ಭಕ್ತಿಯೋಗದಲ್ಲಿ ಎಲ್ಲ ಚಟುವಟಿಕೆಗಳನ್ನು ಆಧ್ಯಾತ್ಮಿಕ ಉನ್ನತಿಯತ್ತ ತಿರುಗಿಸಬಹುದು. ನಿಮ್ಮ ಆಹಾರವನ್ನು ಹೇಗೆ ಆಧ್ಯಾತ್ಮಿಕಗೊಳಿಸಬಹುದು ಮತ್ತು ಪ್ರತಿಯೊಂದು ಭೋಜನದಲ್ಲಿಯೂ ಹೇಗೆ ಪರಮಾನಂದವನ್ನು ಅನುಭವಿಸಬಹುದು ಎನ್ನುವುದನ್ನು ಈ ಲೇಖನ ಹೇಳುತ್ತದೆ.
ಕೃಷ್ಣ ಪ್ರಜ್ಞೆಯು ದಿನದ 24 ತಾಸೂ ಆಚರಿಸುವ ಬದುಕಿನ ಮಾರ್ಗ. ಅದು ಆತ್ಮ, ಮನಸ್ಸು ಮತ್ತು ದೇಹದ ಅಗತ್ಯಗಳನ್ನು ಪೂರೈಸುತ್ತದೆ. ನಾವು ಭೌತಿಕ ದೇಹ-ಮನಸ್ಸುಗಳಿಂದ ಆವೃತರಾದ ಚೇತನಾತ್ಮರು. ಆತ್ಮದ ಅಗತ್ಯವೆಂದರೆ, ಭೌತಿಕದಿಂದ ಅನಾವರಣಗೊಂಡು, ಈ ದೇಹವನ್ನು ಬಿಟ್ಟ ಮೇಲೆ ಭಗವದ್ಧಾಮಕ್ಕೆ ಹಿಂದಿರುಗುವುದು. ತಿನ್ನುವುದು, ಮಲಗುವುದು, ಹೆದರುವುದು, ಮತ್ತು ಲೈಂಗಿಕತೆಯಲ್ಲಿ ತೊಡಗುವುದು – ದೇಹದ ಈ ಅಗತ್ಯಗಳನ್ನು ನಿಯಂತ್ರಿಸಿಕೊಳ್ಳುವ ಮೂಲಕ ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುವುದರಿಂದ ಅದನ್ನು ಸಾಧಿಸಬಹುದು.
ಶರಣಾಗತಿಯು ಮೊದಲ ಹೆಜ್ಜೆ. ಈ ಮಂತ್ರವನ್ನು ಜಪಿಸುವ ಮತ್ತು ಕೇಳುವುದರಿಂದ ಮತ್ತು ಭಗವಂತನಿಗೆ ವಿಶೇಷವಾಗಿ ತಯಾರಿಸಿ ಅರ್ಪಿಸುವ ಪ್ರಸಾದವನ್ನು ಸ್ವೀಕರಿಸಿ ಮಿತ್ರರಿಗೆ, ಕುಟುಂಬದವರಿಗೆ ಹಂಚುವ ಮೂಲಕ ಶುದ್ಧ ಆತ್ಮ, ಆಧ್ಯಾತ್ಮಿಕ ಗುರುವಿಗೆ ಶರಣಾಗುವುದು ಸಾಧ್ಯವಾಗುತ್ತದೆ. ಈ ಎರಡೂ ಚಟುವಟಿಕೆಗಳು ಕೃಷ್ಣ ಪ್ರಜ್ಞೆಯಲ್ಲಿ ಪ್ರೀತಿಯನ್ನು ಉಂಟುಮಾಡುತ್ತವೆ.
ಇಲ್ಲಿ ನಾವು ಕೃಷ್ಣ ಪ್ರಸಾದದ ಬಗೆಗೆ ಚರ್ಚಿಸುತ್ತೇವೆ. ಕೃಷ್ಣನ ವಿಗ್ರಹ ಅಥವಾ ಚಿತ್ರದ ಮುಂದೆ ಈ ಕೆಳಗಿನ ಮಂತ್ರವನ್ನು ಮೂರು ಬಾರಿ ಜಪಿಸುವ ಮೂಲಕ ಶ್ರೀ ಕೃಷ್ಣನಿಗೆ ಅರ್ಪಿಸುವುದರಿಂದ ಪ್ರಸಾದವು ಆಧ್ಯಾತ್ಮಿಕ ಆಹಾರವಾಗುತ್ತದೆ :
ನಮಃ ಓಂ ವಿಷ್ಣು ಪಾದಾಯ ಕೃಷ್ಣಪ್ರೇಷ್ಠಾಯ ಭೂತಲೇ ।
ಶ್ರೀಮತೇ ಭಕ್ತಿವೇದಾಂತ ಸ್ವಾಮಿನ್ ಇತಿ ನಾಮಿನೇ ॥
ನಮೋ ಮಹಾ ವದಾನ್ಯಾಯ ಕೃಷ್ಣಪ್ರೇಮ ಪ್ರದಾಯತೇ ।
ಕೃಷ್ಣಾಯ ಕೃಷ್ಣಚೈತನ್ಯ ನಾಮ್ನೇ ಗೌರ ತ್ವಿಷೇ ನಮಃ ॥
ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ ।
ಜಗತ್ ಹಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ॥
ಕೃಷ್ಣನು ಅರ್ಪಿಸಿದ ಆಹಾರವನ್ನು ಸ್ವೀಕರಿಸುತ್ತಾನೆ ಮತ್ತು ನಾವು ಉಳಿಕೆಯನ್ನು ತೆಗೆದುಕೊಳ್ಳುತ್ತೇವೆ. ಈ ರೀತಿ ಆಹಾರದ ರುಚಿಯು ಹೆಚ್ಚುತ್ತದೆ ಮತ್ತು ದೇಹ, ಮನಸ್ಸು ಆರೋಗ್ಯಕರವಾಗುತ್ತದೆ ಹಾಗೂ ಆತ್ಮವು ಭಗವಂತನ ಸೇವೆಯಲ್ಲಿ ತೊಡಗಿರುತ್ತದೆ.
ಯಾರಾದರೂ ಅವನಿಗೆ ಎಲೆ, ಹೂವು, ಸ್ವಲ್ಪ ನೀರು, ಅಥವಾ ಸ್ವಲ್ಪ ಹಣ್ಣು ಪ್ರೀತಿಯಿಂದ ಅರ್ಪಿಸಿದರೆ ಅವನು ಅಂತಹ ಅರ್ಪಣೆಯನ್ನು, ನೈವೇದ್ಯವನ್ನು ಸ್ವೀಕರಿಸುತ್ತಾನೆ ಎಂದು ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆದುದರಿಂದ ಈ ಕೃಷ್ಣ ಪ್ರಸಾದವನ್ನು ಸೇವಿಸುವುದು ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿ ಸಾಧಿಸಲು ಅತ್ಯಂತ ಪ್ರಯೋಜನಕಾರಿ. ಪ್ರಸಾದವನ್ನು ಸೇವಿಸುವುದು ಎಂದರೆ, ಕೃಷ್ಣನೊಂದಿಗೆ ಸ್ವತಃ ಒಡನಾಟ ಮಾಡಿದಂತೆ. ಹೇಗೆ ಅವನ ನಾಮವನ್ನು ಜಪಿಸುವುದರಿಂದ ದೇವೋತ್ತಮನೊಂದಿಗೆ ಒಡನಾಟ ಮಾಡಿದಂತೆಯೋ, ಹಾಗೆ.
ಪ್ರಸಾದವನ್ನು ವಿಶೇಷವಾಗಿ ಕೃಷ್ಣನಿಗಾಗಿಯೇ ಸಿದ್ಧಪಡಿಸಲಾಗುತ್ತದೆ, ಅವನು ಇಷ್ಟಪಡುವ ರೀತಿಯಲ್ಲಿ. ಗುರು ಶಿಷ್ಯ ಪರಂಪರೆಯಂತೆ ಗುರುವು ತನ್ನ ಶಿಷ್ಯರಿಗೆ ವಿವಿಧ ಪ್ರಸಾದಗಳ ಬಗೆಗೆ ವಿವರ ಮತ್ತು ತಯಾರಿಸುವ ವಿಧಾನವನ್ನು ತಿಳಿಸುತ್ತಾರೆ. ಇದರಿಂದ ಕೃಷ್ಣನಿಗೆ ಯಾವುದು ಸ್ವೀಕೃತ ಎನ್ನುವುದನ್ನು ಅರಿತು ತಯಾರಿಸಬಹುದು.
ಶುದ್ಧವಾದ ಪಾತ್ರೆ
ಪ್ರಸಾದ ತಯಾರಿಸುವಾಗ ಬಳಸುವ ಪ್ರತಿಯೊಂದೂ ಶುದ್ಧವಾಗಿರಬೇಕು. ತೊಳೆಯಲು ಸಾಧ್ಯವಾದ ಎಲ್ಲ ಹಣ್ಣು, ತರಕಾರಿ, ಬೀಜ ಮತ್ತು ಧಾನ್ಯಗಳನ್ನು ತೊಳೆಯಬಹುದು. ಪ್ರಸಾದ ತಯಾರಿಸುವ ಮುನ್ನ ಎಲ್ಲ ಪಾತ್ರೆ ಮತ್ತು ಅಡುಗೆ ಸಾಮಾನುಗಳನ್ನು ಚೆನ್ನಾಗಿ ತೊಳೆಯಬೇಕು. ಪ್ರಸಾದ ತಯಾರಿಸುವವರ ಕೈಗಳು ಶುಚಿಯಾಗಿರಬೇಕು. ಆದುದರಿಂದ ಪ್ರಸಾದ ತಯಾರಿಸುವಾಗ ನಿಮ್ಮ ಕೂದಲನ್ನು, ದೇಹ, ಕಸದ ಬುಟ್ಟಿ ಯಾವುದನ್ನೂ ಮುಟ್ಟಬಾರದು. ಕೃಷ್ಣನಿಗಾಗಿ ತಯಾರಿಸುವುದರಿಂದ ರುಚಿ ನೋಡುವುದಾಗಲಿ ವಾಸನೆ ನೋಡುವುದಾಗಲಿ ಇಲ್ಲ.
ಪ್ರಸಾದವನ್ನು ತಯಾರಿಸಿದ ಮೇಲೆ ಒಳ್ಳೆಯ ತಟ್ಟೆಯಲ್ಲಿ (ಬೆಳ್ಳಿಯಾದರೆ ಉತ್ತಮ) ಇಡಬೇಕು. ಮೊಸರು, ನೀರು ಇತ್ಯಾದಿ ಬಟ್ಟಲುಗಳಲ್ಲಿ ಇಡಬೇಕು. ಇವುಗಳನ್ನು ಪೂಜಾ ಸ್ಥಳದಲ್ಲಿ ಇಟ್ಟು ಕೃಷ್ಣನಿಗೆ ಅರ್ಪಿಸಿ. ಮಂತ್ರವನ್ನು ಜಪಿಸಿದ ಮೆಲೆ ನೈವೇದ್ಯವನ್ನು ತೆಗೆದು ಸೇವಿಸಿ.