ಗೋವರ್ಧನ ಪೂಜೆ

ಸ್ವರ್ಗಾಧಿಪತಿಯ ಗರ್ವಭಂಗ

ಅಂದು ವೃಂದಾವನದಲ್ಲಿ ವಿಪರೀತ ಗಡಿಬಿಡಿ. ಆ ಮೈದಾನದಂಥ ವಿಶಾಲ ಪ್ರದೇಶದಲ್ಲಿ ಒಂದಿಡೀ ಹಳ್ಳಿಯನ್ನೇ ತೆಕ್ಕೆಗೆಳೆದುಕೊಂಡಂತಿರುವ ವಿಶಾಲ ಚಪ್ಪರ. ಅದರಡಿ ಗೋಪಾಲಕರೆಲ್ಲಾ ಅದೆಂಥದೋ ವಿಚಿತ್ರ ಉತ್ಸಾಹದಲ್ಲಿದ್ದಾರೆ. ಹಲಸು, ಮಾವಿನ ಸೊಪ್ಪು, ಹೂವು-ಹಣ್ಣು, ಮಡಕೆ-ಕುಡಿಕೆಗಳನ್ನು ಹಿಡಿದು ಧಾವಂತದಿಂದ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಕೆಲವರು ಯಜ್ಞಕುಂಡ ನಿರ್ಮಾಣದಲ್ಲಿ ಮುಳುಗಿದ್ದರೆ, ಅವರ ಕೈ ಕೆಲಸಕ್ಕಾಗಿ ನಿಂತವರು ಒಂದಿಷ್ಟು ಮಂದಿ. ಅಲ್ಲಲ್ಲಿ ಗುಂಪು ಗುಂಪಾಗಿ ಮಾತಾಡುತ್ತಾ ನಿಂತವರು, ದೂರದಿಂದ ಅವರನ್ನು ಕೂಗಿ ಕರೆಯುತ್ತಿರುವವರು ಇನ್ನೊಂದಿಷ್ಟು ಜನ. ಇಷ್ಟೆಲ್ಲಾ ಗಿಜಿ ಗಿಜಿ ನಡುವೆ ಗೋಪಾಲಕರ ನಾಯಕ ನಂದ ಮಹಾರಾಜ ಇತರೆ ಕೆಲವು ಹಿರಿಯರೊಡಗೂಡಿ ಉತ್ಸಾಹಿ ಯುವಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾನೆ. ಇಡೀ ಪ್ರದೇಶದಲ್ಲಿ ಪುಷ್ಪ , ಧೂಪಗಳ ಘಮ ಘಮ. ಗೋಪಾಲಕರ ಕೇಕೆ. ಗಿಜಿ ಗಿಜಿ. ಚಪ್ಪರದ ಹೊರಗೆ ಪಕ್ಷಿಗಳ ಚಿಲಿಪಿಲಿ. ಹಸು ಕರುಗಳ `ಅಂಬಾ’ ಮತ್ತು ಎಂದಿನಂತೆ ಎಲ್ಲಿಂದಲೋ ತೇಲಿ ಬರುತ್ತಿರುವ ಮುರಳಿಗಾನ!

ದೂರದಿಂದ ನೋಡಿದರೇ ತಿಳಿಯುತ್ತಿತ್ತು, ಅಲ್ಲೊಂದು ಯಜ್ಞದ ಸಿದ್ಧತೆ ನಡೆಯುತ್ತಿದೆ ಎಂದು. ಅಂದ ಹಾಗೆ ಇಲ್ಲಿನ ನಿವಾಸಿಗಳಿಗೆ ಯಜ್ಞ ಯಾಗಾದಿಗಳು ಹೊಸತೇನಲ್ಲ. ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಜತೆ ವಾಸಿಸುವ ಅದೃಷ್ಟ ಪಡೆದಿದ್ದ ಈ ಗೋಪಾಲಕರು, ಪಂಡಿತೋತ್ತಮ ಬ್ರಾಹ್ಮಣರ ಜತೆಗೂಡಿ, ಋಷಿವರ್ಯರ ನೇತೃತ್ವದಲ್ಲಿ ವೈದಿಕ ಯಜ್ಞಗಳನ್ನು ನಡೆಸುವುದು ಮಾಮೂಲಾಗಿತ್ತು. ಆದರೂ ಅಂದು ಅವರು ಸಿದ್ಧತೆ ನಡೆಸುತ್ತಿದ್ದ ಯಜ್ಞ ಎಂದಿಗಿಂತಲೂ ವಿಶಿಷ್ಟವಾದುದು ಎಂಬುದು ಗೋಪಾಲಕರ ಹುರುಪು ನೋಡಿದರೇ ತಿಳಿಯುತ್ತಿತ್ತು. ನಿಜ, ಅಂದು ಅವರೆಲ್ಲಾ ಸ್ವರ್ಗಾಧಿಪತಿ ಇಂದ್ರನನ್ನು ಸಂತೃಪ್ತಿಗೊಳಿಸುವ ಯಜ್ಞಕ್ಕೆ ತಯಾರಿ ನಡೆಸುತ್ತಿದ್ದರು. ಭೂಮಿಗೆ ನೀರನ್ನು ಕೊಡುವವನೇ ಇಂದ್ರ. ಅವನು ಕೃಪೆ ತೋರಿದರೇ ಕಾಲ ಕಾಲಕ್ಕೆ ಮಳೆ-ಬೆಳೆ. ವೈಶ್ಯ ವರ್ಗಕ್ಕೆ ಸೇರಿದ ಗೋಪಾಲಕರಿಗಾದರೋ ವ್ಯವಸಾಯ, ವ್ಯಾಪಾರ ಮತ್ತು ಗೋರಕ್ಷಣೆಯೇ ಮುಖ್ಯ ವೃತ್ತಿ. ಮಳೆಯನ್ನು ನಂಬಿ ಬದುಕುವ ಮಂದಿ ಇವರು. ಹೀಗಾಗಿ ಇಂದ್ರನನ್ನು ತೃಪ್ತಿಪಡಿಸುವುದು ಇವರ ಆದ್ಯ ಕರ್ತವ್ಯ. ವೃಂದಾವನದಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತಿದ್ದರೂ ಇಂದ್ರನ ಸಂತೃಪ್ತಿಗಾಗಿ ಕಾಲ ಕಾಲಕ್ಕೆ ಯಜ್ಞ ಯಾಗಾದಿಗಳನ್ನು ಶ್ರದ್ಧೆಯಿಂದ ನಡೆಸುತ್ತಿದ್ದರು.

ಈ ಬಾರಿಯೂ ಅಂಥದ್ದೇ ಒಂದು ಯಜ್ಞಕ್ಕಾಗಿ ಭರದಿಂದ ಸಿದ್ಧತೆ ನಡೆದಿತ್ತು. ನಂದ ಮಹಾರಾಜ, ಇತರ ಗೋಪಾಲಕ ಮುಖಂಡರೊಡಗೂಡಿ ಸಿದ್ಧತಾ ಕಾರ್ಯಗಳನ್ನು ಗಮನಿಸುತ್ತಿದ್ದ. ಮುಂದಾಗಬೇಕಿರುವ ಬೃಹತ್‌ ಯಜ್ಞದಲ್ಲಿ ಯಾವುದೇ ಲೋಪವಾಗಬಾರದು ಎಂಬುದು ಅವನ ಕಳಕಳಿಯಾಗಿತ್ತು. ಹಾಗೆಂದೇ ಅವನು ಯಜ್ಞ ಮಂಟಪದ ಪ್ರತಿಯೊಂದು ವ್ಯವಸ್ಥೆಯನ್ನು ಕೂಲಂಕಷವಾಗಿ ಗಮನಿಸಿ, ಗೋಪಾಲಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದ.

ಇದೇ ಸಮಯಕ್ಕೆ ಸರಿಯಾಗಿ ಶ್ರೀ ಕೃಷ್ಣ-ಬಲರಾಮರು ಅಲ್ಲಿಗೆ ಬಂದರು. ಸ್ವರ್ಗಾಧಿಪತಿ ಇಂದ್ರನ ಸಂತೃಪ್ತಿಗಾಗಿ ಯಜ್ಞ ನಡೆಸಲು ಇಷ್ಟೆಲ್ಲಾ ಸಿದ್ಧತೆಗಳಾಗುತ್ತಿವೆ ಎಂಬುದು ಶ್ರೀಕೃಷ್ಣನಿಗೆ ಆಗಲೇ ತಿಳಿದಿತ್ತು. ಆತ ಸರ್ವಜ್ಞನೂ, ದೇವೋತ್ತಮ ಪರಮ ಪುರುಷನೂ ಅಲ್ಲವೇ? ಆತನಿಗೆ ತಿಳಿಯದಿರುವುದು ಏನಿದೆ? ಈ ಯಜ್ಞ ಸಿದ್ಧತೆ ಸೇರಿದಂತೆ ಪ್ರತಿಯೊಂದೂ ಅವನ ಆಜ್ಞೆಯ ಮೇರೆಗೇ ಅಲ್ಲವೆ ನಡೆಯುವುದು? ಇಷ್ಟಾದರೂ ಕೃಷ್ಣ ಆ ಯಜ್ಞದ ಬಗ್ಗೆ ತನಗೆ ತಿಳಿದಿದೆಯೆಂಬುದನ್ನು ಅಲ್ಲಿದ್ದ ಗೋಪಾಲಕರಿಗೆ ತೋರ್ಪಡಿಸಲಿಲ್ಲ. ತನ್ನ ಮುಖದ ಮೇಲೆ ಸಹಜ ಕುತೂಹಲ ತುಳುಕಿಸುತ್ತಾ ಕೃಷ್ಣ , ತಂದೆ ನಂದ ಮಹಾರಾಜನನ್ನು ಕೇಳಿದ : “ತಂದೆ, ಭಾರಿ ಯಜ್ಞಕ್ಕೆ ಸಿದ್ಧತೆಯಾಗುತ್ತಿದೆಯಲ್ಲ? ಇದು ಯಾವ ಯಜ್ಞ? ಇದರ ಉದ್ದೇಶವೇನು? ಇದನ್ನು ಹೇಗೆ ಮಾಡುವುದು? ಇದರ ಬಗ್ಗೆ ತಿಳಿದುಕೊಳ್ಳಲು ನಾನು ಕಾತರನಾಗಿದ್ದೇನೆ. ದಯವಿಟ್ಟು ಹೇಳುವೆಯಾ?”

ಕೃಷ್ಣನ ಪ್ರಶ್ನೆಗಳನ್ನು ನಂದ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದು ಕೃಷ್ಣನ ವಯೋಸಹಜವಾದ ಪ್ರಶ್ನೆ. ಅವನಿಗೆ ಈ ಯಾಗ ಯಜ್ಞಾದಿಗಳ ಜಟಿಲ ವಿಷಯಗಳು ಅರ್ಥವಾಗುವುದಿಲ್ಲ ಎಂಬುದು ನಂದ ಮಹಾರಾಜನ ಅನಿಸಿಕೆಯಾಗಿತ್ತು. ನಂದನ ಅನಿಸಿಕೆ ಸಹಜವಾಗಿತ್ತು. ಏಕೆಂದರೆ ಕೃಷ್ಣ ಆಗಿನ್ನು ಕಿಶೋರ, ಅಂದರೆ ಬಾಲಕ. ಎಲ್ಲವನ್ನು ಪ್ರಶ್ನಿಸುವುದು, ಸಂಶಯಾಸ್ಪದವಾಗಿ ನೋಡುವುದು ಆ ವಯಸ್ಸಿನ ಸಹಜ ಗುಣ. ಈ ಕಾರಣಕ್ಕಾಗಿಯೇ ನಂದ ಮಹಾರಾಜ ಕೃಷ್ಣನ ಪ್ರಶ್ನೆಗಳನ್ನು ಉಪೇಕ್ಷಿಸಿದ. ನಂದನಿಗೇನು ಗೊತ್ತು ಪಾಪ? ಈ ಯಜ್ಞ ಸಿದ್ಧತೆ ನಡೆಸುತ್ತಿರುವವನು ಮತ್ತು ಮುಂದೆ ಅದನ್ನು ನಿಲ್ಲಿಸುವವನು ಶ್ರೀಕೃಷ್ಣನೇ ಎಂದು!

ಕೃಷ್ಣ ಸುಮ್ಮನಿರಲಿಲ್ಲ. “ತಂದೆ, ಉದಾರಿಗಳು, ಸತ್ಯ ಸಂದರು ಮತ್ತು ಸಂತರು ಯಾವುದನ್ನೂ ಗುಟ್ಟು ಮಾಡಬಾರದು. ಅಂಥವರು ಯಾರನ್ನೂ ಸ್ನೇಹಿತರೆಂದಾಗಲೀ, ಶತ್ರುಗಳೆಂದಾಗಲೀ ಭಾವಿಸುವುದಿಲ್ಲ. ಉದಾರಿಗಳಲ್ಲದವರು ಕೂಡಾ ಸಂಸಾರದ ಜತೆ, ಸ್ನೇಹಿತರ ಜತೆ ಯಾವುದೇ ವಿಷಯ ಮುಚ್ಚಿಡುವುದಿಲ್ಲ. ಆದ್ದರಿಂದ ನೀನು ನನ್ನಿಂದ ಏನನ್ನೂ ಮುಚ್ಚಿಡುವಂತಿಲ್ಲ. ಎಲ್ಲರೂ ಒಂದಲ್ಲಾ ಒಂದು ಕರ್ಮಗಳನ್ನು ಮಾಡುತ್ತಿರುತ್ತಾರೆ. ಕೆಲವರಿಗೆ ಆ ಕರ್ಮಗಳು ಯಾವುವು, ಅವುಗಳ ಫಲಗಳೇನು ಎಂಬುದು ತಿಳಿದಿರುತ್ತದೆ. ಆದರೆ ಮತ್ತೆ ಕೆಲವರಿಗೆ ತಮ್ಮ ಕರ್ಮಗಳ ಬಗ್ಗೆ ಸಂಪೂರ್ಣ ತಿಳಿವಳಿಕೆ ಇರುವುದಿಲ್ಲ. ಫಲ, ಉದ್ದೇಶ ತಿಳಿಯದೇ ಕೆಲಸ ಮಾಡುವವರಿಗೆ ಕರ್ಮ ಫಲ ಸಂಪೂರ್ಣವಾಗಿ ದೊರೆಯುವುದಿಲ್ಲ. ತಿಳಿವಳಿಕೆಯಿಂದ ಕೆಲಸ ಮಾಡುವವರಿಗೆ ಸಂಪೂರ್ಣ ಫಲ ದೊರಕುತ್ತದೆ. ಆದ್ದರಿಂದ ನೀನು ಮಾಡಲಿರುವ ಯಜ್ಞದ ಉದ್ದೇಶವೇನು ಎಂದು ದಯವಿಟ್ಟು ಹೇಳು. ಇದು ವೈದಿಕ ಆದೇಶದಂತೆ ನಡೆಯುವ ಯಜ್ಞವೇ ಅಥವಾ ಜನಪ್ರಿಯ ಸಮಾರಂಭವೇ ಎಂಬುದನ್ನು ತಿಳಿಸು” ಎಂದು ತಂದೆಯನ್ನು ಮಾತಿನಿಂದಲೇ ಕಟ್ಟಿಹಾಕಿದ.

ಈ ಬಾರಿ ಮಾತ್ರ ಮಗನ ಪ್ರಶ್ನೆಗಳನ್ನು ಶಾಂತಚಿತ್ತದಿಂದ ಕೇಳಿಸಿಕೊಂಡ ನಂದ, “ಮಗು, ಇದು ಬಹುಮಟ್ಟಿಗೆ ಸಾಂಪ್ರದಾಯಿಕ ಯಜ್ಞ. ಇಳೆಗೆ ಮಳೆ ಬರುವುದು ಇಂದ್ರನ ಕೃಪೆಯಿಂದ. ಮೋಡಗಳು ಅವನ ಪ್ರತಿನಿಧಿಗಳು. ನಮ್ಮ ಬದುಕಿಗೆ ನೀರು ಮುಖ್ಯ. ಆದ್ದರಿಂದ ನಾವು ಮಳೆ ನಿಯಂತ್ರಿಸುವ ಇಂದ್ರನಿಗೆ ಕೃತಜ್ಞತೆ ಸಲ್ಲಿಸಬೇಕು. ಇಂದ್ರನು ಕೃಷಿ ಕಾರ್ಯಗಳಿಗೆ ಬೇಕಾಗುವಷ್ಟು ಮಳೆ ಸುರಿಸಲು ಮೋಡಗಳನ್ನು ಕಳಿಸುತ್ತಾನೆ. ಕೃಷಿ ಮಾತ್ರವಲ್ಲ, ಧಾರ್ಮಿಕ ಸಮಾರಂಭ, ಆರ್ಥಿಕ ಬೆಳವಣಿಗೆ ಮತ್ತು ಮುಕ್ತಿ ಎಲ್ಲದಕ್ಕೂ ಅವನನ್ನು ನಾವು ಪ್ರಸನ್ನಗೊಳಿಸಲೇಬೇಕು. ಅದಕ್ಕಾಗಿ ಈಯಜ್ಞ. ಈ ಸಾಂಪ್ರದಾಯಿಕ ಉತ್ಸವವನ್ನು ಯಾವುದೇ ಕಾರಣಕ್ಕೂ ನಾವು ಬಿಡಬಾರದು. ಕಾಮ, ದುರಾಸೆ ಅಥವಾ ಭಯದ ಕಾರಣದಿಂದ ಇದನ್ನು ಬಿಟ್ಟರೆ ಒಳ್ಳೆಯದಾಗುವುದಿಲ್ಲ” ಎಂದು ಯಜ್ಞದ ಮಹತ್ವವನ್ನು ವಿವರಿಸಿದ.

ಇದಕ್ಕೆ ಪ್ರತಿಯಾಗಿ ಕೃಷ್ಣ  ನಂದ ಮಹಾರಾಜ ಮತ್ತು ವೃಂದಾವನದ ಗೋಪಾಲಕರ ಎದುರಲ್ಲಿ ಬೇಕೆಂದೇ ಸ್ವರ್ಗಾಧಿಪತಿ ಇಂದ್ರನಿಗೆ ಕೋಪ ಬರುವಂತೆ ಮಾತನಾಡಿದ. ಯಾವುದೇ ಕಾರಣಕ್ಕೂ ಈ ಯಜ್ಞ ನಡೆಯಕೂಡದು. ಇದನ್ನು ಕೈಬಿಡಬೇಕು ಎಂದು ಸಲಹೆ ನೀಡಿದ. ಇಂದ್ರನಿಗಾಗಿ ನಡೆಸುವ ಯಜ್ಞ ಕೈ ಬಿಡಬೇಕು ಎಂಬುದಕ್ಕೆ ಆಗ ಕೃಷ್ಣ ಎರಡು ಮುಖ್ಯ ಕಾರಣಗಳನ್ನು ನೀಡಿದ. “ಯಾವುದೇ ಭೌತಿಕ ಪ್ರಯೋಜನಕ್ಕಾಗಿ ದೇವತೆಗಳನ್ನು ಪೂಜಿಸುವ ಅಗತ್ಯವಿಲ್ಲ. ದೇವತೆಗಳನ್ನು ಪೂಜಿಸಿ ಪಡೆಯುವ ಫಲವೆಲ್ಲ ಅಲ್ಪ ಕಾಲದ್ದು. ಮಂದಬುದ್ಧಿಯವರಿಗೆ ಮಾತ್ರ ಇಂಥ ಅಲ್ಪ ಫಲಗಳಲ್ಲಿ ಆಸಕ್ತಿ ಇರುತ್ತದೆ. ಇನ್ನು ಇಂಥ ಅಲ್ಪ ಕಾಲದ ಫಲವನ್ನಾದರೂ ದೇವತೆಗಳು ದೇವೋತ್ತಮ ಪರಮ ಪುರುಷನ ಅನುಮತಿಯಿಂದಷ್ಟೆ ಕೊಡಲು ಸಾಧ್ಯ” ಎಂದು ಶ್ರೀ ಕೃಷ್ಣ ವಿವರಿಸಿದ.

ದೇವೋತ್ತಮ ಪರಮ ಪುರುಷನ ಅನುಮತಿ ಇಲ್ಲದೇ ಯಾರೂ ಇನ್ನೊಬ್ಬರಿಗೆ ಫಲ ನೀಡಲು, ಉಪಕಾರ ಮಾಡಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ದೇವತೆಗಳು ಭೌತಿಕ ಪ್ರಕೃತಿಯ ಪ್ರಭಾವದಿಂದ ತಾವೇ ಸರ್ವಶಕ್ತರೆಂದು ಭಾವಿಸಿ ದೇವೋತ್ತಮ ಪರಮ ಪುರುಷನಂತೆ ಪರಮಾಧಿಕಾರ ಚಲಾಯಿಸುತ್ತಾರೆ, ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಆ ಸಂದರ್ಭದಲ್ಲಿ ಇಂದ್ರನಿಗೆ ಕೋಪಬರಲೆಂದೇ ಕೃಷ್ಣನು ಆ ರೀತಿ ಹೇಳಿದನೆಂದು ಭಗವದ್ಗೀತೆ ಸ್ಪಷ್ಟವಾಗಿ ಹೇಳಿದೆ.

ದುರಹಂಕಾರಿ ರಾಕ್ಷಸರನ್ನು ನಾಶ ಮಾಡುವುದೇ ಕೃಷ್ಣಾವತಾರದ ಉದ್ದೇಶ. ಇಂದ್ರನೇನೂ ರಾಕ್ಷಸನಲ್ಲ. ಆತನೂ ಒಬ್ಬ ಭಕ್ತ. ಆದರೆ ಅವನಿಗೆ ದುರಹಂಕಾರ ಬಂದಿದ್ದರಿಂದ ಅವನಿಗೆ ಬುದ್ಧಿ ಕಲಿಸಬೇಕೆಂದು ಕೃಷ್ಣ ಅಪೇಕ್ಷಿಸಿದ. ಈ ಉದ್ದೇಶಕ್ಕಾಗಿಯೇ ವೃಂದಾವನದಲ್ಲಿ ಗೋಪಾಲಕರು ಏರ್ಪಡಿಸಿದ್ದ ಯಜ್ಞವನ್ನು ತಡೆದು ಇಂದ್ರನಿಗೆ ಕೋಪ ಬರಿಸಲು ಯತ್ನಿಸಿದ. ಈ ಸಂದರ್ಭದಲ್ಲಿ ಕೃಷ್ಣನು ಉದ್ದೇಶ ಪೂರ್ವಕವಾಗಿಯೇ “ಕರ್ಮ ಮಿಮಾಂಸೆ” ಯನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿದ. “ಯಾರೇ ಆದರೂ ಚೆನ್ನಾಗಿ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ. ಕರ್ಮಗಳಿಗನುಗುಣವಾಗಿ ಫಲ ನೀಡುವ ದೇವನೊಬ್ಬ ಇದ್ದರೂ ಅವನನ್ನು ಪೂಜಿಸುವ ಅಗತ್ಯವಿಲ್ಲ. ಏಕೆಂದರೆ ಮನುಷ್ಯ ಒಳ್ಳೆಯ ಕೆಲಸ ಮಾಡದಿದ್ದರೆ ದೇವರು ಒಳ್ಳೆಯ ಫಲ ನೀಡಲಾರ. ದೇವರನ್ನು ಪೂಜಿಸುವ ಬದಲು ಜನರು ತಮ್ಮ ಕರ್ತವ್ಯಗಳಿಗೆ ಗಮನ ನೀಡಬೇಕು” ಎಂಬುದು ಕರ್ಮ ಮಿಮಾಂಸಕರ ವಾದ.

ಶ್ರೀಕೃಷ್ಣ ತಂದೆಯೊಡನೆ ಇದೇ ಧಾಟಿಯಲ್ಲಿ ಮಾತು ಮುಂದುವರಿಸಿದ. “ತಂದೆ, ಕೃಷಿ ಕಾರ್ಯ ಯಶಸ್ವಿಯಾಗಬೇಕೆಂದು ನೀವು ಯಾವುದೇ ದೇವತೆಯನ್ನು ಪೂಜಿಸುವ ಅವಶ್ಯಕತೆ ಇಲ್ಲ. ಪ್ರತಿ ಜೀವಿಯೂ ತನ್ನ ಹಿಂದಿನ ಕರ್ಮಗಳಿಗನುಗುಣವಾಗಿ ಬೇರೆ ಬೇರೆ ವರ್ಗಗಳಲ್ಲಿ ಜನಿಸುತ್ತಾನೆ. ವರ್ತಮಾನದ ಫಲವನ್ನು ಕಟ್ಟಿಕೊಂಡು ಈ ಪ್ರಪಂಚವನ್ನು ತೊರೆಯುತ್ತಾನೆ. ಒಟ್ಟಿನಲ್ಲಿ ಸುಖ, ದುಃಖ, ನೆಮ್ಮದಿಗಳಿಗೆ ಆತನ ಕರ್ಮಗಳೇ ಕಾರಣ” ಎನ್ನುತ್ತಾ ಇಂದ್ರನನ್ನು ನಿರ್ಲಕ್ಷಿಸಿ ಮಾತನಾಡಿದ ಶ್ರೀ ಕೃಷ್ಣ.

“ಆದರೆ ಪ್ರಬಲನಾದ ದೇವತೆಯನ್ನು ಸಂತುಷ್ಟಗೊಳಿಸದೇ ಕೇವಲ ಭೌತಿಕ ಚಟುವಟಿಕೆಗಳಿಂದಷ್ಟೇ ಒಳ್ಳೆಯ ಫಲ ಪಡೆಯಲು ಸಾಧ್ಯವಿಲ್ಲ” ಎಂದು ನಂದ ಮಹಾರಾಜ ಮತ್ತು ಇತರ ಹಿರಿಯರು ವಾದಿಸಿದರು.

ಉತ್ತಮ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಕೆಲವು ರೋಗಿಗಳು ಸಾಯುತ್ತಾರೆ. ತಂದೆ-ತಾಯಿಗಳು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಕೆಲವು ಮಕ್ಕಳು ಕೆಟ್ಟದಾರಿ ಹಿಡಿಯುತ್ತಾರೆ. ಅಂದರೆ ರೋಗಿ ಗುಣಮುಖವಾಗಲು, ಮಕ್ಕಳು ಒಳ್ಳೆಯ ದಾರಿಯಲ್ಲಿ ಸಾಗಲು ದೇವೋತ್ತಮ ಪರಮ ಪುರುಷನ ನೆರವೂ ಬೇಕು. ಆದ್ದರಿಂದ ಉತ್ತಮ ಮಳೆ-ಬೆಳೆ ಆಗಬೇಕಾದರೆ ನಾವು ಕಷ್ಟ ಪಡುವುದರ ಜತೆಗೆ ಮಳೆಯ ದೇವತೆ ಇಂದ್ರನನ್ನು ತೃಪ್ತಿಪಡಿಸಬೇಕು ಎಂದು ನಂದ ಮಹಾರಾಜ ಪ್ರತಿಪಾದಿಸಿದ.

ಕೃಷ್ಣ ಇದನ್ನು ಒಪ್ಪಲಿಲ್ಲ. ತನಗೆ ವಿಧಿಸಿದ ಕರ್ತವ್ಯಗಳನ್ನು ಪಾಲಿಸಿದವರಿಗೆ ಮಾತ್ರ ದೇವತೆಗಳು ಫಲ ನೀಡಬಲ್ಲರು. ಕರ್ತವ್ಯ ಪಾಲಿಸದವರಿಗೆ ದೇವತೆಗಳು ಫಲ ನೀಡಲಾರರು. ಮೇಲಾಗಿ ಸತಲಗಳನ್ನು ನೀಡುವಲ್ಲಿ ದೇವತೆಗಳು ಸಂಪೂರ್ಣ ಸ್ವಂತಂತ್ರರಲ್ಲ ಎಂದು ಆತ ಪ್ರತಿವಾದಿಸಿದ.

“ತಂದೆ, ಇಂದ್ರನನ್ನು ಪೂಜಿಸುವ ಅಗತ್ಯವೇ ಇಲ್ಲ. ದೇವತೆಗಳ ಪೂಜೆಯ ಹೆಸರಲ್ಲಿ ಗಮನ ಬೇರೆಡೆಗೆ ತಿರುಗಿಸಬಾರದು. ನಮ್ಮ ಕರ್ತವ್ಯ ಸರಿಯಾಗಿ ಪಾಲಿಸಿದರೆ ದೇವತೆಗಳು ತೃಪ್ತರಾಗುತ್ತಾರೆ. ಅವರನ್ನು ಪೂಜಿಸುವ ಬದಲು ನಮ್ಮ ಕರ್ತವ್ಯಗಳನ್ನು

ಚೆನ್ನಾಗಿ ಮಾಡೋಣ. ನಾವು ವೈಶ್ಯ ವರ್ಗಕ್ಕೆ ಸೇರಿದವರು ನಮ್ಮ ಯೋಗ್ಯ ಕರ್ತವ್ಯವೆಂದರೆ ವ್ಯವಸಾಯ, ಅದರ ಉತ್ಪನ್ನಗಳ ಮಾರಾಟ, ಗೋರಕ್ಷಣೆ ಮತ್ತು ಲೇವಾದೇವಿ” ಎಂದು ಶ್ರೀ ಕೃಷ್ಣನು ಗೋಪಾಲಕರ ಮನಸ್ಸಿಗೆ ನಾಟುವಂತೆ ನುಡಿದ.

“ಬ್ರಹ್ಮಾಂಡವು ಸಾತ್ವಿಕ, ರಾಜಸ ಮತ್ತು ತಾಮಸಗಳೆಂಬ ಭೌತಿಕ ಜಗತ್ತಿನ ಮೂರು ಗುಣಗಳಿಂದ ಕೆಲಸ ಮಾಡುತ್ತಿದೆ. ಈ ಗುಣಗಳೇ ಸೃಷ್ಟಿ , ಸ್ಥಿತಿ ಮತ್ತು ಲಯಗಳಿಗೆ ಕಾರಣ. ಮೋಡವು ರಾಜಸ ಸ್ವಭಾವದ ಕ್ರಿಯೆಯಿಂದಾಗಿ ಹುಟ್ಟುತ್ತದೆ. ಮಳೆ ಬೀಳಲು ರಾಜಸ ಗುಣ ಕಾರಣ. ಮಳೆ ಬಿದ್ದ ನಂತರ ಜೀವಿಗಳು ಫಲವನ್ನು ಅಂದರೆ ಕೃಷಿಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದರಲ್ಲಿ ಇಂದ್ರನ ಕೆಲಸವೇನು? ನೀವು ಇಂದ್ರನನ್ನು ಸಂತುಷ್ಟಿಗೊಳಿಸದಿದ್ದರೆ ಅವನು ಏನು ಮಾಡಬಲ್ಲ? ಅವನಿಂದ ನಮಗೆ ಯಾವ ವಿಶೇಷ ಲಾಭವೂ ಇಲ್ಲ. ಅವನು ಭೂಮಿಯಂತೆ ಸಮುದ್ರದ ಮೇಲೂ ಮಳೆ ಸುರಿಸುತ್ತಾನೆ. ಅದರ ಅಗತ್ಯವೇನಿದೆ? ಮಳೆಗೂ ಅವನನ್ನು ಪೂಜಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಬಾಂಧವ್ಯವಿರುವುದು ಗೋವರ್ಧನ ಗಿರಿ ಮತ್ತು ವೃಂದಾವನ ಕಾಡಿನೊಂದಿಗೆ. ನಮ್ಮ ಮಳೆ-ಬೆಳೆ ಅವಲಂಬಿಸಿರುವುದು ಇವೆರಡನ್ನೇ. ಆದ್ದರಿಂದ, ತಂದೆಯೇ ಸ್ಥಳೀಯ ಬ್ರಾಹ್ಮಣರನ್ನು, ಗೋವರ್ಧನ ಗಿರಿಯನ್ನು ತೃಪ್ತಿಪಡಿಸಲು ಒಂದು ಯಜ್ಞ ಮಾಡೋಣ. ಇಂದ್ರನೊಡನೆ ನಮಗೆ ಸಂಬಂಧವೇ ಬೇಡ” ಎಂದು ಕೃಷ್ಣ ಖಡಾಖಂಡಿತವಾಗಿ ಹೇಳಿದ.

“ಮಗೂ, ನೀನು ಹೇಳಿದಂತೆ ಸ್ಥಳೀಯ ಬ್ರಾಹ್ಮಣರು ಮತ್ತು ಗೋವರ್ಧನ ಗಿರಿಗಾಗಿ ಒಂದು ಪ್ರತ್ಯೇಕ ಯಜ್ಞ ಏರ್ಪಡಿಸುತ್ತೇನೆ. ಆದರೆ ಈಗ ನಾವು ಇಂದ್ರನಿಗಾಗಿ ಯಜ್ಞ ಮಾಡೋಣ” ಎಂದು ನಂದ ಉತ್ತರಿಸಿದ.

ಕೃಷ್ಣ ತನ್ನ ಹಠ ಬಿಡಲಿಲ್ಲ. “ತಂದೆ, ವಿಳಂಬ ಬೇಡ. ಗೋವರ್ಧನ ಗಿರಿ ಯಜ್ಞಕ್ಕೆ ಬಹಳ ಕಾಲ ಬೇಕು. ಈಗ ಇಂದ್ರ ಯಜ್ಞಕ್ಕಾಗಿ ಮಾಡಿರುವ ಸಿದ್ಧತೆಗಳನ್ನೇ ಬಳಸಿಕೊಂಡು ಗೋವರ್ಧನ ಗಿರಿ ಮತ್ತು ಬ್ರಾಹ್ಮಣರನ್ನು ತೃಪ್ತಿಗೊಳಿಸುವ ಯಜ್ಞ ಮಾಡೋಣ” ಎಂದು ಆಗ್ರಹಿಸಿದ.

ಕೊನೆಗೂ ಕೃಷ್ಣನ ಮಾತಿಗೇ ಗೆಲುವು ದೊರೆಯಿತು. ಇಂದ್ರ ಯಜ್ಞ ಕೈಬಿಟ್ಟು, ಅದರ ಬದಲು ಸ್ಥಳೀಯ ಬ್ರಾಹ್ಮಣರು ಮತ್ತು ಗೋವರ್ಧನ ಗಿರಿಯನ್ನು ಸಂತೃಪ್ತಿಗೊಳಿಸುವ ಯಜ್ಞ ನಡೆಸಲು ನಂದ ಮಹಾರಾಜ ಮತ್ತು ಗೋಪಾಲಕರು ಸಮ್ಮತಿಸಿದರು. ಬಳಿಕ ಈ ಯಜ್ಞವನ್ನು ಯಾವ ರೀತಿ ನಡೆಸಬೇಕೆಂಬುದನ್ನು ಶ್ರೀಕೃಷ್ಣ ಗೋಪಾಲಕರಿಗೆ ಸವಿವರವಾಗಿ ತಿಳಿಸಿದ.

ಯಾವ ಯಾವ ಬಗೆಯ ಭಕ್ಷ್ಯ, ಭೋಜನಗಳನ್ನು ತಯಾರಿಸಬೇಕು, ಬ್ರಾಹ್ಮಣರಿಗೆ, ವಿದ್ವಾಂಸರಿಗೆ ಎಂಥ ದಾನಗಳನ್ನು ನೀಡಬೇಕು, ಗೋವುಗಳನ್ನು ಹೇಗೆ ಅಲಂಕರಿಸಬೇಕು, ಕೆಳವರ್ಗದ ಪ್ರಾಣಿಗಳು, ಅಸ್ಪೃಶ್ಯರು ಮತ್ತು ಚಾಂಡಾಲರಿಗೆ ಯಾವ ಜವಾಬ್ದಾರಿ ವಹಿಸಬೇಕು ಎಂಬುದನ್ನು ಕೃಷ್ಣ ಸ್ಪಷ್ಟವಾಗಿ ತಿಳಿಸಿದ.

“ಹಸುಗಳಿಗೆ ಅಲಂಕಾರ ಮಾಡಿ, ಒಳ್ಳೆಯ ಆಹಾರ ನೀಡಬೇಕು. ಗೋವುಗಳಿಗೆ ಒಳ್ಳೆಯ ಹುಲ್ಲನ್ನು ತಿನ್ನಿಸಿದ ನಂತರ ಗೋವರ್ಧನ ಪೂಜೆ ಆರಂಭವಾಗಬೇಕು” ಎಂದು ಕೃಷ್ಣ ನುಡಿದ.

ಹೀಗೆ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ಸ್ವರ್ಗಲೋಕದ ಪರಮ ನಿಯಂತ್ರಕನೆಂದು ಅಹಂಕಾರದಿಂದ ಬೀಗುತ್ತಿದ್ದ ಇಂದ್ರನಿಗೆ ಬುದ್ಧಿ ಕಲಿಸಲು, ಅವನ ಸಂತೃಪ್ತಿಗಾಗಿ ನಡೆಯಬೇಕಿದ್ದ ಯಜ್ಞವನ್ನು ನಿಲ್ಲಿಸಿದ. ಅದರ ಬದಲಿಗೆ ಗೋಪಾಲಕರಿಂದ ಗೋವರ್ಧನ ಪೂಜೆ ನೆರವೇರಿಸುವಲ್ಲಿ ಯಶಸ್ವಿಯಾದ.

ಕೃಷ್ಣನ ಸಲಹೆ ಸೂಚನೆಗಳನ್ನು ಶಿರಸಾ ಪಾಲಿಸಿದ ಗೋಪಾಲಕರು ಗೋವರ್ಧನ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಿದರು. ಮುಗ್ಧ, ಪ್ರಾಮಾಣಿಕ ಗೋಪಾಲಕರು ನಂದ ಮಹಾರಾಜನ ನೇತೃತ್ವದಲ್ಲಿ ಗೋವರ್ಧನ ಗಿರಿಗೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು. ಕೃಷ್ಣನ ಉಪದೇಶದಂತೆ ನಂದ ಮಹಾರಾಜನು ಗೋಪಾಲಕರನ್ನು, ಬ್ರಾಹ್ಮಣ ವಿದ್ವಾಂಸರನ್ನು ಬರಮಾಡಿಕೊಂಡು, ವೈದಿಕ ಮಂತ್ರಗಳ ಪಠಣದೊಂದಿಗೆ ಪೂಜೆ ನಡೆಸಿದ. ಎಲ್ಲರಿಗೂ ಪ್ರಸಾದ ಹಂಚಿದ. ವೃಂದಾವನ ನಿವಾಸಿಗಳು ಒಟ್ಟಾಗಿ ತಮ್ಮ ಗೋವುಗಳಿಗೆ ಅಲಂಕಾರ ಮಾಡಿ ಹುಲ್ಲು ತಿನ್ನಿಸಿದರು. ಹಸುಗಳೊಂದಿಗೆ ಗೋವರ್ಧನ ಗಿರಿಗೆ ಪ್ರದಕ್ಷಿಣೆ ಮಾಡಿದರು. ರಂಗು ರಂಗಿನ ವಸ್ತ್ರ ತೊಟ್ಟ ಗೋಪಿಕಾ ಸ್ತ್ರೀಯರು ಸಂಭ್ರಮದಿಂದ ನಲಿದಾಡಿದರು. ಕೃಷ್ಣ ಲೀಲೆಗಳನ್ನು ಕೊಂಡಾಡಿದರು. ಅರ್ಚನೆಗೆಂದು ಬಂದಿದ್ದ ಬ್ರಾಹ್ಮಣರು ಎಲ್ಲರಿಗೂ ಆಶೀರ್ವದಿಸಿದರು.

ಕೊನೆಯಲ್ಲಿ ತನ್ನ ದಿವ್ಯ ರೂಪ ಪ್ರದರ್ಶಿಸಿದ, ಶ್ರೀ ಕೃಷ್ಣ, ತಾನು ಬೇರೆಯಲ್ಲ; ಗೋವರ್ಧನ ಗಿರಿ ಬೇರೆಯಲ್ಲ  ಎಂಬುದನ್ನು ನಿರೂಪಿಸಿದ. ಗೋಪಾಲಕರು ಗೋವರ್ಧನ ಗಿರಿಗೆ ಅರ್ಪಿಸಿದ್ದ ನೈವೇದ್ಯಗಳನ್ನು ಸ್ವೀಕರಿಸಿದ. “ಗೋವರ್ಧನ ಪೂಜೆಯನ್ನು ನಾನೇ ನಡೆಸುತ್ತಿರುವುದರಿಂದ ಅದನ್ನು ಅಲಕ್ಷ್ಯ ಮಾಡಿದವರನ್ನು ಈ ಗಿರಿಯಲ್ಲಿರುವ ವಿಷ ಸರ್ಪಗಳು ಕಚ್ಚಿ ಕೊಲ್ಲುತ್ತವೆ. ವೃಂದಾವನ ನಿವಾಸಿಗಳು ಗೋವುಗಳ ರಕ್ಷಣೆಗಾಗಿ ಮತ್ತು ತಮ್ಮ ಏಳಿಗೆಗಾಗಿ ಈ ಪೂಜೆಯನ್ನು ನಡೆಸಲೇಬೇಕು” ಎಂದು ಕೃಷ್ಣ ತಿಳಿಸಿದ. ತಮ್ಮ ಆರಾಧ್ಯ ದೈವ ಶ್ರೀಕೃಷ್ಣ ಮತ್ತು ಗೋವರ್ಧನ ಗಿರಿ ಎರಡೂ ಒಂದೇ ಎಂಬುದನ್ನು ಅರಿತ ವೃಂದಾವನ ನಿವಾಸಿಗಳು, ಪೂಜೆ ಮುಗಿಸಿ ಸಂತಸದಿಂದ ತಂತಮ್ಮ ಮನೆಗಳಿಗೆ ತೆರಳಿದರು.

ವೃಂದಾವನ ನಿವಾಸಿಗಳು ತನಗೆ ಅರ್ಪಿಸುತ್ತಿದ್ದ ಯಜ್ಞವನ್ನು ಶ್ರೀಕೃಷ್ಣ ನಿಲ್ಲಿಸಿದ ಎಂಬುದು ಗೊತ್ತಾಗುತ್ತಿದ್ದಂತೆಯೇ ಇಂದ್ರನ ಕೋಪ ನೆತ್ತಿಗೇರಿತು. ಗೋಪಾಲಕರನ್ನು ಖುದ್ದು ಶ್ರೀ ಕೃಷ್ಣನೇ ರಕ್ಷಿಸುತ್ತಿದ್ದಾನೆಂಬುದು ಗೊತ್ತಿದ್ದರೂ ಆತ ಅವರ ಮೇಲೆ ತನ್ನ ಕೋಪ ತೀರಿಸಿಕೊಳ್ಳಲು ಮುಂದಾದ.

ಮೋಡಗಳ ರಾಜನಾದ ಇಂದ್ರ `ಸಂವರ್ತಕ’ ಎಂಬ ಬಲಶಾಲಿ ಮೋಡವನ್ನು ಕರೆಸಿದ. ವೃಂದಾವನಕ್ಕೆ ಹೋಗಿ ಇಡೀ ಪ್ರದೇಶ ಕೊಚ್ಚಿಕೊಂಡು ಹೋಗುವಂಥ ಧಾರಾಕಾರ ಮಳೆ ಸುರಿಸಬೇಕು ಎಂದು ಅದಕ್ಕೆ ಆದೇಶಿಸಿದ.

ರಾಕ್ಷಸರು ಬಲಶಾಲಿಗಳಾದಾಗ ಪರಮ ನಿಯಂತ್ರಕ ದೇವ ಪುರುಷನನ್ನು ಧಿಕ್ಕರಿಸಿ

ನಡೆಯುತ್ತಾರೆ. ಇಂದ್ರನೇನೂ ರಾಕ್ಷಸನಲ್ಲ. ಆದರೆ ಭೌತಿಕ ಜಗತ್ತಿನಲ್ಲಿ ತನಗಿದ್ದ ಮಹತ್ತರ ಸ್ಥಾನದಿಂದಾಗಿ ಅಹಂಕಾರಿಯಾಗಿ ಮೆರೆಯುತ್ತಿದ್ದ. ಆ ಕಾಲದ ಮಟ್ಟಿಗಾದರೂ ತಾನು ಶ್ರೀಕೃಷ್ಣನಷ್ಟೇ ಬಲಶಾಲಿ ಎಂಬ ಭ್ರಮೆಯಲ್ಲಿ ಮೈ ಮರೆತಿದ್ದ.

“ವೃಂದಾವನ ನಿವಾಸಿಗಳ ಸೊಕ್ಕು ನೋಡಿ! ಕಾಡು ಮನುಷ್ಯರು. ಕೃಷ್ಣನಲ್ಲಿ ಅತಿ ಮೋಹ ಬೆಳೆಸಿಕೊಂಡಿರುವ ಅವರಿಗೆ ದೇವತೆಗಳನ್ನೇ ಧಿಕ್ಕರಿಸುವಷ್ಟು ಧೈರ್ಯ ಬಂದಿದೆ. ಕೃಷ್ಣ ಒಬ್ಬ ಸಾಮಾನ್ಯ ಮನುಷ್ಯ ಅಷ್ಟೆ” ಎಂದು ಅಬ್ಬರಿಸಿದ ಇಂದ್ರ.

“ಗೋಪಾಲಕರು ಕೃಷ್ಣ ಎನ್ನುವ ಹರಟೆಮಲ್ಲನ ಮಾತು ಕೇಳಿ ನನ್ನ ಅಧಿಕಾರವನ್ನು ಉಪೇಕ್ಷೆ ಮಾಡಿದ್ದಾರೆ. ಅವನಿನ್ನೂ ಮಗು. ಗೋಪಾಲಕರು ಆ ಮಗುವಿನ ಮಾತು ಕೇಳಿಕೊಂಡು ನನಗೆ ಕೋಪ ಬರಿಸಿದ್ದಾರೆ.” ಎಂದು ಕೂಗಾಡಿದ ಸ್ವರ್ಗಾಧಿಪತಿ.

“ಕೃಷ್ಣ ಹರಟೆಮಲ್ಲ, ಅವನದು ಹುಡುಗಾಟಿಕೆ. ತಾನು ಬಹಳ ತಿಳಿದವನು ಎಂದುಕೊಂಡಿದ್ದಾನೆ. ಬ್ರಹ್ಮಾಂಡದ ವಿಚಾರ ಅವನಿಗೇನು ಗೊತ್ತು. ಕೃಷ್ಣ ತಮ್ಮ ಜತೆಗಿದ್ದಾನೆಂದು ಅಹಂಕಾರದಿಂದ ಬೀಗುತ್ತಿರುವ ವೃಂದಾವನ ನಿವಾಸಿಗಳಿಗೆ ಶಿಕ್ಷೆ ಆಗಲೇಬೇಕು. ವೃಂದಾವನವನ್ನು ಮುಳುಗಿಸಿ ಬಿಡುವಂತೆ ಸಂವರ್ತಕ ಮೋಡಕ್ಕೆ ಆಜ್ಞಾಪಿಸಿದ್ದೇನೆ. ಗೋಪಾಲಕರು ಅವರ ಹಸುಗಳ ಸಮೇತ ನಾಶವಾಗಬೇಕು” ಎಂದು ಗಹಗಹಿಸಿದ ಇಂದ್ರ.

ಅದೇಕೋ ಸಂವರ್ತಕ ಮತ್ತು ಅದರ ಸಹವರ್ತಿ ಮೋಡಗಳಿಗೆ ವೃಂದಾವನಕ್ಕೆ ಹೋಗಲು ಭಯವೆನಿಸಿತು. ಆಗ ಇಂದ್ರ, “ನೀವು ಮೊದಲು ಹೋಗಿ, ನಾನು ಐರಾವತವನ್ನೇರಿ ಪ್ರಚಂಡ ಮಾರುತಗಳ ಜತೆ ಬರುತ್ತೇನೆ. ವೃಂದಾವನ ವಿನಾಶಕ್ಕೆ ನನ್ನೆಲ್ಲಾ ಶಕ್ತಿಗಳನ್ನು ಪ್ರಯೋಗಿಸುತ್ತೇನೆ” ಎಂದು ಆರ್ಭಟಿಸಿದ.

ಇಂದ್ರನ ಆದೇಶದ ಮೇರೆಗೆ ಎಲ್ಲಾ ಅಪಾಯಕಾರಿ ಮೋಡಗಳೂ ವೃಂದಾವನದ ಮೇಲೆ ಜಮಾವಣೆಗೊಂಡವು. ತಮ್ಮ ಸಂಪೂರ್ಣ ಶಕ್ತಿ ಬಳಸಿ ವೃಂದಾವನದ ಮೇಲೆ ಧಾರಾಕಾರ ಮಳೆ ಸುರಿಸಲು ಆರಂಭಿಸಿದವು. ಒಂದೇ ಸಮನೆ ಗುಡುಗು, ಸಿಡಿಲುಗಳ ಆರ್ಭಟ, ಮಿಂಚಿನ ಸಂಚಾರ, ವೃಂದಾವನವೇ ಹಾರಿ ಹೋಗುವುದೇನೋ ಎಂಬಂಥ ಗಾಳಿ. ಆಕಾಶವೇ ಕಳಚಿ ಬೀಳುತ್ತದೆಯೇನೋ ಎಂಬಂಥ ಜಡಿ ಮಳೆ. ಮಳೆ ಹನಿಗಳು ಬಾಣಗಳಂತೆ ಬಂದು ನೆಲಕ್ಕೆ ಚುಚ್ಚುತ್ತಿದ್ದವು. ಮಳೆಯ ತೀವ್ರತೆ ಹೆಚ್ಚುತ್ತಾ ಸಾಗಿದಂತೆಲ್ಲಾ ನದಿ, ತೊರೆಗಳಲ್ಲೆಲ್ಲಾ ಮಹಾಪೂರ ಉಕ್ಕಿ ಹರಿದು ಕೊನೆಗೆ ಇಡೀ ವೃಂದಾವನ ನೀರಿನಲ್ಲಿ ಮುಳುಗಿತು. ಪ್ರಾಣಿ ಪಕ್ಷಿಗಳ ಅವಸ್ಥೆಯಂತೂ ಹೇಳ ತೀರದು. ಜಡಿ ಮಳೆಯ ಜತೆಗೆ ಪ್ರಚಂಡ ಮಾರುತ ಬೇರೆ. ವೃಂದಾವನದ ಪ್ರತಿ ಜೀವಿಯೂ ಕೊರೆವ ಚಳಿಯಿಂದ ನಡುಗಲಾರಂಭಿಸಿತು. ವೃಂದಾವನ ನಿವಾಸಿಗಳು ಬೇರೆ ದಾರಿ ಕಾಣದೇ ಶ್ರೀಕೃಷ್ಣನಿಗೆ ಮೊರೆ ಇಡಲಾರಂಭಿಸಿದರು. ಹಸುಗಳಂತೂ, ತಲೆ ತಗ್ಗಿಸಿ ತಮ್ಮ ಕರುಗಳೊಂದಿಗೆ ಆಶ್ರಯ ಅರಸಿ ಗೋವಿಂದನ ಚರಣ ಕಮಲದ ಬಳಿ ಬಂದು ನಿಂತವು.

“ಪ್ರಿಯ ಕೃಷ್ಣ, ನೀನು ಸರ್ವಶಕ್ತ. ಭಕ್ತರಲ್ಲಿ ನಿನಗೆ ಅಪಾರ ಪ್ರೀತಿ, ಇಂದ್ರನ ಕೋಪಕ್ಕೆ ಸಿಲುಕಿ ತತ್ತರಿಸಿರುವ ನಮ್ಮನ್ನು ರಕ್ಷಿಸು” ಎಂದು ಗೋಪಾಲಕರು ಕೃಷ್ಣನನ್ನು ಬೇಡಿದರು.

ತನಗಾಗಿ ಯಜ್ಞ ನಡೆಸಲಿಲ್ಲ ಎಂಬ ಕೋಪದಿಂದ ಇಂದ್ರನು, ಮಳೆಗಾಲವಲ್ಲದಿದ್ದರೂ ಧಾರಾಕಾರ ಮಳೆ ಸುರಿಸುತ್ತಿದ್ದಾನೆ ಎಂಬುದು ಕೃಷ್ಣನಿಗೆ ಅರ್ಥವಾಯಿತು. ಇದು ಇಂದ್ರನ ಕೋಪದ ಉದ್ದೇಶಪೂರ್ವಕ ಪ್ರದರ್ಶನ ಎಂಬುದು ಅವನಿಗೆ ತಿಳಿಯಿತು.

“ಇಂದ್ರನು ತಾನೇ ಸರ್ವಶಕ್ತನೆಂದುಕೊಂಡು ಶಕ್ತಿ ಪ್ರದರ್ಶನ ನಡೆಸುತ್ತಿದ್ದಾನೆ. ನಾನು ಅವನಿಗೆ ಸರಿಯಾದ ಉತ್ತರ ನೀಡುತ್ತೇನೆ. ಬ್ರಹ್ಮಾಂಡ ನಿರ್ವಹಣೆಯಲ್ಲಿ ಆತ ಸ್ವತಂತ್ರನಲ್ಲ ಎಂಬುದನ್ನು ತೋರಿಸುತ್ತೇನೆ. ಅವನ ಹುಸಿ ಪ್ರತಿಷ್ಠೆ ತೊಡೆದು ಹಾಕುತ್ತೇನೆ” ಎಂದು ಹೇಳಿದ ಶ್ರೀಕೃಷ್ಣ.

“ದೇವತೆಗಳು ನನ್ನ ಭಕ್ತರು. ಅವರು ಪರಮಾಧಿಕಾರ ಮೆರೆಯುವಂತಿಲ್ಲ. ಇಂದ್ರನಿಗೆ ಭೌತಿಕ ಶಕ್ತಿಯಿಂದಾಗಿ ಅಹಂಕಾರ ಬಂದಿದೆ. ಅವನಿಗೆ ಬುದ್ಧಿ ಕಲಿಸುತ್ತೇನೆ. ವೃಂದಾವನ ನಿವಾಸಿಗಳು ಶುದ್ಧ ಭಕ್ತರು. ಅವರ ರಕ್ಷಣೆ ನನ್ನ ಹೊಣೆ. ನನ್ನ ನಿಗೂಢ ಶಕ್ತಿಯಿಂದ ಅವರನ್ನು ಕಾಪಾಡುತ್ತೇನೆ” ಎನ್ನುತ್ತಾ ಶ್ರೀಕೃಷ್ಣ ಈ ಜಗತ್ತಿಗೆ ತನ್ನ ಮತ್ತೊಂದು ಮಹಾನ್‌ ಲೀಲೆಯನ್ನು ತೋರಲು ಅನುವಾದ.

ಮಗುವು ನೆಲದಿಂದ ನಾಯಿಕೊಡೆಯನ್ನು ಎತ್ತಿಕೊಳ್ಳುವಂತೆ ಅನಾಯಾಸವಾಗಿ ಬಾಲಕ ಕೃಷ್ಣ ಗೋವರ್ಧನ ಗಿರಿಯನ್ನು ಎಡಗೈ ಕಿರು ಬೆರಳಿನಲ್ಲಿ ಎತ್ತಿ ಹಿಡಿದ! “ಪ್ರೀತಿಯ ಸೋದರರೇ, ತಂದೆಯೇ, ವೃಂದಾವನದ ನಿವಾಸಿಗಳೇ, ನಾನು ಎತ್ತಿಹಿಡಿದಿರುವ ಗೋವರ್ಧನ ಗಿರಿ ಛತ್ರಿಯ ಕೆಳಗೆ ಬನ್ನಿ. ಇಲ್ಲಿ ನೀವು ಕ್ಷೇಮವಾಗಿರಬಹುದು. ಈ ಗಿರಿ ಕೆಳಕ್ಕೆ ಬೀಳಬಹುದೆಂದು ಹೆದರಬೇಡಿ. ಮಳೆ, ಗಾಳಿಯ ಹೊಡೆತದಿಂದ ತತ್ತರಿಸಿರುವ ನಿಮಗೆ ಈ ಗಿರಿಯೇ ಸರಿಯಾದ ರಕ್ಷಣೆ ನೀಡಬಲ್ಲದು. ಈ ಮಹಾ ಛತ್ರಿಯ ಕೆಳಗೆ ನಿಮ್ಮ ಪ್ರಾಣಿಗಳೊಂದಿಗೆ ಸುಖವಾಗಿರಿ” ಎನ್ನುತ್ತಾ ಕೃಷ್ಣ ಎಲ್ಲರನ್ನು ಕರೆದ. ತಕ್ಷಣ ವೃಂದಾವನ ನಿವಾಸಿಗಳೆಲ್ಲಾ ತಮ್ಮ ಆಸ್ತಿ-ಪಾಸ್ತಿ, ಪ್ರಾಣಿಗಳ ಸಮೇತ ಗೋವರ್ಧನಗಿರಿಯ ಕೆಳಗೆ ಆಶ್ರಯ ಪಡೆದರು. ಈಗ ಎಲ್ಲರ ಮನದಲ್ಲೂ ಸುರಕ್ಷತಾ ಭಾವ ಮೂಡಿತು. ದೇವೋತ್ತಮ ಪರಮ ಪುರುಷನ ನೆರಳಲ್ಲಿರುವಾಗ ಇನ್ನೆಂಥ ಭಯ, ಅಲ್ಲವೇ?

ಹೀಗೆ ವೃಂದಾವನ ನಿವಾಸಿಗಳು ಮತ್ತು ಪ್ರಾಣಿಗಳು ಸತತ ಒಂದು ವಾರ ಕಾಲ ಹಸಿವು, ಬಾಯಾರಿಕೆ, ಮತ್ಯಾವ ಬಾಧೆಯೂ ಇಲ್ಲದೇ ಗೋವರ್ಧನ ಗಿರಿಯ ನೆರಳಿನಲ್ಲಿ ಆಶ್ರಯ ಪಡೆದರು. ತನ್ನ ಎಡಗೈ ಕಿರುಬೆರಳಿನಿಂದ ಶ್ರೀಕೃಷ್ಣ ಅಂಥದ್ದೊಂದು ಬೃಹತ್‌ ಗಿರಿಯನ್ನು ಲೀಲಾಜಾಲವಾಗಿ ಎತ್ತಿ ಹಿಡಿದಿದ್ದನ್ನು ಕಂಡು ಮುಗ್ಧ ಗೋಪಾಲಕರು ಬೆರಗಾದರು; ಧನ್ಯರಾದರು.

ಇತ್ತ ಕೃಷ್ಣನ ಅಸಾಧಾರಣ ಶಕ್ತಿ ನೋಡಿ ಸ್ವರ್ಗಾಧಿಪತಿ ಇಂದ್ರ ಸ್ತಂಭೀಭೂತನಾದ. ನಿಧಾನವಾಗಿ ಅವನ ಹುಸಿ ಪ್ರತಿಷ್ಠೆ ಹಠ, ಕೋಪಗಳು ಕರಗಿದವು. ಸಂಕಲ್ಪ ಸಡಿಲಿಸಿತು. ಅದರ ಪರಿಣಾಮವಾಗಿ ಮಳೆ, ಗಾಳಿ ಮಾಯವಾಗಿ ಆಗಸದಲ್ಲಿ ಮತ್ತೆ ಸೂರ್ಯ ಇಣುಕಿದ.

ಆಗ ಗೋವರ್ಧನ ಗಿರಿಧರ ಶ್ರೀಕೃಷ್ಣ, “ಪ್ರೀತಿಯ ಗೋಪಾಲಕರೇ, ಈಗ ಮಳೆ, ಗಾಳಿ ನಿಂತಿದೆ. ನೀವೆಲ್ಲ ನಿಮ್ಮ ಆಸ್ತಿ ಪಾಸ್ತಿ, ಕುಟುಂಬದೊಂದಿಗೆ ನಿಮ್ಮ ಮನೆಗಳಿಗೆ ಹಿಂತಿರುಗಬಹುದು” ಎಂದು ವೃಂದಾವನ ನಿವಾಸಿಗಳಿಗೆ ಅಪ್ಪಣೆ ಕೊಡಿಸಿದ.

ದೇವೋತ್ತಮ ಪರಮ ಪುರುಷನ ಆಜ್ಞೆಯಂತೆ ಗೋಪಾಲಕರು ತಮ್ಮ ಗೋವುಗಳು, ಮತ್ತಿತರ ಸರಕು ಸರಂಜಾಮುಗಳೊಂದಿಗೆ ಸಾಲಾಗಿ ಮನೆಗಳತ್ತ ಹೊರಟರು. ಗೋಪಾಲಕರೆಲ್ಲ ಹೊರಟನಂತರ ಕೃಷ್ಣನು ಗೋವರ್ಧನ ಗಿರಿಯನ್ನು ಅದರ ಮೂಲ ಸ್ಥಳದಲ್ಲೇ ಇರಿಸಿದ.

ಇದಾದ ಸ್ವಲ್ಪ ಹೊತ್ತಿಗೆ ಗೋಪಾಲಕರು ಮತ್ತೆ ಹಿಂಡು ಹಿಂಡಾಗಿ ಶ್ರೀಕೃಷ್ಣನ ಬಳಿಗೆ ಬಂದರು. ಆನಂದಾತಿರೇಕದಿಂದ ಆತನನ್ನು ಆಲಂಗಿಸಿಕೊಂಡರು. ಗೋಪಿಕಾ ಸ್ತ್ರೀಯರು ತಮ್ಮ ಆನಂದ ಭಾಷ್ಪ ಬೆರೆತ ಮೊಸರನ್ನು ಅವನಿಗೆ ಅರ್ಪಿಸಿದರು. ಮುದ್ದುಕೃಷ್ಣನನ್ನು ಮನಸಾರೆ ಹರಸಿದರು. ಮಾತೆಯರಾದ ಯಶೋಧೆ, ರೋಹಿಣಿ, ತಂದೆ ನಂದ ಮಹಾರಾಜ, ಅಣ್ಣ ಬಲರಾಮ ಎಲ್ಲರೂ ಪ್ರೀತಿಯಿಂದ ಕೃಷ್ಣನನ್ನು ಬಿಗಿದಪ್ಪಿದರು. ಹೃದಯ ತುಂಬಿ ಬಂದು ಮತ್ತೆ ಮತ್ತೆ ಆಶೀರ್ವದಿಸಿದರು. ಆಗಸದಿಂದ ಪುಷ್ಪವೃಷ್ಟಿಯಾಯಿತು. ದೇವತೆಗಳು ಬಗೆ ಬಗೆಯ ಶಂಖಗಳನ್ನು ಊದಿದರು; ನಗಾರಿಗಳನ್ನು ಬಾರಿಸಿದರು. ಗಂಧರ್ವರು ಪ್ರಭುವನ್ನು ಸಂತೋಷ ಪಡಿಸಲು ತಂಬೂರಿ ನುಡಿಸಿ ಹಾಡತೊಡಗಿದರು. ಇಡೀ ವೃಂದಾವನದಲ್ಲಿ ಸಂತಸದ ಹೊನಲು.

ನಂತರ ಶ್ರೀಕೃಷ್ಣ ತನ್ನ ಆತ್ಮೀಯ ಸ್ನೇಹಿತರು, ಗೋವುಗಳ ಗುಂಪಿನೊಂದಿಗೆ ಮನೆಗೆ ಹಿಂತಿರುಗಿದ. ಈ ಘಟನೆಯ ನಂತರ ಆತ ಗೋಪಾಲಕರು ಮಾತ್ರವಲ್ಲದೇ, ಸಮಸ್ತ ದೇವತೆಗಳ ಪಾಲಿಗೆ ಇನ್ನಷ್ಟು ಹತ್ತಿರದವನೂ, ಎತ್ತರದವನೂ ಆದ.

ಇದೇ ವೇಳೆಗೆ ಇಂದ್ರನ ಅಹಂಕಾರದ ಪೊರೆಯೂ ಸಂಪೂರ್ಣವಾಗಿ ಕಳಚಿ ಬಿತ್ತು. ಕೃಷ್ಣನಿಗೆ ಸವಾಲೆಸೆದು ತಾನು ಅಪರಾಧ ಮಾಡಿದ್ದೇನೆಂಬುದು ಆತನಿಗೆ ಮನದಟ್ಟಾಯಿತು. ಸ್ವರ್ಗಾಧಿಪತಿಯು ಅವಮಾನ, ಸೋಲು, ಪಶ್ಚಾತ್ತಾಪಗಳಿಂದ ಕುಗ್ಗಿ ಹೋದ. ಯಾರೂ ಇಲ್ಲದ ಅಜ್ಞಾತ ಸ್ಥಳದಲ್ಲಿ ಆತ ಕೃಷ್ಣನ ಮುಂದೆ ಸಂಕೋಚದ ಮುದ್ದೆಯಾಗಿ ನಿಂತುಕೊಂಡ. ಕೃಷ್ಣನ ಚರಣಗಳಿಗೆ ಎರಗಿದ. “ನನ್ನ ಪ್ರೀತಿಯ ಪ್ರಭುವೆ, ನೀನು ಹುಸಿ ಪ್ರತಿಷ್ಠೆಯಿಂದ ಬೀಗುತ್ತ, ಗೋಪಾಲಕರು ನನಗೆ ಮಾಡಬೇಕಿದ್ದ ಪೂಜೆ ತಪ್ಪಿಸಿ, ಗೌರವ-ಕಾಣಿಕೆಗಳನ್ನು ಕಸಿದುಕೊಂಡೆ ಎಂದು ಭಾವಿಸಿದೆ. ಗೋವರ್ಧನ ಯಜ್ಞದ ಹೆಸರಲ್ಲಿ ನನ್ನ ಗೌರವವನ್ನು ನೀನು ಕಬಳಿಸಿದೆ ಎಂದು ತಪ್ಪು ತಿಳಿದೆ. ನೀನೇ ಪರಮ ಪ್ರಭು, ದೇವ ಪುರುಷ ಮತ್ತು ಎಲ್ಲ ಭೌತಿಕ ಗುಣಗಳನ್ನು ಮೀರಿದವನು ಎಂಬುದು ಈಗ ಅರ್ಥವಾಯಿತು. ಸಾತ್ವಿಕ ಗುಣಕ್ಕೆ ಅತೀತವಾಗಿರುವ ವಿಶುದ್ಧ ಸತ್ವದಲ್ಲಿ ನಿನ್ನ ಅಲೌಕಿಕ ಸ್ಥಾನವಿದೆ. ನಿನ್ನ ನಾಮ, ಕೀರ್ತಿ, ಗುಣ ಮತ್ತು ಲೀಲೆಗಳು ಈ ಭೌತಿಕ ಪ್ರಕೃತಿಯನ್ನು ಮೀರಿವೆ. ಕಠಿಣ ತಪಸ್ಸು ಮಾಡಿದವನು, ರಾಜಸ, ತಾಮಸಗಳಂಥ ಭೌತಿಕ ಆಕ್ರಮಣದಿಂದ ಮುಕ್ತನಾದವನು ಮಾತ್ರ ನಿನ್ನ ಬಳಿ ಬರಬಹುದು” ಎಂದು ಇಂದ್ರ ಕ್ಷಮೆ ಯಾಚಿಸುವಂತೆ ನುಡಿದ.

ನಂತರ ಮುಂದುವರಿದು, “ಪ್ರಿಯ ಪ್ರಭುವೇ, ನೀನೇ ಈ ಬ್ರಹ್ಮಾಂಡದ ಮೂಲ ಪಿತೃ. ನೀನೇ ಬ್ರಹ್ಮಾಂಡದ ಪರಮ ಗುರು. ನೀನೇ ಎಲ್ಲದರ ಒಡೆಯ. ಎಲ್ಲಾ ಅಪರಾಧಿಗಳಿಗೆ ಶಿಕ್ಷೆ ಕೊಡಲು ನೀನೇ ಸಮರ್ಥ. ಈ ಭೌತಿಕ ಜಗತ್ತಿನಲ್ಲಿ ತಾವೇ ಪರಮ ಪ್ರಭುಗಳು, ಸರ್ವ ಸ್ವತಂತ್ರರು ಎಂದು ಭ್ರಮಿಸುವ ನನ್ನಂಥ ಮೂರ್ಖರು ಬಹಳ ಮಂದಿ ಇದ್ದಾರೆ. ನೀನು ಎಷ್ಟೊಂದು ದಯಾಳು ಎಂದರೆ ಅಂಥ ಮೂರ್ಖರನ್ನು ಶಿಕ್ಷಿಸದೇ, ಅವರ ಹುಸಿ ಪ್ರತಿಷ್ಠೆ ಅಡಗಿಸಿ, ನಾನೇ ದೇವೋತ್ತಮ ಪರಮ ಪುರುಷ ಎಂಬುದನ್ನು ನಿರೂಪಿಸುವಂಥ ಸನ್ನಿವೇಶಗಳನ್ನು ಸೃಷ್ಟಿ ಮಾಡುವೆ. ಪ್ರಭುವೇ, ನಾನು ಹುಸಿ ಜಂಭಪಟ್ಟು ಮಹಾಪರಾಧ ಮಾಡಿದ್ದೇನೆ. ನಾನು ಮೂರ್ಖರಲ್ಲಿ ಮೂರ್ಖ. ನನ್ನನ್ನು ಕ್ಷಮಿಸು. ನಾನು ಇನ್ನೆಂದೂ ಇಂಥ ಅಪರಾಧ ಮಾಡದಂತೆ ಆಶೀರ್ವದಿಸು” ಎಂದು ಶ್ರೀಕೃಷ್ಣನಲ್ಲಿ ಯಾಚಿಸಿದ.

ಇಂದ್ರನ ಮಾತು ಕೇಳಿದ ಶ್ರೀಕೃಷ್ಣ ಮೋಹಕ ಮಂದಹಾಸ ಬೀರುತ್ತಾ, “ಪ್ರಿಯ ಇಂದ್ರನೇ, ನನ್ನ ನಿಷ್ಕಾರಣ ಕರುಣೆ ತೋರಲು ಮತ್ತು ನಾನೇ ನಿನ್ನ ಶಾಶ್ವತ ಪ್ರಭು ಎಂಬುದನ್ನು ನೆನಪು ಮಾಡಿಕೊಡಲು ಮಾತ್ರ ನಾನು ನಿನ್ನ ಯಜ್ಞ ನಿಲ್ಲಿಸಿದೆ. ನಾನು ನಿನಗೆ ಮಾತ್ರವಲ್ಲ, ಸಕಲ ದೇವತೆಗಳಿಗೂ ಪ್ರಭು. ನಿನ್ನೆಲ್ಲಾ ಭೌತಿಕ ಶ್ರೀಮಂತಿಕೆಗಳಿಗೆ ನಾನೇ ಕಾರಣ ಎಂಬುದನ್ನು ಮರೆಯಬೇಡ” ಎಂದು ಕ್ಷಮಾದಾನದ ಧಾಟಿಯಲ್ಲಿ ನುಡಿದ.

“ಇನ್ನು ನೀನು ಸ್ವರ್ಗ ಲೋಕಕ್ಕೆ ಹಿಂತಿರುಗಿ ಅಲ್ಲಿ ನಿನ್ನ ಆಡಳಿತ ಮುಂದುವರಿಸು. ಆದರೆ ನನ್ನನ್ನು ಮರೆತು ಹುಸಿ ಅಹಂಕಾರ ಮೆರೆಯದಿರು” ಎಂದು ಬುದ್ಧಿವಾದ ಹೇಳಿ ಇಂದ್ರನನ್ನು ಕಳಿಸಿಕೊಟ್ಟ ಕೃಷ್ಣ.

ಕೃಷ್ಣನ ಅಪ್ಪಣೆ ಪಡೆದ ಇಂದ್ರನು ಆಕಾಶದಲ್ಲಿ ಹೋಗುತ್ತಿರುವಾಗ ಎಲ್ಲಾ ದೇವತೆಗಳೂ ಅವನನ್ನು ದಾಟಿ ಹೋದರು. ಎಲ್ಲರೂ ದೇವೋತ್ತಮ ಪರಮ ಪುರುಷನ ಲೀಲೆಯನ್ನು ಕೊಂಡಾಡಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi