಿ ಎಲ್ಲಿಗೆ ಬಂದಿರುವಿರೆಂಬುದು ನಿಮಗೆ ಗೊತ್ತು. ಏಕೆಂದರೆ, ರಸ್ತಗಳಿಗೆ ಸಂಖ್ಯೆಗಳಿವೆ, ಈ ಮನೆ ಅಥವಾ ಆ ಮನೆ ಎಲ್ಲಿದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲವೂ ಒಂದೇ ರೀತಿ ಕಾಣುತ್ತವೆ – ಒಂದೇ ತೆರನಾದ ಅರಣ್ಯ, ಭೂಮಿ, ಹುಲ್ಲು. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುವುದೇ ತಿಳಿಯುವುದಿಲ್ಲ. ನನಗೆ ಸಮುದ್ರದಲ್ಲಿ ಅನುಭವವಾಗಿದೆ. ಭಾರತದಿಂದ ಬರುವಾಗ ನಾನು ಎಲ್ಲ ಕಡೆ ನೀರು ಕಂಡೆ. ಹಡಗು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ನನಗೆ ಹೇಳುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಹಡಗಿನ ಕಪ್ತಾನನ ಬಳಿ ನಕ್ಷೆ ಇತ್ತು. ಅವನು ಅಕ್ಷಾಂಶ, ರೇಖಾಂಶ ಮತ್ತು ಸಮಯಗಳಿಂದ ನಮ್ಮ ನೆಲೆಯ ಲೆಕ್ಕಾಚಾರ ಹಾಕುತ್ತಿದ್ದ. ಮೆಡಿಟರೇನಿಯನ್‌ ಸಮುದ್ರದಲ್ಲಿ ನಾನು ಕಫ್ತಾನನನ್ನು ಕೇಳಿದೆ, “ನಾವು ಈಗ ಎಲ್ಲಿದ್ದೇವೆ?” ಅವನೆಂದ, “ನಾವು ಇಟಲಿಯಿಂದ ಇಷ್ಟು ಮೈಲಿ ದೂರದಲ್ಲಿದ್ದೇವೆ. ನಾವು ಟ್ಯೂನಿಷಿಯಾದಿಂದ ಎಷ್ಟೊಂದು ಮೈಲಿ ದೂರ ಇದ್ದೇವೆ. ಈಗ ಗಿಬ್ರಾಲ್ಟರ್‌ಗೆ ಬರುತ್ತಿದ್ದೇವೆ.” ಆದರೆ ನಾನು ವ್ಯಾಪಕವಾದ ನೀರನ್ನು ಮಾತ್ರ ನೋಡುತ್ತಿದ್ದೆ. ನಾನು ಯೋಚಿಸುತ್ತಿದ್ದೆ, “ಕೇವಲ ಹತ್ತು ಮೈಲಿಗಳ ಅನಂತರ ನಾನು ಅಮೆರಿಕ ಸೇರುವೆ.”

ಹಾಗಾದರೆ ಆ ನಕ್ಷೆಗಳೇನು? ಅನುಭವಿ ನಾವಿಕರು ತಯಾರಿಸಿದ ನಕ್ಷೆಗಳವು. ಕಪ್ತಾನ ಅದರ ನೆರವು ಪಡೆಯುತ್ತಿದ್ದ, ಏಕೆಂದರೆ ಅನುಭವಿ ನಾವಿಕರು ಅದನ್ನು ತಯಾರಿಸಿದ್ದರು. ಅದೇ ರೀತಿ, ಮೋಕ್ಷ ಪಡೆಯುವುದು ಎಲ್ಲೆಂದು ವಿಶ್ಲೇಷಿಸುವಾಗ, ನಾವು ಮುಕ್ತ ಆತ್ಮರನ್ನು ಅನುಸರಿಸಬೇಕು. ಬದ್ಧಾತ್ಮ ಮತ್ತು ಮುಕ್ತ ಆತ್ಮದ ನಡುವಣ ವ್ಯತ್ಯಾಸವೆಂದರೆ, ಬದ್ಧಾತ್ಮವು ನಾಲ್ಕು ರೀತಿಯಲ್ಲಿ ಅಪೂರ್ಣ – ಬದ್ಧಾತ್ಮ ತಪ್ಪು ಮಾಡುವುದು ಖಚಿತ, ಅವನು ಮಾಯೆಯಲ್ಲಿರುತ್ತಾನೆ, ಮೋಸ ಮಾಡುವ ಪ್ರವೃತ್ತಿ ಮತ್ತು ಅಪರಿಪೂರ್ಣ ಇಂದ್ರಿಯಗಳು.

ಆದುದರಿಂದ ಮುಕ್ತ ಆತ್ಮರಿಂದ ಜ್ಞಾನವನ್ನು ಪಡೆದುಕೊಳ್ಳಬೇಕು. ಭಗವದ್ಗೀತೆಗೇಕೆ ಅಷ್ಟೊಂದು ಗೌರವ, ಮನ್ನಣೆ? ಗೀತೆ ಮಾತನಾಡಿದ್ದು ಭಾರತದಲ್ಲಿ ಮತ್ತು ಜನರು ಅದನ್ನು ಹಿಂದುಗಳ ಧರ್ಮಗ್ರಂಥವೆಂದು ಸ್ವೀಕರಿಸಿದ್ದಾರೆ. ಹಾಗಾದರೆ, ನೀವು, ಅಮೆರಿಕದವರು ಗೀತೆಯನ್ನು ಓದುತ್ತಿರುವಿರಿ? ಜರ್ಮನಿ, ಇಂಗ್ಲೆಂಡ್‌, ಜಪಾನ್‌ ಮುಂತಾದ ದೇಶಗಳಲ್ಲಿ ಕೂಡ ಗೀತೆಯ ಶ್ರೇಷ್ಠ ವಿದ್ವಾಂಸರಿದ್ದಾರೆ. ಏಕೆಂದರೆ ಅದು ಅತ್ಯಂತ ಶ್ರೇಷ್ಠ ವ್ಯಕ್ತಿಯಿಂದ ಹೇಳಲ್ಪಟ್ಟಿದೆ.

ನಾವು, ಹಿಂದುಗಳು, ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಿದ್ದೇವೆ. ಆದರೆ, ಇತರರು, ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸದಿದ್ದರೂ ಅವನು ಶ್ರೇಷ್ಠ ವ್ಯಕ್ತಿ ಎಂದು ಒಪ್ಪಿಕೊಂಡಿದ್ದಾರೆ. ಆದುದರಿಂದ ಅವರು ಕೂಡ ಗೀತಾ ಜ್ಞಾನದ ಸಲಹೆ ಪಡೆದುಕೊಳ್ಳುತ್ತಾರೆ.

ನಾನು ಹೇಳುವುದೇನೆಂದರೆ, ಕೃಷ್ಣನಂತಹ ಶ್ರೇಷ್ಠ ವ್ಯಕ್ತಿ ಮಾತನಾಡಿದರೆ, ಅವನ ದೃಷ್ಟಿಕೋನ ಸರಿ. ಮತ್ತು ನಾವು ನಮ್ಮ ಅನುಭವದಿಂದ ಅರ್ಥಮಾಡಿಕೊಂಡಿರುವುದನ್ನು ಕೃಷ್ಣ ದೃಢಪಡಿಸುತ್ತಾನೆ : ಹಿಂದೆ ವ್ಯಕ್ತಿಗಳಿದ್ದರು, ಪ್ರಸ್ತುತದಲ್ಲಿಯೂ ವ್ಯಕ್ತಿಗಳಿದ್ದಾರೆ ಮತ್ತು ಮುಂದೆಯೂ ವ್ಯಕ್ತಿಗಳ ಮುಂದುವರಿಕೆ ಇರುತ್ತದೆ. ನಾವು ಇದನ್ನು ನಮ್ಮ ಸಾಮಾನ್ಯ ಪ್ರಜ್ಞೆಯಿಂದ ಅರಿತುಕೊಂಡಿದ್ದೇವೆ ಮತ್ತು ನಾವು ದೇವೋತ್ತಮ ಪರಮ ಪುರುಷನೆಂದು ಕರೆಯುವ ಶ್ರೀ ಕೃಷ್ಣನು ಇದನ್ನು ದೃಢೀಕರಿಸಿದ್ದಾನೆ.

ಕೃಷ್ಣ ಹೇಳುತ್ತಾನೆ, ನ ತ್ವ ಏವಾಹಂ ಜಾತು ನಾಸಂ : “ನಾನು ಹಿಂದೆ ಇರಲಿಲ್ಲ ಎಂದುಕೊಳ್ಳಬೇಡಿ.” ಅಂದರೆ, “ಪ್ರಸ್ತುತದಲ್ಲಿ ನಾನು ಶ್ರೀ ಕೃಷ್ಣನಾಗಿರುವಂತೆ ಹಿಂದೆ ಕೂಡ ನಾನು ಶ್ರೀಕೃಷ್ಣನಾಗಿದ್ದೆ. ಮತ್ತು ನೀವು ಹಾಗೂ ಉಳಿದವರೂ ವ್ಯಕ್ತಿಗಳು.” ನ ಚೈವ ನ ಭವಿಷ್ಯಾಮಃ : “ಮತ್ತು ನಾವು ಉಳಿಯುವುದಿಲ್ಲವೆಂದು ಯೋಚಿಸಬೇಡಿ.” ಸರ್ವೇ ಎಂದರೆ, `ನಾವೆಲ್ಲ.’ ಇದು ಬಹುವಚನ. ಜನಾಧಿಪಾಃ – `ರಾಜರು’ – ಇದೂ ಬಹುವಚನ. “ಅವರೆಲ್ಲ ವೈಯಕ್ತಿಕ ಆತ್ಮಗಳು,” ಎಂದು ಕೃಷ್ಣ ಹೇಳುತ್ತಾನೆ.

ವೈಯಕ್ತಿಕ ಆತ್ಮದ ಅಸ್ತಿತ್ವ ಮುಂದುವರಿಯುತ್ತದೆ. ಅದು ಭಗವದ್ಗೀತೆಯ ನಿರೂಪಣೆ, ದೃಷ್ಟಿಕೋನ. ಅದರ ಬಗೆಗೆ ಅನಗತ್ಯ ಟೀಕೆ ಅಥವಾ ಭಿನ್ನವಾಗಿ ವಾಖ್ಯಾನ ಮಾಡುವುದಕ್ಕಿಂತ ಈ ದೃಷ್ಟಿಕೋನವನ್ನು ಸ್ವೀಕರಿಸುವುದು ಒಳ್ಳೆಯದು. ವ್ಯಾಖ್ಯಾನ ತಪ್ಪು. ಧರ್ಮಗ್ರಂಥದ ವ್ಯಾಖ್ಯಾನ ಮಾಡಬಾರದು. ಧರ್ಮಗ್ರಂಥವನ್ನು ಅದು ಹೇಗಿದೆಯೋ ಹಾಗೇ ಸ್ವೀಕರಿಸಬೇಕು. ವ್ಯಾಖ್ಯಾನ ಯಾವಾಗ ಅಗತ್ಯ? ಯಾವಾಗ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗುವುದಿಲ್ಲವೋ ಆಗ. ಇಲ್ಲವಾದರೆ, ವ್ಯಾಖ್ಯಾನದ ಅಗತ್ಯವೇ ಇಲ್ಲ.

ಉದಾಹರಣೆಗೆ, “ಆ ಗ್ರಾಮ ಸಮುದ್ರದ ಮೇಲಿದೆ” ಎಂದು ಯಾರಾದರೂ ಹೇಳಬಹುದು. ಅದನ್ನು ಕೇಳಿಸಿಕೊಳ್ಳುವ ವ್ಯಕ್ತಿಗೆ ಗೊಂದಲವಾಗಬಹುದು : “ಅದು ಹೇಗೆ? ನೀರಿನ ಮೇಲೆ ಪಟ್ಟಣವೇ?” ಇದಕ್ಕೆ ವಿವರಣೆ ಅಗತ್ಯ. “ಸಮುದ್ರದ ಮೇಲೆ ಎಂದರೆ ಸಾಗರದ ಮಧ್ಯದಲ್ಲಿ ಎಂದು ಅರ್ಥವಲ್ಲ. ಆದರೆ ಸಮುದ್ರದ ತೀರದಲ್ಲಿ ಎಂದು ಅರ್ಥ.” ಇದಕ್ಕೆ ವ್ಯಾಖ್ಯಾನ ಅಗತ್ಯ.

ಆದರೆ ಎಲ್ಲರಿಗೂ ಸ್ಪಷ್ಟವಾಗಿರುವುದಕ್ಕೆ ವ್ಯಾಖ್ಯಾನದ ಅಗತ್ಯವಿಲ್ಲ. ಇಲ್ಲಿ ನೋಡಿ, ಶ್ರೀ ಕೃಷ್ಣ ತಿಳಿಸಿರುವ ಭಗವದ್ಗೀತೆಯ ಹೇಳಿಕೆ ಎಷ್ಟು ಸ್ಪಷ್ಟವಾಗಿದೆ, “ನಾನು, ನೀನು ಮತ್ತು ಇಲ್ಲಿ ಸೇರಿರುವ ಎಲ್ಲ ಜನರು ವೈಯಕ್ತಿಕ ವ್ಯಕ್ತಿಗಳು. ಅವರು ಹಿಂದೆಯೂ ವ್ಯಕ್ತಿಗಳಾಗಿದ್ದರು ಮತ್ತು ಪ್ರಸ್ತುತದಲ್ಲಿ ವ್ಯಕ್ತಿಗಳಾಗಿರುವುದನ್ನು ನೋಡುತ್ತಿದ್ದೇವೆ. ಅವರು ಮುಂದೆಯೂ ವ್ಯಕ್ತಿಗಳಾಗಿ ಮುಂದುವರಿಯುವರು.”

ಭವಿಷ್ಯದಲ್ಲಿ ಅವರೇನಾಗುವರೋ ನನಗೆ ಗೊತ್ತಿಲ್ಲದಿರಬಹುದು. ಆದರೆ, ಕೃಷ್ಣ ದೇವರಾಗಿರುವುದರಿಂದ ಅವನ ಹೇಳಿಕೆಯನ್ನು ಸ್ವೀಕರಿಸಬೇಕು. ಹಾಗೆ ಒಪ್ಪಿಕೊಳ್ಳುವುದರಿಂದ ನನ್ನ ಜ್ಞಾನ ಪರಿಪೂರ್ಣವಾಗುತ್ತದೆ. ನಾನು ನಿಮಗೆ ಸರಳವಾದ ಉದಾಹರಣೆ ನೀಡುವೆ. ಪುಟ್ಟ ಬಾಲಕ ತನ್ನ ತಾಯಿಯನ್ನು “ನನ್ನ ತಂದೆ ಯಾರು?” ಎಂದು ಕೇಳಿದರೆ, ತಾಯಿಯು, “ಇಲ್ಲಿ ನಿನ್ನ ತಂದೆ” ಎಂದು ಉತ್ತರಿಸುತ್ತಾಳೆ. ಮಗುವು, “ಇವನು ನನ್ನ ತಂದೆ ಎಂಬುವುದನ್ನು ನಾನು ನಂಬಲಾರೆ” ಎಂದು ಹೇಳಿದರೆ, ತಾಯಿಯ ಹೇಳಿಕೆಗೆ ಹೊರತಾಗಿ ಬೇರೆ ಯಾವ ರೀತಿಯಿಂದಲಾದರೂ ಅವನಿಗೆ ಮನವರಿಕೆ ಮಾಡಿಕೊಡುವುದು ಸಾಧ್ಯವೇ? ಇಲ್ಲ. ಅವಳ ಮಾತೇ ಅಂತಿಮ. ಮಗು “ನನಗೆ ನಂಬಿಕೆ ಇಲ್ಲ” ಎಂದರೆ, ಅದು ಅವನ ಮೂರ್ಖತನ.

ದೇವೋತ್ತಮ ಕೃಷ್ಣನಿಂದ ಅರಿಯಿರಿ

ಅದೇ ರೀತಿ ನಮ್ಮ ಗ್ರಹಿಕೆಯನ್ನು ಮೀರಿದ, ನಮ್ಮ ಸೀಮಿತ ಜ್ಞಾನವನ್ನು ಮೀರಿದ ವಿಷಯಗಳನ್ನು ಅಧಿಕೃತರಿಂದ ಪಡೆದುಕೊಳ್ಳಬೇಕು. ಇಲ್ಲಿ ಅಂತಹ ಅಧಿಕೃತ ವ್ಯಕ್ತಿ ಇದ್ದಾನೆ – ಶ್ರೀ ಕೃಷ್ಣ. ಜಗತ್ತಿನಾದ್ಯಂತ ಎಲ್ಲರೂ ಅವನ ಅಧಿಕಾರವನ್ನು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಐದು ಅಧಿಕೃತ ಶಿಷ್ಯ ಪರಂಪರೆಗಳಿವೆ. ಇದು ವೈಷ್ಣವರು ಮತ್ತು ಶಂಕರಾಚಾರ್ಯರ ಅನುಯಾಯಿಗಳಿಂದ ಮಾಡಲ್ಪಟ್ಟಿದೆ. ಸಾಮಾನ್ಯವಾಗಿ ಎರಡು ಗುಂಪುಗಳಿವೆ – ನಿರಾಕಾರವಾದಿಗಳು ಮತ್ತು ಸಾಕಾರವಾದಿಗಳು. ಸಾಕಾರವಾದಿಗಳ ನಾಲ್ಕು ಪರಂಪರೆ ಇದೆ : ರಾಮಾನುಜ ಸಂಪ್ರದಾಯ, ಮಧ್ವಾಚಾರ್ಯ ಸಂಪ್ರದಾಯ, ನಿಂಬಾರ್ಕ ಸಂಪ್ರದಾಯ ಮತ್ತು ವಿಷ್ಣುಸ್ವಾಮಿ ಸಂಪ್ರದಾಯ. ಈ ರೀತಿ ನಾಲ್ಕು ಇದ್ದರೂ ಅವರ ತೀರ್ಮಾನ ಒಂದೇ. ಮತ್ತು ಭಿನ್ನವಾದ ಪಂಥವೆಂದರೆ, ಶಂಕರ ಸಂಪ್ರದಾಯ. ಆದರೆ ಹಿಂದುಗಳ ಈ ಐದು ವರ್ಗಗಳಿಗೆ ಭಿನ್ನವಾದ ತತ್ತ್ವ ಮತ್ತು ಸಿದ್ಧಾಂತಗಳಿದ್ದರೂ ಅವರೆಲ್ಲರೂ ಶ್ರೀ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸುತ್ತಾರೆ.

ಶ್ರೀಪಾದ ಶಂಕರಾಚಾರ್ಯರನ್ನು ಭಗವಂತನ ವೈಯಕ್ತಿಕ ರೂಪದಲ್ಲಿ ನಂಬಿಕೆ ಇಲ್ಲದ ನಿರಾಕಾರವಾದಿಗಳೆಂದು ಪರಿಗಣಿಸಲಾಗಿದೆ. ಆದರೂ ಅವರು ಭಗವದ್ಗೀತೆ ಕುರಿತ ತಮ್ಮ ಭಾಷ್ಯದಲ್ಲಿ `ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷ’ ಎಂದು ಒಪ್ಪಿಕೊಂಡಿದ್ದಾರೆ. ಆರಂಭದಿಂದಲೂ ನಂಬಿಕೆ ಉಳ್ಳವರಾದುದರಿಂದ ವೈಷ್ಣವರು ಸ್ವಾಭಾವಿಕವಾಗಿ ಕೃಷ್ಣ ದೇವರೆಂದು ಸ್ವೀಕರಿಸುತ್ತಾರೆ. ಆದರೆ ಶಂಕರಾಚಾರ್ಯರೂ ಕೂಡ, ನಿರಾಕಾರವಾದಿಗಳಾಗಿದ್ದರೂ, ಸ ಭಗವಾನ್‌ ಸ್ವಯಂ ಕೃಷ್ಣಃ `ಕೃಷ್ಣನು ದೇವೋತ್ತಮ ಪರಮ ಪುರುಷ’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ಕೃಷ್ಣನು ದೇವೋತ್ತಮ ಪರಮ ಪುರುಷ ಎಂಬುವುದಕ್ಕೆ ಪುರಾವೆಗಳನ್ನು ನೀಡುವ ಅನೇಕ ಶ್ಲೋಕಗಳು ವೈದಿಕ ಧರ್ಮ ಗ್ರಂಥಗಳಲ್ಲಿವೆ. ಬ್ರಹ್ಮ ಸಂಹಿತೆಯಲ್ಲಿ ಹೇಳಲಾಗಿದೆ,

ಈಶ್ವರಃ ಪರಮಃ ಕೃಷ್ಣಃ ಸತ್‌-ಚಿದ್‌-ಆನಂದ-ವಿಗ್ರಹಃ ।

ಅನಾದಿರ್‌ ಆದಿರ್‌ ಗೋವಿಂದಃ ಸರ್ವ ಕಾರಣ ಕಾರಣಂ ॥

ಈಶ್ವರ ಎಂದರೆ ಭಗವಂತ. ಭಗವಂತ ಎಂದರೆ `ನಿಯಂತ್ರಕ’ ಅಥವಾ `ಮಾಲೀಕ.’ ನಿಮ್ಮ ಪರಿಸರದ ಮೇಲೆ ನಿಮಗೆ ಸ್ವಲ್ಪ ನಿಯಂತ್ರಣ ಇರಬಹುದು, ಅವರಿಗೆ ಸ್ವಲ್ಪ ನಿಯಂತ್ರಣವಿದೆ, ನಿಮಗೆ ಸ್ವಲ್ಪ ನನಗೆ ಸ್ವಲ್ಪ ನಿಯಂತ್ರಣವಿದೆ. ರಾಷ್ಟ್ರಪತಿಗೂ ಸ್ವಲ್ಪ ನಿಯಂತ್ರಣವಿದೆ. ಈ ರೀತಿ ನೀವು ಭಿನ್ನ ಮಟ್ಟದ ನಿಯಂತ್ರಕ ಅಥವಾ ಮಾಲೀಕನನ್ನು ಕಾಣಬಹುದು. ಆದರೆ, ಇಲ್ಲಿ, ಪರಮ, ಶ್ರೇಷ್ಠ ಮಟ್ಟದ ಭಗವಂತನು ಶ್ರೀ ಕೃಷ್ಣ ಎಂದು ಹೇಳಲಾಗಿದೆ. ಅವನಿಗಿಂತ ಮೇಲೆ ಬೇರೆ ನಿಯಂತ್ರಕನಿಲ್ಲ.

ಈ ಜಗತ್ತಿನಲ್ಲಿ ನೀವು ನನಗಿಂತ, ಅವರು ನಿಮಗಿಂತ ಮತ್ತೊಬ್ಬರು ಅವರಿಗಿಂತ ದೊಡ್ಡ ನಿಯಂತ್ರಕರು. ಈ ರೀತಿ ನೀವು ರಾಷ್ಟ್ರಪತಿವರೆಗೆ ಬರಬಹುದು. ಅನಂತರ ನೀವು ರಾಷ್ಟ್ರಪತಿಗಿಂತಲೂ ಮೇಲಿನವರನ್ನು ನೋಡಬಹುದು. ನೀವು ಅಂತಹ ವಿಧಾನದಿಂದ ಶ್ರೀ ಕೃಷ್ಣನನ್ನು ಮುಟ್ಟಿದಾಗ, ಅವನಿಗಿಂತ ಶ್ರೇಷ್ಠರು ಅಥವಾ ಸಮಾನರು ಇಲ್ಲವೆಂಬುದನ್ನು ಅರಿತುಕೊಳ್ಳುವಿರಿ. ಆದುದರಿಂದ ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷ.

ಆದುದರಿಂದ ಕೃಷ್ಣ ಏನಾದರೂ ಹೇಳುತ್ತಿದ್ದರೆ, ಅದನ್ನು ಸ್ವೀಕರಿಸಲು ನಾವು ಒಪ್ಪಿಕೊಳ್ಳಬೇಕು. ನಾವು ಒಪ್ಪದಿದ್ದರೆ, ಅದು ನಮಗೆ ಲಾಭದಾಯಕವಲ್ಲ. ಇಂದಿನ ಶ್ಲೋಕದಲ್ಲಿ ಕೃಷ್ಣ ಹೇಳಿರುವುದು ವೈದಿಕ ಸಾಹಿತ್ಯದಲ್ಲಿ ದೃಢೀಕರಣಗೊಂಡಿದೆ : ನಿತ್ಯೋ ನಿತ್ಯಾನಾಂ ಚೇತನಸ್‌ ಚೇತನಾನಾಂ. ನಿತ್ಯ ಎಂದರೆ `ಶಾಶ್ವತ.’ ನಾವೆಲ್ಲಾ ಶಾಶ್ವತ. ಎಲ್ಲ ಶಾಶ್ವತ ಜೀವಿಗಳಲ್ಲಿ ಕೃಷ್ಣನೇ ಮುಖ್ಯಸ್ಥ, ಮಾಲೀಕ. ಇದು ಭಗವಂತನ ಲಕ್ಷಣದ ನಿರೂಪಣೆ, ವರ್ಣನೆ. ಚೇತನಃ ಎಂದರೆ `ಪ್ರಜ್ಞೆ’ ಎಂದು ಅರ್ಥ. ನಾವೆಲ್ಲಾ ಪ್ರಜ್ಞಾವಂತರು. ಕೃಷ್ಣ ಪರಮ ಪ್ರಜ್ಞಾವಂತ.

ದೇವರಲ್ಲಿ ನಂಬಿಕೆ ಇಲ್ಲದ ಯೋಗ ಸಂಸ್ಥೆಗಳು ಅಮೆರಿಕದಲ್ಲಿವೆ, ನಿಜ. ಆದರೆ, ಯೋಗ ತತ್ತ್ವವು ದೇವರ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ.

ವಿದ್ವಾಂಸರ ದೃಷ್ಟಿ

ಕೋಲ್ಕತ್ತ ವಿಶ್ವವಿದ್ಯಾಲಯದ ಇಬ್ಬರು ಶ್ರೇಷ್ಠ ಪ್ರಾಧ್ಯಾಪಕರು ಬರೆದಿರುವ ಅಧಿಕೃತ ಗ್ರಂಥವನ್ನು ನಾನು ತಂದಿರುವೆ. ಅದರ ಹೆಸರು `ಭಾರತೀಯ ತತ್ತ್ವಶಾಸ್ತ್ರಕ್ಕೆ ಪ್ರವೇಶಿಕೆ.’ ಭಾರತದ ಎಲ್ಲ ತತ್ತ್ವಶಾಸ್ತ್ರಗಳ ಅಧ್ಯಯನ ಮಾಡಿದ ಮೇಲೆ ಗ್ರಂಥಕರ್ತರು ಪ್ರತಿಯೊಂದೂ ತತ್ತ್ವಶಾಸ್ತ್ರ ಪದ್ಧತಿಯ ಬಗೆಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಅವರು ಬರೆಯುತ್ತಾರೆ, “ಸಾಂಖ್ಯದಿಂದ ಭಿನ್ನವಾಗಿ, ಯೋಗವು ಆಸ್ತಿಕವಾದುದು.” ಯೋಗ ಪದ್ಧತಿಯನ್ನು ಆರಂಭಿಸಿದ್ದು ಶ್ರೇಷ್ಠ ಪ್ರಾಮಾಣ್ಯ ಪತಂಜಲಿ. ಈ ಪ್ರಾಧ್ಯಾಪಕರು ಬಹಳ ಜಾಗರೂಕತೆಯಿಂದ ಅಧ್ಯಯನ ನಡೆಸಿದ್ದಾರೆ. ಅವರ ಗ್ರಂಥವು
ಅಧಿಕೃತ. ಇದು ಆರನೇ ಮುದ್ರಣವಾಗಿದ್ದು, ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಬಳಸುತ್ತಿದ್ದಾರೆ. ಗ್ರಂಥಕರ್ತರಾದ ಡಾ. ಚಟರ್ಜಿ ಮತ್ತು ಡಾ. ದತ್ತ ಅವರು ಶ್ರೇಷ್ಠ ವಿದ್ವಾಂಸರು. ಆದುದರಿಂದ ನಾನು ಅವರ ಅಭಿಪ್ರಾಯವನ್ನು ಓದುತ್ತಿದ್ದೇನೆ. ಅವರೇನೆನ್ನುತ್ತಾರೆ? ಯೋಗ ಪದ್ಧತಿಯು ಆಸ್ತಿಕವಾದದ್ದು.

ಅವರು ಮತ್ತೂ ಬರೆಯುತ್ತಾರೆ, “ಯೋಗದ ಅನ್ವಯ ದೇವರು ಪರಮ ಪುರುಷ, ವ್ಯಕ್ತಿ.” ನೀವು ಅನೇಕ ಯೋಗ ಸಂಸ್ಥೆಗಳಲ್ಲಿದ್ದೀರಿ. ದೇವರು ಪರಮ ಪುರುಷ ಅಥವಾ ವ್ಯಕ್ತಿ ಎಂಬುದನ್ನು ನೀವು ಯಾವಾಗಲಾದರೂ ಕೇಳಿದ್ದೀರಾ? ಆದರೂ, ಭಗವದ್ಗೀತೆಯಲ್ಲಿ ಕೃಷ್ಣನು ಭವಿಷ್ಯ ಮತ್ತು ಹಿಂದಿನದರ ಬಗೆಗೆ ಹೇಳುತ್ತಾನೆ. ಏಕೆಂದರೆ ಅವನು ಪರಿಪೂರ್ಣ. ಅವನು ಹಿಂದಿನದನ್ನು ಮತ್ತು ಭವಿಷ್ಯವನ್ನು ನೋಡಬಲ್ಲ.

ನಾವು ಪರಿಪೂರ್ಣರಾಗಿಲ್ಲದ ಕಾರಣ ನಮಗೆ ಭೂತ ಮತ್ತು ಭವಿಷ್ಯ ಗೊತ್ತಿಲ್ಲ. ನಿಮ್ಮ ವಯಸ್ಸು 35 ವರ್ಷವೆಂದುಕೊಳ್ಳಿ. 36 ವರ್ಷಗಳ ಹಿಂದೆ ನೀವೆಲ್ಲಿದ್ದಿರಿ ಎಂಬುವುದನ್ನು ಹೇಳುವುದು ನಿಮಗೆ ಸಾಧ್ಯವೇ? ನಿಮಗೆ ಹೇಳುವುದು ಸಾಧ್ಯವಿಲ್ಲ. ಅಥವಾ ನೀವು ನೂರು ವರ್ಷ ಬದುಕುತ್ತೀರಿ ಎಂದು ಭಾವಿಸಿಕೊಳ್ಳಿ. ನೂರು ವರ್ಷಗಳ ಅನಂತರ ನೀವೆಲ್ಲಿರುತ್ತೀರಿ ಎಂದು ಹೇಳಬಲ್ಲಿರಾ? ನಿಮಗೆ ಹೇಳಲಾಗದು, ಏಕೆಂದರೆ ನೀವು ಪರಿಪೂರ್ಣರಲ್ಲ. ಆದರೆ ದೇವರು ಅಪರಿಪೂರ್ಣನಲ್ಲ. ಭಗವಂತ ಪರಿಪೂರ್ಣ ಜೀವಿ.

ಯೋಗ ಪದ್ಧತಿ ಕೂಡ ಆ ತೀರ್ಮಾನವನ್ನು ಸ್ವೀಕರಿಸುತ್ತದೆ. ಯೋಗ ಪದ್ಧತಿಯಂತೆ, ದೇವರು ಪರಮ ಪುರುಷ, ಮುಖ್ಯವಾಗಿ ಅವನೊಬ್ಬ ವ್ಯಕ್ತಿ. ಪ್ರತಿಯೊಂದು ಜೀವಿಯೂ ವ್ಯಕ್ತಿಯೇ. ಆದರೆ ಈ ವ್ಯಕ್ತಿ – ಭಗವಂತ – ಎಲ್ಲ ದೋಷಗಳಿಂದ ಮುಕ್ತ. ಅವನು ದೋಷಮುಕ್ತ ಆಗಿರುವುದರಿಂದ ಅವನ ಹೇಳಿಕೆಗಳು ದೋಷಮುಕ್ತವಾಗಿವೆ. “ನಾನು ಪರಿಪೂರ್ಣನಾಗಿಲ್ಲದಿರುವುದರಿಂದ ನನ್ನ ಹೇಳಿಕೆಗಳು ಪರಿಪೂರ್ಣವಲ್ಲ. ನನಗೆ ಭೂತ ಮತ್ತು ಭವಿಷ್ಯದ ಬಗೆಗೆ ಗೊತ್ತಿಲ್ಲ.”

ಭವಿಷ್ಯದಲ್ಲಿ ನೀವು ಹೀಗಿರುತ್ತೀರಿ, ಅಥವಾ ಹಿಂದೆ ಹಾಗೆ ಇದ್ದಿರಲ್ಲವೇ ಎಂದು ನಾನು ಹೇಗೆ ಹೇಳಬಲ್ಲೆ? ನನಗೆ ಹೇಳಲಾಗದು. ಭೂತ, ವರ್ತಮಾನ ಮತ್ತು ಭವಿಷ್ಯವನ್ನು ನೋಡಬಲ್ಲವರು ಮಾತ್ರ ಅದನ್ನು ಹೇಳಬಲ್ಲರು.

ಇಂದಿನ ಶ್ಲೋಕವು ಪರಮ ಪುರುಷನ ಹೇಳಿಕೆ. ನಾವು ಅದನ್ನು ನಂಬಬೇಕು. ನಂಬದಿದ್ದರೆ ನಮಗೇ ನಷ್ಟ.

ಭಗವಂತ, ನಮ್ಮ ವ್ಯತ್ಯಾಸ

ದೇವರು ಪರಿಪೂರ್ಣ ಜೀವಿ, ಶಾಶ್ವತ ಮತ್ತು ಸರ್ವವ್ಯಾಪಿ. ನೀವು ನನ್ನ ಮುಂದೆ ಕುಳಿತಿರುವಿರಿ. ಆದರೆ ನೀವು ನಿಮ್ಮ ನಿವಾಸದಿಂದ ಗೈರುಹಾಜರಾಗಿದ್ದಿರಿ. ಆದರೆ ದೇವರು ಹಾಗಲ್ಲ. ಕೃಷ್ಣನು ಅರ್ಜುನನ ಮುಂದಿದ್ದು ಬೋಧಿಸುತ್ತಿದ್ದರೂ ಅದೇ ವೇಳೆ ಸರ್ವವ್ಯಾಪಿ. ಒಂದು ಉದಾಹರಣೆ : ಮಧ್ಯಾಹ್ನದಲ್ಲಿ ಸೂರ್ಯನು ನಿಮ್ಮ ತಲೆಯ ಮೇಲಿರುವುದನ್ನು ನೋಡುವಿರಿ. ಐದು ಸಾವಿರ ಮೈಲಿಗಳ ಆಚೆ ಇರುವ ನಿಮ್ಮ ಸ್ನೇಹಿತನನ್ನು, `ಸೂರ್ಯನೆಲ್ಲಿದ್ದಾನೆ?’ ಎಂದು ಕೇಳಿ. ಅವನು, `ನನ್ನ ತಲೆಯ ಮೇಲೆ’ ಎಂದು ಉತ್ತರಿಸುತ್ತಾನೆ. ಐಹಿಕ ಜಗತ್ತಿನ ಒಂದು ವಸ್ತು `ಸರ್ವವ್ಯಾಪಿ’ಯಾಗಿದ್ದರೆ, ಪರಮ ಆಧ್ಯಾತ್ಮಿಕಕ್ಕೂ ಹಾಗಿರಲು ಸಾಧ್ಯವಿಲ್ಲವೇ? ಅವನಿಗೆ ಖಂಡಿತ ಸಾಧ್ಯ.

ಭಗವಂತನು ಶಾಶ್ವತ ಪರಿಪೂರ್ಣ ಎಂದೂ ವೈದಿಕ ಧರ್ಮಗ್ರಂಥಗಳು ಹೇಳುತ್ತವೆ. ಅವನ ಪ್ರಜ್ಞೆಯು ಚಿರಂತನ. ಅವನಿಗೆ ಶಾಶ್ವತ ಪ್ರಜ್ಞೆ ಇರುವುದರಿಂದ ಅವನು, “ನೀನು ಮತ್ತು ನಾನು ಮತ್ತು ಎಲ್ಲ ಜೀವಿಗಳು ಹೀಗಿದ್ದದ್ದು” ಎಂದು ಹೇಳುವುದು ಸಾಧ್ಯ. ನನ್ನ ಹಿಂದಿನ ಜನ್ಮದಲ್ಲಿ ನಾನು ಏನಾಗಿದ್ದೆ ಎಂಬುವುದನ್ನು ಅವನು ವಾಸ್ತವವಾಗಿ ಅನುಭವಿಸಿದ್ದಾನೆ. ನನ್ನ ಪ್ರಜ್ಞೆ ಶಾಶ್ವತವಲ್ಲದ ಕಾರಣ ನಾನು ಮರೆತುಬಿಟ್ಟಿದ್ದೇನೆ. ಮತ್ತು ಮುಂದಿನ ಜನ್ಮದಲ್ಲಿ ನಾನೇನಾಗಬಹುದೆಂದು ನಾನು ಹೇಳಲಾರೆ.

ಭಗವಂತ ಮತ್ತು ನಮ್ಮ ನಡುವಣ ವ್ಯತ್ಯಾಸಗಳಿವು. ನಾವು ತಪ್ಪಾಗಿ, `ನಾನು ದೇವರು. ನಾನು ಆ ಪರಮ ಪ್ರಜ್ಞೆ’ ಎಂದು ಹೇಳಿಕೊಂಡರೆ ಅದು ಹುಚ್ಚುತನ. ನಾವು ಅಂತಹ ಮಾತುಗಳಲ್ಲಿ ತೊಡಗಬಾರದು ಮತ್ತು ಆ ರೀತಿ ಬೋಧಿಸುತ್ತಿರುವವರು ವಂಚಿಸುತ್ತಿದ್ದಾರೆ ಎಂದೇ ತಿಳಿಯಬೇಕು. ಚಿರಂತನ, ಸರ್ವವ್ಯಾಪಿ, ಸರ್ವಶಕ್ತ ಮತ್ತು ಸರ್ವಜ್ಞನಾದ, ಪರಿಪೂರ್ಣನಾದ ದೇವರು ನಾವೆನ್ನುವುದು ಸಾಧ್ಯವಿಲ್ಲ.

ದೇವರನ್ನು ಹೊರತುಪಡಿಸಿ ಉಳಿದೆಲ್ಲ ಜೀವಿಗಳು ಅಜ್ಞಾನ ಮತ್ತು ಅಹಂಗೆ ಒಳಪಟ್ಟಿರುತ್ತಾರೆ. ದೇವರ ಅರ್ಹತೆ ಇಲ್ಲದೆ , `ನಾನು ದೇವರು’ ಎಂದು ಘೋಷಿಸುತ್ತಾರೆ. ಇದು ಅಹಂಕಾರ. ನಾವೆಲ್ಲರೂ ನಮ್ಮ ಕ್ರಿಯೆಯ ಪ್ರತಿಕ್ರಿಯೆಗೆ ಒಳಪಟ್ಟಿರುತ್ತೇವೆ. ನಾವು ಏನಾದರೂ ಒಳ್ಳೆಯದನ್ನು ಮಾಡಿದರೆ ನಮಗೆ ಒಳ್ಳೆಯ ಫಲ ಲಭ್ಯ. ನಾವು ಕೆಟ್ಟದ್ದನ್ನು ಮಾಡಿದರೆ ಕೆಟ್ಟ ಫಲ ಸಿಗುತ್ತದೆ. ನಾವು ದೋಷಪೂರ್ಣರಾದ್ದರಿಂದ ನಾವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಮಾಡುತ್ತೇವೆ.

ಯಾರನ್ನು ಅನುಸರಿಸಬೇಕು?

ಭಗವಂತನು ಸರ್ವೋತ್ತಮ. ನಾವು ದೇವರನ್ನು ಅಥವಾ ಅವನ ಪ್ರತಿನಿಧಿಯನ್ನು ಅನುಸರಿಸಿದರೆ ಒಳ್ಳೆಯವರಾಗುತ್ತೇವೆ. ಅವರು ಒಳ್ಳೆಯವರಾಗಿರುವುದರಿಂದ ಅವರು ಕೆಟ್ಟ ಮಾರ್ಗ ತೋರಿಸುವುದು ಸಾಧ್ಯವಿಲ್ಲ. ಆದುದರಿಂದ ಎಲ್ಲರೂ ಭಗವಂತನ ಬೋಧನೆಯನ್ನು ಅನುಸರಿಸಬೇಕು. ಅದು ಭಕ್ತಿ ಸೇವೆ. ಭಗವಂತನ ಸೇವೆಯಿಂದ ಯಾರೂ ಮಾರ್ಗ ಬದಲಿಸಬಾರದು.

ಇಡೀ ಭಗವದ್ಗೀತೆಯು ಆ ತತ್ತ್ವವನ್ನು ಬೋಧಿಸುತ್ತಿದೆ. ಇಂದಿನ ಶ್ಲೋಕವು ಗೀತೆಯ ಆರಂಭದ್ದು. ಮತ್ತು ಅಂತ್ಯದಲ್ಲಿ ಭಗವಂತನು ಅರ್ಜುನನಿಗೆ ಹೇಳುತ್ತಾನೆ :

ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।

ಅಹಂ ತ್ವಾಂ ಸರ್ವಪಾಪೇಭ್ಯೋ ಮೊಕ್ಷಯಿಷ್ಯಾಮಿ ಮಾ ಶುಚಃ ॥

“ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಹೆದರಿಕೊಳ್ಳಬೇಡ.” ನಾವು ಎಲ್ಲ ರೀತಿ ಒಳ್ಳೆಯವರಾಗಬೇಕಾಗಿದ್ದರೆ ಎಲ್ಲ ರೀತಿಯಿಂದಲೂ ಒಳ್ಳೆಯವನಾಗಿರುವವನನ್ನು ಅನುಸರಿಸಬೇಕು. ಅದು ನಮ್ಮ ಬದುಕನ್ನು ಪರಿಪೂರ್ಣಗೊಳಿಸುತ್ತದೆ.

ಈ ಲೇಖನ ಶೇರ್ ಮಾಡಿ