ಕನಸಿನಿಂದ ಮುಕ್ತರಾಗಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅತಿಥಿಯಾದ
ಮನೋವಿಜ್ಞಾನಿ ಕ್ರಿಶ್ಚಿಯನ್‌ ಹೌಸರ್‌ ನಡುವೆ ಸೆಪ್ಟೆಂಬರ್‌ 10, 1973ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದ.

ಡಾ. ಹೌಸರ್‌ : ಜೇಮ್ಸ್‌ ನಿಮ್ಮ ವಿದ್ಯಾರ್ಥಿಯಾಗುವ ಮೊದಲು ನಾನು ಅವನನ್ನು ಭೇಟಿ ಮಾಡಿದ್ದೆ. ಅವನು ಬದುಕಿನಲ್ಲಿ ಏನೂ ವಿಶೇಷವನ್ನು ಕಾಣದ, ಗುರಿ ಇಲ್ಲದ ವ್ಯಕ್ತಿಯಾಗಿದ್ದ. ತುಂಬ ಆರಾಮವಾಗಿರುತ್ತಿದ್ದ. ಆದರೆ ನಾನು ನಿನ್ನೆ ಅವನನ್ನು ಭೇಟಿ ಮಾಡಿದಾಗ ಅವನು ತುಂಬ ಖುಷಿಯಾಗಿದ್ದ. ಅವನು ತನ್ನ ಬಗೆಗೆ ಮತ್ತು ಭಕ್ತನಾಗಿ ತನ್ನ ನವ ಜೀವನದ ಬಗೆಗೆ ಬಹಳ ಸಂತೋಷದಿಂದ ಇದ್ದಾನೆ. ಅದು ನನಗೂ ಸಂತೋಷ ಉಂಟುಮಾಡಿತು. ನನಗೆ ಜೇಮ್ಸ್‌ ತುಂಬ ಇಷ್ಟವಾದ.

ಶ್ರೀಲ ಪ್ರಭುಪಾದ : ಹೌದು ಕೃಷ್ಣ ಪ್ರಜ್ಞೆಯು ಜೀವಿಯ ಮೂಲ ಸ್ಥಿತಿ, ಮೂಲ ಸ್ಥಾನ. ಉದಾಹರಣೆಗೆ, ಮಗುವಿಗೆ ಯಾವಾಗಲೂ “ನಾನು ಇಂಥವರ ಮಗ” ಎಂಬ ಪ್ರಜ್ಞೆ ಇರುತ್ತದೆ. ಈ ಪ್ರಜ್ಞೆಯು ಸ್ವಾಭಾವಿಕ.

ಒಬ್ಬ ವ್ಯಕ್ತಿ ಹುಚ್ಚನಾಗಬಹುದು. ಆದರೆ ಅವನು ಗುಣಮುಖನಾದ ಕೂಡಲೇ ಅವನು “ನಾನು ಇಂತಹ ಕುಟುಂಬಕ್ಕೆ ಸೇರಿದವನು ಮತ್ತು ನಾನು ಇಂತಹವರ ಮಗ” ಎಂದು ಅರ್ಥಮಾಡಿಕೊಳ್ಳುತ್ತಾನೆ.

ಅದೇ ರೀತಿ ಒಮ್ಮೆ ಈ ಭೌತಿಕ ಪ್ರಕೃತಿಯೊಂದಿಗೆ ಸಂಪರ್ಕಕ್ಕೆ ಬಂದನೆಂದರೆ ಜೀವಿಯು ಹುಚ್ಚನಾಗಿಬಿಡುತ್ತಾನೆ. ನಾವೆಲ್ಲರೂ ಕೃಷ್ಣನ ಅವಿಭಾಜ್ಯ ಅಂಗವಾದರೂ ಮತ್ತು ನಮ್ಮ ಮೂಲ ಕೃಷ್ಣ ಪ್ರಜ್ಞೆಯನ್ನು ಭಿನ್ನಗೊಳಿಸಲಾಗದಿದ್ದರೂ, ಅದು ಹೇಗೋ ನಾವು ಈ ಲೋಕದಲ್ಲಿ ಕೃಷ್ಣನೊಂದಿಗಿನ ನಮ್ಮ ಬಾಂಧವ್ಯವನ್ನು ಮರೆತುಬಿಟ್ಟಿದ್ದೇವೆ. ಇದು ಹುಚ್ಚುತನ.

ನೀವು ಮನೋ ವಿಜ್ಞಾನಿ. ಈ ಭೌತಿಕ ಲೋಕದಲ್ಲಿ ಪ್ರತಿಯೊಬ್ಬರೂ ಬಹುತೇಕ ಹುಚ್ಚರು ಎಂಬುವುದು ನಿಮಗೆ ಚೆನ್ನಾಗಿ ಗೊತ್ತು.

ಡಾ. ಹೌಸರ್‌ : ಅಥವಾ ಅವನಲ್ಲಿ ರೋಗಾಣುವಿದೆ.

ಶ್ರೀಲ ಪ್ರಭುಪಾದ : ಬಂಗಾಳಿ ಪದ್ಯವೊಂದಿದೆ : ಪಿಶಾಚೇ ಪೈಲೇ ಜನ ಮತೇ ಚನ್ನ ಹಯ / ಮಾಯಾರ ಗ್ರಸ್ತ ಜೀವೇರ ಸೈ ದಶಾ ಉಪಜಯ : “ಈ ಲೌಕಿಕ ಪ್ರಕೃತಿಯೊಳಗೆ ಜೀವಿಸುತ್ತಿರುವ ಯಾರೇ ಆಗಲಿ ಅವನು ದೆವ್ವ ಹಿಡಿದವನಂತಿರುತ್ತಾನೆ,” ದೆವ್ವ ಕಾಡುತ್ತಿರುವ ಅಥವಾ ದೆವ್ವ ಹಿಡಿದಿರುವ ವ್ಯಕ್ತಿಯ ಬಗೆಗೆ ನಿಮಗೇನಾದರೂ ಅನುಭವವಿದೆಯೆ?

ಡಾ. ಹೌಸರ್‌ : ಹಾ, ಹೌದು. ಅದು ಸಾಮಾನ್ಯವಾಗಿ ಬುದ್ಧಿ ವಿಕಲ್ಪದ ಲಕ್ಷಣ. ಬಾಹ್ಯ ಶಕ್ತಿಗಳು ತಮಗೆ ಕಿರುಕುಳ ನೀಡುತ್ತಿವೆ ಎಂದು ಅವರು ಭಾವಿಸುತ್ತಾರೆ.

ಶ್ರೀಲ ಪ್ರಭುಪಾದ : ಹೌದು, ಬಾಹ್ಯ ಶಕ್ತಿಗಳು. ಅದು ಅಭಿಪ್ರಾಯ. ನಮ್ಮ ಲೌಕಿಕ ಜೀವನ ಕಲ್ಪನೆಯು ನಾವು ಬಾಹ್ಯ ಶಕ್ತಿಯಿಂದ ಹಿಡಿಯಲ್ಪಟ್ಟಿದೆಯೋ ಎಂಬಂತಿದೆ. ಇದು ಹುಚ್ಚುತನ. “ನಾನು ಕ್ರಿಶ್ಚಿಯನ್‌”, “ನಾನು ಭಾರತೀಯ”, “ನಾನು ಮುಸಲ್ಮಾನ”, “ನಾನು ಇಂಗ್ಲಿಷ್‌”, “ನಾನು ಜರ್ಮನ್‌.” ಈ ಕಲ್ಪನೆಗಳೆಲ್ಲ ದೆವ್ವ ಹಿಡಿದ ಕಲ್ಪನೆಗಳು. ಹುಚ್ಚು. ಏಕೆಂದರೆ ಆತ್ಮವು ಶುದ್ಧವಾಗಿದೆ. ಅಸಂಗೋ ಅಯಂ ಪುರುಷಃ – ಶುದ್ಧವಾದ ಆತ್ಮಕ್ಕೆ ದೇಹದ ಯಾವುದೇ ಉಪಾಧಿಯೊಂದಿಗೆ ಸಂಬಂಧವಿಲ್ಲ.

ಉದಾಹರಣೆ, ನಾವು ಕನಸಿನಲ್ಲಿ ನಮಗೆ ಏನೂ ಸಂಬಂಧವಿರದ ಅನೇಕ ವಿಷಯಗಳನ್ನು ನೋಡುತ್ತೇವೆ. ಇದು ನಮ್ಮ ರಾತ್ರಿಯ ಕನಸು ಮತ್ತು ನಾವು ಎಚ್ಚರಗೊಂಡಾಗ ಅದನ್ನು ಗುರುತಿಸುತ್ತೇವೆ.

ದುರದೃಷ್ಟವಶಾತ್‌, ನಾವು ಎಚ್ಚರಗೊಂಡಾಗ, ನಾವು ನಮ್ಮ ಹಗಲುಗನಸಿಗೆ ಹಿಂದಿರುಗುತ್ತೇವೆ. “ನಾನು ಇದು”, “ನಾನು ಅದು”, “ನಾನು ಬಿಳಿಯ”, “ನಾನು ಕರಿಯ”, “ನಾನು ಅಮೆರಿಕದವ” ಇತ್ಯಾದಿ.

ರಾತ್ರಿ ಕನಸು ಕಂಡಾಗ ನಾವು ಭಿನ್ನ ಪರಿಸ್ಥಿತಿಯಲ್ಲಿ ಇರುತ್ತೇವೆ. ನಾವು ಹಗಲಿನದನ್ನು ಮರೆಯುತ್ತೇವೆ. ಮತ್ತು ಹಗಲಿನಲ್ಲಿ ರಾತ್ರಿಯದನ್ನು ಮರೆಯುತ್ತೇವೆ. ಆದರೆ ವಾಸ್ತವವಾಗಿ ನಾವು ಇನ್ನೊಂದು ಕನಸನ್ನು ಪ್ರವೇಶಿಸುತ್ತಿದ್ದೇವೆ. ನಾವು ನಮ್ಮ ರಾತ್ರಿಯ ಕನಸಿನಿಂದ ಹೊರಬಂದಾಗ, ನಾವು ಅದನ್ನು ಮರೆಯುತ್ತೇವೆ ಮತ್ತು ಅದೊಂದು ತಾತ್ಕಾಲಿಕ ಸ್ಥಿತಿ, ಕನಸು ಎಂದಷ್ಟೇ ಪರಿಗಣಿಸುತ್ತೇವೆ. ಆದರೆ ನಮ್ಮ ಹಗಲಿನ ಸ್ಥಿತಿಯೂ ತಾತ್ಕಾಲಿಕವೇ, ಅದೂ ಕೂಡ ಒಂದು ಕನಸು. ಈ ತಾತ್ಕಾಲಿಕ ಲೌಕಿಕ ಸ್ಥಿತಿಯಲ್ಲಿ, ರಾತ್ರಿ ಮತ್ತು ಹಗಲು, ನಾನು ಶಾಶ್ವತ ಆಧ್ಯಾತ್ಮಿಕ ವೀಕ್ಷಕ ಎಂಬ ವಾಸ್ತವಾಂಶವನ್ನು ನಾವು ಅರಿತುಕೊಳ್ಳಬೇಕು.

ಕಷ್ಟದ ವಿಷಯವೆಂದರೆ, ನಮ್ಮಲ್ಲಿನ ಬಹುತೇಕ ಜನರು ಈ ಎರಡೂ ಕನಸುಗಳನ್ನು ನೋಡುತ್ತೇವೆ ಮತ್ತು ಒಂದನ್ನು ಮಾತ್ರ ಗುರುತಿಸುತ್ತೇವೆ. ನಾವು ಹಗಲುಗನಸನ್ನು ಶಾಶ್ವತವಾದ ವಾಸ್ತವಾಂಶ ಎಂದು ಭಾವಿಸುತ್ತೇವೆ. ಕನಸಿನ ಸ್ಥಿತಿಯನ್ನು ಯಾರಾದರೂ ವಾಸ್ತವ ಎಂದು ಪರಿಗಣಿಸಿದರೆ ನೀವು ಅಂತಹವರಿಗೆ ಚಿಕಿತ್ಸೆ ನೀಡುವಿರಲ್ಲವೆ?

ಡಾ. ಹೌಸರ್‌ : ಹಂ, ಹೌದು.

ಶ್ರೀಲ ಪ್ರಭುಪಾದ : ಆದುದರಿಂದ, ಪ್ರಾಯೋಗಿಕ ಉದ್ದೇಶಕ್ಕಾಗಿ, ಈ ತಾತ್ಕಾಲಿಕ ಲೌಕಿಕ ಶಕ್ತಿಯೊಂದಿಗೆ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ ಹುಚ್ಚರು. ಮತ್ತು ನಾವು ಅವನನ್ನು ಈ ಕನಸು ಕಾಣುವ ಸ್ಥಿತಿಯ ಹುಚ್ಚುತನದಿಂದ ಹೊರಗೆ ತರಲು ಪ್ರಯತ್ನಿಸುತ್ತಿದ್ದೇವೆ. ಇದು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಒಟ್ಟಾರೆ ತತ್ತ್ವವಾಗಿದೆ.

ಡಾ. ಹೌಸರ್‌ : ಆದರೆ ಅವನು ಕನಸು ಕಾಣುವುದನ್ನು ನಿಲ್ಲಿಸುವನೇ? ಅಂದರೆ, ಒಟ್ಟಿನಲ್ಲಿ ಅವನು ನಿಲ್ಲಿಸುವನೆ?… ಕನಸು ಕಾಣುವುದನ್ನು ನಿಲ್ಲಿಸುವನೆ?

ಶ್ರೀಲ ಪ್ರಭುಪಾದ : ಹೌದು, ನಾವು ಬಳಸುವ ಪದದಂತೆ : ಯಾವುದು ಅವನ ಶಾಶ್ವತ ವ್ಯಕ್ತಿತ್ವ ಅಥವಾ ಸ್ವರೂಪ ಅಲ್ಲವೋ ಅಥವಾ ಯಾವುದು ಅವನ ಶಾಶ್ವತ ಕರ್ತವ್ಯವಲ್ಲವೋ ಅದರೊಂದಿಗೆ ಆತ್ಮವು ಇನ್ನು ಗುರುತಿಸಿಕೊಳ್ಳುವುದಿಲ್ಲ. “ಈ ಕನಸಿನ ಸ್ಥಿತಿಗಿಂತ ನಾನು ಪ್ರತ್ಯೇಕ” ಎಂಬುವುದು ಅವನಿಗೆ ಗೊತ್ತು. ಆದುದರಿಂದ ವ್ಯಕ್ತಿಗೆ ತಾನು ಕನಸಿನ ವೀಕ್ಷಕ ಮಾತ್ರ, ಅದರ ಭಾಗವಲ್ಲ ಎನ್ನುವುದು ಯಾವಾಗ ತಿಳಿಯುತ್ತದೆಯೋ ಆಗ ಅವನು ಗುಣಮುಖನಾದಂತೆ.

ಡಾ. ಹೌಸರ್‌ : ಆದರೆ ರಾತ್ರಿ ಕನಸಿನಲ್ಲಿ ಇತರ ಕಾರ್ಯವೂ ಇದೆ.

ಶ್ರೀಲ ಪ್ರಭುಪಾದ : ಇಲ್ಲ, ಅದು ಉದ್ದೇಶವಲ್ಲ. ರಾತ್ರಿ ಮತ್ತು ಹಗಲಿನಲ್ಲಿ ಕನಸು ಕಾಣುವುದು ಒಂದೇ. ಅದು ನಿಜವಲ್ಲ, ಭ್ರಾಂತಿ. ಅವುಗಳ ಕಾಲಾವಧಿ ಮಾತ್ರ ಭಿನ್ನ – ರಾತ್ರಿಯಲ್ಲಿ ನೀವು ಅನೇಕ ನಿಮಿಷಗಳವರೆಗೆ ಕನಸು ಕಾಣುವಿರಿ ಮತ್ತು ಹಗಲಿನಲ್ಲಿ ನೀವು ಹಲವು ಗಂಟೆಗಳ ಕಾಲ ಕನಸು ಕಾಣುವಿರಿ.

ಆದರೆ ಹಗಲಿನಲ್ಲಿ ನೀವು ನಿಮ್ಮನ್ನು ಇಂಗ್ಲಿಷ್‌ ಅಥವಾ ಸ್ವೀಡಿಶ್‌ ಅಥವಾ ಹಿಂದೂ ಅಥವಾ ಮುಸ್ಲಿಂ ಎಂದು ಯೋಚಿಸಿದರೂ ಅದೂ ಕೂಡ ಕನಸೇ. ನೀವು ಇದು ಯಾವುದೂ ಅಲ್ಲ. ಹುಚ್ಚುತನದ ಕಾರಣ, ನಾವು ಕೆಲವು ಸಂದರ್ಭದಲ್ಲಿ, “ಈ ಹಗಲುಗನಸು ವಾಸ್ತವ” ಅಥವಾ “ಆ ಹಗಲುಗನಸು ವಾಸ್ತವ” ಎಂದುಕೊಳ್ಳುತ್ತೇವೆ. ಆದರೆ ಅವು ಯಾವುವೂ ವಾಸ್ತವವಲ್ಲ. ಅವುಗಳ ಪ್ರಭಾವದಲ್ಲಿ ನಾವು ಅವುಗಳನ್ನು ವಾಸ್ತವ ಎಂದು ಸ್ವೀಕರಿಸಬಹುದು. ಆದರೆ ಅವುಗಳು ಯಾವುವೂ ವಾಸ್ತವವಲ್ಲ.

ಆದುದರಿಂದ ಮತ್ತೊಮ್ಮೆ, ಬುದ್ಧಿ ಸ್ವಾಸ್ಥ್ಯ ಎಂದರೆ, ಸರ್ವೋಪಾಧಿ ವಿನಿರ್ಮುಕ್ತಂ ತತ್‌ ಪರತ್ತ್ವೇನ ನಿರ್ಮಲಂ : ಕನಸಿನಂತಹ ಉಪಾಧಿಗಳಿಂದ ನಾನು ಸಂಪೂರ್ಣವಾಗಿ ಮುಕ್ತವಾಗಬೇಕು. ಉದಾಹರಣೆಗೆ, ರಾತ್ರಿ ವೇಳೆಯ ಕನಸಿನಲ್ಲಿ ನಾನು “ನಾನು ಈಗ ರಾಜನಾದೆ” ಅಥವಾ “ನಾನು ಕಾರ್ಖಾನೆಯ ಮಾಲೀಕ” ಎಂದು ಯೋಚಿಸಬಹುದು. ಆದರೆ ಅವು ಯಾವೂ ವಾಸ್ತವವಲ್ಲ. ಅವು ಕನಸುಗಳು ಮಾತ್ರ. ಅದೇ ರೀತಿ ಹಗಲಿನಲ್ಲಿ ನಾನು “ನಾನು ರಷ್ಯದವ”, “ನಾನು ಆಫ್ರಿಕದವ”, “ನಾನು ಇದು” ಅಥವಾ “ನಾನು ಅದು” ಎಂದು ಯೋಚಿಸಬಹುದು. ಆದರೆ ಅದೂ ಕೂಡ ಕನಸು.

ವಾಸ್ತವದಲ್ಲಿ, ನಾನು ಆಧ್ಯಾತ್ಮಿಕ ಆತ್ಮ, ಪರಮ ಆತ್ಮದ ಅವಿಭಾಜ್ಯ ಅಂಗ ಮತ್ತು ನನ್ನ ಕರ್ತವ್ಯ, ನನ್ನ ಸ್ವಭಾವ ಅವನ ಸೇವೆಗೈಯುವುದಾಗಿದೆ. ಇವೆಲ್ಲ ತುಂಬ ಸರಳ. ಆದುದರಿಂದ ಬುದ್ಧಿ ಸ್ವಾಸ್ಥ್ಯಕ್ಕೆ ಇದು ಅಗತ್ಯ : ಈ ಕನಸು ಕಾಣುವ ಸ್ಥಿತಿಯಿಂದ ನಾನು ಮುಕ್ತನಾಗುವುದು ಮತ್ತು ಹುಸಿ ಉಪಾಧಿಗಳಿಂದ ವಿಮೋಚನೆಗೊಳ್ಳುವುದು.

ಡಾ. ಹೌಸರ್‌ : ಆದರೆ ಈ ಹುಸಿ… ಹುಸಿ ಉಪಾಧಿಗಳಲ್ಲಿ ಕೆಲವು ನಮ್ಮ ಸಮಾಜದ ಅಗತ್ಯ ಯಂತ್ರಗಳು.

ಶ್ರೀಲ ಪ್ರಭುಪಾದ : ಹೌದು. ಆ ಸಮಾಜ ಕೂಡ ಹುಸಿ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ