ನಾವೆಲ್ಲರೂ ಎದುರಿಸುವ ಸಮಸ್ಯೆಗಳತ್ತ ಒಂದು ದೃಷ್ಟಿ
ಬದ್ಧ ಆತ್ಮದ ಬಳಿಗೆ ಸಾವು ಬಂದಾಗ ಅವನು ಹೆದರುತ್ತಾನೆ. ಆದರೆ ಮುಕ್ತ ಆತ್ಮಕ್ಕೆ `ಸಾವು’ ಎಂದರೆ ಭಗವಂತನು ತನ್ನನ್ನು ಭಗವದ್ಧಾಮಕ್ಕೆ ಕರೆದೊಯ್ಯಲು ಬಂದಿದ್ದಾನೆಂದು ಅರ್ಥ.
ಕೃಷ್ಣನ ಭಕ್ತರು `ಬದ್ಧಾತ್ಮ’ ಎನ್ನುವ ಪದವನ್ನು ಬಳಸುವುದನ್ನು ನೀವು ಕೇಳಿರಬಹುದು. ಹಾಗೆಂದರೇನು ಎಂದು ನೀವು ಅಚ್ಚರಿಪಟ್ಟಿರಬಹುದು. ಲೌಕಿಕ ಪ್ರಕೃತಿಯ ಶಕ್ತಿಗಳಿಂದ ನಿಯಂತ್ರಿಸಲ್ಪಟ್ಟಿರುವವನೇ ಬದ್ಧಾತ್ಮ. ಮುಖ್ಯವಾಗಿ ಜನ್ಮ, ವೃದ್ಧಾಪ್ಯ, ರೋಗ ಮತ್ತು ಸಾವು ಎಂಬ 4 ಸಂಕಷ್ಟಗಳು.
ಭೌತಿಕ ಲೋಕದ ಬದ್ಧಾತ್ಮಗಳಾದ ನಮಗೆ ಪ್ರಕೃತಿಯ ಈ ನಿಷ್ಕರುಣಿ ಹೇರಿಕೆಗಳಿಂದಾಗಿ ಬದುಕಿನ ಎಲ್ಲ ಸುಖಗಳೂ ಕ್ಷಣಭಂಗುರವಾಗಿವೆ. ಅವೆಲ್ಲವೂ ಬೇಗ ಕಳೆದುಹೋಗುತ್ತವೆ. ಕೆಲವರು ಶಾಶ್ವತವಾದ ಸುಖವನ್ನು ಪಡೆಯಲು ಲೌಕಿಕ ಪ್ರಕೃತಿಯ ಪ್ರಭಾವದಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ.
ಹಾಗೆ ಮಾಡಲು ಅವರಿಗೆ ಅರ್ಹರಾದ ಆಧ್ಯಾತ್ಮಿಕ ಗುರುವಿನ ಅಗತ್ಯವಿದೆ. ಅದರ ಜೊತೆಗೆ ಭಗವದ್ಗೀತೆ, ಭಾಗವತಗಳಂತಹ, ಲೌಕಿಕ ಮತ್ತು ಅಲೌಕಿಕ ಜ್ಞಾನವನ್ನು ವಿವರಿಸುವ ಗ್ರಂಥಗಳೂ ಅವಶ್ಯ. ಜ್ಞಾನದ ಒಂದು ಅಂಶವನ್ನು ಭಗವದ್ಗೀತೆಯು, “ಜನ್ಮ, ಮೃತ್ಯು, ಜರಾ, ಮತ್ತು ವ್ಯಾಧಿಯ ಗ್ರಹಿಕೆ” ಎಂದು ವಿವರಿಸಿದೆ. ಲೌಕಿಕ ಬದುಕನ್ನು ಕುರಿತ ಈ ದೃಷ್ಟಿಯು ಮುಕ್ತರಾಗಲು ಬಯಸುವವರಿಗೆ ಒಂದು ಉತ್ತೇಜನವಾಗುತ್ತದೆ.
ಕಪಿಲ, ದೇವಹೂತಿ ಸಂವಾದ
ಭಾಗವತದ 3ನೆಯ ಸ್ಕಂಧದಲ್ಲಿ ದೇವೋತ್ತಮನ ಅವತಾರವಾದ ಶ್ರೀ ಕಪಿಲ ಮತ್ತು ಅವನ ತಾಯಿ ದೇವಹೂತಿ ನಡುವಣ ಸಂವಾದದಲ್ಲಿ ಈ ಉತ್ತೇಜಕ ಶಕ್ತಿಯನ್ನು ಇನ್ನಷ್ಟು ಬಲಪಡಿಸಲಾಗಿದೆ.
ದೇವಹೂತಿಯು ಹೇಳಿದಳು, “ನನ್ನ ಪ್ರಿಯ ಪ್ರಭುವೇ, ಜನನ ಮತ್ತು ಮರಣಗಳ ನಿರಂತರ ಪ್ರಕ್ರಿಯೆಯನ್ನು ನನಗೆ ಮತ್ತು ಜನಸಾಮಾನ್ಯರಿಗಾಗಿ ದಯವಿಟ್ಟು ವಿವರವಾಗಿ ವರ್ಣಿಸು. ಅಂತಹ ಆಪತ್ತುಗಳ ಬಗ್ಗೆ ಕೇಳುವುದರಿಂದ, ಭೌತಿಕ ಜಗತ್ತಿನ ಕ್ರಿಯೆಗಳಿಂದ ನಾವು ಬಿಡುಗಡೆ ಪಡೆಯಬಹುದು.” (ಭಾಗವತ 3.29.3)
ಅವಳ ಪ್ರಶ್ನೆಗೆ ಶ್ರೀ ಕಪಿಲನು ಜೀವಾತ್ಮನನ್ನು ಲೈಂಗಿಕ ಪ್ರಕ್ರಿಯೆ ಸಂದರ್ಭದಲ್ಲಿ ಹೇಗೆ ವೀರ್ಯಾಣುವಿನ ಮೂಲಕ ಸ್ತ್ರೀಯ ಗರ್ಭವನ್ನು ಪ್ರವೇಶಿಸುವಂತೆ ಮಾಡಲಾಗುತ್ತದೆ, ಭ್ರೂಣವು ಗರ್ಭಸ್ಥ ಅವಧಿಯಲ್ಲಿ ವಾರಗಳು ಮತ್ತು ತಿಂಗಳುಗಳಲ್ಲಿ ಹೇಗೆ ಪ್ರಗತಿ ಹೊಂದುತ್ತದೆ ಮತ್ತು ಹೇಗೆ ನೋವು ಅನುಭವಿಸುತ್ತದೆ ಎನ್ನುವುದನ್ನು ವಿವರವಾಗಿ ವರ್ಣಿಸಿದನು.
“ತಾಯಿಯು ಅತಿ ಉಪ್ಪಾದ ಮತ್ತು ಅತಿ ಹುಳಿಯಾದ ತೀಕ್ಷ್ಣ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಗುವಿನ ಶರೀರವು ಸತತವಾಗಿ ನೋವನ್ನು ಅನುಭವಿಸುತ್ತದೆ. ಈ ನೋವು ಅಸಹನೀಯವಾದದ್ದೆ. ಶಿಶುವು ಹೊರಗೆ ಕರುಳುಗಳಿಂದ ಆವೃತವಾಗಿ ಹೊಟ್ಟೆಯೊಳಗೆ ಒಂದು ಭಾಗದಲ್ಲಿರುತ್ತದೆ. ಅದರ ತಲೆ ತನ್ನ ಹೊಟ್ಟೆಯತ್ತ ತಿರುಗಿರುತ್ತದೆ ಮತ್ತು ಅದರ ಬೆನ್ನು ಹಾಗೂ ಕತ್ತು ಬಿಲ್ಲಿನಂತೆ ಬಾಗಿರುತ್ತದೆ ಶಿಶು ಚಲನವಲನದ ಸ್ವಾತಂತ್ರ್ಯವಿಲ್ಲದೆ ಪಂಜರದೊಳಗಿನ ಪಕ್ಷಿಯಂತೆ ಇರುತ್ತದೆ.” (ಭಾಗವತ 3.31.7-8-9)
ಭ್ರೂಣದ ಬೆಳವಣಿಗೆಯನ್ನು ಕುರಿತಂತೆ ಭಾಗವತದ ಅನೇಕ ಹೇಳಿಕೆಗಳನ್ನು ವೈಜ್ಞಾನಿಕ ಸಂಶೋಧಕರು ದೃಢಪಡಿಸಿದ್ದರೂ ಶಿಶುವು ಎಷ್ಟು ನೋವು ಅನುಭವಿಸುತ್ತದೆ ಎನ್ನುವುದನ್ನು ಕಂಡು ಹಿಡಿಯಲು ಅವರಿಗೆ ಸಾಧ್ಯವಾಗಿಲ್ಲ. ವರ್ಷಾಂತರದ ಹಿಂದೆ ನಾವು ಅನುಭವಿಸಿದ್ದ ಗಾಯಗಳ ಅಥವಾ ರೋಗದ ನೋವನ್ನು ಮರೆತಿರುವಂತೆ ನಾವು ಶಿಶುವಿನ ನೋವಿನ ಸ್ಥಿತಿಯನ್ನು ಮರೆತಿದ್ದೇವೆ.
ಶಿಶುವಿನ ಅಸಹಾಯಕತೆ
ಇನ್ನು ಜನ್ಮದ ಬಗೆಗೆ ಹೇಳುವುದಾದರೂ ಏನು! ಶ್ರೀ ಕಪಿಲ ವಿವರಿಸುತ್ತಾನೆ, “ಹೆರಿಗೆಗೆ ನೆರವಾಗುವ ಗಾಳಿಯ ಒತ್ತಡದಿಂದ ಶಿಶುವು ದಿಢೀರನೆ ಕೆಳಕ್ಕೆ ನೂಕಲ್ಪಡುತ್ತದೆ. ಹೀಗೆ ವಾಯುವಿನಿಂದ ತಳ್ಳಲ್ಪಟ್ಟ ಮಗು ತಲೆಕೆಳಗಾಗಿ, ಉಸಿರು ಕಟ್ಟಿ ತೀವ್ರವೇದನೆಯಿಂದ ಸ್ಮೃತಿ ಕಳೆದುಕೊಂಡು ಯಾತನೆಯಿಂದ ಹೊರಬರುತ್ತದೆ.”
ಶಿಶುವಿನ ವೇದನೆಯು ಹುಟ್ಟಿದ ಅನಂತರವೂ ಮುಂದುವರಿಯುತ್ತದೆ ಎನ್ನುವುದು ತಾಯಿಗೆ ಗೊತ್ತು. ಮಗುವಿನದು ಅಸಹಾಯಕ ಸ್ಥಿತಿ. ತನಗೇನು ಬೇಕಾಗಿದೆ ಎಂದು ವ್ಯಕ್ತಪಡಿಸಲಾಗದಂತಹ ಪರಿಸ್ಥಿತಿ ಒಂದು ಕಡೆಯಾದರೆ ಬೇಡವಾದುದನ್ನು ನಿರಾಕರಿಸಲಾಗದಂತಹ ಸ್ಥಿತಿ ಮತ್ತೊಂದು ಕಡೆ. ನವೆಯಾದಾಗ ಮೈಯ್ಯನ್ನು ಕೆರೆದುಕೊಳ್ಳಲು, ಅಥವಾ ಸರಿಯಲೂ ಅಸಮರ್ಥ. ಅದು ಅಜೀರ್ಣ, ಉದರ ಶೂಲೆ, ಹಲ್ಲು ಹುಟ್ಟುವಾಗಿನ ನೋವು ಮತ್ತು ಅದಕ್ಕೆ ಮಾತ್ರ ಗೊತ್ತಿರುವ ಇತರ ನೋವುಗಳಿಂದ ಅಳುತ್ತದೆ.
ವೃದ್ಧಾಪ್ಯದ ಬವಣೆ
ಹೇಗೆ ರೈತನು ತನ್ನ ಮುದಿ ಪ್ರಾಣಿಗಳನ್ನು ನಿರ್ಲಕ್ಷಿಸುವನೋ ಅದೇ ರೀತಿ, ಶ್ರೀ ಕಪಿಲನ ಮಾತಿನಲ್ಲಿ ಹೇಳುವುದಾರೆ, “ತಮ್ಮನ್ನು ಪೋಷಿಸುವುದರಲ್ಲಿ ಅಸಮರ್ಥನಾದ ವೃದ್ಧನನ್ನು ಅವನ ಹೆಂಡತಿ ಮಕ್ಕಳು ಮೊದಲಿನ ಗೌರವದಿಂದ ಕಾಣುವುದಿಲ್ಲ.” ಹೀಗೆ ತಮ್ಮ ಬಂಧುಗಳ ನಿರ್ಲಕ್ಷ್ಯಕ್ಕೆ ಒಳಗಾಗುವ ಹಿರಿಯರು ವೃದ್ಧಾಶ್ರಮದಲ್ಲಿ ನಿರುತ್ಸಾಹದಿಂದ ಜೀವಿಸುತ್ತಾರೆ. ಒಂದು ವೇಳೆ ಮನೆಯಲ್ಲಿಯೇ ಇದ್ದರೆ, “ಸಾಕಿದ ನಾಯಿಯಂತೆ ಇರುತ್ತಾರೆ ಮತ್ತು ನಿರ್ಲಕ್ಷ್ಯದಿಂದ ಏನು ಕೊಟ್ಟರೂ ಅದನ್ನು ಸೇವಿಸುತ್ತಾರೆ.” ಅಜೀರ್ಣ, ಅರುಚಿಯಂತಹ ವ್ಯಾಧಿಗಳಿಂದ ಪೀಡಿತರಾಗಿ ಅತ್ಯಲ್ಪ ಆಹಾರ ಸೇವಿಸುತ್ತಾರೆ. ಯಾವುದೇ ಕೆಲಸ ಮಾಡಲಾಗದೆ ನಿರರ್ಥಕರಾಗುತ್ತಾರೆ. ಕಾಲದ ಪ್ರಭಾವದಿಂದ ಅವರ ದೇಹ ಕುಗ್ಗುತ್ತದೆ ಮತ್ತು ಕ್ಷಯಿಸುತ್ತದೆ ಎಂದು ಶ್ರೀ ಕಪಿಲ ವಿವರಿಸುತ್ತಾರೆ. ವೃದ್ಧನ ದೇಹವು ಯಾವುದೇ ಸೌಲಭ್ಯಗಳಿಲ್ಲದ ತೊರೆದ ಮನೆಯಂತೆ ಕಾಲ-ವಿನಾಶಕ ಗೂಡಿನಂತಾಗಿಬಿಡುತ್ತದೆ.
ವೃದ್ಧಾಪ್ಯದ ರೂಪದಲ್ಲಿ ಕಾಲವು ಸಾವಿನ ಕರೆಯನ್ನು ನೀಡುತ್ತದೆ. ಅದನ್ನು ಯಾರೂ ನಿರಾಕರಿಸುವುದು ಸಾಧ್ಯವಿಲ್ಲ. ಆದರೆ ಸಾವಿಗಾಗಿ ಸಿದ್ಧತೆ ಮಾಡಿಕೊಳ್ಳುವ ಬದಲು ಹಿರಿಯ ನಾಗರಿಕರು ಸುಕ್ಕು ಮುಚ್ಚಲು ಬಣ್ಣ ಲೇಪನ, ಕೂದಲಿಗೆ ಬಣ್ಣ ಹಚ್ಚಿಕೊಂಡು ಹಾಗೂ ವಿಲಾಸಿ ಉಡುಗೆಗಳನ್ನು ತೊಟ್ಟು ಮುಖವನ್ನು ತೋರುತ್ತಾರೆ. ಅವರು ತಮ್ಮ `ಸುವರ್ಣ ವರ್ಷ’ಗಳ ನಿವೃತ್ತಿ ನಿಧಿಗಳಲ್ಲಿ ಜೀವಿಸುತ್ತ ಆಟ ಮತ್ತು ಸಾಮಾನು ಖರೀದಿಗಾಗಿ ಸಂಚಾರ ಮಾಡುವರು.
ಇವೆಲ್ಲ ಸಾವು ಬರುವವರೆಗೆ ಮತ್ತು ಅವರ ದೇಹವು ಮಣ್ಣಿಗೆ ಮರಳುವವರೆಗೆ.
ರೋಗ
ವ್ಯಾಪಕವಾದ ವೈದ್ಯಕೀಯ ಸಂಶೋಧನೆ, ಅತ್ಯಾಧುನಿಕ ಆಸ್ಪತ್ರೆಗಳು ಮತ್ತು ಶ್ರಮಜೀವಿ ವೈದ್ಯರ ತಂಡವೇ ಇದ್ದರೂ ರೋಗಗಳು ಏನೂ ಕಡಮೆಯಾಗಿಲ್ಲ. ಹೇಗೆ ದೇಹವು ಹುಟ್ಟಬೇಕು ಮತ್ತು ಸಾಯಬೇಕೋ ಹಾಗೆ ಅದು ಕೀಲೂತದಿಂದ ಏಡ್ಸ್‌ವರೆಗೆ, ಸ್ನಾಯು ಉಳುಕಿನಿಂದ ಮಾನಸಿಕ ಅಸಮತೋಲನದವರೆಗೆ ಅಸಂಖ್ಯ ರೋಗಗಳಲ್ಲಿ ಒಂದು ಅಥವಾ ಹೆಚ್ಚಿನ ರೋಗಗಳಿಂದ ಪೀಡಿತವಾಗಲೇ ಬೇಕು. ಅಸಾಮಾನ್ಯ ಸ್ಥಿತಿ ಎಂದು ಪರಿಗಣಿಸಿದರೂ ವಾಸ್ತವವಾಗಿ ಕಾಯಿಲೆಗಳು ಪ್ರಕೃತಿಯ ಹೇರಿಕೆಗೆ ಒಳಪಟ್ಟ ಎಲ್ಲ ಬದ್ಧಾತ್ಮಗಳ ದೇಹಗಳ ಮೇಲೆ ಹೇರಿದ ಸಾಮಾನ್ಯ ಸ್ಥಿತಿ.
“ಅತ್ಯಂತ ಅಚ್ಚರಿಯ ವಿಷಯ ಯಾವುದು?” ಎಂದು ಒಮ್ಮೆ ಒಬ್ಬ ಬುದ್ಧಿವಂತ ರಾಜನನ್ನು ಪ್ರಶ್ನಿಸಲಾಯಿತು. ರಾಜನು ಉತ್ತರಿಸಿದ, “ಅತ್ಯಂತ ಅಚ್ಚರಿಯ ವಿಷಯವೆಂದರೆ ಬಂಧುಗಳು ಮತ್ತು ಮಿತ್ರರು ಸಾವನ್ನಪ್ಪಿರುವಂತೆ, ತಮಗೂ ಸಾವು-ವಿಧಿ ಲಿಖಿತ ಎನ್ನುವುದು ಗೊತ್ತಿದ್ದರೂ ವ್ಯಕ್ತಿಯು ತಾನು ಸದಾ ಜೀವಿಸಿರುವೆನೆಂದು ಭಾವಿಸುವುದು.” ಕಾಲವು ಲೌಕಿಕವಾದುದೆಲ್ಲವನ್ನೂ ಪರಾಭವಗೊಳಿಸುತ್ತದೆ. ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತದೊಂದಿಗೆ, ಪ್ರತಿ ಕ್ಷಣವೂ, ನಮ್ಮ ಬದುಕಿನ ಉಳಿದ ಸಮಯವನ್ನು ಕಿತ್ತುಕೊಳ್ಳಲಾಗುತ್ತಿದೆ. ಹುಟ್ಟು-ಹಬ್ಬ ಎಂದರೆ ಸಾವಿಗೆ ಸಮೀಪವಾಗುತ್ತಿದ್ದೇವೆ ಎಂದು ಅರ್ಥ.
ಅಂತಿಮ ಕ್ಷಣ
ಶ್ರೀ ಕಪಿಲನು, ಸಾಯುತ್ತಿರುವ ವ್ಯಕ್ತಿಯ ಅಂತಿಮ ಕ್ಷಣಗಳನ್ನು ವಿವರಿಸುತ್ತಾನೆ,
“ತನ್ನ ವ್ಯಾಧಿಗ್ರಸ್ತ ಸ್ಥಿತಿಯಲ್ಲಿ ಒಳಗಿನ ಗಾಳಿಯ ಒತ್ತಡದಿಂದಾಗಿ ವೃದ್ಧನ ಕಣ್ಣುಗಳು ಬಾತುಕೊಳ್ಳುತ್ತವೆ. ಅವನ ಗ್ರಂಥಿಗಳು ಕಫದಿಂದ ಸಂಕುಚಿತಗೊಳ್ಳುತ್ತವೆ. ಉಸಿರಾಡಲು ಅವನಿಗೆ ಕಷ್ಟವಾಗುತ್ತದೆ. ಉಸಿರು ಎಳೆದುಕೊಳ್ಳುವಾಗ ಮತ್ತು ಉಸಿರು ಬಿಡುವಾಗ `ಘುರಘುರ’ ಎಂದು ಗಂಟಲಲ್ಲಿ ಗೊಗ್ಗರು ದನಿ ಮಾಡುತ್ತಾನೆ.
ಈ ರೀತಿ ಅವನು ಮರಣಪಾಶದಲ್ಲಿ ಸಿಕ್ಕಿಬೀಳುತ್ತಾನೆ. ಮಲಗಿದ ಅವನನ್ನು ಶೋಕತಪ್ತ ಬಂಧುಮಿತ್ರರು ಸುತ್ತುವರಿಯುತ್ತಾರೆ. ಅವರೊಡನೆ ಅವನು ಮಾತನಾಡಬಯಸಿದರೂ ಅವನಿಗೆ ಅದು ಸಾಧ್ಯವಾಗದು. ಅವನು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬಲು ವೇದನೆಯಿಂದ ಸಾವನ್ನಪ್ಪುತ್ತಾನೆ.”
ತನ್ನ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ, ತನ್ನ ಕುಟುಂಬಕ್ಕೆ ಮಾಡಿರುವ ವ್ಯವಸ್ಥೆಯ ಬಗೆಗೆ ಅತೃಪ್ತಿ ಮತ್ತು ತನ್ನ ವಿಧಿಯನ್ನು ಕುರಿತು ಅರಿವಿಲ್ಲದ, ಸಾಯುತ್ತಿರುವ ವ್ಯಕ್ತಿಯು ಶಿಶುವಿನಷ್ಟೇ ಅಸಹಾಯಕನು.
ನಮ್ಮ ಅಲ್ಪ ಜೀವತಾವಧಿಯನ್ನು ಸಮುದ್ರದ ಗುಳ್ಳೆಗಳಿಗೆ ಹೋಲಿಸಲಾಗಿದೆ. ಅಲೆಗಳು ಚಿಮ್ಮಿದಾಗ ಅನೇಕ ಸಣ್ಣ ಸಣ್ಣ ಗುಳ್ಳೆಗಳನ್ನು ಉತ್ಪಾದಿಸುತ್ತವೆ. ಅವು ಸ್ವಲ್ಪ ಸಮಯ ಜೊತೆಯಲ್ಲಿರುತ್ತವೆ ಮತ್ತು ಎಂದಿಗೂ ಪುನರ್ ಮಿಲನಗೊಳ್ಳದಂತೆ ಅಗಲುತ್ತವೆ. ಅದೇ ರೀತಿ ನಮ್ಮ ಕುಟುಂಬ, ಸ್ನೇಹಿತರು ಮತ್ತು ದೇಶವಾಸಿಗಳು ಗುಳ್ಳೆಗಳಂತೆ ಗುಂಪಾಗುತ್ತಾರೆ ಮತ್ತು ಸಾವಿನಿಂದ ಮಾತ್ರ ಅಗಲುತ್ತಾರೆ.
ಉಪಸಂಹಾರ
ದೇವಹೂತಿಯು ನುಡಿದಳು, “ಇಂದ್ರಿಯಗಳ ಹಾಗೂ ಮನಸ್ಸಿನ ಕ್ಷೋಭೆಗಳಿಂದ ಮುಕ್ತರಾದ ಋಷಿಗಳು ಮತ್ತು ಸಾಧುಸಂತರು ನಿನ್ನನ್ನು ಧ್ಯಾನಮಾಡುತ್ತಾರೆ. ಏಕೆಂದರೆ ನಿನ್ನ ಅನುಗ್ರಹ ಮಾತ್ರದಿಂದಲೇ ಯಾರೇ ಆಗಲಿ ಲೌಕಿಕದ ತ್ರಿವಿಧ ಗುಣಗಳ ಪಾಶಗಳಿಂದ ಮುಕ್ತರಾಗಬಲ್ಲರು.”
ಅವಳ ಸಾಕ್ಷಾತ್ಕಾರವನ್ನು ಮೆಚ್ಚಿಕೊಂಡ ಶ್ರೀ ಕಪಿಲನು ಉತ್ತರಿಸಿದನು,
“ಆತ್ಮಸಾಕ್ಷಾತ್ಕಾರದ ಮಾರ್ಗವು ಬಲು ಸುಲಭವಾದದ್ದು. ನೀನು ಇದನ್ನು ಯಾವುದೇ ಕಷ್ಟವಿಲ್ಲದೆ ಆಚರಿಸಬಹುದು ಮತ್ತು ಅದನ್ನು ಅನುಸರಿಸುವುದರಿಂದ ಬಲು ಬೇಗ ಈ ಶರೀರದಲ್ಲಿದ್ದಾಗಲೇ ಮುಕ್ತಿ ಹೊಂದುವೆ. ಭಕ್ತಿಸೇವೆಯ ಈ ವಿಧಾನವನ್ನು ಅರಿಯದವನು ಖಂಡಿತವಾಗಿಯೂ ಜನನ ಮರಣಗಳ ಚಕ್ರದಿಂದ ಹೊರಬರಲಾರನು.”
ಬದ್ಧ ಆತ್ಮಕ್ಕೆ ಭಕ್ತಿಸೇವೆ ಎಂಬ ಆಧ್ಯಾತ್ಮಿಕ ವಿಜ್ಞಾನದ ಅರಿವು ಇಲ್ಲದಿರುವುದರಿಂದ, ಅವನು ಕಷ್ಟಪಟ್ಟು ದುಡಿಯುತ್ತಾನೆ ಮತ್ತು ತನ್ನ ನೋವುಗಳಿಗೆ ಕಾರಣ ಮತ್ತು ಪರಿಹಾರಗಳತ್ತ ತಾತ್ತ್ವಿಕ ದೃಷ್ಟಿ ಹರಿಸಲು ನಿರ್ಲಕ್ಷ್ಯ ತೋರುತ್ತಾನೆ. ಆದರೆ ಮುಕ್ತ ಆತ್ಮವು ಲೌಕಿಕ ಕ್ರಿಯೆಗಳಿಂದ ತನ್ನ ಇಂದ್ರಿಯಗಳನ್ನು ಹಿಂತೆಗೆದುಕೊಳ್ಳುತ್ತಾನೆ ಮತ್ತು ಜ್ಞಾನಕೌಶಲ ಹೊಂದುತ್ತಾನೆ. ಅದನ್ನು ಸಂಪೂರ್ಣವಾಗಿ ದೇವೋತ್ತಮನ ಸೇವೆಯಲ್ಲಿ ತೊಡಗಿಸುತ್ತಾನೆ. ಯೋಗ್ಯ ಆಧ್ಯಾತ್ಮಿಕ ಗುರುವಿನ ನಿರ್ದೇಶನದಲ್ಲಿ ದೇವೋತ್ತಮನ ಸೇವೆಯನ್ನು ಸಲ್ಲಿಸುವ ಏಕೈಕ ಗುರಿಯನ್ನು ಯಾರು ಹೊಂದಿರುತ್ತಾರೋ ಅವರು ತಮ್ಮ ಲೌಕಿಕ ದೇಹದಲ್ಲಿಯೂ ಕೂಡ ಮುಕ್ತಿ ಹೊಂದಿರುತ್ತಾರೆ. ಅವರು ದೇಹದ ಮೂಲ ಅಗತ್ಯಗಳನ್ನು ಪೂರೈಸಬೇಕಾದರೂ ಅವರು ಲೌಕಿಕ ಪ್ರಕೃತಿಯ ಶಕ್ತಿಗಳಿಂದ ವಿಚಲಿತರಾಗುವುದಿಲ್ಲ.
“ಮುಕ್ತ ಆತ್ಮವು ವೃದ್ಧನಾಗುವುದಿಲ್ಲ, ಅವನಿಗೆ ರೋಗ ಬರುವುದಿಲ್ಲ ಅಥವಾ ಸಾಯುವುದಿಲ್ಲ ಎಂದು ಅರ್ಥವೇ?”, ನೀವು ಅವಿಶ್ವಾಸದಿಂದ ಕೇಳಬಹುದು. ನಿಜ, ಬಾಹ್ಯದ ದೃಷ್ಟಿಯಿಂದ ಅವನು ಈ ನಿಯಂತ್ರಣಗಳನ್ನು ಅನುಭವಿಸುತ್ತಾನೆ. ಆದರೆ ಉನ್ನತ ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಅವನು ಅದನ್ನೆಲ್ಲ ಅನುಭವಿಸುವುದಿಲ್ಲ. ಏಕೆಂದರೆ, ತಾನು ಲೌಕಿಕ ದೇಹವಲ್ಲ, ತಾನು ಅಂತರಾತ್ಮ ಎಂಬ ಸಾಕ್ಷಾತ್ಕಾರ ಅವನಿಗಾಗಿರುತ್ತದೆ. ಹಳೆಯ ಕೋಟು ಅಥವಾ ರವಿಕೆಯನ್ನು ತೊಟ್ಟರೆ ನಾನು ಹೇಗೆ ವೃದ್ಧನಾಗುವುದಿಲ್ಲವೋ ಹಾಗೆಯೇ ದೇಹದ ಮತ್ತು ಮನಸ್ಸಿನ ಸ್ಥಿತಿಯು ಎಂದಿಗೂ ಶಾಶ್ವತ ಆತ್ಮದ ಮೇಲೆ ಪ್ರಭಾವ ಬೀರುವುದಿಲ್ಲ.
ಆದುದರಿಂದ, ಲೌಕಿಕ ಸ್ಥಿತಿಯ ಅಂತಿಮ ಹಂತವಾದ ಸಾವೂ ಕೂಡ ಮುಕ್ತ ಆತ್ಮದ ಮೇಲೆ ಏನೂ ಪ್ರಭಾವ ಬೀರುವುದಿಲ್ಲ. ಉದಾಹರಣೆಗೆ, ಬೆಕ್ಕು ತನ್ನ ಬಾಯಲ್ಲಿ ಇಲಿಯನ್ನು ಹಿಡಿದುಕೊಂಡಿದ್ದರೆ, ಸಾವು ಸನ್ನಿಹಿತ ಎಂದು ಇಲಿಯು ಒದ್ದಾಡುತ್ತದೆ. ಆದರೆ ಅದೇ ಬೆಕ್ಕು ತನ್ನ ಮರಿಯನ್ನು ಹಿಡಿದುಕೊಂಡಿದ್ದರೆ ಮರಿಗೆ ಆರಾಮದ ಅನುಭವ. ಅದೇ ರೀತಿ, ಬದ್ಧ ಆತ್ಮದ ಬಳಿಗೆ ಸಾವು ಬಂದಾಗ ಅವನು ಹೆದರುತ್ತಾನೆ. ಆದರೆ ಮುಕ್ತ ಆತ್ಮಕ್ಕೆ `ಸಾವು’ ಎಂದರೆ ಭಗವಂತನು ತನ್ನನ್ನು ಭಗವದ್ಧಾಮಕ್ಕೆ ಕರೆದೊಯ್ಯಲು ಬಂದಿದ್ದಾನೆ ಎಂದು ಅರ್ಥ. ಅಂದರೆ ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗುವುದು ಎಂದು ಅರ್ಥ.