ನಾವು ಈಗಾಗಲೇ ನಮ್ಮ ಕುಟುಂಬಗಳ, ನಮ್ಮ ದೇಶಗಳ ಇಚ್ಛಾಪೂರ್ಣ ಸೇವಕರು. ಅಷ್ಟೇ ಏಕೆ ನಮ್ಮ ನಾಯಿಗಳಿಗೂ ಸೇವಕರು. ಹಾಗಾದರೆ, ನಾವು ಭಗವಂತನ ಸೇವಕರೆಂದು ಹೇಳುವುದನ್ನು ದ್ವೇಷಿಸುವುದೇಕೆ?

ಮಹಾರಾಜ ಪರೀಕ್ಷಿತನು ಶ್ರೀ ವಿಷ್ಣುವಿನ ಬಗೆಗೆ ಕೇಳಿ ಅತ್ಯುನ್ನತ ಪರಿಪೂರ್ಣತೆಯಾದ ಶ್ರೀ ಕೃಷ್ಣನ ಚರಣ ಕಮಲದಲ್ಲಿ ಆಶ್ರಯ ಪಡೆದನು. ಶ್ರೀಮದ್ ಭಾಗವತವನ್ನು ಪಠಿಸಿ ಶುಕದೇವ ಗೋಸ್ವಾಮಿಯವರು ಪರಿಪೂರ್ಣತೆಯನ್ನು ಹೊಂದಿದರು. ಪ್ರಹ್ಲಾದ ಮಹಾರಾಜನು ಭಗವಂತನನ್ನು ನೆನೆದು ಪರಿಪೂರ್ಣತೆಯನ್ನು ಪಡೆದನು. ಅದೃಷ್ಟ ದೇವತೆಯು ಮಹಾ ವಿಷ್ಣುವಿನ ಅಲೌಕಿಕ ಕಾಲುಗಳನ್ನು ಒತ್ತಿ ಪರಿಪೂರ್ಣತೆಯನ್ನು ಹೊಂದಿದಳು. ಮಹಾರಾಜ ಪೃಥುವು ಭಗವಂತನ ವಿಗ್ರಹಾರಾಧನೆ ಮಾಡಿ ಪರಿಪೂರ್ಣತೆಯನ್ನು ಪಡೆದನು. ಮತ್ತು ಅಕ್ರೂರನು ಪ್ರಭುವಿಗೆ ಪ್ರಾರ್ಥನೆ ಸಲ್ಲಿಸಿ ಪರಿಪೂರ್ಣತೆ ಹೊಂದಿದನು. ಶ್ರೀರಾಮನಿಗೆ ಸೇವೆ ಸಲ್ಲಿಸುತ್ತ ಹನುಮಂತನು ಪರಿಪೂರ್ಣತೆಯನ್ನು ಸಾಧಿಸಿದನು ಮತ್ತು ಅರ್ಜುನನು ಕೃಷ್ಣನ ಮಿತ್ರನಾಗಿ ಪರಿಪೂರ್ಣತೆಯನ್ನು ಪಡೆದನು. ಬಲಿ ಮಹಾರಾಜನು ಶ್ರೀಕೃಷ್ಣನ ಚರಣಕಮಲಗಳಿಗೆ ಎಲ್ಲವನ್ನೂ ಅರ್ಪಿಸಿ ಪರಿಪೂರ್ಣತೆ ಸಾಧಿಸಿದನು.
(ಭಕ್ತಿ ರಸಾಮೃತ ಸಿಂಧು 1.2.265)

ಕೃಷ್ಣ ಪ್ರಜ್ಞೆ ಆಂದೋಲನವು ಮುಖ್ಯವಾದುದೊಂದನ್ನು ಜಗತ್ತಿಗೆ ನೆನಪಿಸುತ್ತದೆ : ನಾವೆಲ್ಲರೂ ಭಗವಂತನ ಸೇವಕರು ಎಂದು ಕೇಳಲು ಜನಸಂದಣಿ ಏನೂ ಇರುವುದಿಲ್ಲ. ಜನರೇ ದೇವರೆಂದು ಹೇಳಿಕೊಳ್ಳುವ ಸ್ವಾಮಿಗಳ ಬಳಿಗೆ ಜನಸಾಗರ ಹರಿದು ಬರುತ್ತದೆ. ನಿಜವಾಗಿಯೂ ಜನರಿಗೆ ದೇವರನ್ನು ಕುರಿತು ಹೆಚ್ಚೇನೂ ತಿಳಿಯದ ಕಾರಣ ಅವರಿಗೆ ಭಗವಂತನಿಗೆ ಸೇವೆ ಸಲ್ಲಿಸುವುದು ಏನೆಂಬುದರ ಬಗೆಗೆ ಕಿಂಚಿತ್ತೂ ಅರಿವಿಲ್ಲ. ಆದರೆ ಭಗವಂತನನ್ನು ಬಲ್ಲ ಮತ್ತು ಅವನ ಸೇವೆ ಗೈಯುವ ಅಪರೂಪದ ಆತ್ಮಗಳು ತಮಗೆ ಲಭಿಸುವ ಆನಂದವು ಅವರ್ಣನೀಯ ಎನ್ನುತ್ತಾರೆ. ಏನೇ ಆಗಲಿ, ಅವರು ಭಗವಂತನಿಗೆ ಸೇವೆ ಸಲ್ಲಿಸುತ್ತಿರುವುದು. ಯಾರಿಗಾದರೂ ಸೇವೆ ಸಲ್ಲಿಸಬೇಕೆಂದಿದ್ದರೆ, ಪರಮನಿಗೆ ಸೇವೆ ಏಕೆ ಮಾಡಬಾರದು?

ನಾವು ಅದನ್ನು ಒಪ್ಪಿಕೊಳ್ಳದಿದ್ದರೂ ನಾವು ಒಂದಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸಲೇಬೇಕು. ನಾವು ಸದಾ ಬೇರೆಯವರ ಸೇವೆ ಗೈಯುತ್ತಿರುತ್ತೇವೆ – ನಮ್ಮ ಉದ್ಯೋಗದಾತರು, ನಮ್ಮ ಗ್ರಾಹಕರು, ನಮ್ಮ ಕುಟುಂಬಗಳು. ಸೇವೆ ಮಾಡಲು ಯಾರೂ ಸಿಗದಿದ್ದರೆ, ನಾವು ಸಾಕುಪ್ರಾಣಿಯ ಸೇವೆಗೈಯುತ್ತೇವೆ.
ಸೇವಕನೆಂದು ಕರೆಸಿಕೊಳ್ಳುವುದು ಹೀನಾಯವೆಂದು ಕಂಡುಬಂದರೂ ನಾವು ಯಾವುದೇ ಗೊಣಗಾಟವಿಲ್ಲದೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸುತ್ತೇವೆ. ಏಕೆ? ಏಕೆಂದರೆ ನಮಗೆ ಉದ್ದೇಶವಿದೆ. ನಾವು ನಮ್ಮ ಸೇವೆಗೆ ಪ್ರತಿಫಲ ನಿರೀಕ್ಷಿಸುತ್ತೇವೆ, ಪ್ರೀತಿ ಅಥವಾ ಹಣ. ನಮಗೆ ಸಂತೃಪ್ತಿ ಬೇಕು, ಭಗವಂತನಿಗೆ ಸೇವೆ ಸಲ್ಲಿಸಿದಾಗ ಅದು ದೊರೆಯುವುದೆಂಬ ನಿರೀಕ್ಷೆ ನಮಗೆ ಇರುವುದಿಲ್ಲ.
ದೇವರಲ್ಲದೆ ಬೇರೆ ಯಾರಿಗೋ ಸೇವೆ ಸಲ್ಲಿಸಿದರೆ ಏನಾಗುತ್ತದೆ? ನಾವು ನಿರೀಕ್ಷಿಸುವ ಪ್ರತಿಫಲ ಸಿಗುತ್ತದೆಯೆ? ನಿಜವಾಗಿಯೂ ಇಲ್ಲ. ನಾವು ಆಶಿಸುವ ದೀರ್ಘಾವಧಿ ಸಂತೋಷ ಸಿಗುವುದಿಲ್ಲ. ನಮಗೆ ಅದು ಬೇಕಾಗಿದ್ದರೆ, ನಾವು ನಮ್ಮ ಆದಿ ದೇವ ಮತ್ತು ಮಾಲೀಕ ಮತ್ತು ಎಲ್ಲ ಆನಂದಗಳ ಸಾಗರನಾದ ಪರಮ ಪುರುಷನಿಗೆ ಸೇವೆ ಸಲ್ಲಿಸಬೇಕು.
ಇದು ತುಂಬ ಸರಳವಾದ ಕಲ್ಪನೆ. ವೈದಿಕ ಸಾಹಿತ್ಯವು ಇದನ್ನು ಒಂದೆರಡು ಸಾದೃಶ್ಯಗಳೊಂದಿಗೆ ವಿವರಿಸುತ್ತದೆ : ನಿಮ್ಮ ದೇಹದ ಅಂಗಾಂಗಗಳಿಗೆ ಪೋಷಣೆ ನೀಡಬೇಕೆಂದರೆ ನೀವು ನಿಮ್ಮ ಉದರಕ್ಕೆ ಆಹಾರ ನೀಡಬೇಕು. ನೀವು ಮರದ ಎಲೆಗಳು ಮತ್ತು ಹೂವುಗಳಿಗೆ ನೀರು ಹಾಕಬೇಕೆಂದರೆ ನೀವು ಮರದ ಬೇರಿಗೆ ನೀರುಣಿಸಬೇಕು.
ಭಗವಂತ ಅಥವಾ ಕೃಷ್ಣನು ಎಲ್ಲದರ ಬೇರು, ಮೂಲ. ಅವನು ಸ್ವತಃ ಇದನ್ನು ಭಗವದ್ಗೀತೆಯಲ್ಲಿ ವಿವರಿಸುತ್ತಾನೆ : ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ – “ಎಲ್ಲ ಆಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳ ಮೂಲವು ನಾನೇ. ಎಲ್ಲವೂ ನನ್ನಿಂದ ಹೊರಸೂಸುತ್ತದೆ.”
ಗೀತೆಯ ಮಹತ್ತ್ವ
ಕೃಷ್ಣನು ದೇವರು, ಪರಮ ಸತ್ಯ, ಎಲ್ಲದರ ಮೂಲ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಅತ್ಯುತ್ತಮ ಸಾಕ್ಷಿ ಎಂದರೆ ಕೃಷ್ಣನ ಮಾತು. ಕೃಷ್ಣನ ಗೀತೆಯನ್ನು ಸಾವಿರಾರು ವರ್ಷಗಳಿಂದ ಅಸಂಖ್ಯ ಜನರು ಓದುತ್ತಿದ್ದಾರೆ, ಗೌರವಿಸುತ್ತಿದ್ದಾರೆ ಮತ್ತು ಪೂಜಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಎಮರ್ಸನ್, ಥೋರೋ, ಷೋಪನ್‌ಹಾವರ್ ಅವರಂತಹ ಚಿಂತಕರು ಕೃಷ್ಣನ ಬೋಧನೆಗಳ ಅಧ್ಯಯನ ಮಾಡಿದ್ದಾರೆ. ಕೃಷ್ಣನ ಬೋಧನೆಯ ಅಧ್ಯಯನ ಮಾಡುವಷ್ಟು ಅವನ ಸಮಗ್ರತೆಯನ್ನು ನಾವು ಗೌರವಿಸಿದರೆ, ಅವನು ದೇವೋತ್ತಮ ಪರಮ ಪುರುಷನೆಂದು ನಾವು ಸೈದ್ಧಾಂತಿಕವಾಗಿಯಾದರೂ ಒಪ್ಪಿಕೊಳ್ಳಬೇಕೆಂದು ಶ್ರೀಲ ಪ್ರಭುಪಾದರು ಸಲಹೆ ಮಾಡುತ್ತಾರೆ. ಅವನು ಅದನ್ನೇ ಹೇಳುವುದು ಮತ್ತು ದಿಟವಾಗಿ ಅವನನ್ನು ಹಾಗೆ ಸ್ವೀಕರಿಸಿದಾಗ ಮಾತ್ರ ಗೀತೆಯು ಗ್ರಾಹ್ಯವಾಗುತ್ತದೆ, ಗ್ರಹಿಸಲ್ಪಡುತ್ತದೆ. “ರಹಸ್ಯಗಳಲ್ಲಿ ಅತ್ಯಂತ ರಹಸ್ಯವಾದುದು” ಅರ್ಜುನನಿಗೆ ಸ್ಪಷ್ಟವಾಗಿತ್ತು. ಏಕೆಂದರೆ, ಕೃಷ್ಣನೇ ಹೇಳಿದಂತೆ, “ನೀನು ಎಂದೂ ನನ್ನ ಬಗೆಗೆ ಅಸೂಯೆ ಹೊಂದಿಲ್ಲ.” ನಾವು ಅಸೂಯೆಯನ್ನು ಬದಿಗೊತ್ತಿದರೆ, ನಾವು ಕೃಷ್ಣನು ಹೇಳುತ್ತಿರುವುದನ್ನು ಪರಿಗಣಿಸಬಹುದು.

ನಾವೆಲ್ಲರೂ ಅವನ ಅವಿಭಾಜ್ಯ ಅಂಗವೆಂದು ಕೃಷ್ಣನು ವಿವರಿಸುತ್ತಾನೆ. ಆದುದರಿಂದ ಅವನಿಗೆ ಸೇವೆ ಸಲ್ಲಿಸಿದಾಗ ನಮಗೆ ಸ್ವಾಭಾವಿಕವಾಗಿ ಸಂತೃಪ್ತಿ ಉಂಟಾಗುತ್ತದೆ. ಆದರೆ ಅನೇಕ ಜನರಿಗೆ ಭಗವಂತನಿಗೆ ಸೇವೆ ಸಲ್ಲಿಸುವುದು (ಅಗ್ರಾಹ್ಯ) ಗ್ರಹಿಸಲಾಗದಿರುವಂತಿದೆ. ಅವರಿಗೆ ದೇವರು ದೂರ ಎನ್ನುವಂತೆ ಕಾಣುತ್ತದೆ. ನಾವು ಹೇಳುತ್ತೇವೆ, “ಇದು ನಮ್ಮ ಕುಟುಂಬದ ಸದಸ್ಯರಿಗೆ ಸೇವೆ ಸಲ್ಲಿಸಿದಂತೆ ಅಲ್ಲ. ಅವರು ಇಲ್ಲೇ ನಮ್ಮ ಮುಂದೆ ಇದ್ದಾರೆ. ಅವರಿಗೆ ಸೇವೆ ಸಲ್ಲಿಸುವುದು ಸ್ವಾಭಾವಿಕ. ಅದನ್ನು ಮಾಡುವುದು ನನಗೆ ಇಷ್ಟ.”
ಕೌಟುಂಬಿಕ ಪ್ರೀತಿ ವಾತ್ಸಲ್ಯವು ತುಂಬ ಬಲವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಸುದೀರ್ಘ ಕಾಲ ಜೊತೆಯಾಗಿದ್ದವರು ಅಗಲಿಕೆಯನ್ನು ಸಹಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ನನ್ನ ಅಜ್ಜ ಅಜ್ಜಿ 60 ವರ್ಷ ಜೊತೆ ಇದ್ದರು. ಅವರಿಬ್ಬರೂ ಒಂದು ವಾರ ಅಂತರದಲ್ಲಿ ನಿಧನರಾದರು. ನನ್ನ ಅಜ್ಜಿಗೆ ಗಂಡನನ್ನು ಬಿಟ್ಟು ಜೀವಿಸುವುದು ಸಾಧ್ಯವಿರಲಿಲ್ಲ. 60 ವರ್ಷಗಳಲ್ಲಿ ಅಂತಹ ಗಾಢ ಬಾಂಧವ್ಯ ಉಂಟಾಗುವುದು ಸಾಧ್ಯವಾದರೆ, “ಇಲ್ಲೇ”, ನಮ್ಮ ಹೃದಯದಲ್ಲಿಯೇ ಸದಾ ಇರುವ ಕೃಷ್ಣನೊಂದಿಗೆ ನಮ್ಮ ಬಾಂಧವ್ಯ ಎಷ್ಟು ಗಾಢವಾಗಿರಬೇಡ?
ಸರ್ವಾಕರ್ಷಕ ಕೃಷ್ಣನೊಂದಿಗಿನ ಆ ಬಾಂಧವ್ಯವನ್ನು ನಾವು ಎಚ್ಚರಗೊಳಿಸಿದಾಗ ನಮಗೆ ಸ್ವಾಭಾವಿಕವಾಗಿಯೇ ಅವನ ಸೇವೆ ಸಲ್ಲಿಸಬೇಕೆನಿಸುತ್ತದೆ. ಅದಕ್ಕೆ ಸ್ವಲ್ಪ ಅಭ್ಯಾಸ ಬೇಕಷ್ಟೆ. ಮಗುವು ಅಭ್ಯಾಸಬಲದಿಂದ ನಡೆಯುತ್ತದೆ. ಏಕೆಂದರೆ ಅದಕ್ಕೆ ಅದರೊಳಗೇ ಆ ಸಾಮರ್ಥ್ಯವಿರುತ್ತದೆ.
ದೇವೋತ್ತಮ ಪರಮ ಪುರುಷನಿಗೆ ಸೇವೆ ಸಲ್ಲಿಸುವ ಒಂಬತ್ತು ವಿಧಾನಗಳನ್ನು ವೈದಿಕ ಸಾಹಿತ್ಯವು ವಿವರಿಸುತ್ತದೆ : ಕೃಷ್ಣನ ಬಗೆಗೆ ಕೇಳುವುದು, ಅವನ ವೈಭವಗಳನ್ನು ಜಪಿಸುವುದು, ಅವನ ನೆನಪು ಮಾಡಿಕೊಳ್ಳುವುದು, ಅವನ ಕಾರ್ಯದಲ್ಲಿ ತೊಡಗುವುದು. ಅವನನ್ನು ಪೂಜಿಸುವುದು, ಪ್ರಾರ್ಥಿಸುವುದು, ದೃಢ ನಿಷ್ಠೆಯಿಂದ ಅವನಿಗೆ ಸೇವೆ ಸಲ್ಲಿಸುವುದು, ಅವನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಮತ್ತು ಅವನಿಗೆ ಸಂಪೂರ್ಣವಾಗಿ ಶರಣಾಗುವುದು. ಸಂಪೂರ್ಣ ಪ್ರೀತಿಯಿಂದ ಮಾಡದಿದ್ದರೂ ಕೂಡ ಭಕ್ತಿ ಯೋಗದ (ಭಕ್ತಿಸೇವೆ ಮೂಲಕ ಭಗವಂತನೊಂದಿಗೆ ಸಂಪರ್ಕ) ಈ ಒಂಬತ್ತು ಅಂಶಗಳು ಅವನೊಂದಿಗಿನ ನಮ್ಮ ಬಾಂಧವ್ಯದಲ್ಲಿ ಕ್ರಮೇಣ ನಮಗೆ ಪರಿಪೂರ್ಣತೆಯನ್ನು ತಂದುಕೊಡುತ್ತವೆ.

ಭಕ್ತಿ ಯೋಗವು ಎಷ್ಟು ಶಕ್ತಿಯುತವಾಗಿದೆ ಎಂದರೆ, ವೈದಿಕ ಸಾಹಿತ್ಯವು ಯಾವುದಾದರೂ ಒಂದು ವಿಧದ ಸೇವೆಯನ್ನು ಪರಿಪೂರ್ಣಗೊಳಿಸುವ ಮೂಲಕ ಭಗವಂತನ ಪ್ರೇಮಕ್ಕೆ ಪಾತ್ರರಾದವರ ಕಥೆಗಳಿಂದ ತುಂಬಿದೆ. ಉದಾಹರಣೆಗೆ ಶುಕದೇವ ಗೋಸ್ವಾಮಿ ಅವರು ಭಾಗವತವನ್ನು ಪಠಿಸಿ ತಮ್ಮ ಕೃಷ್ಣ ಪ್ರಜ್ಞೆಯನ್ನು ಪರಿಪೂರ್ಣಗೊಳಿಸಿಕೊಂಡರು ಮತ್ತು ಶುಕದೇವರ ಚರಣದಲ್ಲಿ ಕುಳಿತ ಪರೀಕ್ಷಿತ ಮಹಾರಾಜನು ಕೃಷ್ಣನನ್ನು ಕುರಿತ ಅಲೌಕಿಕ ವಿಷಯಗಳನ್ನು ಕೇಳಿ ಪರಿಪೂರ್ಣತೆಯನ್ನು ಸಾಸಿದನು.
ಕೇಳುವುದೇ ಮುಖ್ಯ
ಎಲ್ಲ ವಿಧಾನಗಳೂ ಮುಖ್ಯ ಮತ್ತು ಪರಿಣಾಮಕಾರಿಯಾದರೂ ಕೂಡ ಕೇಳುವುದೇ ಆರಂಭ ಮತ್ತು ತುಂಬ ಮುಖ್ಯವಾದುದು. ನಾವು ಕೃಷ್ಣನ ಬಗೆಗೆ ಕೇಳದೆ ಮತ್ತು ಅವನಿಗಾಗಿ ನಮ್ಮ ಪ್ರೀತಿಯನ್ನು ಪುನರ್ ಎಚ್ಚರಿಸುವುದು ಹೇಗೆ ಎಂದು ಕೇಳದೆ ನಾವು ನಮ್ಮ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸುವುದೂ ಸಾಧ್ಯವಿಲ್ಲ. ಚೈತನ್ಯ ಚರಿತಾಮೃತವು ಹೇಳುತ್ತದೆ, ನಿತ್ಯ ಸಿದ್ಧ ಕೃಷ್ಣ ಪ್ರೇಮ `ಸಾದ್ಯ’ ಕಬು ನಯ/ ಶ್ರವಣಾದಿ ಶುದ್ಧ ಚಿತ್ತೇ ಕರಯೇ ಉದಯ : “ಜೀವಿಯೊಳಗೆ ಕೃಷ್ಣಪ್ರೇಮವು ಶಾಶ್ವತವಾಗಿ ನೆಲೆಸಿರುತ್ತದೆ. ಕೇಳುವುದನ್ನು ಆರಂಭಿಸುವ ಮೂಲಕ, ಭಕ್ತಿಸೇವೆಯಿಂದ ಅದನ್ನು ಪುನರ್ ಎಚ್ಚರಿಸಬಹುದು.”

ನಾವು ದೀರ್ಘಾವಧಿಯಿಂದ ಭಕ್ತಿಸೇವೆಯ ವಿಷಯದಲ್ಲಿ ನಿದ್ರಾವಸ್ಥೆಯಲ್ಲಿದ್ದೇವೆ. ಕೃಷ್ಣನ ಬಗೆಗೆ ಕೇಳಿದ ಮೇಲೆ ಕೂಡ ಅವನಿಗೆ ಸೇವೆ ಸಲ್ಲಿಸುವುದು ಬೇಸರದ ಕೆಲಸ ಎಂದು ಭಾವಿಸುತ್ತೇವೆ. ಈ ಲೋಕದಲ್ಲಿ ಸುಖಿಸುವವರಲ್ಲಿ ನಾವೇ ಮೊದಲಿಗರೆಂಬ ತಪ್ಪು ಗ್ರಹಿಕೆಯಿಂದ ನಾವು ಮುಕ್ತರಾಗುವವರೆಗೂ ನಾವು ಪರಮ ಪ್ರಭುವಿಗೆ ನಿಸ್ವಾರ್ಥ ಸೇವೆ ಗೈಯುವುದು ಸಾಧ್ಯವಿಲ್ಲ. ನಮಗೆ ಸೇವೆ ಮಾಡಿಸಿಕೊಳ್ಳಬೇಕೆಂಬ ಇಚ್ಛೆ. ನಾವು ಇನ್ನೂ ದೇವರ ಬಗೆಗೆ ಅಸೂಯೆ ಹೊಂದಿದ್ದೇವೆ. ಅವನು ಇನ್ನೂ ನಮ್ಮ ಪ್ರತಿಸ್ಪರ್ಧಿ. ಆದರೆ ಮುಂದುವರಿದ ಭಕ್ತಿಸೇವೆಯಿಂದ ನಾವು ನಮಗೆ ಇಷ್ಟ ಬಂದಂತೆ ಮಾಡುವುದು ಸಾಧ್ಯವಿಲ್ಲ ಎಂಬುವುದನ್ನು ಕ್ರಮೇಣ ಅರ್ಥಮಾಡಿಕೊಳ್ಳುತ್ತೇವೆ. ಯಾರಿಗಾದರೂ ರೋಗ ಬರಬಾರದು, ವೃದ್ಧರಾಗಬಾರದು ಮತ್ತು ಸಾಯಬಾರದೆಂಬ ಬಗೆಗೆ ಸ್ವಾತಂತ್ರ್ಯವಿದೆಯೆ? ಈ ಲೋಕದ ಮೇಲೆ ಅಧಿಕಾರ ಹೊಂದಬೇಕೆಂಬ ನಮ್ಮ ಪ್ರಯತ್ನಗಳು ವ್ಯಕ್ತಿಯು ಗೋಡೆಗೆ ತನ್ನ ತಲೆಯನ್ನು ಚಚ್ಚಿಕೊಂಡು ಆನಂದಪಡುವ ಪ್ರಯತ್ನದಂತೆ. ಅವನಿಗೆ ದೊರೆಯುವ ಏಕೈಕ ಆನಂದವೆಂದರೆ ಅವನು ಅದನ್ನು ನಿಲ್ಲಿಸಿದಾಗ ಸಿಗುವ ಪರಿಹಾರ. ಆದರೆ ಭಕ್ತಿಸೇವೆಯ ಆನಂದವು ಲೌಕಿಕ ಸಂಕಟದಿಂದ ಮುಕ್ತವಾಗುವ ಪರಿಹಾರವನ್ನು ಮೀರಿದುದು. ಕೃಷ್ಣನಿಗೆ ಸೇವೆ ಸಲ್ಲಿಸಬೇಕೆಂಬ ನಮ್ಮ ಅಪೇಕ್ಷೆ ಹೆಚ್ಚಿದಷ್ಟೂ ಅಲೌಕಿಕ ಪರಮಾನಂದಕ್ಕೆ ನಮ್ಮ ಪ್ರಜ್ಞೆಯು ಎಚ್ಚರಗೊಳ್ಳುತ್ತದೆ.
ಅಂತಿಮವಾಗಿ ನಾವು ಪರಿಶುದ್ಧ ಕೃಷ್ಣಪ್ರೇಮವನ್ನು ಪುನರುಜ್ಜೀವಗೊಳಿಸಿದಾಗ ನಾವು ಅವನೊಂದಿಗೆ ಅಪೂರ್ವ ಮತ್ತು ಶಾಶ್ವತ ಬಾಂಧವ್ಯವನ್ನು ಪುನರ್ ಸ್ಥಾಪಿಸುತ್ತೇವೆ. ಐಹಿಕ ಲೋಕದಲ್ಲಿ ನಾವು ಜೀವಿಸುವ ಮತ್ತು ಸಾಯುವ ಬಾಂಧವ್ಯಗಳು ಕೃಷ್ಣನೊಂದಿಗೆ ನಾವು ಹಂಚಿಕೊಳ್ಳಬಹುದಾದ ಅಮರ ಬಾಂಧವ್ಯದ ಪೇಲವ ಪ್ರತಿಬಿಂಬವಷ್ಟೆ. ನಾವು ಕೃಷ್ಣನ ಸೇವಕ, ಮಿತ್ರ, ತಂದೆ ತಾಯಿ ಅಥವಾ ಪ್ರೇಮಿಯೂ ಆಗಬಹುದು. ನಮ್ಮ ಸೇವೆಯಿಂದ ಕೃಷ್ಣನ ಹೃದಯ ಎಷ್ಟು ಕರಗುತ್ತದೆ ಎಂದರೆ, ಈ ಲೋಕದ ಕೆಟ್ಟ ಜನರಿಗೆ ಪ್ರತಿಯಾಗಿ ಅವನು ನಿಸ್ವಾರ್ಥದಿಂದ ನಮ್ಮ ಸೇವೆಗೈಯಲು ಪ್ರಯತ್ನಿಸುತ್ತಾನೆ. ಅದೇ ಪರಿಶುದ್ಧ ಪ್ರೇಮದ ಪರಿ.
ಕೃಷ್ಣನ ಜೊತೆಗೂಡುವುದು ನಮಗೆ ಕಷ್ಟವೇನೂ ಆಗಬಾರದು. ಏಕೆಂದರೆ ಭಗವಂತನು ಎಲ್ಲ ಆನಂದಗಳ ಮೂಲ ಮತ್ತು ಅವನೊಂದಿಗಿನ ಬಾಂಧವ್ಯಕ್ಕೆ ಯಾವುದನ್ನೂ ಹೋಲಿಸಲಾಗದು. ಕೃಷ್ಣನೊಂದಿಗೆ ತಮ್ಮ ಬಾಂಧವ್ಯವನ್ನು ಪುನರ್ ಸ್ಥಾಪಿಸಿಕೊಂಡಿರುವ ಕೆಲವು ಭಕ್ತರು ತಮ್ಮ ಅನುಭವವನ್ನು ಪ್ರಾರ್ಥನೆಗಳ ಮೂಲಕ ದಾಖಲಿಸಿದ್ದಾರೆ. ರಾಜ ಕುಲಶೇಖರ ಈ ರೀತಿ ಪ್ರಾರ್ಥಿಸಿದ್ದಾರೆ : “ಓ ಮುಕುಂದ! ನಿನ್ನ ಚರಣ ಕಮಲದ ಮುಂದೆ ನನ್ನ ತಲೆ ಬಾಗುವೆ ಮತ್ತು ನನ್ನ ಒಂದೇ ಅಪೇಕ್ಷೆಯನ್ನು ಪೂರೈಸಬೇಕೆಂದು ನಿನ್ನಲ್ಲಿ ಗೌರವಪೂರ್ಣವಾಗಿ ಕೋರುವೆ : ಜನುಮಜನುಮಗಳಲ್ಲಿ ನಾನು ನಿನ್ನನ್ನು ಎಂದಿಗೂ ಮರೆಯಬಾರದು ಮತ್ತು ನಿನ್ನ ಕೃಪೆಯಿಂದ ಸದಾ ನಿನ್ನನ್ನು ನೆನೆಯಬೇಕು.”
ರಾಜ ಕುಲಶೇಖರನು ಭಗವಂತನ ಸೇವಕನಾಗಿ ತನ್ನ ಸ್ಥಾನವನ್ನು ಅರಿತುಕೊಂಡಿದ್ದನು. ಅವನು ಕೃಷ್ಣನನ್ನು `ಮುಕುಂದ’ ಎಂದು ಕರೆದಿರುವುದು ವಿಶಿಷ್ಟವಾಗಿದೆ. ಮುಕುಂದ ಎಂಬುವುದು ಕೃಷ್ಣನ ಹೆಸರು ಮತ್ತು `ಮುಕ್ತಿ ನೀಡುವವನು’ ಎಂದು ಅದರ ಅರ್ಥ. ಕೃಷ್ಣನ ಕೃಪೆಯಿಂದ ಲೌಕಿಕ ಲೋಕದಿಂದ ಮುಕ್ತಿ ಪಡೆಯುವುದು ಸಾಧ್ಯ ಎಂದು ಗೊತ್ತಿದ್ದರೂ ಕುಲಶೇಖರನು ಅದನ್ನು ಲಕ್ಷಿಸುವುದಿಲ್ಲ. ಕೃಷ್ಣನನ್ನು ನೆನೆಯುತ್ತ ಸದಾ ಅವನ ಸೇವೆ ಸಲ್ಲಿಸುವ ವರವು ಅವನಿಗೆ ಬೇಕಾಗಿತ್ತು. ಇದು ಅವನು ಲೌಕಿಕ ಲೋಕದಲ್ಲಿಯೇ ಉಳಿಯುವಂತಾದರೂ ಪರವಾಗಿಲ್ಲ.

ಶ್ರೇಷ್ಠ ಭಕ್ತರ ಪ್ರಾರ್ಥನೆಗಳಲ್ಲಿ ಅವರು ಮುಕ್ತಿಯನ್ನು ಅಲ್ಲಗಳೆಯುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ ವಿಮೋಚನೆ, ಸಂಸ್ಕೃತದಲ್ಲಿ ಮುಕ್ತಿ ಎಂಬ ಶಬ್ದವೇ ಭಕ್ತರಿಗೆ ಕೆಲವು ಬಾರಿ ಅಸಹ್ಯಕರವೆನಿಸುತ್ತದೆ. ಏಕೆಂದರೆ ಅದು ನಿರಾಕಾರ ಮುಕ್ತಿಯನ್ನು ಸೂಚಿಸುತ್ತದೆ. ಅಥವಾ ಮಾಯಾವಾದಿಗಳು, ನಿರಾಕಾರವಾದಿಗಳು ಅಪೇಕ್ಷಿಸುವ ಮುಕ್ತಿ, ಭಗವಂತನ ತೇಜಸ್ಸಿನಲ್ಲಿ ಮಿಲನವಾಗುವುದನ್ನು ಅದು ಸೂಚಿಸುತ್ತದೆ. ಭಕ್ತನಿಗೆ ಈ ಕಲ್ಪನೆಯೇ ಜುಗುಪ್ಸೆ ಉಂಟುಮಾಡುತ್ತದೆ. ಪ್ರಬೋಧಾನಂದ ಸರಸ್ವತೀ ಹೇಳುತ್ತಾರೆ, ಕೈವಲ್ಯಂ ನರಕಾಯತೇ : “ನಿರಾಕಾರ ಬ್ರಹ್ಮನ್‌ನಲ್ಲಿ ವಿಲೀನವಾಗುವುದು ನರಕಕ್ಕಿಂತ ಕೆಟ್ಟದಾದುದು.” ಏಕೆ? ಅದು ಕೃಷ್ಣನಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನಿರಾಕರಿಸುತ್ತದೆ.
ಅಮಿತ ಆನಂದ
ಬ್ರಹ್ಮನ್ ಪ್ರಭೆಯನ್ನು ಪ್ರವೇಶಿಸುವ ನಿರಾಕಾರವಾದಿಗಳು ಪಡೆಯುವುದಕ್ಕಿಂತ ಕೃಷ್ಣನ ಸೇವೆಗೈಯುವ ಭಕ್ತರು ಪಡೆಯುವ ಆನಂದವು ಕೋಟ್ಯಂತರ ಪಾಲು ಹೆಚ್ಚು. ಬ್ರಹ್ಮನ್ ಮುಕ್ತಿಯ ಸಂತೋಷವನ್ನು ನೀವು ಲಕ್ಷಾಂತರ ಬಾರಿ ಗುಣಿಸಿದರೆ, ಅದು ಕೃಷ್ಣನಿಗೆ ಸೇವೆ ಸಲ್ಲಿಸುವುದರಿಂದ ಲಭಿಸುವ ಆನಂದದ ಅಣು ಮಾತ್ರಕ್ಕೂ ಸಮವಿಲ್ಲ ಎಂದು ಒಬ್ಬ ಭಕ್ತರು ಹೇಳುತ್ತಾರೆ.
ಭಕ್ತರು ಯಾವುದೇ ಕಾರಣಕ್ಕೂ ಕೃಷ್ಣನ ಸೇವೆಯನ್ನು ಬಿಡುವುದಿಲ್ಲ. ನಿರಾಕಾರವಾದಿಗಳು ಕೃಷ್ಣನ ಭಕ್ತರಾಗಿರುವ ಅನೇಕ ವಿವರಗಳು ವೈದಿಕ ಸಾಹಿತ್ಯದಲ್ಲಿದೆ (ಉದಾಹರಣೆಗೆ ಶುಕದೇವ ಗೋಸ್ವಾಮಿ ಮತ್ತು ನಾಲ್ವರು ಕುಮಾರರು). ಆದರೆ ಭಕ್ತರು ಎಂದಿಗೂ ನಿರಾಕಾರವಾದಿಗಳಾಗುವುದಿಲ್ಲ. ಕೃಷ್ಣ ಪ್ರಜ್ಞೆಯ ಆಚರಣೆಯಿಂದ ಕುಸಿಯುವ ಅಪ್ರಬುದ್ಧ ಭಕ್ತ ಕೂಡ ಕೃಷ್ಣನಿಗೆ ಸೇವೆ ಸಲ್ಲಿಸುವ ಆನಂದವನ್ನು ಎಂದಿಗೂ ಮರೆಯುವುದಿಲ್ಲ ಎಂದು ನಾರದ ಮುನಿಗಳು ಶ್ರೀಮದ್ ಭಾಗವತದ ಮೊದಲ ಸ್ಕಂಧದಲ್ಲಿ ವೈದಿಕ ಸಾಹಿತ್ಯದ ಕರ್ತೃ ಶ್ರೀಲ ವ್ಯಾಸದೇವ ಅವರಿಗೆ ಹೇಳುತ್ತಾರೆ. ಅಂತಹ ವ್ಯಕ್ತಿಯನ್ನು ರಸ ಗ್ರಹ, `ನಿಜವಾದ ಅಭಿರುಚಿ ಉಳ್ಳವರು’ ಎಂದು ಕರೆಯುತ್ತಾರೆ.
ಕೃಷ್ಣನ ಸೇವೆ ಸಲ್ಲಿಸುವುದು ಅತ್ಯುತ್ತಮ ಹಿತಾಸಕ್ತಿ ಎಂದು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುವಾಗ ಕೆಲವರು ಕೇಳುತ್ತಾರೆ, “ಶ್ರೀಸಾಮಾನ್ಯರ ಸೇವೆಯ ಸಮಾಚಾರ?” ಉದಾಹರಣೆಗೆ ಬಡವರ ಒಳಿತಿಗಾಗಿ ಬಳಸುವ ಹಣವನ್ನು ಮಂದಿರ ನಿರ್ಮಿಸಲು ಬಳಸಲು ಜನರು ಆಕ್ಷೇಪಿಸುತ್ತಾರೆ.

ಆದರೆ ಭಕ್ತನು ಇತರರ ಸಂಕಷ್ಟಗಳ ಬಗೆಗೆ ನಿರ್ದಯಿ ಮತ್ತು ಭಗವಂತನ ಸೇವೆಯಿಂದ ತನಗೆ ದೊರೆಯುವ ಆನಂದದಲ್ಲಿಯೇ ಹೆಚ್ಚು ಆಸಕ್ತನಾಗಿದ್ದಾನೆ ಎಂದು ಯಾರೂ ಯೋಚಿಸಬಾರದು. ಧರ್ಮ ಗ್ರಂಥಗಳು ಭಕ್ತರನ್ನು ಕೃಪಾಂಬುಃ, ಪರದುಃಖ ದುಃಖಿ ಎಂದು ವರ್ಣಿಸುತ್ತವೆ. ಅಂದರೆ ಅವರು ಕೃಪಾಸಾಗರರು ಮತ್ತು ಅವರು ಇತರರ ನೋವನ್ನು ತಮ್ಮದೆಂಬಂತೆ ಭಾವಿಸುತ್ತಾರೆ. ಆದರೆ ಭಕ್ತರಿಗೆ ಬಡವರದಷ್ಟೇ ಅಲ್ಲ, ಎಲ್ಲರ ಸಂಕಟಗಳಿಗೆ ನಿಜವಾದ ಕಾರಣ ಗೊತ್ತು. ಮತ್ತು ಪರಿಹಾರವೂ ಗೊತ್ತು. ನಾವು ಕೃಷ್ಣನ ಶಾಶ್ವತ ಸೇವಕರೆಂದು ಮರೆತಿರುವುದರಿಂದಲೇ ನಾವೆಲ್ಲರೂ ನೋವು ಅನುಭವಿಸುತ್ತಿದ್ದೇವೆ. ಇದಕ್ಕೆ ಪರಿಹಾರ ಏನು? ಭಕ್ತಿಸೇವೆಯ ಮೂಲಕ ನಮ್ಮ ಮೂಲ ಸ್ಥಾನದಲ್ಲಿ ಪುನರ್ ಸ್ಥಾಪಿತಗೊಳ್ಳುವುದು.
ಆದುದರಿಂದ ಭಕ್ತನು ತನ್ನ ಸಂಗಡಿಗರ ಸೇವೆಗೈಯುತ್ತಾನೆ. ಅವನು ಮಂದಿರವನ್ನು ನಿರ್ಮಿಸಿದಾಗ, ಜನರ ಆಧ್ಯಾತ್ಮಿಕ ಜೀವನ ಆರಂಭವಾಗಲು ಅವರು ಅಲ್ಲಿಗೆ ಬರುವಂತೆ ಮತ್ತು ಕೃಷ್ಣನ ಬಗೆಗೆ ಕೇಳುವಂತೆ ಆಕರ್ಷಿಸಲು ಅವನು ಅಪೇಕ್ಷಿಸುತ್ತಾನೆ. ಶ್ರೀ ಕೃಷ್ಣನು 500 ವರ್ಷಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದಾಗ, ಅವರು ವಿಶೇಷವಾಗಿ ಜನರನ್ನು ಸಂಕಷ್ಟಗಳಿಂದ ಬಿಡುಗಡೆ ಮಾಡಲು ಬಂದರು. ಆದುದರಿಂದ ಪ್ರತಿಯೊಬ್ಬರೂ ತಮ್ಮ ಕೃಷ್ಣ ಪ್ರಜ್ಞೆಯನ್ನು ಎಚ್ಚರಗೊಳಿಸಿ ತಮ್ಮ ಬದುಕನ್ನು ಪರಿಪೂರ್ಣಗೊಳಿಸಬೇಕು ಮತ್ತು ಇತರರಿಗೂ ಕೃಷ್ಣ ಪ್ರಜ್ಞೆಯನ್ನು ಹಂಚಬೇಕು ಎಂದು ಸಲಹೆ ಮಾಡಿದರು. ತಾವು `ವಿಚಾರಶೀಲರು’ ಎಂದು ಹೆಮ್ಮೆ ಪಟ್ಟುಕೊಳ್ಳುವ ಈಗಿನ ಜನರು, ಕೃಷ್ಣ ಪ್ರಜ್ಞೆಯನ್ನು ಹರಡುವುದು ಅತ್ಯುತ್ತಮ ಕಲ್ಯಾಣ ಕಾರ್ಯವೆಂದು ಮೆಚ್ಚಿಕೊಳ್ಳಲಾರರು. ಚೈತನ್ಯ ಚರಿತಾಮೃತದ ಕರ್ತೃ ಕೃಷ್ಣದಾಸ ಕವಿರಾಜ ಅವರು ಹೇಳುತ್ತಾರೆ, “ನೀವು ನಿಜವಾಗಿಯೂ ತರ್ಕ ಮತ್ತು ವಾದದಲ್ಲಿ ಆಸಕ್ತರಾಗಿದ್ದರೆ, ದಯೆಯಿಟ್ಟು ಅದನ್ನು ಶ್ರೀ ಚೈತನ್ಯ ಮಹಾಪ್ರಭುಗಳ ಕೃಪೆಗೆ ಅಳವಡಿಸಿ. ನೀವು ಹಾಗೆ ಮಾಡಿದರೆ, ನೀವು ಅದನ್ನು ಅದ್ಭುತ ಎಂದು ಕಂಡುಕೊಳ್ಳುವಿರಿ.” ಜನರನ್ನು ಕೃಷ್ಣನ ಸೇವೆಗೆ ತರುವುದಕ್ಕಿಂತ ಉತ್ತಮವಾದ ಮಾನವ ಸೇವೆ ಬೇರೊಂದಿಲ್ಲ.

ಅಪರೂಪ ಅವಕಾಶ
ಆ ಸೇವೆಯು ಎಂತಹ ಅಪರೂಪದ ಅವಕಾಶ! ಭಗವಂತನ ಲೋಕದಲ್ಲಿ ಭಕ್ತಿಸೇವೆಯು ಎಲ್ಲರ ವ್ಯವಹಾರವಾಗಿದ್ದು, ಅದು ಜನನ ಮತ್ತು ಮರಣಗಳ ಈ ಭೂಲೋಕದಲ್ಲಿ ಬಹಳ ಕಷ್ಟವಾಗಿ ಬರುತ್ತದೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, “ಅನೇಕ ಜನನ ಮತ್ತು ಮರಣಗಳ ಅನಂತರ ಯಾರು ನಿಜವಾಗಿಯೂ ಜ್ಞಾನವನ್ನು ಹೊಂದಿರುತ್ತಾರೋ ಅವರು ನನಗೆ ಶರಣಾಗುತ್ತಾರೆ. ಎಲ್ಲ ಕಾರಣಗಳಿಗೆ ಕಾರಣನೆಂದು ತಿಳಿಯುತ್ತಾರೆ. ಅಂತಹ ಶ್ರೇಷ್ಠ ಆತ್ಮವು ಬಹಳ ಅಪರೂಪ.” ಅಂತಹ ಆತ್ಮಗಳನ್ನು ಹುಡುಕಿ ಸೇವೆ ಸಲ್ಲಿಸಿದರೆ ನಾವು “ಸತ್ಯವನ್ನು ಅರಿಯಬಹುದು” ಮತ್ತು ಅವನ ಬಳಿಗೆ ಹಿಂದಿರುಗಬಹುದು.

ಆದುದರಿಂದ, ನಾವು ಭಗವಂತನ ಸೇವಕನೆಂದು ಕೇಳಿದಾಗ ನಾವು ನಿರಾಶರಾಗಬಾರದು, ಬದಲಿಗೆ ನಾವು ಸಂತೋಷಪಡಬೇಕು. ಶ್ರೀ ಕೃಷ್ಣನ ಸೇವಕರ ಉನ್ನತ ಸ್ಥಾನವನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅವರಲ್ಲಿ ಒಬ್ಬರಾಗಲು ಕಷ್ಟಪಡುವ ಮೂಲಕ ನಾವು ನಾವಾಗಬಹುದು.
ಶ್ರೀ ಕೃಷ್ಣನಿಗೆ ಪರಿಶುದ್ಧ ಭಕ್ತಿಸೇವೆಯನ್ನು ಪಡೆಯಲು ಅಗತ್ಯವಾದುದು ಏನು ಎಂಬುವುದನ್ನು ಶ್ರೀ ಚೈತನ್ಯರ ಶಿಷ್ಯರಾದ ಶ್ರೀಲ ರೂಪ ಗೋಸ್ವಾಮಿ ಅವರು ವಿವರಿಸಿದ್ದಾರೆ, “ಕೃಷ್ಣ ಪ್ರಜ್ಞೆಯಲ್ಲಿ ಪರಿಶುದ್ಧ ಭಕಿಸೇವೆಯನ್ನು ಸಾವಿರಾರು ಜನ್ಮಗಳಲ್ಲಿ ಪುಣ್ಯ ಕಾರ್ಯಗಳನ್ನು ಮಾಡುವುದರಿಂದಲೂ ಪಡೆಯುವುದು ಸಾಧ್ಯವಿಲ್ಲ. ಅದಕ್ಕೆ ಬೆಲೆ ತೆರುವುದರಿಂದ ಮಾತ್ರ ಸಾಧ್ಯ – ಅದೆಂದರೆ ಅದನ್ನು ಪಡೆಯುವ ಮಹದಾಸೆ. ಅದು ಎಲ್ಲಾದರೂ ಲಭ್ಯವಿದ್ದರೆ, ಅದನ್ನು ಯಾವುದೇ ವಿಳಂಬವಿಲ್ಲದಂತೆ ಖರೀದಿಸಬೇಕು.”






Leave a Reply