ಗುಜರಾತಿ ವಿಶೇಷ
ಗುಜರಾತ್ ಕೃಷ್ಣನ ದ್ವಾರಕೆಯನ್ನು ಹೊಂದಿರುವ ರಾಜ್ಯ. ಕೃಷ್ಣಭಕ್ತಿಗೆ ಇಲ್ಲಿ ಭಾರಿ ಪ್ರಾಶಸ್ತ್ಯ. ಅನೇಕ ಮಹಾನ್ ಕೃಷ್ಣಭಕ್ತರು ಗುಜರಾತಿನಲ್ಲಿ ಅವತರಿಸಿದರು. ಅವರು ತಮ್ಮ ವಿಶಿಷ್ಟ ಪಾಕ ಶೈಲಿಗೆ ಪ್ರಸಿದ್ಧರು. ಇಲ್ಲಿ ಕೆಲವು ವಿಶೇಷ ಗುಜರಾತಿ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ನೀಡಿದ್ದೇವೆ.
ಗುಜರಾತಿ ಕಡಿ

ಬೇಕಾಗುವ ಸಾಮಗ್ರಿಗಳು:
ಕಡಲೆ ಹಿಟ್ಟು – ಎರಡು ಚಮಚ
ಮೊಸರು – ಎರಡು ಕಪ್
ಮೆಣಸು–ಶುಂಠಿ ಮಿಶ್ರಣ – ಒಂದು ಚಮಚ
ಕರಿಬೇವಿನ ಸೊಪ್ಪು
ಸಕ್ಕರೆ – ಎರಡು ಚಮಚ (ಅಥವಾ ಬೆಲ್ಲ)
ಕೊತ್ತಂಬರಿ ಸೊಪ್ಪು – ಸಣ್ಣಗೆ ಕತ್ತರಿಸಿದ್ದು, ಎರಡು ಚಮಚದಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – ಅರ್ಧ ಚಮಚ
ಸಾಸಿವೆ – ಅರ್ಧ ಚಮಚ
ಇಂಗು – ಒಂದು ಚಿಟಿಕೆ
ಒಂದು ದೊಡ್ಡ ಒಣ ಮೆಣಸಿನಕಾಯಿ – ಸಣ್ಣ ತುಂಡುಗಳಾಗಿ ಕತ್ತರಿಸಿ
ತುಪ್ಪ – ಎರಡು ಚಮಚ
ತಯಾರಿಸುವ ವಿಧಾನ:
ಕಡಲೆ ಹಿಟ್ಟಿಗೆ ಮೊಸರು ಮತ್ತು ಮೂರು ಲೋಟ ನೀರು ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಮೆಣಸು-ಶುಂಠಿಯ ಮಿಶ್ರಣ ಬೆರೆಸಿ. ಕರಿಬೇವು, ಸಕ್ಕರೆ ಅಥವಾ ಬೆಲ್ಲ ಮತ್ತು ಉಪ್ಪನ್ನೂ ಸೇರಿಸಿ. ಎಲ್ಲವೂ ಹದವಾಗಿ ಬೆರೆಯುವಂತೆ ಕಲಸಿ. ಅದು ಕುದಿಯುತ್ತಿರುವಾಗ ಸೌಟಿನಿಂದ ಮಗುಚುತ್ತಿರಿ. ಚೆನ್ನಾಗಿ ಬೆಂದ ನಂತರ ಇಳಿಸಿ. ಜೀರಿಗೆ, ಸಾಸಿವೆ, ಇಂಗು, ಕೆಂಪು ಮೆಣಸನ್ನು ತುಪ್ಪದಲ್ಲಿ ಒಗ್ಗರಣೆ ಮಾಡಿ ಬಾಣಲೆಯಲ್ಲಿರುವ ಮಿಶ್ರಣಕ್ಕೆ ಸೇರಿಸಿ. ಗುಜರಾತಿ ಕಡಿ ಸಿದ್ಧ.
ಧೋಕ್ಲಾ

ಬೇಕಾಗುವ ಸಾಮಗ್ರಿಗಳು:
ಕುಸುಬಲಕ್ಕಿ – ಮೂರು ಕಪ್
ಉದ್ದಿನ ಬೇಳೆ – ಒಂದು ಕಪ್
ಶುಂಠಿ – ಹಸಿಮೆಣಸಿನ ಮಿಶ್ರಣ – ಒಂದು ಚಮಚ
ಇಂಗು – ಒಂದು ಚಿಟಿಕೆ
ಅಡುಗೆ ಎಣ್ಣೆ – ಒಂದು ಚಮಚ
ಬೆಣ್ಣೆ ಮತ್ತು ಸೋಡಾ
ತಯಾರಿಸುವ ವಿಧಾನ:
ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ ಸಣ್ಣಗೆ ಪುಡಿ ಮಾಡಿಕೊಳ್ಳಿ. ಅದಕ್ಕೆ ಬೆಣ್ಣೆ, ನೀರು, ಹುಳಿ ಮೊಸರು ಬೆರೆಸಿ, 6 ರಿಂದ 8 ಗಂಟೆ ಕಾಲ ನೆನೆಯಲು ಬಿಡಿ. ನಂತರ ಶುಂಠಿ-ಹಸಿಮೆಣಸಿನ ಮಿಶ್ರಣ, ಇಂಗು, ಉಪ್ಪು, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲೆಸಿ. ಕುಕ್ಕರ್ ಬಟ್ಟಲಿಗೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿ. ಹದಿನೈದು ನಿಮಿಷ ಕುಕ್ಕರ್‌ನಲ್ಲಿ ಬೇಯಿಸಿ (ವಿಸಲ್ ಬಳಸಬೇಡಿ). ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಂಡು, ಚಟ್ನಿಯೊಂದಿಗೆ ತಿನ್ನಲು ಬಲು ರುಚಿಕರ.
ಗುಜರಾತಿ ಫ್ರೈಡ್ ರೈಸ್

ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಕ್ಕಿ – ಮೂರು ಕಪ್
ಕೋಸು – ತುರಿದದ್ದು ಒಂದು ಕಪ್
ಸಕ್ಕರೆ – ಒಂದು ಚಮಚ
ತುಪ್ಪ – ಅರ್ಧ ಚಮಚ
ದಾಲ್ಚಿನ್ನಿ – ಎರಡು ಚಮಚ
ಕಾಳು ಮೆಣಸು – 7-8
ಲವಂಗ – 4-5
ಏಲಕ್ಕಿ – 3-4
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಅಕ್ಕಿಯನ್ನು ಮೂರ್ನಾಲ್ಕು ಬಾರಿ ಚೆನ್ನಾಗಿ ತೊಳೆಯಿರಿ. ಒಂದು ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು, ತುರಿದ ಕೋಸನ್ನು ಬೇಯಿಸಿ ಪಕ್ಕಕ್ಕಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಸಕ್ಕರೆಯನ್ನು ನೀರಿನೊಂದಿಗೆ ಬೆರೆಸಿ ಅದು ಕಂದು ಬಣ್ಣದ ಪಾಕವಾಗುವ ತನಕ ಬೇಯಿಸಿ.
ನಂತರ ಅದಕ್ಕೆ ಬೇಯಿಸಿದ ಕೋಸು, ತುಪ್ಪ, ಲವಂಗ, ದಾಲ್ಚಿನ್ನಿ, ಕರಿಮೆಣಸು, ಏಲಕ್ಕಿಗಳನ್ನು ಬೆರೆಸಿ. ಮಿಶ್ರಣಕ್ಕೆ ಇವುಗಳನ್ನು ಬೆರೆಸುವಾಗ ಕಲಕುತ್ತಿರಿ. ನಂತರ ಆ ಮಿಶ್ರಣಕ್ಕೆ ಅಕ್ಕಿಯನ್ನು ಬೆರೆಸಿ ಚೆನ್ನಾಗಿ ಕಲಕಿ. ಅದು ಕುದಿಯಲಾರಂಭಿಸಿ, ಬಣ್ಣ ಬದಲಾಗತೊಡಗಿದಾಗ ಇನ್ನಷ್ಟು ನೀರು ಸೇರಿಸಿ. ಚೆನ್ನಾಗಿ ಬೇಯುವ ತನಕ ಒಲೆಯ ಮೇಲೇ ಇರಲಿ. ನಂತರ ಮೇಲಿಂದ ಇಳಿಸಿ. ಎಲ್ಲರಿಗೂ ತಿನ್ನಲು ಬಡಿಸಿ.
ಮಲ್‌ಪುವಾ

ಬೇಕಾಗುವ ಸಾಮಗ್ರಿಗಳು:
ಕೆನೆ – 200 ಗ್ರಾಂ
ಮೈದಾಹಿಟ್ಟು – 4 ಚಮಚ
ಸಕ್ಕರೆ, ತುಪ್ಪ – ಒಂದು ಕಪ್
ಬಾದಾಮಿ ಮತ್ತು ಪಿಸ್ತಾ – ಅಲಂಕಾರಕ್ಕೆ ತಕ್ಕಷ್ಟು – ಕತ್ತರಿಸಿದ್ದು
ಸಕ್ಕರೆ ಪಾಕ
ಒಂದು ಕಪ್ ನೀರಿಗೆ ಸಕ್ಕರೆ ಬೆರೆಸಿ ಚಿಕ್ಕ ಬಾಣಲೆಯಲ್ಲಿ ಹಾಕಿ ಐದು ನಿಮಿಷ ಕುದಿಸಿ. ಅದು ಎಳೆ ಎಳೆಯಾದ ಪಾಕವಾಗುವ ತನಕ ಕುದಿಯಲಿ. ಇನ್ನೊಂದು ಸಣ್ಣ ಪಾತ್ರೆಯಲ್ಲಿ ಕೇಸರಿಯನ್ನು ಬಿಸಿ ಮಾಡಿ. ಅದಕ್ಕೆ ಹಾಲನ್ನು ಬೆರೆಸಿ, ಕೇಸರಿ ಕರಗುವ ತನಕ ಕಲೆಸಿ. ಮೊದಲೇ ಮಾಡಿದ ಸಕ್ಕರೆ ಪಾಕ ಹಾಗೂ ಗುಲಾಬಿ ನೀರನ್ನು ಕೇಸರಿ ಮತ್ತು ಹಾಲಿಗೆ ಬೆರೆಸಿ, ಮಿಶ್ರಣವನ್ನು ಬಿಸಿಯಾಗಿ ಇಡಿ.
ತಯಾರಿಸುವ ವಿಧಾನ:
ಕೆನೆ ಮತ್ತು ಹಿಟ್ಟನ್ನು ಬೆರೆಸಿ ಚೆನ್ನಾಗಿ ಕಲಸಿ. ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ರೊಟ್ಟಿಯಂತೆ ತಟ್ಟಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಆ ಚಿಕ್ಕ ರೊಟ್ಟಿಗಳನ್ನು ಎರಡೂ ಬದಿ ಬೇಯಿಸಿ. ಈಗ ಮಾಲ್ಪುವಾ ಸಿದ್ಧ. ಈ ಮಾಲ್ಪುವಾಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ. ಪಿಸ್ತಾ, ಬಾದಾಮಿ ಚೂರುಗಳಿಂದ ಅಲಂಕರಿಸಿ. ನಂತರ ಎಲ್ಲರೂ ತಿನ್ನಿರಿ.






Leave a Reply