ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ.
ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 2 ರಿಂದ 4ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಅಂಬರೀಷ ಮಹಾರಾಜನ ರಾಜ್ಯಭಾರದ ವರ್ಣನೆ ನೀಡಲಾಗಿತ್ತು. ಈಗ ಅವನ ಏಕಾದಶಿ ವ್ರತ ಹಾಗೂ ದೂರ್ವಾಸರೊಡನೆ ಭೇಟಿಯನ್ನು ಕಾಣುತ್ತೀರಿ.
ಶ್ರೀ ಕೃಷ್ಣಪೂಜೆಯ ಅಂಗವಾಗಿ ಮಹಾರಾಜ ಅಂಬರೀಷನೂ, ಆತನಷ್ಟೇ ಭಕ್ತಳಾಗಿದ್ದ ಅವನ ರಾಣಿಯೂ, ಏಕಾದಶಿ ಮತ್ತು ದ್ವಾದಶಿಗಳ ವ್ರತವನ್ನು ಒ೦ದು ವರ್ಷ ಪರ್ಯ೦ತ ಆಚರಿಸಿದರು. ಈ ವ್ರತವನ್ನು ಒಂದು ವರ್ಷ ಕಾಲ ಆಚರಿಸಿದ ತರುವಾಯ, ಮೂರು ರಾತ್ರಿಗಳ ಪರ್ಯಂತ ಉಪವಾಸ ಕೈಗೊಂಡು ಯಮುನಾ ನದಿಯಲ್ಲಿ ಸ್ನಾನ ಮಾಡಿ ಅಂಬರೀಷ ಮಹಾರಾಜನು ಕಾರ್ತಿಕ ಮಾಸದಲ್ಲಿ, ಹರಿಯಾದ ದೇವೋತ್ತಮ ಪರಮ ಪುರುಷನನ್ನು ಮಧುವನದಲ್ಲಿ ಪೂಜಿಸಿದನು.

ಶ್ರೀ ಕೃಷ್ಣನ ಮಹಾಭಿಷೇಕ ನೆರವೇರಿಸಿದನು. ಶ್ರದ್ಧಾಭಕ್ತಿಗಳಿಂದ ಕೃಷ್ಣನನ್ನೂ ಐಹಿಕಾಪೇಕ್ಷೆಗಳಿಂದ ಮುಕ್ತರಾದ ಬಹು ಸುದೈವಿಗಳಾದ ಬ್ರಾಹ್ಮಣರನ್ನೂ ಪೂಜಿಸಿದನು. ಪ್ರತಿಯೊಬ್ಬ ಬ್ರಾಹ್ಮಣನಿಗೂ ದಾನ ನೀಡಿದನು. ಒಟ್ಟು 60 ಕೋಟಿ ಹಸುಗಳನ್ನು ದಾನವಾಗಿ ನೀಡಿದನು.
ಪ್ರತಿಯೊಂದು ಹಸುವು ಬಹು ಸುಂದರವೂ, ಶಾಂತ ಸ್ವಭಾವದವೂ ಆಗಿದ್ದವು. ಅವುಗಳ ಕೊಂಬುಗಳಿಗೆ ಚಿನ್ನದ ಅಚ್ಚುಗಳಿದ್ದವು ಮತ್ತು ಗೊರಸುಗಳಿಗೆ ಬೆಳ್ಳಿಯ ಹೊದಿಕೆ ಹೊದಿಸಲಾಗಿತ್ತು. ಅಷ್ಟೇ ಅಲ್ಲದೆ ಹಸುಗಳು ಅಲಂಕಾರದಿಂದ ಭೂಷಿತವಾಗಿದ್ದವು ಮತ್ತು ತಮ್ಮ ಕರುಗಳೊಡನೆ ಇದ್ದವು. ಗೋವುಗಳ ಕೆಚ್ಚಲು ಹಾಲಿನಿಂದ ತುಂಬಿ ತುಳುಕುತ್ತಿತ್ತು.
ಹೀಗೆ ಎಲ್ಲರನ್ನೂ ಸಂತುಷ್ಟಗೊಳಿಸಿ ಎಲ್ಲರ ಅನುಮತಿ ಪಡೆದು ಏಕಾದಶಿ ವ್ರತವನ್ನು ಅಂತ್ಯಗೊಳಿಸಿ ಇನ್ನೇನು ಉಪವಾಸವನ್ನು ನಿಲ್ಲಿಸಬೇಕೆಂದುಕೊಂಡಿದ್ದಾಗಲೇ, ವಿಧಿ ರೂಪದಲ್ಲಿ ದೂರ್ವಾಸ ಮಹರ್ಷಿಗಳ ಆಗಮನವಾಗಿತ್ತು. ಮಹಾರಾಜ ಅವರನ್ನು ಸಕಲಾದರಗಳೊಂದಿಗೆ ಬರಮಾಡಿಕೊಂಡ.
ಅಂದು ಉಳಿದುಕೊಂಡು ತನ್ನೊಂದಿಗೆ ಭೋಜನ ಸ್ವೀಕರಿಸಬೇಕೆಂದು ಪ್ರಾರ್ಥಿಸಿಕೊಂಡ. ದೂರ್ವಾಸರು ಬಹಳ ಸಂತೋಷದಿಂದ ಈ ಆಹ್ವಾನ ಸ್ವೀಕರಿಸಿ, ಇಂತಹದೊಂದು ಮಹಾನ್ ಉಪಾಸನೆಗಾಗಿ ಅಂಬರೀಷನನ್ನು ಅಭಿನಂದಿಸಿ, ಕ್ರಮಬದ್ಧವಾಗಿ ಶಾಸ್ತ್ರವಿಧಿಗಳನ್ನಾಚರಿಸುವ ನಿಮಿತ್ತ ಸ್ನಾನಕ್ಕೆ೦ದು ಯಮುನಾ ನದಿಗೆ ತೆರಳಿದರು. ಅಲ್ಲಿ ಮಿಂದು ಶಾಸ್ತ್ರ ವಿಧಿಗಳನ್ನಾಚರಿಸುತ್ತಾ ನಿರಾಕಾರ ಬ್ರಹ್ಮನ್ನನ್ನು ಕುರಿತು ಧ್ಯಾನಾಸಕ್ತರಾದರು.
ಅಂಬರೀಷ ಮಹಾರಾಜ ದೂರ್ವಾಸರಿಗಾಗಿ ಕಾಯುತ್ತಿದ್ದ. ಅವರು ಕೂಡಲೇ ಬರಲಿಲ್ಲ. ಉಪವಾಸ ಮುಕ್ತಾಯ ಮಾಡಲು ಇನ್ನೂ ಒಂದೇ ಒಂದು ಮುಹೂರ್ತ ಮಾತ್ರ ಉಳಿದಿತ್ತು. ಕೂಡಲೇ ಉಪವಾಸವನ್ನು ಮುಕ್ತಾಯಗೊಳಿಸುವುದು ಅತ್ಯಗತ್ಯವಾಗಿತ್ತು. ಇಲ್ಲದಿದ್ದರೆ ವ್ರತದ ಫಲ ಕೈಗೆಟಕುತ್ತಿರಲಿಲ್ಲ. ರಾಜನಿಗೆ ಚಿಂತೆಯಾಯಿತು. ವಿದ್ವಾಂಸರಾದ ಬ್ರಾಹ್ಮಣರೊಂದಿಗೆ ಸಮಾಲೋಚಿಸಿದ.
‘ಪೂಜ್ಯ ಬ್ರಾಹ್ಮಣರೆ ಈಗ ನಾನೇನು ಮಾಡಬಹುದು ಹೇಳಿ! ಬ್ರಾಹ್ಮಣರ ಬಗೆಗೆ ಗೌರವಯುತವಾಗಿ ವರ್ತಿಸಬೇಕೆನ್ನುವ ನಿಯಮವನ್ನು ಉಲ್ಲಂಘಿಸುವುದು ಮಹಾಪರಾಧವಾಗುತ್ತದೆ. ಮತ್ತೆ ಉಪವಾಸವನ್ನು ದ್ವಾದಶಿ ಘಳಿಗೆ ಇರುವಾಗಲೇ ನಿಲ್ಲಿಸದಿದ್ದರೆ ವ್ರತಾಚರಣೆಯಲ್ಲಿ ಲೋಪವೆಸಗಿದಂತಾಗುತ್ತದೆ. ಆದ್ದರಿಂದ ಏನು ಮಾಡಬೇಕು ಎಂದು ನೀವು ಹೇಳಿದರೆ ಹಾಗೆ ಮಾಡುತ್ತೇನೆ ಎಂದು ಹೇಳಿದ. ಬ್ರಾಹ್ಮಣರು ಹೇಳಿದರು: ‘ಹೇ ರಾಜನ್, ಜಲಪಾನ ಮಾಡಿ ಉಪವಾಸವನ ಮುಕ್ತಾಯಗೊಳಿಸಿದರ ಅಧರ್ಮವಾಗುವುದಿಲ್ಲ!’
ಅಂಬರೀಷ ಹಾಗೆಯೇ ಅಲ್ಪ ಜಲಪಾನ ಮಾಡಿ ದೂರ್ವಾಸರಿಗಾಗಿ ಕಾದು ಕುಳಿತ.
ಧ್ಯಾನದಲ್ಲಿದ್ದಂತೆಯೇ ದೂರ್ವಾಸರಿಗೆ, ರಾಜ ಜಲಪಾನ ಮಾಡಿ ಉಪವಾಸ ಮುಕ್ತಾಯ ಮಾಡಿದ ವಿಷಯ ತಿಳಿದು ಹೋಗಿತ್ತು. ಇನ್ನೂ ಹಸಿದುಕೊಂಡೇ ಇದ್ದ ಅವರು ಕ್ರೋಧದಿಂದ ಕಂಪಿಸಿದರು. ಭರಭರನೆ ನಡೆದುಕೊಂಡು ಬಂದು ಅಂಬರೀಷನ ಮುಂದೆ ನಿಂತರು.

‘ಮಹಾರಾಜ, ಭೋಜನಕ್ಕೆ ನೀನಾಗಿ ಆಹ್ವಾನಿಸಿದೆ. ಆದರೆ ನನಗಾಗಿ ಕಾಯದೆ ನನಗಿಂತಲೂ ಮೊದಲೇ ಭೋಜನವನ್ನು ಮುಗಿಸಿಬಿಟ್ಟಿದ್ದೀಯೆ. ಇದು ದುರ್ವರ್ತನೆ! ಎನ್ನುತ್ತಲೇ ಅವರು ತಮ್ಮ ಶಿರರೋಮಗಳನ್ನು ಕಿತ್ತು ಅದರಿಂದ ಪ್ರಳಯ ಕಾಲದ ಕಾಲಾಗ್ನಿಯನ್ನು ಹೋಲುವ ದೈತ್ಯನನ್ನು ಸೃಷ್ಟಿಸಿದರು.
ತ್ರಿಶೂಲ ಹಿಡಿದು ಭಯಂಕರವಾಗಿ ನಿಂತ ಆ ದೈತ್ಯನನ್ನು ನೋಡಿ ಅಂಬರೀಷ ಬೆದರಲಿಲ್ಲ. ಅಚಲಿತನಾಗಿ ಪರಮಾತ್ಮನ ಧ್ಯಾನದಲ್ಲಿ ಮೈಮರೆತ. ಆಗಲೇ ಸುದರ್ಶನ ಚಕ್ರ ಬಂದು ಆ ದೈತ್ಯನನ್ನು ಸುಟ್ಟು ಬೂದಿ ಮಾಡಿ ದೂರ್ವಾಸರಲ್ಲಿಗೆ ನುಗ್ಗಿತು. ಅವರು ಭಯ ಪೀಡಿತರಾಗಿ ಓಡಿದರು. ಎಲ್ಲೆಲ್ಲಿ ಓಡಿದರೂ, ಅಡಗಿಕೊಂಡರೂ ಚಕ್ರ ಅವರನ್ನು ಬಿಡದೆ ಬೆನ್ನಟ್ಟಿತು.
ಬ್ರಹ್ಮ ಲೋಕ, ಶಿವಲೋಕ ಎಲ್ಲೆಲ್ಲೂ ಓಡಿ ಬೇಡಿಕೊಂಡರು. ಶಿವನಿ೦ದ ಅವರಿಗೆ ಸಲಹಾರೂಪದಲ್ಲೊಂದು ಸಹಾಯ ಬ೦ದಿತು : ‘ದೂರ್ವಾಸರೇ, ಸುದರ್ಶನ ಚಕ್ರವನ್ನು ಸಹಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀವು ಅದರೊಡೆಯ ವಿಷ್ಣುವಿನಲ್ಲಿಯೇ ಬೇಡಿಕೊಳ್ಳಿ!
ಬೇರೆ ದಾರಿ ಇಲ್ಲದೆ ದೂರ್ವಾಸರು ವಿಷ್ಣುವಿನ ಮೊರೆ ಹೊಕ್ಕರು. ‘ಜಗದ್ರಕ್ಷಕಾ ಕಾಪಾಡು, ನನ್ನಿ೦ದ ಮಹಾಪರಾಧವಾಗಿದೆ, ರಕ್ಷಣೆ ಕೊಡು!” ಎಂದರು. ಭಗವಾನ್ ವಿಷ್ಣು ದುರ್ವಾಸರಿಗೆ ಉತ್ತರಿಸಿದನು:
“ಬ್ರಹ್ಮ ದ್ವಿಜರಾದ ದುರ್ವಾಸರೇ, ನಾನು ಸದಾ ಸಂಪೂರ್ಣವಾಗಿ ನನ್ನ ಭಕ್ತರ ನಿಯಂತ್ರಣದಲ್ಲಿದ್ದೇನೆ, ನಾನು ಅವರಿ೦ದ ಸ್ವತಂತ್ರನಲ್ಲ. ಏಕೆಂದರೆ ನನ್ನ ಭಕ್ತರು ನಿಷ್ಕಲ್ಮಷರು ಮತ್ತು ಅವರ ಹೃದಯಾಂತರಾಳದಲ್ಲಿ ನಾನು ನೆಲೆಸಿದ್ದೇನೆ. ಅಷ್ಟೇ ಅಲ್ಲ ನನ್ನ ಭಕ್ತರ ಭಕ್ತರಾದವರೂ ನನಗೆ ಬಹಳ ಪ್ರಿಯರು.”
ವಿಷ್ಣುವು ಮುಂದುವರಿಸುತ್ತ : “ನನ್ನನ್ನೆ ಪರಮ ಗುರಿಯನ್ನಾಗಿ ಮಾಡಿಕೊಂಡಿರುವ ಸಾಧುಗಳಿಲ್ಲದೆ. ನಾನು ನನ್ನ ದಿನ ವರಮಾನವನ್ನಾಗಲಿ ದಿವ್ಯ ಪರಮ ವೈಭವವನ್ನಾಗಲಿ ನಾನು ಭೋಗಿಸಲಾರೆ. ನಮ್ಮ ಮನೆ, ಮಟ, ಮಕ್ಕಳು, ಬಂಧುಗಳು, ಐಶ್ವರ್ಯಗಳನ್ನೆಲ್ಲ ನಿನಗಾಗಿ ತ್ಯಜಿಸಿದ ಈ ಸಾಧು ಭಕ್ತರನ್ನು ನಾನೇ ರಕ್ಷಿಸದಿರಲ್ಲ? ಸ್ವತಃ ಪತ್ನಿ ತನ್ನ ಸೇವೆಯಿ೦ದ ಪತಿಯನ್ನು ನಿಯಂತ್ರಿಸುವಂತೆ ಎಲ್ಲರನ್ನೂ ಸಮಾನವಾಗಿ ಕಾಣುವ ನನ್ನ ಭಕ್ತರು ಹೃದಯಾಂತರಾಳದಿಂದ ನನ್ನನ್ನು ಪ್ರೀತಿಸಿ ನನ್ನನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ.
ಇಂತಹ ಶುದ್ಧ ಭಕ್ತನು ಸದಾ ನನ್ನ ಹೃದಯದಲ್ಲಿರುತ್ತಾನೆ ಮತ್ತು ನಾನು ಆ ಭಕ್ತನ ಹೃದಯದಲ್ಲಿರುತ್ತೇನೆ. ನನ್ನನ್ನಲ್ಲದೆ ಬೇರೇನನ್ನು ಭಕ್ತರು ಅರಿಯರು ಮತ್ತು ನಾನೂ ಕೂಡ ಅವರನ್ನಲ್ಲದೆ ಬೇರಾರನ್ನೂ ಅರಿಯೆ”.
ದೇವೋತ್ತಮ ಪರಮ ಪುರುಷ ಮುಂದುವರಿಸುತ್ತ ಹೇಳಿದ : ‘ದೂರ್ವಾಸರೆ, ನಾನು ಭಕ್ತಾದೀನ. ನಿಮ್ಮ ಅಪಚಾರವನ್ನು ನೀವು ಅಂಬರೀಷನಿಂದಲೇ ಪರಿಹರಿಸಿಕೊಳ್ಳಬೇಕು! ಆತನಲ್ಲಿಗೆ ಹೋಗಿ ಕ್ಷಮೆ ಕೋರಿರಿ!
ದೂರ್ವಾಸ ಮುನಿಗಳಿಗೆ ಬೇರೆ ದಾರಿ ಇರಲಿಲ್ಲ. ಬೆದರಿ ಅಲುಗಾಡಿಹೋಗಿದ್ದ ಅವರು ಅಂಬರೀಷನಲ್ಲಿಗೆ ಓಡಿ ಬಂದು ಅವನ ಪಾದಗಳಲ್ಲಿ ಉರುಳಿದರು! ಅ೦ಬರೀಷ ಸಂಕೋಚದಿಂದ ಮುದುಡಿಕೊಂಡು ಸುದರ್ಶನ ಚಕ್ರವನ್ನು ಕುರಿತು ಪ್ರಾರ್ಥಿಸಿದ : “ಎಲ್ಲ ಆಯುಧಗಳ ವಿನಾಶಕನೇ, ದೇವೋತ್ತಮನ ಮೂಲ ದರ್ಶನನೇ, ನಿನಗೆ ನನ್ನ ಗೌರವಪೂರ್ಣ ಪ್ರಣಾಮಗಳು. ಈ ಬ್ರಾಹ್ಮಣ ಮಹಾಮುನಿಗೆ ಸ್ವಸ್ತಿಯನ್ನೂ ಆಶ್ರಯವನ್ನೂ ದಯಮಾಡು!

‘ಹೇ ವಿಶ್ವ ಪಾಲಕನೇ, ದೇವೋತ್ತಮ ಪರಮ ಪುರುಷನು ಅಸೂಯಾಪರ ಶತ್ರುಗಳನ್ನು ಕೊಲ್ಲಲು ಸರ್ವಶಕ್ತ ಆಯುಧವನ್ನಾಗಿ ನಿನ್ನನ್ನು ಉಪಯೋಗಿಸುತ್ತಾನೆ. ನಮ್ಮ ಇಡೀ ವಂಶದ ಉದ್ಧಾರದ ಸಲುವಾಗಿ, ಈ ಬಡ ಬ್ರಾಹ್ಮಣನನ್ನು ಅನುಗ್ರಹಿಸು, ನಿಜಕ್ಕೂ ಇದು ನಮಗೆಲ್ಲರಿಗೂ ಸಲ್ಲುವ ಅನುಗ್ರಹವೆಂದು ನಾನು ಭಾವಿಸುತ್ತೇನೆ.
ನಮ್ಮ ವಂಶವು ಯೋಗ್ಯ ವ್ಯಕ್ತಿಗಳಿಗೆ ದಾನ ಮಾಡಿದ್ದೇ ಆಗಿದ್ದರೆ, ನಾವು ಯಾಗಗಳನ್ನೂ ವಿಧ್ಯುಕ್ತ ಆಚರಣೆಗಳನ್ನೂ ಮಾಡಿದ್ದೇ ಆಗಿದ್ದರೆ, ನಮ್ಮ ವೃತ್ತಿ, ಕರ್ತವ್ಯಗಳನ್ನು ತಕ್ಕ ರೀತಿಯಲ್ಲಿ ಪೂರೈಸಿರುವುದೇ ಆಗಿದ್ದರೆ ಮತ್ತು ವಿದ್ವಾಂಸ ಬ್ರಾಹ್ಮಣರಿಂದ ನಮಗೆ ಮಾರ್ಗದರ್ಶನವಾಗಿದ್ದರೆ, ಇದಕ್ಕೆ ಬದಲಾಗಿ, ಸುದರ್ಶನ ಚಕ್ರದ ಉರಿಯಿಂದ ಈ ಬ್ರಾಹ್ಮಣನು ಪಾರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಅದ್ವಿತೀಯನೂ, ಸಕಲ ದಿವ್ಯ ಗುಣಗಳ ಆಗರವೂ, ಸರ್ವ ಜೀವಿಗಳ ಪ್ರಾಣವೂ ಆತ್ಮವೂ ಆದ ದೇವೋತ್ತಮ ಪರಮ ಪುರುಷನು ನಮ್ಮನ್ನು ಮೆಚ್ಚಿದ್ದರೆ, ದೂರ್ವಾಸ ಮುನಿಯನ್ನು ಉರಿಯ ಯಾತನೆಯಿಂದ ಮುಕ್ತಗೊಳಿಸಲಿ ಎಂದು ಪ್ರಾರ್ಥಿಸುತ್ತೇನೆ!
ಅಂಬರೀಷ ಮಹಾರಾಜ ಅತ್ಯಂತ ಕಳಕಳಿಯಿಂದ, ಭಕ್ತಿಯಿಂದ, ಮುನಿಗಳನ್ನು ರಕ್ಷಿಸಲು ಪ್ರಾರ್ಥನೆ ಮಡಿಕೊಳ್ಳುತ್ತಿದ್ದ.
ಅವನು ಈ ರೀತಿ ವಿಷ್ಣುವಿಗೂ, ಸುದರ್ಶನ ಚಕ್ರಕ್ಕೂ ಪ್ರಾರ್ಥನೆ ಸಲ್ಲಿಸಿದಾಗ, ಪ್ರಾರ್ಥನೆಯ ಕಾರಣ, ಸುದರ್ಶನ ಚಕ್ರವು ಶಾಂತವಾಯಿತು. ದೂರ್ವಾಸ ಮುನಿ ಎಂಬ ಬ್ರಾಹ್ಮಣನನ್ನು ದಹಿಸುವುದನ್ನು ನಿಲ್ಲಿಸಿತು.
ದೂರ್ವಾಸ ಮುನಿಗಳಿಗೆ ತಮ್ಮ ತಪ್ಪು ಅರಿವಾಗುವುದರೊಳಗೆ, ವಿಷ್ಣು ಭಕ್ತನನ್ನು ಮತ್ತೆ ಕಂಡು ಶರಣಾಗತರಾಗುವುದರೊಳಗೆ, ಅವರ ಇಡೀ ವ್ಯಕ್ತಿತ್ವ-ಸಾಧನೆ-ತಪಶಕ್ತಿಗಳೆಲ್ಲವೂ ಅಲುಗಾಡಿ ಹೋಗಿತ್ತು. ಅವರು ಮಂಕು ಕವಿದವರಂತೆ ಅಂಬರೀಷನನ್ನು ನೋಡುತ್ತಲೇ ಇದ್ದರು. ಅವನು ಪ್ರಾರ್ಥನೆ ಸಲ್ಲಿಸುವುದನ್ನೇ ನೋಡುತ್ತಿದ್ದರು. ಎಲ್ಲ ಲೋಕಗಳನ್ನು ಓಡಾಡಿದ್ದರೂ, ತ್ರಿಮೂರ್ತಿಗಳ ಕಾಲಿಗೆ ಬಿದ್ದಿದ್ದರೂ ಅವರ ತೊಂದರೆ ಪರಿಹಾರವಾಗಿರಲಿಲ್ಲ.
ಕೊನೆಗೆ ರಣ ಕೋಪದಿಂದ ಅತಿ ಸಣ್ಣ ವಿಷಯವೊಂದಕ್ಕಾಗಿ ಅತಿ ದೊಡ್ಡ ಶಿಕ್ಷೆ ಕೊಡಲು ಮುಂದೆ ನಿಲ್ಲಿಸಿಕೊಂಡಿದ್ದ ವಿಷ್ಣು ಭಕ್ತನೊಬ್ಬನ ಕಾಲಿಗೆ ಬಿದ್ದು ಶರಣಾಗತರಾಗಬೇಕಾಯಿತು. ತನ್ನ ಮಹಾಭಕ್ತನನ್ನು ದೇವೋತ್ತಮ ಪರಮ ಪುರುಷ ಹೇಗೆ ಕಾಪಾಡುತ್ತಾನೆ ಎನ್ನುವುದು ಅವರಿಗರಿವಾಗಿತ್ತು. ಅಷ್ಟರೊಳಗೆ ಅವರ ಪ್ರಾಣ ಹೋಗಿ ಬಂದಿತ್ತು.
ಕೊನೆಗೂ ವಿಷ್ಣುಚಕ್ರ ಶಾಂತವಾಗಿ ತನ್ನ ಸ್ವಸ್ಥಾನ ಸೇರಿದಾಗಲೇ ದೂರ್ವಾಸರ ಎದೆ ಬಡಿತ ನಿಂತದ್ದು. ಅವರ ಮಹಾ ತಪಸ್ಸುಗಳು, ರಣ ಕೋಪ, ಶಾಪ ಶಕ್ತಿ ಯಾವುದೂ ಇಂದು ಉಪಯೋಗಕ್ಕೆ ಬಂದಿರಲಿಲ್ಲ. ಈ ಗಂಡಾಂತರದಿಂದ ಪಾರಾಗಿದ್ದು ಅವರಿಗೆ ನಿಜಕ್ಕೂ ಸಮಾಧಾನವಾಗಿತ್ತು. ಅಂಬರೀಷ ಮಹಾರಾಜನನ್ನು ನೋಡಿ ಹೇಳಿದರು:

‘ಓ, ಮಹಾನ್ ವಿಷ್ಣು ಭಕ್ತ ಅಂಬರೀಷ ಮಹಾರಾಜನೆ, ಈ ದಿನ ನನಗೆ ಭಾಗವತ ಶಕ್ತಿ, ಭಕ್ತಿ ಸೇವೆಯ ಶಕ್ತಿಗಳ ಅರಿವುಂಟಾಯಿತು. ಇಷ್ಟೊಂದು ವರ್ಷಗಳ ಸತತ ತಪಸ್ಸು ಕೂಡ ನನಗೆ ಬೆಳಕು ತೋರದಿದ್ದದ್ದು ಸಹಾಯಕ್ಕೆ ಬರದಿದ್ದದ್ದು ನನಗೊಂದು ಪಾಠವಾಗಿದೆ. ನೀನೊಬ್ಬಮಹಾತ್ಮಾ. ನಿನ್ನನ್ನು ನೀನು ಶ್ರೀ ಕೃಷ್ಣನಿಗೆ ಅರ್ಪಿಸಿಕೊಂಡವ.
ಈ ಲೌಕಿಕ ಜಗತ್ತಿನಲ್ಲಿದ್ದರೂ ಇನ್ನೊಬ್ಬರಿಗಾಗಿ ಬಾಳುತ್ತಿರುವವ ನಾನು ಎನ್ನುವ ಮಾತೇ ನಿನ್ನ ವ್ಯಕ್ತಿತ್ವದಲ್ಲಿಲ್ಲ. ಅತ್ಯಂತ ಸರಳತೆ, ಮಹಾನ್ ಭಗವದ್ಭಕ್ತಿ ಇವೆರಡೂ ನಿನ್ನ ಸಾಧನೆಗಳು. ಇವುಗಳ ಮುಂದೆ ಯಾವ ಶಕ್ತಿಯೂ ನಿರರ್ಥಕ. ನಿನಗೆ ಯಾವಾಗಲೂ ಒಳ್ಳೆಯದಾಗುತ್ತದೆ. ನಿನ್ನಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ!.
ಅಂಬರೀಷ ಮಹಾರಾಜನಿಗೆ ಬಹಳ ಸಂಕೋಚವಾಗಿತ್ತು. ಪೂಜ್ಯರು ಹಿರಿಯರಾದ ಮಹಾತಪಸ್ವಿಗಳಾದ ದೂರ್ವಾಸರು ತನ್ನನ್ನು ಕುರಿತು ಹೀಗೆಲ್ಲ ದೊಡ್ಡ ಮಾತು ಹೇಳುತ್ತಿರುವುದನ್ನು ಕೇಳಿ ಅವನಿಗೆ ಗಲಿಬಿಲಿಯಾಗಿತ್ತು.
‘ಮಹಾನ್ ತಪಸ್ವಿಗಳೇ, ನನ್ನಿಂದ ಮಹಾಪರಾಧವಾಯಿತು. ನಿಮ್ಮನ್ನು ಭೋಜನಕ್ಕೆ ಆಹ್ವಾನಿಸಿದ ಮೇಲೆ ನಾನು ಕಾಯಬೇಕಾಗಿತ್ತು. ದ್ವಾದಶಿ ಕೊನೆ ಘಳಿಗೆ ಬಂದು ಮುಗಿದು ಹೋಗುತ್ತಿದೆಯಲ್ಲ, ಪತ್ನಿ ಸಮೇತ ಮಾಡಿದ ಕಠಿಣ ವ್ರತ ನಿಷ್ಫಲವಾಗುತ್ತಿದೆಯಲ್ಲ ಎಂದು ಚಿಂತಿಸಿಬಿಟ್ಟೆ, ಉತ್ತಮ ಬ್ರಾಹ್ಮಣರ ಸಲಹೆ ಕೇಳಿದೆ. ಅವರು ದ್ವಾದಶಿ ಫಲ ತಪ್ಪಬಾರದು, ಘಳಿಗೆ ಮೀರಬಾರದು ಎಂದು ಹೇಳಿ, ತೊಟ್ಟು ನೀರು ಸೇವಿಸಿ ಏಕಾದಶಿ ಉಪವಾಸ ಮುರಿಯಬಹುದು ಎ೦ದು ಸೂಚಿಸಿದ್ದರಿಂದ ಹೀಗೆ ಮಾಡಿದೆ. ನನ್ನದು ದೊಡ್ಡ ಅಪರಾಧವಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ ಅನುಗ್ರಹಿಸಿ’ ಎಂದು ಹೇಳಿದ.
ಅವನ ಮನಸ್ಸಿಗೆ ತುಂಬಾ ನೋವಾಗಿದ್ದು ಅವನ ಮಾತಿನಿಂದ ತಿಳಿಯುತ್ತಿತ್ತು. ‘ನಾನು ಹೀಗೆ ಮಾಡಿದ ಅಪರಾಧದ ನಿಮಿತ್ತದಿಂದಲೇ ನೀವು ಇಷ್ಟೆಲ್ಲ ತೊಂದರೆಗಳನ್ನು ಭೀತಿಯನ್ನು ಅನುಭವಿಸಬೇಕಾಗಿ ಬಂದಿತು. ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ, ಸಂಕಟವಾಗುತ್ತಿದೆ. ನಾನು ಶಾಪಗ್ರಸ್ತನಾಗಿದ್ದರೂ ಪರವಾಗಿಲ್ಲ, ಆದರೆ ನೀವು ಇಷ್ಟೊಂದು ತೊಂದರೆಗಳನ್ನ ಅನುಭವಿಸದಿರಬಹುದಿತ್ತು! ಎಂದೂ ಹೇಳಿದ.
ಈಗ ಸಂಕೋಚ-ನಾಚಿಕೆ ಪಡುವುದು ದೂರ್ವಾಸರ ಸರದಿಯಾಗಿತ್ತು. ಅವರಿಗೆ ತಲೆ ತಗ್ಗಿಸುವಂತಾಗಿತ್ತು. ಎಂತಹಾ ಮಹಾನ್ ಭಾಗವತ ಈತ, ಯಾವ ತಪ್ಪು ಮಾಡದೆಯೂ ಕ್ಷಮಿಸಿ ಎಂದು ಅಂಗಲಾಚುತ್ತಿದ್ದಾನಲ್ಲ ಎಂದವರಿಗೆ ಸಂಕಟವಾಯಿತು. ಅವನ ಸರಳತನ, ದೊಡ್ಡತನ ಕಂಡು ಹೆಮ್ಮೆಯುಂಟಾಯಿತು. “ಭಗವದ್ಭಕ್ತರ ಆಳವನ್ನು ತಿಳಿದುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ಅದು ಆ ದೇವೋತ್ತಮನಿಗೆ ಮಾತ್ರ ಎಟಕುವ ವಿಷಯ! ಎಂದು ಕೊಂಡರು.
ದೂರ್ವಾಸರು ಹೇಳಿದರು:
‘ಪ್ರಿಯ ರಾಜನ್, ದೇವೋತ್ತಮ ಪರಮ ಪುರುಷನ ಭಕ್ತರ ಮಹಿಮೆ ಎಂತಹುದು ಎಂದು ಇಂದು, ನಾನು ತಿಳಿದುಕೊಂಡೆ. ನಾನು ತಪ್ಪು ಮಾಡಿದ್ದರೂ ಕೂಡ, ನನ್ನ ಸುಯೋಗಕ್ಕಾಗಿ ನೀನು ಪ್ರಾರ್ಥನೆಯನ್ನು ಮಾಡಿದ್ದೀಯ. ಶುದ್ಧ ಭಕ್ತರ ಅಧಿಪತಿಯಾದ ದೇವೋತ್ತಮ ಪರಮ ಪುರುಷನನ್ನು ಗ್ರಹಿಸಿದವರಿಗೆ ಯಾವುದು ತಾನೆ ಮಾಡಲು ಅಸಾಧ್ಯ? ಯಾವುದನ್ನು ತಾನೆ ತ್ಯಜಿಸಲಾಗುವುದಿಲ್ಲ? ಭಗವಂತನ ಸೇವಕರಿಗೆ ಯಾವುದು ಸಾಧ್ಯವಿಲ್ಲ? ಆತನ ಪವಿತ್ರ ಹೆಸರು ಕೇಳಿದರೆ ಸಾಕು ಪರಿಶುದ್ಧರಾಗುತ್ತೇವೆ! ಹೇ ರಾಜನೇ, ನನ್ನ ಅಪರಾಧಗಳನ್ನು ಲಕ್ಷಿಸದೆ ನನ್ನ ಪ್ರಾಣವನ್ನು ಉಳಿಸಿರುವೆ. ಇಷ್ಟೊಂದು ಕರುಣಾಮಯಿಯಾದ ನಿನಗೆ ನಾನು ಕೃತಜ್ಞನಾಗಿದ್ದೇನೆ!’

ಅಂಬರೀಷ ಮಹಾರಾಜ ನೆಮ್ಮದಿಯ ನಿಟ್ಟುಸಿರಿಳಿಸಿದನು. ಪೂಜ್ಯ ಹಿರಿಯ ಮುನಿಯೊಬ್ಬರಿಗೆ ತನ್ನಿಂದ ನೋವು ಅವಮಾನ ಆಗಿ ಹೋಯಿತಲ್ಲ ಎಂದವನ ಹೃದಯ ಹಿಂಡಿ ಹೋಗಿತ್ತು. ದೂರ್ವಾಸರ ಮನಸ್ಸಿನಲ್ಲಿ ಈ ಅನುಭವ ಕಹಿಯಾಗಿ ಎಂದೆಂದಿಗೂ ಉಳಿದುಬಿಡುತ್ತದೇನೋ ಎನ್ನುವ ಭಯ ತಲ್ಲಣಿಸುವಂತೆ ಮಾಡಿತ್ತು. ಈಗ ಆ ಮುನಿವರ್ಯರೇ ಶಾಂತವಾಗಿ ನೆಮ್ಮದಿಯಿಂದ ಪಶ್ಚಾತ್ತಾಪದ ಮಾತುಗಳನ್ನು ಆಡಿದಾಗ ಇವನಿಗೂ ಆ ಭೀತಿ-ತಲ್ಲಣಗಳ ತೆರೆ ಸರಿದಿತ್ತು.
ಏಕಾದಶಿ ಮುಗಿಸಿ ದ್ವಾದಶಿಯ ದಿವಸ ದೂರ್ವಾಸರೊಂದಿಗೆ ಭೋಜನ ಸ್ವೀಕರಿಸುವುದು ಎಂದು ನಿರ್ಧರಿಸಿದ ಮೇಲೆ, ನದಿಯತ್ತ ಹೋದ ಅವರು ಬರುವುದನ್ನೆ ಕಾಯುತ್ತಿದ್ದ ಅವನಿಗೆ, ದ್ವಾದಶಿ ಮುಗಿಯುವ ಮೊದಲು ಉಪವಾಸವನ್ನು ಮುಗಿಸುವುದು ಅತ್ಯಗತ್ಯವಾಗಿತ್ತು. ಅಂತೆಯೇ ದೂರ್ವಾಸರು ಇನ್ನೂ ಬರದಿರುವುದನ್ನು ನೋಡಿ ಅವನು, ಜಲಪಾನ ಮಾಡಿದ್ದ, ಭೋಜನವನ್ನೇ ಸ್ವೀಕರಿಸಿರಲಿಲ್ಲ, ಬರಿಯ ನೀರನ್ನು ಸೇವಿಸುತ್ತ ದೂರ್ವಾಸರು ಬರುವುದನ್ನು ಕಾದಿದ್ದನು.
ಆಪೋಶ್ನಾತಿ ತನ್ ನೈವಾಶಿತಂ ನೈವಾನಶಿತಂ –
ನೀರನ್ನು ಕುಡಿಯುವುದನ್ನು ಆಶನವೆಂದೂ, ನಿರಶನವೆಂದೂ ಪರಿಗಣಿಸಬಹುದು ಎಂದು ಬಗೆದು ಜಲಪಾನ ಮಾಡಿದ್ದು, ಆದರೆ ದೂರ್ವಾಸ ಕುಪಿತರಾಗಿ ಶಪಿಸಿದ್ದು ಹಾಗು ಸುದರ್ಶನ ಚಕ್ರ ಹಿಂದೆ ಬಂದು ಅವರು ತ್ರಿಲೋಕಗಳನ್ನು ಸುತ್ತಿದ್ದು ಒಂದು ವರ್ಷ ಕಾಲಾವಧಿಯಾಯಿತು. ಈ ನಡುವೆ ಅಂಬರೀಷನು ಈಗ ಎಲ್ಲವೂ ಸುಖಾಂತ್ಯವಾದ ಮೇಲೆ ಅವನು ದೂರ್ವಾಸರನ್ನು ಮತ್ತೊಮ್ಮೆ ಪ್ರೀತಿ ವಿಶ್ವಾಸಗಳಿಂದ ಬರಮಾಡಿಕೊಂಡು ಭೋಜನಕ್ಕೆ ಎಬ್ಬಿಸಿದ. ಯಾವ ತುಟಿ ಪಿಟಿಕ್ಕುಗಳೂ ಇಲ್ಲದೆ ದೂರ್ವಾಸರು ಭೋಜನಕ್ಕೆದ್ದರು. ರಾಜ ಭೂರಿ ಭೋಜನ ಏರ್ಪಡಿಸಿದ್ದ.
ಪ೦ಚ ಭಕ್ಷ ಪರಮಾನ್ನಗಳಿದ್ದವು. ಷಡ್ರಸಭರಿತ ಅನ್ನರುಚಿಗಳಿದ್ದವು. ಸಿಹಿಗಳಿದ್ದವು. ವಿಸ್ತಾರವಾದ ಬಾಳೆ ಎಲೆಯಲ್ಲಿ ನಾನಾ ವಿಧದ ಆಹಾರ ಪದಾರ್ಥಗಳಿದ್ದವು. ಸುತ್ತಲೂ ಅಡುಗೆಯವರು, ಪರಿಚಾರಕರು, ಚಾಮರ ಸೇವಕರು ನೆರೆದಿದ್ದರು.
ಬಹಳ ಹಸಿದಿದ್ದ ದೂರ್ವಾಸರು ಪುಷ್ಕಳವಾಗಿ ಭೋಜನ ಮಾಡಿದರು. ಅವರಿಗಾಗಿ ವಿಶೇಷವಾಗಿ ತಯಾರಿಸಿದ್ದ ಖಾದ್ಯಗಳನ್ನು, ತರಕಾರಿ ಬಗೆಗಳನ್ನು ಆಸ್ವಾದಿಸುತ್ತ ಊಟ ಮಾಡಿ ಮುಗಿಸಿದರು. ಅಂತ್ಯದಲ್ಲಿ ತೊಟ್ಟು ನೀರು ಕುಡಿದು, ಅನ್ನದಾತೋ ಸುಖೀಭವಃ!’ ಎಂದು ಸಂತೃಪ್ತ ಮಾತನ್ನಾಡಿದರು.
ಅಂಬರೀಷನಿಗೆ ಬಹಳ ಸಂತೋಷವಾಯಿತು. ಅವನ ಮನದಾಳದ ಬಿಗಿಯೆಲ್ಲ ಸಡಿಲವಾಗಿತ್ತು. ಮೈ ಮನಸ್ಸುಗಳು ಹಗುರವಾಗಿ ಉಲ್ಲಸಿತಗೊಂಡಿದ್ದವು. ದೂರ್ವಾಸರ ಭೋಜನವಾದ ಮೇಲೆ ಅವರಿಗೆ ಬೇಕಾದ ಹಾಗೆ ದಾನ ಧರ್ಮಗಳ ದಕ್ಷಿಣೆ ನೀಡಿದ ರಾಜ.
ದೂರ್ವಾಸರು ತೃಪ್ತರಾಗಿದ್ದರು. ಅಂಬರೀಷನನ್ನು ಮನಸಾರೆ ಹೊಗಳಿದರು, ಆಶೀರ್ವದಿಸಿದರು. ‘ನಿನ್ನಿಂದ ನಿರಂತರವಾಗಿ ಹೀಗೆ ಅತಿಥಿ ಸೇವೆ ಜರುಗುತ್ತಿರಲಿ!’ ಎಂದರು. ಕೊನೆಗೆ-‘ನಾನು ಹೀಗೆಯೇ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಿನ್ನ ಭೋಜನವನ್ನು ಮುಗಿಸು. ನಿನಗಾಗಿ ನಿನ್ನ ಮಡದಿ-ಮಕ್ಕಳು, ಪರಿವಾರದವರು ಕಾದಿದ್ದಾರೆ!’ ಎಂದು ಹೇಳಿದರು.
ಆದರೆ, ಅಂಬರೀಷ ಮಹಾರಾಜ ಮಾತ್ರ ಭೋಜನ ಸ್ವೀಕರಿಸಲಿಲ್ಲ. ದ್ವಾದಶಿ ಮುಗಿಯುವ ಮೊದಲೇ ಸ್ವೀಕರಿಸಿದ್ದ ತೊಟ್ಟು ಜಲವೇ ಅವನ ಪಾರಣೆಯಾಗಿ ಹೋಗಿತ್ತು.

ವಿಶ್ರಾಂತಿ ಮುಗಿಸಿ ಅಲ್ಲಿಂದ ಹೊರಟು ನಿಂತ ದೂರ್ವಾಸರು ಕೊನೆಯ ಮಾತುಗಳೆಂಬಂತೆ ಹೇಳಿದರು :
‘ಪ್ರಿಯ ರಾಜನೆ, ನಾನು ನಿನ್ನನ್ನು ತುಂಬಾ ಮೆಚ್ಚಿಕೊಂಡಿದ್ದೇನೆ. ಈ ಮೊದಲು ನಿನ್ನನ್ನು ಒಬ್ಬ ಸಾಧಾರಣ ಮನುಷ್ಯ ಎಂದು ತಿಳಿದುಕೊಂಡಿದ್ದೆ. ಈಗ ನನಗೆ ತಿಳಿದಿದೆ. ನಿನ್ನ ಆತಿಥ್ಯವನ್ನು ಸ್ವೀಕರಿಸಿ ಸಂತೋಷ ಪಟ್ಟಿದ್ದೇನೆ. ನೀನು ಭಗವಂತನ ಶ್ರೇಷ್ಠ ಭಕ್ತನೆಂದು ಈಗ ಸ್ವಾನುಭವದಿಂದ ಕಂಡು ಕೊಂಡೆ. ಆದ್ದರಿಂದಲೇ ನಿನ್ನನ್ನು ನೋಡಿದ ಮಾತ್ರಕ್ಕೇ ನಿನ್ಮ ಪಾದವನ್ನು ಮುಟ್ಟಿ ನಿನ್ನನ್ನು ಮಾತನಾಡಿಸಿದ ಮಾತ್ರಕ್ಕೇ, ನಾನು ಸುಪ್ರೀತನೂ, ಕೃತಜ್ಞನೂ ಆಗಿಹೋದೆ. ವೈಷ್ಣವ ವರ್ಚಸ್ಸು ಎಂತಹುದು ಎಂದು ನನಗೀಗ ತಿಳಿದಿದೆ.
ನಿನ್ನಂತಹ ನಿಜವಾದ ಯೋಗಿಯ ವರ್ಚಸ್ಸನ್ನು ನಾನು ತಿಳಿಯಲಾರದೆ ಹೋದೆ. ಭಕ್ತನನ್ನು ದೇವೋತ್ತಮ ಪರಮ ಪುರುಷ ಎಂದೆಂದಿಗೂ ಕೈ ಬಿಡುವುದಿಲ್ಲ ಎನ್ನುವುದನ್ನು ನಾನಿಂದು ಕಂಡುಕೊಂಡೆ.
‘ಪ್ರಿಯ ರಾಜನ್, ಇನ್ನು ಮೇಲೆ ಸ್ವರ್ಗ ಲೋಕದ ಮಂಗಳೆಯರೆಲ್ಲರೂ ಕ್ಷಣ ಕ್ಷಣವೂ ನಿನ್ನ ಕಳಂಕರಹಿತ ಚಾರಿತ್ರ್ಯವನ್ನು ಸ್ತುತಿಸುತ್ತಾರೆ. ಈ ಲೋಕದ ಜನರು ಕೂಡ ನಿರಂತರವಾಗಿ ನಿನ್ನ ಮಹಿಮೆಯನ್ನು ಭಜಿಸುತ್ತಾರೆ!
-ಹೀಗೆ ತಮ್ಮ ಮನಸ್ಸಿನ ಮಾತುಗಳೆಲ್ಲವೂ ಮುಗಿಯುವವರೆಗೂ ದೂರ್ವಾಸ ಮುನಿಗಳು ಮಾತನಾಡುತ್ತಲೇ ಇದ್ದರು. ಎಂತಹುದೋ ಒಂದು ಅತಿಶಯವನ್ನು ಕಂಡವರ ಹಾಗೆ ಸಂತೋಷ-ಅಚ್ಚರಿಗಳಿಂದ ಆ ದೇವಮುನಿ ಹೃದಯದಿಂದ ಹೃದಯಕ್ಕೆ ಸ್ಪಂದಿಸುತ್ತಲೇ ಇದ್ದರು.
ದೂರ್ವಾಸರು ಎಲ್ಲ ಮಾತುಗಳನ್ನೂ ಆಡಿದ ಮೇಲೆ ಹೊರಟು ನಿಂತರು. ಅಂಬರೀಷನಾದಿಯಾಗಿ ಎಲ್ಲರೂ ಅವರಿಗೆ ಸಾಷ್ಟಾಂಗ ನಮಸ್ಕರಿಸಿದರು. ಮುನಿಗಳು ಆಶೀರ್ವದಿಸುತ್ತ, ಪ್ರಶಂಸಿಸುತ್ತ ಹೊರಟರು. ನಾಸ್ತಿಕರು ಮತ್ತು ಒಣ ಊಹಾತ್ಮಕ ಚಿಂತಕರು ಇರದ ಬ್ರಹ್ಮಲೋಕಕ್ಕೆ ಅಂತರಿಕ್ಷ ಮಾರ್ಗವಾಗಿ ಹೊರಟು ಹೋದರು. ಸ್ವರ್ಗ ಲೋಕದಲ್ಲಿ ಅವರಿಗೆ ಬೇಕಾದಷ್ಟು ಮಾತನಾಡುವುದು ಉಳಿದಿತ್ತು. ಅಂಬರೀಷನ ಕುರಿತು ಅವರು ಅಲ್ಲಿ ಎಲ್ಲರಿಗೂ ತಿಳಿಸಬೇಕಾಗಿತ್ತು.
ಅಂಬರೀಷ ಮಹಾರಾಜ ತನ್ನ ಭಕ್ತಿ ಸೇವಾ ಬದುಕನ್ನು ಮುಂದುವರಿಸಿದ. ನಿರಾಕಾರ ಬ್ರಹ್ಮನ್, ಪರಮಾತ್ಮ ಮತ್ತು ದೇವೋತ್ತಮ ಪರಮ ಪುರುಷರ ಸಂಪೂರ್ಣ ಅರಿವನ್ನು ಗಳಿಸಿದ. ಅವನ ಭಕ್ತಿಸೇವೆಯ ಆಚರಣೆ ಪರಿಪೂರ್ಣವಾಗಿತ್ತು. ಈ ಐಹಿಕ ಪ್ರಪಂಚದ ಅತ್ಯುನ್ನತ ಸ್ಥಾನವೂ ಕೂಡ ನರಕಲೋಕಕ್ಕಿಂತಲೂ ಉತ್ತಮವಾದುದೇನಲ್ಲ ಎನ್ನುವುದನ್ನು ಭಕ್ತಿಯಿಂದ ಅವನು ತಿಳಿದುಕೊಂಡ.
ಬದುಕಿನ ಕೊನೆಪುಟಕ್ಕೆ ಬಂದಾಗ ಅಂಬರೀಷ ಮಹಾರಾಜ ಭಕ್ತಿಸೇವೆಯಲ್ಲಿ ಏಳಿಗೆ ಹೊಂದಿದುದರಿಂದ ಐಹಿಕ ವಿಷಯಗಳೊಂದಿಗೆ ಜೀವಿಸಲು ಇನ್ನು ಮುಂದೆ ಬಯಸಲಿಲ್ಲ. ಸಂಸಾರ ಜೀವನದಿಂದ ನಿವೃತ್ತನಾಗಿ, ತನ್ನಷ್ಟೇ ಯೋಗ್ಯರಾಗಿದ್ದ ಮಕ್ಕಳಿಗೆ ಆಸ್ತಿಯನ್ನು ಹಂಚಿ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿದ ವಾಸುದೇವ ಭಗವಂತನನ್ನು ಕುರಿತು ಚಿಂತಿಸುವಂತೆ ಮನಸ್ಸನ್ನು ಕೇಂದ್ರೀಕರಿಸಲೆಂದು ಕಾಡಿಗೆ ತೆರಳಿದ.
ನೈಮಿಷಾರಣ್ಯದಲ್ಲಿ ಭಾಗವತ ಶ್ರವಣ ಮಾಡುತ್ತಿದ್ದ ಸೂತ ಮುನಿಗಳು ಹೇಳಿದರು : ‘ಅಂಬರೀಷನ ಪುಣ್ಯ ಕಥಾ ಶ್ರವಣ-ನಿರೂಪಣೆ-ಯೋಚನೆ ಭಗವಂತನ ಶುದ್ಧ ಭಕ್ತನಾಗುವ ಮಾರ್ಗಕ್ಕೆ ತಲುಪಿಸುತ್ತದೆ. ಅಂಬರೀಷನ ಜೀವನ ವೃತ್ತಾಂತ ಕೇಳಿಸಿಕೊಂಡವರು ನಿಶ್ಚಯವಾಗಿ ಶುದ್ಧ ಭಕ್ತರಾಗುತ್ತಾರೆ.”
ಸಾಧವೋ ಹೃದಯಂ ಮಹ್ಯಮ್
ಸಾಧೂನಾಂ ಹೃದಯಂ ತ್ವಹಮ್ |
ಮದ್ ಅತ್ಯಿತ್ ನೇ ನ ಜಾನಾತಿ
ನಾಹಂ ವೇದ್ಯೋ ಮನಾಗಪಿ|| (ಭಾಗವತ 9.4.68)
ಶುದ್ಧ ಭಕ್ತನು ಸದಾ ನನ್ನ ಹೃದಯ ನಿವಾಸಿಯಾಗಿರುವನು. ನಾನು ಸದಾ ಶುದ್ಧ ಭಕ್ತನ ಹೃದಯನಿವಾಸಿಯಾಗಿರುವೆನು. ನನ್ನನ್ನು ಹೊರತು ಅನ್ಯಮೊಂದನ್ನು ನನ್ನ ಭಕ್ತರು ಅರಿಯರು. ಭಕ್ತರನ್ನು ಹೊರತುಪಡಿಸಿ ಬೇರೊಂದನ್ನು ನಾನರಿಯೆನು.






Leave a Reply