ಸ್ವಾಮಿಯು ಸರ್ವಶಕ್ತ ಸೃಷ್ಟಿಕರ್ತನಷ್ಟೇ ಅಲ್ಲ; ಮುದ ನೀಡುವ ಮುದ್ದು ಮಗುವೂ ಹೌದು.
ತತ್ತ್ವಜ್ಞಾನಿ ಫ್ರೆಡ್ರಿಕ್‌ನ ಕಾಲದ ಜರ್ಮನಿಯಲ್ಲಿ ದೇವರನ್ನು ಬಹಳ ದೂರವಿರುವ, ಭಾವನೆಗಳಿಲ್ಲದ, ಮೂಕ, ಜಡ ವಸ್ತುವಿನಂತೆ ಬಿಂಬಿಸಲಾಗುತ್ತಿತ್ತು. ಇದರಿಂದ ದಿಗ್ಭ್ರಾಂತನಾದ ಅವನು ತಾನು ಹಾಡಿ ಕುಣಿಯುವ ದೇವರನ್ನು ಮಾತ್ರ ನಂಬುವುದಾಗಿ ನುಡಿದಿದ್ದನು.
ಅವನೇನಾದರೂ ಕೃಷ್ಣನ ಕುರಿತು ಕೇಳಿದಿದ್ದರೆ, ಬಹಳ ಆನಂದಪಟ್ಟಿರುತ್ತಿದ್ದನು. ವೃಂದಾವನ – ನಟವರನೆಂದೇ ಪ್ರಖ್ಯಾತನಾದ ಶ್ರೀಕೃಷ್ಣನು ಕಾಳಿಂಗ ಸರ್ಪದ ಹೆಡೆಗಳ ಮೇಲೆ ನರ್ತಿಸುತ್ತಾನಲ್ಲದೆ, ಸ್ವಲ್ಪ ಬೆಣ್ಣೆ ಪಡೆಯಲು ತನ್ನ ತಾಯಿಯ ತಾಳಕ್ಕೆ ಕುಣಿಯುತ್ತಾನೆ. ರಾಸಲೀಲೆಯಲ್ಲಿ ಗೋಪಿಕಾ ಸ್ತ್ರೀಯರೊಡನೆ ನರ್ತಿಸುವ ಕೃಷ್ಣನು ಇಡೀ ವೃಂದಾವನದಲ್ಲಿ ಅತ್ಯುತ್ತಮ ನರ್ತಕನೆಂದು ಪ್ರಖ್ಯಾತನು.
ಕೃಷ್ಣನು ಶ್ರೇಷ್ಠತೆ ಮತ್ತು ಮಾಧುರ್ಯದ ಸಮ್ಮೋಹಕ ಸಮ್ಮಿಶ್ರಣ. ಎಲ್ಲ ದೇವತಾಶಾಸ್ತ್ರದ ಪರಂಪರೆಗಳು ದೇವರು ದೊಡ್ಡವನೆಂದು ಪ್ರತಿಪಾದಿಸುತ್ತವೆ. ಕೃಷ್ಣನು ಆ ಶ್ರೇಷ್ಠತೆಯನ್ನು ಸುಸ್ಪಷ್ಟವಾಗಿ ಪ್ರದರ್ಶಿಸುತ್ತಾನೆ. ಭಗವದ್ಗೀತೆಯ 11ನೆಯ ಅಧ್ಯಾಯದಲ್ಲಿ ಕೃಷ್ಣನು ತನ್ನ ವಿಶ್ವರೂಪವನ್ನು ಪ್ರದರ್ಶಿಸಿ ತನ್ನ ಶ್ರೇಷ್ಠತೆಯ ಒಂದು ನೋಟವನ್ನು ಅರ್ಜುನನಿಗೆ ನೀಡಿದ್ದಾನೆ. ಅಸ್ತಿತ್ವದಲ್ಲಿರುವ ಎಲ್ಲವನ್ನೂ ಎಲ್ಲರನ್ನೂ ಅರ್ಜುನನು ವಿಶ್ವರೂಪದಲ್ಲಿ, ನೋಡಿದ. ಅವನು ಎಲ್ಲ ಗ್ರಹ, ನಕ್ಷತ್ರಗಳನ್ನಲ್ಲದೆ, ಜೀವಿಗಳನ್ನೂ ವಿಸ್ಮಯದಿಂದ ವೀಕ್ಷಿಸಿದ. ಕೃಷ್ಣನು ವಿಶ್ವಕ್ಕೆ ಕಂಟಕರಾಗಿದ್ದ ಅಸಂಖ್ಯ ಪ್ರಬಲ ರಾಕ್ಷಸರನ್ನೂ ಸಂಹರಿಸಿ ತನ್ನ ಸರ್ವಶಕ್ತಿಯನ್ನು ತೋರಿದ.
ಕೃಷ್ಣನು ತನ್ನ ದೇವತ್ವದ ವೈಭವದಿಂದ ಅಲ್ಲ, ಅನಿರ್ಬಂಧಿತ ಪ್ರೇಮದ ಮಾಧುರ್ಯದಲ್ಲಿ, ಅತ್ಯಂತ ಅಕ್ಕರೆಯಿಂದ ಆನಂದಿಸುತ್ತಾನೆ. ಇದು ಲೀಲೆಗಳ ಅಪೂರ್ವ ಕಲ್ಪನೆಯತ್ತ ನಮ್ಮನ್ನು ತರುತ್ತದೆ. ಅದರೊಂದಿಗೆ ಅದಕ್ಕೆ ಸಂಬಂಧಿತ ಕಲ್ಪನೆಯಾದ ಮಾಯೆಯತ್ತಲೂ ನಮ್ಮನ್ನು ಕರೆದೊಯ್ಯುತ್ತದೆ.
ಮಾಯೆಯ ಮರ್ಮ
ಮಾಯಾ ಎಂದರೆ ಶಕ್ತಿ ಎಂದು ಅರ್ಥ. ಆದರೆ `ಯಾವುದು ಅಲ್ಲವೋ ಅದು’ ಎಂದೂ ಅರ್ಥೈಸಬಹುದು, (ಮಾ, `ಅಲ್ಲ’, ಯಾ, `ಇದು’). ಭಗವಂತನ ಮಾಯಾಶಕ್ತಿ ಮಹಾ ಮಾಯೆಯು `ಯಾವುದು ಅಲ್ಲವೋ’ ಅದನ್ನು ವಾಸ್ತವದಂತೆ ಬಿಂಬಿಸುತ್ತದೆ. ಆತ್ಮಗಳಾಗಿ, ಪ್ರಭುವಿನ ಶಾಶ್ವತ ಸೇವಕರಾಗಿ ತಮ್ಮ ನಿಜವಾದ ಗುರುತನ್ನು ಮರೆತು ಭಗವಂತನಿಂದ ಸ್ವತಂತ್ರವಾಗಿ ಸುಖಿಸಬೇಕೆನ್ನುವವರನ್ನು ಅವಳು ಮರುಳು ಮಾಡುತ್ತಾಳೆ. ಲೌಕಿಕ ಸುಖಕ್ಕಾಗಿ ಅನೇಕ ಸಲಹೆ ಸೂಚನೆಗಳನ್ನು ನೀಡುತ್ತ ಅವಳು ಅವರನ್ನು ಸೆಳೆಯುತ್ತಾಳೆ. ಇದು ಮಿತಿ ಮೀರಿದಾಗ ಅವರಿಗೆ ಸಾಕಾಗಿ ಹೋಗುತ್ತದೆ. ಆಗ ಅವರು ಅಂತಿಮವಾಗಿ ಭಗವಂತನತ್ತ ಮತ್ತು ಅವನ ಪ್ರೀತಿಯ ಸೇವೆಯತ್ತ ಮುಖಮಾಡುತ್ತಾರೆ.
ಭಗವಂತನನ್ನು ಶುದ್ಧವಾಗಿ ಪ್ರೀತಿಸುವ ಅಪೇಕ್ಷೆ ಉಳ್ಳವರಿಗೆ ಮತ್ತೊಂದು ರೀತಿಯ ಮಾಯೆ ಉಂಟು. ಇದು ದೈವೀ ಮಾಯಾ, ಇದು ಭಗವಂತನೊಂದಿಗಿನ ಅವರ ಪ್ರೀತಿಯ ವಿನಿಮಯವನ್ನು ಹೆಚ್ಚಿಸುತ್ತದೆ. ಯೋಗ ಎಂದರೆ `ಸಂಪರ್ಕಿಸಲು’ ಅಥವಾ `ಒಗ್ಗೂಡಿಸಲು’ ಎಂದು ಅರ್ಥ. ಆದುದರಿಂದ ಯೋಗ ಮಾಯಾವು ಪ್ರಭುವಿನೊಡನೆ ನಮ್ಮ ಪ್ರೀತಿಯ ಸಂಗವನ್ನು ಸಾಧ್ಯವಾಗಿಸುವ ಭಗವಂತನ ಶಕ್ತಿಗೆ ಸಂಬಂಧಿಸಿದ್ದಾಗಿದೆ. ಹೇಗೆ, ನೋಡೋಣ…
ಶಿಷ್ಟರಿಗೆ ಪ್ರತಿಫಲ ಮತ್ತು ದುಷ್ಟರಿಗೆ ಶಿಕ್ಷೆ ನೀಡುವ ನ್ಯಾಯಾಧೀಶನನ್ನಾಗಿ ಭಗವಂತನನ್ನು ಕಲ್ಪಿಸಿಕೊಳ್ಳಲಾಗುತ್ತದೆ. ಭಗವಂತನು ಅದನ್ನಷ್ಟೇ ಶಾಶ್ವತವಾಗಿ ಮಾಡುವುದಿದ್ದರೆ ಅವನ ಬದುಕು ತುಂಬ ನೀರಸವಾಗಿಬಿಡುತ್ತಿತ್ತು. ಆದರೆ ನ್ಯಾಯಾಧೀಶನಾಗುವುದು ಭಗವಂತನ ಬಹುಮುಖ ವ್ಯಕ್ತಿತ್ವದ ಒಂದು ಸಣ್ಣ ಭಾಗ ಮಾತ್ರ ಎಂದು ಶ್ರೀಮದ್ ಭಾಗವತದಂತಹ ಧರ್ಮ ಗ್ರಂಥಗಳು ವಿವರಿಸುತ್ತವೆ. ಕೃಷ್ಣನಿಗೆ ತನ್ನ ಸಾಮ್ರಾಜ್ಯದಲ್ಲಿ ತನ್ನ ಭಕ್ತರೊಂದಿಗೆ ಶಾಶ್ವತ ಪ್ರೇಮದ ಬದುಕಿದೆ. ಅಲ್ಲಿ ಅವನು ಆನಂದಿಸುತ್ತಾನೆ, ತನ್ನ ದೇವತ್ವವನ್ನು ತೋರುತ್ತ ಅಲ್ಲ, ತನ್ನ ಭಕ್ತರ ಪ್ರೀತಿಗೆ ಪ್ರತಿಯಾಗಿ ಪ್ರೇಮವನ್ನು ತೋರಿಸುತ್ತ ಸುಖಿಸುತ್ತಾನೆ.
ಕೃಷ್ಣನ ವೃಂದಾವನದಲ್ಲಿ ಯೋಗಮಾಯಾ ಭಕ್ತರನ್ನು ಮುಚ್ಚಿಬಿಡುತ್ತಾಳೆ. ಇದರಿಂದ ಅವರಿಗೆ ಕೃಷ್ಣನು ದೇವರೆಂಬ ಪ್ರಜ್ಞೆ ಇರುವುದಿಲ್ಲ. ಅವರು ಅವನನ್ನು ತಮ್ಮ ಹಳ್ಳಿಯ ಅತ್ಯಂತ ವಿಶೇಷ, ಪ್ರೀತಿಯ ಸದಸ್ಯನಂತೆ ಕಾಣುತ್ತಾರೆ, ಮತ್ತು ಅವನು ಆ ಪಾತ್ರವನ್ನು ಅತ್ಯಂತ ಪರಿಪೂರ್ಣವಾಗಿ ನಿರ್ವಹಿಸುತ್ತಾನೆ. ಉದಾಹರಣೆಗೆ, ವಾತ್ಸಲ್ಯ ರಸದಲ್ಲಿ ತನ್ನನ್ನು ಪ್ರೀತಿಸುವ ಭಕ್ತರ ಮನೆಗಳಿಂದ ಬೆಣ್ಣೆಯನ್ನು ಕದ್ದು ಅವನು ಅವರಿಗೆ ಅಕ್ಕರೆಯ ತುಂಟ ಮಗುವಾಗುತ್ತಾನೆ. ಮಹಿಳೆಯರು ಕೃಷ್ಣನ ತಾಯಿ ಯಶೋದಾ ಬಳಿ ದೂರು ನೀಡುತ್ತಾರೆ. ಕೃಷ್ಣನು ಚಾತುರ್ಯದಿಂದ ಮುಗ್ಧತೆಯ ಸೋಗು ಹಾಕುತ್ತಾನೆ. ಕೃಷ್ಣನ ತುಟಿಯ ಮೇಲಿನ ಬೆಣ್ಣೆಯು ಅವನ ಅಪರಾಧವನ್ನು ಸಾಬೀತುಪಡಿಸುವವರೆಗೂ ಅವಳು ಅವನ ನಟನೆಯನ್ನು ನಂಬುತ್ತಾಳೆ.
ಕೃಷ್ಣನ ವೃಂದಾವನ ಲೀಲೆಗಳು ಎಷ್ಟು ಪ್ರಖ್ಯಾತವೆಂದರೆ, ಅವುಗಳನ್ನು ಕುರಿತು ನೂರಾರು ಮಧುರ ಗೀತೆಗಳನ್ನು ರಚಿಸಲಾಗಿದೆ ಮತ್ತು ಕೃಷ್ಣನ ಅಸಂಖ್ಯ ಭಕ್ತರು ಅವನ್ನು ಹಾಡುತ್ತ ಆನಂದಿಸುತ್ತಿದ್ದಾರೆ. ದಿಟವಾಗಿ, ಶ್ರೇಷ್ಠ ವೈಷ್ಣವ ಕವಿ ಬಿಲ್ವಮಂಗಲ ಠಾಕುರರು ಶ್ರೀ ಕೃಷ್ಣನನ್ನು ಅಂತಿಮ ಚೋರ ಎಂದು ಕೊಂಡಾಡುತ್ತಾರೆ : “ನನ್ನ ಪ್ರೀತಿಯ ಪ್ರಭು, ಚೋರರಲ್ಲಿ ಅಪ್ರತಿಮ, ವೃಂದಾವನದಲ್ಲಿ ಬೆಣ್ಣೆ ಕಳ್ಳನಾಗಿ ಪ್ರಖ್ಯಾತನಾದ ನೀನು ಅನೇಕ ಜನ್ಮಗಳಿಂದ ಸಂಗ್ರಹವಾಗಿರುವ ನನ್ನ ಎಲ್ಲ ಪಾಪಗಳನ್ನು ದಯೆಯಿಟ್ಟು ಕದ್ದುಕೊಂಡು ಹೋಗು.”
ಕೃಷ್ಣನೇಕೆ ಕದಿಯುತ್ತಾನೆ ಎಂದು ಕೇಳುವ ಸಂಶಯವಾದಿಗಳು ಲೀಲೆಯ ಸಾರವನ್ನು ಗ್ರಹಿಸುವುದಿಲ್ಲ, ಅದು ಭಗವಂತನ ಪ್ರೀತಿ. ಅಲ್ಲದೆ, ಭಗವಂತನಾದ ಕೃಷ್ಣನು ಎಲ್ಲದರ ಮಾಲೀಕ. ಆದುದರಿಂದ ಅವನು ಏನನ್ನಾದರೂ ಕಳವು ಮಾಡುವ ಪ್ರಶ್ನೆಯೇ ಇಲ್ಲ. ಆದರೂ ಕೃಷ್ಣನು `ಚೋರ’ನಾಗುತ್ತಾನೆ. ತನ್ನ ಭಕ್ತರೊಂದಿಗೆ ತಮಾಷೆಯಾಗಿ ಪ್ರೀತಿಯನ್ನು ಹಂಚಿಕೊಳ್ಳುತ್ತಾನೆ.
ಲೀಲೆಯ ಶಕ್ತಿ
ನಾಟಕೀಯವಾಗಿ ಕಂಡರೂ ಕೃಷ್ಣನ ಲೀಲೆಯು ನೈಜವಾದುದು. ಇದು ಅತ್ಯಂತ ಉನ್ನತ ವಾಸ್ತವ, ಭಗವಂತ ಮತ್ತು ಅವನ ಭಕ್ತರ ನಡುವಣ ನಿಕಟ ಪ್ರೀತಿಯ ವಾಸ್ತವತೆ. ಶಾಶ್ವತವಾದ ಕೃಷ್ಣ ಲೀಲೆಯ ನಿಜವಾದ ನಾಟಕದಲ್ಲಿ, ಯೋಗಮಾಯಾ ನಿರ್ದೇಶಕಿ ಮತ್ತು ಕೃಷ್ಣನೇ ನಾಯಕ. ಆದರೆ ವಿಶೇಷವಾದ ತಿರುವು ಇದೆ. ಕೃಷ್ಣನು ಕಥಾ ಲೇಖಕನೂ ಹೌದು. ಮತ್ತು ಕೃಷ್ಣನು ಬರೆದಿರುವ ಕಥೆಯಂತೆ ಯೋಗ ಮಾಯಾ ನಿರ್ದೇಶಿಸುತ್ತಾಳೆ. ಹೀಗೆ ತನ್ನ ಲೀಲೆಯಲ್ಲಿ, ಕೃಷ್ಣನು ಏಕ ಕಾಲಕ್ಕೆ ನಿಯಂತ್ರಣದಲ್ಲಿ ಇರುತ್ತಾನೆ ಮತ್ತು ನಿಯಂತ್ರಣದಲ್ಲಿ ಇರುವುದಿಲ್ಲ. ಕಥಾ ವಸ್ತು ನೀಡುವಾಗ ಅವನದು ಸಂಪೂರ್ಣ ನಿಯಂತ್ರಣ. ತನ್ನ ಪಾತ್ರವನ್ನು ನಿರ್ವಹಿಸುವಾಗ ತನ್ನನ್ನು ಸಂಪೂರ್ಣವಾಗಿ ಮರೆಯುವ ಪರಿಪೂರ್ಣ ನಟನಾಗಿ ಅವನದು ಅನಿಯಂತ್ರಣ.
ಇದು ಕೃಷ್ಣನ ಅದ್ಭುತ ಜಗತ್ತು. `ದೇವರು ಪ್ರೀತಿ’ ಎಂಬ ಮಾತನ್ನು ಕೃಷ್ಣ ಲೀಲೆಯು ಹೊರಗೆಡಹುತ್ತದೆ.
ಶ್ರೇಷ್ಠತೆ ಮತ್ತು ಪ್ರೀತಿ
ಅನೇಕ ಜನರಿಗೆ, ಮುಖ್ಯವಾಗಿ ರಾಕ್ಷಸರಿಗೆ, ಕೃಷ್ಣನ ಶ್ರೇಷ್ಠತೆಯು ಅವನ ಮಾಧುರ್ಯವನ್ನು ಮುಚ್ಚಿಹಾಕುತ್ತದೆ. ಮಹಾಭಾರತ ಯುದ್ಧವನ್ನು ತಪ್ಪಿಸಲು ಕೃಷ್ಣನು ದುರ್ಯೋಧನನ ಬಳಿಗೆ ಪ್ರೀತಿಯ ಮಾತುಗಳಿಂದ ಶಾಂತಿ ದೂತನಾಗಿ ಹೋದನು. ಆದರೆ ಅಹಂಕಾರಿಯಾದ ರಾಜಕುಮಾರನು ಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿದಾಗ, ಭಗವಂತನು ತನ್ನ ಬೃಹತ್ ವಿಶ್ವರೂಪವನ್ನು ತೋರಿಸುತ್ತ ಅವನ ಪ್ರಯತ್ನವನ್ನು ವಿಫಲಗೊಳಿಸಿದನು.
ಪರಿಶುದ್ಧ ಭಕ್ತರಿಗೆ, ಕೃಷ್ಣನ ಶ್ರೇಷ್ಠತೆಯು ಅವನ ಮಾಧುರ್ಯಕ್ಕೆ ದಾರಿ ಮಾಡಿಕೊಟ್ಟಿದೆ. ರಾಸ ಲೀಲೆಯ ಸಂದರ್ಭದಲ್ಲಿ ಕೃಷ್ಣನು ಕಣ್ಮರೆಯಾದನು. ತನ್ನ ಚತುರ್ಭುಜ ವಿಷ್ಣು ರೂಪದಲ್ಲಿ ಪುನಃ ಗೋಪಿಯರ ಮುಂದೆ ಪ್ರಕಟಗೊಂಡನು. ಕೃಷ್ಣನ ಅತ್ಯಂತ ಪ್ರೀತಿ ಭಕ್ತೆ ರಾಧೆಯು ವಿಷ್ಣುವಿಗೆ ತಲೆಬಾಗಿ ಕೃಷ್ಣನ ಬಗೆಗೆ ಕೇಳಿದಾಗ, ವಿಷ್ಣುವು ಚಾತುರ್ಯದಿಂದ ತಪ್ಪು ದಾರಿಯನ್ನು ತೋರಿಸಲು ಪ್ರಯತ್ನಿಸಿದನು. ಆದರೆ ರಾಧೆಯ ನಿಸ್ವಾರ್ಥ ಪ್ರೀತಿ ಮತ್ತು ಅಗಲಿಕೆಯು ಉಂಟು ಮಾಡಿದ ತೀವ್ರ ಆತಂಕವನ್ನು ಕಂಡು ಕೃಷ್ಣನಿಗೆ ತನ್ನ ಮಾರು ವೇಷವನ್ನು ತುಂಬ ಸಮಯ ಪ್ರದರ್ಶಿಸಲಾಗಲಿಲ್ಲ. ಅವನ ಎರಡು ಹೆಚ್ಚುವರಿ ಕೈಗಳು ಮಾಯವಾದವು. ರಾಧೆಯು ತನ್ನ ಪ್ರೀತಿಯ ಪ್ರಭುವನ್ನು ಕಂಡಳು.
ಕೃಷ್ಣನ ಮಾಧುರ್ಯವು ಅವನ ಶ್ರೇಷ್ಠತೆಯನ್ನು ಮೀರುವಂತೆಯೇ ಅವನ ಪ್ರೀತಿಯು ಅವನ ಕಾನೂನುಗಳನ್ನು ಮೀರುತ್ತದೆ. ಕರ್ಮದ ಕಾನೂನು ಪ್ರತಿಯೊಬ್ಬರಿಗೂ ಅವರವರ ಕರ್ಮಫಲವನ್ನು ತಪ್ಪದೇ ನೀಡುತ್ತದೆ. ಆದರೆ ನಾವು ಭಕ್ತಿಪ್ರೇಮದಿಂದ ಕೃಷ್ಣನತ್ತ ತಿರುಗಿದರೆ, ಅವನು ಕ್ಷಮಿಸುವ ತಂದೆಯಂತೆ ತನ್ನ ಪ್ರೀತಿಯನ್ನು ತೋರುವನು. ಭಗವದ್ಗೀತೆಯ ಮುಕ್ತಾಯ ಶ್ಲೋಕದಲ್ಲಿ ಅವನು ನೀಡಿರುವ ಸ್ಪಷ್ಟ ಭರವಸೆಯು ಅವನ ಕರುಣೆಯು ಅವನ ನ್ಯಾಯವನ್ನು ಮೀರುತ್ತದೆ ಎಂಬುವುದನ್ನು ತೋರಿಸಿದೆ : “ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಹೆದರಿಕೊಳ್ಳಬೇಡ.” (18.66)
ಅವನ ಶ್ರೇಷ್ಠತೆ ಮತ್ತು ಮಾಧುರ್ಯ ಎರಡನ್ನೂ ಪ್ರಕಟಪಡಿಸುವ ಅವನ ಪವಿತ್ರ ನಾಮಗಳನ್ನು ಜಪಿಸುತ್ತ ನಾವು ಸುಲಭವಾಗಿ ಕೃಷ್ಣನಿಗೆ ಶರಣಾಗಬಹುದು. ಅಣ್ವಸ್ತ್ರಗಳಿಗೂ ಇಲ್ಲದಂತಹ ಶಕ್ತಿ ಪವಿತ್ರ ನಾಮಕ್ಕೆ ಇದೆ. ಎಲ್ಲ ನಕಾರಾತ್ಮಕ ಹವ್ಯಾಸ ಮತ್ತು ಪ್ರವೃತ್ತಿಗಳನ್ನು ನಾಶಪಡಿಸುವ ಶಕ್ತಿ ಅದಕ್ಕೆ ಇದೆ. ಪವಿತ್ರ ನಾಮವು ಎಷ್ಟು ಆಕರ್ಷಕ ಸ್ವಾದವನ್ನು ಹೊಂದಿದೆ ಎಂದರೆ, ಅದನ್ನು ಆಸ್ವಾದಿಸಲು ಸಂತರು ನೂರಾರು ಬಾಯಿಗಳು ಬೇಕೆಂದು ಅಪೇಕ್ಷಿಸುತ್ತಾರೆ. ಅದಷ್ಟೇ ಅಲ್ಲ, ಪವಿತ್ರ ನಾಮವು ನಮ್ಮ ಹೃದಯವನ್ನು ಮೃದುವಾಗಿಸುತ್ತದೆ ಮತ್ತು ನಮ್ಮ ಪ್ರೀತಿಯನ್ನು ಕೃಷ್ಣನತ್ತ ತಿರುಗಿಸುತ್ತದೆ. ಕೃಷ್ಣನ ಪ್ರೀತಿಯಿಂದ ನಮ್ಮ ಹೃದಯವು ಬೆಣ್ಣೆಯಂತೆ ಮೃದುವಾದಾಗ, ಬೆಣ್ಣೆ ಚೋರ ಕೃಷ್ಣನು ಬಂದು ಅದನ್ನು ಕದಿಯುತ್ತಾನೆ. ಆ ಅಂತಿಮ ಪ್ರೀತಿ-ಕಳ್ಳತನಕ್ಕಾಗಿ ಭಕ್ತರು ಹಾತೊರೆಯುತ್ತಾರೆ ಮತ್ತು ಪ್ರಾರ್ಥಿಸುತ್ತಾರೆ.
ಮೂಲ ನೃತ್ಯ
ಸುಪ್ರಸಿದ್ಧ ರಾಸ ನೃತ್ಯವು ದಿವ್ಯಪ್ರೇಮದ ಪರಾಕಾಷ್ಠೆ ಎಂದು ಆಧ್ಯಾತ್ಮಿಕ ವಿದ್ವಾಂಸರು ಪರಿಗಣಿಸುತ್ತಾರೆ. ಈ ನೃತ್ಯವು ಬಾಲಕ ಬಾಲಕಿಯರನ್ನು ಒಳಗೊಂಡ ಸಾಮಾನ್ಯ ನೃತ್ಯದಂತೆ ಕಂಡರೂ ಶ್ರೀಲ ಪ್ರಭುಪಾದರಂತಹ ಶ್ರದ್ಧಾವಂತ, ವಿದ್ವಾಂಸರಾದ ಭಕ್ತರಿಂದ ಅದನ್ನು ಕುರಿತು ಕೇಳಿದಾಗ ನಾವು ಅದರ ಲೋಕಾತೀತ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬಹುದು. ಶ್ರೀಲ ಪ್ರಭುಪಾದರು ತಮ್ಮ ಕೃಷ್ಣ, ದೇವೋತ್ತಮ ಪರಮ ಪುರುಷ ಪುಸ್ತಕದಲ್ಲಿ ಇದನ್ನು ವಿವರಿಸಿದ್ದಾರೆ. ದಿಟವಾಗಿ, ರಾಸ ನೃತ್ಯವು ಆಧ್ಯಾತ್ಮಿಕವಾಗಿ ಎಷ್ಟು ಉನ್ನತವಾಗಿದೆ ಎಂದರೆ ಪ್ರಾಪಂಚಿಕ ಆನಂದದಲ್ಲಿ ಕಿಂಚಿತ್ತೂ ಆಸಕ್ತಿ ಇಲ್ಲದ ವೃಂದಾವನದ ಸುಪ್ರಸಿದ್ಧ ಆರು ಗೋಸ್ವಾಮಿಗಳಂತಹ ಮುಂದುವರಿದ ಭಕ್ತರು ತಮ್ಮ ಹೃದಯಾಂತರಾಳದಲ್ಲಿ ಅದನ್ನು ಪೋಷಿಸುತ್ತಾರೆ ಮತ್ತು ಪೂಜಿಸುತ್ತಾರೆ.
ಭಕ್ತರಾಗಲು ಪ್ರಯತ್ನಿಸುತ್ತಿರುವ ನಾವು ಸದ್ಯ ರಾಸ ನೃತ್ಯದಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ. ಆದರೆ ಸಂಕೀರ್ತನೆಯ ಮೂಲಕ ದಿವ್ಯ ನೃತ್ಯವನ್ನು ಆಸ್ವಾದಿಸಬಹುದು. ಉತ್ಸಾಹಪೂರ್ಣವಾಗಿ ಹಾಡುವುದು ಮತ್ತು ನರ್ತಿಸುವುದು ಧ್ಯಾನದ ಒಂದು ಗಾಢ ಮತ್ತು ಶಕ್ತ ರೂಪ. ಆಧ್ಯಾತ್ಮಿಕ ವಾಸ್ತವತೆಯನ್ನು ಅನುಭವಿಸುವುದೇ ಧ್ಯಾನದ ಉದ್ದೇಶ. ಭಗವಂತನ ಆನಂದಕ್ಕಾಗಿ ದೇಹವನ್ನು ಆಕರ್ಷಕ ನೃತ್ಯದಲ್ಲಿ ತೊಡಗಿಸುವುದು, ಮತ್ತು ಮನಸ್ಸನ್ನು ಅವನ ಪವಿತ್ರ ನಾಮದ ಬಗೆಗೆ ಪ್ರಾರ್ಥನೆಯಲ್ಲಿ ತೊಡಗಿಸುವುದು, ಮುಖ್ಯವಾಗಿ, ಮಹಾ ಮಂತ್ರದಲ್ಲಿ ತೊಡಗಿಸುವುದು,- ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ – ಇದು ತ್ವರಿತವಾಗಿ ಮತ್ತು ಸಮರ್ಥವಾಗಿ ನಮ್ಮ ಪ್ರಜ್ಞೆಯನ್ನು ದಿವ್ಯ ಪ್ರೇಮದ ಸಾಮ್ರಾಜ್ಯಕ್ಕೆ ಸಾಗಿಸುತ್ತದೆ.