ಶ್ರೀಲ ಪ್ರಭುಪಾದರ ಉಪನ್ಯಾಸ, ಸ್ಥಳ : ಇಂಗ್ಲೆಂಡ್, 1973
ಗುರು ಎಂಬ ಶಬ್ದ ನಮ್ಮ ಕಿವಿಗೆ ಬಿದ್ದೊಡನೆಯೇ ವ್ಯಂಗ್ಯಚಿತ್ರದಂತಹ ರೂಪವು ನಮ್ಮ ಕಣ್ಣೆದುರು ಮೂಡುತ್ತದೆ. ಜಡೆಗಟ್ಟಿದ ಉದ್ದ ಗಡ್ಡ, ನೀಳಕಾಷಾಯ ವಸ್ತ್ರ, ದೂರದ ಯಾವುದೋ ನಿಗೂಢ ಸತ್ಯದಲ್ಲಿ ಧ್ಯಾನಮಗ್ನನಾದ ವಿಚಿತ್ರ ಮುದುಕನ ಚಿತ್ರ ಕಾಣಿಸುತ್ತದೆ ಅಥವಾ ಆಧ್ಯಾತ್ಮಿಕ ತೃಷೆಯುಳ್ಳ ತರುಣರನ್ನು ಸುಲಭವಾಗಿ ಮರುಳುಮಾಡುವ ನಕಲಿ ವಿಶ್ವೋಪದೇಶಕ ಎಂಬ ಭಾವನೆ ನಮಗೆ ಮೂಡುತ್ತದೆ.

ಆದರೆ ನಿಜವಾಗಿ ಗುರು ಎಂದರೆ ಯಾರು? ನಮಗೆ ತಿಳಿಯದೆ ಇರುವುದು ಅವನಿಗೆ ಏನು ತಿಳಿದಿದೆ? ಅವನು ಹೇಗೆ ನಮಗೆ ಜ್ಞಾನೋದಯವನ್ನು ಉಂಟುಮಾಡುತ್ತಾನೆ? 1973ರಲ್ಲಿ ಇಂಗ್ಲೆಂಡಿನಲ್ಲಿ ನೀಡಿದ ಒಂದು ಉಪನ್ಯಾಸದಲ್ಲಿ ಶ್ರೀಲ ಪ್ರಭುಪಾದರು ಬೆಳಕು ಚೆಲ್ಲುವಂತಹ ಉತ್ತರಗಳನ್ನು ನೀಡಿದ್ದಾರೆ.
ಓಂ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ।
ಚಕ್ಷುರ್ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
“ನಾನು ಅಜ್ಞಾನವೆಂಬ ಅಂಧಕಾರದಲ್ಲಿ ಜನಿಸಿದ್ದೆ. ನನ್ನ ಗುರುಗಳು ಜ್ಞಾನದ ದೀವಟಿಗೆಯಿಂದ ನನ್ನ ಕಣ್ಣು ತೆರೆಸಿದರು. ಅವರಿಗೆ ನನ್ನ ಗೌರವಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.”
ಅಜ್ಞಾನ ಎಂದರೆ ಬುದ್ಧಿಹೀನತೆ ಅಥವಾ ಅಂಧಕಾರ. ಈ ಕೋಣೆಯಲ್ಲಿರುವ ಎಲ್ಲ ದೀಪಗಳೂ ಥಟ್ಟನೆ ಆರಿಹೋದರೆ, ನಾವಾಗಲಿ ಬೇರೆಯವರಾಗಲಿ ಎಲ್ಲಿ ಕುಳಿತಿದ್ದಾರೆ ಎಂದು ನಮಗೆ ಹೇಳಲು ಆಗುವುದಿಲ್ಲ. ಎಲ್ಲವೂ ಗೊಂದಲಮಯವಾಗುತ್ತದೆ. ಹಾಗೆಯೇ ನಾವೆಲ್ಲರೂ ಈ ಲೌಕಿಕ ಪ್ರಪಂಚದ ಕಗ್ಗತ್ತಲಿನಲ್ಲಿದ್ದೇವೆ.
ಇದು ತಮಸ್ಸಿನ ಪ್ರಪಂಚ. ತಮಸ್ ಅಥವಾ ತಿಮಿರ ಎಂದರೆ ಕತ್ತಲು. ಈ ಲೌಕಿಕ ಪ್ರಪಂಚವು ಕತ್ತಲುಮಯವಾಗಿದೆ. ಆದುದರಿಂದ ಅದನ್ನು ಬೆಳಗಿಸಲು ಬಿಸಿಲೋ ಬೆಳದಿಂಗಳೋ ಬೇಕು. ಆದರೆ ಬೇರೊಂದು ಲೋಕವಿದೆ. ಅದು ಆಧ್ಯಾತ್ಮಿಕ ಲೋಕ. ಅದು ಈ ಅಂಧಕಾರದ ಆಚೆಗಿದೆ. ಆ ಲೋಕವನ್ನು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ವರ್ಣಿಸಿದ್ದಾನೆ (15.6)
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ||
“ನನ್ನ ಆ ಧಾಮವನ್ನು ಸೂರ್ಯನಾಗಲಿ, ಚಂದ್ರನಾಗಲಿ ಅಥವಾ ವಿದ್ಯುತ್ತಾಗಲಿ ಬೆಳಗಿಸುವುದಿಲ್ಲ. ಆ ಧಾಮವನ್ನು ಸೇರಿದವನು ಎಂದೂ ಈ ಲೌಕಿಕ ಪ್ರಪಂಚಕ್ಕೆ ಮರಳಿ ಬರುವುದಿಲ್ಲ.”
ತನ್ನ ಶಿಷ್ಯರನ್ನು ಕತ್ತಲೆಯಿಂದ ಬೆಳಕಿಗೆ ಕರೆದೊಯ್ಯುವುದೇ ಗುರುಗಳ ಕೆಲಸ. ವ್ಯಕ್ತಿಯು ಅರಿಯದೆ ರೋಗದ ಸೋಂಕು ತಗಲಿಸಿಕೊಳ್ಳುವಂತೆ, ಈಗ ಪ್ರತಿಯೊಬ್ಬನೂ ಅಜ್ಞಾನದ ಕಾರಣದಿಂದ ದುಃಖವನ್ನು ಅನುಭವಿಸುತ್ತಿದ್ದಾನೆ. ಮನುಷ್ಯನು ಆರೋಗ್ಯದ ನಿಯಮಗಳನ್ನು ಅರಿಯದಿದ್ದರೆ ಯಾವ ಸೋಂಕು ತಗಲುತ್ತದೆಂದು ಅವನಿಗೇ ತಿಳಿಯುವುದಿಲ್ಲ.
ಆದುದರಿಂದ ಅಜ್ಞಾನದಿಂದ ಸೋಂಕು ತಗಲುತ್ತದೆ. ನಾವು ರೋಗದಿಂದ ನರಳುತ್ತೇವೆ. ಅಪರಾಧಿಯು, “ನನಗೆ ಕಾನೂನು ಗೊತ್ತಿರಲಿಲ್ಲ’ ಎಂದು ಹೇಳಬಹುದು. ಆದರೆ ಅವನು ಅಪರಾಧ ಮಾಡಿದರೆ ಅವನಿಗೆ ಕ್ಷಮೆ ದೊರೆಯುವುದಿಲ್ಲ. ಅಜ್ಞಾನವನ್ನು ನೆಪವಾಗಿ ಒಡ್ಡಲಾಗುವುದಿಲ್ಲ. ಹಾಗೆಯೇ, ಬೆಂಕಿಯು ಸುಡುತ್ತದೆ ಎಂದು ತಿಳಿಯದೆ ಮಗುವು ಮುಟ್ಟುತ್ತದೆ.
ಮಗು, ನಾನು ಸುಡುತ್ತೇನೆ ಎನ್ನುವುದು ಅದಕ್ಕೆ ತಿಳಿದಿಲ್ಲ’ ಎಂದು ಬೆಂಕಿಯು ಯೋಚಿಸುವುದಿಲ್ಲ, ಇಲ್ಲ. ಇಲ್ಲಿ ಕ್ಷಮೆಗೆ ಅವಕಾಶವಿಲ್ಲ. ರಾಜ್ಯದ ಕಾನೂನುಗಳು ಇರುವಂತೆ ಕಟ್ಟುನಿಟ್ಟಾದ ಪ್ರಕೃತಿ ನಿಯಮಗಳಿವೆ. ನಾವು ಅವುಗಳನ್ನು ತಿಳಿಯದಿದ್ದರೂ ಅವು ಕಾರ್ಯ ನಿರ್ವಹಿಸುತ್ತವೆ. ನಾವು ಅಜ್ಞಾನದಿಂದ ಏನಾದರೂ ತಪ್ಪು ಮಾಡಿದರೆ, ನರಳಬೇಕಾಗುತ್ತದೆ. ಇದೇ ನಿಯಮ. ಈ ನಿಯಮವು ರಾಜ್ಯದ ನಿಯಮವಾಗಿರಲಿ ಅಥವಾ ಪ್ರಕೃತಿಯ ನಿಯಮವಾಗಿರಲಿ, ಅದನ್ನು ಉಲ್ಲಂಘಿಸಿದರೆ ಯಾತನೆಗೊಳಗಾಗುವ ಅಪಾಯವುಂಟು.
ಯಾವ ಮಾನವ ಜೀವಿಯೂ ಯಾತನೆಗೊಳಗಾಗದಂತೆ ನೋಡಿಕೊಳ್ಳುವುದೇ ಗುರುವಿನ ಕೆಲಸವಾಗಿದೆ. ತಾನು ದುಃಖಿಯಲ್ಲವೆಂದು ಯಾರೂ ಹೇಳಿಕೊಳ್ಳಲಾರರು. ಅದು ಅಸಾಧ್ಯ. ಈ ಲೌಕಿಕ ಪ್ರಪಂಚದಲ್ಲಿ ಮೂರು ವಿಧವಾದ ದುಃಖಗಳಿವೆ – ಆಧ್ಯಾತ್ಮಿಕ, ಅಧಿಭೌತಿಕ ಮತ್ತು ಅಧಿದೈವಿಕ.
ಈ ದುಃಖಗಳು ಭೌತಿಕದೇಹ ಮತ್ತು ಮನಸ್ಸು ಇತರ ಜೀವಿಗಳು ಮತ್ತು ನಿಸರ್ಗದ ಶಕ್ತಿಗಳಿಂದ ಉಂಟಾಗುತ್ತವೆ. ನಾವು ಮಾನಸಿಕ ಅಳಲನ್ನು ಅನುಭವಿಸಬಹುದು ಅಥವಾ ಇರುವೆ, ಸೊಳ್ಳೆ ಅಥವಾ ನೊಣಗಳಂತಹ ಕ್ರಿಮಿಕೀಟಗಳಾದ ಇತರ ಜೀವಿಗಳಿಂದ ದುಃಖಕ್ಕೀಡಾಗಬಹುದು ಅಥವಾ ಇನ್ನಾವುದೋ ಅಧಿಕತಮ ಶಕ್ತಿಯಿಂದ ಬಾಧೆಗೊಳಗಾಗಬಹುದು.
ಅತಿವೃಷ್ಟಿ ಅನಾವೃಷ್ಟಿಗಳ ಹಾವಳಿಯಾಗಬಹುದು. ಅತಿಯಾದ ಬೇಗೆಯೂ, ಅತಿಯಾದ ಶೀತವೂ ಉಂಟಾಗಬಹುದು. ಹೀಗೆ ಅನೇಕ ಬಗೆಯ ದುಃಖಗಳನ್ನು ಪ್ರಕೃತಿಯು ನಮ್ಮ ಮೇಲೆ ಹೇರುತ್ತದೆ. ಹೀಗೆ ಈ ಲೌಕಿಕ ಪ್ರಪಂಚದಲ್ಲಿಯೇ ಮೂರು ಬಗೆಯ ದುಃಖಗಳಿವೆ. ಪ್ರತಿಯೊಬ್ಬನೂ ಅವುಗಳಲ್ಲಿ ಒಂದು, ಎರಡು ಅಥವಾ ಮೂರರಿಂದಲೂ ದುಃಖವನ್ನು ಅನುಭವಿಸುತ್ತಾನೆ. ದುಃಖದಿಂದ ತಾನು ಮುಕ್ತನಾಗಿದ್ದಾನೆಂದು ಯಾರೂ ಹೇಳಲಾರರು.

ಹಾಗಾದರೆ ಜೀವಿಯು ಏಕೆ ದುಃಖವನ್ನು ಅನುಭವಿಸುತ್ತಾನೆ ಎಂದು ನಾವು ಕೇಳಬಹುದು. ಅದಕ್ಕೆ ಉತ್ತರವೆಂದರೆ – ಅಜ್ಞಾನ. “ನಾನು ತಪ್ಪುಗಳನ್ನು ಮಾಡುತ್ತಿದ್ದೇನೆ. ಪಾಪಪೂರಿತವಾದ ಜೀವನವನ್ನು ನಡೆಸುತ್ತಿದ್ದೇನೆ. ಅದರಿಂದಾಗಿಯೇ ನಾನು ಯಾತನೆ ಪಡುತ್ತಿದ್ದೇನೆ” ಎಂದು ಅವನು ಚಿಂತಿಸುವುದಿಲ್ಲ.
ಆದುದರಿಂದ ತನ್ನ ಶಿಷ್ಯನನ್ನು ಈ ಅಜ್ಞಾನದಿಂದ ಪಾರು ಮಾಡುವುದೇ ಗುರುಗಳ ಮೊದಲ ಕೆಲಸ. ದುಃಖದಿಂದ ರಕ್ಷಿಸುವುದಕ್ಕಾಗಿ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ನಮ್ಮ ಮಕ್ಕಳಿಗೆ ಶಿಕ್ಷಣ ದೊರೆಯದಿದ್ದರೆ ಭವಿಷ್ಯದಲ್ಲಿ ಅವರು ತೊಂದರೆಗೆ ಈಡಾಗುತ್ತಾರೆಂದು ನಾವು ಭಯಪಡುತ್ತೇವೆ.
ದುಃಖವು ಬರುವುದು ಅಜ್ಞಾನದಿಂದ ಎಂದು ಗುರುಗಳು ಕಾಣುತ್ತಾರೆ. ಇಲ್ಲಿ ಅಜ್ಞಾನವನ್ನು ಕತ್ತಲೆಗೆ ಹೋಲಿಸಲಾಗಿದೆ. ಕತ್ತಲೆಯಲ್ಲಿ ಇರುವವನನ್ನು ಪಾರು ಮಾಡುವುದು ಹೇಗೆ? ಬೆಳಕಿನಿಂದ, ಗುರುಗಳು ಜ್ಞಾನಜ್ಯೋತಿಯನ್ನು ತೆಗೆದುಕೊಂಡು ಕತ್ತಲೆಯಲ್ಲಿ ಆವೃತಾಗಿರುವ ಜೀವಿಯು ಎದುರ ಹಿಡಿಯುತ್ತಾರೆ. ಆ ಜ್ಞಾನವು ಅಜ್ಞಾನವೆಂಬ ಕತ್ತಲೆಯ ಕಷ್ಟದಿಂದ ಅವನನ್ನು ಪಾರುಮಾಡುತ್ತದೆ.
ನಿಜವಾಗಿ ಗುರುವಿನ ಅಗತ್ಯವಿದೆಯೇ ಎಂದು ಯಾರಾದರೂ ಕೇಳಬಹುದು. ಅಗತ್ಯ ಎಂದು ವೇದಗಳು ಹೇಳುತ್ತವೆ –
ತದ್ ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್ |
ಸಮಿತ್ ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಮ್ ||
(ಮುಂಡಕೋಪನಿಷತ್ತು 1.2.12)
ನಾವು ಗುರುಗಳನ್ನು ಅರಸಿಕೊಂಡು ಹೋಗಬೇಕೆಂದು ವೇದಗಳು ನಮಗೆ ವಿಧಿಸುತ್ತವೆ. ಒಬ್ಬರು ಅಧಿಕೃತ ಗುರುಗಳನ್ನು ಅರಸಬೇಕೆಂದು ವೇದಗಳು ಹೇಳುತ್ತವೆ. ಕೇವಲ ಯಾರೋ ಒಬ್ಬ ಗುರುವನ್ನಲ್ಲ. ಗುರುಶಿಷ್ಯ ಪರಂಪರೆಯಲ್ಲಿ ಬಂದವರೇ ನಿಜವಾದ ಗುರುಗಳು. ಐದು ಸಾವಿರ ವರ್ಷಗಳ ಹಿಂದೆ ವೇದವ್ಯಾಸರು ಹಾಗೂ ಕೃಷ್ಣ ಏನನ್ನು ಬೋಧಿಸಿದರೋ ಇಂದಿಗೂ ಅದನ್ನೇ ಬೋಧಿಸಲಾಗುತ್ತಿದೆ.
ಈ ಎರಡು ಬೋಧನೆಗಳಲ್ಲೂ ಯಾವ ವ್ಯತ್ಯಾಸವೂ ಇಲ್ಲ. ನೂರಾರು ಸಾವಿರಾರು ಆಚಾರ್ಯರು ಆಗಿಹೋಗಿದ್ದಾರೆ. ಆದರೆ ಅವರ ಸಂದೇಶ ಮಾತ್ರ ಒಂದೇ. ನಿಜವಾದ ಗುರುಗಳು ಇಬ್ಬರಾಗಿರಲು ಸಾಧ್ಯವಿಲ್ಲ ಏಕೆಂದರೆ ನಿಜವಾದ ಗುರುಗಳು ತಮ್ಮ ಪೂರ್ವಸೂರಿಗಳು ಬೋಧಿಸಿದ್ದಕ್ಕಿಂತ ವಿಭಿನ್ನವಾದುದನ್ನು ಬೋಧಿಸುವುದಿಲ್ಲ.
ಕೆಲವು ಬೋಧಕರು, “ನನ್ನ ಅಭಿಪ್ರಾಯದಲ್ಲಿ ನೀನು ಹೀಗೆ ಮಾಡಬೇಕು’ ಎಂದು ಹೇಳುತ್ತಾರೆ. ಅಂತಹವರು ಗುರುಗಳೇ ಅಲ್ಲ. ಇಂತಹ ಗುರುಗಳೆಂದು ಹೇಳಿಕೊಳ್ಳುವವರು ಕೇವಲ ಠಕ್ಕರು. ನಿಜವಾದ ಗುರುಗಳು ಏಕೈಕವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಆ ಅಭಿಪ್ರಾಯವು ಕೃಷ್ಣ ವೇದವ್ಯಾಸ, ನಾರದ, ಅರ್ಜುನ, ಶ್ರೀ ಚೈತನ್ಯ ಮಹಾಪ್ರಭುಗಳು ಮತ್ತು ಗೋಸ್ವಾಮಿಗಳು ವ್ಯಕ್ತಪಡಿಸಿದ ಅಭಿಪ್ರಾಯವೇ ಆಗಿರುತ್ತದೆ.
ಐದುಸಾವಿರ ವರ್ಷಗಳ ಹಿಂದೆ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದ. ವೇದವ್ಯಾಸರು ಅದನ್ನು ಗ್ರಂಥರೂಪಕ್ಕಿಳಿಸಿದರು. ವೇದವ್ಯಾಸರು “ಇದು ನನ್ನ ಅಭಿಪ್ರಾಯ” ಎಂದು ಹೇಳಲಿಲ್ಲ. ಬದಲಿಗೆ, ಶ್ರೀ ಭಗವಾನ್ ಉವಾಚ ಎಂದರೆ ದೇವೋತ್ತಮ ಪರಮ ಪುರುಷನು ಹೇಳುತ್ತಾನೆ ಎಂದು ಬರೆದರು. ವೇದವ್ಯಾಸರು ಏನೆಲ್ಲ ಬರೆದರೋ ಅದೆಲ್ಲವೂ ಮೂಲತಃ ದೇವೋತ್ತಮ ಪರಮ ಪುರುಷನು ಹೇಳಿದುದೇ ಆಗಿದೆ. ವೇದವ್ಯಾಸರು ತಮ್ಮ ಅಭಿಪ್ರಾಯವನ್ನು ಸೇರಿಸಲಿಲ್ಲ.
ಆದುದರಿಂದ ಶ್ರೀಲ ವೇದವ್ಯಾಸರು ನಿಜವಾದ ಗುರುಗಳು. ಅವರು ಕೃಷ್ಣನ ನುಡಿಗಳನ್ನು ಅಪಾರ್ಥ ಮಾಡುವುದಿಲ್ಲ. ಅವುಗಳನ್ನು ಇದ್ದಂತೆಯೇ ಮರುನುಡಿದರು. ನಾವು ಒಂದು ತಂತಿ ಸಂದೇಶವನ್ನು ಕಳುಹಿಸಿದರೆ ಅವನ್ನು ತಲಪಿಸುವವರು ತಿದ್ದುವುದಿಲ್ಲ. ಸರಿಪಡಿಸುವುದಿಲ್ಲ ಅಥವಾ ಸೇರ್ಪಡೆ ಮಾಡುವುದಿಲ್ಲ. ಅವರು ಅದನ್ನು ತಲಪಿಸುತ್ತಾರಷ್ಟೆ. ಅದೇ ಗುರುವಿನ ಕರ್ತವ್ಯ. ಗುರುಗಳು ಯಾರೇ ಆಗಿರಬಹುದು. ಆದರೆ ಸಂದೇಶ ಮಾತ್ರ ಒಂದೇ. ಆದುದರಿಂದ ಗುರುಗಳು ಒಬ್ಬರೇ ಎಂದು ಹೇಳುತ್ತಾರೆ.
ಗುರು ಶಿಷ್ಯ ಪರಂಪರೆಯಲ್ಲಿ ಒಂದೇ ವಿಷಯದ ಪುನರಾವರ್ತನೆಯನ್ನು ಕಾಣುತ್ತೇವೆ. ಭಗವದ್ಗೀತೆಯಲ್ಲಿ (9.34) ಶ್ರೀಕೃಷ್ಣನು ಹೀಗೆ ಹೇಳುತ್ತಾನೆ –
ಮನ್ ಮನಾ ಭವ ಮದ್‌ಭಕ್ತೋ ಮದ್ ಯಾಜೀ ಮಾಂ ನಮಸ್ಕುರು |
ಮಾಮ್ ಏವೈಷ್ಯಸಿ ಯುಕ್ತ್ವೈವಮ್ ಆತ್ಮಾನಂ ಮತ್ ಪರಾಯಣಃ ||
“ನಿನ್ನ ಮನಸ್ಸನ್ನು ಸದಾ ನನ್ನ ಚಿಂತನೆಯಲ್ಲಿ ತೊಡಗಿಸು. ನನ್ನ ಭಕ್ತನಾಗು. ನನಗೆ ನಮಸ್ಕರಿಸು. ನನ್ನನ್ನು ಆರಾಧಿಸು. ನನ್ನಲ್ಲೇ ಸಂಪೂರ್ಣವಾಗಿ ನಿಮಗ್ನನಾಗಿರುವ ನೀನು ನಿಶ್ಚಯವಾಗಿಯೂ ನನ್ನಲ್ಲಿಗೇ ಬರುತ್ತೀಯ. “ರಾಮಾನುಜಾಚಾರ್ಯ, ಮಧ್ವಾಚಾರ್ಯ, ಶ್ರೀ ಚೈತನ್ಯ ಮಹಾಪ್ರಭುಗಳು ಮೊದಲಾದ ಆಚಾರ್ಯರೆಲ್ಲ ಇವೇ ಉಪದೇಶಗಳನ್ನೇ ಪುನರುಚ್ಚರಿಸಿದರು.
ಆರು ಜನ ಗೋಸ್ವಾಮಿಗಳೂ ಇದೇ ಸಂದೇಶವನ್ನೇ ಪ್ರಸಾರಮಾಡಿದರು. ನಾವೂ ಅವರ ಹೆಜ್ಜೆಗಳನ್ನೇ ಅನುಸರಿಸುತ್ತಿದ್ದೇವೆ ಅಷ್ಟೆ. ಅದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. “ನನ್ನ ಅಭಿಪ್ರಾಯದಲ್ಲಿ ಕುರುಕ್ಷೇತ್ರದ ರಣರಂಗವು ಮಾನವನ ದೇಹವನ್ನು ಪ್ರತಿನಿಧಿಸುತ್ತದೆ.” ಎಂದೆಲ್ಲ ಕೃಷ್ಣನ ನುಡಿಗಳಿಗೆ ವ್ಯಾಖ್ಯಾನ ನೀಡಲು ನಾವು ಪ್ರಯತ್ನಿಸುವುದಿಲ್ಲ.
ಧೂರ್ತರು ಹೀಗೆ ವ್ಯಾಖ್ಯಾನ ಮಾಡುತ್ತಾರೆ. ಈ ಪ್ರಪಂಚದಲ್ಲಿ ಸ್ವಂತ ಅಭಿಪ್ರಾಯ ನೀಡುವ ಅನೇಕ ಧೂರ್ತ ಗುರುಗಳಿದ್ದಾರೆ. ಆದರೆ ಅಂತಹ ಧೂರ್ತ ಗುರುಗಳಿಗೆ ನಾವು ಸವಾಲು ಹಾಕಬಹುದು. ಧೂರ್ತ ಗುರುವೊಬ್ಬನು, “ನಾನೇ ದೇವರು’ ಅಥವಾ ‘ನಾವೆಲ್ಲ ದೇವರೇ” ಎಂದು ಹೇಳಬಹುದು. ಹೇಳಿಕೊಳ್ಳಲಿ.
ಆದರೆ ದೇವರು ಎನ್ನುವ ಶಬ್ದಕ್ಕೆ ನಿಘಂಟಿನಲ್ಲಿ ಏನು ಅರ್ಥವನ್ನು ಕೊಡಲಾಗಿದೆ ಎಂದು ನಾವು ನೋಡಬೇಕು. ಸಾಮಾನ್ಯವಾಗಿ ದೇವರು ಎಂದರೆ ಪರಮ ಪುರುಷ ಎಂದು ನಿಘಂಟು ಹೇಳುತ್ತದೆ. “ನೀನು ಅಂತಹ ಪರಮ ಪುರುಷನೇ?” ಎಂದು ಅಂತಹ ಗುರುವನ್ನು ನಾವು ಪ್ರಶ್ನಿಸಬಹುದು.
ಇದನ್ನು ಅವರು ಅರ್ಥ ಮಾಡಿಕೊಳ್ಳದಿದ್ದರೆ ಆಗ ನಾವು ಪರಮ ಎಂಬ ಶಬ್ದದ ಅರ್ಥವನ್ನು ಅವನಿಗೆ ತಿಳಿಸಬೇಕಾಗುತ್ತದೆ. ಪರಮ ಎಂದರೆ ಅತ್ಯಂತ ಶ್ರೇಷ್ಠ ಅಧಿಕಾರಿ ಎಂದು ಯಾವುದೇ ನಿಘಂಟು ಹೇಳುತ್ತದೆ. ಆಗ ನಾವು “ನೀನು ಅತ್ಯಂತ ಶ್ರೇಷ್ಠ ಅಧಿಕಾರಿಯೇ?” ಎಂದು ಕೇಳಬಹುದು.

ಅಂತಹ ಧೂರ್ತಗುರುವು ತಾನೇ ದೇವರೆಂದು ಘೋಷಿಸಿಕೊಳ್ಳುತ್ತಿದ್ದರು ಅಂತಹ ಪ್ರಶ್ನೆಗೆ ಉತ್ತರ ಕೊಡಲಾರ. ದೇವರು ಪರಮ ಪುರುಷನೂ, ಶ್ರೇಷ್ಠ ಅಧಿಕಾರಿಯೂ ಆಗಿದ್ದಾನೆ. ಯಾರೂ ಅವನಿಗೆ ಸರಿಸಮಾನರಲ್ಲ ಅಥವಾ ಅವನಿಗಿಂತ ಶ್ರೇಷ್ಠರಲ್ಲ. ಆದರೆ ತಾವೇ ಪರಮರೆಂದು ಹೇಳಿಕೊಳ್ಳುವ ಧೂರ್ತರಾದ ಅನೇಕ ಗುರುದೇವರುಗಳು ಇದ್ದಾರೆ. ಲೌಕಿಕ ಅಸ್ತಿತ್ವದ ಅಂಧಕಾರದಿಂದ ಪಾರಾಗಲು ಅಂತಹ ಧೂರ್ತರು ನಮಗೆ ನೆರವು ನೀಡಲಾರರು. ಆಧ್ಯಾತ್ಮಿಕ ಜ್ಞಾನದೀವಿಗೆಯಿಂದ ನಮ್ಮ ಕತ್ತಲೆಯನ್ನು ಬೆಳಗಿಸುವುದು ಅವರಿಗೆ ಸಾಧ್ಯವಿಲ್ಲ.
ನಿಜವಾದ ಗುರುಗಳು ಪರಮ ಗುರುವಾದ ಭಗವಂತನು ಶ್ರೇಷ್ಠಶಾಸ್ತ್ರಗಳಲ್ಲಿ ಏನನ್ನು ಹೇಳಿದ್ದಾನೋ ಅದನ್ನೇ ಮಂಡಿಸುತ್ತಾರೆ ಅಷ್ಟೆ. ಗುರುಶಿಷ್ಯ ಪರಂಪರೆಯಲ್ಲಿ ಸಾಗಿಬಂದ ಸಂದೇಶವನ್ನು ಗುರುವಾದವರು ಬದಲಾಯಿಸಲಾರರು.
ಪರಮ ಸತ್ಯವನ್ನು ಕಂಡುಹಿಡಿಯಲು ನಾವು ಸಂಶೋಧನೆಯನ್ನು ಕೈಗೊಳ್ಳಲು ಆಗುವುದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು. “ನನ್ನ ಗುರುಮಹಾರಾಜರು ನನ್ನನ್ನು ಒಬ್ಬ ದೊಡ್ಡ ಮೂರ್ಖನೆಂದು ಪರಿಗಣಿಸಿದ್ದರು” ಎಂದು ಸ್ವತಃ ಶ್ರೀ ಚೈತನ್ಯ ಮಹಾಪ್ರಭುಗಳ ಹೇಳಿದ್ದಾರೆ.
ಯಾರು ತನ್ನ ಗುರುಗಳ ಮುಂದೆ ಮೂರ್ಖರಂತೆ ಇರುತ್ತಾರೋ ಅವರೇ ನಿಜವಾದ ಗುರುಗಳು. ಆದರೆ, “ನಾನು ಬಹಳ ಪ್ರಗತಿ ಸಾಧಿಸಿದ್ದೇನೆ. ನನ್ನ ಗುರುವಿಗಿಂತ ಚೆನ್ನಾಗಿ ಹೇಳಬಲ್ಲೆ’ ಎಂದು ಯಾರು ಹೇಳುತ್ತಾರೋ ಅವರು ಮೂರ್ಖರೇ ಸರಿ. ಭಗವದ್ಗೀತೆಯಲ್ಲಿ (4.2) ಶ್ರೀಕೃಷ್ಣ ಹೀಗೆ ಹೇಳುತ್ತಾನೆ –
ಏವಂ ಪರಂಪರಾಪ್ರಾಪ್ತಮ್ ಇಮಂ ರಾಜರ್ಷಯೋ ವಿದುಃ |
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ ||
“ಹೀಗೆ ಈ ಪರಮ ವಿಜ್ಞಾನವು ಗುರುಶಿಷ್ಯ ಪರಂಪರೆಯ ಸರಣಿಯಲ್ಲಿ ಒಬ್ಬರಿಂದ ಒಬ್ಬರಿಗೆ ಸ್ವೀಕಾರವಾಗುತ್ತಾ ಬಂದಿದೆ. ರಾಜಋಷಿಗಳು ಅದನ್ನು ಹೀಗೆಯೇ ಅರ್ಥಮಾಡಿಕೊಂಡಿದ್ದಾರೆ. ಆದರೆ ಕಾಲಾನುಕ್ರಮದಲ್ಲಿ ಈ ಸರಣಿಯು ಭಗ್ನವಾಯಿತು. ಆ ವಿಜ್ಞಾನವು ನಷ್ಟವಾದಂತೆ ತೋರುತ್ತದೆ.”
ಗುರುವೊಬ್ಬರನ್ನು ಪಡೆಯುವುದು ಕೇವಲ ದೊಡ್ಡಸ್ತಿಕೆಯಲ್ಲ. ಆಧ್ಯಾತ್ಮಿಕ ಜೀವನವನ್ನು ಅರಿತುಕೊಳ್ಳಲು ನಿಜವಾಗಿಯೂ ಆಸಕ್ತನಾಗಿರುವವನಿಗೆ ಗುರುಗಳ ಅಗತ್ಯವಿದೆ. ಆಧ್ಯಾತ್ಮಿಕ ಜೀವನ, ದೇವರು, ಸತ್ಕರ್ಮ ಮತ್ತು ದೇವರೊಡನೆ ತನ್ನ ಸಂಬಂಧವನ್ನು ಅರಿತುಕೊಳ್ಳಲು ತೀವ್ರವಾದ ಆಸಕ್ತಿಯನ್ನು ಹೊಂದಿರುವವನಿಗೆ ಗುರುಗಳ ಅಗತ್ಯವಿದೆ.
ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಾವು ಗಂಭೀರವಾದ ಆಸಕ್ತಿಯನ್ನು ಹೊಂದಿದ್ದರೆ ನಮಗೆ ಒಬ್ಬರು ಗುರುಗಳು ಬೇಕು. ಗುರುಗಳನ್ನು ಹೊಂದಿರುವುದೇ ಒಂದು ಹವ್ಯಾಸವಾಗಿರುವುದಕ್ಕಾಗಿ ನಾವು ಗುರುಗಳ ಬಳಿಗೆ ಹೋಗಬಾರದು. ನಾವು ಶರಣಾಗತರಾಗಬೇಕು. ಏಕೆಂದರೆ ಶರಣಾಗತರಾಗದೆ ಏನನ್ನೂ ಕಲಿಯಲಾಗುವುದಿಲ್ಲ. ಅರ್ಜುನನು ತನ್ನ ಗುರುವಾದ ಶ್ರೀಕೃಷ್ಣನನ್ನು ಅಂಗೀಕರಿಸಿದಂತೆ ನಾವು ಗುರುಗಳನ್ನು ಸ್ವೀಕರಿಸಬೇಕು.
ಕಾರ್ಪಣ್ಯದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಮ್ಮೂಢ ಚೇತಾಃ|
ಯಚ್ಛ್ರೇಯಃ ಸ್ಯಾನ್ ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ||
“ಈಗ ನನ್ನ ಕರ್ತವ್ಯವೇನೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ. ನನ್ನ ದೌರ್ಬಲ್ಯದಿಂದಾಗಿ ಚಿತ್ತಶಾಂತಿಯನ್ನು ಕಳೆದುಕೊಂಡಿದ್ದೇನೆ. ಈ ಸ್ಥಿತಿಯಲ್ಲಿ ನನಗೆ ಅತ್ಯುತ್ತಮವಾದುದು ಯಾವುದೋ ಅದನ್ನು ಸ್ಪಷ್ಟವಾಗಿ ಹೇಳಬೇಕೆಂದು ಕೇಳಿಕೊಳ್ಳುತ್ತೇನೆ. ಈಗ ನಾನು ನಿನ್ನ ಶಿಷ್ಯ ನಿನಗೆ ಶರಣಾಗತನಾಗಿರುವ ಜೀವಾತ್ಮ ದಯವಿಟ್ಟು ನನಗೆ ಉಪದೇಶ ನೀಡು.” (ಗೀತಾ 2.7)
ಇದು ಗುರುಗಳನ್ನು ಸ್ವೀಕರಿಸುವ ವಿಧಾನ. ಗುರುಗಳು ಕೃಷ್ಣನ ಪ್ರತಿನಿಧಿಯಾಗಿರುತ್ತಾರೆ. ಹಿಂದಿನ ಆಚಾರ್ಯರೆಲ್ಲರ ಪ್ರತಿನಿಧಿಯಾಗಿರುತ್ತಾರೆ. ಆಚಾರ್ಯರೆಲ್ಲ ತನ್ನ ಪ್ರತಿನಿಧಿಗಳೆಂದು ಕೃಷ್ಣನೇ ಹೇಳಿದ್ದಾನೆ. ಆದುದರಿಂದ ದೇವರಿಗೆ ತೋರುವ ಗೌರವವನ್ನೇ ಗುರುಗಳಿಗೂ ಸಮರ್ಪಿಸಬೇಕು.
ವಿಶ್ವನಾಥ ಚಕ್ರವರ್ತಿ ಠಾಕುರರು ಗುರುಗಳನ್ನು ಕುರಿತ ತಮ್ಮ ಪ್ರಾರ್ಥನೆಯಲ್ಲಿ ಹೀಗೆ ಹೇಳಿದ್ದಾರೆ – ಯಸ್ಯ ಪ್ರಸಾದಾದ್ ಭಗವತ್ ಪ್ರಸಾದಃ ಎಂದರೆ, “ಗುರುಗಳ ಕೃಪೆಯಿಂದಲೇ ವ್ಯಕ್ತಿಗೆ ಕೃಷ್ಣನ ಅನುಗ್ರಹ ಲಭಿಸುತ್ತದೆ.” ಹೀಗೆ ನಾವು ನಿಜವಾದ ಗುರುಗಳಿಗೆ ಶರಣಾಗತರಾದರೆ ಭಗವಂತನಿಗೆ ಶರಣಾಗತರಾದಂತೆಯೇ. ಗುರುಗಳಿಗೆ ನಾವು ಶರಣಾಗತರಾಗುವುದನ್ನು ಭಗವಂತನು ಸ್ವೀಕರಿಸುತ್ತಾನೆ.

ಭಗವದ್ಗೀತೆಯಲ್ಲಿ (18.66) ಕೃಷ್ಣನು ಹೀಗೆ ಉಪದೇಶಿಸುತ್ತಾನೆ –
ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ |
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
“ಎಲ್ಲ ಬಗೆಯ ಧರ್ಮಗಳನ್ನೂ ಪರಿತ್ಯಜಿಸಿ ನನಗೆ ಮಾತ್ರ ಶರಣಾಗತನಾಗು. ನಿನ್ನನ್ನು ಸರ್ವಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಭಯಪಡಬೇಡ.” ಕೆಲವರು, “ಕೃಷ್ಣ ಎಲ್ಲಿದ್ದಾನೆ? ನಾನು ಅವನಿಗೆ ಶರಣಾಗತನಾಗುತ್ತೇನೆ.” ಎಂದು ವಾದಿಸಬಹುದು. ಅದು ಹಾಗಲ್ಲ. ಮೊದಲು ನಾವು ಕೃಷ್ಣನ ಪ್ರತಿನಿಧಿಗೆ ಶರಣಾಗತರಾಗಬೇಕು.
ಅನಂತರ ಕೃಷ್ಣನಿಗೆ ಶರಣಾಗತರಾಗಬೇಕು. ಇದು ಕ್ರಮ. ಆದುದರಿಂದಲೇ, ಸಾಕ್ಷಾದ್ ಧರಿತ್ವೇನ ಸಮಸ್ತ ಶಾಸ್ತ್ರೈಃ ಎಂದು ಹೇಳಲಾಗಿದೆ – ಗುರುಗಳು ದೇವರಿಗೆ ಸಮಾನ. ಗುರುಗಳಿಗೆ ನಾವು ಗೌರವ ಸಲ್ಲಿಸಿದಾಗ ದೇವರಿಗೇ ಗೌರವ ಸಲ್ಲಿಸಿದಂತಾಗುತ್ತದೆ. ನಾವು ಭಗವತ್ಪ್ರಜ್ಞೆಯನ್ನು ಹೊಂದಲು ಪ್ರಯತ್ನಿಸುತ್ತಿರುವುದರಿಂದ, ದೇವರ ಪ್ರತಿನಿಧಿಯ ಮೂಲಕ ದೇವರಿಗೆ ಗೌರವ ಸಲ್ಲಿಸುವುದನ್ನು ಕಲಿಯುವುದು ಅಗತ್ಯವಾಗಿದೆ.
ಎಲ್ಲ ಶಾಸ್ತ್ರಗಳಲ್ಲಿಯೂ ಗುರುಗಳು ದೇವರ ಸಮಾನವೆಂದು ವರ್ಣಿಸಲಾಗಿದೆ. ಆದರೆ ಗುರುಗಳು ಎಂದೂ ‘ನಾನೇ ದೇವರು” ಎಂದು ಹೇಳುವುದಿಲ್ಲ. ದೇವರಿಗೆ ಗೌರವವನ್ನು ಸಲ್ಲಿಸುವಂತೆಯೇ ಗುರುಗಳಿಗೂ ಸಲ್ಲಿಸುವುದು ಶಿಷ್ಯನ ಕರ್ತವ್ಯ. ಆದರೆ “ನನ್ನ ಶಿಷ್ಯರು ದೇವರಿಗೆ ಸಲ್ಲಿಸುವ ಗೌರವವನ್ನೇ ನನಗೂ ಸಲ್ಲಿಸುತ್ತಾರೆ. ಆದುದರಿಂದ ನಾನೇ ದೇವರಾಗಿದ್ದೇನೆ’ ಎಂದು ಗುರುಗಳು ಎಂದೂ ಭಾವಿಸುವುದಿಲ್ಲ.
ಅವರು ಹಾಗೆ ಯೋಚಿಸಲು ಪ್ರಾರಂಭಿಸುತ್ತಿದ್ದಂತೆಯೇ ದೇವರ ಬದಲಾಗಿ ನಾಯಿ (God – Dog) ಆಗುತ್ತಾರೆ. ಆದುದರಿಂದ ವಿಶ್ವನಾಥ ಚಕ್ರವರ್ತಿ ಅವರು ಕಿಂತುಪ್ರಭೋರ್ ಯಃ ಪ್ರಿಯ ಏವ ತಸ್ಯ ಎಂದು ಹೇಳುತ್ತಾರೆ. ಗುರುಗಳು ಭಗವಂತನ ಆಪ್ತ ಸೇವಕರಾಗಿರುವುದರಿಂದ ಭಗವಂತನಿಗೆ ಸಲ್ಲಿಸುವ ಗೌರವವನ್ನೇ ಗುರುಗಳಿಗೂ ಸಲ್ಲಿಸುತ್ತೇವೆ.
ದೇವರು ಸದಾ ದೇವರೇ. ಗುರುಗಳು ಸದಾ ಗುರುಗಳೇ. ಶಿಷ್ಟಾಚಾರದ ದೃಷ್ಟಿಯಿಂದ ನೋಡಿದರೆ ದೇವರು ಆರಾಧ್ಯದೈವ. ಗುರುಗಳು ಆಧಾರಕದೈವ (ಸೇವಕ ಭಗವಾನ್) ಆದುದರಿಂದ ಗುರುಗಳನ್ನುಪ್ರಭುಪಾದ ಎಂದು ಸಂಬೋಧಿಸುತ್ತೇವೆ. ಪ್ರಭು ಎಂದರೆ ಭಗವಂತ. ಪಾದ ಎಂದರೆ ಸ್ಥಾನ. ಆದುದರಿಂದ ಪ್ರಭುಪಾದ ಎಂದರೆ ‘ಭಗವಂತನ ಸ್ಥಾನವನ್ನು ತೆಗೆದುಕೊಂಡಿರುವವನು” ಎಂದು ಅರ್ಥ. ಇದು ಸಾಕ್ಷಾದ್ ಧರಿತ್ವೇನ ಸಮಸ್ತ ಶಾಸ್ತ್ರೈಃ ಎಂದ ಹಾಗೆಯೇ.
ನಾವು ಭಗವಂತನನ್ನು ಕುರಿತ ವಿಜ್ಞಾನವನ್ನು ತಿಳಿಯಲು ಗಂಭೀರವಾದ ಆಸಕ್ತಿಯನ್ನು ಹೊಂದಿದ್ದರೆ ಮಾತ್ರ ನಮಗೆ ಗುರುಗಳ ಅಗತ್ಯವಿದೆ. ಕೇವಲ ದೊಡ್ಡಸ್ತಿಕೆಗಾಗಿ ಗುರುಗಳನ್ನು ಇಟ್ಟುಕೊಳ್ಳಲು ನಾವು ಪ್ರಯತ್ನಿಸಬಾರದು. ಗುರುಗಳನ್ನು ಸ್ವೀಕರಿಸಿದವರು ಯುಕ್ತರೀತಿಯಲ್ಲಿ ಮಾತನಾಡುತ್ತಾನೆ.
ಅವನು ಎಂದೂ ಅರ್ಥಹೀನವಾಗಿ ಮಾತನಾಡುವುದಿಲ್ಲ. ಅದು ಶ್ರೇಷ್ಠ ಗುರುವನ್ನು ಸ್ವೀಕರಿಸಿದ್ದಾನೆ ಎಂಬುದಕ್ಕೆ ಸಾಕ್ಷಿ. ನಾವು ಗುರುಗಳಿಗೆ ಖಂಡಿತವಾಗಿಯೂ ಎಲ್ಲ ರೀತಿಯ ಗೌರವಗಳನ್ನೂ ಸಲ್ಲಿಸಬೇಕು. ಆದರೆ ಅವರ ಆದೇಶಗಳನ್ನು ಹೇಗೆ ಪಾಲಿಸಬೇಕೆಂಬುದನ್ನೂ ನಾವು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಭಗವದ್ಗೀತೆಯಲ್ಲಿ (4.34) ಗುರುಗಳನ್ನು ಅರಸಿ ಬಳಿ ಸಾರುವುದು ಹೇಗೆಂದು ಶ್ರೀಕೃಷ್ಣನೇ ಹೀಗೆ ಹೇಳಿದ್ದಾನೆ-
ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೆನ ಸೇವಯಾ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ ತತ್ತ್ವದರ್ಶಿನಃ ||
“ಗುರುಗಳ ಬಳಿಗೆ ಹೋಗಿ ಸತ್ಯವನ್ನು ಅರಿಯಲು ಪ್ರಯತ್ನಿಸು. ಅವರಲ್ಲಿ ವಿನೀತನಾಗಿ ಪ್ರಶ್ನೆ ಕೇಳು. ಅವರಿಗೆ ಸೇವೆ ಸಲ್ಲಿಸು. ಆತ್ಮಸಾಕ್ಷಾತ್ಕಾರ ಪಡೆದ ಜೀವಿಯು ಜ್ಞಾನವನ್ನು ನೀಡಬಲ್ಲರು. ಏಕೆಂದರೆ ಅವರು ಸತ್ಯದರ್ಶನವನ್ನು ಮಾಡಿರುತ್ತಾರೆ.”

ಶರಣಾಗತನಾಗುವುದೇ ಮೊದಲನೆಯ ಕೆಲಸ. ನಾವು ಶ್ರೇಷ್ಠ ಗುರುಗಳೊಬ್ಬರನ್ನು ಹುಡುಕಿಕೊಳ್ಳಬೇಕು. ಆಮೇಲೆ ಅವರಿಗೆ ಮನಃ ಪೂರ್ವಕವಾಗಿ ಶರಣಾಗತರಾಗಬೇಕು. ಒಬ್ಬರು ಗುರುಗಳನ್ನು ಸ್ವೀಕರಿಸುವ ಮುನ್ನ ಅವರಿಗೆ ಶರಣಾಗತರಾಗಬಹುದೇ ಎಂದು ಎಚ್ಚರಿಕೆಯಿಂದ ಅವರನ್ನು ಅಧ್ಯಯನ ಮಾಡಬೇಕು ಎಂದು ಶಾಸ್ತ್ರಗಳು ವಿಧಿಸುತ್ತವೆ.
ಅಂಧಶ್ರದ್ಧೆಯಿಂದ ಇದ್ದಕ್ಕಿದ್ದಂತೆಯೇ ಗುರುಗಳೊಬ್ಬರನ್ನು ಸ್ವೀಕರಿಸಬಾರದು. ಅದು ಬಹಳ ಅಪಾಯಕಾರಿ. ಗುರುಗಳು ಕೂಡ ಶಿಷ್ಯನಾಗಬಯಸುವ ವ್ಯಕ್ತಿ ಯೋಗ್ಯನೇ ಎಂದು ಪರೀಕ್ಷಿಸಬೇಕು. ಈ ರೀತಿಯಲ್ಲಿ ಗುರುಶಿಷ್ಯರ ನಡುವೆ ಸಂಬಂಧವು ಸ್ಥಾಪಿತವಾಗುತ್ತದೆ. ಹೀಗೆ ಎಲ್ಲ ಕ್ರಮಗಳನ್ನೂ ನಿರೂಪಿಸಲಾಗಿದೆ.
ಆದರೆ ನಾವು ಈ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಷ್ಟೆ. ಆಗ ನಾವು ಯೋಗ್ಯಶಿಷ್ಯತ್ವದ ತರಬೇತಿಯನ್ನು ಪಡೆಯಬಹುದು. ನಾವು ಮೊದಲು ಒಬ್ಬರು ಶ್ರೇಷ್ಠ ಗುರುಗಳನ್ನು ಕಂಡುಕೊಳ್ಳಬೇಕು. ಅವರೊಡನೆ ನಮ್ಮ ಸಂಬಂಧವನ್ನು ಸ್ಥಾಪಿಸಿಕೊಳ್ಳಬೇಕು. ಅನಂತರ ಅವರ ಉಪದೇಶದಂತೆ ನಡೆಯಬೇಕು. ಆಗ ನಮ್ಮ ಜೀವನ ಯಶಸ್ವಿಯಾಗುತ್ತದೆ. ಏಕೆಂದರೆ ಅಂಧಕಾರದಲ್ಲಿರುವ ಪ್ರಾಮಾಣಿಕ ಶಿಷ್ಯನಿಗೆ ಗುರುಗಳು ಜ್ಞಾನೋದಯವನ್ನು ಉಂಟುಮಾಡಬಲ್ಲರು.
ಹುಟ್ಟುವಾಗ ಪ್ರತಿಯೊಬ್ಬನೂ ಮೂಢನಾಗಿರುತ್ತಾನೆ. ನಾವು ಹುಟ್ಟಿದಾಗಲೇ ಬುದ್ಧಿವಂತರಾಗಿದ್ದರೆ ಶಾಲೆಗೆ ಹೋಗಬೇಕಾದ ಅವಶ್ಯಕತೆಯೇನು? ನಾವು ಜ್ಞಾನ ಸಂಪಾದನೆ ಮಾಡದಿದ್ದರೆ ಪಶುವಿಗಿಂತ ಕೀಳಾಗುತ್ತೇವೆ. ನನಗೆ ಯಾವ ಗ್ರಂಥಗಳೂ ಬೇಡ, ನಾನು ಗುರುವಾಗಿದ್ದೇನೆ ಎಂದು ಒಂದು ಪ್ರಾಣಿಯು ಹೇಳಬಹುದು.
ಆದರೆ ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳನ್ನು ಕುರಿತ ಪ್ರಮಾಣಗ್ರಂಥಗಳ ಅಧ್ಯಯನ ಮಾಡದೆ ವ್ಯಕ್ತಿಯು ಜ್ಞಾನ ಸಂಪಾದನೆಯನ್ನು ಹೇಗೆ ಮಾಡಿಯಾನು? ಧೂರ್ತಗುರುಗಳು ಈ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹುಟ್ಟಿನಿಂದ ನಾವೆಲ್ಲ ಮೂಢರು, ನಮಗೆ ಜ್ಞಾನೋದಯವಾಗಬೇಕು.
ನಮ್ಮ ಜೀವನವನ್ನು ಪರಿಪೂರ್ಣಗೊಳಿಸಿಕೊಳ್ಳಲು ನಾವು ಜ್ಞಾನವನ್ನು ಪಡೆಯಬೇಕು. ನಮ್ಮ ಜೀವನವನ್ನು ಪರಿಪೂರ್ಣಗೊಳಿಸಿಕೊಳ್ಳದಿದ್ದರೆ ನಾವು ಸೋತಂತೆಯೇ ಸರಿ. ಈ ಸೋಲು ಯಾವುದು? ಅಸ್ತಿತ್ವಕ್ಕಾಗಿ ಹೋರಾಟ. ನಾವು ಉತ್ತಮ ಜೀವನಕ್ಕಾಗಿ, ಉನ್ನತ ಸ್ಥಾನವನ್ನು ಗಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ಬಹಳ ಹೋರಾಡುತ್ತಿದ್ದೇವೆ. ಆದರೆ ನಿಜವಾದ ಉನ್ನತ ಸ್ಥಾನವೆಂದರೆ ಯಾವುದು ಎಂದು ನಮಗೆ ಗೊತ್ತಿಲ್ಲ.
ಈ ಲೌಕಿಕ ಪ್ರಪಂಚದಲ್ಲಿ ನಮಗೆ ಯಾವುದೇ ಸ್ಥಾನವಿರಲಿ ಅದನ್ನು ತ್ಯಜಿಸಬೇಕು. ನಮಗೆ ಉತ್ತಮ ಸ್ಥಾನವೇ ಇರಬಹುದು ಅಥವಾ ಅಧಮ ಸ್ಥಿತಿಯೇ ಇರಬಹುದು. ಏನೇ ಆದರೂ ನಾವು ಇಲ್ಲಿ ಉಳಿಯುವಂತಿಲ್ಲ. ನಾವು ಕೋಟ್ಯಂತರ ಹಣವನ್ನು ಸಂಪಾದಿಸಬಹುದು. “ನಾನು ಈಗ ಉತ್ತಮ ಸ್ಥಿತಿಯಲ್ಲಿದ್ದೇನೆ” ಎಂದು ಭಾವಿಸಬಹುದು.
ಆದರೆ ಅತಿಸಾರವೋ, ಕಾಲರವೋ ಬಂದರೆ ನಮ್ಮ ಗತಿ ಮುಗಿಯಿತು. ಬ್ಯಾಂಕು ಮುಳುಗಿಹೋದರೆ ನಮ್ಮ ಸ್ಥಿತಿ ಮುಗಿದಂತೆಯೇ. ಆದುದರಿಂದ ನಿಜವಾಗಿ ಈ ಲೌಕಿಕ ಪ್ರಪಂಚದಲ್ಲಿ ಉತ್ತಮ ಸ್ಥಾನವೆಂಬುದೇ ಇಲ್ಲ. ಅದೊ೦ದು ವಿಡಂಬನೆಯಷ್ಟೆ. ಈ ಲೌಕಿಕ ಪ್ರಪಂಚದಲ್ಲಿ ಉತ್ತಮ ಸ್ಥಾನವನ್ನು ಪಡೆಯಬೇಕೆಂದು ಪ್ರಯತ್ನಿಸುವವರು ಅಂತಿಮವಾಗಿ ಸೋಲುತ್ತಾರೆ. ಏಕೆಂದರೆ ಇಲ್ಲಿ ಉತ್ತಮ ಸ್ಥಿತಿಯೆಂಬುದೇ ಇಲ್ಲ. ಉತ್ತಮ ಸ್ಥಿತಿಯೆಂದರೆ ಏನೆಂದು ಭಗವದ್ಗೀತೆಯು (14.26) ಹೀಗೆ ಹೇಳುತ್ತದೆ –
ಮಾಂ ಚ ಯೋಽವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ||
”ಶುದ್ಧಭಕ್ತಿಸೇವೆಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿರತನಾದವನು ಕೂಡಲೇ ಪ್ರಕೃತಿ ಗುಣಗಳಿಗೆ ಅತೀತನಾಗುತ್ತಾನೆ. ಅವನು ಆಧ್ಯಾತ್ಮಿಕ ವೇದಿಕೆಗೆ ಏರುತ್ತಾನೆ.
ನಾವು ಅಮರತ್ವವನ್ನು ಹೊಂದುವಂತಹ ತಿಳಿವಳಿಕೆಯನ್ನು ನೀಡುವ ವಿಜ್ಞಾನವು ಯಾವುದಾದರೂ ಇದೆಯೇ? ಹೌದು, ನಾವು ಅಮರರಾಗಬಹುದು, ಆದರೆ ಲೌಕಿಕವಾದ ಅರ್ಥದಲ್ಲಲ್ಲ. ಈ ತಿಳಿವಳಿಕೆಯನ್ನು ನಾವು ವಿಶ್ವವಿದ್ಯಾಲಯ ಎಂಬವುಗಳಿಂದ ಪಡೆಯಲಾರೆವು. ಆದರೆ ವೈದಿಕಶಾಸ್ತ್ರಗಳಲ್ಲಿ ಇಂತಹ ಜ್ಞಾನವಿದೆ.
ಅದರಿಂದ ನಾವು ಅಮರರಾಗಬಹುದು. ಆ ಅಮರತ್ವವೇ ನಮ್ಮ ಉನ್ನತ ಸ್ಥಿತಿ. ಅಮೇಲೆ ಮತ್ತೆ ಜನ್ಮವಿಲ್ಲ, ಮತ್ತೆ ಮರಣವಿಲ್ಲ, ಮತ್ತೆ ವೃದ್ಧಾಪ್ಯವಿಲ್ಲ ಮತ್ತೆ ವ್ಯಾಧಿಯಿಲ್ಲ. ಹೀಗೆ ಗುರುವಾದವರು ಬಹಳ ದೊಡ್ಡ ಜವಾಬ್ದಾರಿಯನ್ನು ಹೊರುತ್ತಾರೆ. ಅವರು ತಮ್ಮ ಶಿಷ್ಯನಿಗೆ ಮಾರ್ಗದರ್ಶನ ಮಾಡಬೇಕು. ಅಮರತ್ವವೆಂಬ ಪರಿಪೂರ್ಣ ಸ್ಥಿತಿಗಾಗಿ ಅವನನ್ನು ಅರ್ಹ ಅಭ್ಯರ್ಥಿಯನ್ನಾಗಿ ಮಾಡಬೇಕು. ತನ್ನ ಶಿಷ್ಯನನ್ನು ಮರಳಿ ಭಗವದ್ಧಾಮಕ್ಕೆ ಹೋಗುವಂತೆ ದಾರಿ ತೋರಿಸುವ ಸಾಮರ್ಥ್ಯ ಗುರುಗಳಿಗಿರಬೇಕು.






Leave a Reply