– ಕಥೆ ಹೇಳಿದ್ದು: ಲಿಖಿತಾ ಶೇಟ್.
ಪುಟ್ಟಕೃಷ್ಣ ತುಂಬ ಮುದ್ದು ಮುದ್ದಾಗಿ ಮಾತಾಡುತ್ತಿದ್ದ. ಜೊತೆಗೆ ತುಂಟ ಬೇರೆ. ಅವನನ್ನ ನೋಡ್ಲಿಕ್ಕೆ ಊರೋರೆಲ್ಲ ಒಂದಲ್ಲ ಒಂದು ನೆಪ ಹುಡುಕ್ಕೊಂಡು ಅವನ ಮನೆಗೆ ಹೋಗ್ತಿದ್ರು. ಅವ್ನೂ ಒಂದಲ್ಲ ಒಂದು ಚೇಷ್ಟೆಯಿಂದ ಅವರು ಖುಪಿ ಪಡೋಹಾಗೆ ಮಾಡ್ತಿದ್ದ.

ಅವತ್ತೊಂದಿನ ಒಬ್ಳು ಹಣ್ಣು ಮಾಡೋ ಹೆಂಗಸು ನಂದರಾಜನ ಮನೆಗೆ ಬಂದ್ಲು. ಮಧ್ಯಾಹ್ನ, ಉರಿಬಿಸಿಲುಬೇರೆ, ಉಸ್ಸಪ್ಪಾ ಅಂತ ಉಸಿರುಬಿಡ್ತಾ, ಬಂದವ್ಳೆ ನಂದಗೋಪನ ಮನೆ ಜಗುಲಿ ಮೇಲೆ ಕೂತ್ಲು. ಯಶೋದೆ ಅಡುಗೆಮನೆ ಕೆಲಸದಲ್ಲಿ ಮುಳುಗಿಹೋಗಿದ್ಲು. ಉಳಿದವ್ರೆಲ್ಲಾ ತಮ್ಮ ತಮ್ಮ ಕೆಲ್ಸದ ಮೇಲೆ ಹೊರಟು ಹೋಗಿದ್ರು. ಅಣ್ಣ ಬಲರಾಮನೂ ಜೊತೆಗಿಲ್ಲ, ಕೃಷ್ಣ ಒಬ್ನೇ ಮನೇಲಿ.
ಚೆಂಡಿನ ಥರ ಮನೆ ತುಂಬ ಪುಟಿದಾಡ್ತಾ ಇದ್ದ ಕೃಷ್ಣ. ಜಗುಲಿ ಮೇಲೆ ಕುಳಿತಿದ್ದ ಹಣ್ಣು ಮಾರೋಳನ್ನ ನೋಡ್ದ. ಅವಳ ಮುಖ ನೋಡಿದ್ರೆ ದಣಿವಾಗಿದೆ ಅಂತ ಗೊತ್ತಾಗ್ತಿತ್ತು. ಅವಳ ಸಂಕಟ ನೋಡಿ ಕೃಷ್ಣಂಗೆ “ಅಯ್ಯೋಪಾಪ” ಅನಿಸ್ತು. ಅವಳಿಗೆ ಖುಷಿ ಆಗೋ ಹಾಗೆ ಮಾಡ್ಬೇಕು ಅಂದ್ರೆ, ತಾನು ಹಣ್ಣು ಕೊಂಡುಕೊಳ್ಳಬೇಕು. ಆದ್ರೆ ಹಣ್ಣಿನ ಬದಲಿಗೆ ಕೊಡೇದೇನು?
ಕೃಷ್ಣ ಅವಳ ಹತ್ರ ಹೋದ. ಚಂದದ ಗೊಂಬೆ ಹಾಗಿದ್ದವನನ್ನ ನೋಡಿ, ಅವಳಿಗೆ ಮುದ್ದು ಉಕ್ಕಿ ಬಂತು. ಅವನನ್ನ ಕರೆದು, ತೊಡೆ ಮೇಲೆ ಕೂರಿಸ್ಕೊಂಡು ಮುದ್ದಾಡಿದಳು. ಕೃಷ್ಣನ ಕಣ್ಣು ಹಣ್ಣಿನ ಮೇಲೆ ಇತ್ತು. ನೇರಳೆ, ದ್ರಾಕ್ಷಿ, ಮಾವು ಕೃಷ್ಣಂಗೆ ಅದನ್ನ ನೋಡಿ ತುಂಬಾ ಆಸೆ ಆಯ್ತು. ಅವ್ನು ಹಣ್ಣನ್ನೇ ನೋಡ್ತಿದ್ದದ್ದನ್ನ ನೋಡಿ, ಆ ಹೆಂಗ್ಸು ಬೊಗಸೆ ತುಂಬ ಹಣ್ಣು ತುಂಬಿ ಅವ್ನಗೆ ಕೊಡ್ಲಿಕ್ಕೆ ಹೋದ್ಲು. ಆದ್ರೆ ನಮ್ಮ ಕೃಷ್ಣ ಹಂಗೆಲ್ಲ ಇಸ್ಕೊಂಡು ಬಿಡ್ತಾನಾ?
ಕೊಡೋರು ಒಂದು ಕೊಟ್ರೆ ಬದಲಿಗೆ ಹತ್ತು ಕೊಡೋದು ಕೃಷ್ಣನ ಜಾಯಮಾನ. ಅವ್ನು ಕೂಡ್ಲೆ ಎದ್ದು ಒಳಗೋಡಿ, ಅಮ್ಮನ ಸೀರೆ ಚುಂಗು ಹಿಡಿದು ಎಳೆದ. ಊಹೂಂ, ಅಮ್ಮನ ಕೆಲಸ ಅಮ್ಮನಿಗೆ, ಇವನ ತಂಟೆ ಇದ್ದಿದ್ದೇ ಅಂತ ತನ್ನ ಪಾಡಿಗೆ ಕೆಲಸ ಮುಂದುವರಿಸಿದ್ಲು. ಅಪ್ಪಾನೂ ಮನೇಲಿಲ್ಲ.

ಏನು ಮಾಡೋದೀಗ? ತನಗೆ ತನ್ಲಿಕ್ಕೆ ಅಲ್ದಿದ್ರೂ ಆ ಹೆಂಗಸನ್ನು ಖುಷಿ ಪಡಿಸ್ಲಿಕ್ಕಾದ್ರೂ ಹಣ್ಣು ತೊಗೊಳ್ಳಲೇ ಬೇಕು ಅಂದ್ಕೊಂಡ ಕೃಷ್ಣ. ಸೀದಾ ಕಣಜದ ಹತ್ರ ಹೋದ. ಅವನ ಪುಟಾಣಿ ಕೈಗೆ ಅದರ ತಳದಲ್ಲಿದ್ದ ಭತ್ತ ಎಟುಕ್ಲಿಲ್ಲ. ಅಂತೂ ಏನೇನೋ ಸಾಹಸ ಮಾಡಿ ಕೃಷ್ಣ ಒಂದು ಮುಷ್ಟಿ ಭತ್ತ ತೆಗೆದು ಗಟ್ಟಿಯಾಗಿ ಹಿಡ್ಕೊಂಡು ಓಡೋಡಿ ಬಂದ. ಅವನು ಹಾಗೆ ಬರಬೇಕಾದ್ರೆ ಒಂದೊಂದೇ ಅಂತ ಸಾಕಷ್ಟು ಕಾಳು ಚೆಲ್ಲಿ ಹೋದ್ವು. ಹಣ್ಣಿನವಳ ಕೈಗೆ ಅದನ್ನು ಹಾಕೋ ಹೊತ್ತಿಗೆ ಅರ್ಧದಷ್ಟು ಮಾತ್ರ ಉಳಿದಿತ್ತು!
ಮುದ್ದು ಹುಡುಗನ ಕಾಳಜಿಗೆ, ಪ್ರೀತಿಗೆ ಹಣ್ಣಿನವಳ ಕರಿಗಿ ಹೋದ್ಲು. ಅವನು “ಸಾಕು ಸಾಕು” ಅನ್ನುವಷ್ಟು ಹಣ್ಣು ಕೊಟ್ಲು. ಕೃಷ್ಣ ಕೊಟ್ಟ ಭತ್ತ ಬುಟ್ಟಿಗೆ ಹಾಕ್ಕೊಂಡ್ಲು. ಕೃಷ್ಣ ಖುಷಿಯಿಂದ ಹಣ್ಣು ತಿನ್ಲಿಕ್ಕೆ ಶುರುಮಾಡ್ದ.
ಸರಿ, ಇನ್ನೇನು ಹಣ್ಣಿನವಳು ಹೊರಡಬೇಕು. ಆದ್ರೆ ಅವಳಿಗೆ ಕೃಷ್ಣನ್ನ ಬಿಟ್ಟು ಹೋಗ್ಲಿಕ್ಕೆ ಮನಸೇ ಇಲ್ಲ.ಕೊನೆಗೂ ಹೊರಟ್ಲು. ಬುಟ್ಟಿ ಎತ್ತಿ ತಲೆ ಮೇಲೆ ಇಟ್ಲೋಳಕ್ಕೆ ಹೋದ್ರೆ, ಬುಟ್ಟಿ ಎಲ್ಲ ಭಾರ ಭಾರ ಅನಿಸ್ಲಿಕ್ಕೆ ಶುರು ಆಯ್ತು. ಯಾಕೆ ಹೀಗಾಯ್ತು ಅಂತ ನೋಡಿದ್ರೆ… ಭಕ್ತ ಎಲ್ಲ ಬಂಗಾರ ಆಗಿಹೋಗಿತ್ತು! ಬುಟ್ಟಿ ತುಂಬ ಆಭರಣಗಳು ಥಳಥಳ ಹೊಳೀತಿದ್ವು!! ಕೃಷ್ಣ ಮಾತ್ರ ಏನೂ ಗೊತ್ತಿಲ್ಲದ ಮುಗ್ಧನ ಹಾಗೆ ಹಣ್ಣು ಮೆಲ್ತಾ ನಿಂತಿದ್ದ!
ಪ್ರೀತಿಯಿಂದ ಹಣ್ಣು ಕೊಟ್ಟವಳಿಗೆ, ಬುಟ್ಟಿ ತುಂಬ ಹೊನ್ನುಕೊಟ್ಟು ಲೆಕ್ಕ ತೀರಿಸಿದ್ದ!!






Leave a Reply