ವೈವಸ್ವತ ಮನುವಿನ ಮಹಾನ್‌ ವಂಶ!

ತಮ್ಮೆದುರಿಗೆ ವಿಸ್ತಾರವಾಗಿ ನೆರೆದಿದ್ದ ಋಷಿಗಣವನ್ನು ಮತ್ತೊಮ್ಮೆ ನೋಡಿ ಋಷಿಗಳ ಮುಖ್ಯಸ್ಥರಾದ ಶೌನಕ ಮುನಿಗಳು ಅತಿ ಗೌರವದಿಂದ ಸನಿಹದಲ್ಲಿ ಪ್ರಧಾನವಾಗಿ ವಿರಾಜಮಾನರಾಗಿದ್ದ ಸೂತ ಮುನಿಗಳನ್ನು ಕುರಿತು `ಶ್ರೀಮದ್ಭಾಗವತದ ಪುಣ್ಯ ಕಥಾ ಶ್ರವಣವನ್ನು, ಮುಂದುವರಿಸುವಂತೆ ಕೇಳಿಕೊಂಡರು. ಪೂಜ್ಯ ಸೂತ ಮುನಿಗಳು ತುಟಿಯಂಚಿನಲ್ಲಿಯೇ ಕಂಡೂ ಕಾಣದಂತೆ ನಕ್ಕರು. ವೈವಸ್ವತ ಮನುವಿನ ಮಹಾನ್‌ ವಂಶದ ಕಥೆ ಹೇಳಲು ಆರಂಭಿಸಿದರು. ನೈಮಿಷಾರಣ್ಯದ ಆ ಬ್ರಹ್ಮಾಂಡ ವನ ಪ್ರದೇಶದ ಪರಿಸರದಲ್ಲಿದ್ದ ಅಸಂಖ್ಯಾತ ಋಷಿ ಸಮೂಹ ಶ್ರೀಮದ್ಬಾಗವತದ ಅಂದಿನ ಸ್ವಾರಸ್ಯ ಆಗುಹೋಗುಗಳನ್ನು ಕೇಳಲು ಕುತೂಹಲದಿಂದ ಕುಳಿತಿತ್ತು…

ನೈಮಿಷಾರಣ್ಯದಲ್ಲಿ ಗಾಢ ಮೌನ ನೆಲೆಸಿತ್ತು. ಮುಂಜಾವು ಒಡೆದು ಎಳೆ ಬಿಸಿಲು ಸಾವಕಾಶವಾಗಿ ಪಸರಿಸಿಕೊಳ್ಳುತ್ತಿತ್ತು. ಬೆಳಗಿನ ಇಬ್ಬನಿ ಕರಗಿ ಅಲ್ಲಲ್ಲಿ ಮರಗಿಡಗಳ ರೆಂಬೆಗಳಿಂದ, ಹಸುರೆಲೆಗಳಿಂದ ಕೆಳಗೆ ಮುತ್ತುಗಳಂತೆ ಉದುರುತ್ತಿತ್ತು. ಮೆಲ್ಲನೆ ಪಕ್ಷಿಗಳ ಕಲರವ ಪ್ರಾರಂಭವಾಗಿ ಮಹಾವೃಕ್ಷಗಳು ಪಕ್ಷಿಗಳ ಸಂತೆಗಳಾದವು.

ತಮ್ಮೆದುರಿಗೆ ವಿಸ್ತಾರವಾಗಿ ನೆರೆದಿದ್ದ ಋಷಿಗಣವನ್ನು ಮತ್ತೊಮ್ಮೆ ನೋಡಿ ಋಷಿಗಳ ಮುಖ್ಯಸ್ಥರಾದ ಶೌನಕ ಮುನಿಗಳು ಅತಿ ಗೌರವದಿಂದ ಸನಿಹದಲ್ಲಿ ಪ್ರಧಾನವಾಗಿ ವಿರಾಜಮಾನರಾಗಿದ್ದ ಸೂತ ಮುನಿಗಳನ್ನು ಕುರಿತು ಹೇಳಿದರು:

`ಪೂಜ್ಯ ಮುನಿವರ್ಯ, ಗೌರವಾನ್ವಿತ ತಪಸ್ವಿಗಳಾದ ನೀವು,  ಪೂಜ್ಯ ವ್ಯಾಸಮಹರ್ಷಿಗಳು ಶ್ರೀಮದ್ಭಾಗವತ ರಚಿಸಿದ ಮೇಲೆ, ಮೊಟ್ಟ ಮೊದಲ ಬಾರಿಗೆ ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಪುರಾಣ ಶ್ರವಣ ಮಾಡಿಸಿದ ಆ ಏಳು ದಿನಗಳೂ ಅಲ್ಲಿ ಉಪಸ್ಥಿತರಿದ್ದ ಪುಣ್ಯಾತ್ಮರು. ಅಲ್ಲಿನ  ಪರಿಸರ ಎಂತಹ ಪರಿಶುದ್ಧವಾದುದು, ಪಾಪ ಪರಿಹಾರಕವಾದುದು. ಎಂದು ಕಲ್ಪಿಸಿಕೊಂಡು ನಮಗೆಲ್ಲ ಅತ್ಯಂತ ಆನಂದವಾಗುತ್ತಿದೆ. ವ್ಯಾಸ ಪುತ್ರರಾದ ಪೂಜ್ಯ ಶುಕ ಮುನಿಗಳ ಮುಖೇನ ಇದನ್ನು ಆಲಿಸಿದ ಪುಣ್ಯಾತ್ಮರಾದ ತಾವು ಈಗ ಅದನ್ನು ಅನೇಕ ದಿವಸಗಳಿಂದ ನಮಗೆ ಶ್ರವಣ ಮಾಡಿಸುತ್ತಿರುವುದು ನಮ್ಮೆಲ್ಲರ ಪುಣ್ಯ ವಿಶೇಷ. ಅಖಂಡವಾಗಿ ಇದನ್ನು ಆಲಿಸುತ್ತ ಇಲ್ಲಿನ ಋಷಿಗಣ, ಈ ನೈಮಿಷಾರಣ್ಯ ಮತ್ತು ಇಲ್ಲಿನ ಉಪಜೀವಿಗಳೆಲ್ಲ ಇದರಿಂದ ಪಾವನವಾದಂತಾಗಿದೆ. ನಮಗೆ ಮುಂದಿನ ಕಥಾ ವಿಚಾರಗಳನ್ನು ಕೇಳಲು ಮನಸ್ಸು ತವಕಿಸುತ್ತಿದೆ. ದಯವಿಟ್ಟು ಕಥಾಶ್ರವಣವನ್ನು ಮುಂದುವರೆಸಿ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸಬೇಕೆಂದು ಪ್ರಾರ್ಥಿಸುತ್ತೇವೆ!

ಪೂಜ್ಯ ಸೂತ ಮುನಿಗಳು ತುಟಿಯಂಚಿನಲ್ಲಿಯೇ ಕಂಡೂ ಕಾಣದಂತೆ ನಕ್ಕರು. ಮತ್ತೊಮ್ಮೆ ಅಲ್ಲಿ ನೆರೆದ ಋಷಿಗಳನ್ನೂ, ತಮಗೆ ಬಹು ಪ್ರಿಯರಾದ ಶೌನಕ ಮುನಿಗಳನ್ನು ನೋಡಿ ಮಾತನಾಡಿದರು :

“ಪ್ರಿಯ ಋಷಿ ಬಂಧುಗಳೇ, ಪ್ರಿಯರಾದ ಶೌನಕರೇ, ನಿಮ್ಮ ಮಾತುಗಳನ್ನು ಕೇಳುತ್ತ  ನನಗೆ, ಮೊಟ್ಟ ಮೊದಲು ಶುಕ ಮುನಿಗಳಿಗೆ ಪರೀಕ್ಷಿತ ಮಹಾರಾಜ ಮಾಡಿಕೊಂಡ ಪ್ರಾರ್ಥನೆಯ ನೆನಪಾಗುತ್ತದೆ. ತನ್ನ ಸಾವು ಖಚಿತ ಎನ್ನುವುದು ಅವನಿಗೆ ತಿಳಿದಾಗ, ತನ್ನ ರಾಜ್ಯ, ವೈಭವ, ಇತಿಹಾಸ, ಮಡದಿ ಮಕ್ಕಳು ಮೊದಲಾಗಿ ಯಾವುದೂ ಮುಖ್ಯವಾಗುವುದಿಲ್ಲ. ಆಧ್ಯಾತ್ಮಿಕ ಜ್ಞಾನದ ಕಡೆಗೆ ಅವನ ಮನಸ್ಸು ವಾಲುತ್ತದೆ. ಸರ್ವಸ್ವವನ್ನೂ ತೊರೆದು ಗಂಗಾನದಿ ತಟಕ್ಕೆ ಹೋಗುತ್ತಾನೆ. ಶುಕಮುನಿಗಳನ್ನು ಭೇಟಿ ಮಾಡಿ ಹೇಳುತ್ತಾನೆ : `ಪುಣ್ಯ ಪುರುಷರೇ, ತಾವು ಮಹಾಸಂತರ, ಭಕ್ತರ ಗುರುಗಳಾಗಿದ್ದೀರಿ. ಆದ್ದರಿಂದ  ತಾವು ಎಲ್ಲ ಜನರಿಗೂ, ಅದರಲ್ಲಿಯೂ ಸಾವು ಸನ್ನಿಹಿತವಾಗಿರುವ ನನ್ನಂತಹ  ವ್ಯಕ್ತಿಗೆ ಪರಿಪೂರ್ಣತೆಯ ದಾರಿಯನ್ನು ತೋರಿಸಬೇಕೆಂದು ಎಲ್ಲರ ಪರವಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತೇನೆ. ಒಬ್ಬ ವ್ಯಕ್ತಿ ಏನನ್ನು ಶ್ರವಣ ಮಾಡಬೇಕು, ಏನನ್ನು ಆರಾಧಿಸಬೇಕು ಎನ್ನುವುದನ್ನು ಮತ್ತು ಏನೇನನ್ನು ಮಾಡಬಾರದು ಎನ್ನುವುದನ್ನೂ ತಾವು ತಿಳಿಸಬೇಕು. ಕೃಪೆ ತೋರಿ ಇವನ್ನೆಲ್ಲ ನನಗೆ ವಿವರಿಸಿ ಆತ್ಮೋದ್ಧಾರ ಮಾಡಿರಿ ಎಂದು ಪ್ರಾರ್ಥಿಸುತ್ತೇನೆ!’

“ಪರೀಕ್ಷಿತ ಮಹಾರಾಜನ ಈ ಕೋರಿಕೆಯನ್ನು ಮನ್ನಿಸಿದ ಶುಕಮುನಿಗಳು, ಆತ್ಮದ ಸ್ವರೂಪದಿಂದ ಹಿಡಿದು ವಿಶ್ವದ ಆರಂಭದವರೆಗೆ ಪ್ರತಿಯೊಂದಕ್ಕೂ ಸಂಬಂಧಿಸಿದಂತೆ ಅವನು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿ, ಏಳು ದಿನಗಳ ಕಾಲ ಅಖಂಡವಾಗಿ ಶ್ರೀಮದ್ಭಾಗವತದ ಪ್ರವಚನ ಮಾಡಿದರು. ಆ ಸಭೆಯಲ್ಲಿ ಉಪಸ್ಥಿತನಾಗಿದ್ದು, ಆ ಮಹಾಪುರಾಣದ ಮೊಟ್ಟ ಮೊದಲ ಸಾರ್ವಜನಿಕ ಉಪನ್ಯಾಸವನ್ನು ಕೇಳಿದ ಸೌಭಾಗ್ಯ ನನ್ನದಾಯಿತು. ಮತ್ತೆ ನಿಮ್ಮೆಲ್ಲರ ಪುಣ್ಯ ವಿಶೇಷ ನೋಡಿ ಹೇಗಿದೆ! ಅಲ್ಲಿಂದ ನೇರವಾಗಿ  ಇಲ್ಲಿಗೆ ಬಂದು ನಿಮ್ಮೆಲ್ಲರಿಗೂ ಆ ಪುಣ್ಯ ಕಥೆಯನ್ನು ಹೇಳುತ್ತಿದ್ದೇನೆ! ಇಲ್ಲಿ ನೈಮಿಷಾರಣ್ಯದಲ್ಲಿ ನಾವೆಲ್ಲರೂ ಒಂದಾಗಿ ಸೇರಿ, ಕಲಿಯುಗದ ಆರಂಭದಲ್ಲಿಯೇ ಕಾಣಿಸಿಕೊಂಡ ಅವನತಿಕಾರಕ ಪ್ರಭಾವವನ್ನು ನಿವಾರಿಸುವ ಸಲುವಾಗಿ ಅನೇಕಾನೇಕ ಯಜ್ಞಗಳನ್ನು ಆಚರಿಸಲು ಬಂದಿರುವುದು ಒಂದು ಪುಣ್ಯ ವಿಶೇಷವೇ ಆಗಿದೆ. ಶ್ರೀಮದ್ಭಾಗವತ ಪುರಾಣದ ಪುಣ್ಯ ಕಥಾಶ್ರವಣವೂ ಸಾಧ್ಯವಾಗುತ್ತಿದೆ!”

ಋಷಿ ಸಮುದಾಯಕ್ಕೆ ತುಂಬ ಸಂತೋಷವಾಯಿತು. ಎಲ್ಲರೂ ಎದ್ದು ನಿಂತು ಸೂತ ಮುನಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಆಗ ಶೌನಕ ಮುನಿಗಳು ಹೇಳಿದರು:

`ಗುರುಗಳೇ, ಕೆಲ ದಿವಸಗಳಿಂದ ಅಖಂಡವಾಗಿ ನೀವು ಹೇಳಿದ ವಿಷಯಗಳನ್ನೆಲ್ಲ ತಿಳಿದುಕೊಳ್ಳುತ್ತಾ ಬಂದಿದ್ದೇವೆ. ಶ್ರೀಮದ್ಭಾಗವತದ ಕಥೆಯನ್ನು ಕೇಳುತ್ತಿದ್ದಾಗ ನಮ್ಮರಿವಿಗಿಲ್ಲದಂತೆಯೇ ಗುರುವ್ಯಾಸರ ಶ್ರೀಮನ್ಮಹಾಭಾರತದ ಸನ್ನಿವೇಶಗಳೂ, ಪಾತ್ರಗಳೂ ನೆನಪಿಗೆ ಬಂದವು. ಈಗಾಗಲೇ ನಾವು ಭಾಗವತ  ಮಹಾಪುರಾಣದ ಅಂತಿಮ ಘಟ್ಟಕ್ಕೆ ಬರುತ್ತಿದ್ದೇವೆ ಎಂದು ನೀವೇ ಅಪ್ಪಣೆ ಕೊಡಿಸ್ದಿದೀರಿ. ಈಗ ಈ ಕಥಾನಕದ ಅನೇಕ ಮೂಲ ಆಗು ಹೋಗುಗಳು ಮತ್ತು ಮಹನೀಯರ ಬಗ್ಗೆ ತಿಳಿಸುತ್ತೇನೆಂದು ಹೇಳಿದ್ದೀರಿ. ಇಂದಿನ ಪ್ರವಚನ ಅಲ್ಲಿಂದ ಪ್ರಾರಂಭಿಸುತ್ತೀರೆಂದು ನಾವೆಲ್ಲರೂ  ತಿಳಿದುಕೊಂಡಿದ್ದೇವೆ!’

ಸೂತ ಮುನಿಗಳು ಹೇಳಿದರು :

`ಹೌದು ಈವರೆಗೆ ಶ್ರೀಮದ್ಭಾಗವತದ ಮುಕ್ಕಾಲು ಭಾಗದ ಕಥೆಯನ್ನು ನಿಮಗೆ ಹೇಳಿಬಿಟ್ಟಿದ್ದೇನೆ. ಶುಕ ಮುನಿಗಳಿಂದ ಈ ಕಥೆಯನ್ನು ಕೇಳುತ್ತಿದ್ದ ಪರೀಕ್ಷಿತ ಮಹಾರಾಜ ಈ ಘಟ್ಟದಲ್ಲಿ, ವೈವಸ್ವತ ಮನುವಿನ ವಂಶದ ಕಥೆಯನ್ನು  ಕುರಿತು ಕೇಳುತ್ತಾನೆ. ಅದು ನಾನು ಹೇಳುವ ಇಂದಿನ ಕಥೆಯಲ್ಲಿ ವರ್ಣಿತವಾಗಿದೆ!’

ಶೌನಕ ಮುನಿಗಳ ಸಮೇತ, ನೈಮಿಷಾರಣ್ಯದ ಆ ಬ್ರಹ್ಮಾಂಡ ವನ ಪ್ರದೇಶದ ಪರಿಸರದಲ್ಲಿದ್ದ ಅಸಂಖ್ಯಾತ ಋಷಿಗಳು ಶ್ರೀಮದ್ಬಾಗವತದ ಅಂದಿನ ಸ್ವಾರಸ್ಯ ಆಗುಹೋಗುಗಳನ್ನು ಕೇಳಲು ಕುತೂಹಲದಿಂದ ಕುಳಿತರು.

ಸೂತ ಮುನಿಗಳು ಪ್ರಾರಂಭಿಸಿದರು :

ದೈವನಿಯಾಮಕದಂತೆ ಕಲ್ಪವೊಂದು ಕೊನೆಗೊಂಡು ಹೊಸದೊಂದು ಕಲ್ಪ ಮೂಡುತಿತ್ತು. ಕಲ್ಪ ಬದಲಾವಣೆಗಳ ಎಲ್ಲ ಸಂದರ್ಭಗಳಂತೆಯೇ ಈ ಸಲವೂ ಆಯಿತು. ಲೋಕಗಳೆಲ್ಲ ಅಲ್ಲೋಲ ಕಲ್ಲೋಲವಾದವು. ಸಮುದ್ರಗಳೆಲ್ಲ ಉಕ್ಕಿ ಹರಿದವು. ನದಿಗಳೆಲ್ಲ ತಲ್ಲಣಗೊಂಡವು. ಮಹಾನ್‌ ಮಹಾನ್‌ ಪರ್ವತಗಳೆಲ್ಲ ಅಲುಗಾಡಿದವು. ಸಾವಿರ ಸಾವಿರ ವರ್ಷಗಳಿಂದ ಬಲವಾಗಿ ಬೇರೂರಿದ್ದ ವೃಕ್ಷಗಳೆಲ್ಲ ನೆಲಕಚ್ಚಿದವು. ಅರಣ್ಯಗಳೆಲ್ಲ ಮೈದಾನಗಳಾದವು.

ಮಹಾ ಪ್ರಳಯ ಪ್ರಾರಂಭವಾಯಿತು. ಲೋಕಗಳು ಜಲಾವೃತವಾದವು. ಬ್ರಹ್ಮದೇವನಿಗೆ ಆ ದಿನದ ಸಂಜೆ ಮುಗಿದು ರಾತ್ರಿಯಾಗಿ ಹೋಯಿತು. ಬ್ರಹ್ಮ ನಿದ್ರೆ ಮಾಡಲು ಹೋದ. ಅವನಿಗೆ ನಿದ್ರೆ ಹತ್ತಿ ಗಾಢವಾದಾಗ ಅವನ ಉಸಿರಿನಿಂದ ಮೂಡಿ ಬಂದ ವೇದಗಳನ್ನು ಹಯಗ್ರೀವನೆಂಬ ರಾಕ್ಷಸ ಹಾರಿಸಿಕೊಂಡು ಹೋದ.

ಆ ಘಳಿಗೆಯಲ್ಲಿಯೆ ರಾಜರ್ಷಿ ಸತ್ಯವ್ರತ, ದೇವೋತ್ತಮ ಪರಮ ಪುರುಷನನ್ನು ಕುರಿತು ತಪಸ್ಸು ಮಾಡುತ್ತ, ಮಹಾಪ್ರಳಯದ ನೀರಿನಲ್ಲಿ ಮುಳುಗಿ ಹೋಗಿದ್ದ. ಮುಸ್ಸಂಜೆಯಾಗುತ್ತಿದ್ದಂತೆಯೇ ತನ್ನ ಬೊಗಸೆಯಲ್ಲಿ ಅದೇ ನೀರನ್ನು ತುಂಬಿಸಿಕೊಂಡು, `ಶ್ರೀ ಹರಿ ಸರ್ವವೂ ನಿನಗರ್ಪಿತ’ ಎನ್ನುತ್ತ ಪರಮಾತ್ಮನನ್ನು ಧ್ಯಾನಿಸುತ್ತ ನಿಂತ.

ಏನಾಶ್ಚರ್ಯ! ಅವನ ಆ ಬೊಗಸೆ ನೀರಿನಲ್ಲಿ ದಿಢೀರನೆ ಪುಟ್ಟ ಮೀನೊಂದು ಚಡಪಡಿಸುತ್ತ ಸರಿದಾಡುತ್ತಿರುವುದು ಕಾಣಿಸಿತು. ಅಷ್ಟೇ ಅಲ್ಲ, ತಲೆಯೆತ್ತಿ ಮಹಾರಾಜನ್ನು ನೋಡಿ ಮಾತನಾಡಿತು : `ಪ್ರಿಯ ಸತ್ಯವ್ರತ ಮಹಾರಾಜ, ತಡೆ ತಡೆ, ನನ್ನನ್ನು ನೀರಿಗೆ ಜಾರಿಸಿಬಿಡಬೇಡ. ಅಲ್ಲಿರುವ ದೊಡ್ಡ ಮೀನು ನನ್ನನ್ನು ನುಂಗಿ ಹಾಕಿಬಿಡುತ್ತದೆ. ಕಾಪಾಡು!

ಕರುಣಾಳುವಾದ ಆ ರಾಜರ್ಷಿ ಆ ಮೀನನ್ನು ನೀರಿಗೆಸೆಯದೆ ತನ್ನ ಸಂಧ್ಯಾಪಾತ್ರೆಯಲ್ಲಿ ಹಾಕಿಕೊಂಡ. ಸಂಧ್ಯೋಪಾಸನೆಗಳನ್ನು ಮಾಡಿ ಮುಗಿಸಿದ.

ಮರುದಿನ ಬಹು ದೊಡ್ಡ ಆಶ್ಚರ್ಯವೊಂದು ಎದುರಾಗಿತ್ತು!

ಸಂಧ್ಯಾಪಾತ್ರೆಯಲ್ಲಿ ಹಾಕಿದ್ದ ಆ ಪುಟ್ಟ ಮೀನು ಒಂದಿಷ್ಟು ಹಿಗ್ಗಿ ಹೋಗಿ ಇಡೀ ಪಾತ್ರೆಯನ್ನು ಆವರಿಸಿಕೊಂಡು ಬಿಟ್ಟಿತ್ತು. `ಪುಣ್ಯವಾನನೇ, ನೀನು ನನ್ನನ್ನು ಕಾಪಾಡಿ ಇಟ್ಟಿರುವ ಈ ಸ್ಥಳ ನನಗೆ ಸಾಕಾಗುತ್ತಿಲ್ಲ. ದಯವಿಟ್ಟು ಇನ್ನು ಸ್ವಲ್ಪ ದೊಡ್ಡ ಜಾಗಕ್ಕೆ ನನ್ನನ್ನು ವರ್ಗಾಯಿಸು!’ ಎಂದಿತು ಆ ಮೀನು. ಕೌತುಕಗೊಂಡ ಸತ್ಯವ್ರತ ಅದನ್ನೊಂದು ದೊಡ್ಡ ಹಂಡೆಯಲ್ಲಿ ಇರಿಸಿದ. ಕ್ಷಣದಲ್ಲಿ ಅದು ಹಂಡೆಯ ತುಂಬಾ ಹರಡಿಕೊಂಡಿತು. ಅನಂತರ ಆ ಮೀನಿನ ಕೋರಿಕೆಯಂತೆ ಅದನ್ನು ಬಾವಿಯಲ್ಲಿ ಬಿಟ್ಟ. ಆ ಜಾಗವೂ ಸಾಲದಿದ್ದಾಗ, ಸರೋವರದಲ್ಲಿ ಇರಿಸಿದ. ಮೀನು ಆ ಸರೋವರದ ಎಲ್ಲೆಗಳನ್ನು ಮುಟ್ಟಿದಾಗ, ಅದನ್ನೊಂದು ದೊಡ್ಡ ಸರೋವರ, ನದಿ ಎಂದು ವರ್ಗಾಯಿಸುತ್ತ ಕೊನೆಗೆ ಸಮುದ್ರಕ್ಕೆ ಕರೆತಂದು ಬಿಟ್ಟ.

ಆ ವೇಳೆಗಾಗಲೇ ರಾಜಾ ಸತ್ಯವ್ರತನಿಗೆ ಈ ಮೀನು ಸಾಮಾನ್ಯವಾದುದಲ್ಲ, ದೇವೋತ್ತಮ ಪರಮ ಪುರುಷನೇ ಈ ರೂಪದಲ್ಲಿದ್ದಾನೆ ಅನ್ನಿಸಿಬಿಟ್ಟಿತ್ತು. `ಪರಮ ಪುರುಷ ನೀನು ಉದ್ಧರಿಸು!’ ಎಂದು ಕೈಮುಗಿದು ನಿಂತ.

ಆ ಮೀನು ಇಡೀ ಸಮುದ್ರವನ್ನು ಆಕ್ರಮಿಸಿಕೊಂಡಿತ್ತು. ಸತ್ಯವ್ರತನ ಮಾತು ಕೇಳಿ ಅದು ಬ್ರಹ್ಮಾಂಡವಾಗಿ ನಕ್ಕಂತಾಯಿತು. ಅದು ತನ್ನ ತಲೆಯೆತ್ತಿದಾಗ ಆಕಾಶಕ್ಕೆ ತಗುಲಿದಂತಾಯಿತು. ಸತ್ಯವ್ರತ ಬೆಚ್ಚಿದ. ಅದರ ಸುತ್ತಲಿನ ಪ್ರಶಾಂತ ಪ್ರಕಾಶವನ್ನು ತಾಳಲಾರದೆ ತಳಮಳಿಸಿದ.

ಆ ಬೃಹತ್‌ ಮೀನಿನ ರೂಪದಲ್ಲಿದ್ದ ಪರಮ ಪುರುಷ ಹೇಳಿದ :

`ನನ್ನ ಪ್ರಿಯ ಸತ್ಯವ್ರತ ಮಹಾರಾಜ, ಭೂದೇವಿಯನ್ನು ಉದ್ಧರಿಸಿ, ವೇದಗಳನ್ನು  ಕಾಪಾಡಲು ನಾನು ಮತ್ಸ್ಯರೂಪಿಯಾಗಿ ಅವತರಿಸಿದ್ದೇನೆ. ಇಷ್ಟರಲ್ಲೇ ಯಾವ ಲೋಕವೂ ಉಳಿಯದೇ ಜಲಾವೃತವಾಗಿ ಹೋಗುತ್ತದೆ. ನಿನಗೆ ಇಷ್ಟರಲ್ಲೇ ಕಾಣಿಸುವ ದೊಡ್ಡ ಹಡಗೊಂದರಲ್ಲಿ, ಜೀವಿಗಳನ್ನೂ ಸಸ್ಯ ಬೀಜಗಳನ್ನೂ ತುಂಬಿಸಿಕೊಂಡು ನೀನು ಇರು. ನಾನು ಕಾಪಾಡುತ್ತೇನೆ.’

ಸತ್ಯವ್ರತ ಹಾಗೆಯೇ ನಡೆದುಕೊಂಡ.

ಪ್ರಳಯ ತಾಂಡವವಾಡಿತು. ಎಲ್ಲವೂ ಬರೀ  ಜಲವೇ ಆಯಿತು. ಸಮುದ್ರ ಹುಚ್ಚೆದ್ದು ಕುಣಿಯಿತು. ಸತ್ಯವ್ರತನ ಹಡಗು ಏರಿಳಿಯಿತು. ಕಗ್ಗತ್ತಲು ಆವರಿಸಿತು. ಹಡಗಿನಲ್ಲಿದ್ದ ಸಪ್ತಋಷಿಗಳ ದೇಹಕಾಂತಿಯ ಬೆಳಕು ಎಲ್ಲೆಲ್ಲೂ ಹರಡಿಕೊಂಡಿತು. ಹಡಗು ಮೇಲೆದ್ದು ಉರುಳುವಂತೆ, ಕೆಳಗಿಳಿದು ನೀರಿನೊಳಗೆ ಸೇರಿಹೋಗುವಂತೆ ಮೇಲು ಕೆಳಗಾಗುತ್ತಿತ್ತು.

ಆಗಲೇ, ಇಡೀ ಭೂಮ್ಯಾಕಾಶ ಹರಡಿಕೊಂಡಂತೆ ಕಂಡ ಮತ್ಸ್ಯದೇವರ ಅವತಾರವಾಯಿತು. ಇಡೀ ಪರಿಸರ ಪ್ರಕಾಶಮಾನವಾಯಿತು. ಮೈನವಿರಿನಿಂದ ನಿಂತಿದ್ದ ಸತ್ಯವ್ರತ ತನ್ನ ಡೋಲಾಯವಾಗಿದ್ದ  ಹಡಗನ್ನು ಆ ಮತ್ಸ್ಯದ ಕೋರೆಹಲ್ಲಿಗೆ ಕಟ್ಟಿ ಹಾಕಿದ. ಪರಮ ಪುರುಷನನ್ನು ಸ್ತೋತ್ರ ಮಾಡತೊಡಗಿದ. ಮತ್ಸ್ಯ ಆ ಹಡಗಿನೊಂದಿಗೆ ಸಮುದ್ರದಲ್ಲಿ ತೇಲಾಡುತ್ತಿತ್ತು.

ಬೆಳಗಾಯಿತು. ಬ್ರಹ್ಮನ ನಿದ್ರೆ ಮುಗಿದು ಅವನ ಇನ್ನೊಂದು ದಿನ ಪ್ರಾರಂಭವಾಗಿತ್ತು. ಪ್ರಳಯ ಶಾಂತವಾಯಿತು. ಮತ್ಸ್ಯದೇವ ಹಯಗ್ರೀವ ರಾಕ್ಷಸನನ್ನು ಸಂಹರಿಸಿ ವೇದಗಳನ್ನು ಮತ್ತೆ ಬ್ರಹ್ಮನ ವಶಕ್ಕೆ ತಂದು ಒಪ್ಪಿಸಿದ.

ಆದರೆ-ಇವೆಲ್ಲದರ ನಡುವೆ ಇತಿಹಾಸವೊಂದು ಸೃಷ್ಟಿಯಾಯಿತು!

ಮತ್ಸ್ಯದೇವ, ರಾಜಾ ಸತ್ಯವ್ರತನನ್ನು  ಅನುಗ್ರಹಿಸಿದ. ಅಂದಿನಿಂದ ಪ್ರಾರಂಭವಾದ ಕಲ್ಪದ ಮನುವಾಗಿ ಅವನನ್ನು ಹೆಸರಿಸಿ, `ವೈವಸ್ವತ ಮನು’ ಎಂದವನನ್ನು ಕರೆದ.

ಹೀಗೆ ಪರಮ ಪುರುಷನ ಅನುಗ್ರಹ ಪಡೆದುಕೊಂಡ ರಾಜಾ ಸತ್ಯವ್ರತ ವೈವಸ್ವತ ಮನುವಾದ. ಅವನು ತಪಸ್ಸನ್ನು ಮುಗಿಸಿಕೊಂಡು ತನ್ನ ರಾಜ್ಯಕ್ಕೆ ಹಿಂತಿರುಗಿ ರಾಜ್ಯಭಾರ ಮಾಡತೊಡಗಿದ. ತನ್ನ ಜೀವನದಲ್ಲಿ ಜರುಗಿದ ಈ ಅನುಗ್ರಹ ಮತ್ತು ಅತಿಶಯಗಳನ್ನು ತನ್ನ ಹೆಂಡತಿ ಶ್ರದ್ಧಾದೇವಿಗೆ ಹೇಳಿದ. ಅವಳಿಗೆ ಬೇಕಾದ ಹಾಗೆ ಸಂತೋಷವೇನೊ ಆಯಿತು. ಆದರೆ, ಒಂದು ಅಣುವಿನಷ್ಟು ದುಃಖ ಅವಳ ಹೃದಯಾಂತರಾಳದಲ್ಲಿ ಉಳಿದುಕೊಂಡೇ ಇದ್ದಿತು. ಸತ್ಯವ್ರತನಿಗೆ ಹೆಂಡತಿಯ ಮುಖ ಬಾಡಿದ್ದು ಕಂಡಿತು. `ನನ್ನ ಪ್ರಿಯ ರಾಣಿ, ನೀನು ಈ ಆನಂದದಲ್ಲೂ ಚಿಕ್ಕದೊಂದು ನೋವನ್ನು ಅನುಭವಿಸುತ್ತಿದ್ದೀಯ ಎನ್ನುವುದು ನನಗೆ ಗೊತ್ತು!- ಎಂದು ಹೇಳಿದ ರಾಣಿ ಗಂಡನನ್ನೇ ನೋಡುತ್ತ ಹೇಳಿದಳು : `ಪರಮ ಪುರುಷನೇ ಮುಂದೆ ಬಂದು ಪ್ರತ್ಯಕ್ಷನಾಗಿ ನಿಂತಾಗ ನೀವೇಕೆ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿಲ್ಲ?’

ಸತ್ಯವ್ರತ ಒಂದು ಕ್ಷಣ ಸುಮ್ಮನಾದ. ದಿಢೀರನೆ ಎಲ್ಲವೂ ಜರುಗಿ ಹೋಗಿತ್ತು. ದೈವಾನುಗ್ರಹಕ್ಕಾಗಿ ತಾನು ತಪ್ಪಸ್ಸಿಗೆ ಕುಳಿತದ್ದು, ಅರ್ಘ್ಯ ಕೊಡಲು ಬೊಗಸೆಯಲ್ಲಿ ನೀರು ತುಂಬಿಸಿಕೊಂಡಾಗ, ಪುಟ್ಟ ಮೀನೊಂದು ಕಂಡದ್ದು, ಅದನ್ನು ಕೆಳಗೆ ಜಾರಿಸಿ ಬಿಡಲು ಯೋಚಿಸಿದಾಗ ಅದು ಮಾತನಾಡಿದ್ದು, ಬೃಹತ್ತಾಗಿ ಬೆಳೆದು ಜಗತ್ತನ್ನೇ ಆವರಿಸಿಕೊಂಡು, ಪರಮ ಪ್ರಭುವಾಗಿ ಅವತಾರ ತಾಳಿದ್ದು…. ಆ ಮಹಾಪ್ರಳಯದಲ್ಲಿ ಹಡಗಿನಲ್ಲಿ ಜೀವ ಬಿಗಿಹಿಡಿದುಕೊಂಡು ಸಾಗಿದ್ದು, ಜೀವ ಜೀವಿಗಳನ್ನು ಕಾಪಾಡಿಟ್ಟದ್ದು – ಈ ಒತ್ತಡದಲ್ಲಿ ತನ್ನ, ತನ್ನ ಹೆಂಡತಿಯ ಬೇಕು ಬೇಡಗಳನ್ನು ಅಲ್ಲಿ ಅವತರಿಸಿದ ಪರಮ ಪ್ರಭುವಿನಲ್ಲಿ ನಿವೇದಿಸಿಕೊಳ್ಳಬೇಕೆನ್ನುವುದು ಅವನಿಗೆ ತೋರಿರಲೇ ಇಲ್ಲ. ಕರುಣೆಯಿಂದ ಹೆಂಡತಿಯನ್ನು ನೋಡಿ ತಲೆ ನೇವರಿಸಿದ. `ಪ್ರಿಯೆ ಪರಮ ಪ್ರಭುವನ್ನು ಇದ್ದಕ್ಕಿದ್ದ ಹಾಗೆಯೇ ಕಂಡು ಅವನ ಪ್ರಕಾಶವನ್ನು ನನ್ನಲ್ಲಿ ತುಂಬಿಸಿಕೊಳ್ಳುವುದರಲ್ಲಿ, ನನ್ನ ಹೃದಯದಿಂದ ಮಾತುಗಳೇ ಹೊರಡಲಿಲ್ಲ. ಬರೀ ಅವನ ಆಜ್ಞೆಯನ್ನು ನೆರವೇರಿಸುತ್ತಿದ್ದೆ, ಅಷ್ಟೇ!’- ಎಂದು ಹೇಳಿದ. ಮತ್ತೆ ಹೆಂಡತಿಯನ್ನು ಆ ಕ್ಷಣದಲ್ಲಿ ಸಮಾಧಾನಗೊಳಿಸುವುದಕ್ಕಾಗಿ ಹೇಳಿದ : `ಇರಲಿ, ನಮಗೆ ದೈವಾನುಗ್ರಹವಾಗಿದೆ. ನನ್ನ ತಪಸ್ಸು ಫಲಿಸದೇ ಹೋಗುವುದಿಲ್ಲ. ನಮ್ಮ ಕುಲಗುರುಗಳಾದ ವಸಿಷ್ಠರನ್ನು ಕಂಡು ಪ್ರಾರ್ಥಿಸೋಣ ಖಂಡಿತ ಅವರು ನಮಗೊಂದು ದಾರಿ ತೋರಿಸುತ್ತಾರೆ!

ಬಹು ಬೇಗ ಗುರುಗಳನ್ನು ಕಂಡು ಹೇಳಿದ :

`ಗುರುಗಳೇ, ನಿಮ್ಮ ಆಶೀರ್ವಾದದಿಂದ ನಮಗೆ ದೈವಾನುಗ್ರಹವಾಗಿದೆ. ಪರಮ ಪ್ರಭುವಿನ ಮತ್ಸ್ಯಾವತಾರವನ್ನು ಕಂಡ ಭಾಗ್ಯ ನನ್ನದಾಗಿದೆ. ನಮಗೆ ಸಂತಾನ ಭಾಗ್ಯವಿಲ್ಲದೆ ಯಾವ ಭಾಗ್ಯವನ್ನೂ ಆನಂದಿಸಲಾಗದಂತಾಗಿದೆ. ತಾವು ಕೃಪೆ ತೋರಿ ನಮಗೊಂದು ಬೆಳಕು ತೋರಬೇಕು!’

ವಸಿಷ್ಠರ ಮನಸ್ಸಿಗೆ ತುಂಬಾ ತೃಪ್ತಿಯಾಗಿತ್ತು. ಸತ್ಯವ್ರತರಾಜನಿಗೆ ದೈವಾನುಗ್ರಹವಾಗಿ ಅವನು ವೈವಸ್ಪತ ಮನು ಎಂದಾದದ್ದು ಅವರಿಗೆ ಮೆಚ್ಚುಗೆಯ ವಿಷಯವಾಗಿತ್ತು. ಅವರು ಹೇಳಿದರು :

`ರಾಜನ್‌ ನಿನಗೀಗ ಸಂತಾನವಾಗುವ ಕಾಲ ಸನ್ನಿಹಿತವಾಗಿದೆ. ಪರಮ ಪ್ರಭುವಿನ ಅನುಗ್ರಹವಾಗಿದೆ. ನೀನು ಎಷ್ಟಾದರೂ ಪರಮ ಪುರುಷನ ನಾಭಿಯಿಂದ  ಮೂಡಿದ ಪರಬ್ರಹ್ಮನ ಮಾನಸ ಪುತ್ರ ಮರೀಚಿಯ ವಂಶಾವಳಿಯಲ್ಲಿ ಹುಟ್ಟಿದವನು. ಮರೀಚಿಯ ಮಗ ಕಶ್ಯಪ ಋಷಿ ಮತ್ತು ಅದಿತಿಯ ಮಗ ವಿವಸ್ವತ ಮತ್ತು ಸಂಜ್ಞಾ ದೇವಿಯ ಸುಪುತ್ರ ನೀನು. ನಿನ್ನನ್ನೂ, ಶ್ರದ್ಧಾದೇವಿಯನ್ನೂ ನಾನು ಪ್ರೀತಿ ವಿಶ್ವಾಸಗಳಿಂದ ಗಮನಿಸಿದ್ದೇನೆ. ನಿಮ್ಮ ದೈವಶಕ್ತಿ ಎಂದೆಂದಿಗೂ ನಿಮ್ಮನ್ನು ಕಾಪಾಡುವಂಥದ್ದು. ನೀನೀಗ ಮಿತ್ರ ಮತ್ತು ವರುಣರ ಪ್ರೀತ್ಯರ್ಥವಾಗಿ ಮಿತ್ರಾವರುಣವೆಂಬ ಮಹಾಯಾಗವನ್ನು ಮಾಡು. ನಿನಗೆ ಖಂಡಿತ ಸಂತಾನಪ್ರಾಪ್ತಿಯಾಗುತ್ತದೆ!’

ವೈವಸ್ಪತ ಮನು ಎನಿಸಿಕೊಂಡ ಸತ್ಯವ್ರತ ರಾಜನಿಗೆ ಬಹಳ ಸಂತೋಷವಾಯಿತು. ಕೂಡಲೇ ಗುರುಗಳಿಗೆ ತನ್ನ ಮನದಾಳದಲ್ಲಿದ್ದ ಆಸೆಯೊಂದನ್ನು ತೋಡಿಕೊಂಡ : `ಗುರುಗಳೇ, ನನಗೆ ಪುತ್ರ ಸಂತಾನ ಆಗಬೇಕು!’

ವಸಿಷ್ಠರು ಹೇಳಿದರು ; `ಸರಿ, ಹಾಗೆಯೇ ಹವಿಸ್ಸು ನೀಡೋಣ!’

ವಸಿಷ್ಠರು `ಮಿತ್ರಾವರುಣ’ ಯಾಗವನ್ನು ಪ್ರಾರಂಭಿಸಿದರು. ಸತ್ಯವ್ರತ ರಾಜ ದಂಪತಿ ವ್ರತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಬರೀ ಹಾಲನ್ನು ಮಾತ್ರ ಸೇವಿಸಿದರು.ಆದರೆ, ಯಾಗ ನಡೆಯುತ್ತಿದ್ದಾಗ ಅನಿರೀಕ್ಷಿತವಾಗಿ ಅನಿಮಿತ್ತವೊಂದು ಜರುಗಿಹೋಯಿತು. ರಾಣಿ ಶ್ರದ್ಧಾದೇವಿ ಯಾಗ ನಡೆಸುತ್ತಿದ್ದ ಹೋತೃವಿನ ಬಳಿ ಸಾರಿ ಮೆಲ್ಲನೆ ಹೇಳಿಬಿಟ್ಟಳು : `ನಮಗೆ ಪುತ್ರಿ ಸಂತಾನವಾಗಬೇಕು!’  ಆ ಋತ್ವಿಕ ಪುರೋಹಿತರು ರಾಣಿಯ ಕೋರಿಕೆಯನ್ನು ಮನ್ನಿಸದಿರಲಾಗಲಿಲ್ಲ. ಕೂಡಲೇ ಅವರು ಹೋಮಕ್ಕೆ ಪೂರ್ಣಾಹುತಿಯನ್ನು ಅರ್ಪಿಸುತ್ತ `ವಷಟ್‌’ ಎಂದು ಉಚ್ಚರಿಸುತ್ತ ಯಜ್ಞ ವಿಧಿಯನ್ನು ಪೂರೈಸಿದರು.

ಇದು ವಸಿಷ್ಠರಿಗೂ ತಿಳಿಯಲಿಲ್ಲ. ಸತ್ಯವ್ರತ ರಾಜನಿಗೂ ತಿಳಿಯಲಿಲ್ಲ. ಹೀಗಾಗಿ, ಹೆಂಡತಿ ಗರ್ಭಧರಿಸಿದ ಮಹದಾನಂದ ಮಗು ಹುಟ್ಟಿದ ಕೂಡಲೇ ಹೊರಟು ಹೋಯಿತು. ಅವನು ನಿರಾಸೆಯ ಮುದ್ದೆಯಾದ. ಆ ರಾಜ ದಂಪತಿಗಳಿಗೆ ಹುಟ್ಟಿದ್ದು ಹೆಣ್ಣು ಮಗು.

ಸತ್ಯವ್ರತರಾಜನಿಗೆ ನೋವು-ನಿರಾಸೆ ತಡೆಯಲಾಗಲಿಲ್ಲ. ಜೊತೆಗೆ ತನ್ನ ಕುಲಗುರುಗಳಾದ ವಸಿಷ್ಠರ ವೇದಮಂತ್ರಗಳ ಸಾಧನೆ ತಪ್ಪಾದುದಾದರೂ ಹೇಗೆ? ಅವರು ಒಮ್ಮೆ ಹೇಳಿದ್ದು ಅನಂತರ ಬೇರೆಯೇ ಆಗುವುದು ಸಾಧ್ಯವೇ? ಅವರ ಯಜ್ಞಯಾಗಾದಿಗಳಲ್ಲಿ ಏನಾದರೂ ಲೋಪವಾಯಿತೇ?

ಕೂಡಲೇ ಅವನು ವಸಿಷ್ಠರಲ್ಲಿ ಬಂದು ಸವಿನಯವಾಗಿಯೇ ಮಾತನಾಡಿದ : `ಪೂಜ್ಯ ಗುರುಗಳೇ, ವೇದ ಮಂತ್ರಗಳನ್ನು  ಉಚ್ಚರಿಸುವುದರಲ್ಲಿ ನೀವು ಪರಿಣತರಾಗಿರುವವರು. ಹಾಗಿದ್ದರೂ ನಿಮ್ಮಿಂದ ಹೀಗೊಂದು ವೈಪರೀತ್ಯವಾಗುವುದುಂಟೆ? ವೇದ ಮಂತ್ರಗಳಿಗೆ ವಿರುದ್ಧವಾದದ್ದು ಆಗಿ ಹೋಗಿದೆಯಲ್ಲ! ನಿಮ್ಮ ಮಾತೆಂದರೆ ವೇದ ವಾಕ್ಯದ ಹಾಗೆ. ಹೀಗಿದ್ದೂ ಇದು ನಿಷ್ಪಲವಾದದ್ದು ಹೇಗೆ?’

ವಸಿಷ್ಠರು ಜ್ಞಾನೇಂದ್ರಿಯದ ಮೂಲಕ ಆಗಿಹೋಗಿದ್ದನ್ನು ತಿಳಿದಿದ್ದರು. ರಾಜ ಅರ್ಧ ದುಃಖ, ಅರ್ಧ ಕೋಪದಿಂದ ಪರಿತಪಿಸುತ್ತಿರುವುದನ್ನು ಕಂಡರು. ಲೋಕಾರೂಢಿಯಾಗಿ ಕೇಳಿದರು :

`ರಾಜನ್‌ ಏನಾಯಿತು, ಇಷ್ಟೊಂದು ಗೋಳಾಡುವಂತಹದು ಏನಾಯಿತು?’

ಸತ್ಯವ್ರತರಾಜ ಈಗ ಎತ್ತರದ ದನಿಯಲ್ಲಿಯೇ ಹೇಳಿದ :

`ಗುರುಗಳೇ ನಿಮ್ಮನ್ನು, ನಿಮ್ಮ ತಪಸ್ಸನ್ನು , ವೇದೋಪನಿಷತ್ತುಗಳ ಶಕ್ತಿಯನ್ನೂ ನಾನು ಸಂಪೂರ್ಣವಾಗಿ ನಂಬಿಕೊಂಡಿದ್ದೆ. ಆದರೆ, ಇವುಗಳ ಮೇಲೆಲ್ಲ ಇದ್ದ ನನ್ನ ನಂಬಿಕೆ ಅಲುಗಾಡಿಹೋಗಿದೆ. ಪುತ್ರ ಸಂತಾನಕ್ಕಾಗಿ ನಿಮ್ಮನ್ನು ಪ್ರಾರ್ಥಿಸಿದ್ದೆ. ನೀವು ಸೂಚಿಸಿದ ಯಾಗ ಮಾಡಿದೆ. ಆದರೆ, ನನಗೆ ದೊರಕಿದ್ದು ಪುತ್ರಿಭಾಗ್ಯ! ಇದು ಆದದ್ದಾದರೂ ಹೇಗೆ?!

ವಸಿಷ್ಠರು ಮೃದುವಾಗಿ ಹೇಳಿದರು : `ರಾಜನ್‌, ಇದರಲ್ಲಿ ನನ್ನದೊ, ನನ್ನ ವೇದ ಮಂತ್ರಗಳದ್ದೊ, ಋತ್ವಿಕರುಗಳದ್ದೊ ಯಾರದೂ ಲೋಪವಿಲ್ಲ. ಲೋಪವಾದದ್ದು ನಿನ್ನ ಹೆಂಡತಿಯ ಕೋರಿಕೆಯಿಂದ; ಪುತ್ರಿಭಾಗ್ಯ ಬೇಕೆಂದೇ ಆಕೆ ಹವಿಸ್ಸು ಅರ್ಪಿಸಿದಳು. ಇದು ಅಲ್ಲೇ ಇದ್ದ ನಿನಗೇಕೆ ತಿಳಿಯಲಿಲ್ಲ?’

ರಾಜ ಸತ್ಯವ್ರತ ಮೌನವಾಗಿ ನಿಂತುಬಿಟ್ಟ. ಈಗಾಗಲೇ ಆಗಿ ಹೋಗಿದ್ದ ನೋವು ನಿರಾಸೆಗಳ ಜೊತೆಗೆ, ಈಗ ಗುರುಗಳ ಮೇಲೆ ವೃಥಾ ದೋಷಾರೋಪಣೆ ಮಾಡಿದ ಕಳಂಕವೂ ಅವನ ಹೃದಯದಲ್ಲಿ ಹೆಪ್ಪುಗಟ್ಟಿತು. ಅವನ ಇಡೀ ಶರೀರ ಅಲುಗಾಡಿ ಹೋಯಿತು.

ಕೂಡಲೇ ಅವನು ಗುರುಗಳ ಪಾದಗಳಿಗೆರಗಿದ.

`ಗುರುಗಳೇ ನನ್ನನ್ನು ಕ್ಷಮಿಸಿ ಉದ್ಧರಿಸಿ. ನಿಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡೆ. ಕರುಣಾಶಾಲಿಗಳಾದ ನೀವು ನನ್ನನ್ನು ಮನ್ನಿಸುತ್ತೀರೆಂಬ ನಂಬಿಕೆ ನನಗಿದೆ. ಮತ್ತೆ ನನ್ನ ಈ ಕೋರಿಕೆಯೊಂದನ್ನು ನಡೆಸಿಕೊಡಲು ಪ್ರಾರ್ಥಿಸುತ್ತೇನೆ’

ವಸಿಷ್ಠರು ರಾಜನ ಮೈದಡವಿ ಹೇಳಿದರು : `ರಾಜನ್‌ ಇರಲಿ, ಕೆಲವೊಮ್ಮೆ ಹೀಗೆಲ್ಲ ಆಗಿ ಹೋಗುತ್ತದೆ. ಈಗ ನಿನಗೇನಾಗಬೇಕು ಹೇಳು!’

ರಾಜ ಹೇಳಿದ : `ನನಗೆ ಹುಟ್ಟಿರುವ ಹೆಣ್ಣು ಮಗು, ಗಂಡುಮಗುವಾಗಬೇಕು!

ವಸಿಷ್ಠರು ಮನಸ್ಸಿನೊಳಗೆ ಮುಗುಳುನಕ್ಕರು. ರಾಜನ ಪ್ರಾರ್ಥನೆಯನ್ನು ಮನ್ನಿಸಿದರು. ಪರಮ ಪ್ರಭುವಾದ ವಿಷ್ಣುವನ್ನು ಪ್ರಾರ್ಥಿಸಿದರು. ರಾಜಪುತ್ರಿಯನ್ನು ರಾಜಪುತ್ರನಾಗಿಸುವಂತೆ ಕೋರಿದರು. ಸರ್ವನಿಯಂತ್ರಣಾಧಿಕಾರಿಯಾದ ದೇವೋತ್ತಮ ಪರಮ ಪುರುಷ ವಸಿಷ್ಠರ ಪ್ರಾರ್ಥನೆಯಿಂದ ಸಂಪ್ರೀತನಾದ. ವಸಿಷ್ಠರು ಇಚ್ಛಿಸಿದಂತೆ ಅನುಗ್ರಹಿಸಿದ.

ಇಳಾ ಎಂದು ಹುಟ್ಟಿದ್ದ ಆ ಸುಂದರ ರಾಜಪುತ್ರಿ ಕೂಡಲೇ ಒಬ್ಬ ಸುಂದರ ರಾಜಪುತ್ರನಾಗಿ ರೂಪಾಂತರಗೊಂಡು ಸುದ್ಯುಮ್ನ ಎನ್ನುವ ಸುಂದರ ಪುತ್ರನಾಗಿ ಬದಲಾದ. ರಾಜಾ ಸತ್ಯವ್ರತನಿಗೆ ಸುಖ ಸಂತೋಷಗಳಲ್ಲಿ ತೇಲಾಡುವಂತಾಯಿತು. ಅವನ ಬದುಕಿನಾಸೆ ಪೂರೈಸಿತ್ತು. ಅವನ ಕುಲಕ್ಕೆ ವಂಶೋದ್ಧಾರಕನೊಬ್ಬ ಹುಟ್ಟಿದ್ದ.

ಸುದ್ಯುಮ್ನ ಸುಂದರ ಯುವಕನಾಗಿ ಬೆಳೆದ. ರಾಜೋಚಿತವಾದ ಎಲ್ಲ ಕಲಾ ಕೌಶಲಗಳಲ್ಲಿ ಪರಿಪೂರ್ಣತೆ ಸಂಪಾದಿಸಿದ. ರಾಜ್ಯಾಡಳಿತದಲ್ಲಿ ಪರಿಣತಿ ಗಳಿಸಿದ. ತಂದೆ ತಾಯಿಗಳ, ಗುರು ಹಿರಿಯರ, ಪ್ರಜಾಕೋಟಿಯ ಕಣ್ಮಣಿಯಾಗಿ ಬೆಳೆದ. ವೀರ ಧೀರಶೂರನಾದ.

ಒಮ್ಮೆ ಈ ವೀರ ಸುದ್ಯುಮ್ನನು ತನ್ನ ಆಪ್ತರು, ಸಹಾಯಕರೊಂದಿಗೆ ಬೇಟೆಗೆ ಹೊರಟ. ಸಿಂಧೂ ದೇಶದಿಂದ ತರಿಸಿದ ಸುಂದರ ಗಂಡು ಕುದುರೆಯೊಂದನ್ನೇರಿ ಸವಾರಿ ಮಾಡುತ್ತ ಕಾಡಿನೊಳಗೆ ಪ್ರವೇಶಿಸಿದ. ಈ ದಂಡಿನ ಆಗಮನದಿಂದಲೇ ಆ ವನಪ್ರದೇಶ ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು. ಮೃಗ ಪಕ್ಷಿಗಳು ಭಯದಿಂದ ಚೀತ್ಕರಿಸಿದವು. ಅವುಗಳನ್ನು ಅಟ್ಟಿಸಿಕೊಂಡು ಹೋಗುತ್ತ, ಕೊಲ್ಲುತ್ತ ಬೇಟೆಯ ಪರಿಪೂರ್ಣವಾದ ವಿನೋದದ ಸ್ವಾದ ಅನುಭವಿಸುತ್ತ ಮುನ್ನಡೆದು ಕಾಡಿನ ಉತ್ತರ ಭಾಗವನ್ನು ತಲುಪಿದ.

ಆ ವನ ಪ್ರದೇಶಕ್ಕೆ ಸುಕುಮಾರ ಎಂದು ಹೆಸರು.

ಆ ವನ ಪ್ರದೇಶವನ್ನು ಪ್ರವೇಶಿಸಿದ ಕೂಡಲೇ ಅವನೊಂದು ಹೆಣ್ಣಾಗಿ ಪರಿವರ್ತನೆಗೊಂಡು ಬಿಟ್ಟಿದ್ದ. ಅವನು ನೋಡು ನೋಡುತ್ತಿದ್ದಂತೆಯೇ ಅವನ ಪರಿವಾರದವರೆಲ್ಲ  ಹೆಣ್ಣುಗಳಾಗಿ ಬಿಟ್ಟಿದ್ದರು. ಸುದ್ಯುಮ್ನನ ಗಂಡುಕುದುರೆಯೂ ಹೆಣ್ಣಾಗಿ ಬಿಟ್ಟಿತ್ತು. ಸುದ್ಯುಮ್ಮನನ್ನೂ ಸೇರಿ ಅವರೆಲ್ಲರೂ ಮಂಕು ಕವಿದಂತವರಾಗಿ, ಪರಸ್ಪರ ನೋಡಿಕೊಂಡರು.

ಹೌದು! ಅವರೆಲ್ಲರೂ ಹೆಣ್ಣುಗಳಾಗಿಬಿಟ್ಟಿದ್ದರು!

ಸುದ್ಯುಮ್ನ ಅತ್ಯಂತ ಸುಂದರ ಚೆಲುವೆಯಾಗಿ ಹೋಗಿದ್ದ. ತನ್ನನ್ನು ನೋಡುವ ಗಂಡುಗಳ ಮೈಮನಗಳಲ್ಲಿ ಆಸೆಯ ಕಿಚ್ಚೆಬ್ಬಿಸುವಂತಹ ಸೌಂದರ್ಯದ ಖನಿಯಾಗಿ ಹೋಗಿದ್ದ ಅವನು. ಏನಾಗಿ ಹೋಯಿತು ಎಂದು ತಿಳಿದುಕೊಳ್ಳಲಾಗದೆ ಆ ಅರಣ್ಯದಲ್ಲಿನ, ಸುತ್ತಮುತ್ತಲ ಆಶ್ರಮಗಳಲ್ಲಿಯೇ ಅನಾಥನಂತೆ ಅಲೆದಾಡಿಕೊಂಡಿದ್ದ.

ಪರಮ ಚೆಲುವೆಯೊಬ್ಬಳು ಹಸಿರಿನ ನಡುವೆ ಪ್ರಕಾಶಮಾನವಾಗಿ ಓಡಾಡುತ್ತಿದ್ದರೆ ನಾನಾಲೋಕಗಳ ಗಂಡುಗಳ ಕಣ್ಣುಗಳು ಬೀಳದಿರುತ್ತದೆಯೇ ಎಲ್ಲರೂ ಅವಳನ್ನು ನೋಡಿದರು. ಬೆರಗಾದರು, ಮೋಹಗೊಂಡರು.

ಹೀಗೆ ಉತ್ಕಟವಾಗಿ ಮೋಹಗೊಂಡವರಲ್ಲೊಬ್ಬ, ಚಂದ್ರನ ಮಗ ಬುಧ. ಅವಳ ಚೆಲುವಿನ ಸೆಳೆತ ತಾಳಲಾರದೆ ಅವಳೊಂದಿಗೆ ಸುಖಿಸಲು ಬಂದ. ಈ ಚೆಲುವೆಗೂ ಆ ಚೆಲುವನ ಮೇಲೆ ಮನಸ್ಸಾಯಿತು. ಇಬ್ಬರೂ ಒಟ್ಟಾಗಿ ಬಹುಕಾಲ ಸುಖ ಸಂತೋಷಗಳಿಂದಿದ್ದರು. ಅವರಿಗೊಂದು ಗಂಡು ಮಗುವೂ ಆಯಿತು. ಅದಕ್ಕೆ ಪುರೂರವ ಎನ್ನುವ ನಾಮಕರಣವೂ ಆಯಿತು.

ಇಷ್ಟೆಲ್ಲ ಘಟಿಸಿಹೋಗಿ ಸುಖ ಸಂತೋಷಗಳಲ್ಲಿ ತೇಲಾಡುತ್ತಿದ್ದರೂ ಹೆಣ್ಣಾಗಿದ್ದ ಸುದ್ಯುಮ್ನನಿಗೆ ಮನಸ್ಸಿನಲ್ಲಿಯೇ ಅತೃಪ್ತಿ, ಅಸಂತೋಷ ತಾಂಡವವಾಡುತ್ತಿತ್ತು. ಒಂದು ದಿವಸ ದಿಢೀರನೆ ಗುರುವಸಿಷ್ಠರನ್ನು ಸ್ಮರಿಸಿ, `ಗುರುಗಳೇ ಕಾಪಾಡಿ!’ ಎಂದು ಅರ್ತನಾಗಿ ಕೂಗಿಕೊಂಡ.

ರಾಜಕುಮಾರ ಸುದ್ಯುಮ್ನನ ದುಸ್ಥಿತಿಯನ್ನು ತಿಳಿದುಕೊಂಡ ವಸಿಷ್ಠರು ಖಿನ್ನರಾದರು. ಅವನಿಗಾಗಿ ಮತ್ತೆ ಶಿವನನ್ನು ಪ್ರಾರ್ಥಿಸಿದರು.

ಸುದ್ಯುಮ್ನ ಹೆಣ್ಣಾದದ್ದಾದರೂ ಏಕೆ ಎನ್ನುವುದು ಅವರಿಗೆ ತಿಳಿದಿತ್ತು. ಅವನು ಪ್ರವೇಶಿಸಿದ್ದ ವನಭಾಗ ಶಿವನಿಂದ ಶಾಪಗ್ರಸ್ತವಾದ ತಾಣ. ಹಿಂದೊಮ್ಮೆ ಶಿವಪಾರ್ವತಿಯರು ನಿರ್ವಾಣರಾಗಿ ಏಕಾಂತದಲ್ಲಿದ್ದಾಗ ಅಲ್ಲಿಗೊಂದು ಋಷಿ ಸಮೂಹ ಪ್ರವೇಶಿಸಿ ಇವರ ಮಿಥುನವನ್ನು ಕಂಡು ಬಿಟ್ಟಿತ್ತು. ಪಾರ್ವತಿಯ ಬೇಸರ-ಪೇಚಾಟವನ್ನು ಗಮನಿಸಿದ ಶಿವ ನುಡಿದಿದ್ದ : `ಈ ಕಾಡು ಭಾಗವನ್ನು ಇನ್ನು ಮೇಲೆ ಪ್ರವೇಶಿಸುವ ಯಾವ ಗಂಡಾಗಲೀ ಕೂಡಲೇ ಹೆಣ್ಣಾಗಿ ಹೋಗಲಿ!’

ಸುದ್ಯುಮ್ನ ಈ ಶಿವ ವಚನದ ಬಲಿ ಎಂದು ವಸಿಷ್ಠರಿಗೆ ತಿಳಿದಿತ್ತು. ಶಿವನನ್ನು ಧ್ಯಾನಿಸಿ ಸುದ್ಯುಮ್ನನಿಗೆ ಗಂಡುರೂಪ ಕೋರಿದರು. ಪ್ರಸನ್ನನಾದ ಶಿವ ಹೇಳಿದ : `ಅವನು ಒಂದು ತಿಂಗಳು ಗಂಡು ರೂಪದಲ್ಲಿ, ಮತ್ತೊಂದು ತಿಂಗಳು ಹೆಣ್ಣು ರೂಪದಲ್ಲಿ ಇರುತ್ತಾನೆ!’. ಇಂತಹದೊಂದು ಅತಂತ್ರ ಸ್ಥಿತಿಯಲ್ಲಿಯೇ ಸುದ್ಯುಮ್ನ ರಾಜ್ಯಭಾರಮಾಡಿದ. ಅವನ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸಿದ್ಧ ಅಸಮಾಧಾನ ಅವನ ಪ್ರಜೆಗಳನ್ನು ಕಾಡಿತು. ಗಂಡಾಗಿಯೂ ಇರದ, ಹೆಣ್ಣಾಗಿಯೂ ಇರದ ಅಂತಹ ವಿಚಿತ್ರ ರಾಜನನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗಲಿಲ್ಲ.

ಸುದ್ಯುಮ್ನ  ಮದುವೆಯನ್ನು ಆದ. ರಾಜ್ಯಭಾರವನ್ನೂ ಮಾಡಿದ. ಅವನಿಗೆ ಉತ್ಕಲ, ಗಯ ಮತ್ತು ವಿಮಲ ಎನ್ನುವ ಮೂವರು ಗಂಡು ಮಕ್ಕಳು ಹುಟ್ಟಿದರು. ಜೊತೆಗೆ, ಚಂದ್ರಪುತ್ರ ಬುಧನಿಂದ ಹುಟ್ಟಿದ ಪೂರೂರವನೂ ಇದ್ದ. ಹೆಣ್ಣು ಗಂಡು ರೂಪಗಳ ಅತಂತ್ರ ಸ್ಥಿತಿಯಲ್ಲಿಯೇ ಸುದ್ಯುಮ್ನ ಬದುಕು ಸವೆಸಿದ. ವೃದ್ಧಾಪ್ಯ ಎದುರಾದಾಗ ಪುರೂರವನಿಗೆ ರಾಜ್ಯಾಡಳಿತವನ್ನು ಒಪ್ಪಿಸಿ ಕಾಡಿಗೆ ಹೊರಟು ಬಿಟ್ಟ. ನೈಮಿಷಾರಣ್ಯದಲ್ಲಿ ನೆರೆದಿದ್ದ ಋಷಿ ಸಮೂಹವನ್ನು  ನೋಡುತ್ತ ಹಿರಿಯರಾದ ಸೂತಮುನಿಗಳು ಹೇಳಿದರು :

`ಗಂಡು-ಹೆಣ್ಣು ಎರಡೂ ರೂಪ ಧರಿಸಿ ಜೀವನ ಸವೆಸಿದ ಸುದ್ಯುಮ್ನ ಕಾಡಿಗೆ ಹೋದ ಮೇಲೆ, ಗಂಡು ಮಕ್ಕಳ ಮೋಹದಲ್ಲಿಯೆ ಇನ್ನೂ ಕಾಲದೂಡತ್ತ ಬದುಕಿದ್ದ ಅವನ ತಂದೆ ವೈವಸ್ವತ ಮನುವಿಗೆ ಇನ್ನಿಷ್ಟು ಗಂಡು ಮಕ್ಕಳು ಆಗಬೇಕೆಂಬ ಬಲವತ್ತರ ಆಸೆಯಾಯಿತು. ಭಗವಂತನೂ, ದೇವೋತ್ತಮ ಪರಮ ಪುರುಷನೂ, ದೇವಾಧಿದೇವನೂ ಆದವನನ್ನು ಪೂಜಿಸಿ, ತಪಸ್ಸು ಮಾಡಿ, ತನ್ನಂತೆಯೇ ಇರುವ ಹತ್ತು ಗಂಡು ಮಕ್ಕಳನ್ನು ಪಡೆದುಕೊಂಡ. ಈ ಹಂತದಿಂದ ಮನುಪುತ್ರರ ದೊಡ್ಡ ವಂಶವೃಕ್ಷವೊಂದು ಬೇರುಬಿಟ್ಟುಕೊಂಡು ಬೆಳೆಯಿತು. ಈ ವಂಶದ ಇಕ್ಷ್ವಾಕು, ಭರತಖಂಡದ ಚರಿತ್ರೆಯಲ್ಲಿ ಒಂದು ಬಹುಮುಖ್ಯ ಹೆಸರು. ಈ ಇಕ್ಷ್ವಾಕು ಮತ್ತು ಅವನ ಒಂಬತ್ತು ಸಹೋದರರು ಮುಂದೆ ಅನೇಕಾನೇಕ ವಂಶಗಳಿಗೆ – ವರ್ಗಗಳಿಗೆ ಮೊದಲಿಗರಾದರು. ಶ್ರೀಮದ್ಭಾಗವತದ ಈ ಸಂದರ್ಭ ಬರೀ ಈ ವಂಶಾವಳಿಯನ್ನು ಬಣ್ಣಿಸುವುದೇ ಆಗಿದೆ. ವೈವಸ್ವತನ ಹತ್ತು ಮಕ್ಕಳು ಸ್ವಯಂ ಪ್ರಕಾಶನಾದ ದೇವೋತ್ತಮ ಪರಮಪುರುಷನನ್ನು ಹೃದಯಾಂತರಾಳದಿಂದ ಧ್ಯಾನಿಸುತ್ತಿದ್ದ ಪವಿತ್ರಾತ್ಮರಾದವರು, ಉತ್ತಮಮೋತ್ತಮ ವ್ಯಕ್ತಿಗಳು ಅವರ ವಂಶದಲ್ಲಿ ಕಾಣುವಂತೆ ಮಾಡಿದವರು. ಒಬ್ಬೊಬ್ಬರದು ಒಂದೊಂದು ಉನ್ನತ ಕಥೆ. ಮನುಪುತ್ರರಲ್ಲಿ ಒಬ್ಬನಾದ ಪೃಷಧ್ರನಿಂದ ಇಂತಹದೊಂದು ಮಹೋನ್ನತ ಕಥೆ ಪ್ರಾರಂಭವಾಗುತ್ತದೆ!’ – ಎಂದು ಸೂತ ಮುನಿಗಳು ಆ ಪೃಷದ್ರನ ಕಥೆಯನ್ನು ಹೇಳಿದರು.

ಆ ಕಾಲದಲ್ಲಿ ರಾಜಪುತ್ರರು ಗೋರಕ್ಷಣೆಗೆ ನಿಲ್ಲುತ್ತಿದ್ದರು. ಹೀಗೊಂದು ರಾತ್ರಿ ಪೃಷಧ್ರ ಗುರುಗಳಾಶ್ರಮದಲ್ಲಿ ಗೋವುಗಳನ್ನು ಕಾಯುತ್ತಿದ್ದ. ಕತ್ತಿ ಹಿಡಿದುಕೊಂಡು ಕ್ರೂರಮೃಗಗಳು ಬರದಂತೆ ತಡೆದಿದ್ದ. ಆದರೂ ಯಾವುದು ಕ್ಷಣದಲ್ಲಿ ಹುಲಿಯೊಂದು ಬಂದು ದನದ ಕೊಟ್ಟಿಗೆಯನ್ನು ಪ್ರವೇಶಿಸಿ ಹಸುವೊಂದನ್ನು ಹಿಡಿದುಬಿಟ್ಟಿತು. ಹಸುವಿನ ಅರ್ತನಾದ  ಕೇಳಿ ಕತ್ತಲಲ್ಲಿ ಮುನ್ನುಗ್ಗಿದ ಪೃಷಧ್ರ ಹುಲಿಯನ್ನು ಕತ್ತರಿಸುವುದರ ಬದಲು ಹಸುವಿನ ತಲೆಯನ್ನು ಕತ್ತರಿಸಿಬಿಟ್ಟಿದ್ದ. ಬೆಳಗಾಗೆದ್ದು ನೋಡಿದಾಗ ಹಸು ತಲೆಕಡಿದು ಬಿದ್ದಿರುವುದನ್ನು ನೋಡಿ ತುಂಬಾ ದುಃಖದಿಂದ ಗುರು ವಸಿಷ್ಠರನ್ನು ಕಂಡು ಆಕಸ್ಮಿಕವಾಗಿ ನಡೆದುಹೋದದ್ದನ್ನು ವಿವರಿಸಿದ. ವಸಿಷ್ಠರಿಗೆ ಕೋಪ ಬಂದು ಬಿಟ್ಟಿತು. `ನೀನು ಗೋವಿನ ಹತ್ಯೆ ಮಾಡಿದ್ದೀಯ ಕೆಳಜಾತಿಯವನಾಗಿ ಜನ್ಮ ತಾಳು!’ ಎಂದು ಶಪಿಸಿಬಿಟ್ಟರು.

ಸೂತಮುನಿಗಳು ಹೇಳಿದರು :

`ಪಾಪ, ಆ ಪುಣ್ಯವಂತ ಪೃಷಧ್ರ ತಿಳಿಯದೆ ಮಾಡಿದ್ದು ಪಾಪಕೃತ್ಯ ಆಗಿ ಹೋಯಿತು. ಗುರುಗಳ ಕೋಪವನ್ನು ನಂದಿಸಲಾಗಲಿಲ್ಲ. ಶಾಪಗ್ರಸ್ತ ಆಗಬೇಕಾಯಿತು. ಕೆಳಜಾತಿಯವನಾಗಿ ಹುಟ್ಟಲೇಬೇಕಾಯಿತು. ತನ್ನ ಬದುಕನ್ನು ಅವನು ಸಾತ್ವಿಕಗೊಳಿಸಿಕೊಂಡನು. ದೇವೋತ್ತಮ ಪರಮಪುರುಷನಿಗೆ ಸಂಪೂರ್ಣವಾಗಿ ಲಕ್ಷ್ಯಕೊಟ್ಟನು. ಶುದ್ಧಜ್ಞಾನದಿಂದ ಸುಖಭೋಗಗಳನ್ನು ತ್ಯಜಿಸಿ ಕಾಡಿಗೆ ಹೋಗಿ ದೇವೋತ್ತಮ ಪರಮ ಪರುಷನನ್ನು ಧ್ಯಾನಿಸಿ ಪರಿಪೂರ್ಣತೆ ಪಡೆದುಕೊಂಡನು.

ಕರೂಷನೆಂಬ ಇನ್ನೊಬ್ಬ ಮನುಪುತ್ರನಿಂದ ಕಾರೂಷರು ಎನ್ನುವುದೊಂದು ಪೀಳಿಗೆಯ ಉದಯವಾಯಿತು. ಇವರು ಬ್ರಾಹ್ಮಣ ಸಂಸ್ಕೃತಿಯನ್ನು ರಕ್ಷಿಸಿದ ಧರ್ಮಾವಲಂಬಿಗಳು. ದೃಷ್ಟನೆಂಬ ಮನುಪುತ್ರನಿಂದ ಧಾರ್ಷ್ಟ ಕ್ಷತ್ರಿಯ ಕುಲ ಸೃಷ್ಟಿಯಾಯಿತು. ನೃಗನೆಂಬ ಮನುಪುತ್ರನಿಂದ ಸುಮತಿ ಜನಿಸಿದನು. ಇವನಿಂದ ಮುಂದೆ ಭೂತಜ್ಯೋತಿ, ವಸು ಜನ್ಮತಾಳಿದನು. ವಸುವಿನ ಮಗ ಪ್ರತೀಕ. ಪ್ರತೀಕನ ಮಗ ಓಘವಾನ. ಇವನ ಮಗನೂ ಓಘವಾನನೇ. ಇವನ ಮಗಳು ಓಘವತಿ. ಮನುಪುತ್ರ ನರಿಷ್ಯಂತನಿಗೆ ಚಿತ್ರಸೇನ,ಇವನಿಗೆ ಋಕ್ಷ, ಇವನಿಗೆ ಮಿಡವಾನ್‌, ಇವನಿಗೆ ಪೂರ್ಣ, ಇವನಿಗೆ ಇಂದ್ರಸೇನ – ಹೀಗೆ ಮನುವಂಶ ಮುಂದುವರಿಯಿತು.

ಇಂದ್ರಸೇನನಿಂದ ವೀತಿಹೋತ್ರ, ಸತ್ಯಶ್ರವಾ, ಉರುಶ್ರವಾ, ಸತ್ಯಶ್ರವಾ, ದೇವದತ್ತ ಮುಂದಿನ ತಲೆಮಾರಿನವರಾದರು. ದೇವದತ್ತನ ಮಗನಾಗಿ ಅಗ್ನಿದೇವತೆಯೇ ಆದ ಅಗ್ನಿವೇಶ್ಯನು ಹುಟ್ಟಿದನು. ಅಗ್ನಿವೇಶ್ಯಾಯನರು ಎನ್ನುವುದೊಂದು ಬ್ರಾಹ್ಮಣ ವಂಶ ಇವನಿಂದ ಮೊದಲಾಯಿತು.

ಮನುಪುತ್ರ ದಿಷ್ಟನಿಂದ ನಾಭಾಗ ಎನ್ನುವನು ಜನಿಸಿದ. ಇವನು ವೃತ್ತಿಯಿಂದ ವೈಶ್ಯನಾದ. ಇವನ ಮಗ ಭಲಂದನ. ಇವನ ಮಗ ವತ್ಸಪ್ರೀತಿ, ಪ್ರಾಂಶು, ಪ್ರಮತಿ, ಖನಿತ್ರ, ವಿವಿಂಶತಿ, ರಂಭ ಮೊದಲಾದವರು ಈ ವಂಶದ ಮುಂದಿನ ತಲೆಗಳಾದರು. ವಿವಿಂಶತಿಯ ಮಗ ಖನೀನೇತ್ರ, ಇವನ ಮಗ ಕರಂಧಮ, ಇವನ ಮಗ  ಅವೀಕ್ಷಿತ್‌. ಮರುತ್ತ, ದಮ, ರಾಜ್ಯವರ್ಧನ, ಸುಧೃತಿ, ನರ, ಕೇವಲ, ಧುಂದುಮಾನ್‌, ವೇಗವಾನ್‌, ಬುಧ, ತೃಣಬಿಂದು ಮೊದಲಾದವರೆಲ್ಲರೂ ಮುಂದಿನ ಪೀಳಿಗೆಯವರಾದರು.

ಅಲಂಬುಷಾ ಎನ್ನುವ ಅಪ್ಸರೆ ತೃಣಬಿಂದುವನ್ನು ವರಿಸಿದಳು. ಇವರಿಗೆ ಹಲವು ಪುತ್ರರೂ, ಇಲವಿಲಾ ಎನ್ನುವ ಪುತ್ರಿಯೂ ಹುಟ್ಟಿದರು. ಹಠಯೋಗ ಪರಿಣತನಾದ ವಿಶ್ರವ ಮಹರ್ಷಿ ತನ್ನ ತಂದೆಯಿಂದ ಪರಾತ್ಪರ ಜ್ಞಾನವನ್ನು ಪಡೆದ ಮೇಲೆ ಇಲವಿಲೆಯ ಗರ್ಭದಲ್ಲಿ ಯಶೋವಂತನೂ, ಧನಪ್ರದಾಯಕನೂ ಆದ ಕುಬೇರನೆಂಬ ಮಗನನ್ನು ಪಡೆದನು.

ತೃಣಬಿಂದುವಿನ ಮೂವರು ಪುತ್ರರು, ವಿಶಾಲ, ಶೂನ್ಯಬಂಧು, ಧೂಮ್ರಕೇತು. ವಿಶಾಲ ವಂಶವೊಂದರ ಸ್ಥಾಪಕನಾದನು. ಇವನ ಮಗ ಹೇಮಚಂದ್ರ. ಇವನ ಮಗ ಧೂಮ್ರಾಕ್ಷ. ಇವನ ಮಗ ಸಂಯಮ. ಇವನೊಂದಿಗೆ ಇನ್ನಿಬ್ಬರು ಮಕ್ಕಳಿದ್ದಾರೆ – ದೇವಜ ಮತ್ತು ಕೃಶಾಶ್ವ, ಕೃಶಾಶ್ವನ ಪುತ್ರ ಸೋಮದತ್ತ, ಇವನು ಅಶ್ವಮೇಧಯಾಗವನ್ನು ಮಾಡಿ ದೇವೋತ್ತಮ ಪರಮಪುರುಷನಾದ ವಿಷ್ಣುವನ್ನು ಸಂತುಷ್ಟಿಗೊಳಿಸಿದವ. ಮುಂದೆ ಉತ್ತಮ ಪದವಿಯನ್ನು ಹೊಂದಿದವನು. ಇವನ ಮಗ ಸುಮತಿ, ಇವನ ಮಗ ಜನಮೇಜಯ.

ಸೂತಮುನಿಗಳು ಅಡೆತಡೆಯಿಲ್ಲದೆ ಇವೆಲ್ಲ ಮಹಾನ್‌ ರಾಜರುಗಳ ಮತ್ತು ವಂಶಾವಳಿಗಳನ್ನು ಹೇಳಿದ್ದನ್ನು ಕೇಳಿ ಮುಗಿಸಿದ ಮೇಲೆ ಶೌನಕ ಮುನಿಗಳು ಹೇಳಿದರು : `ಗುರುಗಳೇ, ಓಹ್‌ ಎಷ್ಟೊಂದು ವಿಸ್ತಾರವಾದ ವಂಶಗಳು, ಎಷ್ಟೊಂದು ಮಂದಿ ಸಾಧನ ಶೀಲರು ಇವರೆಲ್ಲರ ಕುರಿತು ಒಂದು ವಿವರವನ್ನೂ ಬಿಡದೆ ನೀವು ಹೇಳುವಾಗ, ಮಹಾಭಾರತ ಮತ್ತು ಭಾಗವತ ಪುರಾಣಗಳಲ್ಲಿ ಎಂತೆಂತಹ ಮಹನೀಯರ ಕಥೆಗಳು ಬರುತ್ತವೆ ಎಂದು ಆಶ್ಚರ್ಯ ಸಂತೋಷಗಳಾಗುತ್ತದೆ!

ಸೂತಮುನಿಗಳು ಹೇಳಿದರು :

`ಇಲ್ಲಿ ಬರೀ ದೀರ್ಘವಾಗಿ ವಂಶಾವಳಿಯ ವಿವರಗಳು ಬರುವುದು ಮಾತ್ರವಲ್ಲದೆ ಆದರ್ಶ ಬದುಕಿಗೆ ಮಾದರಿಯಾಗುವಂತಹ ಮಹಾನ್‌ ವ್ಯಕ್ತಿಗಳೂ ಕಾಣಿಸಿಕೊಳ್ಳುತ್ತಾರೆ. ಬರೀ ಅಂಕಿ ಅಂಶಗಳಿಗೆ ಮಾತ್ರ ಎನ್ನದೆ, ಮಾನವನ ಗುಣಾವಗುಣಗಳ ಪರಿಚಯವನ್ನು ಪಡೆಯುವುದಕ್ಕೆ ಇವೆಲ್ಲ ವ್ಯಕ್ತಿ-ವಿವರಗಳನ್ನು ನಾವು ತಿಳಿದುಕೊಳ್ಳಬೇಕು! ಮನುಪುತ್ರರಲ್ಲಿ ಶರ್ಯಾತಿಯ ಕಥೆಯಲ್ಲಿ ಅತಿಪುಣ್ಯಕರವಾದ ಸುಕನ್ಯಾ-ಚ್ಯವನ ಮುನಿಗಳ ಪರಿಣಯದ ಬಹುಸ್ವಾರಸ್ಯ ಕಥಾಭಾಗ ಬರುತ್ತದೆ. ಬಲರಾಮದೇವರ ಪರಿಣಯ ಸಂದರ್ಭ ಬರುತ್ತದೆ. ಈ ಕಥಾಭಾಗವನ್ನು ನಾನೀಗ ಹೇಳುತ್ತೇನೆ.

ಮನುಪುತ್ರ ಶರ್ಯಾತಿ ವೇದಜ್ಞಾನ ಸಂಪನ್ನ ಪ್ರಭು. ಇವನ ಮಗಳು ಚೆಲುವೆಯೂ, ಕಮಲ ನೇತ್ರೆಯೂ ಆದ, ಸುಕನ್ಯಾ. ಶರ್ಯಾತಿರಾಜನು ಒಮ್ಮೆ ಪೂಜ್ಯರಾದ ಚ್ಯವನ ಮುನಿಗಳ ಆಶ್ರಮಕ್ಕೆ ಮಗಳೊಂದಿಗೆ ಭೇಟಿಕೊಟ್ಟನು. ಆಶ್ರಮದ ಪರಿಸರಕ್ಕೆ ಬರುತ್ತಿದ್ದಂತೆಯೇ ಅಲ್ಲಿ ಹಸಿರು ಕಂಗೊಳಿಸುತ್ತಿರುವುದನ್ನೂ, ಹಣ್ಣು ಹಂಪಲು ಪುಷ್ಪಗಳು ಸಂಪದ್ಭರಿತವಾಗಿರುವುದನ್ನೂ ಸುಕನ್ಯಾ ನೋಡಿದಳು. `ಪಿತನೇ, ನಾನು ಈ ಹಸಿರು ಹೂವುಗಳ ನಡುವೆ ಒಂದಿಷ್ಟು ಓಡಾಡಿ ಬರುತ್ತೇನೆ!’ ಎಂದಳು. `ಮೊದಲು ಮುನಿಗಳನ್ನು ನೋಡಿ ನಮಸ್ಕರಿಸಿಬಿಡೋಣ.ಆಮೇಲೆ ಇಲ್ಲೆಲ್ಲಾ ಓಡಾಡಬಹುದಮ್ಮಾ’ ಎಂದೂ ಶರ್ಯಾತಿ ಹೇಳಿದನು. ಸುಕನ್ಯಾ ಆ ವೇಳೆಗಾಗಲೇ ದಟ್ಟ ಮರಗಿಡಗಳ ನಡುವೆ ಹೆಜ್ಜೆ ಹಾಕಿಬಿಟ್ಟಿದ್ದಳು.

ಗೆಳತಿಯರೊಂದಿಗೆ ವೃಕ್ಷರಾಶಿಯ ನಡುವಿನ ತಂಪಿನಲ್ಲಿ ಹಾರಾಡುತ್ತ, ಕೈಗೆಟುಕಿದ ಹೂ ಹಣ್ಣುಗಳನ್ನು ಸಂಗ್ರಹಿಸುತ್ತ ಸುಕನ್ಯಾ ಹಕ್ಕಿಯಂತೆ ಮುನ್ನಡೆದಿದ್ದಳು. ಅಲ್ಲೇ ಒಂದು ಕಡೆ ಸೊಗಸಾದ ಹಣ್ಣುಗಳ ಗೊಂಚಲು ಕಂಡಾಗ ಅಲ್ಲಿ ಮುನ್ನುಗ್ಗಿದ್ದಳು. ಆಗಲೇ ಅವಳಿಗೆ ಎರೆಹುಳುವಿನ ಗೂಡೊಂದರಲ್ಲಿ ಜ್ಯೋತಿ ಮಂಡಲದಂತೆ ಪ್ರಕಾಶಿಸುತ್ತಿದ್ದ ಎರಡು ವಸ್ತುಗಳನ್ನು ಕಂಡಳು. `ಲೇ, ಸಖಿಯರೇ ಇಲ್ಲಿ ಬನ್ನಿ, ಇಲ್ಲೇನೋ ಒಂದು ಅಪರೂಪವಾದದ್ದು ಕಾಣಿಸುತ್ತಿದೆ. ಬೇಗ ಬನ್ನಿ ನೋಡೋಣ!’ – ಎಂದು ಕೂಗು ಹಾಕಿ ಅದರತ್ತ ಬಗ್ಗಿದಳು. ಎರಡು ತೂತುಗಳಲ್ಲಿ ಎರಡು ಪ್ರಜ್ವಲಮಾನವಾದ ಪ್ರಕಾಶ. ಆ ಬಾಲೆಯ ತಿಳಿಗೇಡಿತನ ಅವಳನ್ನು ಸುಮ್ಮನೆ ಇರಗೊಡಲಿಲ್ಲ. ಕೂಡಲೇ ಅವಳು ಅಲ್ಲೇ ಇದ್ದ  ಮುಳ್ಳೊಂದನ್ನು ತೆಗೆದು ಆ ತೂತುಗಳನ್ನು ಚುಚ್ಚಿದಳು.

ಅವಳು ಬೆಚ್ಚಿಬೀಳುವಂತಾಯಿತು! ಥಟ್ಟನೆ ಆ ತೂತುಗಳಿಂದ ರಕ್ತ ಚಿಮ್ಮಿತು, ದಿಢೀರೆಂದು ಅಲ್ಲಿಂದ ತಪಸ್ಸು ಮಾಡುತ್ತಿದ್ದ ಚ್ಯವನ ಮುನಿಗಳು ಎದ್ದು ನಿಂತರು. ಅವರ ಮುಖ ಕೋಪದಿಂದ ಬೆಂಕಿಯುಗುಳುತ್ತಿತ್ತು. ಕಣ್ಣುಗಳಿಂದ ರಕ್ತ ಚಿಮ್ಮಿ ಕೆಳಗಿಳಿಯುತ್ತಿತ್ತು. `ಅಯ್ಯೋ, ಅಯ್ಯೋ, ನನಗೆ ಗೊತ್ತಾಗಲಿಲ್ಲ. ಏನೋ ಹುಳ ಅಂದುಕೊಂಡು ಚುಚ್ಚಿಬಿಟ್ಟೆ. ನನ್ನನ್ನು ಕ್ಷಮಿಸಿ, ಕ್ಷಮಿಸಿ…!

ಅದೇ ಸಮಯದಲ್ಲಿ ಆಶ್ರಮದಲ್ಲಿದ್ದ ಶರ್ಯಾತಿ ರಾಜನಿಗೂ ಮತ್ತವನ ಪರಿವಾರ ಜನರಿಗೂ ಅಸೌಖ್ಯವುಂಟಾಯಿತು. ಆಗಲೇ ಚ್ಯವನ ಮುನಿಗಳು ದಢದಢನೆ ತಮ್ಮಲ್ಲಿಗೆ ಬರುತ್ತಿರುವುದು ಕಾಣಿಸಿತು.

`ಗುರುಗಳೇ, ಗುರುಗಳೇ ಏನಾಯಿತು, ಯಾಕೆ ನಿಮ್ಮ ಕಣ್ಣುಗಳಿಂದ ರಕ್ತ ಬರುತ್ತಿದೆ, ಇದನ್ನು ಮಾಡಿದವರು ಯಾರು, ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ್ಲ!” – ಎಂದೆಲ್ಲ ಗಾಭರಿ-ಕೋಪಗಳಿಂದ ರಾಜ ಬಡಬಡಿಸಿದ.

ಚ್ಯವನರು ಹೇಳಿದರು : `ನೀನವರನ್ನು ರಕ್ಷಿಸೋದು ಸಾಧ್ಯವಿಲ್ಲ. ಈ ಅಚಾತುರ್ಯ ಮಾಡಿದ್ದು, ನಿನ್ನ ಮಗಳು ಸುಕನ್ಯಾ!’

ಶರ್ಯಾತಿಯನ್ನು ಸೇರಿ ಇಡೀ ಪರಿವಾರ ಬೆಚ್ಚಿತು, ಬೆದರಿತು, ನಡಗಿತು. ಚ್ಯವನ ಮುನಿಗಳ ಕೋಪವನ್ನು ಎದುರಿಸುವವರು ಯಾರು? ಎಲ್ಲರೂ ಚಿಂತಿಸುತ್ತ ನಿಂತರು.

ಭಯಪೀಡಿತನಾದ ಶರ್ಯಾತಿ, `ಪೂಜ್ಯರೆ, ನನ್ನ ಮಗಳು ಅಮಾಯಕಳು. ಹೀಗಾಗುತ್ತದೆಂದು ತಿಳಿಯದೆ ಏನೋ ಆಟಕ್ಕೆಂದು ಮಾಡಿ ಬಿಟ್ಟಿದ್ದಾಳೆ. ನೀವು ಅವಳನ್ನು ಕ್ಷಮಿಸಬೇಕು. ನಮ್ಮನ್ನೆಲ್ಲ ಕಾಪಾಡಿ ಉದ್ಧರಿಸಬೇಕು!’

ಚ್ಯವನ ಮಹರ್ಷಿಯ ಕೋಪ ಇಳಿಯಲಿಲ್ಲ. `ತಿಳಿದು ಮಾಡಿದರೇನು, ತಿಳಿಯದೇ ಮಾಡಿದರೇನು? ನನ್ನ ಕಣ್ಣುಗಳು ಇಂಗಿ ಹೋದವಲ್ಲ, ಮುಂದೆ ನಾನು ಬದುಕುವುದಾದರೂ ಹೇಗೆ? ನಿಮಗ್ಯಾರಿಗೂ ಕ್ಷಮೆಯಿಲ್ಲ .’

ಶರ್ಯಾತಿ ಯೋಚಿಸಿದ. ತಪ್ಪಾಗಿ ಹೋಗಿದೆ. ಮುನಿಪುಂಗವರಿಗೆ ಸಹಾಯ ಮಾಡಲು ತಪ್ಪು ಮಾಡಿದ ತನ್ನ ಮಗಳನ್ನೇ ನಿಯಮಿಸಬೇಕು. ಮುನಿಗಳ ಮಾತಿನಲ್ಲೂ ಇಂತಹದೊಂದು ಸೂಚನೆ ಇದ್ದಂತಿತ್ತು. ಅವರನ್ನು ಕಾಡಿಬೇಡಿ ತನ್ನ ಮಗಳನ್ನು ಅವರಿಗೆ ದಾನರೂಪದಲ್ಲಿ ಕೊಟ್ಟು ವಿವಾಹಮಾಡಿದ.

ಆ ಕುರುಡು ವೃದ್ಧ ಋಷಿಯ ಕೋಪ ತಾಪಗಳನ್ನು ಸಹಸಿಕೊಳ್ಳುತ್ತಾ, ಅವರ ಸೇವೆಮಾಡಿಕೊಂಡು ಇದ್ದು ಬಿಟ್ಟಳು, ಸುಕನ್ಯಾ!

ಬಹುಕಾಲಾನಂತರ ಒಂದು ದಿವಸ ದೇವಲೋಕದ ವೈದ್ಯರಾದ ಅಶ್ವಿನಿದೇವತೆಗಳು ಚ್ಯವನ ಮುನಿಗಳನ್ನು ಕಾಣಲು ಬಂದರು.  ಮುನಿಗಳ ಆದರೋಪಚಾರಗಳಲ್ಲಿ ತೃಪ್ತರಾದರು. ಚ್ಯವನ ಮುನಿಗಳ ಕೋರಿಕೆಯಂತೆ ಅವರ ಅನಾರೋಗ್ಯ ಮುಪ್ಪುಗಳನ್ನು ಪರಿಹರಿಸಿ ಅವರಿಗೆ ಯೌವನವನ್ನು ಅನುಗ್ರಹಿಸಿದರು.

ಸುಕನ್ಯಾಳ ಸಂಸಾರ ಸುಖಮಯವಾಗಿತ್ತು. ಅವಳ ವಯಸ್ಸಿಗೆ ಅನುಗುಣನಾದ ಗಂಡನ ಪ್ರಾಪ್ತಿಯಾಗಿತ್ತು. ಆ ಗಂಡನೊಂದಿಗೆ ಸುಖವಾಗಿ ಕ್ರೀಡಿಸುತ್ತಿದ್ದಳು. ಹೀಗಿರುವಾಗ ಒಮ್ಮೆ ಶರ್ಯಾತಿ ರಾಜ ಯಜ್ಞವೊಂದನ್ನು ಆಚರಿಸಲು ಚ್ಯವನ ಮುನಿಗಳಲ್ಲಿಗೆ ಬಂದನು. ಅಲ್ಲಿ ಅವನಿಗೆ ಆಘಾತ ಕಾದಿತ್ತು: ವೃದ್ಧ ಕುರುಡು ಮುನಿಗಳ ಬದಲು ಅತಿ ಸುಂದರ ಯುವಕನೊಬ್ಬನೊಂದಿಗೆ ತನ್ನ ಮಗಳು ಸುಕನ್ಯಾ ಚಕ್ಕಂದವಾಡುತ್ತಿರುವುದನ್ನು ಅವನು ಕಂಡ. ಕೂಡಲೇ ನುಗ್ಗಿ ಅವಳನ್ನು ಜಗ್ಗಿ ನಿಲ್ಲಿಸಿದ. `ಎಲೈ, ಅಶುದ್ಧಳಾದ ಬಾಲೆಯೇ, ಗಂಡನಿಗೆ ದ್ರೋಹ ಬಗೆಯುತ್ತಿರುವೆಯಾ? ವೃದ್ಧನಾದರೂ ಆತ ನಿನ್ನ ಕೈಹಿಡಿದ ಪತಿ. ನಿನ್ನ ಕೆಲಸದಿಂದ ನನ್ನ ವಂಶಕ್ಕೆ ಕಳಂಕವುಂಟಾಗಿ ಹೋಗಿದೆ!’ ಎಂದು ಅಬ್ಬರಿಸಿದ.

ಸುಕನ್ಯಾ ಬೆಚ್ಚಲಿಲ್ಲ. ಆನಂದಾತಿಶಯದಿಂದ ನಗುತ್ತಿದ್ದಳು. `ತಂದೆಯೇ, ಇವರು ಬೇರೆ ಯಾರೂ ಅಲ್ಲ. ದೈವಾನುಗ್ರಹದಿಂದ ಯೌವನ ಗಳಿಸಿರುವ ನಿಮ್ಮ ಅಳಿಯದೇವರೇ!’ ತಂದೆಗೆ ಈ ಯೌವನದ ಕಥೆ ಹೇಳಿದಳು. ಶರ್ಯಾತಿಗೆ ಸಂತೋಷಾಶ್ಚರ್ಯ. ಶರ್ಯಾತಿರಾಜ ಸೋಮಯಜ್ಞವನ್ನು ಮಾಡುವಂತೆ ಸಮರ್ಥನಾಗಲು ಚ್ಯವನ ಮುನಿ ತನ್ನ ಸ್ವಂತ ಶಕ್ತಿಯನ್ನು ವಿನಿಯೋಗಿಸಿದನು. ಸೋಮ ಯಜ್ಞದ ನಂತರ ಸೋಮರಸಪಾನ ಮಾಡಲು ಅಶ್ವಿನಿಕುಮಾರರು ಅನರ್ಹರಾಗಿದ್ದರೂ ಕೂಡ, ಅವರಿಗೆ ಒಂದು ಪೂರ್ಣಕುಂಭದಷ್ಟು ಸೋಮರಸವನ್ನು ಚವನಮುನಿ ನೀಡಿದನು. ಇದರಿಂದ ಇಂದ್ರನಿಗೆ ಸಿಟ್ಟಬಂದು, ಚ್ಯವನ ಮುನಿಗಳಲ್ಲಿಗೆ ಬಂದರೂ, ಇಂದ್ರ ಚ್ಯವನಮುನಿಗಳಿಗೆ ಏನೂ ಮಾಡಲಾಗಲಿಲ್ಲ.

ಶರ್ಯಾತಿರಾಜನಿಗೆ ಉತ್ತಾಬರ್ಹಿ, ಆನರ್ತ, ಭೂರಿಷೇಣ ಎಂದು ಮೂವರು ಗಂಡು ಮಕ್ಕಳು. ಆನರ್ತನಿಗೆ ರೇವತನೆಂಬ ಮಗ ಜನಿಸಿದನು. ರೇವತನಿಗೆ ನೂರು ಗಂಡು ಮಕ್ಕಳು ಆದರು. ಇವರಲ್ಲಿ ಹಿರಿಯವನು ಕಕುದ್ಮಿ, ಈ ಕಕುದ್ಮಿಗೆ ರೇವತಿಯೆಂಬ ಮಗಳಿದ್ದಳು. ಇವಳಿಗೆ ಗಂಡು ಹುಡುಕಿಕೊಂಡು ಕಕುದ್ಮಿ ಬ್ರಹ್ಮಲೋಕದವರೆಗೂ ಹೋದನು. `ದೇವೋತ್ತಮ ಪರಮ ಪುರುಷನಾದ ಬಲರಾಮ ಇದ್ದಾನೆ. ಅವನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು’ ಎಂದು ಹೇಳಿದ ಬ್ರಹ್ಮ.

ಸೂತ ಮುನಿಗಳು ಹೇಳಿದರು : `ಕಕುದ್ಮಿ ಹಾಗೆಯೇ ಮಾಡಿದ. ಮಗಳು ರೇವತಿಯನ್ನು ಬಲರಾಮದೇವರಿಗೆ ಕೊಟ್ಟು ಮದುವೆ ಮಾಡಿದನು. ಅನಂತರ ಮುಂದೆ ಐಹಿಕ ಬದುಕಿನಿಂದ ನಿವೃತ್ತನಾಗಿ, ನರ-ನಾರಾಯಣನನ್ನು ಸುಪ್ರೀತಗೊಳಿಸಲು ಬದರಿಕಾಶ್ರಮಕ್ಕೆ ತೆರಳಿದನು!’

ಅಂದಿನ ಕಥಾಭಾಗ ಮುಗಿದಿತ್ತು. ಸೂತಮುನಿಗಳು ಮಂಗಳ ಹಾಡಿ ಕಥಾಶ್ರವಣವನ್ನು ಅಲ್ಲಿಗೆ ನಿಲ್ಲಿಸಿದರು.  

ಈ ಲೇಖನ ಶೇರ್ ಮಾಡಿ