ಶಕ್ತಿಯಿಂದ ಪರಮ ಪುರುಷನವರೆಗೆ

ಭಗವಂತನ ವ್ಯಕ್ತಿತ್ವವನ್ನು ಸುತ್ತುವರಿದಿರುವ ಗುಪ್ತ ಮೋಡವನ್ನು ಭೇದಿಸುವುದರತ್ತ…

ಆಂಗ್ಲ ಮೂಲ: ಬ್ಯಾಕ್‌ ಟು ಗಾಡ್‌ಹೆಡ್‌

ಭಗವತ್‌ ಸಾಕ್ಷಾತ್ಕಾರದ ಮೂರು ಹಂತಗಳು: ವ್ರತ ಮತ್ತು ಧ್ಯಾನಗಳಿಂದ ಭಗವಂತನನ್ನು ಸರ್ವ ವ್ಯಾಪಿ, ಸ್ವಯಂ ಪ್ರಕಾಶಿತ ಬ್ರಹ್ಮನ್‌ ಆಗಿ ನಾವು ಸಾಕ್ಷಾತ್ಕರಿಸಿಕೊಳ್ಳಬಹುದು. ಇನ್ನೂ ಹೆಚ್ಚಿನ ಸಾಕ್ಷಾತ್ಕಾರವೆಂದರೆ, ಹೃದಯದೊಳಗಿನ ಚತುರ್ಭುಜ ಪರಮ ಆತ್ಮ, ಪರಮಾತ್ಮನಾಗಿ ದೇವರ ಸಾಕ್ಷಾತ್ಕಾರ. ಬ್ರಹ್ಮನ್‌ ಮತ್ತು ಪರಮಾತ್ಮ ಸಾಕ್ಷಾತ್ಕಾರಗಳೆರಡೂ ಸೇರಿರುವ ಅತ್ಯುನ್ನತ ಸಾಕ್ಷಾತ್ಕಾರವೆಂದರೆ ಪರಮ ಪುರುಷ ಶ್ರೀ ಕೃಷ್ಣನನ್ನು ಭಗವಾನ್‌ ಎಂದು ಅರ್ಥಮಾಡಿಕೊಳ್ಳುವುದು. ಪರಿಶುದ್ಧ ಭಕ್ತಿಯಿಂದ ಮಾತ್ರ ನಾವು ಅವನನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಅವನ ಶಾಶ್ವತ ಲೀಲೆಗಳೊಂದಿಗೆ ಪ್ರವೇಶಿಸಬಹುದು.

ದೇವರು ಬಹಳ ದೂರ, ತನ್ನದೇ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೇ? ಅಥವಾ ಅವನು ಎಲ್ಲರ ಹೃದಯಗಳಲ್ಲಿ ವಾಸಿಸುತ್ತ ಅತ್ಯಂತ ಸಮೀಪದಲ್ಲಿ ಇರುವನೇ? ಅಥವಾ ಅವನು ಎಲ್ಲದರಲ್ಲಿಯೂ ಸರಳ ವ್ಯಕ್ತಿಯೇ?

ಈ ಪ್ರಶ್ನೆಗಳಿಗೆ ನೀವು ಏನು ಹೇಳುವಿರಿ? ಅಥವಾ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ದೇವರನ್ನು ಕುರಿತು ಚಿಂತಿಸುವಾಗ ನೀವು ಏನು ಯೋಚಿಸುವಿರಿ?

ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೆನ್ನಿಸಿದರೆ ನೀವು ಏಕಾಕಿಯಲ್ಲ. ದೇವರು ಹೇಗಿರಬಹುದು ಎನ್ನುವ ಬಗೆಗೆ ಬಹಳ ಜನರಿಗೆ ಕೇವಲ ಅಸ್ಪಷ್ಟ ಕಲ್ಪನೆಗಳಿವೆ. ನಾನು ಅನೇಕ ಜನರನ್ನು ಕೇಳಿದ್ದೇನೆ. ಅವರು ಸಾಮಾನ್ಯವಾಗಿ ಏನು ಹೇಳುತ್ತಾರೆಂದರೆ, ಸೌಂದರ್ಯ, ಶಕ್ತಿ ಮತ್ತು ವಿವೇಕದಂತಹ ಕೆಲವು ವೈಯಕ್ತಿಕ ಗುಣ ಲಕ್ಷಣಗಳಿರುವ ದೇವರನ್ನು ಕುರಿತು ಚಿಂತಿಸುವಾಗ ಅವರು, ಅವನು ಎಲ್ಲವೂ ಅಥವಾ ಸರ್ವ ವ್ಯಾಪಿ ಶಕ್ತಿಯಂತೆ ಎಲ್ಲದರ ಒಳಗೂ ಇರಬೇಕು ಎಂದೂ ಯೋಚಿಸುತ್ತಾರೆ. ದೇವರು ಒಬ್ಬ ವ್ಯಕ್ತಿಯೆಂದು ಅನೇಕ ಜನರು ನಂಬಿದರೂ ಕೂಡ ಅವನನ್ನು ನಿಷ್ಕೃಷ್ಟ ಮತ್ತು ಅಕ್ಷರಶಃ ಅರ್ಥೈಸಿ ಯೋಚಿಸುವುದು ಅವನನ್ನು ಸೀಮಿತಗೊಳಿಸಿದಂತೆ ಆಗುತ್ತದೆ ಎನ್ನುವುದನ್ನು ಅದು ಸೂಚಿಸುವುದರಿಂದ ಇದು ಅಸಮಾನತೆ, ಭಿನ್ನತೆಯನ್ನು ವ್ಯಕ್ತಪಡಿಸುತ್ತದೆ, ಸಾಮಾನ್ಯ ಮನುಷ್ಯನ ಎಲ್ಲ (ಅಥವಾ ಕೆಲವಾದರೂ) ಸೀಮಿತ ಮತ್ತು ಅಪರಿಪೂರ್ಣತೆಗೆ ಗುರಿಯಾಗುವ `ದೇವರ’ ಮಾನವ ರೂಪಿ ಕಲ್ಪನೆಯಲ್ಲಿ ತಾವು ಅಂತ್ಯಗೊಳ್ಳಬಹುದು ಎನ್ನುವ ಭಯ ಅವರಿಗಿದೆ.

ಉದಾಹರಣೆಗೆ ಕ್ರೈಸ್ತ ಧರ್ಮದಲ್ಲಿ ದೇವರನ್ನು ತಂದೆ ಎನ್ನುವ ವರ್ಣನೆ ಇದೆ. ಖಂಡಿತವಾಗಿ ಒಂದು ವಿಶೇಷ ಗುಣದ ಉಪಾಧಿ. ಆದರೆ ಸ್ವರ್ಗದಲ್ಲಿರುವ ನಮ್ಮ ತಂದೆಯು ಹೇಗೆ ಕಾಣುತ್ತಾರೆ? ಸಿಸ್ಟೈನ್‌ ಚಾಪೆಲ್‌ನ ಒಳ ಛಾವಣಿಯ ಮೇಲೆ ಮೈಕೆಲ್‌ ಏಂಜಲೋವಿನ ಕಲಾಕೃತಿ ಇದೆ. ಅದರಲ್ಲಿ ವೃದ್ಧನ ರೂಪದ ದೇವರು ಆಡಮ್‌ನನ್ನು ಸೃಷ್ಟಿಸುತ್ತಿರುವ ದೃಶ್ಯವಿದೆ. ಆಡಮ್‌ ಭಗವಂತನಿಗಿಂತ ಹೆಚ್ಚು ಆರೋಗ್ಯಪೂರ್ಣವಾಗಿ ಮತ್ತು ಸುಂದರವಾಗಿ ಕಾಣುತ್ತಾನೆ.

ಆದುದರಿಂದ ನಾನು ಹೇಳುತ್ತಿದ್ದಂತೆ, ಶಿಕ್ಷಿತರಲ್ಲಿ ಅನೇಕ ಜನರು ದೇವರನ್ನು ಒಂದು ವ್ಯಕ್ತಿಯೆಂದು ಗಂಭೀರವಾಗಿ ಯೋಚಿಸಲು ಇಷ್ಟಪಡುವುದಿಲ್ಲ. ಬುದ್ಧಿವಂತರಲ್ಲದ ಸಾಮಾನ್ಯ ಜನರು ಅದನ್ನು ಮಾಡಬಹುದು ಅಥವಾ ಕಲಾವಿದನೊಬ್ಬನು ತನ್ನ ಕಲ್ಪನಾ ಶಕ್ತಿಯಿಂದ ದೇವರ ಯಾವುದಾದರೂ ವೈಯಕ್ತಿಕ ರೂಪವನ್ನು ಕಲ್ಪಿಸಿಕೊಳ್ಳಬಹುದು. ಆದರೆ ಅತ್ಯಾಧುನಿಕ ಆರಾಧಕರು, ಪೂಜಾರಿಗಳು ಮತ್ತು ದೇವತಾಶಾಸ್ತ್ರಜ್ಞರು `ತಂದೆಯಾದ ದೇವರು’ ಎನ್ನುವ ವಾಕ್ಯವನ್ನು ಅಕ್ಷರಶಃ ಸ್ವೀಕರಿಸಲು ಇಷ್ಟಪಡುವುದಿಲ್ಲ. ತಮ್ಮನ್ನು ಮೂಲವಾಸಿಗಳು ಎಂದು ಪರಿಗಣಿಸುವ ಕಳಂಕದಿಂದ ತಪ್ಪಿಸಿಕೊಳ್ಳಲು ಅವರು ಇಷ್ಟಪಡುತ್ತಾರೆ.

ನನ್ನದೇ ರೀತಿಯಲ್ಲಿ…

ದೇವರು ವ್ಯಕ್ತಿ ಎನ್ನುವ ನನ್ನ ಕಲ್ಪನೆಗಳು ಅಸಮರ್ಪಕವೆಂದು ಸಾಬೀತಾದಾಗ ನನ್ನ ಬದುಕಿನಲ್ಲಿಯೂ ಅದೊಂದು ಕಾಲವಿತ್ತು. 1966ರಲ್ಲಿ, ನನ್ನ ಕಾಲೇಜು ದಿನಗಳಲ್ಲಿ, ನಾನು ನನ್ನ ಮೊದಲ ತತ್ತ್ವಶಾಸ್ತ್ರ ಶಿಕ್ಷಣ, ಆರಂಭಿಕ ತತ್ತ್ವಶಾಸ್ತ್ರವನ್ನು ಕಲಿಯಲು ಆರಂಭಿಸಿದೆ. ನಾನು ಕಲಿತಿದ್ದೆಲ್ಲವನ್ನೂ ಆ ಆಂಶದಿಂದ ಪರೀಕ್ಷಿಸಲು ಪ್ರಾರಂಭಿಸಿದೆ. ದೇವರು ಮತ್ತು ಧರ್ಮವನ್ನು ಕುರಿತ ನನ್ನ ಅಭಿಪ್ರಾಯಗಳು ಅತಿ ಶೀಘ್ರದಲ್ಲಿ ಬದಲಾಗಲಾರಂಭಿಸಿದವು. ದೇವರು ಎಲ್ಲ ಕಡೆ, ಎಲ್ಲದರಲ್ಲಿಯೂ ಮತ್ತು ಎಲ್ಲ ಸಂದರ್ಭಗಳಲ್ಲಿಯೂ ಇರಬೇಕೆಂದು ನಾನು ಬಯಸಿದೆ. ಏಕೆಂದರೆ, ಪ್ರತಿಯೊಂದು ಘಟ್ಟದಲ್ಲಿಯೂ ನಾನು ಕೆಟ್ಟ ವಾಸ್ತವಾಂಶಗಳಿಂದ ಸುತ್ತುವರಿಯಲ್ಪಟ್ಟಿದ್ದೆ. ಕಾಲವು ಪಟ್ಟುಹಿಡಿದ ನಾಶಕ – ಋತುಗಳು ಬದಲಾದವು, ಎಲೆಗಳು ಉದುರಿದವು, ಹೂವುಗಳು ಒಣಗಿದವು, ನೆನಪು ವಿಫಲವಾಯಿತು, ಧೂಳು ಶೇಖರಗೊಂಡಿತು ಮತ್ತು ನಿಜವಾದ ಪ್ರೀತಿಯು ಹುಸಿಯಾಯಿತು. ಕಾಲದ ತುಕ್ಕು, ಆಲಸ್ಯವು ಪ್ರತಿಯೊಂದು ಕಟ್ಟಡದ ಮೇಲೆ. ಪ್ರತಿಯೊಂದು ಪ್ರಾಣಿಗಳ ಮೇಲೆ ಕಾಣತೊಡಗಿತು ಮತ್ತು ಪ್ರತಿಯೊಂದು ತತ್ತ್ವ ಮತ್ತು ಕಲೆಯನ್ನು ನಾಶಪಡಿಸಿತು. ಅದು ಗಾಳಿಯಲ್ಲಿ ತೂಗುತ್ತಿತ್ತು ಮತ್ತು ಶ್ವಾಸಕೋಶದ ಮೂಲಕ ರಕ್ತವನ್ನು ಪ್ರವೇಶಿಸಿತು. ಯಾವುದೂ ಉಳಿಯಲಿಲ್ಲ, ಇದನ್ನು ಬಿಟ್ಟು… ನಾನು ಉಳಿದೆ. ನಾನು ಆಗಲೇ ಬೇಕಾಗಿತ್ತು. ನಾನು ಹೇಗೆ ನಾಶವಾಗಬಲ್ಲೆ? ನನಗೆ ಬದುಕುವುದು ಬೇಕಾಗಿತ್ತು, ಶರತ್ಕಾಲ, ಚಳಿಗಾಲ ಮತ್ತು ವಸಂತ ಕಾಲ ಎಲ್ಲದರಲ್ಲಿಯೂ ಬದುಕಲು, ಅಸ್ತಿತ್ವದಲ್ಲಿರಲು ಬಯಸಿದ್ದೆ. ಭೂಮಿಯು ಸಾಯಬಹುದು, ಸೂರ್ಯನು ಸುಟ್ಟು ಹೋಗಬಹುದು, ನಿಶ್ಚಯವಾಗಿಯೂ ನನ್ನ ದೇಹವು ವಿಭಜಿತಗೊಳ್ಳಬಹುದು. ಆದರೆ ನಾನು ಉಳಿಯುವೆ. ನಾನು ಶಾಶ್ವತ.

ಎಲ್ಲ ನಶ್ವರ ವಿಷಯದೊಳಗೆ ನಾನು ಸಾಕ್ಷಾತ್ಕರಿಸಿಕೊಂಡ ಆಧ್ಯಾತ್ಮಿಕ ಸಾರವೂ ಕೂಡ ಶಾಶ್ವತ. ಮತ್ತು ಆ ಸಾರವೂ ನಾನು. ಆದರೆ, `ನಾನು’ ಎನ್ನುವ ಭಾವನೆಯು ಭ್ರಮೆ ಎಂದು ನಾನು ತೀರ್ಮಾನಿಸಿದೆ. ಹಂಗಾಮಿಯಾದ, ಸದಾ ಚಂಚಲವಾದ, ನಾನು ಭ್ರಮೆ ಎಂದು ಪರಿಗಣಿಸುವ ನನ್ನ ಸುತ್ತಲಿನ ಜಡ ಲೋಕದ ಹಂಗಾಮಿ ವಿಷಯ ಅಥವಾ ಸಂಗತಿ ಎಂದು ನಾನು ನಿರ್ಧರಿಸಿದೆ. ನಾನು ಅಸ್ತಿತ್ವದಲ್ಲಿರುವೆ, ಆದರೆ ಅನನ್ಯ, ವೈಯಕ್ತಿಕ ಜೀವಿಯಾಗಿ ಅಲ್ಲ ಎಂದು ನಾನು ನನ್ನ ಅಧ್ಯಯನ ಮತ್ತು ಊಹೆಗಳಿಂದ ತೀರ್ಮಾನಿಸಿದೆ. ಶಂಕರರ ಕ್ರೆಸ್ಟ್‌ ಜುವೆಲ್‌ ಆಫ್‌ ಡಿಸ್ಕ್ರಿಮಿನೇಷನ್‌ ಅನ್ನು ಓದುವಾಗ ನಾನು ತತ್‌ ತ್ವಂ ಅಸಿ ಎನ್ನುವ ಸಂಸ್ಕೃತ ವಾಕ್ಯವನ್ನು ಕಂಡೆ. ಅಂದರೆ `ನೀವು ಅದು.’ `ನಾನು’ ಎನ್ನುವುದು ವಿಷಯ-ವಿಷಯಿ ಭಾಗದಿಂದ ಹೊರಬರುತ್ತದೆ, ತನ್ನತನ ಮತ್ತು ಅಹಂನಿಂದ ಹೊರಬರುತ್ತದೆ ಮತ್ತು ನಿಜವಾದ ಅಸ್ತಿತ್ವ ಮತ್ತು ನಿಜವಾದ ಗುರುತನ್ನು ಉಳ್ಳ ಸರ್ವವ್ಯಾಪಿ, ಶಾಶ್ವತ, ಆಧ್ಯಾತ್ಮಿಕ ವಾಸ್ತವದ ಜೊತೆಗೆ ವಿಲೀನವಾಗುತ್ತದೆ. ಉಳಿದೆಲ್ಲವೂ ಭ್ರಮೆ.

ನಾನು ಬೆಳೆದು ಬಂದ ದೇವರು ಬಾಹ್ಯ, ಭಾವನಾತ್ಮಕ ಮತ್ತು ತಾತ್ತ್ವಿಕವಾಗಿ ದುರ್ಬಲ ಎನ್ನುವ ಸಾಮಾನ್ಯ ಗ್ರಹಿಕೆಯನ್ನು ಅರಿತುಕೊಳ್ಳುವ ನನ್ನ ಪರಿಸ್ಥಿತಿ ಏನೂ ಅಸಾಮಾನ್ಯವಾಗಿರಲಿಲ್ಲ. ಭಗವಂತನನ್ನು ಕುರಿತ ನನ್ನ ಅರಿವನ್ನು ಹೆಚ್ಚಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ನನಗೆ ನಾನು ಶ್ರದ್ಧೆ ಇಡಬಹುದಾದಂತಹ ಒಂದು ದೇವತಾ ಶಾಸ್ತ್ರ, ಒಂದು ತತ್ತ್ವ ಶಾಸ್ತ್ರ, ಒಂದು ಜೀವನ ಸಿದ್ಧಾಂತ ಬೇಕಾಗಿತ್ತು. ಶೈಕ್ಷಣಿಕ ಪರಿಶೀಲನೆಯ ಅಗ್ನಿ ಪರೀಕ್ಷೆಯಲ್ಲಿ ನಾಶವಾಗುವಂತಹ ಕೇವಲ ಧಾರ್ಮಿಕ ಭಾವನೆ ಬೇಕಾಗಿರಲಿಲ್ಲ.

ಆದುದರಿಂದ ವೈದಿಕ ಸಾಹಿತ್ಯವು ಯಾವುದನ್ನು ಬ್ರಹ್ಮನ್‌ ಎಂದು ಹೇಳುತ್ತದೆಯೋ ಅದನ್ನು ಕುರಿತಂತೆ ನಾನು ನನ್ನದೇ ಅನೌಪಚಾರಿಕ ರೀತಿಯಲ್ಲಿ ಜನಸಾಮಾನ್ಯನ ರೂಪಾಂತರಕ್ಕೆ ಬಂದೆ. ಇದು ಭಗವತ್‌ ಸಾಕ್ಷಾತ್ಕಾರವನ್ನು ಕುರಿತಂತೆ ಸಾಂಪ್ರದಾಯಿಕವಾಗಿ ಚರ್ಚಿಸಿದ ಮೂರು ಮಟ್ಟಗಳಲ್ಲಿ ಮೊದಲನೆಯದು. ಒಂದಕ್ಕಿಂತ ಮತ್ತೊಂದು ಮಟ್ಟವು ಹೆಚ್ಚು ಸ್ಪಷ್ಟ ಮತ್ತು ಕರಾರುವಾಕ್ಕಾಗಿದೆ. ಬಹುಶಃ ಇದನ್ನು ನಾನು ಒಂದು ದೃಷ್ಟಾಂತದೊಂದಿಗೆ ವಿವರಿಸುವುದು ಉತ್ತಮ.

ನಾನು ಲಾಸ್‌ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದೆ. ನಿರ್ಮಲವಾದ, ಸಾಮಾನ್ಯವಾಗಿ ಭಾರಿ ಮಳೆಯ ಅನಂತರ ನನಗೆ ದೂರದಲ್ಲಿ, ನಗರದ ಆಚೆಗೆ ಸ್ಯಾನ್‌ ಗೆಬ್ರಿಯಲ್‌ ಪರ್ವತ ಶ್ರೇಣಿಯು ಕಾಣುತ್ತಿತ್ತು. ಆದರೆ ಅವು ಸಾಮಾನ್ಯವಾಗಿ ವಾಯುಮಂಡಲದಲ್ಲಿ ಹೆಚ್ಚಾಗಿ ಮೋಡಗಳಂತೆ ಅಥವಾ ಪಥ ಭ್ರಂಶವಾಗಿ ತೋರುತ್ತ ಮಬ್ಬು ಕವಿದಂತೆ ಮತ್ತು ವಿಶಿಷ್ಟ ಲಕ್ಷಣಗಳಿಲ್ಲದಂತೆ ಕಾಣುತ್ತಿದ್ದವು. ಒಂದು ಭಾನುವಾರ ನಾನು ನನ್ನ ಪತ್ನಿ ಮತ್ತು ಮೂರು ವರ್ಷದ ಮಗನನ್ನು ಕರೆದುಕೊಂಡು ಮೌಂಟ್‌ ವಿಲ್ಸನ್‌ಗೆ ವಿಹಾರಕ್ಕೆಂದು ಹೊರಟೆ. ಕಾರಿನಲ್ಲಿ ಸಾಗುತ್ತಿದ್ದಂತೆಯೇ ನಮಗೆ ಪರ್ವತವು ಸ್ಪಷ್ಟವಾಗಿ ಕಾಣುತ್ತಿತ್ತು. ಮುಂದಿನ 15 ನಿಮಿಷಗಳಲ್ಲಿ ನಾವು ವಾಸ್ತವವಾಗಿ ಏಂಜಲೀಸ್‌ ಕ್ರೆಸ್ಟ್‌ ಹೆದ್ದಾರಿಯಲ್ಲಿ ಸಾಗುತ್ತಿದ್ದೆವು. ಅಲ್ಲಿ ಮನೆಗಳು, ಜಾನುವಾರು ಕೇಂದ್ರ ಮತ್ತು ಸಣ್ಣ ಅಡ್ಡ ರಸ್ತೆಯ ಗ್ರಾಮಗಳು ಕಂಡವು. ಈಗ ನಮಗೆ ಸ್ಯಾನ್‌ ಗೆಬ್ರಿಯಲ್‌ ಪರ್ವತ ಶ್ರೇಣಿಯು ದಿಗಂತದಲ್ಲಿ ದೂರದ, ವಿಶಿಷ್ಟ ಲಕ್ಷಣಗಳಿಲ್ಲದ ಉಪಸ್ಥಿತಿಯಂತೆ ಕಾಣುತ್ತಿರಲಿಲ್ಲ. ಅದು ಜೀವನೋತ್ಸಾಹ ಮತ್ತು ಚಟುವಟಿಕೆಯಿಂದ ಕೂಡಿದ ಕಲ್ಪನೆಯಲ್ಲದ, ಸ್ಪಷ್ಟ ವಾಸ್ತವದಂತೆ ಕಾಣುತ್ತಿತ್ತು. ಅಲ್ಲಿ ಜನರು ವಾಸಿಸುತ್ತಿದ್ದರು ಮತ್ತು ಕೆಲಸ ಮಾಡುತ್ತಿದ್ದರು. ನಾವು ಕಾಲು ದಾರಿಯಲ್ಲಿ ನಡೆದೆವು, ಬಂಡೆಗಳನ್ನು ಏರಿದೆವು, ಹಿಮ ರಾಶಿಯನ್ನು ಕಂಡೆವು ಮತ್ತು ಅಸಾಧಾರಣ ಸಸ್ಯವರ್ಗವನ್ನು ಅನುಭವಿಸುತ್ತಿದ್ದೆವು. ನಾವು ಮೌಂಟ್‌ ವಿಲ್ಸನ್‌ ವೀಕ್ಷಣಾಲಯಕ್ಕೂ ಭೇಟಿ ನೀಡಿದೆವು. ಈ ಮೊದಲು ನಾವು ಊಹಿಸುತ್ತಿದ್ದುದನ್ನು ಈಗ ವಾಸ್ತವವಾಗಿ ನೋಡುವುದು ಸಾಧ್ಯವಾಗಿತ್ತು.

ಆದುದರಿಂದ, ಈ ದೃಷ್ಟಾಂತದಲ್ಲಿ ನಾನು ಭಗವಂತನನ್ನು ಸರ್ವ ವ್ಯಾಪಿ, ಶಾಶ್ವತ ಆಧ್ಯಾತ್ಮಿಕ ಅಸ್ತಿತ್ವದವನೆಂದು ಪ್ರೌಢಶಾಲೆ ವಿದ್ಯಾರ್ಥಿಗೆ ತಕ್ಕುನಾದ ರೀತಿಯಲ್ಲಿ ರೂಪಾಂತರಿಸಿರುವುದು, 20 ಮೈಲಿ ಹೊಗೆ ತುಂಬಿದ ಮಂಜಿನ ಮೂಲಕ ಸ್ಯಾನ್‌ ಗೆಬ್ರಿಯಲ್‌ ಪರ್ವತಗಳನ್ನು ನನ್ನ ಮಬ್ಬು ಕವಿದ ದೃಷ್ಟಿಯಿಂದ ನೋಡಿದಂತೆ ಆಗಿದೆ. ಪರ್ವತಗಳು ಕ್ಷಿತಿಜದಲ್ಲಿ ವಿಶಿಷ್ಟಗುಣಗಳಿಲ್ಲದಂತೆ ಕಂಡಿತು. ಭಗವತ್‌ ಸಾಕ್ಷಾತ್ಕಾರದ ಎರಡನೆಯ ಮಟ್ಟವು (ತಾಂತ್ರಿಕವಾಗಿ ಪರಮಾತ್ಮ ಸಾಕ್ಷಾತ್ಕಾರ ಎಂದು ಪ್ರಸಿದ್ಧಿ) ಪರ್ವತದತ್ತ ಹತ್ತಿರದ, ಸ್ಪಷ್ಟ ನೋಟ ಹರಿಸುವುದಾಗಿದೆ. ಆದರೆ ಅಂತಿಮ ಮಟ್ಟವು (ಭಗವಾನ್‌ ಸಾಕ್ಷಾತ್ಕಾರ) ಒಂದು ವಿಹಾರದಂತೆ, ಒಂದು ಏರುವ ಪ್ರಯಾಣದಂತೆ, ಒಂದು ಮೌಂಟ್‌ ವಿಲ್ಸನ್‌ ವೀಕ್ಷಣಾಲಯಕ್ಕೆ ಪ್ರವಾಸ ಮಾಡಿದಂತೆ ಮತ್ತು ಎಲ್ಲವೂ ಒಂದರಲ್ಲಿ ಮಾಡಿದಂತೆ. ನಾನು ಈಗಾಗಲೇ ಮೊದಲ ಮಟ್ಟವನ್ನು ಚರ್ಚಿಸಿದ್ದೇನೆ. ಈಗ ಎರಡನೆಯ ಮಟ್ಟವನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ದೃಶ್ಯವನ್ನು ಪರಿಗಣಿಸಿ, ಕಲ್ಪಿಸಿಕೊಳ್ಳಿ…

ಯೋಗಿಯ ದೃಷ್ಟಾಂತ

ಹಿಮಾಲಯದಲ್ಲಿ ಯೋಗಿಯೊಬ್ಬ ಧ್ಯಾನ ನಿರತನಾಗಿದ್ದಾನೆ. ಅವನು ತುಂಬ ಕೃಶನಾಗಿದ್ದಾನೆ, ಸೊರಗಿದ್ದಾನೆ, ಅವನ ವಯಸ್ಸು ಅಗ್ರಾಹ್ಯವಾಗಿದೆ, ಕಾಲು ಮಡಚಿಕೊಂಡು, ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡು ಧ್ಯಾನಾಸಕ್ತನಾಗಿದ್ದಾನೆ. ಅವನ ಆಹಾರ ತುಂಬ ಸರಳ, ಲಘು ಮತ್ತು ಕ್ರಮಬದ್ಧ. ಅವನು ಬಹಳ ಹಿಂದೆಯೇ ನಾಗರಿಕತೆಯೊಂದಿಗೆ ಎಲ್ಲ ಸಂಪರ್ಕವನ್ನು ಕಳಚಿಕೊಂಡಿದ್ದಾನೆ. ಅವನ ಮನಸ್ಸು ನೆಮ್ಮದಿಯಿಂದ ಕೂಡಿದೆ. ನಗರ ಸೌಲಭ್ಯಗಳಿಗೆ ಹಿಂದಿರುಗುವ ಹಾತೊರೆಯುವಿಕೆ ಇಲ್ಲ ಮತ್ತು ಇಂದ್ರಿಯ ಆಸಕ್ತಿಗಳು ಅವನಿಗೆ ಏನೂ ಅಡ್ಡಿ ಉಂಟುಮಾಡುವುದಿಲ್ಲ. ಲೈಂಗಿಕ ಆಸಕ್ತಿಗಳಿಂದ ಅವನು ಪೂರ್ಣ ಮುಕ್ತ. ಏಕಾಗ್ರತೆ ಭಂಗ ಪಡಿಸುವಂತಹ ಕೌಟುಂಬಿಕ ವಾತ್ಸಲ್ಯಗಳಿಲ್ಲ, ಆರ್ಥಿಕ ಒತ್ತಡ ಅಥವಾ ಜವಾಬ್ದಾರಿಗಳಿಲ್ಲ. ಅವನಿಗೆ ತನ್ನ ಜನ್ಮ ದೇಶದ ಬಗೆಗೆ ಪ್ರೀತಿ ವಾತ್ಸಲ್ಯಗಳಿಲ್ಲ, ಆದುದರಿಂದ ಅವನು ದೇಶಪ್ರೇಮದ ಭಾವನೆಗಳು ಮತ್ತು ಹೊಣೆ ಇಲ್ಲದವನು. ಅವನಿಗೆ ಲೌಕಿಕ ಮಹತ್ತ್ವಾಕಾಂಕ್ಷೆಗಳಿಲ್ಲ ಮತ್ತು ಅನೇಕ ವರ್ಷಗಳಿಂದ ಅಭ್ಯಸಿಸುತ್ತಿರುವ ತನ್ನ ಯೋಗ ಪ್ರಭುತ್ವದ ಬಗೆಗೆ ಇತರರಿಗೆ ತಿಳಿಸುವ ಲಕ್ಷ್ಯವೂ ಇಲ್ಲ. ನಿಜ, ಅವನು ನಾಗರಿಕತೆಗೆ ಹಿಂದಿರುಗಿ ತನ್ನ ಪರಿಣತಿಯನ್ನು ಪ್ರದರ್ಶಿಸಬಹುದು. ಅವನು ಪ್ರಸಿದ್ಧ ಗುರುವಾಗಬಹುದು, ತನ್ನ ಯೋಗಶಕ್ತಿಯನ್ನು ತೋರಬಹುದು, ಅನೇಕ ಅನುಯಾಯಿಗಳನ್ನು ಆಕರ್ಷಿಸಬಹುದು ಮತ್ತು ಬಹುಶಃ ತಾನು ಭಗವಂತನ ಅವತಾರ ಎಂದು ಜಾಹೀರುಮಾಡಿಕೊಳ್ಳಬಹುದು. ಆದರೆ ಅಂತಹ ಲೌಕಿಕ ಅಪೇಕ್ಷೆಗಳು ಯೋಗದ ಗಂಭೀರ ವಿದ್ಯಾರ್ಥಿಯ ಪತನವೆಂದು ಅವರಿಗೆ ಗೊತ್ತು.

ಅವರೇನು ಮಾಡುತ್ತಿದ್ದಾರೆ? ಅವರು ಪರಮ ಸತ್ಯನನ್ನು ಕುರಿತ ಮಸುಕಾದ, ದೂರದ, ನಿರಾಕಾರ ಬ್ರಹ್ಮನ್‌ ಕಲ್ಪನೆಯ ಸೀಮಿತಗಳ ಆಚೆಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅಂತರಂಗದಲ್ಲಿ ಧ್ಯಾನಿಸಲು ಅವರಿಗೆ ತರಬೇತಿ ನೀಡಲಾಗಿದೆ. ಈ ವಿಧಾನವು ತುಂಬ ಕಷ್ಟಕರ. ಅವಿಚಲಿತ ಸ್ಥಿರಸಂಕಲ್ಪ, ಉತ್ತಮ ಆರೋಗ್ಯ, ತಾಳ್ಮೆ, ಅತ್ಯುತ್ತಮ ಮಾನಸಿಕ ಶಕ್ತಿ, ಸ್ಪಷ್ಟತೆ ಮತ್ತು ದೀರ್ಘ ಜೀವನದ ಅಗತ್ಯ ಅದಕ್ಕಿದೆ. ಈಗ ಅವರು ಸುದೀರ್ಘ ಕಾಲದಿಂದ ಎಲ್ಲ ರೀತಿಯ ಲೌಕಿಕ ನಿರ್ಬಂಧಗಳು ಮತ್ತು ಅರಿವುಗಳಿಂದ ಬಿಡುಗಡೆ ಹೊಂದಿದ್ದಾರೆ. ಆಧ್ಯಾತ್ಮಿಕ ಆನಂದದಲ್ಲಿ ಶಾಶ್ವತ, ಜ್ಞಾನ ಮತ್ತು ಪರಮಾನಂದದ ಚತುರ್ಭುಜ ವಿಷ್ಣು ಮೂರ್ತಿಯನ್ನು, ಪರಮಾತ್ಮನನ್ನು ತಮ್ಮ ಹೃದಯದೊಳಗೆ ಇಟ್ಟುಕೊಂಡಿದ್ದಾರೆ.

ಪರಮಸತ್ಯನ ಈ ರೂಪವನ್ನು ಧ್ಯಾನಿಸುವುದರಲ್ಲಿ ತಲ್ಲೀನರಾಗಿರುವ ನಮ್ಮ ಪರಿಪೂರ್ಣ ಯೋಗಿಯು ತನ್ನ ಅರ್ಥಗ್ರಹಿಕೆಯಲ್ಲಿ ಬ್ರಹ್ಮನ್‌ ಸಾಕ್ಷಾತ್ಕಾರದಲ್ಲಿ ಮಾತ್ರ ನೆಲೆಸಿರುವ ಅಲೌಕಿಕವಾದಿಗಿಂತ ಹೆಚ್ಚು ಪ್ರಗತಿ ಹೊಂದಿದ್ದಾರೆ. ಸರ್ವವ್ಯಾಪಿ ಬ್ರಹ್ಮನ್‌ ದೇವೋತ್ತಮ ಪರಮ ಪುರುಷನ ದೈಹಿಕ ಪ್ರಭೆಯಾಗಿದ್ದರೆ, ಪರಮಾತ್ಮನು ಅವನ ವೈಯಕ್ತಿಕ ವಿಸ್ತರಣೆ. ಪರಮ ಪುರುಷನು ಅಚಿಂತ್ಯ ಶಕ್ತಿಶಾಲಿ ಮತ್ತು ಅವನು ಅಸಂಖ್ಯ ರೂಪಗಳಲ್ಲಿ ವಿಸ್ತರಣೆಗೊಂಡಿದ್ದಾನೆ, ಪ್ರತಿಯೊಂದೂ ಕೂಡ ಪರಿಪೂರ್ಣ ಮತ್ತು ಸಂಪೂರ್ಣ. ಇದು ಪರಮಾತ್ಮ, ಪ್ರತಿಯೊಂದು ಜೀವಿಯ ಹೃದಯದಲ್ಲಿರುವ ಸಾಕ್ಷಿ, ನಿಯಂತ್ರಕ ಮತ್ತು ಮಿತ್ರ. ನಮ್ಮ ಸ್ಯಾನ್‌ ಗೆಬ್ರಿಯಲ್‌ ಪರ್ವತ ದೃಷ್ಟಾಂತದಲ್ಲಿ, ನಮ್ಮ ಪರಮಾತ್ಮ ಸಾಕ್ಷಾತ್ಕಾರ ಯೋಗಿಯು ವಿವರವಾಗಿ ಅಲ್ಲದಿದ್ದರೂ ಪರ್ವತವನ್ನು ಸ್ಪಷ್ಟವಾಗಿ ನೋಡುವಷ್ಟು ಹತ್ತಿರದಲ್ಲಿ ಇರುವವರು. ಪರಮಸತ್ಯನ ಸಾಕ್ಷಾತ್ಕಾರ ಅವರಿಗಿದೆ, ಆದರೆ ಪೂರ್ಣವಾಗಿ ಅಲ್ಲ. ಅವರು ದೇವೋತ್ತಮ ಪರಮ ಪುರುಷನನ್ನು ಇನ್ನೂ ಸಾಕ್ಷಾತ್ಕರಿಕೊಳ್ಳಬೇಕಾಗಿದೆ. ಈ ಅಂತಿಮ ಸಾಕ್ಷಾತ್ಕಾರವನ್ನು ವೈದಿಕ ಸಾಹಿತ್ಯದಲ್ಲಿ ಭಗವಾನ್‌ ಸಾಕ್ಷಾತ್ಕಾರ ಎನ್ನುತ್ತಾರೆ.

ದೇವ ಸಾಕ್ಷಾತ್ಕಾರ

ದೇವೋತ್ತಮ ಪರಮ ಪುರುಷ (ಭಗವಾನ್‌) ಎಂದರೆ ಕೃಷ್ಣ. ಇದನ್ನು ಅರ್ಥಮಾಡಿಕೊಂಡವರು ದೇವ ಸಾಕ್ಷಾತ್ಕಾರದ ಇತರ, ಅಪೂರ್ಣ ಹಂತಗಳನ್ನು ದಾಟಿರುತ್ತಾರೆ. ಆದರೆ ಭಗವಾನ್‌ ಸಾಕ್ಷಾತ್ಕಾರವು ತಾತ್ತ್ವಿಕ ಊಹಪೋಹ ಅಥವಾ ಯೋಗದ ಧ್ಯಾನಗಳಿಂದ ಸಾಧ್ಯವಿಲ್ಲ. ಬದಲಿಗೆ, ದೇವೋತ್ತಮ ಪರಮ ಪುರುಷನ ಕೃಪೆಯನ್ನು ಅವನ ಪ್ರತಿನಿಧಿ, ಶುದ್ಧ ಭಕ್ತನ ಮೂಲಕ ಪಡೆದಾಗ ಮಾತ್ರ ಅದು ಸಾಧ್ಯ.

ಭಗವಂತನ ಶುದ್ಧ ಭಕ್ತನು ಈಗಾಗಲೇ ಭಗವಾನ್‌ ಸಾಕ್ಷಾತ್ಕಾರ ಹಂತವನ್ನು ಪಡೆದಿದ್ದಾನೆ ಮತ್ತು ಭಗವಂತನ ವಿಶೇಷ ಕೃಪೆಯನ್ನು ಇತರರಿಗೆ ಹರಡುವುದನ್ನು ಬಿಟ್ಟರೆ ಅವರಿಗೆ ಈ ಭೌತಿಕ ಲೋಕದಲ್ಲಿ ಬೇರೆ ಏನೂ ವ್ಯವಹಾರವಿಲ್ಲ. ಭಗವಾನ್‌ ಸಾಕ್ಷಾತ್ಕಾರಗೊಂಡ ವ್ಯಕ್ತಿಯು ಪರಮ, ಆಧ್ಯಾತ್ಮಿಕ ಲೋಕವನ್ನು ಪ್ರವೇಶಿಸಿದ್ದಾನೆ ಮತ್ತು ಅಲ್ಲಿ ಅವನು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅಲೌಕಿಕ ಸೇವೆಯಲ್ಲಿ ಶಾಶ್ವತವಾಗಿ ನಿರತನಾಗುತ್ತಾನೆ. ಆದರೆ ಇತರರಿಗೂ ದೈವ ಸಾಕ್ಷಾತ್ಕಾರದ ಅತ್ಯುನ್ನತ ಮಟ್ಟವನ್ನು ತಲಪಿ ತಮ್ಮ ಜೀವನವನ್ನು ಪರಿಪೂರ್ಣಗೊಳಿಸುವಂತೆ ಮಾಡಲು ಅವನು ಈ ಭೌತಿಕ ಲೋಕಕ್ಕೆ ಬರುತ್ತಾನೆ.

ಭಗವಾನ್‌ ಸಾಕ್ಷಾತ್ಕಾರ

ಒಮ್ಮೆಲೆ ದಾರ್ಶನಿಕನು (ಅಲೌಕಿಕವಾದಿಯು) ಪರಮಸತ್ಯನನ್ನು ನಿರಾಕಾರ, ಸರ್ವವ್ಯಾಪಿ ಬ್ರಹ್ಮನ್‌ (ಮೊದಲ ಹೆಜ್ಜೆ) ಮತ್ತು ಹೃದಯದಲ್ಲಿನ ಪರಮಾತ್ಮ (ಎರಡನೆಯ ಹೆಜ್ಜೆ) ಎಂದು ಅರ್ಥಮಾಡಿಕೊಳ್ಳುವ ಶ್ರಮದಾಯಕ ಪಥವನ್ನು ಪೂರ್ಣಗೊಳಿಸಿದಾಗ, ಅವನು ಅದಾಗಲೇ ಸಂಪೂರ್ಣವಾಗಿ ಭಗವಾನ್‌ ಸಾಕ್ಷಾತ್ಕಾರ ಹೊಂದಿದ ಮತ್ತು ಪರಮಸತ್ಯನೊಂದಿಗೆ ಒಂದಾಗಿ ಅವನ ಭಕ್ತಿಸೇವೆಯಲ್ಲಿ ತೊಡಗಿರುವ ಶುದ್ಧ ಭಕ್ತನಿಗೆ ಶರಣಾಗಬೇಕು. ಈ ರೀತಿ, ಅಂತಹ ಭಗವಾನ್‌ ಸಾಕ್ಷಾತ್ಕಾರಗೊಂಡ ವ್ಯಕ್ತಿಯಿಂದ ಮಾರ್ಗದರ್ಶನವನ್ನು ಪಡೆಯುತ್ತ ದಾರ್ಶನಿಕನು (ಅಲೌಕಿಕವಾದಿಯು) ತನ್ನ ತರಬೇತಿಯನ್ನು ಪೂರ್ಣಗೊಳಿಸಿ ದೈವ ಸಾಕ್ಷಾತ್ಕಾರದ ಮೂರನೆಯ ಮತ್ತು ಕೊನೆಯ ಹಂತಕ್ಕೆ ಬರಬಹುದು.

ಆದರೆ ತಾತ್ತ್ವಿಕ ಊಹೆ ಮತ್ತು ಯೋಗ ಧ್ಯಾನದಲ್ಲಿ ವ್ಯಕ್ತಿಯು ಅದಾಗಲೇ ಪ್ರಗತಿ ಹೊಂದಿಲ್ಲದಿದ್ದರೆ? ಅತ್ಯುನ್ನತ ಸತ್ಯವನ್ನು ಅರಿಯುವಲ್ಲಿ ಅವನು ಅನನುಕೂಲ ಪರಿಸ್ಥಿತಿಯಲ್ಲಿರುವನೇ?

ಇಲ್ಲ. ಪರಿಶುದ್ಧ ಭಕ್ತನ ಕೃಪೆ ಎಷ್ಟು ಶಕ್ತಿಯುತವೆಂದರೆ ಅದನ್ನು ಪಡೆದವರು ದೇವೋತ್ತಮ ಪರಮ ಪುರುಷನಿಗೆ ಸೇವೆಗೈಯುವ ಆಧ್ಯಾತ್ಮಿಕ ಸತ್ಯವನ್ನು ಪ್ರವೇಶಿಸಬಹುದು. ಭಗವಾನ್‌ ಸಾಕ್ಷಾತ್ಕಾರಗೊಂಡ ಪರಿಶುದ್ಧ ಭಕ್ತನು ಆಕಾಂಕ್ಷಿ ದಾರ್ಶನಿಕನಿಗೆ ಪರಿಪೂರ್ಣತೆಯನ್ನು ಸಾಧಿಸಲು ಮಾರ್ಗದರ್ಶನ ನೀಡುತ್ತ ಆಧ್ಯಾತ್ಮಿಕ ಗುರುವಾಗಿ ಸೇವೆ ಸಲ್ಲಿಸುತ್ತಾನೆ. ಅವನಿಗೆ ಪರಮಸತ್ಯ ವಿಜ್ಞಾನವನ್ನು ಬೋಧಿಸುತ್ತಾನೆ ಮತ್ತು ಭೌತಿಕ ಲೋಕ ಹಾಗೂ ಲೌಕಿಕ ಮನಸ್ಸು, ಪ್ರಜ್ಞೆಗೆ ಮೀರಿದುದಾದರೂ ದೇವೋತ್ತಮ ಪರಮ ಪುರುಷನ ಅಲೌಕಿಕ ರೂಪ, ಗುಣ, ಲೀಲೆ ಮತ್ತು ನಾಮಗಳ ಬಗೆಗೆ ಪೂರ್ಣವಾಗಿ ಪರಿಚಯಿಸುತ್ತಾನೆ. ಇದು ಪರಮ ಪುರುಷನ ಪರಿಶುದ್ಧ ಭಕ್ತನಿಗೆ ಇರುವ ವಿಶೇಷ ಶಕ್ತಿ ಮತ್ತು ಪ್ರಾಮಾಣ್ಯ: ಅಲೌಕಿಕ ಲೋಕದವನಾಗಿರುವುದರಿಂದ ಅವನು ಆ ಶಾಶ್ವತ ಸತ್ಯವನ್ನು ಯಾವುದೇ ಪ್ರಾಮಾಣಿಕ, ವಿಧೇಯ ಸೇವಕನಿಗೆ ತಿಳಿಸಿಕೊಡಬಹುದು. ಮುಖ್ಯವಾಗಿ ಪರಮ ಪ್ರಭುವಿನ ಅಲೌಕಿಕ ನಾಮಗಳನ್ನು ಜಪಿಸುವ ಮೂಲಕ ಅವನಿಗೆ ತರಬೇತಿ ನೀಡುತ್ತಾನೆ: ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ.

ಭಗವಾನ್‌ ಸಾಕ್ಷಾತ್ಕಾರಗೊಂಡ ಆಧ್ಯಾತ್ಮಿಕ ಗುರುವು ಭಗವಂತನ ಸೇವಕನಾಗಿ ತನ್ನ ಶಾಶ್ವತ ಸ್ಥಾನವನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವುದರಿಂದ ಅವನು ಈ ಗ್ರಹಿಕೆಯನ್ನು ತನ್ನ ಶಿಷ್ಯನಿಗೆ ಪರಿಪೂರ್ಣವಾಗಿ ಶ್ರುತಪಡಿಸುತ್ತಾನೆ. ಈ ಮೂಲಕ ಶಿಷ್ಯನನ್ನು ಅಲೌಕಿಕ, ಪ್ರೀತಿಯ ಸೇವೆಯ ಸ್ಥಾನಕ್ಕೆ ಏರಿಸುತ್ತಾನೆ. ಹೀಗೆ, ತಾನು ಭಗವಂತನಲ್ಲಿ ಒಂದಾದರೂ ಅದು ಪ್ರಮಾಣದಲ್ಲಿ ಅಲ್ಲ, ಗುಣದಲ್ಲಿ ಎಂದು ಶಿಷ್ಯನು ಅರಿಯುತ್ತಾನೆ. ಭಗವಂತನು ದೊಡ್ಡವನು, ಆದರೆ ಅವನು ಕಿರಿಯನು. ದೇವರು ಮಾಲೀಕ, ಆದರೆ ಅವನು ಸೇವಕ.

ಪರಮ ಸತ್ಯನ ಇಡೀ ಚಿತ್ರವು ಈಗ ಕೇಂದ್ರ ಬಿಂದುವಾಗುತ್ತದೆ. ದೇವೋತ್ತಮ ಪರಮ ಪುರುಷನಿಗೆ ಸಂಬಂಧಿಸಿದಂತೆ ಭಗವಾನ್‌ ಸಾಕ್ಷಾತ್ಕಾರದ ಕೆಳ ಹಂತಗಳನ್ನು ಅವುಗಳ ಯಥಾ ದೃಷ್ಟಿಯಲ್ಲಿ ನೋಡಬಹುದು. ಉದಾಹರಣೆಗೆ, ನಾನು ಕಾಲೇಜಿನಲ್ಲಿ ರೂಪಿಸಿಕೊಂಡ ಆ ನಿರಾಕಾರ ಅಭಿಪ್ರಾಯಗಳನ್ನೇ ಗಮನಿಸಿ. ಭಗವಂತನು ಸರ್ವವ್ಯಾಪಿ ಆಧ್ಯಾತ್ಮಿಕ ಸತ್ಯ ಎನ್ನುವ ಕಲ್ಪನೆ ನನಗಿತ್ತು ಮತ್ತು ಈ ಭೌತಿಕ ಲೋಕದ ಎಲ್ಲ ಬದಲಾವಣೆಗಳ ಮೂಲಕ ಮುಂದುವರಿಯುತ್ತ ನಾನು ಆಧ್ಯಾತ್ಮಿಕ ಮತ್ತು ಶಾಶ್ವತ ಎಂದು ಪ್ರತಿಪಾದಿಸಿದೆ. ಅಷ್ಟರಮಟ್ಟಿಗೆ ಸರಿಯಾಗಿತ್ತು. ಆದರೆ ಕೆಲವು ಮುಖ್ಯ ಅಂಶಗಳ ವಿಷಯದಲ್ಲಿ ನನ್ನದು ತಪ್ಪಾಗಿತ್ತು.

ತಪ್ಪು ಎಲ್ಲಿ?

ನಾನು ಎಲ್ಲಿ ತಪ್ಪಾಗಿದ್ದೆ? ನಶ್ವರ ಅಥವಾ ಅಲ್ಪಕಾಲಿಕದ ಆಚೆಗೆ ಹೋಗುವ ನನ್ನ ಕಾತರದಲ್ಲಿ ನಾನು ಈ ಲೌಕಿಕ ದೇಹ ಎನ್ನುವ ಹುಸಿ ಅಹಂ ಅನ್ನು ತಿರಸ್ಕರಿಸಿದ್ದು ಮಾತ್ರವಲ್ಲ, ನಾನು ನಿಜವಾದ ಅಹಂನ ವಿಶಾಲ ನೋಟವನ್ನೂ ತಿರಸ್ಕರಿಸಿದ್ದೆ. ನನ್ನ ಆಗಿನ ಅಲ್ಪ ಆಧ್ಯಾತ್ಮಿಕ ಕಲಿಕೆಯು ಅಪಾಯಕಾರಿ ಎನ್ನುವುದು ಈಗ ತಿಳಿಯುತ್ತದೆ. ನನ್ನ ಲೌಕಿಕ ಗುರುತನ್ನು ನಿರಾಕರಿಸುವುದು ಒಳ್ಳೆಯದಾದರೂ ಆಧ್ಯಾತ್ಮಿಕ ಗುರುತಿನ ಸಾಧ್ಯತೆಯನ್ನು ತಿರಸ್ಕರಿಸುವುದು ಸ್ನಾನದ ನೀರಿನೊಂದಿಗೆ ಮಗುವನ್ನೂ ಹೊರಗೆ ಚೆಲ್ಲಿದಂತೆ. ಅಹಂರಹಿತ ಸ್ಥಿತಿಯನ್ನು ಹುಡುಕುತ್ತ ನಾನು ಆಧ್ಯಾತ್ಮಿಕ ಆತ್ಮಹತ್ಯೆಗೆ ಆಹ್ವಾನ ನೀಡುತ್ತಿದ್ದೆ. ನನಗೆ ಯಾವುದಾದರೂ ವೈಯಕ್ತಿಕ ಆಧ್ಯಾತ್ಮಿಕ ಗುರುತು ಇದೆ ಎನ್ನುವುದನ್ನು ನಾನು ನಿರಾಕರಿಸುತ್ತಿದ್ದೆ ಮತ್ತು ದೇವರು ಒಬ್ಬ ವ್ಯಕ್ತಿಯಾಗಿರಬಹುದು ಎನ್ನುವುದನ್ನು ನಿರಾಕರಿಸುತ್ತಿದ್ದೆ. ಹೀಗೆ, ದೇವರನ್ನು ಅಸೀಮಿತ ಎಂದು ಮಾಡುವ ಪ್ರಯತ್ನದಲ್ಲಿ ನಾನು ಅವನನ್ನು ನಿರ್ಬಂಧಿಸಿದ್ದೆ: “ದೇವರಿಗೆ ವ್ಯಕ್ತಿತ್ವ, ಆಕಾರ, ಅಪೇಕ್ಷೆಗಳಿರುವುದು ಸಾಧ್ಯವಿಲ್ಲ.” ನಾನು ದೇವರನ್ನು ನಿರ್ಬಂಧಿಸುತ್ತಿದ್ದುದಲ್ಲದೆ ನಾನು ಅವನ ಸ್ಥಾನವನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದೆ.

ಅದು ಸರಿ. ಆಧ್ಯಾತ್ಮಿಕ ಆತ್ಮವಾಗಿ ನಾನು ಮತ್ತು ವೈಯಕ್ತಿಕ ಆಧ್ಯಾತ್ಮಿಕ ವ್ಯಕ್ತಿಯಾಗಿ (ಪುರುಷನಾಗಿ) ದೇವರ ನಡುವೆ ವ್ಯತ್ಯಾಸ ಇಲ್ಲದಿರುವುದರಿಂದ, ಎಲ್ಲವೂ ಒಂದೇ ಮತ್ತು ಒಂದೇ ಎಲ್ಲವೂ. ಬೇರೆ ಮಾತಿನಲ್ಲಿ ಹೇಳುವುದಾದರೆ, ನಾನೇ ದೇವರೆಂದು ನಾನು ಯೋಚಿಸಿದೆ! ನನ್ನನ್ನು ನಂಬಿ, ನಾನು ಓದುತ್ತಿದ್ದ ಪುಸ್ತಕಗಳೂ ಕೂಡ ಅದೇ ಮಾರ್ಗವನ್ನು ಪೋಷಿಸುತ್ತಿದ್ದವು. ನಮ್ರತೆ ಮತ್ತು ಸೇವೆಯನ್ನು ಎತ್ತಿಹಿಡಿಯುತ್ತ ಈ ಗುರುಗಳೆನ್ನಿಸಿಕೊಳ್ಳುವವರು ನಾನು ದೇವರು ಎಂದು ಯೋಚಿಸುವಂತೆ ಮುಖಸ್ತುತಿ ಮಾಡುತ್ತಿದ್ದರು. (ಆದರೆ ನೀವೇ ಪರಮ ಎಂದು ನೀವು ಯೋಚಿಸಿದರೆ ನಮ್ರತೆಯ ಸಾಧ್ಯತೆಯಾದರೂ ಎಲ್ಲಿದೆ?)

ಆರಾಧನೆಯ ವಿಷಯದಲ್ಲಿ ಅದೆಲ್ಲ ಸರಿ. ಆದರೆ ಉನ್ನತ ಮಟ್ಟದಲ್ಲಿ ಅದಕ್ಕೆ ಏನೂ ಅರ್ಥವಿಲ್ಲ ಎನ್ನಿಸಿತು. ಆದರೂ, ನಾನು ಭಗವಂತನಿಂದ ಪ್ರತ್ಯೇಕ ವ್ಯಕ್ತಿ ಅಥವಾ ಗುರುತು ಎನ್ನುವ ಅಭಿಪ್ರಾಯವು ಭ್ರಮೆ ಎಂದು ಇಟ್ಟುಕೊಂಡರೆ, ಆರಾಧನೆಯನ್ನು ಕುರಿತಂತೆ ಈ ಬೊಬ್ಬೆ, ಅಬ್ಬರವೇಕೆ? ಪೂಜೆಯು ಕಡಮೆ ಬುದ್ಧಿವಂತರಿಗೆ, ಮಾನವೀಕರಣದಲ್ಲಿ ನಂಬಿಕೆ ಉಳ್ಳವರಿಗೆ ಮತ್ತು ಮೂಲವಾಸಿಗಳಿಗಾಗಿ. ನಿಜ, ನೀವು ನಿಮ್ಮ ಬಗೆಗೆ ಎಚ್ಚರದಿಂದ ಇದ್ದರೆ ಮತ್ತು ನೀವು ವಿಷಯ-ವಿಷಯಿ ಭಾಗಕ್ಕೆ ಪತನಹೊಂದದಿದ್ದರೆ ಆಗ ಆರಾಧನೆಯು ಸಹಾಯಕ. ಹೀಗೆ ನನ್ನ ಹೊಸದಾಗಿ ಕಂಡುಕೊಂಡ ಕುತರ್ಕವು ಕ್ರಮೇಣ ಭಗವಂತನನ್ನು ಕುರಿತ ನನ್ನ ಎಲ್ಲ ಕೊಂಡಾಟವನ್ನು ಭಕ್ತಿರಹಿತ, ಹೊಗಳುಭಟ್ಟನ ಅಗೌರವಯುತ ಉದ್ಗಾರಗಳಾಗಿ ತಿರುಚಿಕೊಂಡಿತು. ತತ್‌ ತ್ವಂ ಅಸಿ : `ನೀನು ಅದು.’ ಹೌದು, ನಾನು ಅದು. ನಿಜವಾಗಿಯೂ ನಾನು ಅದು. ಧರ್ಮಗ್ರಂಥಗಳು ನಿರಾಕಾರ ರೂಪವನ್ನು ಕುರಿತು ವರ್ಣಿಸುವ ತೊಂದರೆಯನ್ನೇಕೆ ತೆಗೆದುಕೊಳ್ಳುತ್ತವೆ ಎಂದು ನಿಮಗೆ ಅಚ್ಚರಿಯಾಗಬಹುದು. ಅತ್ಯುನ್ನತ ಸಾಕ್ಷಾತ್ಕಾರ, ದೇವೋತ್ತಮ ಪರಮ ಪುರುಷನತ್ತ ಏಕೆ ಜಿಗಿಯಬಾರದು? ಅದಕ್ಕೆ ಕಾರಣವಿದೆ. ದೇವರು ಮತ್ತು ಆಧ್ಯಾತ್ಮಿಕ ವಾಸ್ತವಿಕತೆ ಲೌಕಿಕ ವಾಸ್ತವಿಕತೆಗೆ ತದ್ವಿರುದ್ಧವಾದವು ಎನ್ನುವುದನ್ನು ಅರ್ಥಮಾಡಿಕೊಳ್ಳುವುದೇ ಆಧ್ಯಾತ್ಮಿಕ ಜೀವನದ ಮೊದಲ ಪಾಠ. ದೇವರನ್ನು ನಮ್ಮ ತೀರ ಲೌಕಿಕ ಮನಸ್ಸುಗಳಿಗೆ ಒಬ್ಬ ವ್ಯಕ್ತಿ ಎಂದು ಪ್ರಸ್ತುತಪಡಿಸಿದರೆ, ನಾವು ಅವನನ್ನು ಸಾಮಾನ್ಯ ಮನುಷ್ಯನೆಂದು ಭಾವಿಸುತ್ತೇವೆ. ಆದುದರಿಂದ ದೇವರಿಗೆ ಲೌಕಿಕ ಆಕಾರ ಮತ್ತು ಗುಣಗಳಿಲ್ಲದಿರುವುದರಿಂದ ಧರ್ಮಗ್ರಂಥಗಳು ಅವನನ್ನು ಆಕಾರ ಮತ್ತು ಗುಣಗಳಿಲ್ಲದವನೆಂದು ವರ್ಣಿಸುತ್ತವೆ. ಆದರೆ ಹೊಸದಾಗಿ ದೀಕ್ಷೆ ಪಡೆದವರ ಸಾಮಾನ್ಯ ಪ್ರವೃತ್ತಿ ನನ್ನದರಂತೆಯೆ. ಅಂದರೆ ಸ್ನಾನದ ನೀರಿನೊಂದಿಗೆ ಮಗುವನ್ನೂ ಹೊರಗೆಸೆಯುವುದು.

ಪ್ರಭುಪಾದರಿಂದ ಅರಿವು

ಭಗವದ್ಗೀತೆಯಂತಹ ವೈದಿಕ ಸಾಹಿತ್ಯ ಮತ್ತು ನನ್ನ ಆಧ್ಯಾತ್ಮಿಕ ಗುರು ಶ್ರೀಲ ಪ್ರಭುಪಾದರ ಬೋಧನೆಗಳಿಂದ ನಿಜವಾದ ಆಧ್ಯಾತ್ಮಿಕ ಪೂರ್ಣತೆ, ಏಕತ್ವ ಏನು ಎನ್ನುವುದು ನನಗೆ ಈಗ ಅರ್ಥವಾಗುತ್ತದೆ. ದೇವರನ್ನು ಕುರಿತಂತೆ ಸಾಕಾರ ಕಲ್ಪನೆಯನ್ನು ಹೊಂದಲು ನೀವು ಮಾನವೀಕರಣ ತತ್ತ್ವಕ್ಕೆ ಒಪ್ಪಿಗೆ ಸೂಚಿಸಬೇಕಾಗಿಲ್ಲ. ಮಾನವೀಕರಣವು ವೈಯಕ್ತಿಕ ಗುಣ ವಿಶೇಷಗಳು ಪರಮನಿಗೆ ಸೇರಿದ್ದೆಂದು ಮಾನವ ಜೀವಿಯು ತಾತ್ತ್ವಿಕವಾಗಿ ಹೇಳುವುದಕ್ಕೆ ಸಂಬಂಧಿಸಿದೆ. ಆದರೆ ಇದು ಊಹಾತ್ಮಕ ಕಲ್ಪನೆ ಮತ್ತು ದೇವೋತ್ತಮ ಪರಮ ಪುರುಷನ ಸಾಕ್ಷಾತ್ಕಾರಕ್ಕೆ ಏನೂ ಸಹಾಯ ಮಾಡುವುದಿಲ್ಲ. ಭಗವಾನ್‌ ಸಾಕ್ಷಾತ್ಕಾರದಲ್ಲಿ ವ್ಯಕ್ತಿಯು ಅತ್ಯುನ್ನತ ಹಂತವನ್ನು ತಲಪಿದಾಗ, ಶ್ರೀ ಕೃಷ್ಣನೇ ಸ್ವತಃ ಪ್ರಕಟಪಡಿಸಿಕೊಳ್ಳುತ್ತಾನೆ. ಮೈಕೆಲ್‌ ಏಂಜಲೋನ ಕಲಾಕೃತಿಗಳಲ್ಲಿರುವಂತೆ ಭಗವಂತನು ವೈಯಕ್ತಿಕ ಲಕ್ಷಣಗಳನ್ನು ಹೊಂದಿದ್ದಾನೆಂದು ಕಲ್ಪಿಸಿಕೊಳ್ಳುವ ಪ್ರಶ್ನೆ ಇದಲ್ಲ. ದೇವರು ತನ್ನ ಆಕಾರದಲ್ಲಿಯೇ ಮಾನವನನ್ನು ಸೃಷ್ಟಿಸುತ್ತಾನೆ. ಅದು ಪ್ರತಿಯಾಗಿ ಅಲ್ಲ. ಭಗವಂತನ ಆಕಾರವು ಪೂರ್ಣವಾಗಿ ಆಧ್ಯಾತ್ಮಿಕ, ಅಲೌಕಿಕ, ಶಾಶ್ವತ. ಮಾನವನ ಆಕಾರವು ಲೌಕಿಕ ಮತ್ತು ತಾತ್ಕಾಲಿಕ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi